ತುಳುಲಿಪಿ ಒಂದು ವಿಶ್ಲೇಷಣೆ
– ದ್ಯಾವನೂರು ಮಂಜುನಾಥ್
ಕನ್ನಡ ನಾಡಿನ ಹಸ್ತಪ್ರತಿ ಇತಿಹಾಸದಲ್ಲಿ ತುಳುಲಿಪಿ ಹಸ್ತಪ್ರತಿಗಳಿಗೆ ಒಂದು ವಿಶಿಷ್ಟಮಯವಾದ ವಾತಾವರಣವಿದ್ದು, ದಕ್ಷಿಣ ಭಾರತದ ಸಾಂಸ್ಕೃತಿಕ ಬದುಕಿನ ಮೇಲೆ ತನ್ನದೇ ಆದ ಪ್ರಭಾವವನ್ನು ಬೀರಿದೆ. ಇಲ್ಲಿನ ಭೌಗೋಳಿಕ ಸಾಮ್ಯತೆ ಈ ಪ್ರದೇಶಕ್ಕಿದ್ದರೂ, ಇಲ್ಲಿ ವಿಭಿನ್ನ ಸಂಸ್ಕೃತಿಗಳು ಬೆಳೆದು ಬಂದಿದೆ. ಕನ್ನಡ, ತುಳು, ಕೊಂಕಣಿ, ಮಲೆಯಾಳ ಇಲ್ಲಿನ ಜನರ ಪ್ರಧಾನ ಭಾಷೆಗಳಾಗಿವೆ. ಈ ಭಾಷೆಗಳಲ್ಲಿ ‘ತುಳುಭಾಷೆ’ ಮತ್ತು ನೆಲೆಸಿದ ಪ್ರದೇಶ ‘ತುಳುನಾಡು’ (ತೌಳವ) ದು ಪ್ರಸಿದ್ಧ. ವಿದೇಶಿ ಪ್ರವಾಸಿ ಬಾರ್ಕೋಸನ ವರದಿ ಮತ್ತು ಗೋವರ್ಧನ ಗಿರಿ ಓಂಕಾರ ಬಸದಿಯ ಶಾಸನಗಳ ಆಧಾರದಿಂದ ತುಳುನಾಡು ಚಂದ್ರಗಿರಿಯ ಉತ್ತರಕ್ಕೆ ಮತ್ತು ಗಂಗಾವತಿ ನದಿಗಳ ದಕ್ಷಿಣಕ್ಕೆ ಸೀಮಿತವಾಗಿತ್ತು ಎಂದು ಸ್ಥೂಲವಾಗಿ ಹೇಳಬಹುದು. ಹೀಗಿದ್ದರೂ ತುಳುಭಾಷೆಯನ್ನಾಡುವ ಜನಸಮುದಾಯವು ಈಗ ಕಲ್ಯಾಣಪುರ ಮತ್ತು ಚಂದ್ರಗಿರಿ ನದಿಗಳವರೆಗಿನ ಕರಾವಳಿ ಪ್ರದೇಶಗಳಿಗೆ ಸೀಮಿತವಾಗಿದೆ.
ಕಾಸರಗೋಡು ತುಳು ನಾಡೆಂದು ಸಂಗಮ ಸಾಹಿತ್ಯ ಹೇಳಿದೆ. ತುಳು ಭಾಷೆಯ ಪ್ರಾಚೀನತೆಯನ್ನು ಕ್ರಿ.ಶ.9ನೆಯ ಶತಮಾನದ ತನಕ ಹೋಗುತ್ತದೆಯೆಂಬ ಅಭಿಪ್ರಾಯ ನಿಕೋರಸ್ ನ ವರದಿ ಸೂಚಿಸುವುದಾದರೂ ಈ ಭಾಷೆಯು ತುಳುನಾಡು, ತುಳು ದೇಶ, ತುಳು ವಿಷಯ ಶಬ್ದಗಳು ಕ್ರಿ.ಶ.12ನೆಯ ಹಾಗೂ 16ನೆಯ ಶತಮಾನದ ಕೆಲವು ಶಾಸನಗಳಲ್ಲಿ ಉಲ್ಲೇಖಗಳಿಂದ ಕಾಣಬಹುದಾಗಿದೆ. ಇಂತಹ ಶಾಸನಗಳು ಬ್ರಹ್ಮಾವರ, ಉಡುಪಿ, ಕಂದಾವರ ಮತ್ತು ಗುಣವಂತೆಗಳಲ್ಲಿ ಪತ್ತೆಯಾಗಿದೆ. ಕ್ರಿ.ಶ.14ನೆಯ ಶತಮಾನದ ಮತ್ತು ಅಂತ್ಯದಲ್ಲಿ ತುಳುಶಾಸನ ತುಳುಲಿಪಿಯಲ್ಲಿ ಲಿಖಿಸುವಷ್ಟು ಪ್ರಬಲವಾಗಿತ್ತೆಂಬುದಕ್ಕೆ ಕುಂಬಳೆ ಸಮೀಪದ ಅನಂತಪುರದ ಶಾಸನ, ಪೆರ್ಲದ ಬಜಂಕೂಡ್ಲು ಶಾಸ, ಪುತ್ತೂರು ಸಮೀಪದ ಈಶ್ವರ ಮಂಗಲದ ಶಾಸನಗಳ ಅಧ್ಯಯನಗಳಿಂದ ತಿಳಿದು ಬರುತ್ತದೆ. ಕೊಳನಕೋಡು ದೇವಸ್ಥಾನ ಕೊಂಗುಬಳ್ಳಿ ಮನೆಯ ಪರಿಸರದಲ್ಲಿ ಮೊತ್ತ ಮೊದಲನೆಯ ತುಳುಲಿಪಿ ಶಾಸನವನ್ನು ಡಾ||ಗುರುರಾಜ ಭಟ್ಟರು ಶೋಧಿಸಿದ್ದರೆ.
ಪ್ರಾಚೀನ ಲಿಪಿಗಳಾದ ಸಿಂಧು, ಬ್ರಾಹ್ಮಿ ಮತ್ತು ಖರೋಷ್ಠಿ ಲಿಪಿಗಳ ಪೈಕಿ ಅತ್ಯಂತ ಪ್ರಾಚೀನವಾದ್ದು ಸಿಂಧು ಲಿಪಿ. ಈ ಲಿಪಿ ಎಲ್ಲರೂ ಒಪ್ಪದ ರೀತಿಯಲ್ಲಿ ಓದಲು ಸಾಧ್ಯವಾಗಿಲ್ಲ. ಆದರೆ ಬ್ರಾಹ್ಮಿಶಾಸನಶಾಸ್ತ್ರ ಇತಿಹಾಸ ಪ್ರಾರಂಭದ ಬ್ರಾಹ್ಮಿ ಶಾಸನಗಳು ದೊರೆಯುವಲ್ಲಿಂದ ಆರಂಭವಾಗುತ್ತದೆ ಎಂದು ವಿದ್ವಾಂಸರ ಅಭಿಮತ, ಬ್ರಾಹ್ಮಿ ಭಾರತದಲ್ಲಿನ ನಂತರದ ಉತ್ತರ ಹಾಗೂ ದಕ್ಷಿಣದ ಎಲ್ಲಾ ಲಿಪಿಗಳಿಗೆ ಮೂಲವಾಗಿದೆ.