“ಮಹಾನ್” ಇತಿಹಾಸಕಾರರೆಂಬ “ಮಹಾತ್ಮ”ರ ಸನ್ನಿಧಿಯಲ್ಲಿ….
– ರಾಘವೇಂದ್ರ ಅಡಿಗ ಎಚ್ಚೆನ್
ಕೆಲತಿಂಗಳ ಹಿಂದೆ ಬೆಂಗಳೂರಿನ ಟೀಚರ್ಸ್ ಕಾಲೇಜು ಸಭಾಂಗಣದಲ್ಲಿ ಒಂದು ಅಪರೂಪದ ಪುಸ್ತಕಗಳ ಬಿಡುಗಡೆ ಸಮಾರಂಭ ಏರ್ಪಾಡಾಗಿತ್ತು. ಕನ್ನಡದ ಖ್ಯಾತ ಲೇಖಕರಾದ ಡಾ. ಎಸ್.ಎಲ್. ಭೈರಪ್ಪನವರು ಭಾಗವಹಿಸಿದ್ದ ಆ ಕಾರ್ಯಕ್ರಾಮಕ್ಕೆ ಬಹಳ ನಿರೀಕ್ಷೆಗಳನ್ನಿಟ್ಟುಕೊಂಡು ನನ್ನಂತಹ ಸಾಕಷ್ಟು ಜನರು ಬಂದಿದ್ದರು. ಅಸಲಿಗೆ ಅಲ್ಲಿ ಬಿಡುಗಡೆಯಾಗುತ್ತಿದ್ದ ಪುಸ್ತಕಳು ಸಹ ಅಷ್ಟೇ ಕುತೂಹಲ ಹುಟ್ಟಿಸುವಂತಿದ್ದವು. ಸ್ವತಂತ್ರ ಭಾರತದ ಖ್ಯಾತ ಪತ್ರಿಕಾ ಬರಹಗಾರ, ಸಂಶೋಧಕ ಅರುಣ್ ಶೌರಿಯವರ ಪುಸ್ತಕದ ಬಿಡುಗಡೆ ಕಾರ್ಯಕ್ರಾಮವದಾಗಿತ್ತು.
ಅರುಣ್ ಶೌರಿ ಅವರೊಬ್ಬ ಪತ್ರಕರ್ತ, ಪತ್ರಿಕಾ ಸಂಪಾದಕ, ಧೀಮಂತ ರಾಜಕಾರಣಿ, ಸತ್ಯನಿಷ್ಟ ಬರಹಗಾರರಾಗಿ ಭಾರತದಾದ್ಯಂತ ಹೆಸರು ಮಾಡಿದವರು. ಕೇಂದ್ರದಲ್ಲಿ ಎನ್.ಡಿ.ಎ. ಸರ್ಕಾರವಿದ್ದ ಸಂದರ್ಭದಲ್ಲಿ ಸಮಾಚಾರ ಮತ್ತು ಪ್ರಸಾರ ಖಾತೆ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಶೌರಿಯವರು ಸರ್ಕಾರಿ ಕೆಲಸ ಹಾಗೂ ಪತ್ರಿಕಾ ರಂಗ ಎರಡರಲ್ಲಿಯೂ ಒಳ್ಳೆಯ ಹೆಸರನ್ನು ಗಳಿಸಿಕೊಂಡಿರುವವರು.ಭಾರತದ ಪ್ರಸಿದ್ದ ಆಂಗ್ಲ ದೈನಿಕ “ಇಂಡಿಯನ್ ಎಕ್ಸ್ ಪ್ರೆಸ್”ನಲ್ಲಿ ಸಾಕಷ್ಟು ವರ್ಷ ಕೆಲಸ ಮಾಡಿದ್ದ ಶೌರಿಯವರು ಆ ಸಮಯದಲ್ಲಿ ಸಾಕಷ್ಟು ಭ್ರಷ್ಟಾಚರಗಳನ್ನು, ಹಗರಣಗಳನ್ನೂ ಬೆಳಕಿಗೆ ತಂದಿದ್ದರು. ಇವರ ಕೆಲಸ, ಸಮಾಜ ಸೇವೆಗೆ ಮೆಚ್ಚಿ ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿ, ದಾದಾಭಾಯಿ ನವರೋಜಿ ಪುರಸ್ಕಾರ, ಫ್ರೀಡಮ್ ಟು ಪಬ್ಲಿಷ್ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಸಂದಿವೆ.
ಮೊದಲಿನಿಂದಲೂ ಅಧ್ಯಯನ, ಸಂಶೊಧನೆಗಳಲ್ಲಿ ಆಸಕ್ತಿ ತಳೆದಿದ್ದ ಅರುಣ್ ಶೌರಿಯವರು ತಾವೇ ಖುದ್ದಾಗಿ ಸಾಕಷ್ಟು ಪುಸ್ತಕಗಳನ್ನು ರಚಿಸಿದ್ದಾರೆ. “The Only Fatherland’’, “The World of Fatwas’’, “Eminent Historians’’, “ Does He know a Mother’s Heart?’’ ಇವೇ ಮೊದಲಾದ ಕೃತಿಗಳನ್ನು ರಚಿಸಿರುವ ಶೌರಿ ಈ ಒಂದೊಂದರಲ್ಲಿಯೂ ಸಾಕಷ್ಟು ಮಾಹಿತಿಯನ್ನು ಓದುಗರೊಡನೆ ಹಂಚಿಕೊಂಡಿದ್ದಾರೆ.ಅರುಣ್ ಶೌರಿಯವರ ಬರಹಗಳನ್ನು ಅರ್ಥ ಮಾಡಿಕೊಳ್ಳುವುದು ತುಸು ತ್ರಾಸದಾಯಕವದ ಕೆಲಸ.ಅವರಷ್ಟು ಚಿಂತನೆಗೆ ಹಚ್ಚುವ ಬರಹಗಾರರು ಮತ್ತೊಬ್ಬರು ಸಿಕ್ಕುವುದು ತೀರಾ ಅಪರೂಪವೆನ್ನಬೇಕು. ಅಂತಹಾ ಶೌರಿಯವರ ಪುಸ್ತಕವೊಂದು ಕನ್ನಡಕ್ಕೆ ಬಂದಿದೆ.ಅರುಣ್ ಶೌರಿಯವರ “Eminent Historians’’ಕೃತಿಯನ್ನು “ಮಹಾನ್” ಇತಿಹಾಸಕಾರರು ಎನ್ನುವ ಹೆಸರಿನಲ್ಲಿ ಮಂಜುನಾಥ ಅಜ್ಜಂಪುರರವರು ಕನ್ನದಕ್ಕೆ ಅನುವಾದಿಸಿ ನಮ್ಮ ಕೈಗಿತ್ತಿದ್ದಾರೆ. ಇತಿಹಾಸದ ಬಗ್ಗೆ ಆಸಕ್ತಿ ಇರುವ ಪ್ರತಿಯೊಬ್ಬರಿಗೂ ಇಷ್ಟವಾಗುವ ಕೃತಿ ಇದು ಎಂದರೆ ತಪ್ಪಾಗಲಾರದು.