ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 6, 2015

ಶತಮಾನ ಕಂಡ ಕಾದಂಬರಿ: ಮಾಡಿದ್ದುಣ್ಣೋ ಮಹಾರಾಯ

‍ನಿಲುಮೆ ಮೂಲಕ

– ರಾಘವೇಂದ್ರ ಅಡಿಗ ಎಚ್ಚೆನ್

ಮಾಡಿದ್ದುಣ್ಣೋ ಮಹಾರಾಯಸ್ನೇಹಿತರೇ ನಾನಿಲ್ಲಿ ಹೇಳ ಹೊರಟಿರುವ ಕಾದಂಬರಿ ಕನ್ನಡ ಕಾದಂಬರಿಗಳಲ್ಲೆಲ್ಲಾ ಅತ್ಯಂತ ಪ್ರಮುಖವಾದದ್ದು ಹಾಗೂ ಒಂದು ಶತಮಾನವನ್ನು ಕಂಡಂತದೂ ಆಗಿದೆ. ಕನ್ನಡದಲ್ಲಿ ಕಾದಂಬರಿ ಪ್ರಕಾರವನ್ನು ಜನಪ್ರಿಯಗೊಳಿಸಿದವರು ಕಾರಂತರು, ಅ.ನ.ಕೃ. ಮುಂತಾದವರಾದರೆ ಕಾದಂಬರಿ ಪ್ರಕಾರವನ್ನು ಹುಟ್ಟುಹಾಕಿದವರು ಗುಲ್ವಾಡಿ ವೆಂಕಟರಾವ್ (ಇಂದಿರಾಬಾಯಿ-ಕನ್ನಡದ ಮೊದಲ ಸಾಮಾಜಿಕ ಕಾದಂಬರಿ) ಮೈಸೂರು ಸೂರ್ಯನಾರಾಯಣ ಭಟ್ಟ ಪುಟ್ಟಣ್ಣ (ಎಂ.ಎಸ್. ಪುಟ್ಟಣ್ಣ) ನವರುಗಳು. ಇದರಲ್ಲಿ ಎಂ.ಎಸ್. ಪುಟ್ಟಣ್ಣನವರು ಬರೆದ ಪ್ರಥಮ ಕಾದಂಬರಿ-ಮಾಡಿದ್ದುಣ್ಣೋ ಮಹಾರಾಯ (1915) ಗೆ ಇದೀಗ ಶತಮಾನದ ಸಂಭ್ರಮ. ಈ ಹಿನ್ನೆಲೆಯಲ್ಲಿ ಕೃತಿಕಾರರಾದ ಪುಟ್ಟಣ್ಣ ಹಾಗೂ ಕೃತಿಯ ಕುರಿತಂತೆ ನಾಲ್ಕು ಮಾತುಗಳನ್ನು ನಿಮ್ಮೊಡನೆ ಹಂಚಿಕೊಳ್ಳುವ ಇರಾದೆ ನನ್ನದು.

ಅನೇಕರಿಗೆ ಇದಾಗಲೇ ಪುಟ್ಟಣ್ಣನವರ ಬಗೆಗೆ ತಿಳಿದಿರಬಹುದು ಆದರೂ ಇಲ್ಲಿ ಅವರ ಜೀವನದ ಕುರಿತಂತೆ ಸ್ವಲ್ಪ ತಿಳಿದುಕೊಂಡು ಬಳಿಕ ಕಾದಂಬರಿಯ ಕುರಿತು ವಿಚಾರ ಮಾಡೋಣ

ಪುಟ್ಟಣ್ಣ (ಲಕ್ಷ್ಮೀನರಸಿಂಹ ಶಾಸ್ತ್ರಿ)ನವರು ಹುಟ್ಟಿದ್ದು ಮೈಸೂರಿನಲ್ಲಿ (21-11-1854). ತಂದೆ ಸೂರ್ಯನಾರಾಯಣ ಭಟ್ಟ, ತಾಯಿ ಲಕ್ಷ್ಮಮ್ಮ. ಹುಟ್ಟಿದ ಹತ್ತು ದಿವಸದಲ್ಲೇ ತಾಯಿಯನ್ನು ಕಳೆದುಕೊಂಡು ಬೆಳದದ್ದು ಸೋದರ ಮಾವನ ಮನೆಯಲ್ಲಿ. ಪ್ರಾರಂಭಿಕ ವಿದ್ಯಾಭ್ಯಾಸ ಖಾಸಗಿ ಮಠಗಳಲ್ಲಿ ಪೂರೈಸಿದ ಪುಟ್ಟಣ್ಣನವರು ಬಳಿಕ ರಾಜಾ ಸ್ಕೂಲಿನಲ್ಲಿ (ಇಂದಿನದ ಮಹಾರಾಜಾ ಕಾಲೇಜು) ಎಫ್. ಎ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಕೋಲಾರದ ಪ್ರೌಢಶಾಲೆಯಲ್ಲಿ ಸಹ ಅಧ್ಯಾಪಕರಾಗಿ ನೇಮಕಗೊಂಡರು.ಮದರಾಸಿನಲ್ಲಿ ಬಿ.ಎ. ಪದವಿ ವ್ಯಾಸಂಗವನ್ನು ಮುಗಿಸಿದ ಇವರು ಅಧ್ಯಾಪಕ ಪದವಿ ಬಿಟ್ಟು ಬೆಂಗಳೂರಿನ ಚೀಫ್ ಕೋರ್ಟಿನಲ್ಲಿ (ಈಗಿನ ಹೈಕೋರ್ಟಿನಲ್ಲಿ) ಭಾಷಾಂತರಕಾರರಾಗಿ ದುಡಿದರು. 1867 ರಲ್ಲಿ ಅವರನ್ನು ಚಿತ್ರದುರ್ಗದ ಅಮಲ್ದಾರನ್ನಾಗಿ ನೇಮಿಸಲಾಯಿತು. ಮುಂದೆ ನೆಲಮಂಗಲ, ಚಾಮರಾಜನಗರ, ಬಾಗೇಪಲ್ಲಿ, ಮುಳಬಾಗಿಲು, ಹೊಸದುರ್ಗಗಳಲ್ಲಿ  ಅಮಲ್ದಾರರಾಗಿ  ಕಾರ್ಯ ನಿರ್ವಹಿಸಿದರು. ಬೆಂಗಳೂರಿನ ತೆರಿಗೆದಾರರ ಸಂಘಟಕರಾಗಿದ್ದ ಅವರು ಆ ದಿನಗಳಲ್ಲಿಯೇ ದಾಖಲೆಗಳನ್ನು ಕನ್ನಡದಲ್ಲಿ ಮೂಡಿಸಲು ಕಾರಣರಾದರು.
ಇನ್ನು ವಕೀಲರಾಗಿ, ವಿಶ್ವವಿದ್ಯಾಲಯ ಶಿಕ್ಷಣ ಮಂಡಲಿಗಳಲ್ಲಿ ಪರೀಕ್ಷಕರಾಗಿ, ಪಠ್ಯಪುಸ್ತಕ ಸಮಿತಿ ಸದಸ್ಯರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪಕ ಸದಸ್ಯರಾಗಿ, ಕೆಲಕಾಲ ಕಾರ್ಯದರ್ಶಿಯಾಗಿ ವಹಿಸಿದ ಜವಾಬ್ದಾರಿಗಳು.ಹಲವಾರಿದ್ದವು.

ಪುಟ್ಟಣ್ಣನವರದು ಕನ್ನಡದ ಪುನರುಜ್ಜೀವನದ ಕಾಲ. ಸಾಹಿತ್ಯರಚನೆಗೆ ರಾಜಾಶ್ರಯ ಸಮೃದ್ಧವಾಗಿದ್ದ ಕಾಲ. ಹಳೆ ಕಾವ್ಯಗಳ ಪ್ರಕಟಣೆ, ಭಾಷಾಂತರ, ಸ್ವತಂತ್ರ ಕೃತಿಗಳ ರಚನೆಗಳು ಕಾಣಿಸಿಕೊಂಡ ಸಾಹಿತ್ಯ ಸಂದರ್ಭದಲ್ಲಿ ಇವರು ಬರೆದದ್ದು. ‘ಮಾಡಿದ್ದುಣ್ಣೋ ಮಹಾರಾಯ’, ‘ಮುಸುಕು ತೆಗೆಯೇ ಮಾಯಾಂಗನೆ’, ‘ಅವರಿಲ್ಲದೂಟ’ ಇವರ ಕಾದಂಬರಿಗಳು.ಆಡುಮಾತಿನ ಮೇಲೆ ರಚಿಸಿದ ಕಾದಂಬರಿಗಳು ಬಹುಬೇಗ ಜನಪ್ರಿಯವಾದುವು.ಇವರ ಕಥಾಸಂಕಲನಗಳು – ನೀತಿ ಚಿಂತಾಮಣಿ, ಪುಟ್ಟಣ್ಣ ಹೇಳಿದ ಕಥೆಗಳು, ಪೇಟೆಮಾತೇನಜ್ಜಿ. ಜೀವನ ಚರಿತ್ರೆಗಳು-ಚೀನಾದೇಶದ ತತ್ವಜ್ಞಾನಿ ಕನ್‌ಫ್ಯೂಷಿಯಸ್ಸನನ್ನು ಕುರಿತು ಕಂಫ್ಯೂಷನ ಚರಿತ್ರೆ, ಕುಣಿಗಲ್ ರಾಮಾಶಾಸ್ತ್ರಿಗಳ ಚರಿತ್ರೆ, ಹೈದರಾಬಾದಿನ ಮಂತ್ರಿ ಸಾಲಾರ್ಜಂಗ್ ಮ್ಯೂಜಿಯಂ ಸ್ಥಾಪಕ ಸರ್ ಸಾಲಾರಜಂಗನ ಚರಿತ್ರೆ, ಬಹಮನಿ ಸಂಸ್ಥಾನದ ಮಂತ್ರಿ ಮಹಮದ್ ಗವಾನನ ಚರಿತ್ರೆ, ಛತ್ರಪತಿ ಶಿವಾಜಿ ಮಹಾರಾಜ ಮೊದಲಾದುವು.

ಶೇಕ್ಸ್‌ಪಿಯರನ ನಾಟಕ ರೂಪಾಂತರ ಜಯಸಿಂಹರಾಜ ಚರಿತ್ರೆ (ಸಿಂಬಲೈನ್) ; ಹೇಮಚಂದ್ರ ರಾಜ ವಿಲಾಸ (ಕಿಂಗ್‌ಲಿಯರ್) ; ಹೇಮಲತ (ಹ್ಯಾಮ್ಲೆಟ್) ; ಸುಮತಿ ಮದನ ಸುಕುಮಾರ ಚರಿತ್ರೆ (ದ ಹಿಸ್ಟರಿ ಆಫ್ ಸ್ಯಾಂಡ್ ಫೋರ್ಡ್ ಅಂಡ್ ಮರ್ಟನ್) ; ಪರ್ಷಿಯನ್ ಮೂಲದ ಹಾತಿಂತಾಯ್ (ಅಪ್ರಕಟಿತ) ಪಾಳೇಗಾರರನ್ನು ಕುರಿತು ಬರೆದ ಕೃತಿಗಳು-ಪಾಳೇಗಾರರು, ಚಿತ್ರದುರ್ಗದ ಪಾಳೇಗಾರರು, ಗುಮ್ಮನಾಯಕನ ಪಾಳಯದ ಪಾಳಯಗಾರರು, ಹಾಗಲವಾಡಿ ಪಾಳಯಗಾರರು, ಇಕ್ಕೇರಿ ಸಂಸ್ಥಾನ ಚರಿತ್ರೆ. ಪಠ್ಯಪುಸ್ತಕದ ಕೊರತೆ ನೀಗಲು ಬರೆದ ಕೃತಿಗಳು-ಹಿಂದು ಚರಿತ್ರ ದರ್ಪಣ, ಹಿಂದು ಚರಿತ್ರ ಸಂಗ್ರಹ, ಕನ್ನಡ ಒಂದನೆಯ ಪುಸ್ತಕ, ಕನ್ನಡ ಲೇಖನ-ಲಕ್ಷಣ. – ಇವು ಪುಟ್ಟಣ್ಣನವರ ವೈವಿದ್ಯಮಯ ಸಾಹಿತ್ಯ ಸೃಷ್ಟಿಯಲ್ಲಿ ಮೂಡಿಬಂದ ಪ್ರಮುಖ ಕೃತಿಗಳಾಗಿವೆ.

ಇದಲ್ಲದೆ ಪುಟ್ಟಣ್ಣನವರು ಎಂ. ಬಿ. ಶ್ರೀನಿವಾಸಯ್ಯಂಗಾರ್ಯರೊಡನೆ ೧೮೮೩ರ ಅಕ್ಟೋಬರ್ ಮಾಸದಲ್ಲಿ ‘ಹಿತಬೋಧಿನಿ’ ಮಾಸಪತ್ರಿಕೆಯನ್ನೂ ಆರಂಭಿಸಿದರು. ಮುಂದೆ ಅವರು ಮದರಾಸಿಗೆ ಉನ್ನತ ವ್ಯಾಸಂಗಕ್ಕೆ ತೆರಳಿದಾಗ ಭವಿಷ್ಯದಲ್ಲಿ ಪ್ರಸಿದ್ಧ ಪತ್ರಿಕೊಧ್ಯಮಿಗಳಾಗಿ ರೂಪುಗೊಂಡ ವೆಂಕಟಕೃಷ್ಣಯ್ಯನವರ ಬೆಳೆಯುವ ಪ್ರತಿಭೆಯನ್ನು ಗುರುತಿಸಿ ಅವರಿಗೆ ಪತ್ರಿಕೆಯ ನಿರ್ವಹಣೆಯನ್ನು ವಹಿಸಿಕೊಟ್ಟರು.

ಹೀಗೆ ಕನ್ನಡಕ್ಕಾಗಿಯೇ ದುಡಿದ ಮಹಾಮಹಿಮ ಪುಟ್ಟಣ್ಣನವರು 1930ರ ಏಪ್ರಿಲ್ 11ರಂದು. ತಮ್ಮ ಇಹಯಾತ್ರೆಯನ್ನು ಮುಗಿಸಿದರು.

ಇದಿಷ್ಟು ಪುಟ್ಟಣ್ಣನವರ ವ್ಯಕ್ತಿ ವಿಚಾರವಾಯಿತು. ಇನ್ನು ಕಾದಂಬರಿಯ ವಿಚಾರಕ್ಕೆ ಬರೋಣ ಕನ್ನದದಲ್ಲಿ ಕಾದಂಬರಿ ಸಾಹಿತ್ಯ ಪ್ರಕಾರವನ್ನು ಹುಟ್ಟುಹಾಕಿದ ಪುಟ್ಟಣ್ಣನವರು ಕಾದಂಬರಿಗಳಿಗೆ ವಸ್ತು ನಮ್ಮಲ್ಲೇ ವಿಫುಲವಾಗಿದೆ ಎಂಬುದನ್ನು ಕಂಡುಕೊಂಡ ಮೊದಲಿಗರು. ನ್ಯಾಯಕ್ಕೆ ಗೆಲುವು ಅನ್ಯಾಯಕ್ಕೆ ಸೋಲು ಇದು ಪುಟ್ಟಣ್ಣನವರ ಕಾದಂಬರಿಯಲ್ಲಿ ಕಾಣಿಸಿಕೊಳ್ಳುವ ಪ್ರಮುಖ ಸಿದ್ದಾಂತ. ಹೆಣ್ಣಿನ, ಹಣದ ಆಸೆಗೆ ಬಿದ್ದು ಸಮಾಜದ ನಿಯಮಗಳನ್ನು ಮೀರಲೆತ್ನಿಸುವವರಿಗೆ ಉಳಿಗಾಲವಿಲ್ಲ ಎನ್ನುವುದ ಅವರ ನಂಬಿಕೆಯಾಗಿತ್ತು. ಅದರ ಹಿನ್ನೆಲೆಯಲ್ಲಿಯೇ ತಮ್ಮ ಮೊದಲ ಕಾದಂಬರಿಗೆ -ಮಾಡಿದ್ದುಣ್ಣೋ ಮಹಾರಾಯ ಎಂದು ನಾಮಕರಣ ಮಾಡಿದರು.

ಲಂಚಕೋರರು ಅವರಿಂದುಂಟಾಗುವ ಪ್ರಮಾದಗಳು; ಗ್ರಾಮಗಳಲ್ಲಿ ಕಕ್ಷಿ ಅದರ ದೋಷಗಳು; ಮೈಸೂರ ಮುಮ್ಮಡಿ ಶ್ರೀಕೃಷ್ಣರಾಜ ಪ್ರಭುವಿನ ಆಸ್ಥಾನ, ಅವರ ಮಹತ್ತರವಾದ ಔದಾರ್ಯ; ಆಸ್ಥಾನದ ನಕಲಿ; ಹೇಳಿದ್ದನ್ನೆಲ್ಲಾ ನಂಬುವ ಗ್ರಾಮವಾಸಿಗಳು; ಪತಿವ್ರತಾ ಚರಿತ್ರೆ; ಸಹಗಮನ; ಗ್ರಾಮಗಳ ಕೊಳಚೆ; ಅತ್ತೆ ಸೊಸೆಯರ ಪರಸ್ಪರ ಕಿರುಕುಳ; ಮಠದ ಉಪಾಧ್ಯಾಯ, ಅವನ ಕ್ರೌರ್ಯ, ಬಾಲಕರಿಗೆ ಅವ ಕೊಡುವ ಶಿಕ್ಷೆ, ಅವನ ಮಹತ್ತರವಾದ ಕೃತಘ್ನತೆ, ವಿದ್ಯಾರ್ಥಿಗಳಿಗೆ ಮಾಡುವ ಕ್ರೂರವಾದ ಶಿಕ್ಷೆ, ಅದರ ಧರ್ಮಸೂಕ್ಷ್ಮ; ಕಾಪಟ್ಟ, ಅದರ ನೀಚಕೃತ್ಯಗಳು; ನಿಜವಾದ ಸೌಂದರ್ಯವನ್ನು ಸೌಂದರ್ಯವಲ್ಲವೆಂದು ಮಾಡುವ ವರ್ಣನೆ; ಪಾತಿವ್ರತ್ಯವನ್ನು ಭಂಗ ಮಾಡಲು ನಡೆಸಿದ ಅತಿ ಹೇಯವಾದ ಪ್ರಯತ್ನ; ಶಾಬರ ಪ್ರಯೋಗದ ನೀಚಕೃತ್ಯ; ಒಬ್ಬ ಐಲು ಮನುಷ್ಯನ ಹರಟೆಯಿಂದ ಹುಟ್ಟುವ ಹಾಸ್ಯ; ಒಬ್ಬ ಹುಟ್ಟು ಕಳ್ಳ ಹೇಳಿಕೊಳ್ಳುವ ಸ್ವವಿಚಾರದ ಕಥೆ; ಶ್ಮಶಾನದಲ್ಲಿ ನಡೆದ ಅತಿಭಯಂಕರವಾದ ವಿಷಯ; ಒಬ್ಬ ಮಹಾಮಂತ್ರವಾದಿ ಮಾಡಿದ ಅದ್ಭುತವಾದ ಕಾರ್ಯ; ಮತ್ತು ಅವನ ಪಾರಮಾರ್ಥಿಕತೆ; ಆದ್ಯಂತವಾಗಿರುವ ನೀತಿಯ ಸಾರಾಂಶ; ಇವೇ ಮೊದಲಾದ ಸಂಗತಿಗಳನ್ನೆಲ್ಲಾ ಆಯಾ ಸ್ಥಳಗಳಲ್ಲಿ ವಿವರಿಸಿದ್ದೇನೆ – ಎಂದು ಪೀಠಿಕಾ ಬಾಗದಲ್ಲಿ ಹೇಳಿಕೊಂಡಿರುವ ಪುಟ್ಟಣ್ಣನವರು ತಮ್ಮ ಕಾದಂಬರಿಯಲ್ಲಿಯೂ ಕಾಲಾನುವರ್ತಿಯಾಗಿ ಇದೇ ಸಂಗತಿಗಳು ಬರುವಂತೆ ನೋಡಿಕೊಂಡಿದ್ದಾರೆ.

ಕಾದಂಬರಿಯಲ್ಲಿ ಬರುವ ಸೀತೆಯ ಪಾತ್ರವೇ ಕೇಂದ್ರಪಾತ್ರವೆನ್ನಬಹುದಾಗಿದೆ. ಇಅವಳನ್ನು ರಾಮಾಯಣಾ ಮಹಾಕಾವ್ಯದ ಸೀತೆಯಂತೆಯೇ ಪತಿವ್ರತಾ ಶಿರೋಮಣಿಯಾಗಿ ಚಿತ್ರಿಸಿದ್ದ ಪುಟ್ಟಣ್ಣ ಸೀತೆಯ ಪಾತ್ರವನ್ನು ಪರಂಪರೆಯ ಸೌಶೀಲ್ಲದ ಕುರುಹಾಗಿ ಬೆಳೆಸಿ ತೋರಿಸಿದ್ದಾರೆ. ಆಸ್ಥಾನ ವಿದ್ವಾಂಸರೂ, ಹೆಸರಾಂತ ಪಂಡಿತರೂ ಆದ ಪಶುಪತಿ ಸಾಂಬಶಾಸ್ತ್ರಿಯ ಮೊಮ್ಮಗಳು, ರಾಜರಿಗೆ ಪೂಜ್ಯರಾದ ಸದಾಶಿವ ದೀಕ್ಷಿತರ ಸೊಸೆ, ಮಹಾದೇವನ ಹೆಂಡತಿ, ತಿಮ್ಮ್ಮನ ಬಲ ಸೊಸೆ. ಹಿರಿಯರು ಕೇಳುವ ಗರತಿಯ ಲಕ್ಷಣಗಳಿಗೆಲ್ಲ ಹೊಂದಿರುವ ಪಾತ್ರ ಸೀತೆಯದು.  ಅಂತೆಯೇ ಮನೆಯಲ್ಲಿ ಮಲ ಅತ್ತೆ ಕೊಡುವ ಕಾಟಗಳನ್ನೆಲ್ಲವನ್ನೂ ಸಹಿಸಿಯೂ ಮನೆತನದ ಗೌರವಕ್ಕಾಗಿ ಹಗಲಿರುಳೂ ಚಿಂತಿಸಿ ಬಾಳ್ವೆ ನಡೆಸುವ ಸೀತೆಯ ಸುತ್ತಲೂ ಕಾಮದ ಬಲೆಯನ್ನು ಹೆಣೆಯಲಾಗಿದೆ. ಆದರೆ ಅವಳ ವಿಶಿಷ್ಟವಾದ ಮನೋ ಸ್ಥಿರತೆ, ತಾಯ್ತನದ ಗುಣ ವಿಶೇಷತೆಗಳಿಂದ ಅವಳು ತನಗೊದಗಿದ ಎಲ್ಲಾ ಕಷ್ಟ ನಷ್ಟಗಳಿಂದಲೂ ಪಾರಾಗುವುದನ್ನು ನಾವು ಕಾಣುತ್ತೇವೆ.

ಇನ್ನು ಕಾದಂಬರಿಯಲ್ಲಿ ಬರುವ ಮುಮ್ಮಡಿ ಕೃಷ್ಣರಾಜ ಒಡೆಯರ ಪಾತ್ರ, ಅವರ ಆಸ್ಥಾನ ವರ್ಣನೆ, ಆಡಳಿತ ಚಿತ್ರಗಳು ಎಂತಹಾ ಓದುಗರಿಗೂ ಮನಸ್ಸಿಗೆ ನಾಟುತ್ತವೆ. ಬಹುಷಃ ಮುಮ್ಮಡಿ ಕೃಷ್ಣರಾಜರ ವ್ಯಕ್ತಿತ್ವವನ್ನ ಇಷ್ಟೋಂದು ಸ್ಪಷ್ತವಾಗಿ, ಮುಂದಿನ ಯಾವ ಕನ್ನಡ ಲೇಖಕನೂ ಕಟ್ಟಿ ಕೊಟ್ಟಿಲ್ಲ ಎಂದರೆ ತಪ್ಪಾಗಲಾರದು. ಇದಕ್ಕೆ ಪುಟ್ಟಣ್ಣನವರು ತಾವು ಬಾಲ್ಯದಲ್ಲಿ ಕಂದ ಮುಮ್ಮಡಿಯವ, ಅವರ ಆಪ್ತವಲಯದವರ ನಿಕಟ ಚಿತ್ರಣವೇ ಕಾರಣವಿರಬೇಕು. (ಮುಮ್ಮಡಿಯವರು ದಿವಂಗತರಾದಾಗ ಪುಟ್ಟಣ್ಣನವರಿಗೆ ಹದಿನಾಲ್ಕು ವರ್ಷ ವಯಸ್ಸು.) “ಪುಟ್ಟಣ್ಣನವರ ಕಾದಂಬರಿಗಳಿಗೆ ನಿಜವಾದ ಪರೋಕ್ಷ ನಾಯಕರೆಂದರೆ ಮುಮ್ಮಡಿ ಕೃಷ್ಣರಾಜ ಒಡೆಯರು. ಆ ಪ್ರಭುವಗಳ ವ್ಯಕ್ತಿ ವರ್ಚಸ್ಸು ಪುಟ್ಟಣ್ಣನವರ ಮನಸ್ಸನ್ನು ಸೂರೆಗೊಂಡಿದೆ. ಕಥೆಗಳು ನಡೆಯುವುದು ಮೈಸೂರಿನಲ್ಲಿ ಅಥವಾ ಸಮೀಪದ ಊರುಗಳಲ್ಲಿ. ಇಲ್ಲಿಯ ಪಾತ್ರಗಳೆಲ್ಲ ಒಮದಲ್ಲ ಒಂದು ರೀತಿಯಲ್ಲಿ ಅವರ ಆಸ್ಥಾನಕ್ಕೆ ಸಂಬಂಧಪಟ್ಟವರು, ಅವರ ಆಶ್ರಿತ ವರ್ಗಕ್ಕೆ ಸೇರಿದವರು. ಹೀಗಿರುವುದರಿಂದ ಮುಮ್ಮಡಿಯವರ ಪ್ರಸ್ತಾಪ ಇಲ್ಲಿ ಮತ್ತೆ ಮತ್ತೆ ಬರುತ್ತದೆ. ಅದು ಬಂದಾಗ ಪುಟ್ಟಣ್ಣನವರ ಲೇಖನಿಗೆ ತಡೆಯಿಲ್ಲ. ಅವರ ಉತ್ಸಾಹಕ್ಕೆ ಮಿತಿಯಿಲ್ಲ. ಮುಮ್ಮಡಿಯವರ ಔದಾರ್ಯ, ಸರಳ ಮನಸ್ಸು, ಗಂಭೀರ ವರ್ಚಸ್ಸು ಇವನ್ನೆಲ್ಲ ವ್ಯಕ್ತ ಪಡಿಸುವ ಎಷ್ಟು ಸಂಗತಿಗಳು ಇಲ್ಲಿ ಅಡಕವಾಗಿವೆ. ಹೀಗೆಂದರೆ ಪ್ರಭುಗಳನ್ನು ಪುಟ್ಟಣ್ಣನವರು ಅಮಾನುಷ ವ್ಯಕ್ತಿಯಾಗಿ ಚಿತ್ರಿಸಿದ್ದಾರೆಂದು ಅರ್ಥವಲ್ಲ. ಹತ್ತಿರವಿದ್ದವರ ಮಾತು ಕೇಳಿ ದೊರೆಗಳ ಚಿತ್ತ ಒಮ್ಮೊಮ್ಮೆ ವ್ಯತ್ಯಾಸವಾಗುತ್ತಿತ್ತೆಂಬುದನ್ನು ಅವರು ಉಲ್ಲೇಖಿಸಿದ್ದಾರೆ. ಅಂಥ ಸಂದರ್ಭದಲ್ಲಿ ಅವರ ನಿಷ್ಕಪಟ ಹೃದಯವನ್ನು ತೆರೆದಿಡಲು ಮರೆತಿಲ್ಲ” – ಎನ್ನುವ ತಿ.ನಂ.ಶ್ರೀ. ಯವರ ಮಾತು ಉಲ್ಲೇಖಾರ್ಹ.

ಇನ್ನು ಕಾದಂಬರಿಯಲ್ಲಿ ಬರುವ ಹಾಸ್ಯ ಸನ್ನಿವೇಶಗಳೂ ಮಹತ್ವದ್ದಾಗಿವೆ. ಸಾಮಾಜಿಕ ವಿರೋಧಾಭಾಸಗಳನ್ನು ಪುಟ್ಟಣ್ಣನವರು ತಮ್ಮ ಹಾಸ್ಯಕ್ಕೆ ಈಡು ಮಾಡುತ್ತಾರೆ.  ಮುಮ್ಮಡಿಯವರ ಆಸ್ಥಾನದ ನಕಲಿ ನಾರಣಪ್ಪನ ಹಾಸ್ಯ ಅಂದಿನ ರಾಜಾಸ್ಥಾನಗಳ ವಿದೂಷಕರ ಕಸಬುದಾರಿಕೆಯ ಹಾಸ್ಯ. ಸರಸ ಸನ್ನಿವೇಶವನ್ನು ಸಹಜವಾಗಿ ಈತ ನಿರ್ಮಿಸಬಲ್ಲನೆಂಬುದಕ್ಕೆ ಸೀತೆ ಮಹಾದೇವರ ಮದುವೆಯ ಚಿತ್ರಣ ಸಾಕ್ಷಿ ನುಡಿಯುತ್ತದೆ. ತಿಮ್ಮಮ್ಮ ಸೊಸೆಯ ಸೌಂದರ್ಯವನ್ನು ಕುರೂಪ ಎಂಬಂತೆ ವರ್ಣಿಸುವುದು ಜನರ ಮನದ ಭಾವನೆಗಳನ್ನು ಸಹ ಹಾಸ್ಯದ ವಸ್ತುವಾಗಿ ನೋಡುವ ಪುಟ್ಟಣ್ಣನವರ ಪ್ರತಿಭೆಗೆ ನಿದರ್ಶನ.

ಆಡುನುಡಿಯ ಸಮರ್ಥ ಬಳಕೆಯ ಮೂಲಕ ಘಟನೆಗಳನ್ನು ವಿವರಸುವ ಪುಟ್ಟಣ್ಣನವರ ಶೈಲಿ ಸುಮನೋಹರವಾದದು. ಇಡೀ ಕಾದಂಬರಿಯ ಭಾಷೆಯು ಜೀವಂತಿಕೆಯಿಂದ ತುಂಬಿ, ಸತ್ವಶಾಲಿಯಾಗಿಯೂ ಮೂಡಿಬಂದಿದೆ.

“ಅದಕ್ಕೆ ತಿಮ್ಮಮ್ಮನು ಇನ್ನೂ ಆಗ್ರಹದಿಂದ ಹಾವಿಗೆ ಆಣೆ ಎಂದರೇನು, ಚೇಳಿಗೆ ಆಣೆ ಎಂದರೇನು, ನನ್ನ ಮಗವಿನ ಹಾಸಿಗೆಯ ಬಳಿಯಲ್ಲಿ ಕೂತು ನೀನು ಹಾಗೆ ಆಡುವುದಕ್ಕೆ ಕಾರಣವೇನು? ರಾತ್ರಿಯಿಂದಲೂ ಸಾತಿಗೆ ಚೆನ್ನಾಗಿಲ್ಲವಲ್ಲ; ತಲೆನೋವು, ಚಳಿಚಳಿ ಎನ್ನುತ್ತಾಳೆ, ಅವಳ ತಲೇ ಕಂಡರೆ ನಿನಗೆ ಆಗದು, ನೀನು ಏನೋ ಮಾಡಿದೀಯೆ, ಅದೇನು ಮಾಡಿದೆ ಹೇಳು, ಇಲ್ಲದಿದ್ದರೆ ನಿನ್ನನ್ನು ಸುಮ್ಮನೇ ಬಿಡುವುದಿಲ್ಲ. ಹಿಡಿದ ಹಿಕಾಳಿಯನ್ನು ಬಿಡಿಸಿ ಬಿಡುತ್ತೇನೆ, ನನ್ನ ಮನೇ ಅನ್ನುವುಂಡು ನನ್ನ ಮನೇ ಬಟ್ಟೆ ಉಟ್ಟು-ನನ್ನ ಮಗಳ ಪ್ರಾಣಕ್ಕೆ ತಂದು ಇದ್ದೀಯಲ್ಲೆ, ಒಳ್ಳೇ ಮಾತಿನಿಂದ ಏನ ಮಾಡಿದ್ದೀಯ ಬೊಗಳು, ನಿವು ಹಾಲುಂಡ ಮನೆಕರು ಸಾಯಲಿ ಎನ್ನುವ ತಟವಾಣೀರು; ಅದೇನು ಮಾಡಿ ಇದ್ದೀಯೇ ಹೇಳೇ ಗಯ್ಯಾಳಿ, ಅವಳೇನು ನಿನ್ನ ಗೋಜಿಗೆ ಬಂದಳೇ, ನಿನ್ನ ಸೊಲ್ಲಿಗೆ ಬಂದಳೆ, ನಿನ್ನ ಗಂಧ ಗಾಳಿಗೆ ಬಂದಳೆ, ನಿನ್ನ ಕಂಣ ಚುಚ್ಚಿದಳೆ, ನಿನ್ನ ಹೊಟ್ಟೆ ಇರಿದಳೆ, ನಿನ್ನ ನಾಲಿಗೇ ಸೀಳಿ ಉಪ್ಪು ತುಂಬಿದಳೆ, ನಿಮ್ಮಪ್ಪನ ಮನೆಯಿಂದ ತಂದಿದ್ದ ಮಾಗಡಿ ಮಣಿಯನ್ನು ತೆಗೆದುಕೊಂಡಳೆ, ನಿಮ್ಮಪ್ಪನ ಮನೆಗೆ ಬೆಂಕಿ ಹಾಕಿದಳೆ, ನಿಮ್ಮಪ್ಪನ ಮುಖ ಸುಟ್ಟಳೆ, ನಿಮ್ಮ ಅವ್ವ ತಲೆಗೆ ಬೂದಿ ಸುರಿದಳೆ, ನಿನ್ನ ಮುಖಕ್ಕೆ ಮುಳ್ಳು ಬಡಿದಳೆ ಎಂದು ಬಗೆಬಗೆಯಾಗಿ ಕೆಲೆಯುತಾ ಬಂದಳು. ಅವಳ ಆಟೋಪವನ್ನು ನೋಡಿ ಇನ್ನೇನು ಮಾಡಿಬಿಡುತ್ತಾಳೆಯೋ ಎಂಬ ಹೆದರಿಕೆಯಿಂದ ಸೀತೆಗೆ ಕೈಕಾಲು ನಡುಗುವುದಕ್ಕೆ ಮೊದಲಾಯಿತು. ಗಾಬರಿಗೆ ಕೊಡವನ್ನು ಎತ್ತಿ ಹಾಕಿಕೊಂಡು ಬಿದ್ದು ಬಿಟ್ಟಳು. ಕೊಡಗಳೆರಡೂ ಬಿದ್ದು ತಗ್ಗಿ ಹೋದವು. ಸೀತೆಯು ಕುಕ್ಕರಿಸಿಕೊಂಡಳು, ಹಾಗೇ ಸೊಕ್ಕಿದ ಹಾಗಾಯಿತು”

ಸಂಪ್ರದಾಯದ ಸಂಕೋಲೆಯೊಳಗಿಂದ, ಜಿಗುಟುತನದಿಂದ ಕನ್ನಡ ಗದ್ಯವನ್ನು ಬಿಡಿಸಿ ಅದಕ್ಕೆ ಲಾಲಿತ್ಯವನ್ನೂ ಬಳುಕನ್ನೂ ನೀಡಿದವರು ಪುಟ್ಟಣ್ಣ. ಇವರ ಗದ್ಯಶೈಲಿಯ ನಿರಾಯಾಸತೆಯನ್ನು ಈ ಮೇಲಿನ ಉದಾಹರಣೆಯಿಂದಲೇ ನಾವು ತಿಳಿಯಬಹುದು.  ಕಾದಂಬರಿಯಲ್ಲಿ ಮೈಸೂರು ಸೀಮೆಯ ಜನಜೀವನವನ್ನು ಚಿತ್ರಿಸಿರುವ ಪುಟ್ಟಣ್ಣ ಅಲ್ಲಿನ ಆಡುನುಡಿಯ ಗತ್ತುಗಮ್ಮತ್ತುಗಳನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ.

ಇನ್ನು ಕಾದಂಬರಿಯಲ್ಲಿ ಎಲ್ಲಿಯೂ ಅಂದಿನ ಸಾಹಿತ್ಯಗಳಲ್ಲಿ ಢಾಳಾಗಿ ಕಾಣಿಸುತ್ತಿದ್ದ ಪಾಶ್ಚಾತ್ಯ ಪ್ರಭಾವ ಕಾಣಿಸುವುದಿಲ್ಲ. ಅಂತೆಯೇ ಭಾರ್ತೀಯ ಪರಂಪರೆಯಲ್ಲಿ ಬರುವ ದೃಷ್ಟಾಂತ, ನೀತಿ ಕಥೆಗಳನ್ನೆಲ್ಲಾ ತಮ್ಮ ಕಾದಂಬರಿ ಸಂವಿಧಾನಕ್ಕೆ ಒಗ್ಗಿಸಿಕೊಂಡ ಪುಟ್ಟಣ್ಣನವರು ತಾವು ಬಯಸದೇ ಹೋದರೂ ಕೆಲವೊಮ್ಮೆ ಅತಿಮಾನುಷ ಅಂಶಗಳು ಕಾದಂಬರಿಯಲ್ಲಿ ನುಸುಳಿದೆ. ಆದರೆ ಅಂದಿನ ಕಾಲದಲ್ಲಿ ರಚಿಸಲ್ಪಡುತ್ತಿದ್ದ ಸಾಂಪ್ರದಾಯಿಕ ಕಥಾನಕಗಳಲ್ಲೆಲ್ಲಾ ಅತಿಮಾನುಷ ಶಕ್ತಿಗಳ ವಿವರಣೆ ಸಾಮಾನ್ಯವೇ ಆಗಿತ್ತೆನ್ನುವುದನ್ನು ನಾವಿಲ್ಲಿ ಗಣನೆಗೆ ತೆಗೆದುಕೊಂದಲ್ಲಿ ಪುಟ್ಟಣ್ಣನವರ ಈ ಕಾದಂಬರಿಯಲ್ಲಿ ಅಂತಹಾ ಘಟನೆಗಳು ಕೇವಲ ಕ್ವಚಿತ್ ಆಗಿ ಬಂದಿದೆ ಎನ್ನಬೇಕು.

ವಿಮರ್ಶಕ ಜಿ.ಎಸ್. ಅಮೂರರ ನುಡಿಯಂತೆ – ಕಾದಂಬರಿಯ ತಂತ್ರದ ಬಗ್ಗೆ ಪುಟ್ಟಣ್ಣನವರಿಗೆ ಖಚಿತ ಅಭಿಪ್ರಾಯಗಳಿದ್ದವು. ಅಸಂಬದ್ದವೆಂದು ತೋರುವ ಸಂದರ್ಭಗಳೆಲ್ಲಾ ಮುಖ್ಯವಾದ ಕಥೆಯ ಅಂಗಗಳಾಗಿವೆ – ಎನ್ನುವ ಪುಟ್ಟಣ್ಣನವರ ಹೇಳಿಕೆ ಸಂವಿಧಾನದ ಐಕ್ಯದ ಬಗ್ಗೆ ಅವರಿಗಿದ್ದ ನಂಬಿಕೆಯನ್ನು ಪ್ರಕಟಿಸುತ್ತದೆ……ಇದು ಅತಿಶಯೋಕ್ತಿಯೂ ಅಲ್ಲ. ಇಂತಹಾ ಮೂರು ಉದಾಹರಣೆಗಳು ಕಾದಂಬರಿಯಲ್ಲಿವೆ. ನಾರಪ್ಪಯ್ಯನ ಪ್ರಸಂಗ, ಅರುಂದಮ್ಮನ ಕಥೆ, ಅಮಾಸೆಯ ಪೂರ್ವ ವೃತ್ತಾಂತಗಳು ಕಥಾ ಸಂವಿಧಾನಕ್ಕೆ ನೇರವಾಗಿ ಸಂಬಂಧಿಸಿದ ಘಟನೆಗಳಾಗಿವೆ.

ಕಟ್ಟ ಕಡೆಯಲ್ಲಿ ಅಮೂರರು ಹೇಳಿದಂತೆ – ಕಾದಂಬರಿಯ ಸ್ವರೂಪದ ಬಗ್ಗೆ ಅಥವಾ ವಾಸ್ತವ ಪರಿಕಲ್ಪನೆಯ ಬಗ್ಗೆ ಸೀಮಿತವಾದ ಅರಿವನ್ನು ದಾಟಿ ನೋಡಿದಾಗ ಮಾಡಿದ್ದುಣ್ಣೋ ಮಹಾರಾಯ, ಕಾದಂಬರಿ ಪ್ರಕಾರದ ಬೆಳವಣಿಗೆಗೆ ಕೊಟ್ಟ ಕೊಡುಗೆಯ ನಿಜವಾದ ಕಲ್ಪನೆ ಬರುತ್ತದೆ. ಆದರೆ ಅಂತಹಾ ವಿವೇಕ ನಮಲ್ಯಾವ ವಿಮರ್ಶಕರಲ್ಲಿಲ್ಲ.

 

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments