ಕ್ರಿಕೆಟ್ ನಿಂದ ಆಜೀವ ನಿಷೇಧ: ಮೇಯಪ್ಪನ್,ರಾಜ್ ಕುಂದ್ರಾಗೆ ಸಂತಸ !!
– ಪ್ರವೀಣ್ ಕುಮಾರ್ ಮಾವಿನಕಾಡು
ಚೆನ್ನೈ ನ ಹೊರವಲಯದ ರೆಸಾರ್ಟ್ ಒಂದರಲ್ಲಿ ಗುರುನಾಥ್ ಮೇಯಪ್ಪನ್ ಮತ್ತು ರಾಜ್ ಕುಂದ್ರಾ ರವರು ಜಂಟಿಯಾಗಿ ಆಯೋಜಿಸಿದ್ದ ಸಂತೋಷಕೂಟದಲ್ಲಿ,ತಂಡದ ಹಲವು ಆಟಗಾರರು ಹಾಗೂ ಬುಕ್ಕಿಗಳನ್ನುದ್ದೇಶಿಸಿ ಮಾತನಾಡುತ್ತಾ ಇಬ್ಬರೂ ಸಹಾ ತಮಗೆ ಎಲ್ಲಾ ಮಾದರಿಯ ಕ್ರಿಕೆಟ್ ನಿಂದ ಆಜೀವ ನಿಷೇಧ ಹೇರಿದ ಕ್ರಮವನ್ನು ಸ್ವಾಗತಿಸಿದ್ದಾರೆ ಮತ್ತು ನಿಷೇಧ ಹೇರಿದ ಕ್ರಮಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ! ಇಷ್ಟು ವರ್ಷಗಳ ಕಾಲ ಐಪಿಎಲ್ ನ ಜವಾಬ್ಧಾರಿಯಿಂದಾಗಿ ಬೆಟ್ಟಿಂಗ್ ನಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಕೊಳ್ಳಲು ಸಾಧ್ಯವಾಗಿರಲಿಲ್ಲ.ಇನ್ನು ಮುಂದೆ ನಾವುಗಳು ಪೂರ್ಣ ಪ್ರಮಾಣದಲ್ಲಿ ಬೆಟ್ಟಿಂಗ್ನಲ್ಲಿ ತೊಡಗಿಕೊಳ್ಳಲು ಯಾವುದೇ ತೊಂದರೆ ಇಲ್ಲ.ಇದರಿಂದ ತಮಗೆಲ್ಲರಿಗೂ ದುಪ್ಪಟ್ಟು ಲಾಭವಾಗಲಿದೆ ಎಂದು ಬುಕ್ಕಿಗಳನ್ನುದ್ದೇಶಿಸಿ ಮಾತನಾಡುತ್ತಾ ಹೇಳಿದರೆಂದು ನಂಬಲನರ್ಹ ಮೂಲಗಳಿಂದ ತಿಳಿದುಬಂದಿದೆ.
ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡವನ್ನು 2 ವರ್ಷ ಅಮಾನತು ಮಾಡಿದ್ದರೂ ಸಹಾ ನಮ್ಮ ತಂಡದ ಭವಿಷ್ಯಕ್ಕೆನೂ ತೊಂದರೆ ಇಲ್ಲ,ಈ ರೀತಿಯ ತೀರ್ಪು ಪ್ರಕಟವಾಗಬಹುದೆನ್ನುವ ಅನುಮಾನ ನಮಗೆ ಮೊದಲೇ ಇದ್ದ ಪರಿಣಾಮ ಈ ಮೊದಲೇ ತೀರ್ಮಾನಿಸಿದಂತೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಹೆಸರನ್ನು “ಸೂಪರ್ ಕಿಂಗ್ಸ್ ಆಫ್ ಚೆನ್ನೈ” ಎಂದೂ, ರಾಜಸ್ಥಾನ್ ರಾಯಲ್ಸ್ ತಂಡದ ಹೆಸರನ್ನು “ರಾಯಲ್ಸ್ ಆಫ್ ರಾಜಸ್ಥಾನ್” ಎಂದೂ ಬದಲಿಸಿ ಹೊಸದಾಗಿ ನೋಂದಣಿ ಮಾಡಿಸಿ ತಂಡವನ್ನು ಕಣಕ್ಕಿಳಿಸಲಾಗುವುದು ಎಂದು ಮಾಜಿ ರಾಜಸ್ಥಾನ್ ರಾಯಲ್ಸ್ ತಂಡದ ಮಾಲೀಕರಲ್ಲೊಬ್ಬರಾದ ರಾಜ್ ಕುಂದ್ರಾ ತಿಳಿಸಿದರು.
ಪ್ರಾಂಚೈಸಿಗಳನ್ನು ಅಮಾನತುಗೊಳಿಸಲಾಗಿದ್ದರೂ ತಂಡದಲ್ಲಿರುವ ಆಟಗಾರರಿಗೆ ಈ ಆದೇಶ ಅನ್ವಯವಾಗದಿರುವ ಕಾರಣ ನಮ್ಮ ಹೊಸಾ ತಂಡಗಳಾದ ಸೂಪರ್ ಕಿಂಗ್ಸ್ ಆಫ್ ಚೆನ್ನೈ ಮತ್ತು ರಾಯಲ್ಸ್ ಆಫ್ ರಾಜಸ್ಥಾನ್ ತಂಡಗಳಲ್ಲಿ ಬಹುತೇಕ ಹಳೆಯ ಆಟಗಾರರೇ ಮುಂದುವರಿಯಲು ಯಾವುದೇ ತೊಂದರೆ ಇಲ್ಲ.ಆದ್ದರಿಂದ ನಮ್ಮ ತಂಡದಲ್ಲಿ ಆಡಿದ ಬಹುತೇಕ ಆಟಗಾರರನ್ನು ಹೊಸಾ ತಂಡದಲ್ಲಿಯೂ ಉಳಿಸಿಕೊಳ್ಳಲು ಪ್ರಯತ್ನಿಸಲಾಗುವುದು, ಆದ್ದರಿಂದ ಪ್ರಿಯ ಬುಕ್ಕಿಗಳಾಗಲೀ ಅಥವಾ ನಮ್ಮ ಆಟಗಾರರಾಗಲೀ ಭವಿಷ್ಯದ ಕುರಿತು ಚಿಂತಿಸುವ ಅಗತ್ಯವಿಲ್ಲ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ತೀರ್ಪಿನನ್ವಯ ಆಜೀವ ನಿಷೇಧಕ್ಕೊಳಗಾಗಿರುವ ರಾಜ್ ಕುಂದ್ರಾರವರು ತಮ್ಮ ಹೊಸ ತಂಡದ ಸಂಪೂರ್ಣ ಜವಾಬ್ಧಾರಿಯನ್ನು ತಮ್ಮಪತ್ನಿಗೂ,ಗುರುನಾಥ್ ಮೇಯಪ್ಪನ್ ಕಿಂಗ್ಸ್ ಆಫ್ ಚೆನ್ನೈ ತಂಡದ ಸಂಪೂರ್ಣ ಜವಾಬ್ಧಾರಿಯನ್ನು ತಮ್ಮ ಪತ್ನಿಗೂ ಬುಕ್ಕಿಗಳ ಸಮಕ್ಷಮದಲ್ಲೇ ಹಸ್ತಾಂತರಿಸಿದರು ಎಂದು ತಿಳಿದುಬಂದಿದೆ!
*ವಿ.ಸೂ:ಈ ಸುದ್ದಿಯು ಕೇವಲ ಸುಳ್ಸುದ್ದಿ ಹಾಗೂ ಕಾಲ್ಪನಿಕವಾಗಿದ್ದು,ಪ್ರಭಾವಿಗಳು ಕಾನೂನು ಮತ್ತು ನ್ಯಾಯಾಲಯಗಳು ನೀಡುವ ತೀರ್ಪುಗಳನ್ನು ತಮಗೆ ಬೇಕಾದಂತೆ ತಿರುಚಿ ಬಳಸಿಕೊಳ್ಳುತ್ತಿರುವುದನ್ನು ನೋಡಿ ಕಲ್ಪಿಸಿಕೊಂಡಿದ್ದಾಗಿರುತ್ತದೆ.ಈ ಸುದ್ದಿಯು ಕೇವಲ ಮನರಂಜನೆಗಾಗಿ ಮಾತ್ರ.