ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 31, 2015

58

ಶೂದ್ರ ಶಂಬುಕ ಮತ್ತು ರಾಮಾಯಣ – ಒಂದು ಚರ್ಚೆ

‍ನಿಲುಮೆ ಮೂಲಕ

– ರಾಘವೇಂದ್ರ ಸುಬ್ರಹ್ಮಣ್ಯ

ಶೂದ್ರ ಶಂಬುಕಹಲವಾರು ಜನ ಶಂಬುಕನ ಉದಾಹರಣೆ ಕೊಟ್ಟು ರಾಮನ ಮೇಲೆ ಅಧರ್ಮದ ಪಟ್ಟ ಹೊರಿಸ್ತಾರೋದು ನೋಡಿ, ನನ್ನ ದೃಷ್ಟಿಕೋನವನ್ನೂ ಹಂಚಿಕೊಳ್ಳೋಣವೆಂದು ನಿರ್ಧರಿಸಿದ್ದರಿಂದ,ಈ ಲೇಖನ.ಇದರ ಬಗ್ಗೆ ಒಂದು ಚರ್ಚೆ ಆದ್ರೆ ಚೆನ್ನಾಗಿರುತ್ತೆ ಅನ್ನಿಸ್ತು. ನಾನು ರಾಮಾಯಣನ್ನು ಧರ್ಮಗ್ರಂಥವಾಗಿ ಅಥವಾ ಪುರಾಣವನ್ನಾಗಿ ನೋಡುವುದಿಲ್ಲವಾದ್ದರಿಂದ, ರಾಮನೆಂಬ ‘ಮರ್ಯಾದಾ ಪುರುಷೋತ್ತಮ’ ಮಾಡಿದ್ದು ಸರಿಯೋ ತಪ್ಪೋ ಎಂಬ ವಿಮರ್ಷೆಗೆ ಕೈ ಹಾಕಲಾರೆ. ರಾಮನೆಂಬ ಪಾತ್ರ ಮಾಡಿದ್ದು ಸರಿಯೋ ಎಂದು ನೋಡುವ ಪ್ರಯತ್ನವಷ್ಟೇ.

ನನಗೆ ಗೊತ್ತಿದ್ದಂತೆ ಕಥೆ ಹೀಗಿದೆ (ತಪ್ಪಿದ್ದಲ್ಲಿ ದಯವಿಟ್ಟು ತಿದ್ದಿ):

“ರಾಮನ ಆಸ್ಥಾನಕ್ಕೆ ಒಬ್ಬ ಬ್ರಾಹ್ಮಣ ತನ್ನ ಮಗನ ಸಾವಿಗಾಗಿ ನ್ಯಾಯ ಕೇಳಲು ಬರುತ್ತಾನೆ. ಎಲೈ ರಾಜನೇ, ನೀನೇನೋ ಅನ್ಯಾಯ ಮಾಡಿರಬೇಕು, ಆದ್ದರಿಂದ ಯಾವ ತಪ್ಪನ್ನೂ ಮಾಡನ ನನ್ನ ಮಗನ ಸಾವಾಗಿದೆ ಎಂದು ಆರೋಪಿಸುತ್ತಾನೆ. ನಾರದಮುನಿ ಇದರಬಗ್ಗೆ ಕೊಟ್ಟ ಹಿನ್ನೆಲೆ ಹಾಗೂ ಶಂಭುಕನ ತಪಸ್ಸಿನ ಬಗ್ಗೆ ತಿಳಿದು ರಾಮ ಶಂಬುಕನಿದ್ದಲ್ಲಿಗೆ ಪ್ರಯಾಣ ಬೆಳೆಸುತ್ತಾನೆ. ಶಂಬುಕನನ್ನು ಭೇಟಿ ಮಾಡಿ, ಅವನ ತಪಸ್ಸಿನ ಕಾರಣ ಕೇಳಲಾಗಿ, ಶಂಬುಕ ‘ರಾಮ, ನಾನು ಶೂದ್ರ ಕುಟುಂಬದಲ್ಲಿ ಜನಿಸಿದವನು. ನನ್ನ ಕಠಿಣ ಪರಿಶ್ರಮದಿಂದ ದೇವತೆಗಳನ್ನು ಮೆಚ್ಚಿಸಿ, ದೇವಲೋಕವನ್ನು ನನ್ನದಾಗಿ ಮಾಡಿಕೊಂಡು, ಈ ದೇಹದೊಂದಿಗೇ ಸ್ವರ್ಗವನ್ನು ಪ್ರವೇಶಿಸುವ ನಿರ್ಧಾರದಿಂದ ಈ ತಪಸ್ಸನ್ನು ಮಾಡುತ್ತಿದ್ದೇನೆ” ಎನ್ನುತ್ತಾನೆ. ಅದಕ್ಕೆ ರಾಮ ‘ಅಯ್ಯಾ ನಿನ್ನ ತಪಸ್ಸು, ಪರಿಶ್ರಮ ಒಳ್ಳೆಯದೇ ಆದರೂ, ಅದರ ಹಿಂದಿನ ಕಾರಣ ಅಸಾತ್ವಿಕವಾದದ್ದು’ ಎಂಬ ಕಾರಣದಿಂದ ಅವನ ಹರಣ ಮಾಡುತ್ತಾನೆ.
ಇಲ್ಲಿ ಮೊದಲನೆಯದಾಗಿ, ಶಂಭುಕ ಶೂದ್ರನೆಂಬ ಅಂಶ ಗಳಿಕೆಗೇ ಬರುವುದಿಲ್ಲ. ಶಂಬುಕನಿಗೆ ದೊರಕಿದ ಈ ಶೂದ್ರತ್ವವನ್ನು ವಾಲ್ಮೀಕಿಯ ಮೇಲೆ ಆರೋಪಿಸಲೂ ಬರುವುದಿಲ್ಲ. ಯಾಕೆಂದರೆ ಉತ್ತರಕಾಂಡ/ಉತ್ತರ ರಾಮಾಯಣ ಬರೆದವ ವಾಲ್ಮೀಕಿ ಅಲ್ಲವೇ ಅಲ್ಲ. ವಾಲ್ಮೀಕಿಯ ರಾಮಾಯಣ, ರಾಮನ ಪಟ್ಟಾಭಿಷೇಕದೊಂದಿಗೇ ಮುಗಿಯುತ್ತದೆ ಎಂಬ ವಾದಗಳೇ ಹೆಚ್ಚಿನದಾಗಿ ಚಾಲ್ತಿಯಲ್ಲಿದೆ. ಇಡೀ ರಾಮಾಯಣಕ್ಕಿಂತ ಹೆಚ್ಚಿನ ಸಾಮಾಜಿಕ ವಿವಾದಗಳು ಉತ್ತರಕಾಂಡದಲ್ಲಿ ಕಂಡುಬರುವುದು ನೋಡಿದರೆ, ಉತ್ತರಕಾಂಡದ ನಿಜ ಉದ್ದೇಶವೂ, ಅದರ ಪಲಿತಾಂಶಗಳ ಮೇಲೆ ಅನುಮಾನ ಹುಟ್ಟದೇ ಇರುವವರು ಬಹಳವೇ ಕಡಿಮೆ.

ಇಷ್ಟರ ಮೇಲೂ, ರಾಮ ಅವನು ಶೂದ್ರನೆಂಬ ಕಾರಣಕ್ಕಾಗಿ ಕೊಲ್ಲಲಿಲ್ಲ. ಅವನು ಕೊಂದದ್ದು, ಶಂಬುಕನ ತಪಸ್ಸು ಒಳ್ಳೆಯದೇ ಆದರೂ, ಅವನ ಪರಿಶ್ರಮ ಒಳ್ಳೆಯದೇ ಆದರೂ, ಅದರ ಹಿಂದಿನ ತಾತ್ವಿಕ ಕಾರಣ ಸರಿಯಲ್ಲವೆಂಬ ಕಾರಣಕಾಗಿಯಷ್ಟೇ. ದೇವಲೋಕವನ್ನು ತನ್ನದಾಗಿಸಕೊಳ್ಳಬೇಕೆಂಬ ಸ್ವಾರ್ಥ ಯೋಚನೆ ಬಹುಜನರ ಹಿತದಲ್ಲಿರದ್ದರಿಂದ ರಾಮ ಶಂಬುಕನನ್ನು ಕೊಲ್ಲುವ ನಿರ್ಧಾರಕ್ಕಿಳಿಯುತ್ತಾನೆ. ಎಲ್ಲಾ ತಪಸ್ಸುಗಳೂ ಧಾರ್ಮಿಕವಾಗಬೇಕಾಗಿಲ್ಲ. ರಾವಣ ಕೂಡಾ ಒಬ್ಬ ಮಹಾತಪಸ್ವಿಯಾಗಿದ್ದರೂ, ಬ್ರಾಹ್ಮಣನಾಗಿದ್ದರೂ ಸಹ, ಅವನ ಅಸಾತ್ವಿಕ ಬೇಡಿಕೆಗಳಿಂದಾಗಿಯೇ ಅವನ ಪಾಪದ ಭಾರ ಹೆಚ್ಚಾದದ್ದು ಎಂಬ ಪೂರ್ವಕಥೆಯನ್ನು ಇಲ್ಲಿ ನೆನಪಿಡಬೇಕು. ಇಷ್ಟೇ ಅಲ್ಲದೆ ಶಬರಿಯೂ ಸಹ ಶೂದ್ರಳೇ ಆಗಿದ್ದರೂ ರಾಮ ಯಾವುದೇ ಯೋಚನೆಯಿಲ್ಲದೆ ಅವಳು ಕೊಡುವ ಎಂಜಲು ಹಣ್ಣನ್ನು ಸಂತೋಷದಿಂದಲೇ ಸ್ವೀಕರಿಸುವುದಿಲ್ಲವೇನು? ಮಧ್ಯಪ್ರದೇಶದ ಜಾನಪದ ಕಥೆಯೊಂದರ ನೀತಿಯ ಪ್ರಕಾರ, ಶಂಬುಕ ರಾಮನನ್ನು ಭೇಟಿಮಾಡಲು ತನ್ನ ಸಮಯಕ್ಕಾಗಿ ಕಾಯದೇ, ರಾಮನ ಗಮನ ಸೆಳೆಯುವುದಕ್ಕಾಗಿ ಯಾಗ ಯಜ್ಞದ ಹೆಸರಿನಲ್ಲಿ ಅನಗತ್ಯ ನಿರ್ಧಾರಗಳನ್ನು ಕೈಗೊಂಡು ರಾಮನನ್ನು ತಾನಾಗಿಯೇ ಆಹ್ವಾನಿಸುತ್ತಾನೆ. ಇದರಿಂದ ರಾಮ ಅವನನ್ನು ಕೊಲ್ಲುವ ಮೂಲಕ ಮೋಕ್ಷ ಕರುಣಿಸುತ್ತಾನಂತೆ! ಈ ಕಥೆಗೆ ಏನನ್ನೋಣ!?

ಅಷ್ಟೇ ಅಲ್ಲದೆ, ಶಂಬುಕನ ‘ದೇಹದೊಂದಿಗೆ ಸ್ವರ್ಗ ಪ್ರವೇಶಿಸಬೇಕೆಂಬ’ ಬೇಡಿಕೆ ಧಾರ್ಮಿಕವಾಗಿ ಅಸಾಧುವಾದದ್ದು. ಅನ್ನಮಯಕೋಶದ ಅಸ್ತಿತ್ವದ ಕಾರಣಗಳು, ಅದರ ಹಕ್ಕುಗಳು ಮತ್ತು ಕರ್ತವ್ಯಗಳು, ಈ ಲೋಕಕ್ಕಷ್ಟೇ ಸೀಮಿತವಾದದ್ದು. ದೇವಲೋಕಕ್ಕೆ ಅನ್ನಮಯ ಕೋಶ ಪ್ರವೇಶಿಸಲು ಸಾಧ್ಯವಿಲ್ಲವೆಂಬ ತಳಹದಿಯ ಮೇಲೆ ರಾಮ ಶಂಬುಕನ ತಪಸ್ಸನ್ನು ಹಾಗೂ ಜೀವನವನ್ನು ಕೊನೆಗೊಳಿಸುತ್ತಾನೆ. ಆದರೆ, ನೆನಪಿರಲಿ, ಈ ಕಥೆಯ ಅಂತ್ಯದಲ್ಲಿ ಶಂಬುಕನ ಸಾವು ಕೊಲೆಯಾಗಿ ಚಿತ್ರಿಸಲ್ಪಟ್ಟಿಲ್ಲ, ರಾಮ ಶಂಬುಕನಿಗೆ ಮೋಕ್ಷ ಕೊಡಿಸುವ ಮೂಲಕ ಅದೊಂದು ಉದ್ದಾರದ ಕಥೆಯಾಗಿ ಚಿತ್ರಿಸಲ್ಪಟ್ಟಿದೆ. ನಾವು ಸ್ವೀಕರಿಸುವ ತಳಹದಿಯ ಮೇಲೆ, ಕಥೆಯ ನೀತಿ ಅಡಗಿದೆಯಷ್ಟೆ.

ರಾಮ ಒಬ್ಬ ರಾಜನಾಗಿ ನ್ಯಾಯಯುತವಾಗಿಯೂ ಧಾರ್ಮಿಕವಾಗಿಯೂ ನಡೆದುಕೊಳ್ಳಬೇಕಾದ ಧರ್ಮಸೂಕ್ಷ್ಮದ ಪರಿಸ್ಥಿತಿಲ್ಲಿದ್ದಾನೆ. ಇಂತಹ ಸಮಯದಲ್ಲಿ ಶಂಬುಕನ ಸಾವು ಒಬ್ಬ ಶೂದ್ರನ ಕೊಲೆಯಾಗಿಯೂ ಪರಿಗಣಿಸಲ್ಪಡಬಹುದು, ಅಥವಾ ಶಂಬುಕನ ಆಸೆಯ ಪ್ರಕಾರ (ಸಂಪೂರ್ಣವಾಗಿಯಲ್ಲದಿದ್ದರೂ) ಅವನಿಗೆ ಮೋಕ್ಷ ನೀಡುವ ಕಥೆಯಾಗಿಯಾದರೂ ಪರಿಗಳಿಸಲ್ಪಡಬಹುದು. ನಮ್ಮ ವಾದದ ತಳಹದಿಯ ಮೇಲೆ, ಇದರ ಪಲಿತಾಂಶ ನಿಲ್ಲುತ್ತದೆ. ವಾಲ್ಮೀಕಿ ಸ್ವತಃ ಬೇಡನಾಗಿದ್ದು ಒಬ್ಬ ಶೂದ್ರ ಪಾತ್ರಕ್ಕೆ ಮೋಸಮಾಡುವನೇ!? ವರ್ಣಾಶ್ರಮಕ್ಕೆ ರಾಮ ಅಷ್ಟೆಲ್ಲಾ ಬೆಲೆಕೊಡುವವನಾಗಿದ್ದರೆ, ಶಂಭುಕನೊಬ್ಬ ಶೂದ್ರ ಎಂಬ ಕೇವಲ ಕಾರಣಕ್ಕಾಗಿ ಅವನ ಮೇಲೆ ದ್ವೇಷ ಸಾಧಿಸುವವನಾಗೊದ್ದರೆ, ಅದೇ ವರ್ಣಾಶ್ರಮದ ಪ್ರಕಾರ ಉಚ್ಚಸ್ಥಾನಿಯಾದ ಬ್ರಾಹ್ಮಣ ವರ್ಣಕ್ಕೆ ಸೇರಿದ ರಾವಣನನ್ನು ರಾಮ ಕೊಲ್ಲುತ್ತಿದ್ದನೇ? ರಾವಣ ಯಾವತ್ತು ತನ್ನ ಅಸುರ ಸೇನೆಯನ್ನು ಕಟ್ಟಲಾರಂಭಿಸಿದನೋ ಅಂದೇ ಅವನಲ್ಲಿ ತಾಮಸ ಗುಣಗಳ ಶೇಖರಣೆ ಆರಂಭವಾಗಿ, ಅವೇ ಅವನ ಅವಸಾನಕ್ಕೆ ಕಾರಣವಾಗುತ್ತವೆಯೇ ಹೊರತು, ರಾಮ ರಾವಣನನ್ನು ಹೊಕ್ಕುಳಕ್ಕೆ ಬಾಣವಿಟ್ಟು ಕೊಂದ ಎಂಬ ಕಾರಣದಿಂದಲ್ಲ. ಅದು ಬರೀ ಸಾಂಕೇತಿಕ ಎಂದು ನನ್ನ ಅನಿಸಿಕೆ.

ಇಷ್ಟಾಗಿ ರಾಮಾಯಣವನ್ನು ವಾಲ್ಮೀಕಿಯೊಬ್ಬನೇ ಬರೆದಿಲ್ಲ. ನೂರಾರು ದೇಶಗಳಲ್ಲಿ, ಸಾವಿರಾರು ಹಳ್ಳಿಗಳಲ್ಲಿ ಲಕ್ಷಾಂತರ ಜನ ಬರೆದಿದ್ದಾರೆ. ಈ ಕಾರಣಕ್ಕಾಗಿಯೇ ರಾಮಾಯಣ ಬೇರೆ ಬೇರೆ ಪ್ರದೇಶಗಳಲ್ಲಿ, ಬೇರೆ ಬೇರೆ ಆವೃತ್ತಿಯಲ್ಲಿ ಚಾಲ್ತಿಯಲ್ಲಿದೆ. ಕಾಂಬೋಡಿಯಾದ ರಾಮಾಯಣದಲ್ಲಿ ಸಮುದ್ರ ಸೇತು ಕಟ್ಟುವ ಸಮಯದಲ್ಲಿ ಹನುಮಂತ ಜಲಕನ್ಯೆಯರ ರಾಣಿಯೊಂದಿಗೆ ಅನುರಾಗಿಯಾಗುತ್ತಾನೆ. ಮಲೇಶಿಯಾದ ರಾಮಾಯಣ ರಾಮ ಧರ್ಮಿಯಾಗಿದ್ದರೂ ಸಹ ಅವನನ್ನು ಅಶಕ್ತನೆಂದು ಪರಿಗಣಿಸಿ, ಅವನಿಗಿಂತಾ ಲಕ್ಷ್ಮಣನೇ ಹೆಚ್ಚಿನ ಆದರ್ಶವೆಂದು ಪರಿಗಣಿಸುತ್ತದೆ. ಬರ್ಮಾದ ರಾಮಾಯಣದಲ್ಲಿ ರಾಮನಿಗೆ ಯಮನೆಂದೂ ಕರೆಯುತ್ತಾರೆ ಹಾಗೂ ಪರಶುರಾಮ ಕೂಡಾ ರಾಮಾಯಣದ ಒಂದು ಭಾಗವಾಗುತ್ತಾನೆ. ಈ ಅಂಶ ನಮಗೇನನ್ನು ಸೂಚಿಸುತ್ತದೆ!? ರಾಮಾಯಣ ಎಂಬುದು ‘ಬದುಕಿನ ಕೆಲ ಮೂಲ ಸೂತ್ರಗಳನ್ನು ತಿಳಿಹೇಳುವ ಎಳೆಯಿರುವ ಸಂಕಲನ. ಅವರವರ ತಿಳುವಳಿಕೆಗೆ ಅನುಗುಣವಾಗಿ ರಾಮಾಯಣದ ಬೇರೆ ಬೇರೆ ಆವೃತ್ತಿಗಳು ಚಾಲ್ತಿಗೆ ಬಂದವು’ ಎಂದೆನಿಸುವುದಿಲ್ಲವೇ?

ಬರಹಗಾರನನ್ನೂ, ಅವನ ಜಾತಿಯನ್ನೂ ಈ ಕಥೆಯ ಒಳಗೆ ಎಳೆದು ತರುವುದು ಸ್ವಲ್ಪವೂ ಸೂಕ್ತವಲ್ಲ. ಭವಭೂತಿ ತನ್ನ ‘ಉತ್ತರ ರಾಮ ಚರಿತ’ದಲ್ಲಿ ರಾಮನ ಈ ನ್ಯಾಯದ ಬಗ್ಗೆ ಅಸಹನೆ ವ್ಯಕ್ತಪಡಿಸುತ್ತಾನೆ. ಹಾಗೆಂದ ಮಾತ್ರಕ್ಕೆ ಸ್ವತಃ ಬ್ರಾಹ್ಮಣನಾದ ಭವಭೂತಿಯನ್ನು ಪ್ರಗತಿಪರ ಎನ್ನಬೇಕೇ? ಜನ್ಮತಃ ದನಗಾಹಿಯಾದ ಕಾಳಿದಾಸ ತನ್ನ ‘ರಘುವಂಸ’ದಲ್ಲಿ ಯಾವುದೇ ಹಿಂಜರಿಕೆಯಿಲ್ಲದೆ ಈ ಕಥೆಯನ್ನು ಪ್ರಸ್ತುತಪಡಿಸುತ್ತಾನೆ. ಹಾಗೆಂದ ಮಾತ್ರಕ್ಕೆ ಕಾಳಿದಾಸ ಬ್ರಾಹ್ಮಣವಾದಿಯೇ? ಒಕ್ಕಲಿಗನಾಗಿ ಹುಟ್ಟಿದ ಕುವೆಂಪು, ಅಹಿಂಸಾವಾದಿಯಾದ ಕುವೆಂಪು, ತಮ್ಮ ಅಸಾಧಾರಣ ನಾಟಕಕೃತಿಯಾದ ‘ಶೂದ್ರ ತಪಸ್ವಿ’ಯಲ್ಲಿ, ಈ ಇಡೀ ಕಥೆಗೆ ಬೇರೆಯದೇ ರೂಪಕೊಟ್ಟು ನಮ್ಮನ್ನು ಬೆರಗಾಗಿಸುತ್ತಾರೆ. ಅವರನ್ನೆಲ್ಲಿಗೆ ವರ್ಗೀಕರಿಸಿ ಕೂರಿಸೋಣ!? ಇಷ್ಟೆಲ್ಲಾ ಭಾಷಣ ಬಿಗಿಯುವ ಹುಸಿವರ್ಣಾಶ್ರಮದ ವಾದಿಗಳಿಗೆ ಸ್ವತಃ ಅಂಬೇಡ್ಕರ್ ಸಹ ತಮ್ಮ ‘ಅನ್ಹಿಲೇಶನ್ ಆಫ್ ಕಾಸ್ಟ್’ ನಲ್ಲಿ ‘ರಾಮ-ಶಂಬುಕನ ಕಥೆಗೆ ವರ್ಣಾಶ್ರಮದ ಇಂಬು ಕೊಡುವವರು ಮೂರ್ಖರು. ಈ ಕಥೆ ವರ್ಣಾಶ್ರಮವೆಂಬುದು ಅದೆಂತಹ ಸುಳ್ಳು ಎಂದು ತೋರಿಸುತ್ತದೆಯೇ ಹೊರತು ರಾಮನ ಅಧರ್ಮವನ್ನಲ್ಲ’ ಎಂದಿದ್ದು ಕಾಣುವುದೇ ಇಲ್ಲ.

ರಾಮನ ಸುತ್ತ ಹೆಣೆಯಲಾಗಿರುವ ಈ ರಾಮಾಯಣ, ‘ಶಿಲಾಯುಗದಿಂದ ನಾಗರೀಕತೆಯೆಡೆಗೆ ಮನುಷ್ಯನ ಮೊದಲ ಮೆಟ್ಟಿಲು’ ಎಂದು ಸಾಂಕೇತಿಕವಾಗಿ ಪರಿಗಣಿಸುವ ನನಗೆ, ಅವನ ಕಥೆಯಲ್ಲಿ ಮನುಷ್ಯಜಾತಿ ನಡೆದುಬಂದ ದಾರಿ, ಮೌಲ್ಯಗಳ ಎತ್ತಿಹಿಡಿಯುವಿಕೆ, ಹಾಗೂ ಮಂದುವರೆಯಬೇಕಾದ ದಾರಿಯ ಬಗ್ಗೆ ಜಿಜ್ಞಾಸೆಗಳು ಕಂಡುಬರುತ್ತದೆಯೇ ಹೊರತು, ವರ್ಣಾಶ್ರಮವಲ್ಲ. ಉಳಿದವರಿಗೆ ಕಂಡುಬಂದರೆ ತಪ್ಪೆಂದು ಹೇಳುವ ಅಧಿಕಾರವೂ ನನಗಿಲ್ಲ. ನಮ್ಮ ಶಕ್ತಿಯಿದ್ದಷ್ಟೂ ನಾವು ನೋಡುತ್ತೇವೆ, ಅದಕ್ಕಿಂತ ಹೆಚ್ಚು ನೋಡಬೇಕಾದಲ್ಲಿ ನಮಗೆ ಜ್ಞಾನಾರ್ಜನೆಯೆಂಬ ಕನ್ನಡಕದ ಅವಶ್ಯಕತೆಬೀಳುತ್ತದೆ ಅಲ್ಲವೇ? ಕನ್ನಡಕ ಸಿಗದಿದ್ದಲ್ಲಿ, ಇನ್ನೊಬ್ಬರ (ಜ್ಞಾನಿಗಳ) ದೃಷ್ಟಿಕೋನದ ಮೂಲಕ ನೋಡಬೇಕಾಗುತ್ತದೆಯಷ್ಟೇ! ಇಡೀ ರಾಮಾಯಣ, ಸಾಮಾಜಿಕಜೀವನದಲ್ಲಿ ಸಾಮಾನ್ಯವಾಗಿ ಬರಬಹುದಾದ ಕಷ್ಟಗಳ ಬಗ್ಗೆ, ಆ ಕಷ್ಟಗಳಿಗೆ ಅಂದಿನ ಸಾಮಾಜಿಕ ಚೌಕಟ್ಟಿನಲ್ಲಿ ನ್ಯಾಯವನ್ನೂ ಒದಗಿಸುವ ಪ್ರಯತ್ನದ ಎಳೆಯಲ್ಲಿ ಮುಂದೆ ನಡೆಯುತ್ತದೆಯೇ ಹೊರತು, ರಾಮನೊಬ್ಬ ಪ್ರಶ್ನಾರ್ಹದೇವರು ಎಂದು ಹೇಳಲು ಪ್ರಯತ್ನಿಸಿದ್ದು ನನಗೆಲ್ಲೂ ಕಂಡುಬರಲಿಲ್ಲ.

ನಿಮಗೇನಾದರೂ ಕಂಡುಬಂದಿದ್ದರೆ, ಮುಕ್ತ ಚರ್ಚೆ ನಡೆಯಲಿ.

ಈ ಬರಹಕ್ಕೆ,ರಾಜಾರಾಮ್ ಹೆಗಡೆಯವರು ಕೊಟ್ಟ  ಪ್ರತಿಕ್ರಿಯೆ ಹೀಗಿದೆ :
ರಾಜಾರಾಮ್ ಹೆಗಡೆ : ಉತ್ತಮವಾದ ಲೇಖನ. ತುಂಬಾ ಸಮರ್ಥವಾಗಿ ವಾದಿಸಿದ್ದೀರಿ. ಅಭಿನಂದನೆ. ರಾಮನು ಶಂಬೂಕನನ್ನು ವಧಿಸಲು ನೀವು ಹೇಳಿದ ಕಾರಣವಿದೆಯೇ ಹೊರತೂ ಅವನು ಶೂದ್ರ ಎಂದಲ್ಲ. ಈ ಅಂಶವನ್ನು ಕುವೆಂಪು ಶೂದ್ರ ತಪಸ್ವಿ ನಾಟಕವನ್ನು ಬರೆದಾಗ ಕನ್ನಡದ ಕೆಲವು ಚಿಂತಕರು ಗಮನಕ್ಕೆ ತಂದಿದ್ದರು. ರಾಮಾಯಣವು ಇಂಥ ವಧೆಗಳನ್ನು ಮೋಕ್ಷ ಎಂಬುದಾಗಿಯೂ ಗ್ರಹಿಸುತ್ತದೆ. ಏಕೆಂದರೆ ಅದು ರಾಮ ಭಕ್ತಿ ಕೇಂದ್ರಿತವಾದ ಒಂದು ಕಾವ್ಯ. ಆದರೆ ಇಂದಿನ ಕೆಲವು ಚಿಂತಕರು ಒಂದೆಡೆ ನೂರಾರು ರಾಮಾಯಣಗಳಿವೆ ಎನ್ನುತ್ತಾರೆ, ಮತ್ತೊಂದೆಡೆ ಯಾವುದೋ ಒಂದು ರಾಮಾಯಣವನ್ನು ಸತ್ಯ ಎಂಬಂತೆ ಬಿಂಬಿಸುತ್ತಾರೆ, ಬಹುಶಃ ಇವರಿಗೆ ರಾಮಾಯಣದ ಕುರಿತು ಏನೂ ಕುತೂಹಲಗಳಿದ್ದಂತೆ ಕಾಣುವುದಿಲ್ಲ. ಬದಲಾಗಿ ತಮ್ಮ ಜಾತಿ ವ್ಯವಸ್ಥೆಯ ಕಥೆಯನ್ನು ಜನರ ಮೇಲೆ ಹೇರುವುದು ಹಾಗೂ ನಮ್ಮ ಪರಂಪರೆಯನ್ನು ಹೀಗಳೆಯುವುದು ಮಾತ್ರ ಉದ್ದೇಶವಾಗಿದೆ. ಇವರೆಲ್ಲ ನಮ್ಮ ಪರಂಪರೆಯ ಪಾವಿತ್ರ್ಯತೆಯನ್ನು ಹಾಳುಮಾಡುತ್ತೇವೆ ಎಂದು ವೀಳ್ಯ ಸ್ವೀಕರಿಸಿ ಬಂದಂತೆ ಕಾಣುತ್ತದೆ. ಒಂದು ರೀತಿಯಲ್ಲಿ ಇವರೆಲ್ಲ ಆಧುನಿಕ ಮಿಶನರಿಗಳೇ.

58 ಟಿಪ್ಪಣಿಗಳು Post a comment
  1. T.M.Krishna's avatar
    T.M.Krishna
    ಮಾರ್ಚ್ 31 2015

    ‘ರಾಮ, ನಾನು ಶೂದ್ರ ಕುಟುಂಬದಲ್ಲಿ ಜನಿಸಿದವನು. ನನ್ನ ಕಠಿಣ ಪರಿಶ್ರಮದಿಂದ ದೇವತೆಗಳನ್ನು ಮೆಚ್ಚಿಸಿ, ದೇವಲೋಕವನ್ನು ನನ್ನದಾಗಿ ಮಾಡಿಕೊಂಡು, ಈ ದೇಹದೊಂದಿಗೇ ಸ್ವರ್ಗವನ್ನು ಪ್ರವೇಶಿಸುವ ನಿರ್ಧಾರದಿಂದ ಈ ತಪಸ್ಸನ್ನು ಮಾಡುತ್ತಿದ್ದೇನೆ” ಎನ್ನುತ್ತಾನೆ. ಅದಕ್ಕೆ ರಾಮ ‘ಅಯ್ಯಾ ನಿನ್ನ ತಪಸ್ಸು, ಪರಿಶ್ರಮ ಒಳ್ಳೆಯದೇ ಆದರೂ, ಅದರ ಹಿಂದಿನ ಕಾರಣ ಅಸಾತ್ವಿಕವಾದದ್ದು’
    ಎಂಬ ಕಾರಣದಿಂದ ಅವನ ಹರಣ ಮಾಡುತ್ತಾನೆ’ ಎಂದು ಲೇಖಕರು ಶಂಭೂಕನ ಹತ್ಯೆಗೆ ರಾಮನನ್ನು ಸಮರ್ಥಿಸುವ ಪ್ರಯತ್ನವನ್ನು ಇಲ್ಲಿ ಮಾಡುತ್ತಾರೆ. ಒಬ್ಬ ವ್ಯಕ್ತಿಯ ಉದ್ದೇಶ ಯಾವುದೇ ಇರಲಿ, ಹತ್ಯೆಯಂಥ ನಿರ್ಧಾರ ತೆಗೆದುಕೊಳ್ಳಲು ರಾಮ ಯಾರು? ಯಾವುದೇ ಸಂದರ್ಭದಲ್ಲಿ ಕೊಲ್ಲುವುದರ ಬದಲು ಅದಕ್ಕೆ ಪರ್ಯಾಯ ಮಾರ್ಗಗಳಿರಲಿಲ್ಲವೆ? ಶಂಭೂಕ ಶೂದ್ರನೆಂಬ ಒಂದೇ ಕಾರಣಕ್ಕೆ ಕೊಲ್ಲಲಿಲ್ಲ ಎಂಬುದನ್ನು ಸಮರ್ಥಿಸಲು ಶಬರಿ ಎಂಬ ಶೂದ್ರಳು ಎಂಜಲು ಮಾಡಿದ ಹಣ್ಣನ್ನು ರಾಮ ತಿನ್ನಲಿಲ್ಲವೆ? ಎಂಬ ಊರುಗೋಲನ್ನು ಲೇಖಕರು ಆಶ್ರಯಿಸುತ್ತಾರೆ. ಶೂದ್ರರೇ ಆಗಲೀ, ಉಚ್ಛವರ್ಗದವರೇ ಆಗಲೀ ತನಗೆ ಶರಣಾಗುವವರ ಬಗ್ಗೆ ಮೃದುದೋರಣೆ ತಾಳುವುದು ಅಂದಿನಿಂದ ಇಂದಿನವರೆಗೂ ಹರಿದುಬಂದಿರುವ ವಾಸ್ತವ ಸಂಗತಿ. ಶಬರಿಗೆ ರಾಮನ ಬಗ್ಗೆ ಇದ್ದದ್ದು ಕೇವಲ ಏಕಪಕ್ಷೀಯ ಅಭಿಮಾನ (ಅಂಧಾಭಿಮಾನ ಎಂದರೂ ತಪ್ಪಿಲ್ಲ) ಎಂಬುದನ್ನು ಇಲ್ಲಿ ನೆನಪಿಡಬೇಕು. ರಾಮಭಕ್ತಿ ಎಂದರೆ ಕಣ್ಣುಮುಚ್ಚಿಕೊಂಡು ಶರಣಾಗಿಬಿಡಬೇಕು (ಪ್ರಶ್ನಿಸಬಾರದು) ಎಂದರ್ಥವೆ?

    ಉತ್ತರ
    • ವಿಜಯ್ ಪೈ's avatar
      ವಿಜಯ್ ಪೈ
      ಮಾರ್ಚ್ 31 2015

      [ಒಬ್ಬ ವ್ಯಕ್ತಿಯ ಉದ್ದೇಶ ಯಾವುದೇ ಇರಲಿ, ಹತ್ಯೆಯಂಥ ನಿರ್ಧಾರ ತೆಗೆದುಕೊಳ್ಳಲು ರಾಮ ಯಾರು? ಯಾವುದೇ ಸಂದರ್ಭದಲ್ಲಿ ಕೊಲ್ಲುವುದರ ಬದಲು ಅದಕ್ಕೆ ಪರ್ಯಾಯ ಮಾರ್ಗಗಳಿರಲಿಲ್ಲವೆ? ]

      ಶಂಭೂಕನನ್ನು ಪೋಲಿಸರಿಗೆ ಹಿಡಿದು ಕೊಡುವುದು?? ಕೋರ್ಟ್ ಕೇಸ್ ??

      ಉತ್ತರ
      • T.M.Krishna's avatar
        T.M.Krishna
        ಏಪ್ರಿಲ್ 2 2015

        ಅಲ್ಲಲ್ಲಾ, ಶ್ರೀರಾಮ ವಿಷ್ಣುವಿನ ಅವತಾರವಲ್ಲವೆ. ಯಕಶ್ಚಿತ್ ಒಬ್ಬ ನರನ ಚಿತ್ತವೃತ್ತಿಯನ್ನೇ ಬದಲಿಸಬಹುದಿತ್ತು, ಆಶೀರ್ವಾದ ಮಾಡಬಹುದಿತ್ತು, ವರ ಕೊಡಬಹುದಿತ್ತು, ಶಾಪ ಕೊಡಬಹುದಿತ್ತು. ಅಂಥ ದುರುಳ, ಧರೆಯ ಮೇಲೆಯೇ ಜನ್ಮತಾಳದಂತೆ ತಡೆಯಬಹುದಿತ್ತು ಇತ್ಯಾದಿ…

        ಉತ್ತರ
        • Nagshetty Shetkar's avatar
          Nagshetty Shetkar
          ಏಪ್ರಿಲ್ 2 2015

          ಕೃಷ್ಣಪ್ಪ ಸರ್ ಅವರ ಪ್ರಖರ ನಿಖರ ವಾದದ ಕಾರಣ ಪುರಾತನ ಪುಂಡರ ಪುಂಡಾಟಿಕೆಗೆ ಸೋಲು ನಿಶ್ಚಿತ!

          ಉತ್ತರ
        • ವಿಜಯ್ ಪೈ's avatar
          ವಿಜಯ್ ಪೈ
          ಏಪ್ರಿಲ್ 3 2015

          ಕೆಲವು ತಿಂಗಳ ಹಿಂದೆ ಸರಕಾರದವರು ಖಾನಾಪೂರ ಅರಣ್ಯದಲ್ಲಿ ನರಹಂತಕ ಹುಲಿಯನ್ನು ಹೊಡೆದರಂತೆ..ಏಕೊ? ಹಿಡಿದು ಪಳಗಿಸಿ, ಹುಲ್ಲು ತಿನ್ನುವುದನ್ನು ಕಲಿಸಬಹುದಿತ್ತಲ್ಲವೆ?

          @ಶೆಟ್ಕರ್..
          ಸರಕಾರಿ ಗಂಜಿಕೇಂದ್ರದ ಗಿರಾಕಿಗಳಿಗಿಂತ ಪುರಾತನ ಪುಂಡರು ಮೇಲು ..ಏನಂತೀರಿ?

          ಉತ್ತರ
          • charles bricklayer's avatar
            charles bricklayer
            ಏಪ್ರಿಲ್ 16 2015

            ಎಂತಹ ಅದ್ಬುತ ಹೋಲಿಕೆ ಸ್ವಾಮಿ. ಶಂಭೂಕನೇನು ನರಹಂತಕ ಹುಲಿಯೋ? ಆಥವಾ ಸರಕಾರವೇನು ರಾಮನಂತೆ ದೇವರೋ?

            ಉತ್ತರ
    • raghavendra1980's avatar
      ಏಪ್ರಿಲ್ 1 2015

      ಕೃಷ್ಣ ಅವರೇ, ನಿಮ್ಮ ಮನೆಗೊಂದು ಬೀದಿನಾಯಿ ನುಗ್ಗಿತು ಎಂದಿಟ್ಟುಕೊಳ್ಳಿ. ನೀವೇನು ಮಾಡುತ್ತೀರಿ?

      ಈ ಪ್ರಶ್ನೆಗೆ ಕಾರಣ ಉತ್ತರಿಸಿದರೆ, ನಾನು ನಿಮ್ಮ ‘ಹತ್ಯೆಯಂಥ ನಿರ್ಧಾರ ತೆಗೆದುಕೊಳ್ಳಲು ರಾಮ ಯಾರು?’ ಎಂಬ ಪ್ರಶ್ನೆಗೆ ಉತ್ತರಿಸಬಲ್ಲೆಯೇನೋ.

      ಉತ್ತರ
      • T.M.Krishna's avatar
        T.M.Krishna
        ಏಪ್ರಿಲ್ 1 2015

        ಈ ಪ್ರಶ್ನೆಗೆ ಕಾರಣ ಉತ್ತರಿಸಿದರೆ, ನಾನು ನಿಮ್ಮ ‘ಹತ್ಯೆಯಂಥ ನಿರ್ಧಾರ ತೆಗೆದುಕೊಳ್ಳಲು ರಾಮ ಯಾರು?’ ಎಂಬ ಪ್ರಶ್ನೆಗೆ ಉತ್ತರಿಸಬಲ್ಲೆಯೇನೋ.

        ಮೊದಲು ಈ ವಾಕ್ಯವನ್ನು ಅರ್ಥವಾಗುವಂತೆ ಸರಿಪಡಿಸಿ.

        ಉತ್ತರ
        • raghavendra1980's avatar
          ಏಪ್ರಿಲ್ 1 2015

          ಅಪ್ಪಣೆ ಪ್ರಭುಗಳೇ….. 🙂

          “ಈ ಪ್ರಶ್ನೆಗೆ ಕಾರಣದೊಂದಿಗೆ ಉತ್ತರಿಸಿದರೆ, ನಾನು ನಿಮ್ಮ ‘ಹತ್ಯೆಯಂಥ ನಿರ್ಧಾರ ತೆಗೆದುಕೊಳ್ಳಲು ರಾಮ ಯಾರು?’ ಎಂಬ ಪ್ರಶ್ನೆಗೆ ಉತ್ತರಿಸಬಲ್ಲೆಯೇನೋ.”

          ಉತ್ತರ
          • T.M.Krishna's avatar
            T.M.Krishna
            ಏಪ್ರಿಲ್ 2 2015

            ಅಲ್ಲಾ ಸ್ವಾಮಿ, ರೋಹಿತ್ ಚಕ್ರತೀರ್ಥರ ಬಳಿಯಿದ್ದ ನಾಯಿಯನ್ನು ಇಲ್ಲಿಗೇಕೆ ಕರೆತಂದಿದ್ದೀರಿ? ಅದೂ ಸಾಲದು ಅಂತ ಶೆಟ್ಕರ್ ಮೇಲೆ ಗುರ್ರ್ ಅಂಥಾ ಇದ್ದೀರಿ…

            ಉತ್ತರ
            • raghavendra1980's avatar
              ಏಪ್ರಿಲ್ 2 2015

              ಯಾವ ರೋಹಿತ್ತು? ಯಾವ ಚಕ್ರತೀರ್ಥ!?

              ತಮಗೆ ಯಾವತ್ತಾದರೂ ನಿಂತು ವಾದಮಾಡಿ ಅಭ್ಯಾಸವುಂಟೋ ಅಥವಾ ಕಪಿರಾಯನಂತೆ ಕೊಂಬೆಯಿಂದ ಕೊಂಬೆಗೆ ಹಾರಿಯೇ ಅಭ್ಯಾಸವೋ!?

              ನಿಂತು ವಾದಮಾಡಿ ಅಭ್ಯಾಸವಿದ್ದರೆ ನನ್ನ ಪ್ರಶ್ನೆಗೆ ಉತ್ತರಿಸಿ, ನಿಮ್ಮ ಪ್ರಶ್ನೆಗೆ ಉತ್ತರಿಸಲು ನನಗೆ ಅವಕಾಶಮಾಡಿಕೊಡಿ. ಇಲ್ಲವೆಂದಾದಲ್ಲಿ ನಿಮ್ಮ ಹಾರಾಟ ಮುಂದುವರೆಸಿ.

              ಶೆಟ್ಕರ್ ಮತ್ತು ತಾವ್ಯಾಕೆ ಒಬ್ಬರ ಪೃಷ್ಟವನ್ನು ಇನ್ನೊಬ್ಬರು ಆವರಿಸಿ, ಕಾಪಾಡಲು ಪ್ರಯತ್ನಿಸುತ್ತಿದ್ದೀರಿ. ಏಕವಾಗಿ ಮಾತನಾಡಲು ಎಲ್.ಪಿ.ಜಿ ಕಡಿಮೆಯಿದೆಯೋ!?

              ಉತ್ತರ
              • T.M.Krishna's avatar
                T.M.Krishna
                ಏಪ್ರಿಲ್ 4 2015

                ಇಲ್ಲಿನ ಲೇಖನದ ಬಗ್ಗೆ ನನಗನ್ನಿಸಿದ್ದನ್ನು ನಾನು ಹೇಳಿದ್ದೇನೆ. ಆ ಬಗ್ಗೆ ನಿಮಗೇನಾದರೂ ಹೇಳಬೇಕಿದ್ದರೆ ನೇರವಾಗಿ ಹೇಳಿ-ಅವಕಾಶ ಮುಕ್ತವಾಗಿದೆ. ಇಷ್ಟಕ್ಕೆಲ್ಲಾ ಒಂದು ಅಸಂಬಂದ್ಧ ಪ್ರಶ್ನೆಯನ್ನು ಹಾಕಿ ಉತ್ತರಕ್ಕಾಗಿ ಯಾಕೆ ನಿರೀಕ್ಷಿಸುತ್ತೀರಿ? ಯಾವುದೇ ಒಂದು ಸನ್ನಿವೇಶ ಎದುರಾದಾಗ ನಮ್ಮ ಪ್ರತಿಕ್ರಿಯೆ ಆ ಸಂದರ್ಭ, ಸನ್ನಿವೇಶ ಇತ್ಯಾದಿಗಳನ್ನು ಅವಲಂಬಿಸಿರುತ್ತದೆ. ಹಾಗಾಗಿ ಮನೆಗೆ ನುಗ್ಗಿದ್ದು ಹುಚ್ಚುನಾಯಿಯೋ, ಹಸಿದುಬಂದ ನಾಯಿಯೋ, ಆಕಸ್ಮಿಕವಾಗಿ ಬಂದ ನಾಯಿಯೋ, ವೇಷದಾರಿ ನಾಯಿಯೋ ಇತ್ಯಾದಿ ಅಂಶಗಳ ಮೇಲೆ ಉತ್ತರ ಅವಲಂಭಿಸಿರುತ್ತದೆ. ಹಾಗಾಗಿ ನಿಮ್ಮ ಮೂಗಿನ ನೇರಕ್ಕೆ ಉತ್ತರ ಕೊಡಲಾಗುವುದಿಲ್ಲ.

                ಒಂದು ವಿಷಯವನ್ನು ಚರ್ಚೆಗೆ ತೆಗೆದುಕೊಂಡಾಗ ಛೇಡಿಸುವುದು, ವಿಡಂಭಿಸುವುದು, ವ್ಯಂಗ್ಯಮಾಡುವುದು, ವಿಮರ್ಶಿಸುವುದು, ಕಾಲೆಳೆಯುವುದು ಮುಂತಾದವು ಬರಹಗಾರನ ಸಹಜ ಲಕ್ಷಣಗಳೇ ಹೊರತು ಬಯ್ಯುವುದು, ಹೀಯಾಳಿಸುವುದು, ನಿಂದಿಸುವುದು ಅಲ್ಲ. ನನಗೆ ಎಲ್.ಪಿ.ಜಿ. ಕಡಿಮೆಯಿದೆಯಾ, ಕೊಂಬೆಯಿಂದ ಕೊಂಬೆಗೆ ಹಾರುತ್ತೇನಾ, ತಾಕತ್ತಿಲ್ಲದೆ ಇನ್ನೊಬ್ಬರನ್ನ ಆಶ್ರಯಿಸುತ್ತೇನಾ, ನಿಂತು ವಾದ ಮಾಡುವ ಯೋಗ್ಯತೆ ಇದೆಯ,ಇಲ್ಲವಾ-ಅವೆಲ್ಲಾ ನಿಮಗೇಕೆ? ನಾನೇನಾದರೂ ನಿಮ್ಮ ಒಡೆತನದ ಕಂಪನಿಯಲ್ಲಿ ಕೆಲಸ ಕೇಳಲು ಸಂದರ್ಶನಕ್ಕೆ ಬಂದಿದ್ದೆನೆ? ಅಥವಾ…

                ನೀವಷ್ಟೇ ಅಲ್ಲ, ’ತಾವು ನಂಬಿರುವ ನಿಲುವುಗಳೇ ಸಾರ್ವಕಾಲಿಕ ಸತ್ಯ’ ಎಂಬ ಅಂತಿಮ ತೀರ್ಮಾನಕ್ಕೆ ಈಗಾಗಲೇ ಬಂದುಬಿಟ್ಟಿರುವ ಬಹಳಷ್ಟು ಮಂದಿ ಇಲ್ಲಿ ತಮ್ಮ ಮರ್ಮಕ್ಕೆ ಏನೋ ತಾಗುತ್ತಿದೆ ಎನಿಸಿದ ತಕ್ಷಣ ಎದುರಾಳಿಯ ತಲೆಯ ಮೇಲೆ ಕೊಳಕನ್ನು ಸುರಿದು ಚರ್ಚಾಕಣದಿಂದಲೇ ಹಿಮ್ಮೆಟ್ಟಿಸುವ “ಕೀಳುತನ” ಪ್ರದರ್ಶಿಸುತ್ತಿದ್ದಾರೆ. ಹೀಗಾದರೆ ಸತ್ಯದ ಹುಡುಕಾಟ ಹೇಗೆ ಸಾಧ್ಯವಾಗುತ್ತದೆ?

                ಉತ್ತರ
                • Nagshetty Shetkar's avatar
                  Nagshetty Shetkar
                  ಏಪ್ರಿಲ್ 4 2015

                  +1

                  ನಿಲುಮೆಯ ಪುಂಡಾಟಿಕೆ ಸ್ವಭಾವದ ಯುವಕರು ಕೃಷ್ಣಪ್ಪ ಸರ್ ಅವರ ಸತ್ಯನಿಷ್ಠ ಧೋರಣೆಯನ್ನು ತಮ್ಮದಾಗಿಸಿಕೊಂಡು ಸತ್ಯಾನ್ವೇಷಣೆಯಲ್ಲಿ ತೊಡಗತಕ್ಕದ್ದು. ಪ್ರಗತಿಪರರನ್ನು ಹೀಯಾಳಿಸಿ ನೀವು ದೊಡ್ದವರಾಗುವುದಿಲ್ಲ, ನಿಮ್ಮ ನಾಲಗೆ ಸವೆಯುತ್ತದೆ ಅಷ್ಟೇ!

                  ಉತ್ತರ
                • ಶ್ಯಾಮ್'s avatar
                  ಶ್ಯಾಮ್
                  ಏಪ್ರಿಲ್ 4 2015

                  ಯಾವುದೇ ಒಂದು ಸನ್ನಿವೇಶ ಎದುರಾದಾಗ ನಮ್ಮ ಪ್ರತಿಕ್ರಿಯೆ ಆ ಸಂದರ್ಭ, ಸನ್ನಿವೇಶ ಇತ್ಯಾದಿಗಳನ್ನು ಅವಲಂಬಿಸಿರುತ್ತದೆ.( ನಿಮ್ಮದೇ ತರ್ಕ)
                  ಹಾಗೆಯೇ ರಾಮನು ಶಂಭುಕನನ್ನು ಕೊಲ್ಲುವಾಗಲು ಆತನ ನಿಲುವು ಹಲವಾರು ವಿಷಯಗಳ ಚಿಂತನೆಯ ಫಲ . ಅಲ್ಲದೆ ರಾಮನು ಅದಕ್ಕೆ ಕಾರಣವನ್ನು ಸಹ ಹೇಳಿದ್ದಾನೆ .ನೀವು ನಿಮ್ಮ ಯೋಚನೆಯ ಧಾಟಿಯನ್ನು ರಾಮನಿಗೆ ತೊಡಿಸಿ ರಾಮ ಹಾಗೆ ಮಾಡಬಾರದಿತ್ತು ಹೀಗೆ ಮಾಡಬೇಕಿತ್ತು ಎನ್ನುವುದು ಎಷ್ಟು ಸರಿ .ನಿಮ್ಮ ವಾದ ಸರಿ ಎಂದರೆ ರಾಮ ಮಾಡಿದ್ದು ಸರಿ ಅದನ್ನೆ ಲೇಖಕರು ಹೇಳಿದ್ದು ಅಲ್ಲವೇ.ಅಲ್ಲಿ ಶಂಭುಕನ ವಧೆಗೆ ಕಾರಣ ಆತನ ಅಸಾತ್ವಿಕ ಬಯಕೆ ಹೊರತು ಅದಕ್ಕೆ ಜಾತಿ, ವರ್ಣದ ಲೇಪನ ಬೇಡ.

                  ಉತ್ತರ
                  • T.M.Krishna's avatar
                    T.M.Krishna
                    ಏಪ್ರಿಲ್ 4 2015

                    ನಾನು ಯಕಶ್ಚಿತ್ ನರಮನುಷ್ಯ, ಶ್ರೀರಾಮ ದೇವರಲ್ಲವೆ? ಭೂಮಿಗೆ ಒಂದು ಬಾಣಬಿಟ್ಟು ಗಂಗೆಯನ್ನು ಹೊರತೆಗೆದ ಲಕ್ಷ್ಮಣ (ಲಕ್ಷ್ಮಣತೀರ್ಥ) ನಂಥ ಸಹೋದರ, ಒಂದು ಮೂಲಿಕೆಗಾಗಿ ಇಡೀ ಸಂಜೀವಿನಿ ಪರ್ವತವನ್ನೇ ಹೊತ್ತುತಂದ ಹನುಮಂತನಂಥ ಭಂಟರನ್ನು ಶ್ರೀರಾಮ ಹೊಂದಿದ್ದ.

                    ಉತ್ತರ
                    • Nagshetty Shetkar's avatar
                      Nagshetty Shetkar
                      ಏಪ್ರಿಲ್ 5 2015

                      +1

                • raghavendra1980's avatar
                  ಏಪ್ರಿಲ್ 5 2015

                  ನನ್ನ ಪ್ರಶ್ನೆಗೆ ಉತ್ತರಿಸುವ ಸಭ್ಯತೆ ತಮಗಿಲ್ಲದ ಮೇಲೆ, ಉಳಿದವರಿಂದ ಅದನ್ನು ನಿರೀಕ್ಷಿಸಬೇಡಿ.

                  ಕೇಳಿದ ಪ್ರಶ್ನೆಗೆ ಉತ್ತರಿಸದೆ ನನ್ನ ಒಡೆತನದ ಕಂಪೆನಿಗೆ ಬಂದಿದ್ದೀನಾ!? ಎಂಬ ತಮ್ಮ ಅಸಂಬದ್ಧ ವಾದದಲ್ಲೇ, ತಾವಿಲ್ಲಿ ಯಾಕೆ ಬಂದಿದ್ದೀರಿ ಮತ್ತು ತಮಗೆ ಸತ್ಯದರ್ಶನದ ಹಸಿವೆಷ್ಟಿದೆ ಎಂಬುದು ತಿಳಿಯುತ್ತದೆ.

                  ತಮ್ಮ ಮೂಗಿನ ನೇರಕ್ಕೆ ಯೋಚಿಸುವವರಿಗೆ ಹಾಗೂ ವಾದಿಸುವವರಿಗೆ, ಇನ್ನೊಬ್ಬರ ಮೂಗು ಮತ್ತದರ ನೇರತೆಯ ಬಗ್ಗೆ ಮಾತಾಡಲು ಯಾವ ಹಕ್ಕೂ ಇಲ್ಲ. ನಿಮ್ಮ ಪ್ರಶ್ನೆಗೆ ಉತ್ತರಿಸಲು ನಾನೊಂದು ಹೆಜ್ಜೆ ಬಂದಿದ್ದೇನೆ, ತಾವೂ ಒಂದು ಹೆಜ್ಜೆ ಬಂದರೆ ಮಾತನಾಡಬಹುದು. ಇಲ್ಲವಾದಲ್ಲಿ ಇಲ್ಲ.

                  ಯಾವ್ಯಾವ ನಾಯಿಗೆ ಯಾವ್ಯಾವ ವರ್ತನೆ ನಿಮ್ಮಲ್ಲಿ ಬರುತ್ತದೆಯೆಂದೇ ಹೇಳಿ. ನಾನೂ ಉತ್ತರಿಸುತ್ತೇನೆ.

                  ಯಾರೋ ರೋಹಿತನನ್ನು ಈ ಚರ್ಚೆಗೆ ಎಳೆಯುವ ಮುನ್ನ, ಅಸಂಬದ್ಧ ಪ್ರಶ್ನೆಗೆ ಅಸಂಬದ್ಧವೇ ಉತ್ತರವೆಂಬುದನ್ನು ಮರೆಯದಿರಿ.

                  ಉತ್ತರ
      • Nagshetty Shetkar's avatar
        Nagshetty Shetkar
        ಏಪ್ರಿಲ್ 1 2015

        “ಕೃಷ್ಣ ಅವರೇ, ನಿಮ್ಮ ಮನೆಗೊಂದು ಬೀದಿನಾಯಿ ನುಗ್ಗಿತು ಎಂದಿಟ್ಟುಕೊಳ್ಳಿ. ನೀವೇನು ಮಾಡುತ್ತೀರಿ?”

        ಪಾಪದ ನಾಯಿಯ ಮೈದಡವಿ ಅದಕ್ಕೆ ಕುಡಿಯಲು ನೀರು ಕೊಟ್ಟು ಹೊಟ್ಟೆ ತುಂಬಾ ಆಹಾರ ಕೊಡುತ್ತಾರೆ, ಅನುಮಾನವೇ ಇಲ್ಲ. ಎಲ್ಲಾ ಪ್ರಗತಿಪರರು ಇಡೀ ಜೀವಸಂಕುಲವನ್ನು ಪ್ರೀತಿಯಿಂದ ಕಾಣುತ್ತಾರೆ.

        ಉತ್ತರ
        • raghavendra1980's avatar
          ಏಪ್ರಿಲ್ 2 2015

          ಕಂಡವರ ಮನೆಗೆ ನೀನೇಕೆ ನುಗ್ಗುವೆಯಯ್ಯಾ, ಶೆಟ್ಕರಾ!?

          ಕೃಷ್ಣ ಅವರಿಗೆ ಕೇಳಿದ ಪ್ರಶ್ನೆಯಿದು. ಅವರ ಮನೆಯ ವಿಚಾರ ಅವರಿಗೆ ಬಿಡಿ. ಒತ್ತಾಯಕ್ಕೆ ಯಾರ್ಯಾರನ್ನೋ ಪ್ರಗತಿಪರನೆಂದು ಕರೆದು ಅವಮಾನಿಸದಿರಿ 😛 🙂

          ಉತ್ತರ
          • Nagshetty Shetkar's avatar
            Nagshetty Shetkar
            ಏಪ್ರಿಲ್ 2 2015

            ಕೃಷ್ಣಪ್ಪ ಸರ್ ಅವರ ಮನೆಗೆ ನೀವುಗಳು ನಾಯಿ ಹಿಂಡನ್ನೇ ನುಗ್ಗಿಸಿದರೂ ಅವರು ಅವುಗಳ ಮೈದಡವಿ ಪ್ರೀತಿ ತೋರಿಸುತ್ತಾರೆ ಎಂಬುದು ನಿಚ್ಚಳ ಸತ್ಯ. ಪ್ರಗತಿಪರ ಎಂದರೆ ಯಾರು ಎಂದು ತಿಳಿದಿದ್ದೀರಿ? ಇಡೀ ಜೀವಸಂಕುಲದ ಬಗ್ಗೆ ಪ್ರೀತಿ ಕಾಳಜಿ ಇರುವವರೇ ಪ್ರಗತಿಪರರು. ಪ್ರೀತಿ ಎಂದಿನಿಂದ ಅವಮಾನ ಅಂತ ವೈದಿಕರಿಗೆ ಅನ್ನಿಸತೊಡಗಿದೆ?

            ಉತ್ತರ
            • raghavendra1980's avatar
              ಏಪ್ರಿಲ್ 2 2015

              “ಇಡೀ ಜೀವಸಂಕುಲದ ಬಗ್ಗೆ ಪ್ರೀತಿ ಕಾಳಜಿ ಇರುವವರೇ ಪ್ರಗತಿಪರರು”

              ಜೀವ ಮತ್ತು ಪ್ರೀತಿ ಎರಡು ಪದಗಳನ್ನು ಹಾರಿಸಿ, ಅಲ್ಲಿಂದ ಅವರನ್ನು ಪ್ರಗತಿಪರರನ್ನಾಗಿ ಮಾಡುವ ಪ್ರಭೃತ್ತಿಗಳೋ ನೀವು!? ಗೊತ್ತಾಯಿತು ಬಿಡಿ.

              ನಿಮ್ಮ ಪ್ರಗತಿಪರತೆ ನಿಮಗೇ ಇರಲಿ.

              ಒಂದು ಹಂತದವರೆಗೆ ಮೂರ್ಖತನ ನಗುವಿನ ವಸ್ತು. ಆ ಹಂತ ದಾಟಿದ ಮೇಲೆ ಅದು ಬರೀ ಹೇಸಿಗೆಯ ವಸ್ತು. ಹೇಸಿಗೆಯ ಮೇಲೆ ಕಾಲಿಟ್ಟು ನನಗೆ ಅಭ್ಯಾಸವಿಲ್ಲ.

              ಉತ್ತರ
              • Nagshetty Shetkar's avatar
                Nagshetty Shetkar
                ಏಪ್ರಿಲ್ 2 2015

                “ಒಂದು ಹಂತದವರೆಗೆ ಮೂರ್ಖತನ ನಗುವಿನ ವಸ್ತು. ಆ ಹಂತ ದಾಟಿದ ಮೇಲೆ ಅದು ಬರೀ ಹೇಸಿಗೆಯ ವಸ್ತು. ಹೇಸಿಗೆಯ ಮೇಲೆ ಕಾಲಿಟ್ಟು ನನಗೆ ಅಭ್ಯಾಸವಿಲ್ಲ.”

                ಈ ರೀತಿಯಲ್ಲಿ ಸ್ವವಿಮರ್ಶೆ ಮಾಡಿಕೊಂಡಿದ್ದಕ್ಕೆ ನಿಮಗೆ ನನ್ನ ಮೆಚ್ಚುಗೆ ಸಲ್ಲಿಸುತ್ತೇನೆ.

                ಉತ್ತರ
  2. simha sn's avatar
    ಮಾರ್ಚ್ 31 2015

    ಹತ್ಯೆಯಂಥ ನಿರ್ಧಾರ ತೆಗೆದುಕೊಳ್ಳಲು ರಾಮ ಯಾರು?

    ಅಂದು ರಾಜನ ಕರ್ತವ್ಯಗಳು ಏನಿದ್ದವೋ ಅವನ್ನು ರಾಮನು ಪಾಲಿಸಿದ್ದಾನೆ. ಆಕ್ಷೇಪ ಮಾಡುವವರು ಆ ಕರ್ತವ್ಯಗಳ ಬಗೆಗೆ ಮೊದಲು ತಿಳಿದುಕೊಳ್ಳುವುದು ಅಗತ್ಯ. ಹಿಂದಿನ ಕ್ರಿಯೆಗಳನ್ನು ಇಂದಿನ ಮಾನದಂಡಗಳಲ್ಲಿ ಅಳೆಯಲಾಗದು !

    ಉತ್ತರ
  3. Umesh's avatar
    Umesh
    ಏಪ್ರಿಲ್ 1 2015

    ೧. ರಾಮಾಯಣವನ್ನು ಬರೆದ ಮಹಾಕವಿ ವಾಲ್ಮೀಕಿ ಮೇಲು ಜಾತಿಗೆ ಸೇರಿದವನಲ್ಲ . ಆದ್ದರಿಂದ ರಾಮಾಯಣವನ್ನು ಜಾತಿಯ ಶ್ರೇಷ್ಠತೆಯನ್ನು ಮೆರೆಸಲು ಬರೆದಿದ್ದಲ್ಲ.
    ೨. ಸಾರ್ವತ್ರಿಕವಾಗಿ ಚಾಲನೆಯಲ್ಲಿ ಮತ್ತು ಜನಮಾನಸದಲ್ಲಿ ಇರುವುದು ವಾಲ್ಮೀಕಿ ರಾಮಾಯಣವೇ ಹೊರತು ಉತ್ತರರಾಮಾಯಣವಲ್ಲ. ಶಂಬುಕ ಪ್ರಕರಣ ಮೂಲ ವಾಲ್ಮೀಕಿ ರಾಮಾಯಣದಲ್ಲಿ ಇಲ್ಲ. ಈ ಸಂಗತಿಯನ್ನು ವಿದ್ವಾನ್ ಪಾವಗಡ ಪ್ರಕಾಶರಾಯರು ವಿಜಯವಾಣಿ ಪತ್ರಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
    ೩. ಮಹಾಕವಿ ಕುವೆಂಪುರವರಿಗೆ ಸ್ಪೂರ್ತಿ ನೀಡಿದ್ದು ವಾಲ್ಮೀಕಿ ರಾಮಾಯಣವೇ ಹೊರತು ಉತ್ತರ ರಾಮಾಯಣವಲ್ಲ.
    ೪. ರಾಮ ಜಾತೀಯ ಆಧಾರದ ಮೇಲೆ ರಾಜ್ಯಭಾರ ನಡೆಸಿಲ್ಲ. ಇಲ್ಲದ್ದಿದ್ದರೆ ಬ್ರಾಹ್ಮಣ ರಾವಣನನ್ನು ಶಿಕ್ಷಿಸುವ ಗೊಡವೆಗೆ ಹೋಗುತ್ತಿರಲಿಲ್ಲ.
    ೫. ಗಾಂಧೀಜಿಯವರಿಗೆ ಪ್ರೇರಣೆ ನೀಡಿದ “ರಾಮರಾಜ್ಯ” , ಎಲ್ಲರಿಗೂ ಸಮಬಾಳು ಎಲ್ಲರಿಗೂ ಸಮಪಾಲು ಎಂಬ ತತ್ವದ ಮೇಲೆ ನಡೆಯಿತು.

    ಉತ್ತರ
  4. raghavendra1980's avatar
    ಏಪ್ರಿಲ್ 1 2015

    ಒಬ್ಬ ಓದುಗನಾಗಿ ನನಗೆ ಉತ್ತರ ರಾಮಾಯಣವೆಂಬುದು ಇಂದಿಗೂ ನಿಗೂಡ. ‘ಉತ್ತರ’ ಎಂಬ ಪದವೇ, ಅದರ ಕಾಲಘಟ್ಟವನ್ನು ನಿರ್ಧರಿಸುತ್ತದೆ. ಅಂದರೆ ವಾಲ್ಮೀಕಿ ಮೂಲ ರಾಮಾಯಣ ಬರೆದು ಮುಗಿದಾಗಿದೆ. ಅದರ ನಂತರ ಯಾರೋ (ಅಥವಾ ಸ್ವತಃ ವಾಲ್ಮೀಕಿಯೋ) ಅದನ್ನು ಮುಂದುವರೆಸಲು ನಿರ್ಧರಿಸಿದ್ದಾರೆ! ಯಾವ ಪುರುಷಾರ್ಥಕ್ಕಾಗಿ ಎಂಬುದು ಇಂದಿಗೂ ಅರಿಯಲಾಗದ ವಿಚಾರ.

    ಇಡೀ ರಾಮಾಯಣದ ಉದ್ದೇಶವನ್ನೇ ಬುಡಮೇಲು ಮಾಡುವಂತೆ, ಚಿತ್ರಣವನ್ನು ಆರಂಭಿಸಿದ್ದಾರೆ! ರಾಮನನ್ನು ಕಟಕಟೆಯಲ್ಲಿ ನಿಲ್ಲಿಸುವುದೇ ಅವರ ಉದ್ದೇಶವೆಂಬಂತೆ ಅದ್ದಾಗಲೇ ಒಮ್ಮೆ ಅಗ್ನಿಪರೀಕ್ಷೆಗೊಳಗಾದ ಸೀತೆಯನ್ನು ಅರಮನೆಯಿಂದ ಹೊರಹಾಕಿಸಿದ್ದಾರೆ, ರಾಮನಿಂದ ಅವನ ಮಕ್ಕಳ ಮೇಲೇ ಯುದ್ಧ ಮಾಡಿಸಿದ್ದಾರೆ, ರಾಮಾಂಜನೇಯ ಯುದ್ಧವನ್ನೂ ಮಾಡಿಸಿದ್ದಾರೆ, ಶಂಭುಕನ ಹತ್ಯೆ ಮಾಡಿಸಿದ್ದಾರೆ. ರಾಮ್ ಗೋಪಾಲ್ ವರ್ಮಾನಂತೆ, ಇಡೀ ಚಿತ್ರದಲ್ಲಿ ಮಾರಣಹೋಮ ಮಾಡಿಸಿ ಕೊನೆಗೆ ತಿಪ್ಪೆಸಾರಿಸಿದಂತೆ ಸುಖಾಂತ್ಯ ಮಾಡಿಸಿದ್ದಾರೆ.

    ಮೂಲ ರಾಮಾಯಣದಲ್ಲಿ ಒಂದೋ ಎರಡೋ ಕಂಡೂಬರುವ ಧರ್ಮಸೂಕ್ಷ್ಮಗಳು, ಇಡೀ ಉತ್ತರ ರಾಮಾಯಣದ ತುಂಬೆಲ್ಲಾ ತುಂಬಿವೆ! ಒಬ್ಬ ಓದುಗನಾಗಿ, ನನಗಂತೂ ಉತ್ತರ ರಾಮಾಯಣದ ಆದಾರದ ಮೇಲೆ ವಾದಗಳನ್ನು ಮಾಡುವವರ ಮೇಲೆ ಇರುವ ಗೌರವ ಅಷ್ಟಕಷ್ಟೇ.

    ಉತ್ತರ
  5. Shripad's avatar
    Shripad
    ಏಪ್ರಿಲ್ 1 2015

    ಎ ಕೆ ರಾಮಾನುಜನ್ ಅವರ ತ್ರೀ ಹಂಡ್ರೆಡ್ ರಾಮಾಯಣಾಸ್ (ಮುನ್ನೂರು ರಾಮಾಯಣಗಳು, ಅನು: ಓ ಎಲ್ ನಾಗಭೂಷಣಸ್ವಾಮಿ) ಓದಿ. ಜೀವನಕ್ಕೆ ಬೇಕಾದ ಸೂತ್ರ ಇರುವುದರಿಂದಲೇ ಅದು ಅಷ್ಟು ಜನಮನ್ನಣೆಗಳಿಸಿರುವುದು. ರಾಮ ಕುಡಿದ, ತಿಂದ ಮೊದಲಾದ ಚಿಲ್ಲರೆ ಸಂಗತಿಗಳು ರಾಮಾಯಣದ ಅಥವಾ ರಾಮನ ಮಹತ್ತ್ವವನ್ನು ಎಂದೂ ಕುಗ್ಗಿಸಲಾರವು.

    ಉತ್ತರ
    • Nagshetty Shetkar's avatar
      Nagshetty Shetkar
      ಏಪ್ರಿಲ್ 1 2015

      “ಜೀವನಕ್ಕೆ ಬೇಕಾದ ಸೂತ್ರ ಇರುವುದರಿಂದಲೇ ಅದು ಅಷ್ಟು ಜನಮನ್ನಣೆಗಳಿಸಿರುವುದು”

      ತಿದ್ದುಪಡಿ: ವೈದಿಕರ ‘ಭೂಸುರ’ ಜೀವನಕ್ಕೆ ಬೇಕಾದ ಸೂತ್ರ ಇರುವುದರಿಂದಲೇ ಅದನ್ನು ಅಷ್ಟು ಜನರ ಮೇಲೆ ಹೇರಲಾಗಿದೆ.

      ಉತ್ತರ
      • ಮಾರ್ಕ್ಸ್ ಮಂಜು's avatar
        ಮಾರ್ಕ್ಸ್ ಮಂಜು
        ಏಪ್ರಿಲ್ 2 2015

        Mr.Nagshetty Shetkar

        What is this? Why are you involved in this ಸುರ,ಭೂಸುರ,ಅಸುರ ಬೂರ್ಜ್ವಾ discussion. We should stop discussing ರಾಮಾಯಣ.This is the time someone should write ಮಾರ್ಕ್ಸಾಯಣ ಮಹರ್ಷಿ ಮಾರ್ಕ್ಸ್ ಸನ್ನಿಧಾನಕ್ಕೆ ಹೋಗಬೇಕಾದ ಸಮಯವಾಗಿದೆ

        ಉತ್ತರ
      • shripad's avatar
        shripad
        ಏಪ್ರಿಲ್ 2 2015

        ಮಿ ಶೆಟ್ಕರ್, ನಿಮ್ಮಂಥ ಸ್ವಂತಿಕೆ ಇಲ್ಲದ, ಕೇವಲ ಟೀಕಿಸುವ ಸುದ್ದಿಜೀವಿಗಳಿಗೆ ಮೂಲ ದ್ರವ್ಯವೇ ವೈದಿಕ ಆಚಾರ-ವಿಚಾರ, ಪುರಾಣ-ಸಾಹಿತ್ಯಗಳು. ನೀವೇನಿದ್ದರೂ ಇವುಗಳ ಉಪಸೃಷ್ಟಿಗಳು. ಇವುಗಳ ಸೋಂಕಿಲ್ಲದ ಏನಾದರೂ ಚಿಂತನೆ ನಿಮ್ಮಂಥ ಅಸಂಖ್ಯ ಭಯಾನಕ ಪ್ರತಿಭೆಯಿಂದ ಮೂಡಿದ್ದಿದೆಯೇ? ಇಲವಿಲ್ಲದೇ ನಿಮಗೆ ನೆಲೆಯೇ ಇಲ್ಲ! ಹೆಹೆ…

        ಉತ್ತರ
        • Nagshetty Shetkar's avatar
          Nagshetty Shetkar
          ಏಪ್ರಿಲ್ 2 2015

          “ಇವುಗಳ ಸೋಂಕಿಲ್ಲದ ಏನಾದರೂ ಚಿಂತನೆ ನಿಮ್ಮಂಥ ಅಸಂಖ್ಯ ಭಯಾನಕ ಪ್ರತಿಭೆಯಿಂದ ಮೂಡಿದ್ದಿದೆಯೇ?”

          Yes, Vachana saahitya.

          ಉತ್ತರ
          • shripad's avatar
            shripad
            ಏಪ್ರಿಲ್ 2 2015

            ಕಾಲುಜಾರಿ ಬೀಳುವಾಗ ವಚನಗಳನ್ನು ಊರೆಗೋಲಾಗಿ ತಾವು ಬಳಸುತ್ತೀರಿ ಎಂಬುದನ್ನು ಬಲ್ಲೆ ಶೆಟ್ಕರ್. ಅವು ತಮ್ಮಂಥವರಿಂದ ರಚಿತವಾದವಲ್ಲ. ಅವು ಸೃಜನಶೀಲರ ರಚನೆಗಳು. ಸಿನಿಕರು ಏನನ್ನೂ ಸೃಷ್ಟಿಸಲಾರರು.

            ಉತ್ತರ
            • Nagshetty Shetkar's avatar
              Nagshetty Shetkar
              ಏಪ್ರಿಲ್ 2 2015

              ವಚನಗಳು ಶರಣರ ಸೃಜನಶೀಲ ಸೃಷ್ಟಿ. ದರ್ಗಾ ಸರ್ ಅವರ ಕಾವ್ಯ ಕೂಡ ಸೃಜನಶೀಲ ಸೃಷ್ಟಿ. ಆದರೆ ನಿಮಗೆ ಅಡಿಗರನ್ನು ಬಿಟ್ಟರೆ ಕನ್ನಡದ ಯಾವ ಕವಿಯೂ ಸೃಜನಶೀಲ ಅಂತ ಅನ್ನಿಸುವುದಿಲ್ಲ.

              ಉತ್ತರ
              • shripad's avatar
                shripad
                ಏಪ್ರಿಲ್ 3 2015

                “ವಚನಗಳು ಶರಣರ ಸೃಜನಶೀಲ ಸೃಷ್ಟಿ” ಅಂತ ನಾನೇ ಹೇಳಿದ್ದೀನಲ್ಲಾ? ನೀವೇನು ಮತ್ತೆ ಹೇಳುವುದು? ಇದ್ಯಾವ ದರ್ಗಾ? ಇಲ್ಲೇನು ಕೆಲಸ ದರ್ಗಾಕ್ಕೆ? ನೀವೇ ಒಮ್ಮೆ ಹೇಳಿದ್ರಿ- ವಚನಗಳು ವೈದಿಕ ಆಚರಣೆಗಳನ್ನು ವಿರೋಧಿಸಲು ಹುಟ್ಟಿದವೆಂದು? ಹಾಗಾದರೆ ಅವೂ ವೈದಿಕ ಆಸರೆಯನ್ನೇ ಪರೋಕ್ಷವಾಗಿ ಪಡೆದವಲ್ಲಾ ಶರಣರೇ? ವೈದಿಕ ಇಲ್ಲದಿದ್ರೆ ಅವು ಹುಟ್ಟುತ್ತಲೇ ಇರಲಿಲ್ಲ!? ನಿಮ್ಮ ದರ್ಗಾಗೂ ಕೆಲಸ ಇರುತ್ತಿರಲಿಲ್ಲ ಅಲ್ವಾ? ಒಟ್ಟಿನಲ್ಲಿ ನಿಮಗೆಲ್ಲ ಹೊಟ್ಟೆಪಾಡು ಕಲ್ಪಿಸಿದ್ದೇ ವೈದಿಕ ಅನ್ನಿ.

                ಉತ್ತರ
                • Nagshetty Shetkar's avatar
                  Nagshetty Shetkar
                  ಏಪ್ರಿಲ್ 3 2015

                  “೧) ಇದ್ಯಾವ ದರ್ಗಾ? ೨) ಇಲ್ಲೇನು ಕೆಲಸ ದರ್ಗಾಕ್ಕೆ? ೩) ನಿಮ್ಮ ದರ್ಗಾಗೂ ಕೆಲಸ ಇರುತ್ತಿರಲಿಲ್ಲ ಅಲ್ವಾ?”

                  ೧) ನಮ್ಮ ಕಾಲದ ಚನ್ನಬಸವಣ್ಣ. ೨) ವಚನಕಾರರ ಮೇಲೆ ದಂಡೆತ್ತಿ ಬಂದವರನ್ನು ಧೂಳಿಪಟ ಮಾಡುವುದು. ೩) ಮೂವತ್ತು ವರ್ಷಗಳಿಗೂ ಹೆಚ್ಚು ಕಾಲ ಪತ್ರಕರ್ತನಾಗಿ ಅನ್ನಸಂಪಾದನೆ.

                  ಉತ್ತರ
                  • ಶ್ಯಾಮ್'s avatar
                    ಶ್ಯಾಮ್
                    ಏಪ್ರಿಲ್ 3 2015

                    ಕೃಷ್ಣಪ್ಪ ಸರ್ ಅವರ ಮನೆಗೆ ನೀವುಗಳು ನಾಯಿ ಹಿಂಡನ್ನೇ ನುಗ್ಗಿಸಿದರೂ ಅವರು ಅವುಗಳ ಮೈದಡವಿ ಪ್ರೀತಿ ತೋರಿಸುತ್ತಾರೆ ಎಂಬುದು ನಿಚ್ಚಳ ಸತ್ಯ. ಪ್ರಗತಿಪರ ಎಂದರೆ ಯಾರು ಎಂದು ತಿಳಿದಿದ್ದೀರಿ? ಇಡೀ ಜೀವಸಂಕುಲದ ಬಗ್ಗೆ ಪ್ರೀತಿ ಕಾಳಜಿ ಇರುವವರೇ ಪ್ರಗತಿಪರರು (ಮೊದಲು ಹೇಳಿದ ಮಾತು)
                    ವಚನಕಾರರ ಮೇಲೆ ದಂಡೆತ್ತಿ ಬಂದವರನ್ನು ಧೂಳಿಪಟ ಮಾಡುವುದು (ಈಗ ಹೇಳುವ ಮಾತು)
                    ಜೀವ ಸಂಕುಲದಲ್ಲಿ ಮನುಷ್ಯರು ಸೇರಿಲ್ಲವೇ, ನಾಯಿಯ ಮೈದಡವುವವರಿಗೆ ಮನುಷ್ಯರನ್ನು ಕಂಡರೆ ಧೂಳಿಪಟ ಮಾಡುವ ಬಯಕೆ! ಯಾಕೆ ಈ ವಿರೋಧಾಭಾಸ ?

                    ಉತ್ತರ
                    • Nagshetty Shetkar's avatar
                      Nagshetty Shetkar
                      ಏಪ್ರಿಲ್ 3 2015

                      ದಂಡೆತ್ತಿ ಬಂದವರನ್ನು ಕೂರಿಸಿ ಆತಿಥ್ಯ ಮಾಡಿದರೆ ಭರ್ತಿ ತಿಂದು ತೇಗಿದ ಮೇಲೆ ತುತ್ತು ಕೊಟ್ಟವರ ಕತ್ತು ಕುಯ್ಯುತ್ತಾರೆ. ಆದುದರಿಂದ ದಂಡೆತ್ತಿ ಬಂದವರನ್ನು ಧೂಳಿಪಟ ಮಾಡುವುದು.

                  • shripad's avatar
                    shripad
                    ಏಪ್ರಿಲ್ 3 2015

                    ಅದನ್ನೇ ಹೇಳಿದ್ದು. ಅನ್ನ ಸಂಪಾದನೆಯಾದುದು ವೈದಿಕ ಮೊದಲೇ ಇದ್ದುದರಿಂದ ಅಂತ. ಅದಿಲ್ಲದೇ ಏನೂ ಇಲ್ಲ. ಧೂಳೀಪಟವೂ ಇಲ್ಲ-ಕೆಲಸವೇ ಇಲ್ಲ. ಇಂದಿಗೂ ಅದೇ ಫುಲ್ ಟೈಂ ಕೆಲಸ, ಇನ್ನೇನಿದೆ ಮಹಾಶಯರೇ?

                    ಉತ್ತರ
                    • Nagshetty Shetkar's avatar
                      Nagshetty Shetkar
                      ಏಪ್ರಿಲ್ 3 2015

                      ಅಯ್ಯಾ ಬೆಪ್ಪುತಕ್ಕಡಿಯೇ, ಅನ್ನ ಸಂಪಾದನೆಗೆ ಪತ್ರಿಕೋದ್ಯಮ ಇರುವಾಗ ಗಂಜಿ ಕೇಂದ್ರಗಳ ಅಗತ್ಯವೆಲ್ಲಿದೆ? ಇನ್ನು ವೈದಿಕಗಳಿಗೆ ಹೋಗಿ ಬೋಜ್ಜದೂಟ ಮಾಡಿ ದಕ್ಷಿಣೆ ಪಡೆಯಲು ದರ್ಗಾ ಸರ್ ಏನು ವಿಪ್ರರೆ?! ವೈದಿಕರು ಎಂದಾದರೂ ಮುಸಲ್ಮಾನರನ್ನು ಬೊಜ್ಜದೂಟಕ್ಕೆ ಆಹ್ವಾನಿಸಿದ್ದು ಉಂಟಾ ಮಾರಾಯರೇ?

                    • shripad's avatar
                      shripad
                      ಏಪ್ರಿಲ್ 3 2015

                      ವೈದಿಕರ ಹೆಸರಲ್ಲಿ ನಿತ್ಯ ಬೊಜ್ಜದೂಟ ಹೊಡೆಯುವ ಅವಕಾಶ ಇರುವಾಗ ಬೇರೆಯದೇಕೆ? ಅಂದಹಾಗೆ ದರ್ಗಾ ಮುಸ್ಲಿಮರೇ? ಕೇವಲ ಮಹಾನ್ ಮಾನವತಾವಾದಿ, ಜಾತ್ಯತೀತ, ಭಯಾನಕ ಶರಣ, ರೈತ, ಜಾಗತಿಕ ಪತ್ರಿಕೋದ್ಯಮಿ ಇನ್ನೂ ಏನೇನೋ ಅಂದುಕೊಂಡಿದ್ದೆ. ಕೊನೆಗೂ ಜಾತಿಪ್ರೇಮ ಬಿಡಲ್ಲ ನೋಡಿ!

                    • Nagshetty Shetkar's avatar
                      Nagshetty Shetkar
                      ಏಪ್ರಿಲ್ 3 2015

                      “ಅಂದಹಾಗೆ ದರ್ಗಾ ಮುಸ್ಲಿಮರೇ?”

                      Vaidikas view him as a Muslim but Sharanas view him as one of them. He views himself as a humble discipline of the Vachanakaras, student of Marxism, and human equality proponent.

                    • Nagshetty Shetkar's avatar
                      Nagshetty Shetkar
                      ಏಪ್ರಿಲ್ 3 2015

                      “ವೈದಿಕರ ಹೆಸರಲ್ಲಿ ನಿತ್ಯ ಬೊಜ್ಜದೂಟ ಹೊಡೆಯುವ ಅವಕಾಶ ಇರುವಾಗ ಬೇರೆಯದೇಕೆ?”

                      Baseless and cheap allegations. If you have evidence for what you accused, why not make it public?

                    • shripad's avatar
                      shripad
                      ಏಪ್ರಿಲ್ 3 2015

                      ಅಯ್ಯಾ ಬೆಪ್ಪುತಕ್ಕಡಿಯೇ, You as a nava vaidika, only mentioned him as a Muslim. It is very much evident that you people are parasites, do not have any existence without an anti vaidika thought.

                    • simha sn's avatar
                      ಏಪ್ರಿಲ್ 3 2015

                      ಹಂದಿಗಳೊಂದಿಗೆ ಸೇರಿ ಹೊಲಸು ತಿನ್ನುವುದು ಮತ್ತೊಂದು ಹಂದಿ ಮಾತ್ರ !

                  • ಶ್ಯಾಮ್'s avatar
                    ಶ್ಯಾಮ್
                    ಏಪ್ರಿಲ್ 3 2015

                    ಈಗ ಲೇಖನದ ಮೊದಲ ಪ್ರತಿಕ್ರಿಯೆಗೆ ಹೋಗೋಣ,
                    ರಾಮ ಶಂಭುಕನನ್ನು ಯಾಕೆ ಕೊಲ್ಲಬೇಕಾಗಿತ್ತು ?ಯಾವುದೇ ಸಂದರ್ಭದಲ್ಲಿ ಕೊಲ್ಲುವುದರ ಬದಲು ಅದಕ್ಕೆ ಪರ್ಯಾಯ ಮಾರ್ಗಗಳಿರಲಿಲ್ಲವೆ? ಯಕಶ್ಚಿತ್ ಒಬ್ಬ ನರನ ಚಿತ್ತವೃತ್ತಿಯನ್ನೇ ಬದಲಿಸಬಹುದಿತ್ತು….
                    ಆದರೆ ನಂತರ
                    ದಂಡೆತ್ತಿ ಬಂದವರನ್ನು ಕೂರಿಸಿ ಆತಿಥ್ಯ ಮಾಡಿದರೆ ಭರ್ತಿ ತಿಂದು ತೇಗಿದ ಮೇಲೆ ತುತ್ತು ಕೊಟ್ಟವರ ಕತ್ತು ಕುಯ್ಯುತ್ತಾರೆ. ಆದುದರಿಂದ ದಂಡೆತ್ತಿ ಬಂದವರನ್ನು ಧೂಳಿಪಟ ಮಾಡುವುದು.
                    ಛೇ ನೀವೂ ಹಿಂಸೆಯನ್ನು ಪ್ರತಿಪಾದಿಸುವುದೇ ! ಹಾಗಿದ್ದರೆ ಅಗತ್ಯ ಬಿದ್ದಾಗ ಹಿಂಸೆ ತಪ್ಪಲ್ಲ.ಅಂದರೆ ಕೆಟ್ಟ ಉದ್ದೇಶದವರನ್ನು ಧೂಳಿಪಟ ಮಾಡುವುದು ಸರಿ . ರಾಮನೂ ಅದನ್ನೇ ಮಾಡಿದ್ದು . ಮತ್ಯಾಕೆ ರಾಮನ ಮೇಲೆ ಆರೋಪ . ರಾಮ ಮಾಡಿದರೆ ತಪ್ಪು ಆದರೆ ಬೇರೆಯವರು ಮಾಡಿದರೆ ಸರಿ .ಯಾಕೆ ಗೊಂದಲ.

                    ಉತ್ತರ
                    • ಆನಿ's avatar
                      ಆನಿ
                      ಏಪ್ರಿಲ್ 3 2015

                      +100

  6. ವಾಸು.'s avatar
    ವಾಸು.
    ಏಪ್ರಿಲ್ 12 2015

    ವಾಲ್ಮೀಕಿ ರಾಮಾಯಣದಂತೆ ಶ್ರೀರಾಮ ಭಗವಂತನಲ್ಲ. ಭಗವಂತನ ಅವತಾರವೂ ಅಲ್ಲ. ಆದರೆ ಸದ್ಗುಣಗಳಿಂದ ಮೆರೆದ ಒಬ್ಬ ಮನುಷ್ಯ. ಉತ್ತರ ರಾಮಾಯಣ ವಾಲ್ಮೀಕಿ ರಾಮಾಯಣಕ್ಕೆ ಸೇರಿದುದಲ್ಲ. ಅದೊಂದು ಕಲ್ಪನೆ ಮಾತ್ರ. ಕಾಲ್ಪನಿಕ ಕಥೆಗಳ ಆಧಾರದ ಮೇಲೆ ರಾಮನ ವೈಕ್ತಿತ್ವನ್ನು ಹಳಿಯುವುದು ಭೌದ್ದಿಕ ಅಪಚಾರ. ಹೀಗಾಗಿ ಶಂಭುಕನ ವಧೆಯನ್ನು ಆಧರಿಸಿ ಶ್ರೀರಾಮನನ್ನು ಖಂಡಿಸುವುದು ಎಷ್ಟರ ಮಟ್ಟಿಗೆ ಸರಿ?

    ಉತ್ತರ
    • ACB's avatar
      ACB
      ಏಪ್ರಿಲ್ 12 2015

      ರಾಮಾಯಣ ಕಾಲದ ಪಟ್ಟಭದ್ರ ಸಂಸ್ಕೃತಿಯ ಮಾನದಂಡಗಳ ಪ್ರಕಾರ ರಾಮ ಒಬ್ಬ ಪುರುಷೋತ್ತಮ. ಆದರೆ ಅನ್ಯಸಂಸ್ಕ್ರುತಿಗಳ ಮೇಲೆ ರಾಮನನ್ನು ಹೇರುವುದು ಸರಿಯಲ್ಲ, ಅದೂ ೨೧ನೆ ಶತಮಾನದಲ್ಲಿ.

      ಉತ್ತರ
      • Nagshetty Shetkar's avatar
        Nagshetty Shetkar
        ಏಪ್ರಿಲ್ 13 2015
        • WITIAN's avatar
          WITIAN
          ಏಪ್ರಿಲ್ 14 2015
        • WITIAN's avatar
          WITIAN
          ಏಪ್ರಿಲ್ 14 2015

          ಸೌದಿ ಅರೇಬಿಯದ ಒಬ್ಬ cleric ಇತ್ತೀಚೆಗೆ “ಗಂಡ ಬೇರೆ ಯಾವುದೇ ಆಹಾರವಿಲ್ಲದೆ ಹಸಿದಿದ್ದರೆ, ಉಪವಾಸದಿಂದ ಸಾಯುವ ಹಂತದಲ್ಲಿದ್ದರೆ, ಹೆಂಡತಿಯನ್ನು ತಿನ್ನಲು ಅಡ್ಡಿಯಿಲ್ಲ..” ಎನ್ನುವ ಫತ್ವಾ ಹೊರಡಿಸಿ, ನಂತರ ತಾನು ಹಾಗೆ ಹೇಳಿಯೇ ಇಲ್ಲ ಎಂದು ಅಲ್ಲಗಳೆದ. ಇಂಥವರೂ ಇವರ ಇಪ್ಪತ್ತೊಂದನೆಯ ಶತಮಾನದಲ್ಲೇ ಇದ್ದಾರಲ್ಲ! ಅವರಿಗೆ ಈ ಕಾಲದಲ್ಲಿ ಇಂತಹ ಫತ್ವಾಗಳು ಸರಿಯಲ್ಲ ಅಂತ ಅಪ್ಪಣೆ ಕೊಡಿಸಿ, ನೋಡುವ.

          ಉತ್ತರ
          • Nagshetty Shetkar's avatar
            Nagshetty Shetkar
            ಏಪ್ರಿಲ್ 15 2015

            Why are you concerned with Saudi? Look at India! Shivsena leader writes Muslim voting rights should be taken back!! Have you condemned that statement?

            ಉತ್ತರ
      • raghavendra1980's avatar
        ಏಪ್ರಿಲ್ 14 2015

        ಹಾಗಿದ್ದಮೇಲೆ ಇಂದಿನ ಅರ್ಥಗಳನ್ನು, ಸಮಾಜಿಕ ಮಾನದಂಡಗಳನ್ನು ರಾಮನ ಮೇಲೆ ಹೇರುವುದೇಕೆ? ರಾಮ ‘ಹಾಗೆ’ ಮಾಡಿದ್ದ ‘ಅವತ್ತು’, ‘ಹೀಗೆ’ ಮಾಡಿದ್ದ ‘ಅವತ್ತು’ ಎಂದು ಅಲವತ್ತುಕೊಳ್ಳುವುದನ್ನು ನಿಲ್ಲಿಸಬೇಕು. ರಾಮ ಮಾಡಿದ್ದು ಅವತ್ತಿನ ಮಟ್ಟಿಗೆ ಸರಿಯೇ ಇರಬಹುದು. (ಇಲ್ಲದೆಯೂ ಇರಬಹುದು, ಆದರೆ ‘ಇವತ್ತು’ ಅದರ ಬಗ್ಗೆ ಮಾತನಾಡಲು ನಮಗೆ ಯಾವ ಹಕ್ಕೂ ಇಲ್ಲ)

        ಉತ್ತರ
        • Nagshetty Shetkar's avatar
          Nagshetty Shetkar
          ಏಪ್ರಿಲ್ 15 2015

          First you stop giving super human status to Rams. For us Ramayana is just a literary work, nothing special about it. We discuss it as a literary work.

          ಉತ್ತರ
  7. Shwethadri's avatar
    Shwethadri
    ಏಪ್ರಿಲ್ 16 2015

    What problem you have if someone admire Rama as a super human? you just follow what you believe. You don’t have any right to condemn what others doing, until and unless it is forcing you to change your way of living. For me Ramayana is not just a literary work. Yes it doesn’t tell someone to kill others if they are not of your faith! What proof you have got that Rama did this out of intention? The truth is Rama existed. What ever stories built upon his character is out of sheer admiration towards him. Who ever has written it has tried to over say thing related to Rama. And finally if you consider Ramayana as just a literary work then debate on Valmiki,not rama. According to that Article belongs to the author. Was valmiki in duality to praise and criticize the same person at same place? Why didn’t someone like Rama didn’t kill Valmiki himself when he wrote Ramayana? if the society of that time was totally against Shudras.

    ಉತ್ತರ
  8. srinivasaseenu's avatar
    srinivasaseenu
    ಮೇ 9 2015

    ಸ್ವಾಮಿಗಳೇ ರಾಮನ್ನು ಬಿಡ್ರೀ ಶಂಭುಕನನ್ನು ಬಿಡ್ರೀ ……………..
    ಅದೇನೋ ವಾಲ್ಮೀಕಿ ಬರೆದಿದರೆ ಅಂತಿದಿರಲ್ಲ ರಾಮಯಣ ಆ ಪುಸ್ತಕನೋ ಅಥವಾ ತಾಳೆಗರಿನೋ….
    ತಂದು ತೋರಿಸಿ ಸಾಕ್ಷೀ ಸಮೇತ ವಾದಮಾಡಿ.
    ಮೂಲ ಪ್ರತಿ ಇಲ್ಲದೇ ಹಂಗೀದೆ ಹಿಂಗಿದೆ ಅಂದ್ರೆ ನಂಬೋದಿಲ್ಲ……
    ಇಲ್ಲಿವರೆಗೂ ಸಾವಿರಾರು ಜನ ವಾಲ್ಮೀಕಿ ರಾಮಯಣ ಅಂತ ಬರೆದು ಬರೆದು …………
    ಯಾವುದು ನಿಜ ಯಾವುದು ಸುಳ್ಳು ಅಂತ ಗೊತ್ತಾಗ್ತಯಿಲ್ಲ…………
    ಮೂಲ ರಾಮಯಣದಲ್ಲಿ ಹಂಗಿದೇ…….. ಉತ್ತಾರಖಾಂಡ ಇಲ್ಲ …………

    ಆಕಸ್ಮತ್ ರಾಮಯಣ ನಡೆದಿದ್ರೆ ಆದ್ರೆ , ರಾಮ ತಪ್ಪು ಮಾಡಿದ್ರೆ
    ಅವನ ಭಂಟ ಹುನುಮಂತ ನವವ್ಯಾಕರಣ ಪಂಡಿತ, ಸಕಲ ವಿದ್ಯಾ ಸಮುದ್ರ ಆಂನೇಯ ಮಾರುತಿ
    ರಾಮನ ಧ್ಯಾನ ಮಾಡ್ತಯಿದ್ನ………………

    ಇಲ್ಲ ಸುಳ್ಳು ಅನ್ನೊದಾದ್ರೆ ಯಾವ ಧರ್ಮ ಗ್ರಂಥದಲ್ಲಿ ತಪ್ಪಿಲ್ಲ ನೀವೆ ಹೇಳಿ
    ರಾಮಯಣದ ಬಗ್ಗೆ ರಾಜರೋಷವಾಗಿ ಮಾತಡೋ ನೀವು ಅದೇ ತರ ಅನ್ಯ ಧರ್ಮ ಗ್ರಂಥಗಳ ಬಗ್ಗೆ ಮಾತಡೋಕೆ ಯಾಕೆ
    ಭಯ ಪಡ್ತೀರ……… ಯಾಕೆ………..?

    ಇದರ ಬಗ್ಗೇ ಮಾತಡುದ್ರೆ ಪ್ರಚಾರ ಸಿಗುತ್ತೆ, ಅವುಗಳ ಬಗ್ಗೆ ಮಾತಡುದ್ರೇ ಗ್ರಹಚಾರ ಕೆಡುತ್ತೆ ಅಲ್ವ…..

    ಉತ್ತರ
  9. Satish.g.k.'s avatar
    Satish.g.k.
    ಏಪ್ರಿಲ್ 17 2017

    ಶಂಬುಕ “ನಾನು ಶಂಬುಕ “ಎಂದು ಪರಿಚಯಿಸಿಕೊಳ್ಳಬಹುದಿತ್ತು.ಬದಲಾಗಿ ನಾನು ಶೂದ್ರ ಕುಟುಂಬದಲ್ಲಿ ಜನಿಸಿದವನು ಎಂದು ಸ್ಪಷ್ಟವಾಗಿ ತನ್ನ ವಣ೯ವನ್ನು ರಾಮನಿಗೆ ಗೊತ್ತಾಗುವಂತೆ ಪರಿಚಯಿಸಿ ಕೊಳ್ಳುವ ಪರಿಸ್ಥಿತಿ ಎನಿತ್ತು ಹಾಗು ಕಾರಣ ಎನು ಎಂಬುದರ ಬಗ್ಗೆ ತಿಳಿಸಿ.

    ಉತ್ತರ
  10. ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ

    ಉತ್ತರ

Leave a reply to ಶ್ಯಾಮ್ ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments