ಸಂಸ್ಕಾರ ಮತ್ತು ವಂಶವೃಕ್ಷ: ಅಪೂರ್ಣದಿಂದ ಪೂರ್ಣದೆಡೆಗೆ
-ಎಸ್.ಎನ್.ಭಾಸ್ಕರ್, ಬಂಗಾರಪೇಟೆ.
ಓದುವ ಮುನ್ನ:
ಸಿದ್ದಾಂತ, ಬದ್ದತೆ, ನಿಷ್ಠೆ ಇವು ಹೆಚ್ಚು ಬಿಗಿಯಾದಷ್ಟೂ ಬೌದ್ದಿಕ ತಿಳುವು ಉಸಿರುಗಟ್ಟುತ್ತದೆ. ಗ್ರಹಿಕೆಯು ಪೂರ್ವಾಗ್ರಹಗಳಿಂದ ಹೊರತಾಗಿದ್ದಷ್ಟೂ ನಿಲುವು ಪರಿಪಕ್ವವಾಗುತ್ತದೆ. ಚಿಂತನೆ ಮತ್ತಷ್ಟು ವಿಕಸಿತವಾಗುತ್ತದೆ. ಸಾಹಿತ್ಯ, ಸೃಷ್ಟಿ ಅಥವಾ ಇಡೀ ಮನುಕುಲವೇ ಆಗಲೀ ಸತ್ಯಾನ್ವೇ಼ಣೆಯ ಹಾದಿಯಲ್ಲಿ, ಸತ್ಯ-ಅಸತ್ಯಗಳ ಪರಾಮರ್ಷೆಯಲ್ಲಿ ನಿತ್ಯ ಚಲನಶೀಲ, ಅಪೂರ್ಣದಿಂದ ಪೂರ್ಣದೆಡೆಗೆ. ಪೂರ್ಣತೆ ಎಂಬುದು ಅಂತ್ಯವಿಲ್ಲದ ಹಾದಿ, ಇದರೆಡೆಗಿನ ಪಯಣ ನಿರಂತರ. ಇಗೋ ಮುಟ್ಟಿದೆ ಇದೇ ಅಂತ್ಯ, ಇದೇ ಸತ್ಯ ಎಂದು ಗ್ರಹಿಸಿದ ಮರುಕ್ಷಣಕ್ಕೆ ಮತ್ತೊಂದು ಹಾದಿ ಕಾಲ ಬುಡದಿಂದ ಹಾಯುತ್ತಾ ಅನಂತದವರೆಗೆ ಹಾಸಿರುತ್ತದೆ. ಧುರ್ಗಮವೋ ಸುಗಮವೋ ಹೆಜ್ಜೆ ಇಟ್ಟ ನಂತರವಷ್ಟೇ ತಿಳಿಯುತ್ತದೆ. ಗ್ರಹಿಕೆಯಿಂದ ಅರಿವು, ಅರಿವಿನಿಂದ ಜ್ಞಾನ, ಹೀಗೆ ಮುಂದೆ ಮುಂದೆ ಸಾಗಿದಷ್ಟೂ ತಾತ್ಕಾಲಿಕವಾಗಿಯಾದರೂ ಪೂರ್ಣತೆಯ ಅನುಭವ ದೊರೆಯುತ್ತದೆ. ಇದೊಂದು ಅಂತ್ಯವಿಲ್ಲದ ಹಾದಿ, ಪರಿಪೂರ್ಣತೆಯ ಗಮ್ಯದೆಡೆಗೆ ಆತ್ಮದ ನಿತ್ಯಪಯಣ. ಇಲ್ಲಿ ಅನುಭೂತಿಯೆಲ್ಲವೂ ಅಮೃತ; ಗಳಿಸಿದ್ದೆಲ್ಲವೂ ಶಾಶ್ವತ.
ಕನ್ನಡ ಸಾಹಿತ್ಯ ಲೋಕದಲ್ಲಿ ಓದುಗರಿಂದ, ವಿಮರ್ಷಕರಿಂದ ಅತೀ ಹೆಚ್ಚು ಚರ್ಚೆಗಳಿಗೆ, ವಾದ ವಿವಾದಗಳಿಗೆ ಕಾರಣವಾದ ಕೃತಿಗಳಲ್ಲಿ ದಿವಂಗತ ಡಾ.ಯು.ಆರ್ ಅನಂತಮೂರ್ತಿಯವರು ಬರೆದಿರುವ ಸಂಸ್ಕಾರ ಕಾದಂಬರಿ ಪ್ರಮುಖವಾದುದು. ಈ ಕಾದಂಬರಿಯ ಕಥಾವಸ್ತುವೇ ವಿವಾದಕ್ಕೆ ಮೂಲವಾಗಿದೆ. ಹಲವಾರು ವೇದಿಕೆಗಳಲ್ಲಿ ಈಗಾಗಲೇ ಚಿಂತನ-ಮಂಥನಗಳಿಗೆ ಸಂಸ್ಕಾರ ಕಾದಂಬರಿ ವಿಷಯ ವಸ್ತುವಾಗಿದೆ. ಇನ್ನು ಎಸ್.ಎಲ್ ಬೈರಪ್ಪ ರವರ ವಂಶವೃಕ್ಷ ಕಾದಂಬರಿಯು ಸಹಾ ಬಹುಚರ್ಚಿತವಾದ ಕಾದಂಬರಿಯಾಗಿದೆ. ಎಸ್.ಎಲ್.ಬೈರಪ್ಪ ರವರ ಅನೇಕ ಕಾದಂಬರಿಗಳ ಪೈಕಿ ಇದುವರೆಗೂ ಸುಮಾರು ಐವತ್ತಕ್ಕೂ ಹೆಚ್ಚು ಮುದ್ರಣಗಳನ್ನು ಕಂಡಿರುವ ಈ ಕಾದಂಬರಿ ಹೆಚ್ಚು ಪ್ರಸಿದ್ದವಾದ ಕೃತಿಯಾಗಿದೆ. ಸಂಸ್ಕಾರ ಮತ್ತು ವಂಶವೃಕ್ಷ ಈ ಎರಡೂ ಕಾದಂಬರಿಗಳು ಕ್ರಮವಾಗಿ ೧೯೬೫ ಮತ್ತು ೧೯೬೬ ರಲ್ಲಿ ಪ್ರಥಮವಾಗಿ ಪ್ರಕಟಗೊಳ್ಳುತ್ತವೆ.
ಸಾಹಿತ್ಯ ವಸ್ತು ವಿಚಾರದ ದೃಷ್ಟಿಯಿಂದ ನೋಡುವುದಾದರೆ ಅನಂತಮೂರ್ತಿ ಮತ್ತು ಎಸ್.ಎಲ್ ಬೈರಪ್ಪ ರವರು ಪರಸ್ಪರ ವಿರುದ್ದ ದಿಕ್ಕುಗಳಿಗೆ ಮುಖ ಮಾಡಿನಿಂತಿರುವಂತಹ ಲೇಖಕರು ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿಯೇ ಆಗಿದೆ. ಇನ್ನು ಈ ಎರಡೂ ಖ್ಯಾತ ಕೃತಿಗಳ ವಿಷಯವಸ್ತುವನ್ನು ಈ ಲೇಖನದಲ್ಲಿ ತೆಗೆದುಕೊಂಡಿರುವ ಉದ್ದೇಶವೆಂದರೆ, ಒಂದು ಸಾಮಾನ್ಯ ಸಂಗತಿಯನ್ನು ಎರಡು ವಿಭಿನ್ನ ದೃಷ್ಟಿಕೋನಗಳಿಂದ ಹೇಗೆ ನೋಡಬಹದು ? ಈ ಸಂಗತಿಯ ಎರಡು ವಿಬಿನ್ನ ಮುಖಗಳ ಪರಿಚಯ ಯಾವ ರೀತಿ ಆಗುವುದು ? ಎಂಬುದರ ಬಗ್ಗೆ ಚರ್ಚಿಸುವ ಸಲುವಾಗಿ. ಉಪಮೆಗಾಗಿ ಹೇಳುವುದಾದಲ್ಲಿ ಮೂಲತಃ ಒಂದು ಗಾಜೇ ಆಗಿರುವಂತಹ ಕನ್ನಡಿಯು ಪ್ರತಿಬಿಂಬವನ್ನು ಪ್ರತಿಫಲಿಸಿದರೆ ಸಾಮಾನ್ಯ ಗಾಜು ತನ್ನ ಮೂಲಕ ಬೆಳಕನ್ನು ಹಾದುಹೋಗುವಂತೆ ಮಾಡುತ್ತದೆ. ಸಾಮಾನ್ಯವಾದ ಒಂದು ಗಾಜನ್ನು ತಮ್ಮದೇ ಪ್ರತಿಬಿಂಬ ನೋಡುವ ಕನ್ನಡಿಯಾಗಿಯೂ ಮಾಡಬಹುದು ಅಥವಾ ನಮ್ಮ ಮುಂದಿನ ವಸ್ತುಗಳನ್ನು ನೋಡುವ ದೂರದರ್ಶಕವಾಗಿಯೂ ಉಪಯೋಗಿಸಬಹುದಾಗಿದೆ. ಸಾಹಿತ್ಯಿಕ ದೃಷ್ಟಿಯಿಂದ ಈ ಎರಡೂ ಕೃತಿಗಳು ಅಪೂರ್ವವಾದಂತಹ ರಚನೆಗಳಾಗಿದೆ. ಕಾದಂಬರಿಯ ಪಾತ್ರಗಳು, ಸಂಭಾಷಣೆಗಳು, ಭಾಷೆ, ಭಾವಗಳು ಅತ್ಯುತ್ತಮವಾಗಿ ಮೂಡಲ್ಪಟ್ಟಿದೆ. ಈ ಎರಡೂ ಕೃತಿಗಳನ್ನು ಹೋಲಿಸುತ್ತಾ ಇದೇ ರೀತಿಯ ವಿಮರ್ಷೆಯನ್ನು ಈ ಹಿಂದೆ ಯಾರಾದರೂ ಮಾಡಿರುವರೋ ಇಲ್ಲವೋ ಎಂಬುದು ನನಗೆ ತಿಳಿಯದು. ಈ ಎರಡೂ ಕಾದಂಬರಿಗಳು ನನ್ನನ್ನು ಚಿಂತನೆಗೆ ಹಚ್ಚಿರುವುದು ಈ ಪ್ರಯತ್ನಕ್ಕೆ ಪ್ರಮುಖ ಕಾರಣವಾಗಿರಲೂಬಹುದು.
ಯಾವುದೇ ಸಾಹಿತ್ಯ ಕೃತಿಯನ್ನು ಓದಲು ತೀರ್ಮಾನಿಸುವಾಗ ಆಗಲೀ, ಕೊಳ್ಳುವ ಸಮಯದಲ್ಲಾಗಲೀ ಅಥವಾ ಓದುವ ಮುನ್ನವಾಗಲೀ ಯಾವುದೇ ರೀತಿಯ ಪೂರ್ವಾಗ್ರಹಗಳಿದ್ದಲ್ಲಿ ಸಾಹಿತ್ಯದ ರುಚಿ ತಿಳಿಯುವುದಿಲ್ಲ. ಸಾಹಿತ್ಯ ನಮ್ಮನ್ನು ರಂಜಿಸಬೇಕಾಗಿದ್ದಲ್ಲಿ, ಅಥವಾ ಚಿಂತನೆಗೆ ಹಚ್ಚಬೇಕಿದ್ದಲ್ಲಿ ನಮ್ಮ ಮನಸ್ಸು ಪೂರ್ವಾಗ್ರಹಗಳಿಂದ ಹೊರತಾಗಿರಬೇಕಾಗಿರುತ್ತದೆ. ಇದು ಕಷ್ಟ ಸಾಧ್ಯವೇ ಸರಿ. ಪ್ರತಿಯೊಬ್ಬ ವ್ಯಕ್ತಿಯೂ ತನ್ನದೇ ಆದ ನಿಲುವುಗಳನ್ನು, ಅನಿಸಿಕೆಗಳನ್ನು ಹೊಂದಿರುತ್ತಾನೆ, ಆದರೆ ಪೂರ್ವಾಗ್ರಹಗಳಿಗೂ ಹಾಗೂ ಅನಿಸಿಕೆ ಮತ್ತು ನಿಲುವುಗಳಿಗೂ ಮಧ್ಯದಲ್ಲಿ ರೇಖೆಯೊಂದನ್ನು ಎಳೆಯಬೇಕು. ನಮ್ಮ ಅಭಿಪ್ರಾಯಗಳು ಎಂದಿಗೂ ಪೂರ್ವಾಗ್ರಹವಾಗಬಾರದು. ಪೂರ್ವಾಗ್ರಹಗಳಿಂದ ಪ್ರೇರಿತರಾಗಿ ಇವಕ್ಕೆ ಪೂರಕವಾಗಿರುವಂತಹ ಕೃತಿಗಳನ್ನೇ ಓದುತ್ತಾ ಹೋದಲ್ಲಿ ಬೌದ್ದಿಕ ಅರಿವು ಪಾಚಿಗಟ್ಟಿದ ಕುಂಟೆಯಂತಾಗುತ್ತದೆ. ಗಂಧದ ಚಕ್ಕೆಯನ್ನು ತೀಡಿದಷ್ಟೂ ಗಂಧ ಹೊಮ್ಮುವಂತೆ ಸಾಹಿತ್ಯದ ಯಾವುದೇ ವಿಷಯ ವಸ್ತುವನ್ನಾಗಲೀ ಚಿಂತನೆಗೆ ಒಡ್ಡಿದಷ್ಟೂ ಮತ್ತುಷ್ಟು ವಿಕಾಸವಾಗುತ್ತಾ ಹೋಗುತ್ತದೆ. ಆದರೆ ಗಂಧದ ಚಕ್ಕೆ ತೀಡಿದಷ್ಟೂ ಸವೆಯುತ್ತಾ ಹೋದರೆ ಚಿಂತನೆ ನಮ್ಮ ಬೌದ್ದಿಕ ಶಕ್ತಿಯನ್ನು ಹೆಚ್ಚು ಹೆಚ್ಚು ಪರಿಪಕ್ವಗೊಳಿಸುತ್ತದೆ.
ಈ ಪರಿಕಲ್ಪನೆಯು ಓದುವ ವಿಷಯದಲ್ಲಿ ಮಾತ್ರವಲ್ಲದೇ ಸಾಹಿತ್ಯದ ರಚನೆಯ ದೃಷ್ಟಿಯಲ್ಲಿಯೂ ಅನ್ವಯವಾಗುತ್ತದೆ. ಒಬ್ಬ ಲೇಖಕ ಒಂದು ವಿಚಾರವನ್ನು ಪ್ರಚುರಪಡಿಸಿದಾಗ ಅದು ಆತನ ಪೂರ್ವಾಗ್ರಹವೋ ಅಥವಾ ಚಿಂತನೆ-ನಿಲುವೋ ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಅವಶ್ಯಕವಾಗುತ್ತದೆ. ಪೂರ್ವಾಗ್ರಹಕ್ಕಿಂತಲೂ ಚಿಂತನೆ-ನಿಲುವುಗಳು ಹೆಚ್ಚು ಆಳ ಮತ್ತು ವಿಸ್ತಾರವನ್ನು ಹೊಂದಿರುತ್ತದೆ. ಒಂದು ವಿಚಾರವನ್ನು ಮಂಡಿಸುವ ಮುನ್ನ ಇದಕ್ಕೆ ಸಂಬಂಧಿಸಿದ ಹಿನ್ನೆಲೆಯ ಪೂರ್ಣ ಅರಿವು ಸಂಪಾದಿಸಿ, ವಿಸ್ತೃತವಾದ ಅಧ್ಯಯನವನ್ನು ಕೈಗೊಂಡು, ಹಲವು ಕಾಲದವರೆಗೂ ಮಂಥನವನ್ನು ನಡೆಸಿ ಮಂಡಿಸಿದ್ದಲ್ಲಿ ಅದು ಒಂದು ಚಿಂತನೆ-ನಿಲುವು ಎನಿಸುತ್ತದೆ. ಆದರೆ ಇದ್ಯಾವುದರ ಗೊಡವೆಯೂ ಇಲ್ಲದೇ ಯಾವುದೋ ಪ್ರಭಾವದಿಂದ, ಯಾರನ್ನೋ ಓಲೈಸುವ ದೃಷ್ಟಿಯಿಂದ, ತನ್ನ ಅನಿಸಿಕೆಗಳನ್ನು ಓದುಗರ ಮೇಲೆ ಆವೇಶದಿಂದ ಹೇರುವ ಉದ್ದೇಶ ಹೊಂದಿದ್ದಲ್ಲಿ ಇದು ಪೂರ್ವಾಗ್ರಹವೆನಿಸುತ್ತದೆ. ಪ್ರಬುದ್ದ ಓದುಗ ಇವೆರಡರ ನಡುವಿನ ಬಿನ್ನತೆಯನ್ನು ಗುರುತಿಸುವ ಶಕ್ತಿ ಹೊಂದಿರುತ್ತಾನೆ. ಆದರೆ ಆ ಓದುಗನೂ ಪೂರ್ವಾಗ್ರಹಗಳಿಂದ ಹೊರತಾಗಿದ್ದರೆ ಮಾತ್ರ ಇದು ಸಾಧ್ಯ. ಎಲ್ಲದಕ್ಕೂ ಮೂಲ ಆಲೋಚನಾ ಪ್ರಕ್ರಿಯೆ. ಆಲೋಚನೆಗಳು ಮುಕ್ತವಾಗಿದ್ದಷ್ಟೂ ಗ್ರಹಿಕೆ ಅರ್ಥಪೂರ್ಣವಾಗಿರುತ್ತದೆ. ಅರ್ಥಪೂರ್ಣ ಗ್ರಹಿಕೆಯಿಂದ ಹೊಮ್ಮುವ ಭಾವಾಭಿವ್ಯಕ್ತಿ ಸಹಜವಾಗಿರುತ್ತದೆ, ಸೃಜನಶೀಲವಾಗಿರುತ್ತದೆ.
ಸಂಸ್ಕಾರ ಕಾದಂಬರಿಯ ಪ್ರಮುಖ ಪಾತ್ರ ಪ್ರಾಣೇಶಾಚಾರ್ಯರು. ಕಾದಂಬರಿಯು ಓದಲು ಆರಂಬಿಸಿದ ಕ್ಷಣದಿಂದಲೂ ಹಿಡಿದು ಮುಗಿಯುವವರೆಗೆ ಓದುಗರನ್ನು ಸಂಪೂರ್ಣವಾಗಿ ಆಕ್ರಮಿಸಿಕೊಳ್ಳುತ್ತದೆ. ಪಾತ್ರಗಳು, ಘಟನೆಗಳು, ಸಂದರ್ಭಗಳು, ವರ್ಣನೆ, ಭಾವ, ಭಾಷೆ ಪ್ರತಿಯೊಂದು ಓದುಗರ ಅಂತರಂಗದೊಳಗೆ ನುಸುಳುತ್ತವೆ. ಇದೊಂದು ಅತ್ಯತ್ತಮವಾದ ಸಾಹಿತ್ಯಿಕ ರಚನೆ ಎನ್ನಲು ಯಾವುದೇ ಅಡ್ಡಿಯಿಲ್ಲ. ವೇದ ಪುರಾಣಗಳ ಅಧ್ಯಯನವನ್ನು ಕಾಶಿಯಲ್ಲಿ ಪೂರೈಸಿಕೊಂಡು ವೇದಾಂತ ಶಿರೋಮಣಿ ಎನಿಸಿದ್ದ ಪ್ರಾಣೇಶಾಚಾರ್ಯರು ದೂರ್ವಾಸಪುರದ ಅಗ್ರಹಾರದಲ್ಲಿ ಗುರು ಸ್ಥಾನದಲ್ಲಿದ್ದು ಮಾರ್ಗದರ್ಶಕರಾಗಿದ್ದವರು. ಹದಿನಾರನೇ ವರ್ಷದಲ್ಲಿ ಮದುವೆಯಾದ ಇವರು ಸಂನ್ಯಾಸಿಯಾಗಬೇಕೆಂದ ಛಲದಿಂದ, ತ್ಯಾಗದ ಬಾಳನ್ನು ನಡೆಸಬೇಕೆಂಬ ಉದ್ದೇಶದಿಂದ ಬೇಕಂತಲೇ ಹುಟ್ಟಿನಿಂದಲೂ ರೋಗಿಯಾಗಿದ್ದ ಭಾಗೀರತಿಯನ್ನು ವಿವಾಹವಾಗಿರುತ್ತಾರೆ. ಹೆಂಡತಿಗೆ ತಾವೇ ಸ್ನಾನ ಮಾಡಿಸಿ, ಕಾಲ ಕಾಲಕ್ಕೆ ರವೆಗಂಜಿಯನ್ನು ತಿನ್ನಿಸುತ್ತಾ, ಪತ್ನಿಯ ಸಕಲ ಸೇವೆ ಮಾಡುತ್ತಾ ಈ ವೈರಾಗ್ಯದ ಜೀವನದಿಂದ ತಾನು ಇನ್ನಷ್ಟು ಹದನಾದೆ ಎಂದು ಹಿಗ್ಗುತ್ತಾರೆ. ಸಂಜೆಯಾದರೆ ಅಗ್ರಹಾರದ ಬ್ರಾಹ್ಮಣರಿಗೆ ಪುರಾಣ-ಪುಣ್ಯ ಕಥೆಗಳನ್ನು ವಾಚನ ಪ್ರವಚನವನ್ನು ಮಾಡುತ್ತಿರುತ್ತಾರೆ. ಮತ್ತೊಬ್ಬ ನಾರಾಣಪ್ಪ ಇವ ಹುಟ್ಟಿನಿಂದ ಬ್ರಾಹ್ಮಣನಾದರೂ ತಾನು ಕಟ್ಟಿಕೊಂಡ ತನ್ನ ಹೆಂಡತಿಯನ್ನು ಬಿಟ್ಟು ಚಂದ್ರಿ ಎಂಬ ಶೂದ್ರ ಜಾತಿಗೆ ಸೇರಿದ ಸೂಳೆಯೊಂದಿಗೆ ಅದೇ ಅಗ್ರಹಾರದಲ್ಲಿ ವಾಸವಿರುತ್ತಾನೆ. ಮಾಂಸ ಮದ್ಯದ ಸೇವನೆಯಿಂದ ಹಿಡಿದು ಎಲ್ಲಾ ಧರ್ಮ ವಿರೋಧಿ ಕಾರ್ಯಗಳನ್ನೂ ರಾಜಾ ರೋಷವಾಗಿ ಮಾಡುತ್ತಾ ಇಡೀ ಅಗ್ರಹಾರದ ಬ್ರಾಹ್ಮಣರಿಗೆ ಸವಾಲಾಗಿರುತ್ತಾನೆ, ಈ ನಾರಾಣಪ್ಪನ ಸಾವಿನೊಂದಿಗೆ ಕಾದಂಬರಿ ಪ್ರಾರಂಭವಾಗುತ್ತದೆ. ಹುಟ್ಟಿನಿಂದ ಬ್ರಾಹ್ಮಣನಾಗಿದ್ದರೂ ಎಲ್ಲಾ ರೀತಿಯ ಬ್ರಾಹ್ಮಣ ವಿರೋಧಿ ಕಾರ್ಯಗಳನ್ನು ಮಾಡಿಕೊಂಡಿದ್ದರ ಪರಿಣಾಮ ಇವನ ಶವ ಸಂಸ್ಕಾರವನ್ನು ಮಾಡುವವರು ಯಾರು..? ಎಂಬ ಧರ್ಮ ಸಂಕಟಕ್ಕೆ ಇಡೀ ಅಗ್ರಹಾರ ತುತ್ತಾಗುತ್ತದೆ. ಈ ಬಗ್ಗೆ ತೀರ್ಮಾನವನ್ನು ಹೇಳುವ ಗುರುತರ ಹೊಣೆ ಧರ್ಮಸೂಕ್ಷಗಳನ್ನು ಆಪದ್ಧರ್ಮವನ್ನು ಅರಿತ ಪ್ರಾಣೇಶಾಚಾರ್ಯರದ್ದೇ ಆಗುತ್ತದೆ. ನಾರಾಣಪ್ಪ ಸತ್ತು ಒಂದು ದಿನ ಕಳೆದರೂ ಏಳಿದ ಪ್ರಶ್ನೆಗೆ ಧರ್ಮಶಾಸ್ತ್ರದಲ್ಲಿ ಪರಿಹಾರ ಸಿಗದೇ ಹತಾಷರಾಗಿ ಸೂಕ್ತ ಉತ್ತರಕ್ಕಾಗಿ ಅಗ್ರಹಾರದ ಹೊರಗಿರುವ ಹೊಳೆಯ ಬಳಿಯ ಮಾರುತಿಯ ಬಳಿ ಪ್ರಶ್ನೆ ಹಾಕಲು ಹೋಗುತ್ತಾರೆ. ಈ ಸಮಯದಲ್ಲಿ ಕಥೆ ಒಂದು ನಾಟಕೀಯ ಸಮಯಕ್ಕೆ ತನ್ನನ್ನು ತಾನು ತೆರೆದುಕೊಳ್ಳುತ್ತದೆ. ಆಚಾರ್ಯರು ಹೋದ ಸಮಯದಲ್ಲೇ, ಸತ್ತ ನಾರಣಪ್ಪ ತಾನು ಇರಿಸಿಕೊಂಡಿದ್ದ ಚಂದ್ರಿಯೂ ಹೊಳೆಯ ಬಳಿಯ ತೋಟದಲ್ಲಿ ರಸಬಾಳೆ ಹಣ್ಣನ್ನು ಕಟ್ಟಿಕೊಂಡು ಹೋಗಲು ಬರುತ್ತಾಳೆ. ಆಚಾರ್ಯರು ಮಾರುತಿ ದೇವಾಲಯದಲ್ಲಿ ಬಾರಿಸಿದ ಗಂಟೆಯ ಶಬ್ದ ಕೇಳಿ ಅವರತ್ತ ಬರುತ್ತಾಳೆ. ಆಗಲೇ ಕತ್ತಲು ಆವರಿಸಿದ್ದ ರಾತ್ರಿಯಲ್ಲಿ ಆಚಾರ್ಯರ ಕಾಲಿಗೆ ಬೀಳುತ್ತಾಳೆ. ಇದೇ ಸಮಯದಲ್ಲಿ ಅನಿರೀಕ್ಷಿತವಾಗಿ ಅವಳ ಕುಪ್ಪಸ ಹರಿದು ತುಂಬು ಮೊಲೆಗಳಿಗೆ ಆಚಾರ್ಯರ ಕೈತಾಗಿ ಪ್ರಾಣೇಶಾಚಾರ್ಯರು ಅವಳಲ್ಲಿ ಲೀನವಾಗುತ್ತಾರೆ, ಆ ಕ್ಷಣ ಅವರ ಜೀವಿತ ಸಂಕಲ್ಪಗಳೆಲ್ಲವೂ ಮರೆಯಾಗಿ ಚಂದ್ರಿಯೊಡನೆ ಕೂಡುತ್ತಾರೆ. ಈ ನಾಟಕೀಯ ಘಟನೆ ಕಥೆಯ ತಿರುವು. ಈಗಾಗಲೇ ಶವಸಂಸ್ಕಾರದ ಬಗ್ಗೆ ಸೂಕ್ತ ಉತ್ತರ ಧರ್ಮಶಾಸ್ತ್ರದಲ್ಲಿ ಸಿಗದೇ ಕಂಗೆಟ್ಟು ಹತಾಷರಾಗಿ ಒಂದು ರೀತಿಯ ದ್ವಂದ್ವಕ್ಕೆ ಒಳಗಾಗಿದ್ದ ಆಚಾರ್ಯರು ಈ ಘಟನೆಯಿಂದ ತಾವು ನಂಬಿಕೊಂಡು ಬಂದಿದ್ದ ಸಿದ್ದಾಂತಗಳು, ಧರ್ಮ ಹಾಗೂ ತನ್ನನ್ನು ಆ ಕ್ಷಣ ಆವರಿಸಿದ ಕಾಮ ಇವುಗಳ ಮದ್ಯೆ ಮತ್ತೊಂದು ಬಗೆಯ ದ್ವಂದಕ್ಕೆ ಒಳಗಾಗುತ್ತಾರೆ. ತನ್ನ ಮುಂದೆ ಕವಲಾಗಿ ಒಡೆದ ಎರಡು ದಾರಿಯ ಪ್ರಾರಂಭದಲ್ಲಿ ನಿಂತು ಯಾವ ದಾರಿಯಲ್ಲಿ ಸಾಗಲಿ ಎಂಬ ಪ್ರಶ್ನೆಗೆ ಉತ್ತರಕ್ಕಾಗಿ ತಮ್ಮ ಅಂತರಾಳದಲ್ಲಿ ತಡಕಾಡುತ್ತಾರೆ ಪ್ರಾಣೇಶಾಚಾರ್ಯರು. ಇದೇ ದ್ವಂದ್ವದಲ್ಲೇ ಕಥೆ ಮುಕ್ತಾಯವಾಗುತ್ತದೆ.
ಇಡೀ ಕಾದಂಬರಿಯಲ್ಲಿ ಹಳೆಯ ಸಂಸ್ಕಾರ ಸಂಪ್ರದಾಯಗಳನ್ನು ಪಾತ್ರಗಳ ಮೂಲಕ, ಸಂದರ್ಭಗಳ ಮೂಲಕ, ಘಟನಾವಳಿಗಳ ಮೂಲಕ ಮಾರ್ಮಿಕವಾಗಿ ಪ್ರಶ್ನಿಸಲಾಗುತ್ತದೆ. ಇಲ್ಲಿ “ಹಳೆಯ” ಎಂಬ ಪದಕ್ಕಿಂದ “ವೈದಿಕ” ಎಂಬ ಪದದ ಬಳಕೆ ಸೂಕ್ತವೆನಿಸುತ್ತದೆ. ಬ್ರಾಹ್ಮಣ ಸಂಪ್ರದಾಯಗಳನ್ನು ಒರೆಗೆ ಹಚ್ಚುವ ಉದ್ದೇಶ ಕಾದಂಬರಿಯ ಪ್ರತೀ ಸಾಲಿನಲ್ಲಿಯೂ ಕಾಣುತ್ತದೆ. ಇದೇ ಪ್ರಯತ್ನದಲ್ಲಿ ಲೇಖಕರು ತಮ್ಮ ಅಪೂರ್ವವಾದ ಶೈಲಿಯಿಂದ ಓದುಗರನ್ನು ನಿಜವಾಗಿಯೂ ಚಿಂತನೆಗೆ ಹಚ್ಚುತ್ತಾರೆ. ಕಥೆ, ಪಾತ್ರಗಳು ಓದುಗರ ಮನದಲ್ಲಿ ಬಹುಕಾಲ ಉಳಿಯುತ್ತವೆ. ಅಗ್ರಹಾರ ಬ್ರಾಹ್ಮಣರ ಭಾಷೆ, ಸಂಭಾಷಣಾ ಶೈಲಿ ನೈಜತೆಯಿಂದ ಕೂಡಿದೆ. ಸಂಪ್ರದಾಯ, ಸಂಸ್ಕಾರಗಳ ಹೊದಿಕೆಯಿಂದ ಮನುಷ್ಯ ಸಹಜ ಬಯಕೆಗಳು ಇಣುಕಿ ನೋಡುತ್ತಿರುವಂತೆ ವಿವರಿಸುವ ಪಾತ್ರಗಳ ವರ್ಣನಾ ಶೈಲಿ ಮನಮುಟ್ಟುತ್ತದೆ. ಅದರಲ್ಲೂ ಅಗ್ರಹಾರದ ರಚನೆ, ವ್ಯಾಪಿಸುವ ಕೊಳೆತ ಶವದ ಧುರ್ನಾತ, ಸತ್ತ ಇಲಿಗಳ ಮೂಲಕ ಹಬ್ಬುವ ಪ್ಲೇಗ್ ರೋಗ, ಅಗ್ರಹಾರದ ಮನೆಗಳ ಮೇಲೆ ಬಂದು ಕೂರುವ ರಣಹದ್ದುಗಳು, ಜಾಗಟೆಗಳನ್ನು ಬಾರಿಸಿ ಹದ್ದುಗಳನ್ನು ಓಡಿಸುವ ಬ್ರಾಹ್ಮಣರು, ಜಾತ್ರೆಯಲ್ಲಿನ ಜನ, ಗುಂಪು-ಗದ್ದಲಗಳು, ಬೊಂಬಾಯಿ ಪೆಟ್ಟಿಗೆ, ದೊಂಬರ ಆಟ, ಪೀಪಿ ಊದುವ ಹುಡುಗರು, ಅಂಗವಿಹೀನ ಭಿಕ್ಷುಕರು, ಸೋಡಾ ಕ್ರಷ್ ಕುಡಿದು ’ಗರಕ್’ ಎಂದು ತೇಗುವ ಹೆಂಗಸರು, ಮಕ್ಕಳು, ಕಾಲಿಗೆ ಕತ್ತಿ ಕಟ್ಟಿದ ಹುಂಜಗಳ ಕೋಳಿ ಅಂಕ, ಇವುಗಳ ನಡುವೆ ಅತಂತ್ರ ಪಿಶಾಚಿಯಾದೆ ಎಂದುಕೊಳ್ಳುವ ಆಚಾರ್ಯರು ಹೀಗೆ ಕಟ್ಟಿಕೊಡುವ ಸನ್ನಿವೇಶಗಳನ್ನು, ಸುತ್ತಣ ವಾತಾವರಣವನ್ನು ಮನೋಜ್ಞವಾಗಿ ಚಿತ್ರಿಸಲಾಗಿದೆ.
ಆದರೆ ಸಂಪ್ರಯಾಯ, ಸಂಸ್ಕಾರಗಳನ್ನು, ಒರೆಗೆ ಹಚ್ಚುವ ಧಾಟಿಯಲ್ಲಿ ಕೇವಲ ಒಂದು ವರ್ಗದ ಜನ ಸಮೂಹವನ್ನು ಗುರಿಯಾಗಿಸಿಕೊಂಡಿರುವುದು ಗಮನಕ್ಕೆ ಬರುತ್ತದೆ. ಲೇಖಕರ ಮನಮುಟ್ಟುವ ಬರಹದ ಶೈಲಿ, ಸೊಗಸಾದ ವರ್ಣನೆ, ಪಾತ್ರಗಳ ಪೋಷಣೆ ಹಾಗೂ ಭಾಷೆ ಇದನ್ನೂ ಮೀರಿ ಓದುಗರ ಮೇಲೆ ಪ್ರಭಾವ ಬೀರತೊಡಗುತ್ತದೆ. ಕಾದಂಬರಿಯಲ್ಲಿ ವಿವಾದಕ್ಕೆ ಎಡೆ ಮಾಡಿಕೊಡುವಂತಹ ಹಲವು ಅಂಶಗಳಿವೆ ವೇದ ಪುರಾಣಗಳ ಕಥೆಯನ್ನು ಕೇಳಿದ ಯುವಕರು ಇದರಿಂದ ರೋಮಾಂಚಿತರಾಗಿ ಹೊಲತಿಯನ್ನೋ ವೈಶ್ಯೆಯನ್ನೋ ಸಂಭೋಗಿಸುತ್ತಾರೆ ಎನ್ನಲಾಗುತ್ತದೆ, ಬ್ರಾಹ್ಮಣ ಮುತ್ತೈದೆಯರನ್ನು ಅಂದ ವಿಕಾರವಾಗಿ ಹಲವು ಕಡೆ ಚಿತ್ರಿಸಲಾಗುತ್ತದೆ. ಮೋಟು ಜಡೆಯ, ಸೊರಗಿದ ಮೋರೆಯ, ಬಚ್ಚು ಗಲ್ಲದ, ಗುಳಿ ಕಣ್ಣಿನ, ಜೋತು ಬಿದ್ದ ಮೊಲೆಯ, ಗುಜ್ಜು-ಮೂಗಿನ ಇತ್ಯಾದಿ ವರ್ಣನೆಗಳನ್ನು ಅಗ್ರಹಾರದ ಬ್ರಾಹ್ಮಣ ಹೆಂಗಸರನ್ನು ಕುರಿತು ಮಾಡಲಾಗುತ್ತದೆ. ಅಗ್ರಹಾರದ ಬ್ರಾಹ್ಮಣರು ಹೊಟ್ಟಬಾಕರು, ತಿಂಡಿಪೋತರು, ಅಜ್ಞಾನಿಗಳು, ಆಶೆಬುರುಕರು, ಲೋಲುಪರು, ಅರಸಿಕರು ಎಂಬ ದೃಷ್ಟಿಯಲ್ಲೇ ಚಿತ್ರಿಸಲಾಗುತ್ತದೆ. ಇದೇ ರೀತಿಯ ನೆಗೆಟೀವ್ ಎನ್ನಬಹುದಾದ ಒಂದು ಸೀಮಿತ ಪರಿಧಿಯ ಒಳಗೆ ಬ್ರಾಹ್ಮಣರನ್ನು ಇರಿಸಲಾಗುತ್ತದೆ. ಅರ್ಥಹೀನ ಆಚರಣೆ, ಸಂಪ್ರದಾಯಗಳನ್ನು, ಮೌಡ್ಯವನ್ನು ಪ್ರಶ್ನಿಸುವ, ವಿಮರ್ಷಿಸುವ, ಜೀವನ ಮೌಲ್ಯಗಳನ್ನು ಎತ್ತಿಹಿಡಿಯುವ ನವ್ಯಸಾಹಿತ್ಯದ ಪ್ರಕಾರವು ಈ ಕೃತಿ ರಚನೆಯ ಉದ್ದೇಶವೆಂಬುದು ಪರಿಣಾಮಕಾರಿಯಾಗಿ ನಿಜವೆನ್ನಿಸಿದರೂ, ಒಂದು ವರ್ಗದ ಜನ ಸಮೂಹದ ಕುರಿತು ಲೇಖಕರಿಗಿರುವ ಪೂರ್ವಾಗ್ರಹಗಳನ್ನು ಸಹಾ ಈ ಕೃತಿ ಬಿಂಬಿಸುತ್ತದೆ. ಮೌಡ್ಯವನ್ನು ಅರ್ಥಹೀನ ಆಚರಣೆಗಳನ್ನು ಒರೆಗೆ ಹಚ್ಚಿ ವಿಮರ್ಷಿಸುವ ನವ್ಯ ಸಾಹಿತ್ಯ ಪ್ರಕಾರದ ಲೇಖನಿಯನ್ನು ಕೈಯಲ್ಲಿ ಹಿಡಿದು ಇಡೀ ವೈದಿಕ ಪರಂಪರೆಯನ್ನೇ ಸತ್ವಹೀನ ಎಂಬ ರೀತಿ ಚಿತ್ರಿಸುವುದು ವಿವಾದಕ್ಕೆ ದಾರಿ ಮಾಡಿಕೊಟ್ಟಿರುವಂತಹ ಅಂಶವೆನ್ನಿಸುತ್ತದೆ, ಆದರೆ ಮೊದಲೇ ಹೇಳಿದಂತೆ ಬರಹದ ಶೈಲಿ ಇವೆಲ್ಲವುಗಳನ್ನು ಮೀರಿ ಓದುಗರ ಮೇಲೆ ಪ್ರಭಾವ ಬೀರಿರುತ್ತದೆ. ಈ ಪ್ರಭಾವದಿಂದ ಹೊರಬಂದು ನೋಡಿದಾಗ ಮಾತ್ರ ಇಂತಹ ಹಲವು ಅಂಶಗಳು ಅರಿವಿಗೆ ಬರುತ್ತದೆ. ಸಾಹಿತ್ಯ ರಂಗದಲ್ಲಿ ಇದೊಂದು ಅತ್ಯುತ್ತಮ ರಚನೆಯಾಗಿದೆ ಎಂಬುದು ಒಪ್ಪತಕ್ಕ ವಿಚಾರವೇ. ಮೊದಲ ಬಾರಿಗೆ ಓದಿದಾಗ ಈ ಕೃತಿ ನನ್ನನ್ನು ಸಂಪೂರ್ಣ ಆವರಿಸಿತ್ತು, ಒಂದೇ ಗುಕ್ಕಿನಲ್ಲಿ ನಸುಕಿನವರೆಗೂ ಕುಳಿತು ಓದಿ ಮುಗಿಸಿದ್ದೆ. ಎರಡನೇ ಬಾರಿ ಓದಿದಾಗಲೂ ಸಹಾ ನನ್ನನ್ನು ಹಿಡಿದಿಟ್ಟಿದ್ದು ಸುಳ್ಳಲ್ಲ. ಜಾದೂಗಾರನೊಬ್ಬ ತನ್ನ ವೀಕ್ಷಕರನ್ನು ಕಣ್ಣುಕಟ್ಟು ಮಾಡುವಂತೆ ಲೇಖಕರು ತಮ್ಮ ಅಪೂರ್ವ ಬರಹದ ಶೈಲಿಯಲ್ಲಿ ಓದುಗರನ್ನು ಮಂತ್ರಮುಗ್ಧಗೊಳಿಸುತ್ತಾರೆ.
ಇನ್ನು ಎಸ್.ಎಲ್.ಬೈರಪ್ಪ ರವರ ವಂಶವೃಕ್ಷ ಕಾದಂಬರಿಯು ಶ್ರೀನಿವಾಸ ಶೋತ್ರಿಯವರ ಪರಿಚಯದೊಂದಿಗೆ ಆರಂಭವಾಗುತ್ತದೆ. ಸಂಸ್ಕಾರ ಕಾದಂಬರಿಯ ಪ್ರಾಣೇಶಾಚಾರ್ಯರಿಗೂ, ಇಲ್ಲಿಯ ಶ್ರೀನಿವಾಶ ಶೋತ್ರಿಯವರ ಎರಡೂ ಪಾತ್ರಗಳೂ ಹಲವಾರು ರೀತಿಯಲ್ಲಿ ಒಂದಕ್ಕೊಂದು ಪೂರಕವಾಗಿದೆ ಎನ್ನಬಹುದು. ಪ್ರಾಣೇಶಾಚಾರ್ಯರಂತೆ ಶ್ರೀನಿವಾಸ ಶೋತ್ರಿಯವರೂ ಸಹಾ ವೇದಾಂತ ಶಾಸ್ತ್ರಗಳಲ್ಲಿ ಉನ್ನತ ಮಟ್ಟದ ಪಾಂಡಿತ್ಯವನ್ನು ಹೊಂದಿದ್ದವರು. ಕಾದಂಬರಿಯಲ್ಲಿ ಶ್ರೀನಿವಾಸ ಶೋತ್ರಿಯವರದು ಪ್ರಮುಖವಾದಂತಹ ಪಾತ್ರ ಇದೇ ಕಾದಂಬರಿಯ ಕೇಂದ್ರ ಬಿಂದು ಎನ್ನಲೂ ಬಹುದು. ಎಸ್.ಎಲ್.ಬೈರಪ್ಪ ರವರ ಎಂದಿನ ಶೈಲಿಯಂತೆ ಪಾತ್ರಗಳ ರಚನೆ ಈ ಕೃತಿಯಲ್ಲಿಯೂ ಸಹಾ ತುಂಬಾ ತೂಕವಾಗಿ ಮೂಡಿ ಬಂದಿದೆ, ಪ್ರತೀ ಪಾತ್ರದ ವ್ಯಕ್ತಿತ್ವವೂ ಓದುಗರ ಮನಸ್ಸಿಗೆ ನಾಟುತ್ತದೆ. ಒಂದು ಸೀಮಿತ ಪರಿಕೋನದ ಪರಿಧಿಗೆ ಒಳಪಡದೇ ಕಾದಂಬರಿಯು ಜೀವನದ ನಾನಾ ಮುಖಗಳನ್ನು ಶೋಧಿಸುತ್ತಾ ಸಾಗುತ್ತದೆ. ಜೀವನದ ನೈಜ ಅರ್ಥಗಳನ್ನು ಹುಡುಕುತ್ತಾ ವಿಮರ್ಷಾತ್ಮಕವಾಗಿ ಧರ್ಮ-ಆಧರ್ಮಗಳ ಪರಿಣಾಮಗಳನ್ನು ಘಟನಾವಳಿಗಳ ಮೂಲಕ ಲೇಖಕರು ತಮ್ಮ ಆಕರ್ಷಣ ಬರಹದ ಶೈಲಿಯಲ್ಲಿ ವಿವರಿಸುತ್ತಾ ಹೋಗುತ್ತಾರೆ. ಸಂಸ್ಕಾರ ಕಾದಂಬರಿಯು ಒಂದು ಸರಳವಾದ ವಸ್ತು ವಿಷಯದ ಬಗ್ಗೆ ಒಂದೇ ದಿಕ್ಕಿನಲ್ಲಿ ಸಾಗುತ್ತಾ ಹೋದರೆ, ವಂಶವೃಕ್ಷವು ಮಾನವ ಜೀವನದ ಸಂಕೀರ್ಣವಾದ ವಿಷಯವನ್ನು ಅದರ ಆಳಕ್ಕಿಳಿದು ಬೇರುಗಳಿಂದ ಚಿಗುರಿನವರೆಗೂ ವಿವಿಧ ಕೋನಗಳಲ್ಲಿ ಚಿತ್ರಿಸುತ್ತಾ ಹೋಗುತ್ತದೆ. ಈ ಕಾದಂಬರಿಯಲ್ಲಿ ಬರುವ ಹಲವಾರು ಪಾತ್ರಗಳೂ ತನ್ನದೇ ಮಹತ್ವವನ್ನು ಹೊಂದಿರುತ್ತದೆ. ಸಂಸ್ಕಾರ ಕಾದಂಬರಿಗಿಂತ ಗಾತ್ರದಲ್ಲಿ ತೂಕವಿರುವಂತೆಯೇ, ವಸ್ತು-ವಿಚಾರದಲ್ಲಿಯೂ ಅದರ ನಿರ್ವಹಣೆಯಲ್ಲಿಯೂ ವಂಶವೃಕ್ಷ ಹೆಚ್ಚು ತೂಗುತ್ತದೆ. ಆದರೆ ಸಾಹಿತ್ಯಿಕ ಕಲಾಕೃತಿಯ ದೃಷ್ಟಿಯಿಂದ ಸಂಸ್ಕಾರ ಒಂದು ಕೈ ಮೇಲೆ ಎಂದು ನನ್ನ ವೈಯಕ್ತಿಕ ಅನಿಸಿಕೆ,
ಎರಡೂ ಕೃತಿಗಳಲ್ಲಿರುವ ಸಾಮಾನ್ಯ ಅಂಶಗಳ ಪೈಕಿ ಪ್ರಮುಖವಾದುದು ಈ ಕಾದಂಬರಿಗಳ ಪ್ರಮುಖ ಪಾತ್ರ. ಮೊದಲೇ ಹೇಳಿದಂತೆ ಸಂಸ್ಕಾರದ ಪ್ರಾಣೇಶಾಚಾರ್ಯರು ಹಾಗೂ ವಂಶವೃಕ್ಷ ಶ್ರೀನಿವಾಸ ಶೋತ್ರಿಗಳ ಎರಡೂ ಪಾತ್ರಗಳಲ್ಲಿ ಕೆಲವಾರು ಸಾಮಾನ್ಯ ಅಂಶಗಳಿವೆ. ಸಂಸ್ಕಾರದ ಪ್ರಾಣೇಶಾಚಾರ್ಯರಂತೆ, ಶ್ರೀನಿವಾಸ ಶೋತ್ರಿಗಳು ವೇದಾಂತದ ಬಗ್ಗೆ ಉನ್ನತ ಮಟ್ಟದ ಅರಿವನ್ನು ಹೊಂದಿದ್ದರು ಆದರೆ ಇವರ ಅರಿವು ಅತ್ಯಂತ ಆಳ ಮತ್ತು ವಿಸ್ತಾರವಾದುದು. ವೇದಾಂತಗಳ ನೈಜ ಅರ್ಥವನ್ನು ಇವರು ಮನಗಂಡಿದ್ದರು ಎಂಬುದು ಕಾದಂಬರಿನ್ನು ಓದುತ್ತಿದ್ದಂತೆ ಓದುಗರ ತಿಳುವಳಿಕೆಗೆ ಬರುತ್ತದೆ. ತನಗೆ ಎದುರಾದ ಧರ್ಮಸಂಕಟದ ಪರಿಹಾರಕ್ಕಾಗಿ ಪ್ರಾಣೇಶಾಚಾರ್ಯರು ಮನುಸ್ಮೃತಿಗಳ ಮೊರೆಹೋದರೆ, ತನ್ನ ಜೀವನದ ಸಂಧಿಗ್ದ ಪರಿಸ್ಥಿತಿಯಲ್ಲಿ ವೇದಾಂತಗಳ ತಿರುಳನ್ನು ಅರಿತಿದ್ದ ಶ್ರೀನಿವಾಶ ಶೋತ್ರಿಯವರು ಧರ್ಮ ಮಾರ್ಗದ ಮೊರೆಹೋಗುತ್ತಾರೆ. ಇಲ್ಲಿ ಪ್ರಾಣೇಶಚಾರ್ಯರ ಧರ್ಮ ಮಾರ್ಗ ಮನುಸ್ಮೃತಿಗಳ ಮೇಲೆ ಆಧಾರವಾದರೆ ಶ್ರೀನಿವಾಸಶೋತ್ರಿಯವರ ಧರ್ಮ ಮಾರ್ಗ ವೇದಾಂತ ಉಪನಿಷತ್ತುಗಳ ಸಾರದಂತೆ ನೀತಿ ಹಾಗೂ ತತ್ವ ಮಾರ್ಗದ ಮೇಲೆ ಆಧಾರವಾಗಿರುತ್ತದೆ. ಭೂ ಗರ್ಭದಲ್ಲಿ ಕಲ್ಲು, ಮಣ್ಣು, ಶೀಲಾ ರಚನೆಗಳೇ ಇವೆ ಎಂಬುದು ನಿಜ ಆದರೆ ಭೂ ರಚನೆಯ ಮತ್ತೂ ಆಳಕ್ಕೆ ಹೋದಂತೆ ಗಟ್ಟಿ ಗಟ್ಟಿ ಶಿಲಾ ಪದರಗಳ ನಂತರ, ಕಲ್ಲು, ಮಣ್ಣುಗಳ ಕೆಳಗೆ ಅಂತರ್ಜಲವೂ ಇರುತ್ತದೆ. ಆದರೆ ಆಳಕ್ಕೆ ಇಳಿದಾಗಲೇ ಅಂತರ್ಜಲವನ್ನು ಮುಟ್ಟಲು ಸಾಧ್ಯ ಅಲ್ಲಿಯವರೆಗೆ ತಲುಪಲು ಅಡ್ಡ ಬರುವ ಕಲ್ಲು ಮಣ್ಣುಗಳನ್ನು ಸೀಳಿಕೊಂಡು ಹೋಗಬೇಕಾಗುತ್ತದೆ. ಈ ರೀತಿಯ ಆಳಕ್ಕೆ ಇಳಿಯುವ ಪ್ರಯತ್ನ ವಂಶವೃಕ್ಷದಲ್ಲಿ ಕಂಡು ಬಂದರೆ, ಕೇವಲ ಮೇಲ್ಪದರವನ್ನು ಮಾತ್ರ ಒಳಹೊಕ್ಕಿ ತಾನು ನುಸುಳಿ ಬಂದ ದಾರಿಯಲ್ಲೇ ಏಕಮುಖ ಮಾರ್ಗವಾಗಿ ವಿಮರ್ಷೆ ಮಾಡುವ ಪ್ರಯತ್ನ ಸಂಸ್ಕಾರ ಕಾದಂಬರಿಯದ್ದಾಗುತ್ತದೆ. ದ್ವಂದ್ವಗಳಲ್ಲಿ ಮುಳುಗಿ ಚಿತ್ತ ಚಂಚಲಕ್ಕೊಳಗಾದ ಪ್ರಾಣೇಶಾಚಾರ್ಯರು ತನ್ನ ಸ್ಥಿತಿಯ ಬಗ್ಗೆ ವಿವರಿಸುತ್ತಾ “ಎಲ್ಲಿನಿಂದ ಆರಂಭಿಸಿದೆನೋ ಈಗ ಅಲ್ಲಿಗೇ ಬಂದು ನಿಂತಿರುವೆ” ಎಂದು ಭಾವಿಸುತ್ತಾರೆ. ಪೂರ್ಣತೆಯೆಡಗಿನ ಪಯಣನದಲ್ಲಿ ಎಡವಿ ಅಪೂರ್ಣರಾಗಿಯೇ ಉಳಿದಂತೆ ಅನಿಸುತ್ತದೆ. ಆದರೆ ಈ ದ್ವಂದ್ವದ ಬಗ್ಗೆ ವಿಸ್ತಾರವಾಗಿ ವಿಮರ್ಷಿಸಿ ನಿಖರವಾದ ಉತ್ತರವನ್ನು ಕಂಡುಕೊಳ್ಳುವ ಪ್ರಯತ್ನ ವಂಶವೃಕ್ಷದಲ್ಲಿ ಕಾಣಬಹುದಾಗಿರುತ್ತದೆ.
ಸಂಸ್ಕಾರ ಕಾದಂಬರಿಗಿಂತಲೂ ವಂಶವೃಕ್ಷದ ವ್ಯಾಪ್ತಿಯು ವಿಸ್ತಾರವಾದುದು. ವಿಷಯ ವ್ಯಾಪ್ತಿಯ ನಿಟ್ಟಿನಲ್ಲಿ ಎರಡು ಕೃತಿಗಳನ್ನು ಸಮೀಕರಿಸುವುದು ನ್ಯಾಯಯುತವಲ್ಲದಿದ್ದರೂ ಈ ಪ್ರಯತಕ್ಕೆ ಕಾರಣ ಕಾದಂಬರಿಗಳ ಎರಡು ಪ್ರಮುಖ ಪಾತ್ರಗಳು. ಪ್ರಾಣೇಶಚಾರ್ಯರ ಹಾಗೂ ಶ್ರೀನಿವಾಶಶೋತ್ರಿಯವರ ಪಾತ್ರಗಳಲ್ಲಿ ಸಾಮ್ಯತೆಯು ಇದ್ದಂತೆಯೇ ಎರಡೂ ಪಾತ್ರಗಳೂ ಜೀವನದ ಒಂದು ಸಾಮಾನ್ಯವಾದ ಘಟ್ಟದಲ್ಲಿ ಸಂಧಿಸುತ್ತವೆ. ತನಗೆ ಒದಗಿಬಂದ ಅನಿವಾರ್ಯ ವೈರಾಗ್ಯದಿಂದ ಇನ್ನಷ್ಟು ಹದನಾದೆ ಎಂದು ಭಾವಿಸುತ್ತಾ ಈ ಮೂಲಕ ಮುಕ್ತಿಯ ದಾರಿಗೆ ಹತ್ತಿವಾಗುತ್ತಿದ್ದೇನೆ ಎಂದು ತಿಳಿದಿದ್ದ ಪ್ರಾಣೇಶಾಚಾರ್ಯರು ತನ್ನ ರೋಗಿಷ್ಟ ಪತ್ನಿಯ ಸೇವೆ ಮಾಡಿಕೊಂಡಿದ್ದು ದೈಹಿಕ ಸುಖದ ಅನುಭವದಿಂದ ದೂರವೇ ಉಳಿದಿದ್ದರು. ಶ್ರೀನಿವಾಸ ಶೋತ್ರಿಯವರು ವಿವಾಹವಾಗಿ ಒಂದು ಗಂಡುಮಗುವನ್ನು ಪಡೆದ ನಂತರ ವೈದ್ಯರ ಸಲಹೆ ಮೇರೆಗೆ ಪತ್ನಿಯ ಅನಾರೋಗ್ಯದ ಕಾರಣದಿಂದ ದೈಹಿಕ ಸುಖದಿಂದ ವಂಚಿತರಾಗುತ್ತಾರೆ. ಇದರಿಂದ ವ್ಯಾಕುಲಗೊಳ್ಳುತ್ತಾರೆ, ದೈಹಿಕವಾಗಿ ಕ್ಷೀಣಿಸುತ್ತಾರೆ. ಯೌವನದ ಅತೃಪ್ತ ಬಯಕೆಗಳು ಇವರ ಮನಸ್ಸನ್ನು ಆವರಿಸತೊಡಗುತ್ತದೆ. ಇದೇ ಕಾರಣದಿಂದ ಇವರ ಪತ್ನಿ ಭಗೀರತಮ್ಮ ನವರೂ ಕೊರಗುತ್ತಾರೆ. ಪತಿಯ ಮಾನಸಿಕ ದೈಹಿಕ ಆರೋಗ್ಯದ ದೃಷ್ಟಿಯಿಂದ ಯಾವುದೇ ಪತ್ನಿ ತೆಗೆದುಕೊಳ್ಳಲಾರದ ನಿರ್ಧಾರಕ್ಕೆ ಇವರು ಬರುತ್ತಾರೆ. ಬಹುಕಾಲದಿಂದ ಮನೆಗೆಲಸ ಮಾಡಿಕೊಂಡಿದ್ದ, ತನ್ನ ಪತಿಯಿಂದ ವಿರಕ್ತಿಯಾಗಿದ್ದ ಸುಮಾರು ೨೩ ವರ್ಷದ ಲಕ್ಷ್ಮಿಯೊಡನೆ ತನ್ನ ಗಂಡ ದೈಹಿಕಸುಖ ಹೊಂದಲಿ ಎಂದು ಬಯಸುತ್ತಾಳೆ.
ಇದೇ ವಿಚಾರವನ್ನು ಲಕ್ಷ್ಮಿಗೆ ತಿಳಿಸಿ ಆಕೆಯ ಒಪ್ಪಿಗೆಯನ್ನೂ ಪಡೆಯುತ್ತಾಳೆ. ನಂತರ ಶೋತ್ರಿಯವರಿಗೂ ತಿಳಿಸುತ್ತಾಳೆ. ವಿಷಯ ತಿಳಿದ ಕ್ಷಣದಿಂದ ಶೋತ್ರಿಯವರು ಮೋಹಪರವಶರಾಗುತ್ತಾರೆ. ಅನಾಯಾಸವಾಗಿ ಒದಗಿಬಂದ ಸುಖಾನುಭವವನ್ನು ಅನುಭವಿಸಬಾರದೇಕೆ ಎಂಬ ದ್ವಂದ್ವಕ್ಕೆ ಒಳಗಾಗುತ್ತಾರೆ. ತಮ್ಮ ಪಕ್ಕದ ಕೋಣೆಯಲ್ಲಿ ತನಗಾಗಿ ಕಾಯುತ್ತಿರುವ ಲಕ್ಷ್ಮಿಯ ಬಳಿಗೆ ಹೋಗಲು ತಮ್ಮ ಕೋಣೆಯ ಹೊಸಲಿನ ಬಳಿ ನಿಂತು ಯೋಚಿಸತೊಡಗುತ್ತಾರೆ. ಆವರಿಸಿದ ಮೋಹ ಕರಗುವ ವರೆಗೂ ಕಾದು ಚಿಂತಿಸುತ್ತಾರೆ. ಉತ್ತರಕ್ಕಾಗಿ ಕೇವಲ ಧರ್ಮಶಾಸ್ತ್ರಗಳನ್ನು ಮಾತ್ರ ಅವಲಂಬಿಸದೇ ವೈಯಕ್ತಿಕ ವಿವೇಚನೆಯಿಂದ ಸಾಧ್ಯ-ಸಾಧ್ಯತೆಗಳ ಬಗ್ಗೆ ಚಿಂತಿಸಿ ಮೋಹದಬಲೆಯಿಂದ ಪಾರಾಗಿ ಧರ್ಮದ ಹಾದಿಯನ್ನು ಹಿಡಿಯುತ್ತಾರೆ. “ಧರ್ಮೋ ರಕ್ಷತಿ ರಕ್ಷಿತಹ” ಎಂದು ಒಂದು ಮುಗುಳ್ನಗೆಯೊಂದಿಗೆ ಸಂಧಿಗ್ಧತೆಯಿಂದ ಹೊರಬಂದು ನೂತನ ಜೀವನ ನಡೆಸುತ್ತಾರೆ. ಅದರೆ ಪ್ರಾಣೇಶಾಚಾರ್ಯರು ಜಾಗೃತಸ್ಥಿತಿಗೆ ಬರದೇ ಚಂದ್ರಿಯಲ್ಲಿ ಲೀನವಾಗುತ್ತಾರೆ. ಜೀವವನ್ನು ಕಿತ್ತುತಿನ್ನುವ ದ್ವಂದ್ವಕ್ಕೆ ಒಳಗಾಗುತ್ತಾರೆ. ಸ್ವಯಂವಿಶ್ವಾಸವನ್ನು ಕಳೆದುಕೊಳ್ಳುತ್ತಾರೆ. ಒಂದೇ ಬಾರಿಗೆ ಎರಡು ದೋಣಿಗಳಲ್ಲಿ ಸಾಗಲಾರದೇ ಯಾವ ದೋಣಿಯ ಆಯ್ಕೆ ಮಾಡಿಕೊಳ್ಳಲಿ ಎಂದು ಪರಿತಪಿಸುತ್ತಾರೆ. ಇವರನ್ನು ಈ ಸ್ಥಿತಿಗೆ ದೂಡಿದ ಇಂತಹುದೇ ಸಂದರ್ಭದಲ್ಲಿ ಶೋತ್ರಿಯವರು ದೃಢಚಿತ್ತದಿಂದ ಧರ್ಮ-ಅಧರ್ಮವನ್ನು ತೂಗಿನೋಡಿ ನಿರ್ಧಾರ ಮಾಡುತ್ತಾರೆ, ಸೂಕ್ತ ವೇದಾಂತ ನೀತಿತತ್ವದ ಗ್ರಹಿಕೆ ಇದ್ದಲ್ಲಿ ಮಾತ್ರ ಇದು ಸಾಧ್ಯ ಎಂಬುದನ್ನು ಶೋತ್ರಿಯವರ ಪಾತ್ರ ಹೇಳುತ್ತದೆ.
ಎರಡೂ ಪಾತ್ರಗಳೂ ಒಂದೇ ಹಾದಿಯಲ್ಲಿ ಬಂದು ಕವಲು ದಾರಿಯ ಆರಂಭದಲ್ಲಿ ನಿಲ್ಲುತ್ತವೆ. ಎರಡೂ ಪಾತ್ರಗಳೂ ಅಲ್ಲಿನಿಂದ ಮುಂದೆ ಬಿನ್ನ ಹಾದಿಗಳನ್ನು ಹಿಡಿಯುತ್ತವೆ. ಈ ಹಾದಿಗಳಲ್ಲಿ ಧುರ್ಗಮ ಹಾದಿ ಯಾವುದು ಸುಗಮ ಹಾದಿ ಯಾವುದು ಎಂಬುದು ಆ ಕೃತಿಗಳೇ ವಿವರಿಸುತ್ತವೆ. ಮಾನವನ ಜೀವನವನ್ನು ಶೋಧಿಸುತ್ತಾ ಸಾಗುವ ಎರಡೂ ಕೃತಿಗಳು ದ್ವಂದ್ವಗಳೊಡನೆ, ಪ್ರಶ್ನೆಗಳೊಡನೆ, ಜೀವನದ ಆದ್ಯತೆಗಳೊಡನೆ ಘರ್ಷಣೆ ನಡೆಸುತ್ತಾ ಆಳಕ್ಕೆ ಇಳಿಯುತ್ತವೆ. ಇಷ್ಟರ ಮಟ್ಟಿಗೆ ಎರಡೂ ಕೃತಿಗಳೂ ಯಶಸ್ವಿಯಾಗಿ ಓದುಗರನ್ನು ಚಿಂತನೆಗೆ ಪ್ರೇರೇಪಿಸುತ್ತಾ ಸಾಗುತ್ತದೆ. ಆದರೆ ಈ ಪ್ರಯತ್ನದಲ್ಲಿ ವಂಶವೃಕ್ಷ ಮಾತ್ರ ಅಂತರ್ಜಲವನ್ನು ಮುಟ್ಟುತ್ತದೆ. ಸಂಸ್ಕಾರ ತಳವಿಲ್ಲದ ಪಾತಾಳದಲ್ಲಿ ಲೀನವಾಗುತ್ತದೆ. ಅಂತ್ಯದಲ್ಲಿ ಪ್ರಾಣೇಶಾಚಾರ್ಯರನ್ನು ತ್ರಿಶಂಕು ಸ್ಥಿತಿಯಲ್ಲಿ ಇರಿಸಲಾಗುತ್ತದೆ. ಪ್ರಾಣೇಶಾಚಾರ್ಯರ ಸ್ಥಿತಿ ಒಮ್ಮೆ ತನ್ನ ನಂಬಿಕೆ, ಸಿದ್ದಾಂತ, ವೈರಾಗ್ಯಗಳ ಬಂಧನದಿಂದ ಹೊರಬಂದು ಇದ್ದನ್ನು ಇದ್ದಂತೆ ಸ್ವೀಕರಿಸುವ ಸಾಮಾನ್ಯ ವ್ಯಕ್ತಿಯಾದಂತೆ ಅನ್ನಿಸಿದರೆ, ಮತ್ತೊಮ್ಮೆ ತನ್ನ ವ್ಯಕ್ತಿತ್ವವನ್ನೇ ಕಳೆದುಕೊಂಡು ಭೀತಿಗೆ ಒಳಗಾದಂತೆ ಅನ್ನಿಸುತ್ತಾರೆ. ಇವರ ಪಾತ್ರ ನಿಖರತೆಯಿಂದ-ದ್ವಂದ್ವದೆಡೆಗೆ, ನಿಶ್ಚತೆಯಿಂದ-ಅನಿಶ್ಚಿತತೆಯೆಡೆಗೆ, ದೃಢತೆಯಿಂದ-ಗೊಂದಲಗಳಿಗೆ, ಪೂರ್ಣದಿಂದ-ಅಪೂರ್ಣದೆಡೆಗೆ ಹರಿದುಹೋಗುತ್ತದೆ. ಒಟ್ಟಾರೆ ಹೇಳುವುದಾದಲ್ಲಿ ಎರಡು ಬಿನ್ನ ತತ್ವಗಳ ನೆಲೆಗಟ್ಟಿನಲ್ಲಿ ನಡೆಸಿದ ಚಿಂತನೆಯ ಫಲವಾಗಿ ಹೊರ ಹೊಮ್ಮಿದ ಭಾವಾಭಿವ್ಯಕ್ತಿ ಸಹಾ ಬಿನ್ನವಾಗಿಯೇ ಇರುತ್ತದೆ. ಒಂದು ಮುಖ ಸೃಜನಶೀಲತೆಯಾದರೆ ಮತ್ತೊಂದು ಮುಖ ಜ್ಞಾನವಾಗಿದೆ.
ಹಲಸಿನಹಣ್ಣಿನ ಒರಟು ಸಿಪ್ಪೆಯನ್ನು ಬೇಧಿಸಿ, ನಾರುಗಳನ್ನು ತೆಗೆದು, ಅಂಟು ಅಂಟದಂತೆ ಕೈಗಳಿಗೆ ಎಣ್ಣೆಯನ್ನು ತಿಕ್ಕಿ ನಾಜೂಕಾಗಿ ಜಾಗರೂಕತೆಯಿಂದ ಬಿಡಿಸಿದಾಗಲೇ ತೊಳೆಗಳ ಸಿಹಿಯನ್ನು ಸವಿಯಲು ಸಾಧ್ಯ. ಹಲಸೆಂದರೆ ಮುಳ್ಳು ಮುಳ್ಳು ಎನ್ನಲೂ ಬಹುದು, ಹಲಸೆಂದರೆ ಅಂಟು ಅಂಟು ಎನ್ನಲೂಬಹುದು, ಹಲಸೆಂದರೆ ನಾರು ನಾರು ಎಂದೂ ಹೇಳಬಹುದು, ಆದರೆ ಇವೆಲ್ಲವನ್ನು ಮೀರಿ ಹೋದಾಗಲೇ ಹಲಸು ಹಣ್ಣಿನ ಸಿಹಿಯಾದ ರುಚಿಯನ್ನು ಅನುಭವಿಸಲು ಸಾಧ್ಯ. ಇಷ್ಟನ್ನೂ ಮೀರಿಸುತ್ತಾ ಆಳಕ್ಕಿಳಿಯುವ ಪ್ರಯತ್ನವನ್ನು ವಂಶವೃಕ್ಷ ಕಾದಂಬರಿ ಮಾಡುತ್ತದೆ. ಮನುಷ್ಯನ ಜೀವನದ, ಸಂಬಂಧಗಳ ನೆಲೆಯನ್ನು ಮುಟ್ಟುತ್ತಾ, ಮೂಲ ಬೇರುಗಳವರೆಗೆ ತಲುಪುತ್ತಾ ಆಗ ತಾನೇ ಮೂಡಿದ ಚಿಗುರನ್ನು ಮುತ್ತಿಕ್ಕುತ್ತದೆ. ಅಜ್ಞಾನದಿಂದ ದುಡುಕಿ ಅಡ್ಡದಾರಿಯನ್ನು ಹಿಡಿದು ದಿಕ್ಕುಗಾಣದೇ ನಿಲ್ಲದೇ ಅಪೂರ್ಣದಿಂದ ಪೂರ್ಣತೆಯವರೆಗಿನ ಮಾನವ ಕುಲದ ಮೂಲ ಪಯಣದ ಹಾದಿಯನ್ನೇ ಅನುಸರಿಸುತ್ತದೆ.
ಸಾಹಿತಿ ದೇವನೂರು ಮಹದೇವ ರವರ ’ಒಡಲಾಳ’ ಕಥೆಯ ಮುನ್ನುಡಿಯಲ್ಲಿ ಡಾ,ಯು.ಆರ್.ಅನಂತಮೂರ್ತಿಯವರು ಈ ರೀತಿ ಬರೆಯುತ್ತಾರೆ; “ವೈಭವೀಕರಿಸುವ ಬರವಣಿಗೆಯ ಕ್ರಮ ಅಹಿತವಾದುದನ್ನು ಮರೆಸುತ್ತದೆ, ಹಾಗಾಗುವ ಅಪಾಯದಿಂದ ’ಒಡಲಾಳ’ ತಪ್ಪಿಸಿಕೊಂಡಿದೆ” ’ಒಡಲಾಳ’ ದ ಕಥೆಯ ಮಟ್ಟಿಗೆ ಈ ಅನಿಸಿಕೆ ಸರಿಯಾಗಿದೆ. ಹೀಗಾಗುವ ಅಪಾಯದಿಂದ ’ಒಡಲಾಳ’ ತಪ್ಪಿಸಿಕೊಂಡಿದೆ, ಆದರೆ ಸಂಸ್ಕಾರ ಈ ಹೇಳಿಕೆಯ ಮೊದಲ ಸಾಲನ್ನು ನಿಜವಾಗಿಸಿದೆ “ವೈಭವೀಕರಿಸುವ ಬರವಣಿಗೆಯ ಕ್ರಮ ಅಹಿತವಾದುದನ್ನು ಮರೆಸುತ್ತದೆ.”
ಯಾವ ಪೂರ್ವಾಗ್ರಹಗಳಿಲ್ಲದೇ ಎರಡು ಮಹಾನ್ ವ್ಯಕ್ತಿಗಳ ಮಹಾನ್ ಕಾದಂಬರಿಗಳನ್ನು ವಿಮರ್ಶಿಸಿದ್ದೀರಿ. ತುಂಬಾ ಅಭಿನಂದನೆಗಳು. ಈ ಕಾದಂಬರಿಗಳನ್ನು ನಾನು ಇನ್ನೊಮ್ಮೆ ನಿಮ್ಮ ವಿಮರ್ಶೆ ಗಮನದಲ್ಲಿರಿಸಿಕೊಂಡು ಓದಬೇಕೆನ್ನಿಸಿದೆ. ಖಂಡಿತ ಓದುತ್ತೇನೆ. ಹೊಸ ಹೊಳಹುಗಳು ಮೂಡಬಹುದು.
ಲೇಖನ ತುಂಬ ಚೆನ್ನಾಗಿದೆ. ಎರಡು ವಿಭಿನ್ನ ಕಾದಂಬರಿಗಳು ಮತ್ತು ವಿರುದ್ಧ ಸಿದ್ದಾಂತಗಳಿಗೆ ಬದ್ದರಾದ ಇಬ್ಬರು ಲೇಖಕರು. ಈ ಎರಡೂ ಕಾದಂಬರಿಗಳಲ್ಲಿನ ಪಾತ್ರಗಳು ಒಂದೇ ಎಂದೆನಿಸಿದರೂ ಒಂದು ಹಂತದಲ್ಲಿ ಕಾಮಕ್ಕೆ ಬಲಿಯಾಗುವ ಪ್ರಾಣೇಶಾಚಾರ್ಯರು ಚಂದ್ರಿಯೊಂದಿಗೆ ಲೈಂಗಿಕ ಸುಖ ಅನುಭವಿಸಿಯೂ ಆತ್ಮವಿಮರ್ಶೆಗೆ ಇಳಿಯುತ್ತಾರೆ. ತಾನೂ ನಾರಾಣಪ್ಪನಂತಾದೆ ಎನ್ನುವ ಭಾವನೆ ಅವರಲ್ಲಿ ಮೂಡಿ ಊರು ಬಿಟ್ಟು ತೆರಳುತ್ತಾರೆ. ದಾರಿಯಲ್ಲಿ ಎದುರಾಗುವ ಸಾಮಾನ್ಯ ಹುಡುಗನೊಬ್ಬ ಅವರಿಗೆ ಬದುಕಿನ ಪಾಠ ಹೇಳುತ್ತಾನೆ. ನಿಜಕ್ಕೂ ಕಾದಂಬರಿಯ ಬಹುಮುಖ್ಯ ತಿರುವು ಇದು. ಆದರೆ ವಂಶವೃಕ್ಷದ ಶ್ರೋತ್ರಿಗಳ ಪಾತ್ರ ಇಹದ ಎಲ್ಲ ಬಂಧನಗಳನ್ನು ಗೆದ್ದದ್ದು. ಮನೆಯ ಕೆಲಸದಾಳು ಲಕ್ಷ್ಮಿಯೊಂದಿಗೆ ಲೈಂಗಿಕ ಸುಖ ಅನುಭವಿಸುವ ಅವಕಾಶವನ್ನು ಕೈಹಿಡಿದ ಪತ್ನಿಯೇ ಒದಗಿಸಿದರೂ ಧರ್ಮಸೂಕ್ಷ್ಮಗಳ ವಿಚಾರ ಅವರನ್ನು ನಿಯಂತ್ರಿಸುತ್ತದೆ. ಲೈಂಗಿಕಕ್ರಿಯೆ ಶ್ರೋತ್ರಿಗಳ ವಿಚಾರದಲ್ಲಿ ಅದು ವಂಶವೃಕ್ಷವನ್ನು ವಿಸ್ತರಿಸುವ ಕ್ರಿಯೆ. ಒಂದು ಹಂತದಲ್ಲಿ ಸನ್ಯಾಸತ್ವ ಸ್ವೀಕರಿಸಬೇಕೆನ್ನುವ ಘಳಿಗೆ ಮಗನ ಸಾವಿನಿಂದ ಮತ್ತೆ ಮನೆಯ ಜವಾಬ್ದಾರಿ ಹೊರಬೇಕಾದ ಸಂದರ್ಭ ಎದುರಾಗಿ ಸಂಸಾರ ಜೀವನಕ್ಕೆ ಮತ್ತೆ ಮರಳಿ ಬರಬೇಕಾಗುತ್ತದೆ. ಕೊನೆಗೆ ಮೊಮ್ಮಗನ ಮದುವೆ ಮಾಡಿ ಶ್ರೋತ್ರಿಗಳು ಮನೆಬಿಟ್ಟು ಹೋಗುವದರೊಂದಿಗೆ ಕಾದಂಬರಿ ಅಂತ್ಯಗೊಳ್ಳುತ್ತದೆ. ಆಯಾ ಸಂದರ್ಭ ಹಾಗೂ ಸನ್ನಿವೇಶದ ದೃಷ್ಟಿಯಿಂದ ಎರಡೂ ಪಾತ್ರಗಳು ಮಹತ್ವ ಪಡೆಯುತ್ತವೆ. ಅನಂತಮೂರ್ತಿ ಅವರು ಬ್ರಾಹ್ಮಣ ನಿಂದನೆ ಮಾಡಿದ್ದಾರೆ ಎಂದೆನಿಸಿದರೂ ಒಂದು ಸಮುದಾಯದ ಸಂಸ್ಕಾರ ಹಾಗೂ ಸಂಪ್ರದಾಯದ ಬದುಕನ್ನು ಅವರು ಅರ್ಥಪೂರ್ಣವಾಗಿ ಕಟ್ಟಿಕೊಟ್ಟಿರುವರು. ಹಾಗೆಂದು ಭೈರಪ್ಪನವರ ಪಾತ್ರಸೃಷ್ಟಿಯನ್ನು ಎಡಪಂಥಿಯರು ತೆಗಳುವ ಹಾಗೂ ಅನುಮಾನದಿಂದ ನೋಡುವ ಅಗತ್ಯವಿಲ್ಲ. ಬ್ರಾಹ್ಮಣ ಸಮುದಾಯದಲ್ಲಿ ಶ್ರೋತ್ರಿಗಳು, ಪ್ರಾಣೆಶಾಚಾರ್ಯರು ಇರುವಂತೆ ನಾರಾಣಪ್ಪನಂಥವರೂ ಇರುವರು ಎನ್ನುವುದು ಸತ್ಯದ ಸಂಗತಿ. ಒಳ್ಳೆಯದು ಮತ್ತು ಕೆಟ್ಟದ್ದು ಅದು ಎಲ್ಲ ಜಾತಿ ಧರ್ಮಗಳಲ್ಲಿ ಇರುವ ಸ್ಥಾಪಿತ ಸತ್ಯ ಎನ್ನುವ ಭಾವನೆ ನಮ್ಮಲ್ಲಿ ಇದ್ದಾಗ ಮಾತ್ರ ನಾವು ಅನುಮಾನ ಹಾಗೂ ಸಂದೇಹಗಳ ಸಂಕುಚಿತ ಭಾವನೆಯಿಂದ ಹೊರಬರಲು ಸಾಧ್ಯ.
ಅನಂತಮೂರ್ತಿಯವರು ಸಂಸ್ಕಾರದಲ್ಲಿ ಶೂದ್ರರ ಟೀಕೆಯನ್ನೂ ಮಾಡಿದ್ದಾರೆ. ಚಂದ್ರಿ ತನ್ನ ಗಂಡನಾದ ನಾರಣಪ್ಪನ ಶವ ಸಂಸ್ಕಾರವಾಗುವ ಮೊದಲೇ ಅತ್ಯಂತ ಗೌರವ ಅರ್ಪಿಸುತ್ತಾ ಪ್ರಾಣೇಶಾಚಾರ್ಯರ ಜೊತೆ ಅತ್ಯಂತ ಸಲೀಸಾಗಿ ಮಲಗಿಬಿಡುತ್ತಾಳೆ