ವಿಷಯದ ವಿವರಗಳಿಗೆ ದಾಟಿರಿ

ಜುಲೈ 13, 2015

6

ಬಹುಶಃ ನನಗೇ ಈ ಶೋಷಣೆ,ಸಮಾನತೆ,ಸಹಪಂಕ್ತಿ ಇವೆಲ್ಲಾ ಅರ್ಥವಾಗೊಲ್ಲ

‍ನಿಲುಮೆ ಮೂಲಕ

– ರಾಘವೇಂದ್ರ ಸುಬ್ರಹ್ಮಣ್ಯ,ಶೃಂಗೇರಿ

Samaanateಯಾಕಂದ್ರೆ ನಮ್ಮೂರಲ್ಲಿ ದೇವಸ್ಥಾನಕ್ಕೆ ಒಳಗೆ ಬಿಡೋದ್ರ ಬಗ್ಗೆ ಗಲಾಟೆಯೇ ಇಲ್ಲ. ಶೃಂಗೇರಿ ಅಂತಲ್ಲ, ಸುತ್ತ ಮುತ್ತಲಿನ ಯಾವೂರಿನಲ್ಲೂ ‘ಏಯ್ ಹೊರಗೆ ಹೋಗೋ, ದೇವಸ್ಥಾನದೊಳಗೆ ನೀನು ಬರೋ ಹಾಗಿಲ್ಲ’ ಅನ್ನಲ್ಲ. ಅಲ್ಲಿ ಜನರನ್ನ ಹೊರಗಿಡೋದು ಬಿಡಿ, ಉಲ್ಟಾ, ಕೆಲವಷ್ಟು ಕೆಲಸಗಳಿಗೆ ಕೆಲಜನರು ಬರದಿದ್ರೆ ಮುಖ್ಯ ಕೆಲಸಗಳೇ ನಡೀತಾ ಇರ್ಲಿಲ್ಲ. ಉದಾಹರಣೆಗೆ, ಭೋವಿ ಜನಾಂಗದ ಜನರು ಬಂದು ಪಲ್ಲಕ್ಕಿ ಹೊರ್ಲಿಲ್ಲ ಅಂದ್ರೆ, ಸಾರದಬಾಗಿಲಿನಿಂದ ಜನ ಬಂದು ದೀಪ, ದೀವಟಿಗೆ, ಚಾಮರ ಹಿಡೀಲಿಲ್ಲ ಅಂದ್ರೆ ನವರಾತ್ರಿಯ ಅಡ್ಡಪಲ್ಲಕ್ಕಿಯ ಉತ್ಸವವೇ ನಡಿತಾ ಇರ್ಲಿಲ್ಲ. ಅವತ್ತಿನ ಮಟ್ಟಿಗೆ ನಾನಂತೂ ಅದನ್ನ ಶೋಷಣೆ ಅಂತಾ ಅಂದ್ಕೊಳ್ಳಿಲ್ಲ. ಉಲ್ಟಾ ಅದು ನಮ್ಮ ಐಡೆಂಟಿಟಿಯಾಗಿತ್ತು. ಇವತ್ತಿನ ಹುಡುಗ್ರು ಏನಂದ್ಕೊಳ್ತಾರೋ ಗೊತ್ತಿಲ್ಲಪ್ಪ. ಶೃಂಗೇರಿಯಲ್ಲಂತೂ ಬುರ್ಖಾ ಹಾಕಿಕೊಂಡೇ ಕೆಲ ಹೆಣ್ಣುಮಕ್ಕಳು ದೇವಸ್ಥಾನದಲ್ಲಿರೋ ಮೀನುಗಳಿಗೆ ಮಂಡಕ್ಕಿ ತಿನ್ಸೋಕೆ ಬಂದಿರೋದನ್ನ ನೋಡಿದ್ದೇನೆ. ದೇವಸ್ಥಾನವೆಂದರೆ ನಾಲ್ಕು ಜನ ಸೇರೋ ಜಾಗ ಅಂದುಕೊಂಡು ಬೆಳೆದ ನನಗೆ ಶೋಷಣೆಯ ಆಂಗಲ್ಲೇ ಹೊಳೆಯಲಿಲ್ಲ. ಅದೂ ಅಲ್ದೆ ‘ತಿಂಗಳ ಆ ದಿನಗಳಲ್ಲಿ’ ದೇವಸ್ಥಾನದೊಳಗೆ ಹೋಗದ ನನ್ನ ಅತ್ತೆಯಂದಿರು, ಉತ್ಸವ ಮೂರ್ತಿ ಹೊರಗೆ ಬಂದಾಗ ಕೈಮುಗಿದು ‘ನೋಡು ನಾವು ಒಳಗೆ ಹೋಗದಿದ್ರೇನಂತೆ, ಶಾರದಮ್ಮನೇ ಹೊರಗೆ ಬಂದು ನಮಗೆ ದರ್ಶನ ಕೊಟ್ಲು’ ಅಂತಾ ಹೇಳಿದ್ದು ನನಗೆ ತಮಾಷೆ ಎನ್ನಿಸಲೇ ಇಲ್ಲ. ಅವೊಂತರಾ pradigm shift ಮಾಡುವಂತಾ ಮಾತುಗಳಾಗಿಬಿಟ್ಟವು. ಆದರೂ ಕೆಲವರು ‘ನಮ್ಮನ್ನು ದೇವಸ್ಥಾದೊಳಕ್ಕೆ ಬಿಡಲಿಲ್ಲ’ ಅಂತಾ ಹೋರಾಟ ಮಾಡುವಾಗ ನನಗೆ ಆಶ್ಚರ್ಯವಾಗುತ್ತೆ. ಅದಕ್ಕೇ ಏನೋಪ್ಪ ನನಗೆ ಇವೆಲ್ಲಾ ಅರ್ಥವಾಗೊಲ್ಲ.

ಚೆನ್ನಾಗಿ ಓದಿ, ಪಾಸಾಗೋ ತಾಕತ್ತಿರೋ ಮಕ್ಕಳಿಗೆ, ಸರ್ಕಾರಿ ಶಾಲೆಗಳಲ್ಲಿ, ಅತೀಕಡಿಮೆ ಫೀಜಿನಲ್ಲಿ ಓದೋ ಸೌಕರ್ಯ ನನ್ನ ಕಾಲದಲ್ಲಂತೂ ಇತ್ತು. ನಾನೋದಿದ ಸರ್ಕಾರೀ ಹೈಸ್ಕೂಲಿನಲ್ಲಿ ಕನ್ನಡ, ಇಂಗ್ಲೀಷ್ ಮತ್ತು ಸಂಸ್ಕೃತ ಮೂರನ್ನೂ ಫಸ್ಟ್ ಲ್ಯಾಂಗ್ವೇಜಾಗಿ ತಗೊಳ್ಳೋ ಆಯ್ಕೆಇತ್ತು. ಒಳ್ಳೆಯ ಟೀಚರ್ರುಗಳೂ ಇದ್ರು. ಓದಿ ಪಾಸಾಗೋ ತಾಕತ್ತಿದ್ದರೆ ಸಂಸ್ಕೃತನಾದ್ರೂ ಓದ್ಕಳಿ, ವೇದೋಪನಿಷತ್ತಾದ್ರೂ ಓದ್ಕಳಿ, ಶೇಕ್ಸ್ಪಿಯರ್ರಾದ್ರೂ ಓದ್ಕಳಿ ಅನ್ನೋ ಸ್ಥಿತಿ ನನ್ನೂರಲ್ಲಿತ್ತು. ಶತಮಾನಗಳ ಹಿಂದೆ ಏನು ನಡೆದಿತ್ತೋ ಗೊತ್ತಿಲ್ಲ, ನನ್ನ ಕಾಲಕ್ಕೆ ಸಂಸ್ಕೃತ ಓದಬೇಕು ಅಂದ್ಕೊಂಡವರ ಕಿವಿಗೆ ಕಾದ ಸೀಸ ಹುಯ್ಯುವ ಪದ್ದತಿಯಂತೂ ಇರಲಿಲ್ಲ. ವರ್ಷವಿಡೀ ದೇವಸ್ಥಾನದ ಸುಪ್ರಭಾತವನ್ನೇ ಕೇಳಿ ಎದ್ದೇಳುತ್ತಿದ್ದ ನಮಗೆ, ಹಬ್ಬದ ಸಮಯದ ರಾತ್ರಿಯ ದರ್ಬಾರಿನಲ್ಲಿ ಪಾಠಶಾಲೆಯ ಹುಡುಗರ ವೇದಪಠನಗಳ ಕಾರ್ಯಕ್ರಮ ಕೇಳಿಯೇ ಬೆಳೆದ ನಮಗೆ, ಸಂಸ್ಕೃತದ ಬಗ್ಗೆ ಯಾವ ದ್ವೇಷವೂ ಬೆಳೆಯಲಿಲ್ಲ. ಅದಕ್ಕೇ ಏನೋಪ್ಪ ನನಗೆ ಇವೆಲ್ಲಾ ಅರ್ಥವಾಗೊಲ್ಲ.

ದೇವಸ್ಥಾನಕ್ಕೆ ಹೋಗೋದು ಅಂದ್ರೆ ನಮ್ಮನೆಯಲ್ಲಿ (ನಮ್ಮ ಸುತ್ತಲಿನ ಮನೆಗಳಲ್ಲೂ) ಸಂಭ್ರಮ. ಪೇಟೆ, ಅಲ್ಲಿನ ಲೈಟು, ಹೋಟೆಲ್ಲಿನ ಪರಿಮಳ, ದೇವಸ್ಥಾನದ ಘಂಟೆ, ಆನೆ, ಹೊಳೆ, ಅದರಾಚೆಗಿನ ನರಸಿಂಹವನ ಎಲ್ಲವೂ ಪುಳಕಗೊಳ್ಳುವ ಅನುಭವ. ಮಠದಲ್ಲಿ ಸಿಗುತ್ತಿದ್ದ ಊಟವಂತೂ ಆ ದಿನದ ಮುಖ್ಯ ಆಕರ್ಷಣೆ. ಅದು ಪ್ರಸಾದವೋ, ಊಟವೋ ಅಂತೆಲ್ಲಾ ತಲೆಕೆಡಿಸುಕೊಳ್ಳುವಷ್ಟು ವ್ಯವಧಾನ ಕೂಲಿ ಮಾಡಿ ಬದುಕುತ್ತಿದ್ದ ನಮ್ಮಜ್ಜನ ಮನೆಯಲ್ಲಿ ಬೆಳೆದ ನಮಗಿರಲಿಲ್ಲ. ಮನೇಲೇ ಊಟಮಾಡಿದ್ರೆ ಹಲಸಿನಕಾಯಿ ಕೊಚ್ಚಿ ಉಪ್ಪು ಹಾಕಿಕೊಂಡೋ ಅಥವಾ ಕುಚ್ಚಲಕ್ಕಿ ಗಂಜೀನ ಉಪ್ಪಿನ್ಕಾಯಿ ನೆಂಚ್ಕೊಂಡೋ ತಿನ್ನುವ ಪರಿಸ್ಥಿತಿ ಇದ್ದ ನಮಗೆ, ಮಠದಲ್ಲಿ ಸಿಗುತ್ತಿದ್ದ ಅನ್ನ, ತಿಳಿಸಾರು, ಸಾಂಬಾರು ಮೃಷ್ಟಾನ್ನಕ್ಕೂ ಮಿಗಿಲು. ಸಿಗುವ ಊಟದ ಮೇಲೆ ನಮ್ಮ ಗಮನವೇ ಹೊರತು, “ಅಯ್ಯೋ! ಅಲ್ನೋಡ್ರೋ ಭಟ್ರಿಗೇ ಬೇರೆ ಊಟ!!” ಅಂತಾ ಆಶ್ಚರ್ಯಪಡುವಷ್ಟೆಲ್ಲಾ ಬಾಯಿಬಿಡುವಷ್ಟು ಸಮಯವಿರಲಿಲ್ಲ. ಆಚೆ ಈಚೆ ನೋಡದೇ ತಿಂದ್ರೆ ಇನ್ನೂ ಎರಡು ತುತ್ತು ಹೆಚ್ಚು ತಿನ್ನಬಹುದು, ಬಹುಷಃ ರಾತ್ರಿಯೂಟದ ಖರ್ಚೂ ಮಿಗುತ್ತದೆಂಬ ಲೆಕ್ಕಾಚಾರ ಅದಾಗಲೇ ನಮ್ಮ ಮನಸ್ಸಿನಲ್ಲಿತ್ತು. ನವರಾತ್ರಿ ಬಂದ್ರೆ ನಮ್ಮ ಕೆ.ವಿ.ರಾಮಪ್ಪಯ್ಯ ರಸ್ತೆಯಲ್ಲಿ (ಆಗ ಅದು ಕುರುಬಕೇರಿಯಾಗಿತ್ತು, ಒಬ್ಬ ಕುರುಬನೂ ಇಲ್ಲದಿದ್ರೂ ಸಹ:P) ಯಾರಮನೆಯಲ್ಲೂ ಅಡುಗೆಯೇ ಮಾಡ್ತಿರಲಿಲ್ಲ ಅನ್ನೋದೊಂದು ಸಹಜವಾದ ಜೋಕಾಗಿತ್ತು. ಯಾಕಂದ್ರೆ ಮಠದಲ್ಲಿ ಭೂರಿಭೋಜನ! ಒಂಬತ್ತೂ ದಿನ!! ಅದೂ ಮಧ್ಯಾಹ್ನ, ರಾತ್ರಿ ಎರಡೂ ಹೊತ್ತು!!! ಸಹಪಂಕ್ತಿ ಭೋಜನದ ಬಗ್ಗೆ ಯೋಚಿಸಲು ಪ್ರಾರಂಭವಾಗಿದ್ದೇ, ಮನೆಕಡೆಯ ಸ್ಥಿತಿ ಸ್ವಲ್ಪ ಆರ್ಥಿಕವಾಗಿ ಉತ್ತಮವಾದಾಗ. ಆಗ ದೇವಸ್ಥಾನದ ಊಟ ನಮಗೆ ಅವಶ್ಯಕತೆಯಾಗಿರಲಿಲ್ಲ, ಬರೀ ಅನುಭವವಾಗಿ ಬದಲಾಗಿತ್ತು. ಆಗ, “ಅದ್ಯಾಕೆ ಅವರಿಗೆ ಬೇರೆ ಊಟ? ನಾವೂ ಅಲ್ಲಿಗೇ ಹೋಗೋಣ ಬಾರೋ ಚೇತು” ಅಂತಾ ನನ್ನ ತಮ್ಮನ್ನೂ ಎಳ್ಕೊಂಡು ಹೋಗಿ ‘ಜನಿವಾರ ಎಲ್ಲೋ?’ ಅಂತಾ ಅನುಮಾನದಿಂದ ನೋಡಿದವರೆಡೆಗೆ, ‘ಇನ್ನೂ ಉಪನಯನ ಆಗಿಲ್ಲ’ ಅನ್ನೋ ಉತ್ತರ ಎಸೆದು, ಅಲ್ಲಿ ಕೂತು ಊಟ ಮಾಡಿದ ಮೇಲೆ ‘ಪಾಯಸ ಒಂದು ಎಕ್ಸ್ಟ್ರಾ ಇದೆ ಅನ್ನೋದು ಬಿಟ್ರೆ, ಇಲ್ಲೇನಿದೆ ಮಣ್ಣು!? ಇಲ್ಲೂ ಅದೇ ಊಟ’ ಅಂತಾ ಬೈಕೊಂಡು ಬಂದ್ವಿ. ಅವರ ಕಾಲಿಗೆ ಕಾಲು ತಾಗಿಸಿ ಊಟ ಮಾಡಿಬಂದ ಅವತ್ತಿಂದ ಇವತ್ತಿನವರೆಗೂ ಸಹಪಂಕ್ತಿ ಭೋಜನ ನನಗೆ ತಲೆಕೆಡಿಸಿಕೊಳ್ಳೋ ವಿಚಾರವೇ ಅಲ್ಲ. ಅದಕ್ಕೋ ಏನೋಪ್ಪ ನನಗೆ ಇವೆಲ್ಲಾ ಅರ್ಥವಾಗೊಲ್ಲ.

ಊರಲ್ಲಿದ್ದವರಷ್ಟೂ ಜನ ಕೈಯೋ ಕಾಲೋ ಉಳುಕಿದರೆ, ಅಜ್ಜಯ್ಯನ ಹತ್ರ ಎಣ್ಣೆ ಉಜ್ಜಿಸಿಕೊಳ್ಳೋಕೆ ಬಂದಾಗ, ಯಾರೂ “ನಿಮ್ ಮನೆ ಒಳಗೆ ನಾನು ಬರಲ್ಲ, ನೀನೇ ಮನೆಗೆ ಬಾರೋ ವೆಂಕಟ್ರಾಮು” ಅಂತಲೋ ಅಥವಾ “ನಾನು ಬ್ರಾಹ್ಮಣ ಕಣಯ್ಯಾ. ನನ್ನನ್ನ ಮುಟ್ಟದೇ ಎಣೆ ತಿಕ್ಕು” ಅಂತಾ ಅನ್ಲಿಲ್ಲ. ಗ್ರಹಚಾರ ಕೈಕೊಟ್ಟು ಸೊಂಟ ಹಿಡ್ಕೊಂಡಾಗ, ಅದನ್ನ ಸರಿಮಾಡೋಕೆ ಯಾವ ಜಾತಿಯೂ ಅಡ್ಡಬರಲ್ಲ ಅನ್ನೋದನ್ನ ಅಜ್ಜ ಅದಾಗಲೇ ಕಲಿಸಿಬಿಟ್ಟಿದ್ದರು. ಅದಕ್ಕೇ ಏನೋಪ್ಪ ನನಗೆ ಇವೆಲ್ಲಾ ಅರ್ಥವಾಗೊಲ್ಲ.

ಒಂದೇ ಒಂದು ವರ್ಷ (ಬಹುಷಃ 1993 ಇರಬೇಕು) ನಾನು ಏಪ್ರಿಲ್ 14ರಂದು ‘ಅಂಬೇಡ್ಕರ್ ದಿನಾಚರಣೆ’ ಪ್ರಯುಕ್ತ ನಡೆದ ‘ಪ.ಜಾ ಮತ್ತು ಪ.ಪಂ ಗಳ ಆಟೋಟ ಸ್ಪರ್ಧೆ’ಗೆ ಹೋಗಿದ್ದು. ಶಾಟ್-ಪುಟ್, 400ಮೀ ಓಟ, ಚರ್ಚಾಸ್ಪರ್ಧೆ ಮೂರರಲ್ಲಿ ಮೊದಲಬಹುಮಾನವಾಗಿ ಮೂರು ಸ್ಟೀಲ್ ಪ್ಲೇಟ್ ಗೆದ್ದಿದ್ದಕ್ಕೆ, ಅದ್ಯಾರೋ ಮಹಾಶಯ ‘ನೋಡಯ್ಯಾ! ನೀನೂ ಕೂಡ ಗೆಲ್ಲಬಹುದು ಅಂತಾ ಗೊತ್ತಾಯ್ತಾ? ನಾಳೆ ಕ್ಲಾಸಿಗೆ ಇದನ್ನ ತಗಂಡು ಹೋಗಿ ತೋರ್ಸು ಎಲ್ಲರಿಗೂ. ಅವ್ರಿಗೂ ಗೊತ್ತಾಗ್ಲಿ, ನೀನು ಹಿಂದುಳಿದವನಲ್ಲ, ನೀನೂ ಸಹ ಗೆಲ್ಲೋ ಕುದುರೆ ಅಂತಾ’ ಅಂದ. ನಮ್ಮ ಮನಸ್ಸುಗಳೊಳಗೇ ನಾವೆದಷ್ಟು ಹಿಂದುಳಿದಿದ್ದೇವೆ ಅಂತಾ ಗೊತ್ತಾಗಿದ್ದೇ ಅವತ್ತಿನ ಭಾಷಣಗಳನ್ನು ಕೇಳಿದ ನಂತರ! ಅದೇ ಕೊನೆ, ಇನ್ಮೇಲೆ ಹಿಂದುಳಿಯಬಾರದು ಅಂತಾ ನಿರ್ಧರಿಸಿ ಆ ಕಾರ್ಯಕ್ರಮಕ್ಕೇ ಬಹಿಷ್ಕಾರ ಹಾಕಿದೆ. ಅಮೇಲಿಂದ ನಾನು ಹಿಂದುಳಿಯಲೇ ಇಲ್ಲ. ಅದಕ್ಕೇ ಏನೋಪ್ಪ ನನಗೆ ಇವೆಲ್ಲಾ ಅರ್ಥವಾಗೊಲ್ಲ.

ಅಂಬೇಡ್ಕರ್ ಬಗ್ಗೆ ಪ್ರತಿವರ್ಷವೂ ಕನ್ನಡ ಹಿಂದಿ ಇಂಗ್ಳೀಷ್ ಮೂರೂ ಲ್ಯಾಂಗ್ವೇಜಿನಲ್ಲಿ ಮೂರನೇ ಕ್ಲಾಸಿನಿಂದ ಹತ್ತನೇ ಕ್ಲಾಸಿನ ತನಕ (3×8) ಇಪ್ಪತ್ತನಾಲ್ಕು ಪಾಠಗಳನ್ನು ಓದಿಮುಗಿಸುವುದು ಬದಿಗಿರಲಿ, ಇನ್ನೂ ಓದಲು ಪ್ರಾರಂಭಿಸುವ ಮುಂಚೆಯೇ, ನನ್ನಪ್ಪ ಅಮ್ಮ, ನನ್ನ ಇಬ್ಬರು ಅಜ್ಜಂದಿರೂ ‘ವಿದ್ಯೆಯೊಂದೇ ನಿನ್ನನ್ನು ಲಿಬರೇಟ್ ಮಾಡಲು ಸಾಧ್ಯ’ವೆಂಬುದನ್ನು ಹೇಳಿಕೊಟ್ಟಾಗಿತ್ತು. ಲಿಬರೇಟ್ ಅನ್ನೋ exact ಪದವನ್ನು ಅವರು ಬಳಕೆ ಮಾಡದಿದ್ರೂ ‘ನನ್ನ ತರಹಾ ನೀನಾಗಬೇಡ ಮಗಾ’ ಅಂತಾ ಅವರು ಹೇಳಿದ ಮಾತಿಗೆ ಬೇರೆ ಯಾವ ಅರ್ಥವನ್ನೂ ನಾನು ಕೊಡಲಾರೆ. ಅಂಬೇಡ್ಕರ್ ಮತ್ತವರ ಹೋರಾಟದ ಪರಿಕಲ್ಪನೆ ಇನ್ನೂ ಮನಸ್ಸಿನಲ್ಲಿ ಮೂಡುವ ಮುನ್ನವೇ ಅಸ್ಪೃಶ್ಯತೆಯೆಂಬುದರ ಬಗ್ಗೆ, ಅಸ್ಪೃಶ್ಯತೆಯೆಂಬುವುದು ಅದೆಂತಾ ಅಸ್ಪೃಶ್ಯ ವಿಚಾರವೆಂದು ತಿಳಿಸಿಕೊಟ್ಟಿದ್ದು ಮತ್ತು ಅದರಿಂದ ಹೊರಬರಬೇಕಾದ ಅಗತ್ಯತೆಯ ಬಗ್ಗೆ ನನ್ನ ಗ್ರಹಿಕೆಯನ್ನೇ ಬದಲಾಯಿಸಿದ್ದು ಈ ನಾಲ್ಕು ಜನ. (ಅದನ್ನು ಬೇರೆಯೇ ಹಂತಕ್ಕೆ ಒಯ್ದಿದ್ದು ನಾನೇ ಬಿಡಿ ;).ಎಲ್ಲಾ ಕ್ರೆಡಿಟ್ಟು ಅವರಿಗೇ ಯಾಕೆ ಕೊಡೋಣ:P) ಆದ್ರೂ ಏನೋಪ್ಪ ನನಗೆ ಈ ಹೋರಾಟಗಳೆಲ್ಲಾ ಅರ್ಥವಾಗೊಲ್ಲ.

ನನ್ನಜ್ಜಪ್ಪಮ್ಮಂದಿರು ಹೇಳಿಕೊಟ್ಟ ‘ವಿದ್ಯೆಯೊಂದೇ ನಿನ್ನನ್ನು ಲಿಬರೇಟ್ ಮಾಡಲು ಸಾಧ್ಯ’ ಎಂಬ ಮಾತನ್ನು ಅಂಬೇಡ್ಕರ್ ಕೂಡಾ ಹೇಳಿದ್ರು ಅಂತಾ ಗೊತ್ತಾಗಿದ್ದು ಎಂಟನೇ ಕ್ಲಾಸಿನಲ್ಲಿ. ಅಷ್ಟೊತ್ತಿಗಾಗಲೇ ನನ್ನ ಮಟ್ಟಿಗೆ ಅಸ್ಪೃಶ್ಯತೆಯ ಕಾನ್ಸೆಪ್ಟೇ ಹಳ್ಳ ಹಿಡಿದಾಗಿತ್ತು. ನನ್ನ ಸ್ನೇಹಿತರೆಲ್ಲ ನನಗೇ ಗೊತ್ತಿಲ್ಲದಂತೇ ಹೆಚ್ಚೂ ಕಡಿಮೆ ಬ್ರಾಹ್ಮಣರೇ ಆಗಿ ಹೋಗಿದ್ದರು. ಎಲ್ಲರ ಮನೆಯ ಅಡುಗೆ ಮನೆಗೇ ಹೋಗಿ ಊಟ ಮಾಡಿ ಬರ್ತಾ ಇದ್ದೆ. ಆ ನನ್ನ ಅಮ್ಮಂದಿರುಗಳಲ್ಲಿ ಯಾರೂ ಸಹ ‘ಏಯ್ ಒಳಗೆ ಬರ್ಬೇಡ’ ಅನ್ಲಿಲ್ಲ, ‘ತಟ್ಟೆ ತೊಳೆದಿಟ್ಟು ಹೋಗು’ ಅನ್ಲಿಲ್ಲ. ನನ್ನ ಮೊದಲ ಮತ್ತು ಕೊನೆಯ ಗರ್ಲ್-ಪ್ರೆಂಡುಗಳೂ ಬ್ರಾಹ್ಮಣರ ಮನೆಯ ಹುಡುಗಿಯರೇ 😉 ಮನುಷ್ಯನಾಗಿ ಬೆಳೆಯಲು ನನಗೆ ಅವೆಲ್ಲಾ ಯಾವತ್ತೂ ಅಡ್ಡಿ ಬರಲೇ ಇಲ್ಲ. ತಲೆಯಲ್ಲಿ ಸರಸ್ವತಿ ನೆಲೆಸಿಯಾಗಿತ್ತು. ಅವಳಿದ್ದಲ್ಲಿ ಇನ್ನು ಅಸ್ಪೃಶ್ಯತೆಯೆಲ್ಲಿ!!!? ಅದಕ್ಕೇ ಇರಬೇಕು ನನಗೆ ಇವೆಲ್ಲಾ ಅರ್ಥವಾಗೊಲ್ಲ.

ಚಿಕ್ಕಂದಿನಿಂದಲೂ ಇದನ್ನು ನೋಡಿ ನೋಡಿ ಅಭ್ಯಾಸ ಆಗಿರೋ ನನಗೆ ದೇವಸ್ಥಾನದೊಳಗೆ ಪ್ರವೇಶ ಸಿಗಲಿಲ್ಲ ಅಂತಾ ಕೆಲವರು ಮಾಡೋ ಹೋರಾಟ, ಸಂಸ್ಕೃತ ಕಲಿಯೋಕೆ ಬಿಡ್ಲಿಲ್ಲ, ಶೋಷಿಸಿದ್ರು ಅನ್ನೋ ಮಾತುಗಳೇ ಅರ್ಥವಾಗಲ್ಲ. ಹಾಗಂತಾ ಇವೆಲ್ಲಾ ಸರಿಯಲ್ಲ ಅಂತಾ ನಾನು ಹೇಳೋಲ್ಲ. ಕೆಲವುಕಡೆ, ಕೆಲ ಮೂರ್ಖರು ಕೆಲಜನರನ್ನು ದೇವಸ್ಥಾನದೊಳಗೆ ಬಿಡದೇ ಸತಾಯಿಸಿರುವ ಘಟನೆಗಳು ನಡೆದಿವೆ, ನಡೀತಾ ಕೂಡಾ ಇವೆ. ಆದರೆ ಅಲ್ಲಿ ನಡೆದಿರೋ ಅನ್ಯಾಯವನ್ನ ಸಂಸ್ಕೃತ ಕಲಿತು ಅಥವಾ ಸಹಪಂಕ್ತಿ ಭೋಜನ ಮಾಡುವುದರ ಮೂಲಕ ಸರಿಪಡಿಸಲಾಗುವುದಿಲ್ಲ. ಹೆಚ್ಚೆಂದರೆ ನಿಮ್ಮಜ್ಜನ ಪಾಲಿನ ಸೇಡು ನೀವು ತೀರಿಸಿಕೊಳ್ಳಬಹುದಷ್ಟೇ. ಅದಕ್ಕಿಂತಾ ಹೆಚ್ಚು ಕಡಿದು ಕಟ್ಟಿಹಾಕುವುದೇನೂ ಇಲ್ಲ. ನಿಜವಾಗಿಯೂ ನಡೆದ ಅನ್ಯಾಯವನ್ನು ಸರಿಪಡಿಸಬೇಕಾದರೆ, ಕಲಿಯಬೇಕಾದದ್ದು ವಿದ್ಯೆ. ಅದೊಂದೇ ಈ ಎಲ್ಲಾ ರೋಗಗಳಿಗೂ ಮದ್ದು. ಸರಸ್ವತಿ ಯಾವ ಯೂನಿವರ್ಸಿಟಿಯಲ್ಲಿ ಓದಿದ್ದಾಳೆ? ಅವಳದೆಷ್ಟು ಡಿಗ್ರಿ ಪಡೆದಿದ್ದಾಳೆ!? ಎಂದು ಪ್ರಶ್ನಿಸಿದವರು ಹೆಚ್ಚೆಂದರೆ ಅಕ್ಷರಸ್ಥರಾಗಬಹುದೇ ಹೊರತು ವಿದ್ಯೆಕಲಿತವರಾಗುವುದಿಲ್ಲ. ಅಂತವರು ಈ ಅಸ್ಪೃಶ್ಯತೆಯ ಸುಳಿಯಿಂದ ಹೊರಬರುವುದೂ ಇಲ್ಲ. ಬಹುಷಃ ಅವರಿಗೂ ಅದರಿಂದ ಹೊರಬರುವ ಇಚ್ಚೆಯೂ ಇಲ್ಲ. ಅವರಿಗೇನಿದ್ದರೂ ‘ಅಯ್ಯೋ ನೋಡ್ರೀ! ನಮ್ಮನ್ನ ಅದೆಷ್ಟು ತುಳಿದಿದ್ದಾರೆ!!!” ಅಂತಾ ಕೂಗಾಡಿ, ಒಂದೆರಡು ಪುಸ್ತಕ ಬರೆದು, ಭಗವಾನರರಿಂದ ಮುನ್ನುಡಿ ಬರೆಸಿ (ಕು)ಪ್ರಸಿದ್ಧರಾಗುವ ಗುರಿಯಿದೆಯೇ ಹೊರತು, ಅಸ್ಪೃಶ್ಯತೆಯ ನಿರ್ಮೂಲನೆಯಲ್ಲ.

ಅದಕ್ಕೇ ಇರಬೇಕೇನೋ “ಏನೋಪ್ಪ ನನಗೆ ಇವೆಲ್ಲಾ ಅರ್ಥವೇ ಆಗೊಲ್ಲ”

6 ಟಿಪ್ಪಣಿಗಳು Post a comment
  1. Naveen gangotri
    ಜುಲೈ 13 2015

    ಶೃಂಗೇರಿಯಂಥಾ ಪರಿಸರದಿಂದ ಈ ಧ್ವನಿ ಬರಲೇಬೇಕಿತ್ತು. ಅಲ್ಲಿನ ಬ್ರಾಹ್ಮಣರಂತೂ ಈ ವಾದಗಳ ಪರವಾಗಿಯಾಗಲೀ ವಿರೋಧವಾಗಿಯಾಗಲೀ ಮಾತಾಡಲಾರರು. ಜಗತ್ತಿನಲ್ಲಿ ಈ ಬಗೆಯ ವಾದಗಳಾಗುವುದನ್ನು ಶತಮಾನಗಳಿಂದ ನೋಡಿ ಅಭ್ಯಾಸವಿರುವವರಂತೆ ಅವರು ತಮ್ಮ ಕೆಲಸ ತಾವು ಮಾಡಿಕೊಂಡಿರುತ್ತಾರೆ. ಹಿಂದುಳಿದ ವರ್ಗದ (!) ಶಿಕ್ಷಿತರೊಬ್ಬರು ಶೃಂಗೇರಿಯಂಥಾ ಶುದ್ಧ ವೈದಿಕ ವಾತಾವರಣದ ವಿಷಯವಾಗಿ ಹೀಗೆ ಬರೆದುದು ಸ್ವಾಗತಾರ್ಹ.

    ಇವತ್ತಿಗೂ ಮುಸ್ಲಿಮರು ಶೃಂಗೇರಿಯ ಶಾರದಾಂಬಾ ದೇವಾಲಯದ ಅಂಗಳದಲ್ಲಿ ಆರಾಮಾಗಿ ಬಂದುಹೋಗುತ್ತಿರುತ್ತಾರೆ! ಸಾಮಾನ್ಯ ಮನಸುಗಳಲ್ಲಿ ಧರ್ಮದ ಭೇದ ಇಲ್ಲ, ವರ್ಗದ ಭೇದವೂ ಇಲ್ಲ. ನವಯುಗದ ದಲಿತರು ಮತ್ತು ನವಧಾರ್ಮಿಕರಲ್ಲಿ ಮಾತ್ರವೇ ಕೊಳಚೆಯ ಆಲೋಚನೆಗಳು ಇಂದಿಗೆ ಉಳಿದಿವೆ. ನಾವು ನೀವೆಲ್ಲ ಎಷ್ಟೇ ಪ್ರಯತ್ನಿಸಿದರೂ ಅವರು ಎಚ್ಚರಾಗಲಾರರು; ’ತುಳಿದರು’ ಎಂದು ಹುಯಿಲಿಡುತ್ತ ಬರೆಯುವುದೇ ಇವತ್ತಿಗೆ ಒಂದು ಜೀವನೋಪಾಯ.

    ಉತ್ತರ
  2. Suvarna
    ಜುಲೈ 13 2015

    Good Masage Sir I like It

    ಉತ್ತರ
  3. ಜುಲೈ 14 2015

    ಉತ್ತಮ ಲೇಖನ ಸರ್‍! ಶಾರದೆ ಯಾವ ಪದವಿ ಪಡೆದಿದ್ದಾಳೆ ಎಂದು ಪ್ರಶ್ನಿಸುವ ಸಚಿವರು ತಮ್ಮ ಕ್ಷೇತ್ರದಲ್ಲಿ ಎಷ್ಟು ಹಿಂದುಳಿದ ಜನಾಂಗವನ್ನು ಮೇಲಕ್ಕೇತ್ತಲು ಪ್ರಯತ್ನಿಸುತ್ತಿದ್ದಾರೆ ಎಂದು ನನಗೆ ಗೊತ್ತು. ಅವರು ನಮ್ಮ ಶಾಸಕರೇ! ಯಾರನ್ನೋ ಮೆಚ್ಚಿಸುವ ಉದ್ದೇಶದಿಂದ ಆ ಮಾತುಗಳನ್ನಾಡಿದ್ದಾರೆ. ಥೂ ಇಂತಹ ಜನಪ್ರತಿನಿಧಿಗಳು ಬೇಕಾ?

    ಉತ್ತರ
  4. shripad
    ಜುಲೈ 14 2015

    ಏನೇ ಬರೆದರೂ ಮನುವಾದ ಎಂದು ಟೀಕಿಸುತ್ತಿದ್ದ ನಿಲುಮೆ ಮಿತ್ರರೊಬ್ಬರು ಪಕ್ಕಾ ವೈದಿಕ ರೀತಿಯಲ್ಲಿ ತಿಲಾಂಜಲಿ ಕೊಟ್ಟಿದ್ದಾರೆ. ಹಾಗಾಗಿ ಪ್ರಗತಿಪರರ ಪರವಾಗಿ “ಈ ಲೇಖನ ಪುರೋಹಿತಶಾಹಿಯ ಪುನರ್ ಸ್ಥಾಪನೆಯ ಹುನ್ನಾರ; ವೈದಿಕ, ಮನುವಾದಿ, ಪ್ರತಿಗಾಮಿ ಲೇಖನ; ಶರಣರು ಪ್ರತಿಪಾದಿಸಿದ ವೈಚಾರಿಕ ನಿಲುವನ್ನು ತುಳಿಯುವುದು ಬಿಟ್ಟು ಶೂದ್ರ, ಶೋಷಿತ ವರ್ಗದವರೊಬ್ಬರು ಹೀಗೆ ಬರೆಯುವುದು ವಿಷಾದನೀಯ” ಎಂದು ಅನಿವಾರ್ಯವಾಗಿ ಬರೆಯಬೇಕಾಗಿದೆ, ಕ್ಷಮಿಸಿ.

    ಉತ್ತರ
    • shripad
      ಜುಲೈ 14 2015

      ಏನೇ ಬರೆದರೂ ಮನುವಾದ ಎಂದು ಟೀಕಿಸುತ್ತಿದ್ದ ನಿಲುಮೆ ಮಿತ್ರರೊಬ್ಬರು ಪಕ್ಕಾ ವೈದಿಕ ರೀತಿಯಲ್ಲಿ ತಿಲಾಂಜಲಿ ಕೊಟ್ಟಿದ್ದಾರೆ. ಹಾಗಾಗಿ ಪ್ರಗತಿಪರರ ಪರವಾಗಿ “ಈ ಲೇಖನ ಪುರೋಹಿತಶಾಹಿಯ ಪುನರ್ ಸ್ಥಾಪನೆಯ ಹುನ್ನಾರ; ವೈದಿಕ, ಮನುವಾದಿ, ಪ್ರತಿಗಾಮಿ ಲೇಖನ; ಶರಣರು ಪ್ರತಿಪಾದಿಸಿದ ವೈಚಾರಿಕ ನಿಲುವನ್ನು ತುಳಿಯುವುದು ಬಿಟ್ಟು ಶೂದ್ರ, ಶೋಷಿತ ವರ್ಗದವರೊಬ್ಬರು ಹೀಗೆ ಬರೆಯುವುದು ವಿಷಾದನೀಯ” ಎಂದು ಅನಿವಾರ್ಯವಾಗಿ ಬರೆಯಬೇಕಾಗಿದೆ, ಕ್ಷಮಿಸಿ.

      ಉತ್ತರ
  5. Goutham
    ಆಕ್ಟೋ 18 2015

    This author can not understand. Because he don’t want to understand

    ಉತ್ತರ

Leave a reply to Goutham ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments