ವಿಷಯದ ವಿವರಗಳಿಗೆ ದಾಟಿರಿ

Archive for

20
ಆಗಸ್ಟ್

ಮಲ್ಟಿಪ್ಲೆಕ್ಸ್ ಗಳಲ್ಲಿನ್ನು ಕನ್ನಡ ರೀ-ಮೇಕ್ ಚಿತ್ರಗಳ ಪ್ರದರ್ಶನ ಕಡ್ಡಾಯ!

– ಪ್ರವೀಣ್ ಕುಮಾರ್ ಮಾವಿನಕಾಡು

Nilume Sulsuddi - Kannada Film Dubbingರಾಜ್ಯದ ಎಲ್ಲಾ ಮಲ್ಟಿಪ್ಲೆಕ್ಸ್ ಗಳಲ್ಲಿ ಕನ್ನಡ ರೀ ಮೇಕ್ ಚಿತ್ರಗಳ ಪ್ರದರ್ಶನ ಮಾಡಲೇಬೇಕು ಎಂದು ಮಲ್ಟಿಪ್ಲೆಕ್ಸ್ ಮಾಲೀಕರಿಗೆ ಸಿ.ಎಂ.ತಾಕೀತು ಮಾಡಿದ್ದಾರೆ.ಅಲ್ಲದೇ ಟಿಕೆಟ್ ದರ ಕೂಡ ಕಡಿಮೆ ಮಾಡುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ.ಅಷ್ಟೇ ಅಲ್ಲದೇ ಮಲ್ಟಿಪ್ಲೆಕ್ಸ್ ಗಳಲ್ಲಿ ಕನ್ನಡ ರೀಮೇಕ್ ಚಿತ್ರ ಪ್ರದರ್ಶನ ಮತ್ತು ಅದರ ದರ ನಿಗದಿ ಮಾಡುವ ಸಂಬಂಧ ವಾರ್ತಾ ಮತ್ತು ಪ್ರಚಾರ ಖಾತೆ ಸಚಿವರವರ ನೇತೃತ್ವದಲ್ಲಿ ಶೀಘ್ರದಲ್ಲೇ ಸಮಿತಿ ರಚಿಸಲಾಗುವುದು ಎಂದು ಮಾನ್ಯ ಮುಖ್ಯಮಂತ್ರಿಗಳು ನಿರ್ಮಾಪಕರಿಗೆ ಭರವಸೆ ನೀಡಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಡಬ್ಬಿಂಗ್ ವಿವಾದ ಭುಗಿಲೆದ್ದಿರುವ ಬೆನ್ನಲ್ಲೇ ತಮ್ಮ ಇನ್ನೂ ಹಲವಾರು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕನ್ನಡ ಚಲನ ಚಿತ್ರ ನಿರ್ಮಾಪಕರ ಸಂಘದ ವತಿಯಿಂದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಂಭಾಗದಲ್ಲಿ ಕಳೆದ ೧೦ ದಿನಗಳಿಂದ ಸರಣಿ ಉಪವಾಸ ಸತ್ಯಾಗ್ರಹ ಕೈಗೊಂಡಿರುವ ನೂರಾರು ನಿರ್ಮಾಪಕರನ್ನು ಖುದ್ದು ಮುಖ್ಯಮಂತ್ರಿಗಳೇ ಭೇಟಿ ಮಾಡಿ ತುರ್ತುಸಭೆ ನಡೆಸಿದ ಸಂದರ್ಭದಲ್ಲಿ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ.ಇದರಿಂದ ಕನ್ನಡಿಗರೂ ಮಲ್ಟಿಪ್ಲೆಕ್ಸ್ ಗಳಿಗೆ ಹೋಗಬಹುದು” ಎಂದು ಚಲನಚಿತ್ರ ನಿರ್ಮಾಪಕರ ಸಂಘದ ಸದಸ್ಯ R.S.ಬಾಬು ಹರ್ಷ ವ್ಯಕ್ತಪಡಿಸಿದರು.

ಮತ್ತಷ್ಟು ಓದು »

20
ಆಗಸ್ಟ್

Sin ಅನ್ನು ಭಾಷಾಂತರಿಸಿದ ಪಾಪವೇ ವಸಾಹತುಪ್ರಜ್ಞೆ

– ವಿನಾಯಕ ಹಂಪಿಹೊಳಿ

Colonial ConsciousnessSin ಶಬ್ದದ ಅರ್ಥವೇನು ಎಂದು ಕೇಳಿದರೆ ಎಗ್ಗಿಲ್ಲದೇ ಪಾಪ ಎಂದು ಉಚ್ಚರಿಸಿಬಿಡುತ್ತೇವೆ. ಇದರಲ್ಲಿ ಅಷ್ಟು ತಲೆಕೆಡಿಸಿಕೊಳ್ಳುವಂಥದ್ದೇನೂ ಇಲ್ಲ ಎಂದೇ ಅನ್ನಿಸುತ್ತದೆ. ಮಾಡಬಾರದ್ದನ್ನು ಮಾಡುವದು ಪಾಪ ಎಂದು ನಾವೂ ಹೇಳುತ್ತೇವೆ. ಪಾಶ್ಚಿಮಾತ್ಯ ಕ್ರೈಸ್ತರೂ ಹೇಳುತ್ತಾರೆ. ಹೀಗಾಗಿ ಒಂದು ಹಂತದಲ್ಲಿ Sin=ಪಾಪ ಎನ್ನುವದು ಒಪ್ಪಿತವೇ. ಹಾಗೆಯೇ sinner=ಪಾಪಿ ಎಂಬುದೂ ಸರಿ. ಆದರೆ ಇಲ್ಲೊಂದು ಸಮಸ್ಯೆಯಿದೆ. ಪಾಪದ ವಿರುದ್ಧ ಪದ ಏನು ಎಂದಾಗ ಕ್ಷಣವೂ ತಡಮಾಡದೇ ಪುಣ್ಯ ಎನ್ನುತ್ತೇವೆ. ಆದರೆ Sin ಶಬ್ದದ ವಿರುದ್ಧ ಪದ ಏನು ಎಂದು ಕೇಳಿದರೆ?

ಮುಗ್ಗರಿಸಿ ಬಿದ್ದ ಅನುಭವವಾಯಿತಲ್ಲವೇ? ಇರಲಿ, Thesaurus ನಲ್ಲಿ Sin ಗೆ ಎಷ್ಟೊಂದು ವಿರುದ್ಧಪದಗಳಿವೆಯೋ ಅವನ್ನೆಲ್ಲ ಗಮನಿಸೋಣ, ಅವುಗಳು advantage, good, goodness, good deed, kindness, obedience, right, virtue, perfection, behavior, morality.ಇವೆಲ್ಲ ಶಬ್ದಗಳೂ ಪುಣ್ಯದ ಸುತ್ತ ಗಿರಕಿ ಹೊಡೆಯುತ್ತವೆಯೇ ವಿನಃ ಒಂದಾದರೂ ಪುಣ್ಯವನ್ನು ಸಂಪೂರ್ಣವಾಗಿ ಪ್ರತಿನಿಧಿಸುವಷ್ಟು ಪುಣ್ಯ ಕಟ್ಟಿಕೊಂಡಿದೆಯೇ? “ನೀವು ಜೀವನದಲ್ಲಿ ಬಹಳಷ್ಟು ಪುಣ್ಯ ಗಳಿಸಿದ್ದೀರಿ” ಎನ್ನುವದನ್ನು ಹೇಗೆ ಭಾಷಾಂತರಿಸುತ್ತೀರಿ?

ಮತ್ತಷ್ಟು ಓದು »

18
ಆಗಸ್ಟ್

ಬುದ್ಧಿಜೀವಿಗಳ ಬ್ರಾಹ್ಮಣ ಥಿಯರಿಗಳು ಬರುತ್ತಿರುವುದೆಲ್ಲಿಂದ? – ಭಾಗ ೨

– ರೋಹಿತ್ ಚಕ್ರತೀರ್ಥ

ಬುದ್ಧಿಜೀವಿಗಳ ಬ್ರಾಹ್ಮಣ ಥಿಯರಿಗಳು ಬರುತ್ತಿರುವುದೆಲ್ಲಿಂದ? – ಭಾಗ ೧

ಬ್ರಾಹ್ಮಣಎಲ್ಲ ವಿಷಯಗಳಲ್ಲೂ, ಇಪ್ಪತ್ತೊಂದನೆ ಶತಮಾನದ ಸಂದರ್ಭವನ್ನು ನೋಡಿ ಎನ್ನುವ ನಾವು ಬ್ರಾಹ್ಮಣ ಮತ್ತು ಉಳಿದ ಜಾತಿಗಳ ನಡುವಿನ ಸಂಬಂಧಗಳ ವಿಷಯ ಬಂದಾಗ ಮಾತ್ರ ಇತಿಹಾಸಕ್ಕೆ ಹಾರುವುದು ಯಾಕೆ ಎನ್ನುವುದು ಸದ್ಯದ ಯುಗದಲ್ಲಿ ಬದುಕುತ್ತಿರುವ ನನ್ನಂಥವರಿಗೆ ಬಿಡಿಸಲಾರದ ಒಗಟಾಗಿದೆ. ಇಪ್ಪತ್ತೊಂದನೆ ಶತಮಾನದ ಬ್ರಾಹ್ಮಣ, ಉಳಿದ ಜಾತಿ-ಪಂಥದ ಜನರಿಗಿಂತ ಯಾವ ವಿಷಯದಲ್ಲೂ ಹೆಚ್ಚಿನ ಸವಲತ್ತುಗಳನ್ನು ಪಡೆದು ಹುಟ್ಟಿಬಂದ ಸೂಪರ್‍ಮ್ಯಾನ್ ಅಲ್ಲ. ನಿಜಕ್ಕಾದರೆ, ಅವನು ನೂರಾರು ಹರಿತಖಡ್ಗಗಳನ್ನು “ಬ್ರಾಹ್ಮಣ”ನೆಂಬ ತನ್ನ ಮೊಂಡುಗತ್ತಿಯಿಂದ ಎದುರಿಸಬೇಕಾಗಿದೆ. ತನ್ನ ಬಾಲ್ಯ, ಶಾಲೆ, ಕಾಲೇಜುಗಳಲ್ಲಿ ಒಂದು ದಿನವೂ ಜಾತೀಯತೆ ಆಚರಿಸದ ಬ್ರಾಹ್ಮಣನಿಗೆ ಕೂಡ ಅಂಥದೊಂದು ವಿಷಸರ್ಪದ ಮೊದಲ ಕಡಿತದ ಅನುಭವವಾಗುವುದು, ಕಾಲೇಜಿನ ಫೀಸ್ ಕಟ್ಟುವಾಗ. ಪ್ರವಾಸಿಸ್ಥಳಗಳಲ್ಲಿ, “ಭಾರತೀಯರಿಗೆ 5 ರುಪಾಯಿ ಟಿಕೇಟು; ವಿದೇಶಿಯರಿಗೆ 50 ರುಪಾಯಿ” ಎಂದು ಬೋರ್ಡ್ ಬರೆದಿರುವಂತೆ, ಬೇರೆ ಜಾತಿಯವನು ಕಟ್ಟಿದ ಫೀಸಿಗೆ ಎರಡೋ ಮೂರೋ ಸೊನ್ನೆ ಸೇರಿಸಿ ವಿಧಿಸುವ ದೊಡ್ಡಮೊತ್ತವನ್ನು ತಾನು ಕಟ್ಟಬೇಕಾಗಿ ಬಂದಾಗ, ಅವನಿಗೆ ಜಾತೀಯತೆಯ ಮೊದಲ ಮುಖದರ್ಶನವಾಗುತ್ತದೆ. ಆದರೆ, ಈ ಸರಕಾರೀ ಜಾತೀಯತೆಯ ಬಗ್ಗೆ ಎಲ್ಲಾದರೂ ಆತ ಪ್ರತಿಭಟಿಸಲು ಅವಕಾಶ ಇದೆಯೆ?

ಭಾರತೀಯ ವಿಜ್ಞಾನ ಸಂಸ್ಥೆಯಂತಹ ಸರಕಾರೀ ಸಂಸ್ಥೆಗಳಲ್ಲಿ, ಪದವಿ/ಪಿಎಚ್‍ಡಿ ಕೋರ್ಸುಗಳ ಸಂದರ್ಶನಕ್ಕೆ ಆಯ್ಕೆಯಾದ ಕೆಲವೊಂದು ಜಾತಿಯ ವಿದ್ಯಾರ್ಥಿಗಳು ಸಂದರ್ಶನಕ್ಕೆ ಎರಡು ದಿನ ಮೊದಲು ಸಂಸ್ಥೆಗೆ ಬಂದು, “ತರಬೇತಿ” ಪಡೆಯುವ ಅವಕಾಶ ಇದೆ. ಪ್ರತಿಭೆಯೊಂದೇ ಮಾನದಂಡವೆಂದು ಪರಿಗಣಿಸಬೇಕಿದ್ದ ಇಂತಹ ಉನ್ನತ ಸಂಸ್ಥೆಗಳಲ್ಲಿ ಕಾಣಸಿಗುವ ಈ ಜಾತೀಯತೆಯನ್ನು ಬ್ರಾಹ್ಮಣವಟು ಎಂದಾದರೂ ಪ್ರಶ್ನೆ ಮಾಡಿದ್ದಿದೆಯೆ? ಇನ್ನು ಉದ್ಯೋಗದ ವಿಷಯಕ್ಕೆ ಬಂದಾಗ ನಮ್ಮ ದೇಶದಲ್ಲಿ ನಡೆಯುವ “ಸರಕಾರೀ ಜಾತೀಯತೆ”ಯ ಅಂದಾಜು ಮಾಡುವುದು ಯಾವ ಬ್ರಹ್ಮನಿಗೂ ಸಾಧ್ಯವಿಲ್ಲದ ಮಾತು. ಮೀಸಲಾತಿ, ವಿಶೇಷ ಸವಲತ್ತು, ಸಬಲೀಕರಣಗಳ ಹೆಸರಿನಲ್ಲಿ ಹುಟ್ಟುಹಾಕಿದ ಈ ಯಾವ ವ್ಯವಸ್ಥೆಯನ್ನೂ ನಾವು ಜಾತೀಯತೆ ಎಂದು ಪರಿಗಣಿಸದೇ ಇರುವಾಗ, ಶತಶತಮಾನಗಳ ಹಿಂದೆ ಬ್ರಾಹ್ಮಣ ಮಾಡಿದ್ದಾನೆನ್ನಲಾದ ತಾರತಮ್ಯ ಮಾತ್ರ “ಜಾತೀಯತೆ” ಆಗುವುದು ಹೇಗೆ? ನನಗಂತೂ ಗೊತ್ತಿಲ್ಲದ ರಹಸ್ಯ ಇದು!
ಮತ್ತಷ್ಟು ಓದು »

17
ಆಗಸ್ಟ್

ಬುದ್ಧಿಜೀವಿಗಳ ಬ್ರಾಹ್ಮಣ ಥಿಯರಿಗಳು ಬರುತ್ತಿರುವುದೆಲ್ಲಿಂದ? – ಭಾಗ ೧

– ರೋಹಿತ್ ಚಕ್ರತೀರ್ಥ

ಬ್ರಾಹ್ಮಣ!

ಬ್ರಾಹ್ಮಣಕಳೆದ ಎರಡೂವರೆ ಸಾವಿರ ವರ್ಷಗಳಲ್ಲಿ ಇತ್ತೋ ಇಲ್ಲವೋ ಗೊತ್ತಿಲ್ಲ; ಆದರೆ ಕಳೆದ ಹತ್ತು-ಹದಿನೈದು ವರ್ಷಗಳಿಂದ ಇದೊಂದು ಶಬ್ದ ಬಹಳ ಶಬ್ದ ಮಾಡುತ್ತಿದೆ! ಸೊಳ್ಳೆ ಕಡಿದು ಕಾಲು ಕೆಂಪಾಯಿತು ಎನ್ನುವುದರಿಂದ ಹಿಡಿದು ಗ್ರೀಸ್ ದೇಶದ ದಿವಾಳಿತನದವರೆಗೆ ಈ ಜಗತ್ತಿನಲ್ಲಿ ನಡೆದುಹೋದ ಯಾವ ಸಮಸ್ಯೆಯ ಬಗ್ಗೆ ನಮ್ಮ ಬುದ್ಧಿಜೀವಿಗಳನ್ನು ಕೇಳಿದರೂ, ಅವರ ಉತ್ತರ ಶುರುವಾಗುವುದು ಹೀಗೆ: “ಹಸಿವು! ಈ ದೇಶದ ಶೋಷಿತ ಸಮುದಾಯದ ಹಸಿವನ್ನು ತುಳಿದು ಅವರ ಬೆವರ ಹನಿಗಳ ಮೇಲೆ ಅರಮನೆ ಕಟ್ಟಿಕೊಂಡವರು ವೈದಿಕರು. ಇವರ ಉದರದ ಉರಿ ಇಂದುನಿನ್ನೆಯದಲ್ಲ! ಆಳದಲ್ಲಿ ಅಡಗಿ ಸಿಂಬೆ ಸುತ್ತಿಕೊಂಡು ಮಲಗಿರುವ ಈ ಅಸಹನೆಯ ದಂತಗಳಲ್ಲಿ ಪುರಾತನ ಕಾಲದ ವಿಷವಿದೆ. ನೊಂದವನ, ಹಸಿದವನ, ಕೆಳಗೆ ಬಿದ್ದು ಧೂಳಾದವನ ಗೋಳಿಗೆ ಕರಗದೆ ನುಲಿಯದೆ ಸೆಟೆದು ಬಿದ್ದ ಆರ್ಯಪುತ್ರರ ಕರುಳುಗಳಲ್ಲಿ ಕ್ರೌರ್ಯವಿದೆ…” ಈ ಮಾತುಗಳನ್ನು ಹಾಗೇ ಒಂದು ಸಿನೆಮಾದೃಶ್ಯದಂತೆ ಕಲ್ಪಿಸಿನೋಡಿ. ನಿಮಗೆ ಕಾಣುವುದೇನು? ಒಬ್ಬ ಬಳಲಿ ಬೆಂಡಾದ, ಕಡಿದುಹಾಕಿದ ಬಾಳೆಗಿಡದಂತೆ ನೆಲಕ್ಕೆ ಚೆಲ್ಲಿಬಿದ್ದ “ಶೋಷಿತ” ಮತ್ತು ಅವನನ್ನು ಹಿಗ್ಗಾಮುಗ್ಗಾ ಥಳಿಸುವ; ಒದೆಯುವ; ತುಚ್ಛಮಾತುಗಳಿಂದ ಹೀಯಾಳಿಸುವ ರಾಕ್ಷಸರೂಪೀ ಘೋರ “ಆರ್ಯಪುತ್ರ”! ಆ ದಲಿತ ಜೀವ ಉಳಿಸೆಂದು ದಯನೀಯವಾಗಿ ಬೇಡಿಕೊಳ್ಳುತ್ತಿದ್ದಾನೆ; ಆದರೆ ಅವನ ಜೀವ ತೆಗೆದೇ ಸಿದ್ಧ ಎಂದು ಶಪಥ ಹಾಕಿದಂತೆ ಈ ಬ್ರಾಹ್ಮಣ ಅವನಿಗೆ ಬಾರಿಸುತ್ತಿದ್ದಾನೆ! ಜನಿವಾರದ ಈ ಹಾರುವನಿಗೆ ಹುಲಿಗಿರುವಂತಹ ವಿಕಾರ ಕೋರೆಹಲ್ಲುಗಳು! ಅದರಂಚಿನಿಂದ ಕೀವಿನಂತೆ ಒಸರುತ್ತಿರುವ ಅಸಹನೆಯ ವಿಷ! ಅಬ್ಬಾ!

ಮತ್ತಷ್ಟು ಓದು »

16
ಆಗಸ್ಟ್

ವಿಜಯವಾಣಿಯಲ್ಲಿ ’ಬುದ್ಧಿಜೀವಿಗಳ ಮೂಢನಂಬಿಕೆಗಳು’ ಪುಸ್ತಕ ಪರಿಚಯ

ಬುದ್ಧಿಜೀವಿಗಳ ಮೂಢನಂಬಿಕೆಗಳು - ವಿಜಯವಾಣಿ

16
ಆಗಸ್ಟ್

ಲಿಫ್ಟ್ ಎಂಬ ಮಾಯಾ ಪೆಟ್ಟಿಗೆ

– ನಾಗೇಶ್ ಕುಮಾರ್ ಸಿ ಎಸ್,ಚೆನ್ನೈ

ಲಿಫ್ಟ್ನಮ್ಮ ಇಂದಿನ ನಾಗರೀಕತೆಯ ಕುರುಹಾಗಿ ಎಲ್ಲೆಲ್ಲೂ ಕಾಂಕ್ರೀಟ್ ಜಂಗಲ್ ಎಂಬ ತೆಗಳಿಕೆಗೆ ಗುರಿಯಾದ ಬಹು ಅಂತಸ್ತಿನ ಕಟ್ಟಡಗಳೊಂದಿಗೇ ಅವಶ್ಯಕವಾಗಿ ಒದಗಿಬಂದ ಸೌಕರ್ಯ: ಲಿಫ್ಟ್ ಅಥವಾ ಎಲಿವೇಟರ್ ಎಂಬ ಏರುವ, ಇಳಿಯುವ ಏಣಿ…ಮಿಂಚಿನ ವೇಗದಲ್ಲಿ ಹಿತವಾಗಿ ಸುಯ್ಯೆಂದು ನಮಗೆ ಹಲವು ಮಹಡಿಗಳನ್ನು ಶ್ರಮವಿಲ್ಲದೇ ಏರಿಸಿ ಇಳಿಸಿಬಲ್ಲ ಈ ಉಪಯುಕ್ತ ಸಾಧನ ಯಾರಿಗೆ ಬೇಡ?

ಬ್ರಿಟಿಷ್ ಇಂಗ್ಲೀಶಿನಲ್ಲಿ “ಲಿಫ್ಟ್” ಎಂದೂ, ಅಮೆರಿಕನ್ ಪರಿಭಾಷೆಯಲ್ಲಿ “ಎಲಿವೇಟರ್” ಎಂದೂ ಕರೆಯಲ್ಪಡುವ ಈ ಹಾರುವ ಪೆಟ್ಟಿಗೆಗೆ ಒಂದು ಅಂತಸ್ತಿನಿಂದ ಇನ್ನೊಂದಕ್ಕೆ ಕೇವಲ ಸಾಮಾನು ಸರಂಜಾಮು ಸಾಗಿಸಲು ಮಾತ್ರ ಬಳಸಿದರೆ “ ಡಂಬ್ ವೇಯ್ಟರ್”( ಮೂಕ ಮಾಣಿ?) ಎಂದೂ  ಹೆಸರಿಸಿದ್ದಾರೆ.

“ನಿಮ್ಮ ಆರೋಗ್ಯಕ್ಕೆ ಒಳ್ಳೆಯದು, ಮೆಟ್ಟಿಲೇರಿ..” ಎಂದು ನಿಮ್ಮ ವೈದ್ಯರು ಎಷ್ಟೇ ಬೋಧಿಸಿದರೂ. ಅದನ್ನು ಮನೆಯಲ್ಲೆ ಮರೆತು,, ಆ ಸಾಲು ಸಾಲು ಲಿಫ್ಟ್‌ಗಳನ್ನು ಬಹು ಅಂತಸ್ತಿನ ಕಚೇರಿಗಳಲ್ಲಿ ಕಂಡ ಒಡನೆಯೇ ಬಟನ್ ಪ್ರೆಸ್ ಮಾಡಿ ಅದರ ಸಂಖ್ಯೆಯನ್ನು ಕಾತರದಿಂದ ಶಬರಿಯಂತೆ ಕಾಯುತ್ತ ನಿಲ್ಲುವ ಪೀಳಿಗೆ ನಮ್ಮದು…

ಮತ್ತಷ್ಟು ಓದು »

15
ಆಗಸ್ಟ್

ಸ್ವಾತಂತ್ರ್ಯದ ಜಾಡಿನಲ್ಲಿ ಕಾಡು ಜನರ ಹಾಡು

ರಾಕೇಶ್ ಶೆಟ್ಟಿ

ಕಾಡುಜನರ ಹಾಡುಶಾಲಾ ದಿನಗಳಲ್ಲಿ ಜನವರಿ ೨೬ ಮತ್ತು ಆಗಸ್ಟ್ ೧೫ ಬಂದರೇ ಏನೋ ಒಂದು ರೀತಿಯ ಸಡಗರ.ಆ ಸಡಗರಕ್ಕೆ ಸಾತಂತ್ರ್ಯದ ಹಬ್ಬ ಅನ್ನುವ ಪುಟ್ಟ ಖುಷಿಯೂ ಕಾರಣವಾದರೆ,ದೊಡ್ಡ ಮಟ್ಟದಲ್ಲಿ ಕಾರಣವಾಗುತಿದಿದ್ದು “ನೃತ್ಯ,ಡ್ರಿಲ್” ಇತ್ಯಾದಿಗಳ ರಿಹರ್ಸಲ್ ನೆಪದಲ್ಲಾದರೂ ಮೇಷ್ಟ್ರುಗಳ ಪಾಠದಿಂದ ತಪ್ಪಿಸಿಕೊಳ್ಳಬಹುದಲ್ಲ ಅನ್ನುವುದು.ಆಟದ ಒಂದೇ ಒಂದು ಪಿರಿಯಡ್ ಅನ್ನೂ ಇಡದೇ ಯಾವಾಗಲೂ ಪಾಠ ಪಾಠ ಅನ್ನುತಿದ್ದ ನಮ್ಮ ಶಾಲೆಯ ಮಕ್ಕಳಿಗಂತೂ ಸ್ವಾತಂತ್ರ್ಯದ ಹಬ್ಬ ಅಕ್ಷರಶಃ ಸಾತಂತ್ರ್ಯವನ್ನೇ (ತರಗತಿಯಿಂದ ಹೊರಬರುವ) ತರುತಿತ್ತು.

ಪ್ರತಿವರ್ಷ ಜನವರಿ ೨೬ ಮತ್ತು ಆಗಸ್ಟ್ ೧೫ಕ್ಕೆ ನಮ್ಮ ಶಾಲೆಯಿಂದ ಡ್ರಿಲ್ ನಲ್ಲಿ ಭಾಗವಹಿಸುತಿದ್ದೆವು.ಆದರೆ ನಾವು ೭ನೇ ತರಗತಿಗೆ ಬಂದಾಗ (ಬಹುಷಃ ೧೯೯೬ ಇಸವಿ ಇರಬೇಕು) ಈ ಬಾರಿ ಯಾವುದಾದರೂ ನೃತ್ಯವನ್ನು ಮಾಡೋಣ ಅನ್ನುವ ನಿರ್ಧಾರ ಮಾಡಿದ್ದರು ಮೇಷ್ಟ್ರುಗಳು.’ರಾಯರು ಬಂದರು ಮಾವನ ಮನೆಗೆ’ ಚಿತ್ರದಿಂದ “ಅಡವಿ ದೇವಿಯ ಕಾಡು ಜನಗಳ ಈ ಹಾಡು” ಹಾಡನ್ನು ಆಯ್ಕೆ ಮಾಡಿದರು.

ತರಬೇತಿಯೂ ಶುರುವಾಯಿತು.ಪ್ರತಿವರ್ಷ ಡ್ರಿಲ್ ಮಾಡಿ ಸಾಕಾಗಿದ್ದ ನಮಗೆ ಇದು ಹೊಸತಾಗಿಯೇ ಕಾಣಿಸಿತು.ಅದರ ಜೊತೆಗೆ ಬೋನಸ್ ನಂತೆ ಇದರ ತರಬೇತಿಗೆಂದೇ ತುಸು ಹೆಚ್ಚೇ ಸಮಯವೂ ಸಿಗಲಾರಂಭಿಸಿತ್ತು.ಒಂದು ದಿನ ಬೆಳಗ್ಗಿನ ತರಬೇತಿಯನ್ನು ಮುಗಿಸಿಕೊಂಡು ಮಧ್ಯಾಹ್ನದ ಊಟ ಮುಗಿಸಿ ಆಟವಾಡುತಿದ್ದೆವು.ಶಾಲೆಯಲ್ಲಿದ್ದ ಪುಟ್ಟ ಹುದೋಟದಲ್ಲಿನ ಹಳದಿ ಬಣ್ಣದ (ಸೂರ್ಯಕಾಂತಿಯಂತಿರುವ)ಹೂವು ನೋಡಿದವನಿಗೆ ಕೀಳೋಣ ಅನ್ನಿಸಿತು.ಕಿತ್ತ ಮೇಲೆ ಮುಡಿದು ಕೊಳ್ಳಲು ಜಡೆಯಿಲ್ಲವಲ್ಲ! ಏನು ಮಾಡೋದು ಅನ್ನುವಾಗ ಗೆಳೆಯನ ಬೆನ್ನು ಕಾಣಿಸಿತು.ಬೆರಳುಗಳ ನಡುವೆ ಹೂವಿನ ತೊಟ್ಟನ್ನು ಇಟ್ಟುಕೊಂಡು ಹೂವನ್ನು ಗೆಳೆಯನ ಬಿಳಿ ಬಣ್ಣದ ಶರ್ಟಿಗೆ ಪಟೀರ್ ಎನ್ನುವಂತೆ ಬಡಿದೆ.ಏನಾಶ್ಚರ್ಯ! ಅವನ ಬಿಳಿ ಬಣ್ಣದ ಶರ್ಟಿನಲ್ಲಿ ಹಳದಿ ಬಣ್ಣದ ಹೂವಿನ ಫೋಟೋ ಕಾಪಿ ಮೂಡಿತ್ತು.

ಮತ್ತಷ್ಟು ಓದು »

14
ಆಗಸ್ಟ್

ನೂರರ ಹೊಸ್ತಿಲಲ್ಲಿ ಕನ್ನಡ ಸಾಹಿತ್ಯ ಪರಿಷತ್ತು

– ರಾಜಕುಮಾರ.ವ್ಹಿ.ಕುಲಕರ್ಣಿ, ಮುಖ್ಯಗ್ರಂಥಪಾಲಕ
ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ, ಬಾಗಲಕೋಟ

ಕನ್ನಡ ಸಾಹಿತ್ಯ ಪರಿಷತ್ತುಕನ್ನಡ ಸಾಹಿತ್ಯ ಪರಿಷತ್ತು ಈಗ ನೂರರ ಹೊಸ್ತಿಲಲ್ಲಿ ನಿಂತಿದೆ. 1915 ರಲ್ಲಿ ಸ್ಥಾಪನೆಯಾದ ಕನ್ನಡ ಸಾಹಿತ್ಯ ಪರಿಷತ್ತು ಅನೇಕ ಏಳು ಬೀಳುಗಳ ನಡುವೆಯೂ ನೂರು ವರ್ಷಗಳನ್ನು ಪೂರೈಸುತ್ತಿರುವುದು ಕನ್ನಡಿಗರಾದ ನಮಗೆಲ್ಲ ಅಭಿಮಾನದ ಸಂಗತಿಯಿದು. ಕನ್ನಡ ಭಾಷೆ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯ ರಕ್ಷಣೆ ಮತ್ತು ಬೆಳವಣಿಗೆಗಾಗಿ ಅಂದಿನ ಮೈಸೂರಿನ ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಗೆ ಆದತ್ಯೆ ನೀಡಿದರು. ಇಂಥದ್ದೊಂದು ಕನ್ನಡ ಸಂಸ್ಥೆಯ ಸ್ಥಾಪನೆಗೆ ಆ ದಿನಗಳ ಅನೇಕ ಸಾಹಿತಿಗಳ ಬೇಡಿಕೆಯೂ ಇತ್ತು. ಸರ್ ಎಮ್.ವಿಶ್ವೇಶ್ವರಯ್ಯ ಮತ್ತು ಕರ್ಪೂರ ಶ್ರೀನಿವಾಸರಾವ್ ಕನ್ನಡ ಸಾಹಿತ್ಯದ ರಕ್ಷಣೆಗಾಗಿ ಪರಿಷತ್ತನ್ನು ಸ್ಥಾಪಿಸಲು ಕಂಕಣಬದ್ಧರಾಗಿ ದುಡಿದರು. ಒಟ್ಟಾರೆ ಎಲ್ಲರ ಪ್ರಯತ್ನ ಮತ್ತು ಆಸೆಯಂತೆ 05.05.1915 ರಂದು ಕನ್ನಡ ಸಾಹಿತ್ಯ ಪರಿಷತ್ತು ಅಸ್ತಿತ್ವಕ್ಕೆ ಬಂದಿತು. ಬೆಂಗಳೂರಿನ ಶಂಕರಪುರ ಬಡಾವಣೆಯಲ್ಲಿನ ಸಣ್ಣ ಕೊಠಡಿಯೊಂದರಲ್ಲಿ ಸ್ಥಾಪನೆಯಾದ ಪರಿಷತ್ತಿಗೆ ನಂತರದ ದಿನಗಳಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರ, ಉತ್ತಂಗಿ ಚೆನ್ನಪ್ಪ, ಹಂ.ಪಾ.ನಾಗರಾಜಯ್ಯ, ಮೂರ್ತಿರಾವ್, ವೆಂಕಟಸುಬ್ಬಯ್ಯ, ಗೊರುಚ, ಚಂಪಾ ಅವರಂಥ ಖ್ಯಾತನಾಮ ಸಾಹಿತಿಗಳ ಅಧ್ಯಕ್ಷತೆ ಲಭ್ಯವಾಯಿತು. ಸಣ್ಣ ಕೊಠಡಿಯಿಂದ ಸ್ವತಂತ್ರ ಕಟ್ಟಡಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಸ್ಥಳಾಂತರಗೊಂಡು ಕನ್ನಡ ಸಾಹಿತ್ಯದ ಮತ್ತು ನಾಡಿನ ರಕ್ಷಣೆಯ ಕೆಲಸದಲ್ಲಿ ತನ್ನನ್ನು ತಾನು ಸಕ್ರಿಯವಾಗಿ ತೊಡಗಿಸಿಕೊಂಡಿತು. ಪುಸ್ತಕಗಳ ಪ್ರಕಟಣೆ, ಸಾಹಿತ್ಯ ಸಮ್ಮೇಳನದ ಏರ್ಪಾಡು, ದತ್ತಿ ಉಪನ್ಯಾಸ ಇತ್ಯಾದಿ ಚಟುವಟಿಕೆಗಳಿಂದ ಕನ್ನಡ ಸಾಹಿತ್ಯ ಪರಿಷತ್ತು ಬಹುಬೇಗ ಜನರಿಗೆ ಹತ್ತಿರವಾಯಿತು. ಪ್ರಾರಂಭದ ದಿನಗಳಲ್ಲಿ ದೊರೆತ ಸಾಹಿತ್ಯಾಸಕ್ತರ ನೆರವು ಮತ್ತು ಅವರುಗಳ ಪ್ರಾಮಾಣಿಕ ದುಡಿಮೆಯ ಪರಿಣಾಮ ಕನ್ನಡ ಸಾಹಿತ್ಯ ಪರಿಷತ್ತು ಬಹಳಷ್ಟು ಕನ್ನಡಪರ ಕಾರ್ಯಕ್ರಮಗಳನ್ನು ಸಂಘಟಿಸಲು ಹಾಗೂ ಯಶಸ್ಸನ್ನು ಕಾಣಲು ಸಾಧ್ಯವಾಯಿತು.

ಮತ್ತಷ್ಟು ಓದು »

13
ಆಗಸ್ಟ್

ಕಲಾಂ, ಕಯ್ಯಾರ, ಕೃಷ್ಣಪ್ಪ

– ರೋಹಿತ್ ಚಕ್ರತೀರ್ಥ

ಕಲಾಂ, ಕಯ್ಯಾರ, ಕೃಷ್ಣಪ್ಪ“You either die a hero or you live long enough to see yourself become the villain” ಅಂತ ಇಂಗ್ಲೀಷಿನಲ್ಲೊಂದು ಜಾಣ್ನುಡಿ. ಮಹಾಸಾಧನೆ ಮಾಡಿದವರು ಬೇಗನೆ ತೀರಿಕೊಂಡರೆ ಜಗತ್ತು ಅವರನ್ನು ಹಾಡಿಹೊಗಳುತ್ತದೆ. “ಏನು ಪ್ರತಿಭೆಯ ಬೀಸು ಕಣ್ರಿ! ಇನ್ನೊಂದಿಷ್ಟು ವರ್ಷ ಬದುಕಿದ್ದರೆ ಚಿಂದಿ ಉಡಾಯಿಸಿಬಿಡ್ತಾ ಇದ್ರು!” ಎಂದು ಜನ ಹೇಳುವುದನ್ನು ಕೇಳಿದ್ದೇವೆ. ಆದರೆ, ಪ್ರಾಯ ಆಗುತ್ತಾಹೋದಂತೆ ನಮ್ಮಲ್ಲಿ ಹೆಚ್ಚಿನವರು ಅಪ್ರಸ್ತುತರಾಗುತ್ತಾ ಹೋಗುತ್ತಾರೆ. ಒಂದು ಕಾಲದಲ್ಲಿ ಅವರ ಸಾಧನೆ ಎಂದು ಕಂಡದ್ದು ಈಗ ಜನಕ್ಕೆ ಸಾಮಾನ್ಯ ಸಂಗತಿ ಅನ್ನಿಸತೊಡಗುತ್ತದೆ. ಅವರ ಬಗ್ಗೆ ಇಲ್ಲಸಲ್ಲದ ಶಂಕೆ, ಅವಮಾನ, ಹೀಯಾಳಿಕೆಗಳು ಹುಟ್ಟಿಕೊಳ್ಳುತ್ತವೆ. ಒಂದೊಮ್ಮೆ ಜೋರಾಗಿ ಉರಿದಿದ್ದ ದೊಂದಿ ಇದೀಗ ಎಣ್ಣೆ ಬತ್ತಿ, ಬತ್ತಿ ಕರಟಿ ಯಾರಿಗೂ ಬೇಡದ ಕಮಟು ಹೊಗೆಯಾಗಿ ತನ್ನ ಬದುಕು ಮುಗಿಸುತ್ತದೆ. ಇಂಥ ಮಾತಿಗೆ ಉದಾಹರಣೆಯಾಗದೆ ಕೊನೆವರೆಗೂ ತಮ್ಮ ಜೀವನ, ಚಾರಿತ್ರ್ಯ, ಪ್ರತಿಭೆ ಮತ್ತು ಮೌಲ್ಯಗಳ ಪ್ರತಿಪಾದನೆಯಲ್ಲಿ ಕಿಂಚಿದೂನವಾಗದಂತೆ ನೋಡಿಕೊಂಡು ಸಾರ್ಥಕವಾಗಿ ಇಹದ ವ್ಯಾಪಾರ ಮುಗಿಸುವವರು ವಿರಳ. ಎರಡು ವಾರದ ಅಂತರದಲ್ಲಿ ನಮ್ಮನ್ನು ಬಿಟ್ಟು ತೆರಳಿದ ವಿಜ್ಞಾನಿ ಡಾ. ಅಬ್ದುಲ್ ಕಲಾಂ, ಕವಿ ಕಯ್ಯಾರ ಕಿಞ್ಞಣ್ಣ ರೈ ಮತ್ತು ಆರ್‍ಎಸ್‍ಎಸ್ ಮಾರ್ಗದರ್ಶಿ ನ. ಕೃಷ್ಣಪ್ಪ ಮೇಲಿನ ಇಂಗ್ಲೀಷ್ ನುಡಿಗೆ ಸವಾಲೆನ್ನುವಂತೆ ಬದುಕಿ, ಗಾದೆಗಳನ್ನೂ ಸುಳ್ಳು ಮಾಡಬಹುದು ಎಂದು ತೋರಿಸಿದರು.

ಮಹಾತ್ಮರು ತೀರಿಕೊಂಡಾಗೆಲ್ಲ ನನಗೆ ನೆನಪಿಗೆ ಬರುವ ಕವಿತೆ ನಿಸಾರ್ ಅಹಮದರ “ರಾಮನ್ ಸತ್ತ ಸುದ್ದಿ”. ಅದು ಶುರುವಾಗುವುದು ಹೀಗೆ:
ಮತ್ತಷ್ಟು ಓದು »

12
ಆಗಸ್ಟ್

ಉಡುಗೊರೆ

– ಗುರುರಾಜ್ ಕೊಡ್ಕಣಿ,ಯಲ್ಲಾಪುರ

ಉಡುಗೊರೆ“ರೀಟಾ….ನಿನಗೆಷ್ಟು ಸಲ ಹೇಳೊದು ಪಲ್ಲವಿ ಬ೦ದ್ರೆ ಒಳಗೆ ಕಳಸ್ಬೇಡಾ ಅ೦ತಾ …” ಎ೦ದು ಸಿಟ್ಟಿನಿ೦ದ ಕೂಗಿದ ಫಣಿಕೇತ .

“ಸಾರಿ ಸರ್….ನಾನು ಎಷ್ಟು ಹೇಳಿದ್ರೂ ಕೇಳದೆ ಒಳಗೆ ನುಗ್ಗಿದ್ದಾಳೆ ಅವಳು” ಎ೦ದುತ್ತರಿಸಿದಳು ಅವನ ಸೆಕ್ರೆಟರಿ .

ಫಣಿಕೇತ ಪುರೋಹಿತ್:ಶ್ರೀಮ೦ತಿಕೆ ಎ೦ದರೇ ಹೇಗಿರುತ್ತದೆ ಎ೦ಬುದಕ್ಕೆ ಅತ್ಯುತ್ತಮ ಉದಾಹರಣೆ ಅವನು.ಆತ ದೇಶದ ಹತ್ತು ಆಗರ್ಭ ಶ್ರೀಮ೦ತರಲ್ಲೊಬ್ಬ.’ಫಣಿಕೇತ ಗ್ರೂಪ್ ಆಫ್ ಇ೦ಡಸ್ಟ್ರೀಸ್’ನ ಏಕೈಕ ಮಾಲಿಕ.ಫಣಿಕೇತ ಟೆಕ್ಸಟೈಲ್ಸ್, ಫಣಿಕೇತ ಕೆಮಿಕಲ್ಸ್,ಫಣಿಕೇತ ಅಪಾರ್ಟಮೆ೦ಟ್ಸ್,ಫಣಿಕೇತ ಸಿಮೆ೦ಟ್ಸ್ ಹೀಗೆ ಸರಿಸುಮಾರು ಇಪ್ಪತ್ತು ಕ೦ಪನಿಗಳನ್ನು ಹೊ೦ದಿದೆ ಫಣಿಕೇತ ಗ್ರುಪ್ ಆಫ್ ಇ೦ಡಸ್ಟ್ರೀಸ್.ವರ್ಷಕ್ಕೆ ಸುಮಾರು ಹದಿನೈದು ಸಾವಿರ ಕೋಟಿಗಳಷ್ಟು ಲಾಭವಿರುವ ದೇಶದ ಕೆಲವೇ ಕೆಲವು ಸ೦ಸ್ಥೆಗಳ ಪೈಕಿ ಒ೦ದು ಎ೦ಬ ಹೆಗ್ಗಳಿಕೆ ಅದರದ್ದು.

ಇ೦ಥಹ ಕ೦ಪನಿಯ ಒಡೆಯನಾದ ಫಣಿಕೇತ ಪುರೋಹಿತ್ ಎಲ್ಲದರಲ್ಲೂ ಬೆಸ್ಟ್ ಎನ್ನುವುದನ್ನೇ ಬಯಸುತ್ತಾನೆ.ಅವನ ಕ೦ಪನಿಯ೦ತೂ ಬೆಸ್ಟ್ ಎನ್ನುವುದರಲ್ಲಿ ಸ೦ಶಯವೇ ಇಲ್ಲ.ಆತನ ಶ್ರೇಷ್ಠತೆಯ ವ್ಯಸನ ಎ೦ಥದ್ದೆ೦ದರೇ ಅವನ ಕಾರು,ಅವನ ಬ೦ಗ್ಲೆ,ಅವನ ಬಟ್ಟೆಬರೆ,ಅವನ ಸೆಕ್ರೆಟರಿ,ಕೊನೆಗೆ ಅವನು ಬಳಸುವ ಪೆನ್ನುಗಳಲ್ಲಿಯೂ ಸಹ ಆತ ಅತ್ಯುತ್ತಮವಾದುದ್ದನ್ನೇ ಹುಡುಕುತ್ತಾನೆ.ಹಾಗೆ೦ದು ಆತ ದುರ೦ಹಕಾರಿಯಲ್ಲ.ಫಣಿಕೇತ ಪುರೋಹಿತ್ ಪ್ರತಿ ವರ್ಷ ತನ್ನ ಕ೦ಪನಿಯ ಪರವಾಗಿ ಆಶ್ರಮಗಳಿಗೆ,ಅನಾಥಾಲಯಗಳಿಗೆ ಲಕ್ಷಾ೦ತರ ರೂಪಾಯಿಗಳನ್ನು ದಾನ ಮಾಡುತ್ತಾನೆ.ಯಾರಿಗೂ ಮೋಸ ಮಾಡುವುದಿಲ್ಲ.ಸಾಮಾಜಿಕವಾಗಿ ಅವನದ್ದು ತು೦ಬಾ ಒಳ್ಳೆಯ ವ್ಯಕ್ತಿತ್ವ.
ಮತ್ತಷ್ಟು ಓದು »