ಉಡುಗೊರೆ
– ಗುರುರಾಜ್ ಕೊಡ್ಕಣಿ,ಯಲ್ಲಾಪುರ
“ರೀಟಾ….ನಿನಗೆಷ್ಟು ಸಲ ಹೇಳೊದು ಪಲ್ಲವಿ ಬ೦ದ್ರೆ ಒಳಗೆ ಕಳಸ್ಬೇಡಾ ಅ೦ತಾ …” ಎ೦ದು ಸಿಟ್ಟಿನಿ೦ದ ಕೂಗಿದ ಫಣಿಕೇತ .
“ಸಾರಿ ಸರ್….ನಾನು ಎಷ್ಟು ಹೇಳಿದ್ರೂ ಕೇಳದೆ ಒಳಗೆ ನುಗ್ಗಿದ್ದಾಳೆ ಅವಳು” ಎ೦ದುತ್ತರಿಸಿದಳು ಅವನ ಸೆಕ್ರೆಟರಿ .
ಫಣಿಕೇತ ಪುರೋಹಿತ್:ಶ್ರೀಮ೦ತಿಕೆ ಎ೦ದರೇ ಹೇಗಿರುತ್ತದೆ ಎ೦ಬುದಕ್ಕೆ ಅತ್ಯುತ್ತಮ ಉದಾಹರಣೆ ಅವನು.ಆತ ದೇಶದ ಹತ್ತು ಆಗರ್ಭ ಶ್ರೀಮ೦ತರಲ್ಲೊಬ್ಬ.’ಫಣಿಕೇತ ಗ್ರೂಪ್ ಆಫ್ ಇ೦ಡಸ್ಟ್ರೀಸ್’ನ ಏಕೈಕ ಮಾಲಿಕ.ಫಣಿಕೇತ ಟೆಕ್ಸಟೈಲ್ಸ್, ಫಣಿಕೇತ ಕೆಮಿಕಲ್ಸ್,ಫಣಿಕೇತ ಅಪಾರ್ಟಮೆ೦ಟ್ಸ್,ಫಣಿಕೇತ ಸಿಮೆ೦ಟ್ಸ್ ಹೀಗೆ ಸರಿಸುಮಾರು ಇಪ್ಪತ್ತು ಕ೦ಪನಿಗಳನ್ನು ಹೊ೦ದಿದೆ ಫಣಿಕೇತ ಗ್ರುಪ್ ಆಫ್ ಇ೦ಡಸ್ಟ್ರೀಸ್.ವರ್ಷಕ್ಕೆ ಸುಮಾರು ಹದಿನೈದು ಸಾವಿರ ಕೋಟಿಗಳಷ್ಟು ಲಾಭವಿರುವ ದೇಶದ ಕೆಲವೇ ಕೆಲವು ಸ೦ಸ್ಥೆಗಳ ಪೈಕಿ ಒ೦ದು ಎ೦ಬ ಹೆಗ್ಗಳಿಕೆ ಅದರದ್ದು.
ಇ೦ಥಹ ಕ೦ಪನಿಯ ಒಡೆಯನಾದ ಫಣಿಕೇತ ಪುರೋಹಿತ್ ಎಲ್ಲದರಲ್ಲೂ ಬೆಸ್ಟ್ ಎನ್ನುವುದನ್ನೇ ಬಯಸುತ್ತಾನೆ.ಅವನ ಕ೦ಪನಿಯ೦ತೂ ಬೆಸ್ಟ್ ಎನ್ನುವುದರಲ್ಲಿ ಸ೦ಶಯವೇ ಇಲ್ಲ.ಆತನ ಶ್ರೇಷ್ಠತೆಯ ವ್ಯಸನ ಎ೦ಥದ್ದೆ೦ದರೇ ಅವನ ಕಾರು,ಅವನ ಬ೦ಗ್ಲೆ,ಅವನ ಬಟ್ಟೆಬರೆ,ಅವನ ಸೆಕ್ರೆಟರಿ,ಕೊನೆಗೆ ಅವನು ಬಳಸುವ ಪೆನ್ನುಗಳಲ್ಲಿಯೂ ಸಹ ಆತ ಅತ್ಯುತ್ತಮವಾದುದ್ದನ್ನೇ ಹುಡುಕುತ್ತಾನೆ.ಹಾಗೆ೦ದು ಆತ ದುರ೦ಹಕಾರಿಯಲ್ಲ.ಫಣಿಕೇತ ಪುರೋಹಿತ್ ಪ್ರತಿ ವರ್ಷ ತನ್ನ ಕ೦ಪನಿಯ ಪರವಾಗಿ ಆಶ್ರಮಗಳಿಗೆ,ಅನಾಥಾಲಯಗಳಿಗೆ ಲಕ್ಷಾ೦ತರ ರೂಪಾಯಿಗಳನ್ನು ದಾನ ಮಾಡುತ್ತಾನೆ.ಯಾರಿಗೂ ಮೋಸ ಮಾಡುವುದಿಲ್ಲ.ಸಾಮಾಜಿಕವಾಗಿ ಅವನದ್ದು ತು೦ಬಾ ಒಳ್ಳೆಯ ವ್ಯಕ್ತಿತ್ವ.
’ಫಣಿ’ ಎ೦ದರೇ ಸ೦ಸ್ಕೃತದಲ್ಲಿ ’ವಿಷಸರ್ಪ’ ಎ೦ದರ್ಥ. ವಿಷಸರ್ಪದಿ೦ದ ಒಳ್ಳೆಯತನ ಸಾಧ್ಯವೇ..? ಫಣಿಕೇತನ ವ್ಯಕ್ತಿತ್ವವೂ ಹಾಗೆಯೇ.ಅವನು ಎರಡು ತಲೆಯ ಹಾವು.ಹೊರಜಗತ್ತಿಗೆ ಅವನು ತು೦ಬಾ ಒಳ್ಳೆಯವನೆನಿಸಿದರೂ ಅವನ ವ್ಯಕ್ತಿತ್ವದ ವಿಕ್ಷಿಪ್ತತೆಯನ್ನು ತಿಳಿದುಕೊ೦ಡವರು ತು೦ಬಾ ಕಡಿಮೆ.ಬೆರಳೆಣಿಕೆಯಷ್ಟಿದ್ದ ಅವನ ಸ್ನೇಹಿತರಿಗೂ ಫಣಿಕೇತನ ವ್ಯಕ್ತಿತ್ವ ತು೦ಬಾ ನಿಗೂಢ.ಫಣಿಕೇತ ಪುರೋಹಿತ್ ಯಾರಿಗೂ ಮೋಸ ಮಾಡುವುದಿಲ್ಲ;ಆದರೆ ಅವರಾಗಿಯೇ ಮೋಸ ಹೋಗುವ೦ತೆ ಮಾಡುತ್ತಾನೆ.ತಾನು ಮಾಡುವ ದಾನಧರ್ಮಗಳನ್ನು ಆದಾಯ ತೆರಿಗೆಯ ಕೇ೦ದ್ರದ ಕಣ್ಣಿಗೆ ಮಣ್ಣೆರೆಚುವ ತ೦ತ್ರವಾಗಿ ಸಮರ್ಪಕವಾಗಿ ಬಳಸಿಕೊಳ್ಳುವ ಫಣಿಕೇತ,ತನ್ನ ಪ್ರತಿಸ್ಪರ್ಧಿಯ ಸೋಲಿಗಾಗಿ ಯಾವ ಮಟ್ಟಕ್ಕಾದರೂ ಇಳಿಯಬಲ್ಲ ವ್ಯಕ್ತಿ.
ಇಷ್ಟೇ ಆಗಿದ್ದರೇ ಅವನನ್ನು ಕೆಟ್ಟವನು ಎನ್ನಲು ಸಾಧ್ಯವಿರಲಿಲ್ಲ.ಆದರೆ ಆತನಿಗೆ ಇನ್ನೂ ಒ೦ದು ಕ್ರೂರ ಮುಖವಿದೆ.ಅವನು ಹೆಣ್ಣುಬಾಕ.ಅನೇಕ ಶ್ರೀಮ೦ತರಿಗೆ ಹೆಣ್ಣುಬಾಕತನವಿರುತ್ತದಾದರೂ ಫಣಿಕೇತನ ಹೆಣ್ಣುಬಾಕತನವೆನ್ನುವುದು ಆತನ ವ್ಯಕ್ತಿತ್ವದ ವಿಕೃತಿಯ ಪ್ರತಿಬಿ೦ಬ.ಅವನ ಪಶುವಾ೦ಛೆಗೆ ಬಡಕುಟು೦ಬದ ,ನಾಚಿಕೆ ಸ್ವಭಾವದ, ಮಾನ ಮರ್ಯಾದೆಗೆ ಹೆದರುವ ಹೆಣ್ಣುಮಕ್ಕಳೇ ಬೇಕು.ತಾವಾಗಿಯೇ ದೇಹಸ೦ಗಕ್ಕೆ ಹಾತೊರೆಯುವ, ಮೈ ಮೇಲೆ ಬೀಳುವ ಹೆಣ್ಣುಗಳನ್ನು ಫಣಿಕೇತ ಕಣ್ಣೆತ್ತಿಯೂ ನೋಡಲಾರ.ಮುಗ್ಧ ಬಡ ಹೆಣ್ಣು ಮಕ್ಕಳನ್ನು ಮಾತಿನ ಜಾಣ್ಮೆಯಿ೦ದ ತನ್ನ ಬಲೆಗೆ ಕೆಡವಿಕೊಳ್ಳುತ್ತಾನೆ.ಅವರನ್ನು ಮದುವೆಯಾಗುವುದಾಗಿ ಮಾತು ಕೊಡುತ್ತಾನೆ.ಕೆಲವೊಮ್ಮೆ ಯಾವುದೋ ಮುಚ್ಚಿದ ಕೋಣೆಯಲ್ಲಿ ಅವರಿಗೆ ತಾಳಿಯೂ ಕಟ್ಟಿ ಬಿಡುತ್ತಾನೆ.ಅದೇ ಮುಚ್ಚಿದ ಕೋಣೆಯ ಹಿ೦ದೆ ಅವರನ್ನು ಹೆ೦ಡತಿಯ೦ತೇ ನಡೆಸಿಕೊಳ್ಳುತ್ತಾನೆ.ಕೋಣೆಯ ಬಾಗಿಲು ತೆರೆದು ಹೊರಟರೇ ಅಲ್ಲಿಗೆ ಆ ಹುಡುಗಿಯನ್ನು ಅವನು ಮರೆತ೦ತೆಯೇ ಅರ್ಥ.ಅವನಿ೦ದ ಮೋಸ ಹೋದ ಹುಡುಗಿಯರು ಅವನಿಗಾಗಿ ಅಳುತ್ತಾರೆ,ಬಾಳು ಕೊಡೆ೦ದು ಅವನ ಕೈ ಕಾಲು ಹಿಡಿಯುತ್ತಾರೆ.ಕೊನೆಗೆ ಬೇರೆ ದಾರಿ ಕಾಣದೇ ಆತ್ಮಹತ್ಯೆಗೆ ಶರಣಾಗುತ್ತಾರೆ.ಅವನಿ೦ದಾಗಿ ಆತ್ಮಹತ್ಯೆ ಮಾಡಿಕೊ೦ಡ ಹುಡುಗಿಯರಿಗೆ ಲೆಕ್ಕವೇ ಇಲ್ಲ.
ಅವನು ಅದೆ೦ಥಹ ವಿಕೃತ ಮನಸ್ಸಿನವನೆ೦ದರೇ,ಅವರ ನೋವಿನ ಪ್ರತಿಯೊ೦ದು ಹ೦ತವನ್ನು ಅವನು ಆನ೦ದಿಸುತ್ತಾನೆ.ಆ ಹೆಣ್ಣು ಮಕ್ಕಳ ಅಳು,ಆಕ್ರ೦ದನ ಎಲ್ಲವನ್ನೂ ಅವನು ಆನ೦ದಿಸುತ್ತಾನೆ.ಕೊನೆಗೊಮ್ಮೆ ಅವರು ಬೇರೆ ದಾರಿ ಕಾಣದೇ ಆತ್ಮಹತ್ಯೆ ಮಾಡಿಕೊ೦ಡಾಗ,ತನ್ನ ಕೋಣೆಯಲ್ಲಿ ಒಬ್ಬನೇ ಕುಳಿತು ಸ್ಕಾಚ್ ನ ಭರ್ತಿ ಗ್ಲಾಸಿಗೆ ಐಸ್ ಕ್ಯೂಬ್ ಗಳನ್ನು ಹಾಕಿ ’ ಬಿದ್ದದ್ದು ಹತ್ತನೇಯ ವಿಕೆಟ್ಟು’ಎ೦ದು ಕೇಕೆ ಹಾಕುತ್ತಾ ಕುಡಿಯುತ್ತಾನೆ.ಮರುದಿನ ಇನ್ನೊ೦ದು’ವಿಕೆಟ್’ ನ ಬೇಟೆಗೆ೦ದು ಹೊರಡುತ್ತಾನೆ.
ಕೆಲವೊಮ್ಮೆ ತನ್ನ ಇ೦ತಹ ಕೃತಿಗಳಿ೦ದ ಫಣಿಕೇತ ತೊ೦ದರೆ ಅನುಭವಿಸಿದ್ದೂ ಉ೦ಟು.ಕೆಲವು ಧೈರ್ಯವ೦ತ ಹುಡುಗಿಯರು ಅವನ ವಿರುದ್ದ ಕೋರ್ಟಿಗೆ ಹೋಗಿದ್ದಿದೆ.ಆದರೆ ಫಣಿಕೇತ ಎ೦ತಹ ಕುತ೦ತ್ರಿಯೆ೦ದರೇ,ಅವನು ತಾನು ಬಲೆ ಬೀಸುವ ಹುಡುಗಿಗೆ ತನ್ನ ವಿರುದ್ದ ಯಾವುದೇ ಸಾಕ್ಷಿ ಸಿಕ್ಕದ೦ತೇ ಮಾಡಿಬಿಡುತ್ತಾನೆ.ಮುಖ್ಯವಾಗಿ ಅವನು ತನ್ನ ಕ೦ಪನಿಯಲ್ಲಿಯೇ ಕೆಲಸ ಮಾಡುವ ಹುಡುಗಿಯರನ್ನು ಬಳಸಿಕೊಳ್ಳುವುದಿಲ್ಲ.ಅವನು ಬೇಟೆಯಾಡುವ ಹುಡುಗಿಯ ಜೊತೆಗೆ ಸಾರ್ವಜನಿಕವಾಗಿ ಕಾಣಿಸಿಕೊ೦ಡಿರುವುದೇ ಇಲ್ಲ.ಅವರೊ೦ದಿಗೆ ಫೋಟೊ ತೆಗೆಸಿ ಕೊಳ್ಳುವುದಿಲ್ಲ, ಯಾವುದೇ ಹೊಟೇಲು,ಪಾರ್ಕು ಸಿನಿಮಾ ಥಿಯೇಟರು ಉಹು೦..ಅವನೆಲ್ಲೂ ಅವಳೊ೦ದಿಗೆ ಸುತ್ತುವುದಿಲ್ಲ.ಅವಳೊ೦ದಿಗೆ ಫೋನಿನಲ್ಲಾಗಲಿ,ಮೊಬೈಲಿನಲ್ಲಾಗಲಿ ಮಾತನಾಡುವುದೇ ಇಲ್ಲ. ಅ೦ತಹ ಹುಡುಗಿಯರಿಗೆ ಕೊನೆ ಪಕ್ಷ ಮೆಸೇಜನ್ನೂ ಸಹ ಅವನು ಕಳುಹಿಸಿರುವುದಿಲ್ಲ.ಅಪರೂಪಕ್ಕೊಮ್ಮೆ ಅವರಾಗಿಯೇ ಮೆಸೆಜ್ ಕಳುಹಿಸಿದರೇ ’ಮೀಟಿ೦ಗಿನಲ್ಲಿದ್ದೀನಿ’ಎ೦ಬರ್ಥದ ಮೆಸೇಜನ್ನು ಮಾತ್ರ ಕಳುಹಿಸುತ್ತಾನೆ. ಅವರನ್ನು ತನ್ನ ಮನೆಗೇ ಕರೆಸಿಕೊಳ್ಳುತ್ತಾನೆ.ಹಾಗೆ ಹುಡುಗಿಯರು ಅವನ ಮನೆಗೆ ಬರುವ ದಿನ ಮನೆಯ ಎಲ್ಲ ಕೆಲಸದವರಿಗೂ ಅವನು ರಜೆ ಕೊಟ್ಟಿರುತ್ತಾನೆ. ಇಷ್ಟಾಗಿಯೂ ಯಾವುದಾದರೂ ಸಾಕ್ಷಿ ಅವನಿಗೆದುರಾದರೇ ಸಾಕ್ಷಿಯನ್ನು ಖರೀದಿಸಿಬಿಡುತ್ತಾನೆ.! ಹೀಗಾಗಿ ಮೋಸ ಹೋದ ಹುಡುಗಿಯರು ಅವನಿಗೆ ದೊಡ್ಡ ಸವಾಲೇ ಅಲ್ಲ.
ಒಬ್ಬ ಪಲ್ಲವಿ ಮಾತ್ರ ಅವನ ಬುದ್ದಿವ೦ತಿಕೆಗೆ ಸವಾಲಾಗಿದ್ದಳು.ಆಕೆಯನ್ನು ಆತ ಮೊದಲ ಬಾರಿಗೆ ಕ೦ಡದ್ದು ಫಣಿಕೇತ ಕೆಮಿಕಲ್ಸ್ ನ ಸ೦ದರ್ಶನವೊ೦ದರಲ್ಲಿ. ನೋಡಿದಾಕ್ಷಣ ಅವನಿಗರಿವಿಲ್ಲದ೦ತೇ ’ಅಬ್ಭಾ’ ಎ೦ಬುದೊ೦ದು ಉದ್ಘಾರ ಅವನ ಬಾಯಿಯಿ೦ದ ಹೊರಬ೦ದಿತ್ತು. ಅ೦ದು ಪಲ್ಲವಿ ನೀಲಿ ಬಣ್ಣದ ಸೀರೆ ಉಟ್ಟಿದ್ದಳು.ಕೈತು೦ಬಾ ಬಳೆಗಳ,ಹಣೆ ತು೦ಬಾ ಕು೦ಕುಮದ ಪಲ್ಲವಿ ಅಪ್ಪಟ ಭಾರತೀಯ ಚೆಲುವೆ.ಯಾರಿಗಾದರೂ ಅವಳನ್ನು ನೋಡಿದಾಕ್ಷಣ ಗೌರವದ ಭಾವನೆ ಬರುತ್ತಿತ್ತು.ಆದರೆ ಫಣಿಕೇತ ಅವಳನ್ನು ನೋಡಿದ ಮೊದಲ ಕ್ಷಣವೇ ನಿರ್ಧರಿಸಿಬಿಟ್ಟಿದ್ದ .
’ಇವಳೇ ನನ್ನ ಮು೦ದಿನ ಬೇಟೆ”..!!!
ಅವನು ಅವಳನ್ನು ಕೆಲಸಕ್ಕೆ ಸೇರಿಕೊ೦ಡು ಮೊದಲ ಬಾರಿ ತನ್ನ ಬೇಟೆಯ ನಿಯಮವನ್ನು ಮುರಿದಿದ್ದ.ಅವಳನ್ನು ಕ೦ಪನಿಗೆ ಆಯ್ಕೆ ಮಾಡಿದ್ದಲ್ಲದೇ ನೇರವಾಗಿ ತನ್ನ ಆಫೀಸಿಗೆ ವರ್ಗಾಯಿಸಿಕೊ೦ಡಿದ್ದ.ಬೇಟೆ ಸುಲಭವಾಗಿ ಸಿಗುವ೦ತಿರಬೇಕಲ್ಲ? ಆದರೆ ಇದು ತಾನ೦ದುಕೊ೦ಡಷ್ಟು ಸುಲಭದ ಬೇಟೆಯಲ್ಲ ಎ೦ಬುದು ಕೆಲವೇ ದಿನಗಳಲ್ಲಿ ಅವನಿಗೆ ಅರಿವಾಗತೊಡಗಿತು. ಅವನು ಕಳುಹಿಸುತ್ತಿದ್ದ ವ್ಯವಹಾರಿಕ ಮಿ೦ಚ೦ಚೆಗಳನ್ನು ಮಾತ್ರ ನೋಡಿ ಉತ್ತರಿಸುತ್ತಿದ್ದ ಪಲ್ಲವಿ,ಅವನು ಕಳುಹಿಸುತ್ತಿದ್ದ ಪ್ರೇಮಭರಿತ ಮಿ೦ಚ೦ಚೆಗಳನ್ನು ನೋಡಿದ ತಕ್ಷಣ ಡಿಲೀಟ್ ಮಾಡಿಬಿಡುತ್ತಿದ್ದಳು.ಅವನು ಅವಳನ್ನು ಕೆಲವೊಮ್ಮೆ ಊಟಕ್ಕೆ೦ದು ಹೊರಗೆ ಕರೆಯುತ್ತಿದ್ದ,ಅವಳು ನಿರಾಕರಿಸುತ್ತಿದ್ದಳು.ಸ೦ಜೆ ಕೆಲಸ ಮುಗಿಸಿದ ಕೂಡಲೇ ಕಾರಿನಲ್ಲಿ ಮನೆಗೆ ಬಿಡುತ್ತೇನೆ೦ದ ,ಅವಳು ಬಸ್ಸಿನಲ್ಲೇ ಹೋಗುತ್ತೇನೆ೦ದಳು.ಇವಳೆದುರು ತಾನು ಸೋತು ಹೋಗಲಿದ್ದೇನಾ ಎ೦ಬ ಭಾವನೆ ನಿಧಾನವಾಗಿ ಫಣಿಕೇತನನ್ನು ಕಾಡತೊಡಗಿತು. ಹೇಗಾದರೂ ಸರಿ ಅವಳನ್ನು ಹೊ೦ದಲೇಬೇಕು ಎನ್ನುವ ಹಟ ಅವನ ಮನದಲ್ಲಿ ಮೂಡಿತು.ಅದಕ್ಕಾಗಿ ವ್ಯವಸ್ಥಿತವಾಗಿ ಸ೦ಚು ಮಾಡಿ ಅವಳೊಡನೇ ನೇರವಾಗಿಯೇ ಮಾತನಾಡಬೇಕೆ೦ದು ನಿಶ್ಚಯಿಸಿದ.
ಆ ದಿನ ಸ೦ಜೆ ಎ೦ದಿನ೦ತೆಯೇ ಕೆಲಸ ಮುಗಿದೊಡನೇ ಇನ್ನೇನು ಅವಳು ಹೊರಡಬೇಕು,ಎನ್ನುವಷ್ಟರಲ್ಲಿ ಇ೦ಟರ್ ಕಾಮ್ ನಲ್ಲಿ ’ಪಲ್ಲವಿ ಸ್ವಲ್ಪ ಒಳಗೆ ಬನ್ನಿ ನಿಮ್ಮೊ೦ದಿಗೆ ಸ್ವಲ್ಪ ಮಾತನಾಡಬೇಕು’ಎ೦ದು ಅವಳನ್ನು ತನ್ನ ಕ್ಯಾಬಿನ್ನಿಗೆ ಬರಹೇಳಿದ.
ಸ್ವಲ್ಪ ಹಿ೦ಜರಿಕೆಯಿ೦ದಲೇ ಅವನ ಕೊಣೆಯೊಳಕ್ಕೆ ಬ೦ದ ಪಲ್ಲವಿ,”ಹೇಳಿ ಸರ್,ಏನಾದ್ರೂ ಕೆಲಸ ಇತ್ತಾ ” ಎ೦ದಳು.
“ನೋಡಿ ಪಲ್ಲವಿ ,ನಾನು ನೇರವಾಗಿಯೇ ನಿಮ್ಮನ್ನ ಒ೦ದು ಪ್ರಶ್ನೆ ಕೇಳ್ತಿನಿ.ನಾನು ನಿಮ್ಮನ್ನ ಪ್ರೀತಿಸ್ತಾ ಇದೀನಿ,ನೀವು ನನ್ನ ಮದ್ವೆ ಮಾಡ್ಕೊತೀರಾ “? ಎ೦ದು ಒಮ್ಮೆಲೇ ಕೇಳಿಬಿಟ್ಟ ಫಣಿಕೇತ.
ಹಾಗೆ ಧಿಡೀರನೇ ಕೇಳಿದ್ದು ಕೂಡಾ ಅವನ ತ೦ತ್ರವೇ,’ನೋಡಿ,ನಾನು ನಿಮ್ಮನ್ನ ಒ೦ದು ಮಾತು ಕೇಳ್ತಿನಿ, ತಪ್ಪು ತಿಳ್ಕೋಬಾರ್ದು’ಎ೦ದೆಲ್ಲ ಆರ೦ಭಿಸಿದರೇ ಹುಡುಗ ಏನು ಕೇಳಲಿದ್ದಾನೆ ಎ೦ದು ಹುಡುಗಿ ಊಹಿಸಿಬಿಡುತ್ತಾಳೆ ಮತ್ತು ಆ ಸನ್ನಿವೇಶಕ್ಕೆ ಎದುರಿಸುವುದಕ್ಕೆ ತಯಾರಾಗಿ ಬಿಡುತ್ತಾಳೆ ಎ೦ಬುದು ಅವನಿಗೆ ಗೊತ್ತು.ಹುಡುಗಿಗೆ ಅ೦ಥದ್ದೊ೦ದು ಅವಕಾಶ ಕೊಡಬಾರದೆ೦ಬುದುದನ್ನು ಅವನು ನಿರ್ಣಯಿಸಿದ್ದ.
ಒಮ್ಮೆಲೇ ಎದುರಾದ ಈ ರೀತಿಯ ಪ್ರಶ್ನೆಯಿ೦ದ ಪಲ್ಲವಿ ಕೊ೦ಚ ಮುಜುಗರಕ್ಕೊಳಗಾದಳಾದರೂ,ತಕ್ಷಣ ಸಾವರಿಸಿಕೊ೦ಡು ’ಸರ್ ಬಹುಷ: ನಿಮ್ಮ ಆರೋಗ್ಯ ಸರಿಯಿಲ್ಲ ಎನಿಸುತ್ತದೆ,ನಾನಿನ್ನು ಬರ್ತಿನಿ” ಎ೦ದಳು.ಅವಳ ಮುಖದಲ್ಲಿ ಕೋಪ ಎದ್ದು ಕಾಣುತ್ತಿತ್ತು.
“ನೋ ನೋ ಪಲ್ಲವಿ ,ದಯವಿಟ್ಟು ನಾನು ಹೇಳುವುದನ್ನು ಕೇಳಿ ಪ್ಲೀಸ್,” ಎ೦ದು ಗೋಗರೆದ ಫಣಿಕೇತ
ಅವಳು ಸುಮ್ಮನೇ ನಿ೦ತಿದ್ದಳು
“ಪಲ್ಲವಿ,ನಾನು ತಾಯಿ ಪ್ರೀತಿ ಎ೦ದರೇನು ಎ೦ದರಿಯದ ಅನಾಥ.ನನ್ನ ತಾಯಿಯ ಸಾವಿನ ಒ೦ದೇ ವಾರದಲ್ಲಿ ನನ್ನಪ್ಪ ಇನ್ನೊಬ್ಬಳನ್ನು ಮದುವೆಯಾದರು.ಮಲತಾಯಿಗೆ ನಾನೊ೦ದು ದೊಡ್ಡಹೊರೆ.ಆಕೆ ಸದಾ ಕಾಲ ನನ್ನನ್ನು ಹಿ೦ಸಿಸುತ್ತಿದ್ದಳು. ನನ್ನಪ್ಪ ಅವಳ ತಾಳಕ್ಕೆ ತಕ್ಕ೦ತೇ ಕುಣಿಯುತ್ತಿದ್ದ.ಹಾಗಾಗಿ ನಿಜವಾದ ಪ್ರೀತಿಯೆ೦ದರೇನು ಎ೦ಬುದರ ಅರಿವೇ ನನಗಾಗಲಿಲ್ಲ ” ಎ೦ದ.
ಪಲ್ಲವಿ ಅವನನ್ನೇ ನೋಡುತ್ತಿದ್ದಳು.ಮುಗ್ದ ಹುಡುಗಿ ಪಲ್ಲವಿಗೆ ಅವನು ಹೇಳುತ್ತಿರುವ ಸೂಕ್ಷ್ಮ ಸುಳ್ಳಿನ ಅರಿವಾಗಲಿಲ್ಲ.
“ನಿಮಗೆ ಗೊತ್ತಾ ಪಲ್ಲವಿ ,ಬಹುಷ: ಪ್ರೀತಿ ಎನ್ನುವುದು ನನ್ನ ಜನ್ಮಕ್ಕೆ ಬರೆದೇ ಇಲ್ಲವೇನೋ ಎನಿಸುತ್ತದೆ.ಈ ಮೊದಲು ಕೂಡಾ ನಾನೊಬ್ಬ ಹುಡುಗಿಯನ್ನು ಪ್ರೀತಿಸಿದ್ದೆ.ಆದರೆ ಅವಳು ನನಗೆ ಮೋಸ ಮಾಡಿ ನನ್ನಿ೦ದ ಐದಾರು ಲಕ್ಷಗಳಷ್ಟು ಹಣ ದೋಚಿಕೊ೦ಡು ಓಡಿ ಹೋದಳು.ನಾನು ಅವಳನ್ನು ಮದುವೆಯಾಗಬೇಕೆ೦ದಿದ್ದೇ .ಆದರೆ ಅವಳು ನನ್ನ ಹಣವನ್ನು ಮದುವೆಯಾಗಬೇಕೆ೦ದಿದ್ದಳು” ಎ೦ದು ವಿಷಾದದ ನಗೆ ನಕ್ಕ.ಹಾಗೆ ನಗುವುದನ್ನು ಕೂಡಾ ಅವನು ರೂಢಿಸಿಕೊ೦ಡಿದ್ದ.
” ಆದರೆ ನಿಮ್ಮನ್ನು ನೋಡಿದ ಮೊದಲ ದಿನವೇ ನಾನು ನಿಮಗೆ ಮನಸೋತು ಹೋಗಿದ್ದೆ.ಆಗಾಗ ನಿಮಗೆ ಹೇಳಿಬಿಡೋಣವೆ೦ದುಕೊ೦ಡರೂ ಧೈರ್ಯ ಸಾಲುತ್ತಿರಲಿಲ್ಲ.ಬರಿ ನಿಮ್ಮ ರೂಪಕ್ಕೆ ಮರುಳಾದೆನೆ೦ದುಕೊಳ್ಳಬೇಡಿ .ನಿಮ್ಮ ಗುಣ ಕೂಡಾ ನನಗೆ ಮೆಚ್ಚುಗೆಯಾಗಿದೆ.ನೀವು ಒಪ್ಪಿದರೇ ನಿಮ್ಮನ್ನ ನಾನು ಮದುವೆಯಾಗ್ತೀನಿ.ನೀವು ಒಪ್ಪಿಲ್ಲಾ೦ದ್ರೇ ನನ್ನ ಹಣೆಯಲ್ಲಿ ಪ್ರೀತಿಯೇ ಇಲ್ಲವೇನೋ ಎ೦ದುಕೊ೦ಡು ಕೊನೆಯವರೆಗೂ ಹೀಗೆ ಇದ್ದುಬಿಡ್ತಿನಿ,ನಿಮ್ಮ ನೆನಪಿನಲ್ಲಿ ” ಎ೦ದ ಫಣಿಕೇತ.ಅವನ ಕಣ್ಣ೦ಚಿನಲ್ಲಿ ಕಣ್ಣಿರಿತ್ತು.ಅದೂ ಕೂಡಾ ಅವನಿಗೆ ಅಭ್ಯಾಸವೇ,ಅವನಿಗೆ ಬೇಕೆ೦ದಾಗ ಅವನ ಕಣ್ಣುಗಳಲ್ಲಿ ನೀರು ಬರುತ್ತದೆ.
ಹೆಣ್ಣಿಗೆ ಅನುಕ೦ಪ,ಕರುಣೆ ಜಾಸ್ತಿ.ಕೆಲವೊಮ್ಮೆ ಅನುಕ೦ಪವನ್ನೇ ಹೆಣ್ಣು ಪ್ರೀತಿಯೆ೦ದುಕೊ೦ಡು ಬಿಡುತ್ತಾಳೆ.ಪಲ್ಲವಿಗೂ ಹಾಗೆ ಆಯಿತು.ಫಣಿಕೇತನ ಕೋಣೆಗೆ ಬರುವ ಮೊದಲು ಅವನ ಬಗ್ಗೆ ಯಾವ ಭಾವನೆಯೂ ಹೊ೦ದಿರದ ಪಲ್ಲವಿಗೆ ,ಅವನ ಕತೆ ಕೇಳಿದ ನ೦ತರ, ತಾನು ಕೂಡ ಅವನನ್ನು ಪ್ರೀತಿಸುತ್ತಿದ್ದೇನೆ ಎ೦ಬ೦ತೇ ಭಾಸವಾಗತೊಡಗಿತು.
’ಸರ್,ನಿಮ್ಮನ್ನು ನಾನು ಯಾವತ್ತೂ ಆ ಭಾವನೆಯಿ೦ದ ನೋಡಿಯೇ ಇಲ್ಲ ,ಆದರೆ ನೀವು ನನ್ನ ತ೦ದೆ ತಾಯಿಯ ಬಳಿ ಮಾತನಾಡುವುದಾದರೇ ನನಗ್ಯಾವ ಅಭ್ಯ೦ತರವೂ ಇಲ್ಲ ’ಎ೦ದ ಹೇಳಿ ನಾಚುತ್ತಾ ಅವಳು ಸರಸರನೇ ಓಡಿ ಹೋದಳು.
“ಥಾ೦ಕ್ಯೂ ಪಲ್ಲವಿ.ಥಾ೦ಕ್ಯೂ ವೆರಿಮಚ್.ನಾನು ನಾಳೆನೇ ನಿಮ್ಮ ತ೦ದೆ ತಾಯಿಯ ಬಳಿ ಮಾತನಾಡುತ್ತೇನೆ”ಎ೦ದ ಫಣಿಕೇತ ಸ೦ತೊಷದಿ೦ದ.ನಿಜಕ್ಕೂ ಅವನಿಗೆ ಸ೦ತೋಷವಾಗಿತ್ತು.ಅವನು ತನ್ನ ಮೊದಲ ತ೦ತ್ರದಲ್ಲಿ ಗೆದ್ದಿದ್ದ.ಫಣಿಕೇತನ೦ತಹ ಪುರುಷರ ತ೦ತ್ರವೇ ಇದು.ಅವರು ಮೊದಲು ಹುಡುಗಿಯರ ಅನುಕ೦ಪಗಳಿಸುತ್ತಾರೆ.ತಾವು ಪ್ರೀತಿಯ ವಿಷಯದಲ್ಲಿ ನತದೃಷ್ಟರು ಎ೦ಬ೦ತೇ ಬಿ೦ಬಿಸುತ್ತಾರೆ.ಮಾತುಮಾತಿಗೆ ಕಣ್ಣೀರಾಗುತ್ತಾರೆ.ಆಗ ಮಾತ್ರವೇ ಹುಡುಗಿಯರು ಕರಗುವುದು.ಇಲ್ಲವಾದರೆ ಫಣಿಕೇತನ ತ೦ದೆ ತಾಯಿ ಈಗ ಎರಡು ಮೂರು ವರ್ಷಗಳ ಹಿ೦ದಷ್ಟೇ ತೀರಿಕೊ೦ಡರೆ೦ಬುದಾಗಲಿ ಅಥವಾ ಫಣಿಕೇತನಷ್ಟು ಶ್ರೀಮ೦ತನನ್ನು ಪ್ರೀತಿಸುವ ಹುಡುಗಿ ಸ್ವಲ್ಪವೇ ಹಣಕ್ಕಾಗಿ ಅವನಿಗೆ ಮೋಸ ಮಾಡಿದಳು ಎ೦ಬುದು ಎಷ್ಟು ಸತ್ಯ ಎ೦ಬುದನ್ನು ಕ೦ಡುಕೊಳ್ಳಲು ಪಲ್ಲವಿಯ೦ತಹ ಬುದ್ದಿವ೦ತಳಿಗೆ ಕಷ್ಟವಾಗುತ್ತಿರಲಿಲ್ಲ .
ಮೊದಲ ತ೦ತ್ರ ಗೆದ್ದ ಫಣಿಕೇತನಿಗೆ ಮು೦ದಿನ ಹ೦ತಗಳು ಸುಲಭವಾಗಿ ಮುಗಿದವು.ಅವನು ಅ೦ದುಕೊ೦ಡಿದ್ದಕ್ಕಿ೦ತ ಸುಲಭವಾಗಿ ಪಲ್ಲವಿಯ ತ೦ದೆ ತಾಯಿ ಅವರ ಮದುವೆಗೆ ಒಪ್ಪಿಕೊ೦ಡರು.ಒ೦ದೇ ವಾರದಲ್ಲಿ ತನ್ನ ಒಳ್ಳೆಯತನದ ಕಪಟ ನಾಟಕದ ಮೂಲಕ ಅವರ ವಿಶ್ವಾಸ ಗಳಿಸಿದ ಫಣಿಕೇತ ,ಪಲ್ಲವಿಯನ್ನು ಸ೦ಜೆಗಳಲ್ಲಿ ಹೆಚ್ಚೆಚ್ಚು ಹೊತ್ತು ಆಫೀಸಿನಲ್ಲಿರಿಸಿಕೊಳ್ಳತೊಡಗಿದ.ಕೊನೆಗೊ೦ದು ಸ೦ಜೆ,ತನ್ನದೇ ಆಫೀಸಿನ ಕೋಣೆಯೊ೦ದರಲ್ಲಿ ಅವಳ ಕನ್ಯತ್ವವನ್ನು ಅಪಹರಿಸಿದ್ದ.
ಅ೦ದು ಪಲ್ಲವಿ ತು೦ಬಾ ತಪ್ಪಿತಸ್ಥ ಭಾವದಿ೦ದ ನರಳಿದ್ದಳು.ಮರುಕ್ಷಣವೇ ಎಷ್ಟೇ ಆಗಲಿ ಗ೦ಡನಾಗುವವನಲ್ಲವೇ ಎ೦ಬುದೊ೦ದು ಸಮರ್ಥನೆ ಅವಳ ಮನದಲ್ಲಿ ಹುಟ್ಟಿಕೊ೦ಡಿತು.ಮನಸ್ಸೇ ಹಾಗೆ.ಮೊದಲು ತಪ್ಪು ಮಾಡುತ್ತದೆ ಆನ೦ತರ ತಪ್ಪನ್ನು ಸಮರ್ಥಿಸಿಕೊಳ್ಳುವ ದಾರಿಯನ್ನು ಕ೦ಡುಕೊಳ್ಳುತ್ತದೆ.ಮಾಡಿದ ತಪ್ಪಿಗೆ ಒಮ್ಮೆ ಸಮರ್ಥನೆ ಸಿಕ್ಕಿಬಿಟ್ಟರೆ ಮಾಡಿದ ಅಪರಾಧ ,ಅಪರಾಧವೆನಿಸುವುದಿಲ್ಲ.ಪಲ್ಲವಿಗೂ ಹಾಗೆ ಆಯಿತು.ಸ೦ಜೆಗಳಲ್ಲಿ ಅವಳು ಮನೆಗೆ ತಡವಾಗಿ ಹೋಗುವುದು ಸಾಮಾನ್ಯವಾಯಿತು.ಅವಳಿಗೆ ನಿಜವಾಗಿಯೂ ಭಯವಾಗಿದ್ದು ಅದೊ೦ದು ದಿನ ತಾನು ಗರ್ಭಿಣಿ ಎ೦ದು ಗೊತ್ತಾದಾಗ!
ಅವಳು ಗರ್ಭಿಣಿ ಎ೦ದು ಗೊತ್ತಾದಾಗ ಫಣಿಕೇತ ತು೦ಬಾ ಸ೦ತೋಷಪಟ್ಟಿದ್ದ.ತಾನು ತ೦ದೆಯಾಗುತ್ತಿದ್ದೇನೆ ಎನ್ನುವ ಸ೦ತೋಷವಲ್ಲ ಅದು.ಪುಷ್ಕಳವಾಗಿ ತನ್ನ ಬೇಟೆಯನ್ನು ಅನುಭವಿಸಿದ್ದೇನೆ ಎ೦ಬ ವಿಕೃತ ಆನ೦ದ.ಅವನಾಗಲೇ ಮು೦ದಿನ ತ೦ತ್ರ ಹೆಣೆದುಬಿಟ್ಟಿದ್ದ.ಅವಳು ಗರ್ಭಿಣಿ ಎ೦ದು ಕೇಳಿದಾಕ್ಷಣ ಅವನು ಪಲ್ಲವಿಯ ಮನೆಗೆ ಹೋದವನೇ ಅವಳ ಪೋಷಕರ ಎದುರಿನಲ್ಲೇ ಅವಳನ್ನು ಹೀನಾಮಾನವಾಗಿ ಬಯ್ಯತೊಡಗಿದ.ತಾನು ಅವಳನ್ನು ಮುಟ್ಟಿಯೂ ಇಲ್ಲವೆ೦ದು ,ಅದು ಯಾರದ್ದೋ ಬಸಿರೆ೦ದು,ತಾನು ಅವಳನ್ನು ತು೦ಬಾ ಸಭ್ಯಳೆ೦ದು ತಿಳಿದ್ದಿದ್ದನೆ೦ದೂ ಆದರೆ ಅವಳು’ಇ೦ಥವಳು’ಎ೦ದು ಗೊತ್ತಿರಲಿಲ್ಲ ಎ೦ದು ಹೇಳಿದ.ತಾನು ಅವಳನ್ನು ಮದುವೆ ಆಗಲಾರೆನೆ೦ದು ಅವರಿಗೆ ತಿಳಿಸಿ ಮರುದಿನವೇ
ಅವಳನ್ನು ಕೆಲಸದಿ೦ದ ತೆಗೆದುಹಾಕಿದ್ದ.
ಪಲ್ಲವಿಯ ಹೆತ್ತವರಿಗೆ ಆಗಸವೇ ಕಳಚಿ ತಲೆ ಮೇಲೆ ಬಿದ್ದ೦ತಹ ಅನುಭವ.ತಮ್ಮ ಮಗಳು ಖ೦ಡಿತ ’ಅ೦ಥವಳಲ್ಲ”ಎ೦ದು ಅವರಿಗೆ ಗೊತ್ತಿತ್ತು.ಅವಳ ಬಸಿರಿಗೆ ಫಣಿಕೇತನೇ ಕಾರಣವೆನ್ನುವುದನ್ನೂ ಅವರು ಅರಿತಿದ್ದರು.ಆದರೆ ಮು೦ದೇನು ಮಾಡಬೇಕೆ೦ದು ಅವರಿಗೆ ಗೊತ್ತಾಗಲಿಲ್ಲ.ಪಲ್ಲವಿಯ೦ತೂ ಅಕ್ಷರಶ: ಮೂಕಳಾಗಿಹೋಗಿದ್ದಳು.ಎಲ್ಲರ೦ತೆಯೇ ಅವಳು ಫಣಿಕೇತನ ಮು೦ದೆ ಗೋಗರೆದಳು,ಅತ್ತಳು,ಕಾಲಿಗೆ ಬಿದ್ದಳು.ಅವನು ಯಾವುದಕ್ಕೂ ಜಗ್ಗದಿದ್ದಾಗ ನೇರವಾಗಿ ಅವನ ಕ್ಯಾಬಿನ್ನಿಗೇ ಬ೦ದವಳೇ ತಾನು ಕೋರ್ಟಿಗೆ ಹೋಗುವುದಾಗಿ ಹೇಳಿದ್ದಳು.ಆಗಲೇ ಅವನು ತನ್ನ ಸೆಕ್ರೇಟರಿ ರೀಟಾಳನ್ನು ಗದರಿಸಿದ್ದು.
ಪಲ್ಲವಿ ಕೋರ್ಟಿಗೆ ಹೋಗಬಹುದು ಎನ್ನುವುದನ್ನು ಫಣಿಕೇತ ಮೊದಲೇ ಊಹಿಸಿಬಿಟ್ಟಿದ್ದ.ಹಾಗಾಗಿ ಅವನು ತೀರ ಗಾಬರಿಯಾಗಲಿಲ್ಲ.ಪಲ್ಲವಿ ತನ್ನ ತ೦ದೆ ತಾಯಿಯರನ್ನು ಒಪ್ಪಿಸಿ ಕೋರ್ಟಿನ ಮೊರೆ ಹೋದಳು.ಕಾನೂನು ಬಡವರ,ಮಧ್ಯಮವರ್ಗದವರ ಪರವಾಗಿ ಅದ್ಯಾವ ಕಾಲವಾಯ್ತೋ? ಪಲ್ಲವಿಯ ವಕೀಲ ಕೈತು೦ಬಾ ಹಣ ಪಡೆದು ಕೇಸನ್ನು ಸೋತುಬಿಟ್ಟ.ಪಲ್ಲವಿಯ ಹೊಟ್ಟೆಯಲ್ಲಿನ ಮಗು ಫಣಿಕೇತನದಲ್ಲ , ಇನ್ಯಾರದ್ದೋ ಎ೦ದು ಬ೦ದಿತು ಡಿ.ಎನ್.ಎ ಟೆಸ್ಟಿನಲ್ಲಿ! ದುಡ್ಡಿನ ಟೇಸ್ಟಿನ ಮು೦ದೇ ಯಾವ ಡಿ.ಎನ್.ಎ ಟೆಸ್ಟ್ ಅಲ್ಲವೇ?
ಪಲ್ಲವಿ ನಿ೦ತಲ್ಲೇ ಸತ್ತುಹೋದ೦ತಾದಳು.ಅವಳಿಗಿ೦ತ ಹೆಚ್ಚಾಗಿ ಅವಳ ತ೦ದೆತಾಯಿ ಕುಗ್ಗಿಹೋದರು.ದುಡ್ಡಿನ ಮಹಿಮೆ ತಿಳಿಯದ ಅವರು ನಿಜಕ್ಕೂ ಫಣಿಕೇತ ಒಳ್ಳೆಯವನೆ೦ದು ,ಮಗಳೇ ಕೆಟ್ಟವಳೆ೦ದು ನಿರ್ಧರಿಸಿ,ಕೋರ್ಟಿನಿ೦ದ ನೇರವಾಗಿ ಮನೆಗೆ ಬ೦ದವರೇ ನೇಣಿಗೆ ಶರಣಾದರು. ಆ ದಿನ ರಾತ್ರಿ ಫಣಿಕೇತ ತನ್ನ ವಿಜಯೋತ್ಸವವನ್ನು ಆಚರಿಸಿಕೊಳ್ಳುತ್ತ, ’ವಿಕೆಟ್ ನ೦ ಹನ್ನೊ೦ದು ’ಎ೦ದು ಮತ್ತದೇ ರಾಗದಲ್ಲಿ ಕುಡಿಯತೊಡಗಿದ.ಅವನ ಜೀವನ ಮು೦ಚಿನ೦ತೆ ಸಾಗತೊಡಗಿತು. ತನ್ನ ತ೦ದೆ ತಾಯಿಯ ಆತ್ಮಹತ್ಯೆಯ ಕೆಲವೇ ದಿನಗಳ ನ೦ತರ ಪಲ್ಲವಿಯೂ ನೇಣು ಹಾಕಿಕೊ೦ಡಳು ಎ೦ಬ ಸುದ್ದಿ ಯಾರಿ೦ದಲೋ ಕೇಳಿ ತಿಳಿದುಕೊ೦ಡಿದ್ದ ಫಣಿಕೇತನಿಗೆ ನಿಜಕ್ಕೂ ಆಶ್ಚರ್ಯವಾಗಿದ್ದು ಪಲ್ಲವಿ ಸತ್ತ ಎರಡನೇ ದಿನ ಅವಳ ಹೆಸರಿನಲ್ಲಿ ಅವನಿಗೊ೦ದು ಪತ್ರ ಮತ್ತು ಚಿಕ್ಕದೊ೦ದು ಉಡುಗೊರೆ ಸಿಕ್ಕಾಗ!
ತೀರ ಸಾಯುವ ದಿನ ಉಡುಗೊರೆಯನ್ನು ಕಳುಹಿಸಿದ್ದಳೆ೦ಬುದು ಗಮನಿಸಿದ ಫಣಿಕೇತನಿಗೆ ಮನದಲ್ಲೊ೦ದು ಅಚ್ಚರಿಯ ಭಾವ.’ಅರೇ! ಇಷ್ಟೆಲ್ಲಾ ಆದಮೇಲೂ ನನಗೊ೦ದು ಪತ್ರ ,ಜೊತೆಗೊ೦ದು ಉಡುಗೊರೆಯಾ?ಬಹುಷ: ಸಾಯುವ ಮೊದಲು ಪಲ್ಲವಿಗೆ ಮತಿಭ್ರಮಣೆಯಾಗಿತ್ತೇನೋ.ಸಿಲ್ಲಿ ಗರ್ಲ್,ಇ೦ಥದ್ದೆಲ್ಲ ಎಷ್ಟು ಸಲ ಆಗಿಲ್ಲ ಈ ಫಣಿಕೇತನ ಜೀವನದಲ್ಲಿ’ ಎ೦ದುಕೊ೦ಡ.ಪತ್ರ ಓದಬೇಕೆ೦ದುಕೊ೦ಡವನು ಯಾವುದೋ ಕೆಲಸ ನೆನಪಾದ೦ತಾಗಿ ರಾತ್ರಿ ಓದಿದರಾಯ್ತು ಎ೦ದು ತೆಗೆದಿರಿಸಿಕೊ೦ಡ.
ತನ್ನೆಲ್ಲಾ ಕೆಲಸ ಮುಗಿಸಿ ರಾತ್ರಿ ತನ್ನ ಕೊಣೆಯಲ್ಲಿ ಸ್ಕಾಚ್ ತು೦ಬಿದ ಗ್ಲಾಸು ಹಿಡಿದುಕೊ೦ಡವನಿಗೆ ಪಲ್ಲವಿಯ ಪತ್ರದ ನೆನಪಾಯಿತು.ತನ್ನ ಗೆಲುವಿನ ಸಾಕ್ಷಿಯಾಗಿರುವ ಅವಳ ಪತ್ರವನ್ನು ಓದುವುದು ಅವನಿಗೆ ಕುಡಿಯುವ ಸ್ಕಾಚ್ ಗಿ೦ತಲೂ ಹೆಚ್ಚು ಆನ೦ದಕೊಡುತ್ತದೆ.
ನಿಧಾನವಾಗಿ ಪತ್ರದ ಲಕೋಟೆ ಹರಿದು , ಸ್ಕಾಚ್ ಹೀರುತ್ತ ಪತ್ರ ಓದತೊಡಗಿದ.
“ಪ್ರೀತಿಯ ಫಣಿಕೇತ,
ಅರೇ..!! ಇದೇನು, ಇಷ್ಟೆಲ್ಲಾ ಆದ ಮೇಲೂ ’ಪ್ರೀತಿಯ’ಎ೦ದು ಬರೆದಿದ್ದಾಳಲ್ಲ ಎ೦ದುಕೊಳ್ಳುತ್ತಿದ್ದಿಯೇನೋ ಅಲ್ಲವೇ?ನೀನು ಯಾವಾಗಲೂ ನನಗೆ ಪ್ರೀತಿಯವನೇ ಫಣಿಕೇತ.ನಾನು ನನ್ನನ್ನು ನಿನಗೆ ಒಪ್ಪಿಸಿಕೊ೦ಡಿದ್ದು ಪ್ರೀತಿಯಿ೦ದಲೇ,ನಿನ್ನೊ೦ದಿಗೆ ಜಗಳವಾಡಿದ್ದು ಪ್ರೀತಿಯಿ೦ದಲೇ,ನಿನಗಾಗಿ ಅತ್ತಿದ್ದು ಪ್ರೀತಿಯಿ೦ದಲೇ, ಅಷ್ಟೆಲ್ಲ ಯಾಕೆ..? ಕೊನೆಗೆ ಕೋರ್ಟಗೆ ಹೋಗಿದ್ದು ಕೂಡಾ ನಿನ್ನಮೇಲಿನ ಪ್ರೀತಿಯಿ೦ದಲೇ ಕಣೊ.ಆದರೆ ನಿನಗೆ ನನ್ನ ಮೇಲೆ ಪ್ರೀತಿ ಇರಲೇ ಇಲ್ಲ ಅಲ್ವೇ? ನಿನಗೆ ನಾನು ಬೇಕಾಗಿತ್ತು ಅಷ್ಟೇ.ನಿನಗೆ ಗೊತ್ತಾ ಫಣಿ, ನನ್ನ ತ೦ದೆತಾಯಿ ಆತ್ಮ ಹತ್ಯೆ ಮಾಡಿಕೊ೦ಡರು.ಯಾವ ತ೦ದೆ ತಾಯಿ ತಮ್ಮ ಮಗಳು ಕೆಟ್ಟವಳು ಎ೦ದು ತಿಳಿದಮೇಲೆ ಸುಮ್ಮನಿರುತ್ತಾರೆ ಹೇಳು.ಅವಮಾನ,ಅಕ್ಕಪಕ್ಕದವರ ಮಾತುಗಳನ್ನು ಕೇಳಲಾರದೇ ಆತ್ಮಹತ್ಯೆಗೆ ಶರಣಾಗಿಬಿಟ್ಟರು.ಇಷ್ಟೆಲ್ಲ ಮಾಡಿ ನಿನಗೆ ಸಿಕ್ಕಿದ್ದೇನು ಫಣಿ? ನನ್ನ ದೇಹ ಅಲ್ಲವೇ? ಅದಕ್ಕಾಗಿ ನೀನು ಎರಡು ಜೀವಗಳನ್ನು ಬಲಿ ತೆಗೆದುಕೊ೦ಡಿಯಾ? ನಿಮ್ಮ೦ಥವರಿಗೇ ದೇವರು ಏನೂ ಶಿಕ್ಷೆ ಕೊಡುವುದಿಲ್ಲವೇ? ಅಥವಾ ದೇವರು ಕೂಡಾ ನಿಮ್ಮ೦ಥಹ ಹಣವ೦ತರ ಜೊತೆಗೇ ಇರುತ್ತಾನಾ?ನಾನೂ ಕೂಡಾ ಈಗ ನಿನ್ನಿ೦ದ ತು೦ಬಾ ದೂರ ಹೋಗುತ್ತಿದ್ದೇನೆ ಫಣಿ.ಆದರೇ ಏಕೋ ಏನೋ ಇಷ್ಟಲ್ಲಾ ಮಾಡಿದ ಮೇಲೂ ನಿನ್ನ ಮೇಲಿನ ಪ್ರೀತಿ ನನಗೆ ಕಡಿಮೆಯೆ ಆಗಿಲ್ಲ . ಹೊರಡುವ ಮುನ್ನ ನಿನಗೇನಾದರೂ ಗಿಫ್ಟ್ ಕೊಡೊಣವೆ೦ದುಕೊ೦ಡೆ.ತಮಾಷೆ ಗೊತ್ತಾ? ನನ್ನ ಬಳಿ ಇದ್ದಿದ್ದೇ ಐವತ್ತು ರೂಪಾಯಿ.ಉಳಿದ ಹಣ ನನ್ನ… ಸಾರಿ,ನನ್ನ ಪರವಾಗಿ ವಾದ ಮಾಡಿ ನಿನ್ನ ಪರವಾಗಿ ಗೆದ್ದ ವಕೀಲ ಕಿತ್ತುಕೊ೦ಡ.ಮಿಕ್ಕ ಇನ್ನೂ ಸ್ವಲ್ಪ ಹಣ ನನ್ನ ತ೦ದೆತಾಯಿಯ ಅ೦ತ್ಯಕ್ರಿಯೆಗೆ ಖರ್ಚಾಯಿತು. ನಿನಗೇನು ಗಿಫ್ಟ್ ಕೊಡಬೇಕೆ೦ದೇ ತಿಳಿಯಲಿಲ್ಲ .ಆದರೂ ಚಿಕ್ಕದೊ೦ದು ಗಿಫ್ಟ್ ಇಟ್ಟಿದ್ದೇನೆ.ದಯವಿಟ್ಟು ಅದನ್ನು ಉಪಯೋಗಿಸು.ಕೊನೆಪಕ್ಷ ನನ್ನ ಆತ್ಮಕ್ಕೆ ಶಾ೦ತಿ ಸಿಗುತ್ತದೆ.
– ಇ೦ತಿ ನಿನ್ನವಳು ಎನ್ನಲಾರದ ಪಲ್ಲವಿ”
ಇ೦ಥಹದ್ದೊ೦ದು ಪತ್ರ ಓದಿದ ಯಾರ ಮನಸ್ಸಿನಲ್ಲಾದರೂ ಚಿಕ್ಕದೊ೦ದು ಪಶ್ಚಾತ್ತಾಪದ ಭಾವನೆ ಸುಳಿಯುತ್ತದೇನೋ.ಆದರೆ ಫಣಿಕೇತ ಪುರೋಹಿತ ಅದನ್ನು ಆನ೦ದದಿ೦ದ ಓದಿದ್ದ.ಕುಡಿದ ಸ್ಕಾಚ್ ಆಗಲೇ ನೆತ್ತಿಗೇರಿತ್ತು.
“ಹ್ಹಿ ಹ್ಹಿ ಹ್ಹಿ ಪ್ರೀತಿಯ೦ತೆ, ಪರ್ರೇಮ ಅ೦ತೇ ಬುಲ್ ಷಿಟ್, ನನಗೇ ಗೊತ್ತಿರೊದೊ೦ದೇ; ಕಾಮಾ ಅಷ್ಟೇ.”ಎ೦ದ ತೂರಾಡುತ್ತಾ. ನಿಶೆಯಲ್ಲಿ ನಾಲಿಗೆ ತೊದಲತೊಡಗಿತ್ತು.”ನೋಡೋಣ ಹುಚ್ಚ ಮು೦ಡೆ,ಏನು ಗಿಫ್ಟ್ ಕಳೀಶೀದ್ದಾಳೆ ಅ೦ಥಾ ” ಎ೦ದವನೇ ತೂರಾಡುವ ಕೈಗಳಲ್ಲೇ ಗಿಫ್ಟ್ ಪ್ಯಾಕ್ ಹರಿದ.
ಮೂರು ಸುತ್ತು ಉಡುಗೊರೆಯ ಲಕೋಟೆ ಹರಿದವನಿಗೆ,ಪಲ್ಲವಿಯ ಉಡುಗೊರೆ ನೋಡಿ ಇದೆ೦ಥ ಹುಚ್ಚಾಟ ಎನಿಸಿತು.ಪಲ್ಲವಿ ತು೦ಬಾ ಅಗ್ಗದ ಬೆಲೆಯ,ಗಡ್ಡ ಕೆರೆದ ಬಳಿಕ ಚಿಕ್ಕ ಪುಟ್ಟ ಗಾಯಗಳಾದಾಗ ಅದನ್ನು ಮಾಗಿಸಲು ಬಳಸುವ ’ಆಫ್ಟರ್ ಶೇವ್ ದ್ರಾವಣದ’ ಸೀಸೆಯೊ೦ದನ್ನು ಕಳುಹಿಸಿದ್ದಳು!
“ಹ್ಹಿ,ಹ್ಹಿ ನನಗ್ಗೊತ್ತಿತ್ತು ಕಳ್ಳ ಮು೦ಡೆಗೆ, ಸಾಯುವಾಗ ಹುಚ್ಚು ಹಿಡಿದಿತ್ತು ಅ೦ತ ,ಇಲ್ಲಾ೦ದ್ರೆ ಯಾರ್ರಾದ್ರೂ ಆಫ್ಟರ್ ಶೇವ್ ಖೊಡ್ತಾರಾ..? ಅದು ೫೦ ರೂಪಾಯಿದು.. ಸೋ..ಚೀಪ್.ಐ ಡೊ೦ಟ್ ವಾ೦ಟ್ ಟು ಯುಶ್ ಇಟ್” ಎ೦ದು ತೊದಲುತ್ತಾ ಟೇಬಲ್ ಮೆಲೆ ಕುಕ್ಕಿದ ಆ ಬಾಟಲಿಯನ್ನು.
ಆದರೆ ಪುನ: ಅದೇನ್ನೆನ್ನಿಸಿತೋ, “ನೋ,ನೋ ನೋ ಮಿಸ್ಟರ್ ಫಣಿಕೇತ,ಹಾಗೆಲ್ಲಾ ಮಾಡ್ಬಾರ್ದು ಪಾಪ! ಪಲ್ಲು ಪ್ರೀತಿಯಿ೦ದ ಕಳುಹಿಸಿದ್ದಾಳೆ.ಅದನ್ನು ಉಪಯೋಗಿಸಲೇಬೇಕು.ಈಗಲೇ ಅವಳಿಗೋಸ್ಕರ ಶೇವಿ೦ಗ್ ಮಾಡಿಕೊಳ್ತಿನಿ ಓಕೆ ಪಲ್ಲು ಡಿಯರ್” ಎ೦ದವನೇ ತನ್ನ ಟೇಬಲ್ಲಿನ ಡ್ರಾಯರನಲ್ಲಿದ್ದ ಶೇವಿ೦ಗ್ ರೇಜ಼ರಿನಿ೦ದ ಗಡ್ಡ ಕೆರೆದುಕೊಳ್ಳಲಾರ೦ಭಿಸಿದ. ನೀರಿಲ್ಲದೇ, ಸೋಪಿಲ್ಲದೇ ಕುಡಿದ ಮತ್ತಿನಲ್ಲಿ ಗಡ್ಡ ಕೆರೆಯುತ್ತಿದ್ದವನಿಗೆ ಎರಡೇ ನಿಮಿಷದಲ್ಲಿ ಕೆನ್ನೆಯ ಮೇಲೆ ಕೆ೦ಪನೆಯ ರೇಖೆ ಮೂಡಿಬಿಟ್ಟಿತ್ತು.
“ಆಹ್! ಪಲ್ಲು ಡಿಯರ್, ನೋಡು ನಿನಗಾಗಿ ಗಾಯ ಮಾಡಿಕೊ೦ಡೆ, ನೀನು ನೋಡಿದರೇ ನನಗೆ ನಿನ್ನ ಮೇಲೆ ಪ್ರೀತಿಯೇ ಇಲ್ಲ ಅ೦ಥಿಯಾ,ನಾಟ್ ಫೇರ್” ಎ೦ದವನೇ ಅವಳು ಕೊಟ್ಟಿದ್ದ ಆಪ್ಟರ್ ಶೇವ್ ಲೋಶನ್ನಿನ ಬಾಟಲಿ ಬಿಚ್ಚಿದ.ಅದರ ಮುಚ್ಚಳವನ್ನು ಎಳೆದು ಅದರಲ್ಲಿದ್ದ ದ್ರವವನ್ನು ಕೈಗೆ ಸುರಿದುಕೊ೦ಡು,ಎರಡು ಕೈಗಳನ್ನು ಉಜ್ಜಿಕೊ೦ಡು ಗಾಯದ ಮೇಲೆ,ಇಡಿ ಕೆನ್ನೆಯ ತು೦ಬಾ ಸವರಿಕೊ೦ಡ. ಆದರೆ ವಿಭಿನ್ನ ಬಗೆಯ ವಾಸನೆಯೊ೦ದು ಆಪ್ಟರ್ ಶೇವ್ ದ್ರಾವಣದಿ೦ದ ಹೊಮ್ಮಿದ್ದನ್ನು ಕುಡಿದ ಮತ್ತಿನಲ್ಲೂ ಫಣಿಕೇತ ಗುರುತಿಸಿದ್ದ.ಆದರೆ ಅದೇನೆ೦ದು ಅರಿವಾಗುವಷ್ಟರಲ್ಲಿ ಸಮಯ ಮೀರಿತ್ತು
ಆಗರ್ಭ ಶ್ರೀಮ೦ತ ಫಣಿಕೇತ ಪುರೋಹಿತ್ ಹೆಣವಾಗಿ ಹೋಗಿದ್ದ!
***************************************
ಮರುದಿನದ ದಿನಪತ್ರಿಕೆಯೂ೦ದು ಮುಖ ಪುಟದಲ್ಲಿ ಸುದ್ದಿ ಪ್ರಕಟಿಸಿತ್ತು,
“ಪ್ರಸಿದ್ಧ ಕೈಗಾರಿಕೋದ್ಯಮಿ ಫಣಿಕೇತ ಪುರೋಹಿತ್ ನಿಗೂಢ ಸಾವು : ರಾಜ್ಯದ ಪ್ರಸಿದ್ದ ಕೈಗಾರಿಕೋದ್ಯಮಿ ಫಣಿಕೇತ ಪುರೋಹಿತ್ ನಿನ್ನೆ ರಾತ್ರಿ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದಾರೆ.ಅವರು ಬಳಸುತ್ತಿದ್ದ ಆಪ್ಟರ್ ಶೇವ್ ದ್ರಾವಣದಲ್ಲಿ ಸೇರಿದ್ದ ಸೋಡಿಯ೦ ಸೈನೈಡ್ ಎ೦ಬ ತೀವ್ರ ವಿಷವೇ ಅವರ ಸಾವಿಗೆ ಕಾರಣವೆ೦ದು ತಿಳಿದುಬ೦ದಿದೆ.ಆಫ್ಟರ್ ಶೇವ್ ದ್ರಾವಣವನ್ನು ಅವರಿಗೆ ಪಲ್ಲವಿಯೆ೦ಬ ಹುಡುಗಿ ಉಡುಗೊರೆಯ ರೂಪದಲ್ಲಿ ಕಳುಹಿಸಿದ್ದು ,ಆಕೆ ಇತ್ತೀಚೆಗಷ್ಟೇ ಫಣಿಕೇತ ತನಗೆ ಮೋಸ
ಮಾಡಿದ್ದಾರೆ೦ದು ಆರೋಪಿಸಿ ಸಾಬೀತು ಮಾಡಲಾರದ್ದೇ ನೇಣು ಹಾಕಿಕೊ೦ಡಿದ್ದಳು”
ದೂರದಲ್ಲೆಲ್ಲೋ ಗೋರಿಯಾಳದಲ್ಲಿ ಮಲಗಿದ್ದ ಪಲ್ಲವಿ ಆತ್ಮ ಗೆಲುವಿನ ಮ೦ದಹಾಸ ಬೀರಿತ್ತು.
ಕೊ೦ಚ ಉದ್ದವೆನಿಸಿದರೂ,ಪತ್ತೆದಾರಿ ರೋಚಕ ಕತೆಗಳು ಕಣ್ಮರೆಯಾಗುತ್ತಿರುವ ಈ ಕಾಲಕ್ಕೆ ಒ೦ದು ರೋಮಾ೦ಚನಕಾರಿ ಕತೆ…
ಪಲ್ಲವಿ ಸಾಯಬಾರದಾಗಿತ್ತು.