ಕೊಟ್ಟ ಕುದುರೆಯನೇರಲರಿಯದೆ : ಓದುಗರ ಕಣ್ಕಾಪು ತೆರೆಯಿಸುವ ಕೃತಿ
– ಡಾ. ಶ್ರೀಪಾದ ಭಟ್,ಸಹಾಯಕ ಪ್ರಾಧ್ಯಾಪಕ
ಡಾ. ಡಿ ವಿ ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರ,ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು
ಇಂದಿನ ಕನ್ನಡ ಸಾಹಿತ್ಯ ಚರ್ಚೆ ಮತ್ತು ವಿಮರ್ಶೆಗಳು ಯಾವುದೇ ಕೃತಿ ಅಥವಾ ಅದಕ್ಕಿಂತ ಹೆಚ್ಚಾಗಿ ಅದರ ಕೃತಿಕಾರನನ್ನು ಹೇಗೆ ನೋಡಬೇಕು ಎಂದು ಮೊದಲೇ ನಿರ್ಧರಿಸಿ ಓದುಗರೂ ಹಾಗೆಯೇ ತಿಳಿಯತಕ್ಕದ್ದು ಎಂದು ಆಗ್ರಹಿಸುತ್ತವೆ. ಇಂಥ ಆಗ್ರಹಕ್ಕೆ ಕೆಲವೇ ಕೆಲವು ವರ್ಷಗಳ ಪರಂಪರೆ ಹಾಗೂ ಅಳ್ಳಕವಾದ ಬೇರು ಇದ್ದರೂ ಇದು ಬೀಸಿದ ಪ್ರಭಾವ ಮಾತ್ರ ತುಸು ಹೆಚ್ಚಿನದು. ಕುವೆಂಪು, ಭೈರಪ್ಪ, ಅನಂತಮೂರ್ತಿ ಮೊದಲಾಗಿ ಯಾರ್ಯಾರ ಕೃತಿಯನ್ನು ಹಾಗೂ ಆಯಾ ಕೃತಿಕಾರರನ್ನು ಹೇಗೆ ನೋಡಬೇಕು, ತಿಳಿಯಬೇಕು ಹಾಗೂ ಅವರನ್ನು ಎಲ್ಲಿ ಇಡಬೇಕು ಎಂದು ‘ನಿರ್ದೇಶಿಸುವ’ ಪ್ರವೃತ್ತಿ ಸಾಹಿತ್ಯಕ ವಲಯದಲ್ಲಿ ಕಾಣಿಸಿಕೊಂಡಿದೆ. ಇದು ತನ್ನ ಹಾಸುಬೀಸನ್ನು ಹೊಸಗನ್ನಡಕ್ಕೆ ಮಾತ್ರ ಸೀಮಿತಗೊಳಿಸಿಲ್ಲ. ಅದರ ತೆಕ್ಕೆಗೆ ಹನ್ಮಿಡಿ ಶಾಸನಾದಿಯಾಗಿ ಎಲ್ಲವೂ ಸೇರಿವೆ! ಹೀಗಾಗಿ ಸಹಜವಾಗಿಯೇ ಹನ್ನೆರಡನೆಯ ಶತಮಾನದ ವಚನ ಸಾಹಿತ್ಯವೂ ಇಂಥ ನಿರ್ದೇಶನದ ವ್ಯಾಪ್ತಿಯಲ್ಲಿ ಬಂದುಬಿಟ್ಟಿದೆ. ಓದುಗನ ಮೇಲೆ ಹೇರಲಾಗುವ ಈ ಬಗೆಯ ನಿರ್ದೇಶನದಿಂದ ಸಾಹಿತ್ಯಕ್ಕಾಗಲೀ ಓದುಗನಾಗಲೀ ಲಾಭಕ್ಕಿಂತ ನಷ್ಟವೇ ಹೆಚ್ಚು. ವಚನ ಸಾಹಿತ್ಯ ಕುರಿತು ಹೀಗೆ ಹೇರಲಾಗಿರುವ “ಓದುವ-ತಿಳಿಯುವ ಕ್ರಮದ ನಿರ್ದೇಶನ”ದಿಂದಾಗಿ ಸಾಹಿತ್ಯವನ್ನು ಸಹಜವಾಗಿ ಓದುವವರಿಗೆ ಹುಟ್ಟುವ ಪ್ರಶ್ನೆಗಳಿಗೆ ಸಮಂಜಸ ಉತ್ತರ ದೊರಕದಿದ್ದರೂ ಉತ್ತರ ದೊರಕಿದಂತೆ ನಟಿಸಬೇಕಾಗುತ್ತದೆ. ಆದರೆ ಅನುಮಾನ ಪರಿಹಾರವಾಗದು. ಅಂಥ ಸಂದರ್ಭದಲ್ಲಿ ಓದುಗರು ತಮ್ಮ ಓದಿನ ದೋಷವನ್ನು ಅರ್ಥಮಾಡಿಕೊಂಡು ಬೇರೆ ರೀತಿಯಲ್ಲಿ ಓದಿಕೊಳ್ಳುವ ಮಾರ್ಗ ಹುಡುಕಬೇಕಾಗುತ್ತದೆ. ಸ್ಥಾಪಿತ ನಿರ್ದೇಶನಗಳ ಹಿನ್ನೆಲೆಯಲ್ಲಿ ವಚನಗಳನ್ನು ಓದಿದಾಗ ಉಂಟಾಗುವ ಸಮಸ್ಯೆ ಇಂಥ ಹೊಸ ಮಾರ್ಗವನ್ನು “ಕೊಟ್ಟಕುದುರೆಯನೇರಲರಿಯದೆ…” ಕೃತಿಯ ಮೂಲಕ ಈಗ ತೆರೆದಿದೆ.
ಹನ್ನೆರಡನೆಯ ಶತಮಾನದಲ್ಲಿ ಹುಟ್ಟಿಕೊಂಡ ವಚನಗಳ ಹಿನ್ನೆಲೆ, ಅವುಗಳ ಸ್ವರೂಪ, ಭಾಷೆ, ವಿಷಯ ವೈವಿಧ್ಯಗಳನ್ನು ಗಮನಿಸಿದಾಗ ಓದುಗನಲ್ಲಿ ಸಹಜವಾಗಿಯೇ ಅನೇಕಾನೇಕ ಪ್ರಶ್ನೆಗಳು ಹುಟ್ಟುತ್ತವೆ: ‘ವಚನಗಳ ನಿರ್ದಿಷ್ಟ ಸಂಖ್ಯೆ ಯಾಕೆ ಲಭ್ಯವಿಲ್ಲ? ‘ಕಲ್ಯಾಣ ಕ್ರಾಂತಿಯಾದಾಗ ವಚನಗಳ ಕಟ್ಟುಗಳನ್ನು ತಲೆ ಮೇಲೆ ಹೊತ್ತು ಹುಬ್ಬಳ್ಳಿಯ ಮೂರು ಸಾವಿರ ಮಠಕ್ಕೂ ಉಳವಿಗೂ ಸಾಗಿಸಲಾಯಿತು’ ಎಂಬ ಹೇಳಿಕೆ ಸರಿಯಾಗಿದ್ದರೆ ಆ ಕಟ್ಟುಗಳು ಏನಾದವು?
ಲಭ್ಯ ವಚನಗಳಲ್ಲೂ ಒಬ್ಬ ಸಂಪಾದಕರ ಸಂಗ್ರಹದಲ್ಲಿರುವ ವಚನಗಳು ಮತ್ತೊಬ್ಬರ ಸಂಪಾದನೆಯಲ್ಲಿ ಇಲ್ಲದೇ ಹೋಗುವುದೇಕೆ? ಅಂಕಿತಗಳನ್ನು ಕಿತ್ತು ಓದಿದರೆ ಯಾವ ವಚನ ಯಾರದು ಎಂದು ಹೇಳಲು ಸಾಧ್ಯವೇ? ಯಾವ ವಚನಕಾರನ ಅಂಕಿತ ಯಾವುದು ಎಂದು ಎಲ್ಲ ವಚನಗಳಿಗೂ ಹೇಳಲು ಸಾಧ್ಯವಾಗದಿರುವುದು ಏಕೆ? ವಚನಗಳ ಪ್ರಧಾನ ಭಾಷೆ ಜನಪದವೇ ಆಗಿದ್ದರೂ ಅನೇಕ ವಚನಗಳಲ್ಲಿ ಸಂಸ್ಕೃತಭೂಯಿಷ್ಠ ಕ್ಲಿಷ್ಟವಾಕ್ಯಗಳು ಯಾಕಿವೆ? ಇಷ್ಟಾಗಿಯೂ ಇದು ಜನರ ಆಡುಮಾತಿನಲ್ಲೇ ಇದೆ ಎಂದು ಪ್ರತಿಪಾದಿಸುವುದು ಹೇಗೆ? ಏಕೆ? ವಚನಗಳು ವರ್ಣ, ವರ್ಗ, ಜಾತಿ, ಲಿಂಗ ಮೊದಲಾದ ಜಡ ಪರಿಕಲ್ಪನೆಗಳನ್ನು ಮುರಿದು ಇವೆಲ್ಲ ಇಲ್ಲದ ಸಮಾನ ಸಮಾಜಕಟ್ಟುವ ಉದ್ದೇಶ ಹೊಂದಿದ್ದರೆ ಬಸವಣ್ಣನೂ ಸೇರಿದಂತೆ ಅನೇಕಾನೇಕ ವಚನಕಾರರು ಮತ್ತೆ ಮತ್ತೆ ಹಲವು ಹದಿನೆಂಟುಜಾತಿಗಳ ಪ್ರಸ್ತಾಪ ಏಕೆ ಮಾಡುತ್ತಾರೆ? ಜಂಗಮರೆಲ್ಲ ಒಂದೇ ಆಗುತ್ತಾರಾದರೂ ಬ್ರಾಹ್ಮಣನಿಗೆ ಮೂರು ವರ್ಷ, ವೈಶ್ಯನಿಗೆ ಎಂಟು ವರ್ಷ, ಶೂದ್ರನಿಗೆ ಹನ್ನೆರಡು ವರ್ಷ ಕಾಯಿಸಿ ದೀಕ್ಷೆಕೊಡಬೇಕೆಂದು ವಚನಗಳು ಹೇಳುವುದೇಕೆ? ವಚನಗಳು ಬ್ರಾಹ್ಮಣ, ವೈದಿಕ ವಿರುದ್ಧವಾಗಿದ್ದರೆ ನಿಜವಾದ ಜಂಗಮನೇ ಬ್ರಾಹ್ಮಣ ಎಂದು ವಚನಗಳು ಏಕೆ ಹೇಳಬೇಕು? ವೈದಿಕ ವಚನಕಾರರು ತಮ್ಮ ವಿರುದ್ಧವೇ ವಚನ ಬರೆದುಕೊಂಡರೇ? ವಚನಗಳು ಸ್ತ್ರೀ ಸಮಾನತೆ ಸ್ಥಾಪಿಸುವುದಾದರೆ ಚೆನ್ನಬಸವಣ್ಣನಂಥ ವಚನಕಾರರು ಆರು ವರ್ಗದ ಸ್ತ್ರೀಯರನ್ನು ಬೇರ್ಪಡಿಸಿ ನೋಡುವುದೇಕೆ? ಸಮಾನತೆ ಇದ್ದ ಸಮಾಜದಲ್ಲಿ ಅಕ್ಕನ ವಚನಗಳು ಯಾಕೆ ಶೋಷಣೆ ಅನುಭವಿಸಿದ ದನಿಯನ್ನು ತೀವ್ರವಾಗಿ ತೋರಿಸುತ್ತವೆ? ಇಷ್ಟೆಲ್ಲ ಆಗಿಯೂ ಅಷ್ಟೊಂದು ಜಾತಿಗಳ ಸಂಗಮವಾಗಿ ರೂಪುಗೊಂಡಿದ್ದ ಆಂದೋಲನವೊಂದು ದಿಢೀರನೆ ಜರುಗಿದ ಕ್ರಾಂತಿಯೊಂದರಿಂದ ನಿರೀಕ್ಷಿತ ಯಶಸ್ಸು ಕಾಣದೇ ಅಷ್ಟು ಬೇಗನೆ ತಣ್ಣಗಾದುದಕ್ಕೆ ಬ್ರಾಹ್ಮಣ ಪಿತೂರಿಕಾರಣವೇ? ಹಾಗಾದರೆ ಬ್ರಾಹ್ಮಣರ ವಿರುದ್ಧವೇ ರೂಪುಗೊಂಡಿದ್ದ, ಹತ್ತು ಹಲವು ಜಾತಿಗಳು ಒಗ್ಗೂಡಿ ಮೂಡಿದ್ದ ಮಹಾನ್‍ಚಳವಳಿಯು ಕೇವಲ ಬ್ರಾಹ್ಮಣರ ಪಿತೂರಿಗೆ ಬಲಿಯಾಗುವಷ್ಟು ದುರ್ಬಲವಾಗಿತ್ತೇ? ಬಸವಣ್ಣನವರ ಅಂತ್ಯ ನಿಜಕ್ಕೂ ಒಳಗಿನವರಿಂದಾಯಿತೇ ಹೊರಗಿನವರಿಂದಲೇ? ಹೊರಗಿನವರಿಂದಾದರೆ “ಲೋಕವಿರೋಧಿ, ಶರಣನಾರಿಗಂಜುವನಲ್ಲ” ಎನ್ನುವ ಬಸವಣ್ಣನ ಭಕ್ತಾದಿಗಳು ಆ ಸತ್ಯವನ್ನು ಯಾವ ಪುರಾಣ ಸಾಹಿತ್ಯದಲ್ಲೂ ದಾಖಲಿಸದೇ ಹೋದುದೇಕೆ?’-ಹೀಗೆ ಪುಂಖಾನುಪುಂಖವಾಗಿ ಪ್ರಶ್ನೆಗಳು ಹುಟ್ಟುತ್ತವೆ. ಓದುಗನನ್ನು ಸದ್ಯ “ನಿರ್ದೇಶಿಸುವ” ದೃಷ್ಟಿ ಈ ಯಾವೊಂದು ಪ್ರಶ್ನೆಗೂ ಸಮರ್ಪಕ ಉತ್ತರ ನೀಡುವುದಿಲ್ಲ.
ಯಾವಕಟ್ಟಿಗೂ ಒಳಗಾಗದ ಜಂಗಮ ಸ್ವರೂಪದ ವಚನಗಳನ್ನು ಆಧುನಿಕ ಸೀಮಿತ ಸೈದ್ಧಾಂತಿಕ ಚೌಕಟ್ಟಿನಲ್ಲಿ ಸ್ಥಾವರಗೊಳಿಸಿ ನೋಡುವುದರಿಂದಲೇ ಅವು ಉತ್ತರ ನೀಡಲು ವಿಫಲವಾಗುತ್ತವೆ. ಸೈದ್ಧಾಂತಿಕ ಚೌಕಟ್ಟು ಮೀರಿದ ಅಧ್ಯಾತ್ಮದ ನೆಲೆಯಲ್ಲಿ ನೋಡುತ್ತ ಹೋದರೆ ಎಲ್ಲ ವಚನಗಳೂ ಅರ್ಥವಾಗುತ್ತ ಹೋಗುತ್ತವೆ. ಅಧ್ಯಾತ್ಮದ ನೆಲೆಯಲ್ಲಿ ಕುಲ, ಜಾತಿ, ಮತ, ಪಂಗಡ ಮೊದಲಾದ ಸಂಗತಿಗಳಿಗೆ ಜಾಗವಿಲ್ಲ. ಮನುಷ್ಯ ಸಹಜವಾಗಿ ಹುಡುಕುವ ನೆಮ್ಮದಿ ಮತ್ತು ಆನಂದಗಳನ್ನು ಪಡೆಯುವ ಭಾರತೀಯ ಪರಂಪರೆಯಲ್ಲಿನ ಅನೇಕಾನೇಕ ಮಾರ್ಗಗಳಲ್ಲಿ ಒಂದಾದ ಶೈವ ಪಂಥದ ಶಿವಾಚಾರವನ್ನು ಸಮಾಜಕ್ಕೆ ನೀಡಿ ಆ ಮೂಲಕ ಆದರ್ಶ ಸಮಾಜ ಸ್ಥಾಪಿಸುವುದು ವಚನಕಾರರ ಉದ್ದೇಶವಾಗಿತ್ತೆಂದು ಭಾವಿಸಿ ವಚನಗಳನ್ನು ನೋಡುತ್ತ ಹೋದರೆ ಅದು ಉನ್ನತ ಸ್ತರಕ್ಕೆ ಒಯ್ಯುತ್ತದೆ ಮಾತ್ರವಲ್ಲ, ಅನುಮಾನಗಳನ್ನು ಪರಿಹರಿಸುತ್ತದೆ. ಇಂಥ ಸಂದರ್ಭದಲ್ಲೆಲ್ಲ ವಚನಕಾರರು ಕೇವಲ ಜಾತಿ, ಮತ, ಲಿಂಗ, ಕುಲದ ಶ್ರೇಷ್ಠತೆಯನ್ನೇ ನೆಚ್ಚುವ ಜನರನ್ನು ಪ್ರಶ್ನಿಸುತ್ತಾರೆ. ನಿಜವಾದ ಮಾರ್ಗ ಅದಲ್ಲ, ಇದು ಎಂದು ತೋರಿಸುತ್ತಾರೆ. ಈ ಸಂಬಂಧವಾಗಿ ಬಾಲಗಂಗಾಧರ ಅವರು ಈ ಕೃತಿಯಲ್ಲಿನ ‘ಚಿದ್ಬೆಳಗಿನ ಬಯಲು’ ಎಂಬ ಪ್ರಾಸ್ತಾವಿಕ ಸ್ವರೂಪದ ದಿಕ್ಸೂಚೀ ಲೇಖನದಲ್ಲಿ ಎಳೆಎಳೆಯಾಗಿ ವಿವರಿಸಿದ್ದಾರೆ. ವಚನಗಳನ್ನು ಅರ್ಥ ಮಾಡಿಕೊಳ್ಳಲಷ್ಟೇ ಅಲ್ಲ, ಭಾರತೀಯ ಅಧ್ಯಾತ್ಮದ ಜಾಡು ಗುರುತಿಸುವಲ್ಲಿಯೂ ಇದೊಂದು ಕೈದೀವಿಗೆಯಾಗಿದೆ.
ವಚನಗಳನ್ನು ಕುರಿತು ಓದುವಾಗ ಹುಟ್ಟುವ ಸಾಮಾನ್ಯ ಪ್ರಶ್ನೆಗಳ ಜೊತೆಗೆ ಬೆರಳೆಣಿಕೆಯ ವಚನಗಳನ್ನು ಇಟ್ಟುಕೊಂಡು ಜಾತಿ, ವರ್ಗಗಳಂಥ ಸಾಮಾಜಿಕ ಸಮಸ್ಯೆಗೆ ಉತ್ತರವಾಗಿ ಹುಟ್ಟಿಕೊಂಡವು ವಚನಗಳು ಎನ್ನುವ ತಥಾಕಥಿತ ವಾದಗಳ ಆಮೂಲಾಗ್ರ ಪರಿಶೋಧನೆ ಪ್ರಸ್ತುತ ಕೃತಿಯಲ್ಲಿದೆ. ಸುಮಾರು 450 ಪುಟಗಳ ವ್ಯಾಪ್ತಿಯಲ್ಲಿ ಹರಡಿಕೊಂಡ ಇಲ್ಲಿನ ಚರ್ಚೆಗಳು ಬಿಡಿ ಲೇಖನಗಳ ಸ್ವರೂಪದಲ್ಲಿವೆಯಾದರೂ ಇವುಗಳಲ್ಲಿ ಏಕಸೂತ್ರತೆ ಇರುವಂತೆ ನೋಡಿಕೊಳ್ಳಲಾಗಿದೆ. ಬಹುಮುಖ್ಯವಾದ ಸಂಗತಿ ಎಂದರೆ ಇಲ್ಲಿ ಸಂಗ್ರಹಿತವಾದ ವಿದ್ವತ್ ಲೇಖನಗಳನ್ನು ಬರೆದವರು ಹೆಸರಾಂತ ಲೇಖಕರಲ್ಲ, ವಚನಗಳನ್ನು ಕುರಿತು ಮತ್ತೆ ಮತ್ತೆ ಕೇಳಿಬರುವ ಹೆಸರುಗಳಲ್ಲ. ಆದರೆ ಇಲ್ಲಿ ಎತ್ತಲಾದ ಪ್ರಶ್ನೆಗಳು, ಮಂಡಿಸಲಾದ ವಾಗ್ವಾದದ ವಿಧಾನಗಳು ಯಾವ ಸಂಶೋಧನಾ ಲೇಖನಗಳಿಗೂ ಕಡಿಮೆಯವಲ್ಲ. ಹಿರಿಯ ಲೇಖಕರಿಗಿಂತ ಕಿರಿಯ, ಆಸಕ್ತ ವಿದ್ಯಾರ್ಥಿಗಳ ಬರಹವೇ ಇಲ್ಲಿ ಹೆಚ್ಚಾಗಿದೆ. ಕೇವಲ ಸಾಹಿತ್ಯದ ಆಸಕ್ತರಾಗಿ, ವಿದ್ಯಾರ್ಥಿಗಳಾಗಿ ಓದಿದಾಗ ಅನಿಸುವ ಅನುಭವವೇದ್ಯ ಸಂಗತಿಗಳು ದಾಖಲಾಗಿರುವುದರಿಂದ ಇದು ಅತ್ಯಂತ ಮುಖ್ಯ. ಹೆಸರು, ಕುಲ ಗೋತ್ರ ನೋಡದೇ ವಿಷಯ ಮತ್ತು ಚರ್ಚೆ ಮುಖ್ಯ ಎಂದು ಭಾವಿಸುವವರು ಓದುತ್ತ ಓದುತ್ತ ಬರೆದವರು ಯಾರು ಎಂಬುದನ್ನು ಎಣಿಸದೇ ಚರ್ಚೆಯ ವಿಷಯದೊಳಗೇ ಮುಳುಗಿಹೋಗುವುದು ಇಲ್ಲಿನ ವಿಶೇಷ. ಸಂಶೋಧನೆ ಮತ್ತು ಐಡಿಯಾಲಜಿ, ಪ್ರತಿಕ್ರಿಯೆ ಇತ್ಯಾದಿ ನಾಲ್ಕು ಭಾಗಗಳಲ್ಲಿ ವಚನ ಚರ್ಚೆಯ ವಿವಿಧ ಆಯಾಮಗಳನ್ನು ಒಳಗೊಂಡ 15 ಪ್ರಮುಖ ಲೇಖನಗಳು, ನಾಡಿನ ಹಿರಿಯ ಲೇಖಕರ 10 ಪ್ರಮುಖ ಪ್ರತಿಕ್ರಿಯೆಗಳು ಇಲ್ಲಿ ದಾಖಲಾಗಿವೆ. ಅನುಬಂಧದಲ್ಲಿ ನೀಡಲಾದ ಲೇಖನದಲ್ಲಿ ವಚನ ಕುರಿತ ಆಧುನಿಕ ದೃಷ್ಟಿಯ ಚರ್ಚೆಗಳೂ ಅವುಗಳ ಮಿತಿಯೂ ಕಾಣಿಸುತ್ತದೆ. ಇಲ್ಲಿನ ಲೇಖನಗಳಲ್ಲಿ ಪ್ರಚಲಿತ ವಾದಗಳು ಮಂಡಿಸುವ ‘ವಚನಗಳು ಹೇಳುವುದಿಷ್ಟೇ’ ಎನ್ನುವಂಥ ಮಾತುಗಳಿಗೆ ಆಧಾರವಾಗಿರುವವು ಎಷ್ಟು ವಚನಗಳು ಹಾಗೂ ಉಳಿದ ಸಾವಿರಾರು ವಚನಗಳು ಅವೇ ಮಾತಿಗೆ ಹೇಗೆ ವಿರುದ್ಧವಾಗಿವೆ ಎಂಬುದನ್ನು ಎತ್ತಿತೋರಿಸಲಾಗಿದೆ. ಇಷ್ಟಾಗಿಯೂ ಇದು ಕೇವಲ ಅಂಕಿ ಸಂಖ್ಯೆಗಳ ಸರ್ಕಸ್ ಅಲ್ಲ. ಬದಲಾಗಿ ವಚನಗಳ ಸಾಲುಗಳನ್ನು ಮೂಲ ಸಂದರ್ಭದಿಂದ ತಪ್ಪಿಸಿ ಯಾವ್ಯಾವುದೋ ಅನ್ಯ ಚೌಕಟ್ಟುಗಳಿಗೆ ಹೇಗೆ ಹೊಂದಿಸಲಾಗಿದೆ ಎಂಬುದನ್ನು ಸಾಧಾರವಾಗಿ ಇಲ್ಲಿನ ಲೇಖನಗಳು ಪ್ರತಿಪಾದಿಸಲು ಅಂಕಿ ಅಂಶಗಳನ್ನು ಸಾಧಾರವಾಗಿ ಬಳಸಿಕೊಳ್ಳಲಾಗಿದೆ. ಇದು ಸಂಶೋಧನೆಯ ಒಂದು ಒಪ್ಪಿತ ವ್ಯವಸ್ಥಿತ ಕ್ರಮ.
ಆಧುನಿಕ ಸ್ತ್ರೀವಾದಿ ಹಿನ್ನೆಲೆಯಿಂದ ವಚನಗಳನ್ನು ನೋಡಿ ಒಂದು ಬಗೆಯ ಇತ್ಯರ್ಥಕ್ಕೆ ಆಧುನಿಕ ಚಿಂತಕರು, ವಿಮರ್ಶಕರು ಬಂದಿರುವುದುಂಟು. ಆದರೆ ಅದೇ ವಿಮರ್ಶಕರು ವಚನಗಳನ್ನೇ ಆಧಾರವಾಗಿಟ್ಟುಕೊಂಡು ತಮ್ಮ ಮಾತಿಗೇ ವಿರುದ್ಧವಾಗಿ ಮಾತನಾಡುವುದೂ ಇದೆ.ಒಬ್ಬರು “ಭಾರತೀಯ ಸಮಾಜದಲ್ಲಿ ಸ್ತ್ರೀ ಸ್ವಾತಂತ್ರ್ಯವನ್ನು ಪ್ರಥಮ ಬಾರಿಗೆ ಪ್ರತಿಪಾದಿಸಿದ,ದೊರಕಿಸಿಕೊಟ್ಟ ಕೀರ್ತಿ ವಚನ ಸಂಸ್ಕೃತಿಗೆ ಸಲ್ಲುತ್ತದೆ” ಎಂದರೆ ಅದೇ ಸ್ತ್ರೀವಾದದ ಹಿನ್ನೆಲೆಯಲ್ಲಿ ಮಾತನಾಡುವ ಮತ್ತೊಬ್ಬರು “ವಚನಕಾರರು ಹೆಣ್ಣನ್ನು ಹೇಗೆ ಕೀಳಾಗಿ ಕಂಡಿದ್ದಾರೆ, ಸ್ತ್ರೀ ಪುರುಷ ಪಕ್ಷಪಾತವನ್ನು ಯಾವ ರೀತಿ ಮಾಡಿದ್ದಾರೆ ಎಂದರೆ…” ಎನ್ನುತ್ತ ವಚನಗಳನ್ನು ಉಲ್ಲೇಖಿಸುತ್ತಾರೆ. ಇಂಥ ಗೊಂದಲಗಳು ಆಧುನಿಕ ವಿಮರ್ಶಕರಲ್ಲಿ ಹೇರಳವಾಗಿವೆ ಎಂಬುದನ್ನು ಕೃತಿ ಸಾಧಾರ ಪ್ರತಿಪಾದಿಸಿದೆ.
ವಸಾಹತುಕಾಲದ ಚಿಂತನೆ ರೂಪಿಸಿದ ನಮ್ಮ ಆಧುನಿಕ ವಿಮರ್ಶೆ ವಚನಗಳ ಅರ್ಥವನ್ನು ಹೇಗೆ ಸಂಕುಚಿತಗೊಳಿಸಿದೆ ಎಂಬುದಕ್ಕೆ ಇಲ್ಲಿ ಹೆಜ್ಜೆ ಹೆಜ್ಜೆಗೂ ನಿದರ್ಶನಗಳು ದೊರೆಯುತ್ತವೆ. ಒಟ್ಟಾರೆ ಆಧುನಿಕ ಚಿಂತಕರು ವಚನಗಳಲ್ಲಿ ಇರುವುದು “ವರ್ಗ, ವರ್ಣ, ಜಾತಿ ನಿರ್ನಾಮದ ಆಶಯ; ಲಿಂಗ ಸಮಾನತೆಯ ಪ್ರತಿಪಾದನೆ; ಬ್ರಾಹ್ಮಣ/ವೈದಿಕ ವಿರೋಧ ಹಾಗೂ ಪ್ರಖರ ವೈಚಾರಿಕತೆ” ಎಂದು ಜಾತಿ, ವರ್ಣಗಳ ಪ್ರಸ್ತಾಪ ಬರುವ ಕೆಲವೇ ಕೆಲವು ವಚನಗಳ ಆಧಾರವಿಟ್ಟು ಹೇಳುತ್ತಾರೆ. ಆದರೆ ಅವರು ತಮ್ಮ ವಾದಕ್ಕೆ ವಿರುದ್ಧವಾದ ಅಥವಾ ಇದಕ್ಕೆ ಸಂಬಂಧವೇ ಇಲ್ಲದ, ಮತ್ತೇನೋ ಹೇಳುವ ಅಸಂಖ್ಯ ವಚನಗಳನ್ನು ಕುರಿತು ಏನೂ ಹೇಳಲಾರರು. ಉದಾಹರಣೆಗೆ ಬಸವಣ್ಣನವರು ಒಂದು ವಚನದಲ್ಲಿ “ವರ್ಣಾನಾಂ ಬ್ರಾಹ್ಮಣೋ ಗುರುಃ ಎಂಬುದು ಹುಸಿ; ವರ್ಣಾನಾಂ ಗುರುಃ ನಮ್ಮ ಕೂಡಲಸಂಗನ ಶರಣರು” ಎಂದರೆ ಇನ್ನೊಂದು ವಚನದಲ್ಲಿ “ಎನಿಸನೋದಿದಡೇನು! ಎನಿಸ ಕೇಳಿದಡೇನು! ಚತುರ್ವೇದ ಪಠತೀವ್ರವಾದಡೇನು ಲಿಂಗಾರ್ಚನೆ ಹೀನವಾದಡೆ, ಶಿವಶಿವಾ! ಬ್ರಾಹ್ಮಣನೆಂಬೆನೆ ಎನಲಾಗದು” ಎನ್ನುತ್ತಾರೆ. ಜಾತಿಯನ್ನು ಸಂಪೂರ್ಣವಾಗಿ ನಿರಾಕರಿಸಿಕೊಂಡ ಹಿನ್ನೆಲೆಯಲ್ಲಿ ಇವೆರಡನ್ನೂ ಅರ್ಥಮಾಡಿಕೊಳ್ಳುವುದು ಹೇಗೆ? ಪ್ರಖರ ವೈಚಾರಿಕತೆಯನ್ನು ಬಸವಣ್ಣನವರು ಪ್ರತಿಪಾದಿಸಿದ್ದಾರೆಂದ ಮೇಲೆ ಅಂತಿಮವಾಗಿ ಅವರು “ಕೂಡಲ ಸಂಗಮದೇವ” ಎಂದೇ ವಚನಗಳನ್ನು ಮುಕ್ತಾಯಗೊಳಿಸುವುದೇಕೆ?
ಹಾಗಾದರೆ ವಚನಗಳಲ್ಲಿ ವಿರೋಧಾಭಾಸ ತುಂಬಿದೆ ಎಂಬ ನಿರ್ಣಯಕ್ಕೆ ಬರಬಹುದೇ? ಇಲ್ಲ. ಈಗಾಗಲೇ ಹೇಳಿದಂತೆ ವಸಾಹತುಕಾಲದ ಚಿಂತನೆಯಿಂದ ಹುಟ್ಟಿದ ಸೀಮಿತ ಚೌಕಟ್ಟಿನಲ್ಲೇ ವಚನಗಳನ್ನು ಅಧ್ಯಯನ ಮಾಡಿದರೆ ಕಾಣುವ ಆಭಾಸಗಳು ಇವು. ಕುದುರೆ ಕಣ್ಣಿಗೆ ಅತ್ತಿತ್ತ ನೋಡದಂತೆ ಕಾಪು ಕಟ್ಟಿದಂತೆ ಓದುಗರ ಕಣ್ಣಿಗೂ ಕಾಪು ಕಟ್ಟಿದ್ದರಿಂದ ಹೀಗೆ ಮತ್ತು ಇಷ್ಟೇ ಕಾಣಿಸುತ್ತದೆ.
ವಚನಗಳನ್ನು ಜಾತಿ, ವರ್ಣ ವಿರೋಧಿ ನೆಲೆಯಿಂದ ಮಾತ್ರ ನೋಡಬೇಕೆಂದು ಬಸವಣ್ಣನೂ ಹೇಳಿಲ್ಲ, ಚೆನ್ನಬಸವಣ್ಣನೂ ಹೇಳಿಲ್ಲ. ಅದು ಪ್ರಪಂಚದಲ್ಲೇ ಇಲ್ಲದ ಕನ್ನಡ ಸಾಹಿತ್ಯದ ವಿಶಿಷ್ಟ ಸಾಹಿತ್ಯ ಪ್ರಕಾರ. ಅದರ ಅರ್ಥವ್ಯಾಪ್ತಿ ಕೂಡ ವಸಾಹತುಶಾಹಿ ಕಾಲದ ಚಿಂತನೆಗೆ ಮಾತ್ರ ಸೀಮಿತವಾಗಬೇಕಿಲ್ಲ, ಆಗುವುದೂ ಇಲ್ಲ.
ಅಧ್ಯಾತ್ಮ ಸಾಧನೆಯ ಮಾರ್ಗದಲ್ಲಿ ಅಡ್ಡಿಯಾಗುವ ಎಲ್ಲ ಸಂಗತಿಗಳ ಬಗ್ಗೆಯೂ ವಚನಗಳು ಮಾತಾಡಿವೆ. ಅವುಗಳಲ್ಲಿ ವಿಡಂಬನೆಯಿದೆ, ಹಸಿವು, ಸಾವು, ಹುಟ್ಟು, ಭಕ್ತಿ ಇತ್ಯಾದಿ ಏನೆಲ್ಲ ಇದೆ. ವಚನಗಳನ್ನು ಓದುತ್ತ, ಮಹದೇಶ್ವರ, ಜುಂಜಪ್ಪ, ಮಂಟೇಸ್ವಾಮಿ ಕತೆಯನ್ನು ಓದುತ್ತ ಹೋದಂತೆಲ್ಲ ನನಗೆ ವಸಾಹತು ಚಿಂತನೆಗಳು ಹಾಕಿಕೊಟ್ಟ ಮಾರ್ಗದಲ್ಲಿ ಇರುವ ಮಿತಿಗಳು ಅರಿವಿಗೆ ಬಂದಿವೆ. ಆ ರೀತಿಯ ಓದಿನಿಂದ ವಚನಗಳು ಹುಟ್ಟಿಸಿದ ಪ್ರಶ್ನೆಗಳಿಗೆ “ಕೊಟ್ಟಕುದುರೆಯನೇರಲರಿಯದೆ…” ಕೃತಿ ಹೊಸ ದಿಕ್ಕು ತೋರಿಸಿದೆ.
ಸಾಮಾನ್ಯವಾಗಿ ಆಧುನಿಕ ಶಿಕ್ಷಣ ಒಂದು ವಿಷಯ ಅಥವಾ ಸಂಗತಿಯ ಬಗ್ಗೆ ಒಂದು ನಿರ್ಧಾರಕ್ಕೆ ಬರುವಂತೆ ಮಾಡಿ ಅದನ್ನೇ ತಿಳಿವಳಿಕೆ ಎಂದು ಭಾವಿಸುವಂತೆ ಮಾಡುತ್ತದೆ. ಅದಕ್ಕೆ ಪರ್ಯಾಯವಾದ ನೋಟ ನಮ್ಮ ಅನುಭವಕ್ಕೆ ಬಂದರೂ ನಮ್ಮ ‘ತಿಳಿವಳಿಕೆ’ಯ ಅಹಮಿಕೆ ಅದನ್ನು ಸುಲಭವಾಗಿ ಒಪ್ಪಲು ಬಿಡುವುದಿಲ್ಲ. ಇದು ವಸಾಹತುಶಾಹಿ ಶಿಕ್ಷಣದ ಫಲವೇ ಇರಬೇಕು.
ಅನುಭವ ಮಂಟಪದ ಮೂಲಕ ಸಮಾಜಕ್ಕೆ ಆವರಿಸಿದ ಮಂಕನ್ನು ತೆಗೆಯಲು ಅಧ್ಯಾತ್ಮದ ಮಾರ್ಗ ತೋರಿಸಲು ಹೆಣಗಿದ ವಚನಕಾರರ ವಚನಗಳನ್ನು ಮುಕ್ತವಾಗಿ ಅರ್ಥೈಸಿಕೊಳ್ಳಲು ಪ್ರಸ್ತುತ ಮತ್ತೆ ಹೋರಾಡಬೇಕಿದೆ ಎಂಬುದೇ ಇಂದಿನ ದುರಂತ. ಅಂಥ ಹೋರಾಟದ ಫಲ ಈ ಕೃತಿ. ಸಾಹಿತ್ಯವನ್ನು ಸಾಹಿತ್ಯದ ದೃಷ್ಟಿಯಿಂದ ನೋಡದೇ ಮಾನವಶಾಸ್ತ್ರ, ಸಮಾಜವಿಜ್ಞಾನಗಳಿಂದ ಎರವಲು ತಂದ ಸಿದ್ಧಾಂತಗಳ ಚೌಕಟ್ಟಿನಲ್ಲಿ ನೋಡುವುದರಿಂದ ಹೊಸ ಸಾಹಿತ್ಯಕ ಸಮಸ್ಯೆಗಳು ಹುಟ್ಟುತ್ತಿವೆ. ವಚನ ಸೃಷ್ಟಿ ಕಾಲದಲ್ಲಿ “ಅನುಭವ ಮಂಟಪ”ವನ್ನು ಕಟ್ಟಿದ್ದು ಯಾವ ಅನುಭವವನ್ನು ಹಂಚಿಕೊಳ್ಳಲು, ಅದು ಎಂಥ ಅನುಭವವಾಗಿತ್ತು, ಜಾತಿ, ವರ್ಣದಿಂದಾದ ಅವಮಾನದ ಅನುಭವ ಮಾತ್ರವಾಗಿತ್ತೇ? ಎಂಬುದನ್ನು ವಿವರಿಸಲು ಇದುವರೆಗಿನ ಸಾಹಿತ್ಯಚರ್ಚೆ ವಿಫಲವಾಗಿದೆ. ವಚನಗಳ ಅಧ್ಯಯನ ಮಾಡುವಾಗ ಅನುಭವ ಮಂಟಪ ಯಾಕೆ ಮತ್ತು ಹೇಗೆ ಮುಖ್ಯ ಎಂಬುದನ್ನು ಅರಿಯುವ ಅಗತ್ಯವಿದೆ.
ಈ ಕೃತಿಯನ್ನುಓದಿದ ಮೇಲೆ ವಚನಗಳ ಅರ್ಥವ್ಯಾಪ್ತಿ ಹಿಗ್ಗಿಸಿ ನೋಡಬಹುದಷ್ಟೇ ಅಲ್ಲ, ವಚನಗಳ ಮೇಲಿನ ಗೌರವ ಇಮ್ಮಡಿ, ಮುಮ್ಮಡಿ,ನೂರ್ಮಡಿಯಾಗುತ್ತದೆನ್ನಬಹುದು.
ಶೀರ್ಷಿಕೆ: ಕೊಟ್ಟಕುದುರೆಯನೇರಲರಿಯದೆ…
ರಾಜಾರಾಮ ಹೆಗಡೆ ಮತ್ತು ಷಣ್ಮುಖ ಎ (ಸಂ), ನಿಲುಮೆ ಪ್ರಕಾಶನ, ಐನಕೈ, (ಶಿರಸಿ ಉ.ಕ)
ಬೆಲೆ: ರೂ.330.00 ಮೊದಲ ಮುದ್ರಣ:2015
ಪ್ರೊಫೆಸರ್ ಬಾಲಗಂಗಾಧರರವರ ಸಂಶೋಧನೆ ಮಾರ್ಗ ಒಂದು ಹೊಸ ದಿಕ್ಕನ್ನೇ ತೆರೆದಿದೆ. ಎಪ್ಪತ್ತರ ದಶಕದ ಕೊನೆ ಹಾಗು ಎಂಬತ್ತರ ದಶಕದ ಮೊದಲು ನಾವುಗಳು ಅರಿತಂತೆ ವಚನಗಳು ಕೇವಲ ಶಿವಾದ್ವೈತ ಪರವಾಗಿ ಅಧ್ಯಾತ್ಮ ಪರಂಪರೆಯ ಭಾಗವಾಗಿ ಅರಿವನ್ನು ಹಂಚುತ್ತಿದ್ದವು. ಇತ್ತೀಚಿನ ದಶಕಗಳಲ್ಲಿ ವಚನಗಳಿಗೆ ಸಾಮಾಜಿಕ ಆಯಾಮವನ್ನು ಪ್ರಧಾನವಾಗಿ ಆರೋಪಿಸಿ ವಚನಗಳ ಆಧ್ಯಾತ್ಮ ಪರಂಪರೆಯನ್ನು ಬೇಕಂತಲೇ ಮರೆಮಾಚಲಾಯಿತು. ಪ್ರೊಫೆಸರ್ ಬಾಲಗಂಗಾಧರ ಅವರು ‘ಕೊಟ್ಟಕುದುರೆ…’ ಪುಸ್ತಕದಲ್ಲಿನ ತಮ್ಮ ಪ್ರಬಂದದಲ್ಲಿ ತಿಳಿಸಿರುವಂತೆ ವಚನಕಾರರು ಆರು ಮೆಟ್ಟಿಲುಗಳ ಶಿವ ಸಾಯುಜ್ಯ ಸಾಧನೆಯನ್ನು ಸಾಧಕರಿಗೆ ಬೋಧಿಸಿದ್ದಾರೆ. ಆದ್ದರಿಂದ ವಚನಗಳಿಗೆ ಕೇವಲ ಅಧ್ಯಾತ್ಮ ಸಾಧನೆಯೇ ಪ್ರಧಾನ ಮುಖ್ಯ ಗುರಿ, ಸಾಮಾಜಿಕ ಪರಿವರ್ತನೆ ಅಲ್ಲ. ಅಲ್ಲಮ ಪ್ರಭುಗಳ ವಚನಗಳನ್ನು ಓದಿದರೆ ಉಪನಿಷದ್ಗಳ ಸಾರಸರ್ವಸ್ವವನ್ನೇ ಅಲ್ಲಿ ಕನ್ನಡದಲ್ಲಿ ಕಟ್ಟಿ ಕೊಟ್ಟಿದ್ದಾರೆ.
ಅಧ್ಯಾತ್ಮದ ದೃಷ್ಟಿಯಿಂದ ವಚನಗಳನ್ನು ಓದಿದರೆ ಏನೋ ಅನಾಹುತವಾಗಿಬಿಡುತ್ತದೆ ಅನ್ನುವಂತೆ ಆಡ್ತಾರಲ್ಲಾ-ಏನು ಮಾಡೋದು?
ಬಹಳ ಉತ್ತಮವಾದ ಪುಸ್ತಕ. ಸ್ಥಾಪಿತ ವಿಚಾರಗಳನ್ನು ಅಲ್ಲಗಳೆಯುತ್ತಿರುವದರಿಂದ ಮತ್ತು ಹಾಗೆ ಆ ವಿಚಾರಗಳನ್ನೇ ಪ್ರತಿಪಾದಿಸಿ ಹೊಟ್ಟೆ ಹೊರೆಯುವವರ ಗಂಜಿಯ ಬಟ್ಟಲಿಗೆ ಕುತ್ತು ತಂದುದ್ದಕ್ಕೆ ಈ ಪುಸ್ತಕದ ಗತಿ ಏನಾಗುತ್ತದೋ ಎಂಬ ಚಿಂತೆ ಆಗಿದೆ. ಏಕೆಂದರೆ ನಮ್ಮ ಗಂಜಿ ಕಸಿದುಕೊಳ್ಳುತ್ತಿದ್ದಾರೆಂದರೆ ಸುಮ್ಮನಿರಲಾದೀತೆ? ವಾಮಮಾರ್ಗಕ್ಕೆ ಕೊರತೆಯೇ? ಪುಸ್ತಕವನ್ನು ಸ್ಥಾಪಿತ ವಿಚಾರ ಪ್ರತಿಪಾದಕ ಮಂಡಳಿಯಿಂದ ರಕ್ಷಿಸಲು ಆ ವಚನಕಾರರನ್ನೇ ಪ್ರಾರ್ಥಿಸೋಣವೆ?
+1