ವಿಷಯದ ವಿವರಗಳಿಗೆ ದಾಟಿರಿ

ಮೇ 9, 2014

1

ಒಂದು ರಾಜಕೀಯ ವಿಡಂಬನೆ:ಬಪ್ಪರೆ ಬಪ್ಪ.. ತಿಪ್ಪರ್ ಲಾಗ ಹಾಕಪ್ಪಾ…

‍ನಿಲುಮೆ ಮೂಲಕ

– ತುರುವೇಕೆರೆ ಪ್ರಸಾದ್

indian-politician1            ಎಲೆಕ್ಷನ್ ಆದ್ಮೇಲೆ ಯಾವ ಯಾವ ಮುಖಂಡರು ಏನೇನು ಮಾಡ್ತಿದಾರೆ ಅಂತ ಸಮೀಕ್ಷೆ ಮಾಡೋಕೆ ರಾಂಪ ಪಕ್ಷಭೇದ ಮರೆತು ಎಲ್ಲರ ಮನೆ, ಪಕ್ಷಗಳ ಅಡ್ಡೆಗೆ ಬಿಜುಗೈದ. ವಿವಿಧ ರಾಜಕೀಯ ಮುಖಂಡರು ರಿಸಲ್ಟ್ ಬರೋತನಕ ಏನು ಸ್ಟಾಪ್‍ಗ್ಯಾಪ್ ಅರೇಂಜ್‍ಮೆಂಟ್ ಮಾಡ್ಕೊಂಡಿದಾರೆ ಅನ್ನೋ ರಾಂಪನ ಪ್ರಶ್ನೆಗೆ ಬಂದ ಪ್ರತಿಕ್ರಿಯೆಗಳು ಕೆಳಕಂಡಂತಿವೆ.

ಜೋಕುಮಾರ್:ನಿಜ! ರಿಸಲ್ಟ್ ಗೆ ಒಂದು ತಿಂಗಳು ಕಾಯೋದು ಅಂದ್ರೆ ತುಂಬಾ ಕಷ್ಟ. ಈ ಕಾಲ್ದಲ್ಲಿ ಸಿಇಟಿ ರಿಸಲ್ಟೇ 15ದಿನಕ್ಕೆ ಬರುತ್ತೆ. ಅಂತಾದ್ರಲ್ಲಿ ಎಲೆಕ್ಷನ್ ರಿಸಲ್ಟ್ ಇಷ್ಟು ಲೇಟಾದ್ರೆ ಹೇಗೆ? ಈ ಒಂದು ತಿಂಗಳಲ್ಲಿ ಎಲ್ಲಾ ದೇಸೀ ಅಂಗಮರ್ದನ, ಫಾರಿನ್ ಮಸಾಜ್ ಸೆಂಟರ್‍ಗಳನ್ನ ವಿಸಿಟ್ ಮಾಡ್ಬೇಕು ಅಂದ್ಕೊಂಡಿದೀನಿ. ಹಾಗೇ ಹೊಸ ಚಿತ್ರ ‘ಕಣ್ಣೀರ್ ಕಣ್ಣೀರ್’ ಡಾಕ್ಯುಮೆಂಟರಿನ ಸಹಾರಾ ಡೆಸರ್ಟ್‍ನಲ್ಲಿ ಶೂಟ್ ಮಾಡ್ಬೇಕು ಅಂತ ಪ್ಲಾನಿದೆ. ರೈತರಿಗಾಗಿ ನೀರು ಮರುಪೂರಣ ತರ ಕಣ್ಣೀರು ಮರುಪೂರಣ ಮಾಡೋ ಬಗ್ಗೆ ಹೊಸ ಹೊಸ ಯೋಜನೆಗಳ ಸ್ಕೆಚ್ ಹಾಕಿದೀನಿ. ಇದು ಯಾವಾಗ್ಲೂ ಕಣ್ಣಿರು ಸುರಿಸೋ ರೈತರಿಗೆ ಹಾಗೂ ರಾಜಕೀಯ ಮುಖಂಡರಿಗೆ ಉಪಯೋಗ ಆಗುತ್ತೆ.

ಮುದ್ದೇಗೌಡರು:ಮುದ್ದೆ ತಿಂದ ತಕ್ಷಣ ಕಣ್ ಎಳ್ಕೊಂಡು ಹೋಗ್ತಿತ್ತು. ಈಗ ಯಾಕೋ ಕಾಂಪೋಸ್ ನುಂಗುದ್ರೂ ನಿದ್ದೆ ಹತ್ತುತ್ತಿಲ್ಲ. ಕೇಳ್ಕೊಂಡು ತೂಕಡಿಸೋಣ ಅಂದ್ರೆ ಲೋಕಲ್ ಭಾಷಣಗಳೂ ಇಲ್ಲ. ಕೇರಳದಲ್ಲಿ ಯಾರೋ ನಿದ್ದೆಗೆ ಆಯುರ್ವೇದ ಔಷಧಿ ಕೊಡ್ತಾರಂತೆ, ಅಲ್ಲಿಗೆ ಹೋಗೋಣ ಅಂದ್ಕೊಂಡಿದೀನಿ..ಹಾಗೇ ಬರ್ತಾ ನಮ್ ಪಕ್ಷದ ಬಗ್ಗೆ ಹೀನಾಯವಾಗಿ ಮಾತಾಡ್ದೋರಿಗೆ ನಿದ್ದೆ ಕೆಡಿಸೋಕೆ ಏನಾದ್ರೂ ಮದ್ದು, ನಿಂಬೇಹಣ್ಣು ತಂದೇ ತರ್ಬೇಕು ಅಂದ್ಕೊಂಡಿದೀನಿ..

ಹುಡ್ಕೋ ಕುಮಾರ್:ಸಂಜಯ್ ಬಾರು ಅವರ ಪುಸ್ತಕ ಸ್ವಲ್ಪ ಲೇಟಾಗಿ ಸಿಕ್ತು. ಇಲ್ಲ ಅಂದಿದ್ರೆ ಕೈ ಪಕ್ಷದೋರು ಬಾರಲ್ಲೇ ಕೂದಲು ಕಿತ್ಕೊಳೋ ಹಾಗೆ ಮಾಡ್ತಿದ್ದೆ. ಈಗ ಅದನ್ನ ಸ್ಟಡಿ ಮಾಡ್ತಿದೀನಿ. ಅದೇ ಮಾದರಿಲಿ ‘ಮೇಕಿಂಗ್ ಆಫ್ ಮುದ್ದರಾಮಯ್ಯ- ಭಾಗ್ಯ ಬಂಡಲ್ಸ್ ‘ ಅಂತ ಒಂದು ನಾವೆಲ್ ಬರೆಯೋ ಸಿದ್ಧತೇಲಿದೀನಿ.ಹಾಗೇ ಒಂದು ಪದ್ಯ ಬರ್ದಿದೀನಿ ಕೇಳಿ..

ಸಂಜಯ ಬರು

ಎಬ್ಸಿದ್ದಾರೆ ಕೈ ಸಿಬಿರು

ಸಿಂಗ್ ಬರೀ ಡಾಲು

ಸೋನಿಯಾದೇ ಡೌಲು?

ಚಂದನ್ ಕಣಿ:‘ದೇಹಕೆ ಉಸಿರೇ ಸದಾ ಭಾರ, ಇಲ್ಲ ಆಧಾರ’ ಈ ಹಳೇ ಹಾಡಿಗೆ ‘ಕೈ ಪಕ್ಷಕೆ ಸಂಜಯ ಸದಾ ಭಾರ, ಆರೋಪಕಿಲ್ಲ ಆಧಾರ’ ಅಂತ ಹೊಸ ಟ್ಯೂನ್ ಹಾಕ್ತಿದೀನಿ. ಎಲ್ಲರ ಅಧಿಕೃತ, ಅನಧಿಕೃತ ಹೆಂಡ್ತೀರನ್ನ ಹುಡುಕೋ ಒಂದು ಹೊಸ ಸಾಫ್ಟ್ವೇರ್ ಡವಲಪ್ ಮಾಡ್ಬೇಕು ಅಂತ ಪ್ಲಾನ್ ಮಾಡ್ತಿದೀನಿ

ಮುದ್ದರಾಮಯ್ಯ:ಹಾಳಾದ್ದು ಈ ನಾಲಿಗೆ ಅವರಿವರನ್ನ ಬೈದು ಬೈದು ಗಬ್ಬೆದ್ದು ಹೋಗಿದೆ.ನಿನ್ನೆ ಯಾರೋ ಚಿಂತಕರು ಫೋನ್ ಮಾಡಿದಾಗ್ಲೂ ‘ಹಂತಕ’ ಅಂದ್‍ಬಿಟ್ಟೆ..ನನ್ ಬಗ್ಗೆ ನಂಗೇ ಬೇಜಾರಾಗೊಯ್ತು. ಅದಕ್ಕೇ ನಾಲಗೆನ ಉಪ್ಪಿನ ಕಾಗದ ಹಾಕ್ಕೊಂಡು ತಿಕ್ಕೊಂಡೆ. ಉಹುಂ! ಏನೂ ಪ್ರಯೋಜನ ಆಗ್ತಿಲ್ಲ. ಅದಕ್ಕೇ ನಮ್ ಅರಳು ಹುರ್ದಯ್ಯನೋರು ಒಂದಿಷ್ಟು ಟಂಗ್ ಟ್ವಿಸ್ಟರ್ಸ್ ಹೇಳ್ಕೊಳಿ ಸರಿಹೋಗುತ್ತೆ ಅಂದ್ರು. ಅದನ್ನೆ ಪ್ರಾಕ್ಟೀಸ್ ಮಾಡ್ತಿದ್ದೆ. ಹಾಳಾದ್ದು ‘ಕಪ್ಪು ಕುಂಕುಮ,ಕೆಂಪು ಕುಂಕುಮ’ ಅಂತ ಬಡ ಬಡ ಹೇಳ್ಬೇಕಂತೆ.. ಈ ಕುಂಕುಮ, ಕುಂಕುಮ ಅಂತ ನಾನು ಜಪ ಮಾಡ್ತಾ ಕೂತ್ಕಂಡ್ರೆ ಇಲ್ಲೂ ಯಾರಾರು ಗುಂಜಯ್ ಬಾರುಗಳು ಅದ್ನೇ ಪುಸ್ತಕ ಬರ್ದು ನಾನು ಆರ್‍ಎಸ್‍ಎಸ್ ಮೈಂಡೆಡ್ ಅಂದ್‍ಬಿಡ್ತಾರೆ.ಅದಕ್ಕೇ ಬೇರೆ ಟಂಗ್ ಟ್ವಿಸ್ಟರ್ ಬರಸ್ಕೊಂಡಿದೀನಿ. ಕೇಳಿ ‘ನುಂಗಪ್ಪನ ಮಗ ಮರಿ ನುಂಗಪ್ಪ, ಮರಿ ನುಂಗಪ್ಪನ ಅಪ್ಪ ನುಂಗಪ್ಪ, ‘ನುಂಗಪ್ಪನ ಮಗ ಮರಿ ನುಂಗಪ್ಪ, ಮರಿ ನುಂಗಪ್ಪನ ಅಪ್ಪ.. ಉರಿಯೂರಪ್ಪ.. ತತ್ಥೇರಿ..ಇಲ್ಲೂ ಆವಯ್ಯನ ಹೆಸ್ರೇ ಬಂದ್ ಬಿಡ್ತು.. ನಾಲ್ಗೆ ಎಕ್ಕುಟ್ಟಿ ಹೋಗಿದೆ ಬಿಡಿ..ಇದ್ನೂ ಬರ್ದು ಬಿಡ್ಬೇಡಿ.ಆಫ್ ದಿ ರೆಕಾರ್ಡ್ ಇದು..

ನಾರೀಶ್ವರಪ್ಪ :ಒಂದು ತಿಂಗಳು ಕಾಯೋದು ಅಂದ್ರೆ ಸಿಕ್ಕಾಪಟ್ಟೆ ಕಷ್ಟ. ಅದಕ್ಕೇ ಕಾಶಿ ಕಡೆ ಹೋಗಿ ಬರೋಣ ಅಂದ್ಕೊಂಡಿದೀನಿ. ಪುಣ್ಯನೂ ಬರುತ್ತೆ, ಹಾಗೇ ನಮೋಗೆ ಕ್ಯಾನ್‍ವಾಸೂ ಮಾಡ್ದ ಹಾಗಾಗುತ್ತೆ. ನಮ್ ನಮೋ ಸಾಹೇಬ್ರೂ ಹಿಂದೆ ದಂಪತಿ ಸಹಿತ ಕಾಶಿಗೆ ಹೋದಾಗ ‘ ಕಾಶೀಲಿ ಏನಾದ್ರೂ ಬಿಡ್ಬೇಕು ಅಂತಾರೆ, ನನ್ ಹತ್ರ ಏನಿಲ್ಲ ವಿಶ್ವನಾಥ, ಹೆಂಡ್ತಿನೇ ಬಿಟ್ ಬಿಡ್ತೀನಿ’ ಅಂತ ಆಕೆನ ಬಿಟ್‍ಬಿಟ್ರಂತೆ. ಎಂಥ ತ್ಯಾಗಮಯಿ ಅವರು.ನಾವು ಈಗ ಹಾಗೆ ಏನಾದ್ರೂ ಬಿಡಕ್ಕಾಗುತ್ತಾ?ನೋಟು ಎಣಿಸೋ ಮಿಶಿನ್ನೂ ಮಕ್ಕಳು ಕಿತ್ತಿಟ್ಕೊಂಡಿದಾರೆ..ನಮ್ದೇನು ನಡೆಯುತ್ತೆ ವಿಶ್ವನಾಥ?’

ರಾಮೇಶ್ವರ್:ನಮ್ ಹತ್ರ ಒಂದು ತಿಂಗಳು ಟೈಮಿದೆ.ಹೇಗಿದ್ರೂ ಮೇಡಂ ಕಡಿಮೆ ಸೀಟು ಬಂದದ್ದಕ್ಕೆ ಕಾರಣ ಕೇಳಿ ನೋಟೀಸು, ಹಾಳು ಮೂಳು ಕೊಡ್ತಾರೆ. ಅದು ಮಾಮೂಲಿ ಇದ್ದದ್ದೇ! ಅದಕ್ಕೇ ಈಗ್ಲೇ ಒಂದು ಡೀಟೈಲ್ಡ್ ರಿಪೋರ್ಟ್ ರೆಡಿ ಮಾಡ್ತಿದೀನಿ. ಮುದ್ದುರಾಮಯ್ಯನೋರ ನಾಲಿಗೆಯಿಂದ ಅರ್ಧ ಓಟು ಹಾಳಾಗೋಯ್ತು ಅನ್ನೋದಕ್ಕೆ ಎವಿಡೆನ್ಸ್ ಕಲೆಕ್ಟ್ ಮಾಡ್ತಿದೀನಿ.

ಭವ್ಯ ಸ್ಪಂದನ :ನಾನು ಲಂಡನ್‍ನಿಂದಲೇ ಆನ್‍ಲೈನ್‍ನಲ್ಲಿ ಮಂಡ್ಯದ ಸಕ್ರೆ ಅಚ್ಚು ಮಾಡೋದು ಹೇಗೆ ಅಂತ ಕಲೀತಿದೀನಿ. ಕೈ ಅಚ್ಚಲ್ಲಿ ತಂಬೂರೀಶ್, ಶ್ರೀಕಂಠ, ರವೀಂದ್ರ,ಕೃಷ್ಣ,ಸಿದ್ರಾಮ ಹೀಗೆ ಐದು ಬೆರಳೂ ಮುರಿದೆ ಬರೋ ಹಾಗೆ ತೆಗೆಯೋದು ಕಲ್ತಿದೀನಿ.ಹಾಗೆ ಈ ಸ್ಟಾಪ್‍ಗ್ಯಾಪಲ್ಲಿ ಕೃಷ್ಣ ಅಂಕಲ್ ಪಾಂಚಜನ್ಯ ಶಂಕ ಊದೋದು ಹೇಳಿ ಕೊಡ್ತಿದಾರೆ. ಮಧ್ಯೆ ಟೈಂ ಸಿಕ್ರೆ ‘ಕಣ್ಣೀರ್ ದೋಸೆ’ಗೆ ಕಾಲ್ ಶೀಟ್ ಕೊಡ್ಬೇಕು ಅಂದ್ಕೊಂಡಿದೀನಿ..

ಡಾಲರ್ ಮಾರುತಿ:ಸ್ವಲ್ಪ ಬೆನ್ ನೋವಿದೆ. ಆದ್ರೂ ನಾವು ಬುದ್ದಿಜೀವಿಗಳು ನಮೋ ಅವರ ಪತ್ನಿ ಕಶೋಧಾ ಬೆನ್ ಅವರ ಬೆನ್ ಹತ್ತುತೀವಿ. ನಾವು ಗುಜರಾತ್‍ಗೆ ಹೋಗ್ತೀವಿ. ಅವರಿಗೆ ಎಷ್ಟು ಅನ್ಯಾಯ ಆಗಿದೆ ಅನ್ನೋದನ್ನ ಜನರ ಮುಂದಿಡ್ತೀವಿ. ಇಲ್ಲಿ ಎಲೆಕ್ಷನ್ ಆದ್ರೇನು? ಇನ್ನೂ ಬಹಳಷ್ಟು ಕಡೆ ಎಲೆಕ್ಷನ್ ಬಾಕಿ ಇದೆಯಲ್ಲ..! ನಮೋ ಮೇಲೆ ಒಂದು ಪುಸ್ತಕನೇ ಬರೀತೀನಿ..ನೊಬೆಲ್ ಅಲ್ದಿದ್ರೂ ಇಗ್ನೊಬೆಲ್ಲೋ, ನಗ್ನೋಬೆಲ್ಲೋ ಯಾವುದಾದ್ರೂ ಒಂದು ಸಿಕ್ಕೇಸಿಗುತ್ತೆ.

ಶೀಬಾ ಖಾಯಂರಜೆ:ಅಲ್ಲ ಸ್ವಾಮಿ, ಅವರಿವರ ಹೆಂಡ್ತಿ ಉಸಾಬರಿ ಇವರ್‍ಗ್ಯಾಕೆ? ಮದುವೆ ಆದ ಕೆಲವರು ಯಾವ್ದೋ ಕಾರಣಕ್ಕೆ ಹೆಂಡ್ತಿಯಿಂದ ದೂರ ಇರ್ತಾರೆ. ಇನ್ನು ಕೆಲವರು ಮದುವೆ ಆಗ್ದೇನೂ ಹತ್ರಿರದಲ್ಲೇ ಇದ್ದು ಚೆನ್ನಾಗಿ ನೋಡ್ಕೊಳಲ್ವಾ? ನಾವೂ ಗುಜರಾತ್‍ಗೆ ಹೋಗ್ತೀವಿ. ಕಶೋಧಾ ಬೆನ್ ಅವರನ್ನೇ ಮುಂದಿಟ್ಕೊಂಡು ಓಟು ಕೇಳ್ತೀವಿ..

ಉರಿಯೂರಪ್ಪ:ಏನ್ ಮಾತಾಡೋದೂ ಕಷ್ಟ..ಗೆದ್ರೆ ಈ ಪಕ್ಷ,ಸೋತ್ರೆ ಮುಂದಿನ್ ಪಕ್ಷ,ಅದಕ್ಕೇ ಕೌಂಟಿಂಗ್ ಮುಗಿಯೋ ತನ್ಕ ಮೌನವ್ರತ ಆಚರಿಸ್ತಿದೀನಿ..ಮಧ್ಯೆ ವೈಷ್ಣವೀದೇವಿ, ರಾಮದೇವ್ ಶಿಬಿರ ಅಲ್ಲೆಲ್ಲಾ ಅಡ್ಡಾಡಿ ಬರ್ಬೇಕು ಅಂದ್ಕೊಡಿದೀನಿ. ಇದು ಏನೇನೋ ಪವಾಡ ನಡೆದ ನಾಡು. ಯಾರಿಗೋ ಒತ್ತಿದ ಓಟು ನಮ್ಗೆ ಬೀಳಲ್ಲ ಅಂತ ಏನು? ನಮ್ ಸ್ವಾಮಿಗಳು ಏನಾದ್ರೂ ಜಾದೂ, ಪವಾಡ ಮಾಡ್ತಾರೆ ಅಂತ ನಂಬಿ ವ್ರತ ಮಾಡ್ತಿದೀನಿ. ನಾನು ಮಾತಾಡ್ದೆ ಅಂತ ಬರೀಬೇಡಿ. ನನ್ನ ಪಿಎ ಹೇಳಿಕೆ ಅಂತ ಹಾಕಿ.

ಮತದಾರ:ಸ್ವಾಮಿ! ಯಾವನು ಗೆದ್ರೇನು? ಯಾವನು ಸೋತ್ರೇನು? ನಾವು ಕಾಯ್ತಿರೋದು ಕೌಂಟಿಂಗ್‍ಗಲ್ಲ..ಸದ್ಯಕ್ಕೆ ಪಂಚಾಯ್ತಿ ಎಲೆಕ್ಷನ್ ಇಲ್ಲ, ಎಂಎಲ್‍ಎ ಎಲೆಕ್ಷನ್ ಇಲ್ಲ, ಎಂಪಿ ಎಲೆಕ್ಷನ್ ಇಲ್ಲ, ಇಂಗಾದ್ರೆ ನಮ್ ಗತಿ ಏನ್ ಹೇಳಿ? ಅವ್ರು ಒಂದು ತಿಂಗ್ಳು ಕಾಯೋದು ಬಿಡಿ,ನಾವಿನ್ನೂ ನಾಕು ವರ್ಷ ಕಾಯ್ಬೇಕಲ್ಲ ಸ್ವಾಮಿ ಅದನ್ನ ಹೇಳಿ?

ತಂಬೂರೀಶ್:ನೋಡಿ ಸ್ವಾಮಿ, ನೀತಿ ಸಂಹಿತೆ ಇದ್ಯಲ್ಲ..ನಾನು ವಸತಿ, ಗಿಸತಿ ನೋಡಕ್ಕೋಗಿಲ್ಲ, ನನ್ ಸತಿ ಚೆನ್ನಾಗಿ ನೋಡ್ಕೊಂಡ್ರು, ಮತ್ತೆ ಮನುಷ್ಯನಾಗಿದೀನಿ. ಈ ಕೌಂಟಿಂಗ್ ಆಗೋದ್ರೊಳಗೆ ಅಂಗೇ ಲೈಟಾಗಿ ಒಂದು ರೌಂಡ್ ಊಟಿಗೆ ಹೋಗಿ ಬಂದ್ ಬಿಡೋಣ ಅಂತಿದೀನಿ.. ಅಲ್ಲೇ ಯಾವ್ದಾರಾ ಸಿನಿಮಾ ಶೂಟಿಂಗ್ ಇದ್ರೆ ಒಂದ್ ಗೆಸ್ಟ್ ಅಪಿಯರೆನ್ಸೂ ಕೊಟ್ ಬಿಡ್ತೀನಿ..ಹಳೇ ಹಾಡು, ಹೊಸ ಕಿರಿಕ್ ಅಲ್ಲಲ್ಲ ಲಿರಿಕ್..ಬಪ್ಪರೆ ಬಪ್ಪ, ಬಪ್ಪರೆ ಬಪ್ಪ ಕಾಯೋ ಕೆಲ್ಸ ಸಾಕಾಪ್ಪ..ಕಾದು ಕಾದು ಸಾಕಾದಾಗ..ತಿಪ್ಪರಲಾಗ ಹಾಕಪ್ಪಾ..’

1 ಟಿಪ್ಪಣಿ Post a comment
  1. ಹೇಮಾಪತಿ's avatar
    ಹೇಮಾಪತಿ
    ಮೇ 9 2014

    ಒಂಥರಾ ಚೆನ್ನಾಗಿದೆ ತುರುವೇಕೆರೆ ಪ್ರಸಾದ್ ರವರೇ!

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments