ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 31, 2015

ನಮ್ಮದಲ್ಲದ ಭಾರತದ ರಾಜಕೀಯ ಇತಿಹಾಸ

‍ನಿಲುಮೆ ಮೂಲಕ

ಡಾ. ಸಂತೋಷ್ ಕುಮಾರ್ ಪಿ.ಕೆ

north_horizontalಭಾರತದ ಪ್ರಾಚೀನ ಕಾಲದ ರಾಜಕೀಯ ಚಿಂತನೆ ಎಂಬುದು ಬಹುತೇಕವಾಗಿ ರಾಜ್ಯಶಾಸ್ತ್ರಜ್ಞರಿಗೆ ಅಪ್ರಸ್ತುತವಾಗಿದೆ. ಇದಕ್ಕೆ ಪ್ರಧಾನವಾಗಿ ಎರಡು ಕಾರಣಗಳನ್ನು ನೋಡಬಹುದು, ಒಂದು, ಕಾಲಾಂತರದ ಬದಲಾವಣೆ, ಹಾಗೂ ಎರಡು, ನಮ್ಮೆಲ್ಲಾ ರಾಜಕೀಯ ಚಿಂತನೆ ಮತ್ತು ಅಳವಡಿಸಿಕೊಂಡಿರುವ ರಾಜಕೀಯ ವ್ಯವಸ್ಥೆಗಳೆಲ್ಲವೂ ಆಧುನಿಕ ಪಾಶ್ಚಾತ್ಯ ರಾಷ್ಟ್ರಗಳಿಂದ ಪ್ರೇರೇಪಿತವಾಗಿರುವುದರಿಂದ ಭಾರತೀಯ ಚಿಂತನೆಯ ಅಗತ್ಯತೆ ನಮಗೆ ಕಾಣಸಿಗುತ್ತಿಲ್ಲ. ಪರಿಸ್ಥಿತಿ ಹೀಗಿರುವಾಗಲೂ ರಾಜ್ಯಶಾಸ್ತ್ರದ ವಿದ್ಯಾರ್ಥಿಗಳು ಮಾತ್ರ ಕೌಟಿಲ್ಯನ ಸಿದ್ಧಾಂತ, ಮಹಾಭಾರತದ ಕೆಲವು ಭಾಗಗಳು, ಹಾಗೂ ಹಲವಾರು ನೀತಿಸಾರಗಳನ್ನು ಪರೀಕ್ಷೆಯ ದೃಷ್ಟಿಯಿಂದ ಓದುತ್ತಿರುತ್ತಾರೆ. ಇದರ ಒಟ್ಟಿಗೆ ಹಲವಾರು ವಿದ್ವಾಂಸರುಗಳೂ ಸಹ ಪ್ರಾಚೀನತೆಯ ಹುಡುಕಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಆದರೂ ವಿದ್ಯಾರ್ಥಿಗಳ ಓದು, ವಿದ್ವಾಂಸರ ಅಧ್ಯಯನಗಳು ಆಧುನಿಕ ರಾಜಕೀಯ ವ್ಯವಸ್ಥೆಗೆ ಯಾವುದೇ ಕೊಡುಗೆಯನ್ನು ನೀಡುವ ಭರವಸೆಗಳಿಲ್ಲ, ಕಾರಣ ಆಧುನಿಕ ಸಮಸ್ಯೆಗಳಿಗೆ ಆಸಕ್ತಿದಾಯಕವಾದ ಪರಿಹಾರವನ್ನು ಹುಡುಕುವ ಯಾವ ಲಕ್ಷಣಗಳೂ ಸಹ ಗೋಚರಿಸುತ್ತಿಲ್ಲ. ಈ ಎಲ್ಲಾ ಕಾರಣಗಳಿಗಾಗಿ ಪ್ರಾಚೀನ ಭಾರತದ ರಾಜಕೀಯ ಚಿಂತನೆ ಅನಾಸಕ್ತಿಯ ವಿಷಯವಾಗಿಯೇ ಮುಂದುವರಿಯುತ್ತಿದೆ.

ಪ್ರಾಚೀನ ಭಾರತವನ್ನು ಅಧ್ಯಯನ ನಡೆಸುವುದು ಚರಿತ್ರೆಕಾರರ ಕೆಲಸವೇ ಆಗಿದ್ದರೂ ಸಹ, ಅಲ್ಲಿನ ರಾಜಕೀಯ ವಿಚಾರ ಧಾರೆಗಳನ್ನು ಪತ್ತೆಹಚ್ಚುವುದು, ಅಧ್ಯಯನ ನಡೆಸುವುದು ರಾಜ್ಯಶಾಸ್ತಜ್ಞರ ಜವಾಬ್ದಾರಿಯೂ ಹೌದು. ಆದರೆ, ರೊಮಿಲಾ ಥಾಪರ್, ಅಲ್ಟೇಕರ್, ಆರ್.ಎಸ್.ಶರ್ಮಾ, ಡಿ.ಡಿ.ಕೋಸಾಂಬಿ ಇನ್ನೂ ಮುಂತಾದ ‘ಇತಿಹಾಸಕಾರ’ರಿಗೆ ಮಾತ್ರ ಇಂತಹ ಅಧ್ಯಯನಗಳು ಮುಖ್ಯವಾಗುತ್ತಿರುವುದು ಹಾಗೂ ರಾಜ್ಯಶಾಸ್ತ್ರಜ್ಞರುಗಳು ಅದನ್ನು ಅವಗಾಹನೆಗೆ ತಮ್ಮ ತೆಗೆದುಕೊಳ್ಳದೆ ಇರುವುದು ವಾಸ್ತವಾಗಿದೆ. ರಾಜಕೀಯ ಚಿಂತನೆಗಳ ಕುರಿತೇ ಅಧ್ಯಯನ ನಡೆಸುವವರು ಇತಿಹಾಸದ ಚಿಂತನೆಗಳಲ್ಲಿ ನಡೆಯುತ್ತಿರುವ ಚರ್ಚೆಗಳನ್ನು ಗಮನಿಸದೇ ಹೋದರೆ ಪ್ರಾಚೀನ ರಾಜಕೀಯ ಚಿಂತನೆಗೆ ಪ್ರವೇಶ ದೊರಕುವುದು ಕಷ್ಟಸಾಧ್ಯ.

ಭಾರತದ ರಾಜಕೀಯ ಚಿತ್ರಣವನ್ನು ಅವಲೋಕಿಸಲು, ಈ ಮೊದಲೇ ಹೇಳಿದಂತೆ ಚರಿತ್ರೆಕಾರರ ನಿರೂಪಣೆಗಳೇ ಆಧಾರವಾಗಿವೆ. ಹಾಗಾದರೆ, ಅವರ ಚಿತ್ರಣಗಳು ನಿರ್ದಿಷ್ಟವಾಗಿ ಏನನ್ನು ಚಿತ್ರಿಸುತ್ತವೆ ಎಂಬುದನ್ನೂ ಗಮನಿಸಬೇಕಾಗುತ್ತದೆ. ಅದನ್ನು ಸಂಕ್ಷಿಪ್ತವಾಗಿ ನೋಡುವುದಾದರೆ, ಹಲವಾರು ರಾಜಮನೆತಗಳ ನಿರೂಪಣೆ, ರಾಷ್ಟ್ರಕೂಟರಿಂದ ಹಿಡಿದು ಮೈಸೂರು ಒಡೆಯರವರೆಗಿನ ಚಾರಿತ್ರಿಕ ಘಟನೆಗಳ ವಿವರಣೆಗಳು, ಸಾಮ್ರಾಜ್ಯಗಳ ವಿಸ್ತರಣೆ ಹಾಗೂ ರಾಜರುಗಳ ನಡುವೆ ನಡೆದ ಯುದ್ಧಗಳು, ಕೆಲವು ರಾಜತಾಂತ್ರಿಕರ ನೈಪುಣ್ಯದ ತಂತ್ರಗಳು, ದಾನದತ್ತಿಗಳ ಶಾಸನಗಳು, ತಾಮ್ರಪಟಗಳು, ಹೀಗೆ ಪಟ್ಟಿ ಮುಂದುವರೆಯುತ್ತಾ ಹೋಗುತ್ತದೆ. ಆದರೆ ಇವೆಲ್ಲವೂ ಬಿಡಿ ಬಿಡಿಯಾದ ವಿವರಣೆಗಳೇ ಹೊರತು ಪ್ರಾಚೀನ ಭಾರತದ ರಾಜಕೀಯ ಚಿಂತನೆಯೊಳಗೆ ಐಕ್ಯವಾಗುವುದು ಅವುಗಳ ನಿರೂಪಣೆಗಳಿಂದ ವ್ಯಕ್ತವಾಗುವುದಿಲ್ಲ. ಅಂದರೆ ಆ ಎಲ್ಲಾ ನಿರೂಪಣೆಗಳನ್ನು ಕ್ರೋಡೀಕರಿಸಿದರೂ ಭಾರತದ ರಾಜಕೀಯ ಚಿಂತನೆಯ ಕುರಿತು ಯಾವುದೇ ಆಸಕ್ತಿದಾಯಕ ಒಳಹುಗಳು ದೊರಕುವಂತೆ ಕಾಣುವುದಿಲ್ಲ.
ಇಂತಹ ನಿರೂಪಣೆಗಳ ಹೊರತಾಗಿ, ಇತಿಹಾಸವು ಕೆಲವು ಚರ್ಚೆಗಳನ್ನೂ ಸಹ ಮುಂಚೂಣಿಗೆ ತಂದಿದೆ. ಅದೆಂದರೆ ‘ರಾಜ್ಯ’ ಅಥವಾ ‘ಸ್ಟೇಟ್’ ಕೇಂದ್ರಿತ ವಿವರಣಾ ಚೌಕಟ್ಟನ್ನು ಪ್ರಧಾನವಾಗಿ ಬಳಸಿಕೊಂಡು ಭಾರತದ ಇತಿಹಾಸದ ನಿರೂಪಣೆಗಳನ್ನು ಹೊಸೆಯುವುದು ಕಂಡುಬರುತ್ತದೆ. ಭಾರತದ ವಸಾಹತುಪೂರ್ವ ಕಾಲಘಟ್ಟದ ರಾಜಕೀಯ ಚಟುವಟಿಕೆಗಳು ಸ್ಟೇಟ್ ಚೌಕಟ್ಟಿನೊಳಗೆ ಬಂದು ನಿಲ್ಲುವುದರಿಂದಲೇ ಅದರ ಕುರಿತು ನಮಗೆ ಯಾವುದೇ ಆಸಕ್ತಿಯೂ ಮೂಡುತ್ತಿಲ್ಲ. ಏಕೆಂದರೆ ಸ್ಟೇಟ್ ಎಂಬ ಪರಿಕಲ್ಪನೆ ಭಾರತದಂತಹ ಸಂಸ್ಕೃತಿಯೊಳಗೆ ಅರ್ಥವಾಗುವುದೂ ಇಲ್ಲ. ಜನಸಂಖ್ಯೆ, ಸರ್ಕಾರ, ಭೂಪ್ರದೇಶ ಹಾಗೂ ಸಾರ್ವಭೌಮತ್ವ ಎಂಬ ನಾಲ್ಕು ಸಂಗತಿಗಳು ಸೇರಿಕೊಂಡರೆ ಸ್ಟೇಟ್ ರಚನೆಯಾಗುತ್ತದೆ ಎಂದು ಸರಳವಾಗಿ ರಾಜ್ಯಶಾಸ್ತ್ರಜ್ಞರು ಸೂತ್ರೀಕರಿಸಿದ್ದರೂ ಸಹ, ಅವೆಲ್ಲವೂ ಸೇರಿಕೊಂಡು ರೂಪಿಸುವ ಸ್ಟೇಟ್ ಹೇಗಿರುತ್ತದೆ ಎಂಬುದು ನಮ್ಮ ಕಲ್ಪನೆ ಮತ್ತು ಅನುಭವಕ್ಕೆ ಹೊರತಾಗಿಯೇ ನಿಲ್ಲುತ್ತದೆ.

‘ರೂಲ್ ಆಫ್ ಲಾ’ ಹಾಗೂ ಸಾರ್ವಭೌಮತ್ವವು ಸ್ಟೇಟ್ ಗೆ ಬುನಾದಿಯಾದ ಪರಿಕಲ್ಪನೆಗಳಾಗಿವೆ. ಅವು ಮೇಲ್ನೋಟಕ್ಕೆ ನಮಗೇನೋ ಅರ್ಥವಾದಂತೆ ಭಾಸವಾದರೂ ಅದರ ಆಳ ಮತ್ತು ಅಗಲ ನಮಗೆ ತಿಳಿಯುವುದಿಲ್ಲ. ಉದಾಹರಣೆಗೆ, ಸಾರ್ವಭೌಮತ್ವ ಎಂದರೇನು? ಯಾರೂ ಪ್ರಶ್ನಿಸಲಾಗದಂತಹ ಅಧಿಕಾರ ಯಾರಿಗಿದೆ? ಎಂಬುದು ಯಕ್ಷಪ್ರಶ್ನೆಯಾಗಿಯೇ ಉಳಿಯುತ್ತದೆ.

ಸ್ಟೇಟ್ ನ ಕುರಿತ ವಿಸ್ತೃತ ಅಧ್ಯಯನ ನಡೆದದ್ದು ಪಾಶ್ಚಾತ್ಯ ವಿದ್ವಾಂಸರುಗಳಿಂದ ಎಂದರೂ ತಪ್ಪಾಗಲಾರದು. ಅವರಲ್ಲಿ ಪ್ರಮುಖರಾಗಿ, ಆದರ್ಶವಾದಿಗಳಾದ ಇಮ್ಯಾನುಯಲ್ ಕಾಂಟ್, ಹೆಗಲ್ ಮುಂತಾದವರು ಇದ್ದರೆ, ಸಾಮಾಜಿಕ ಒಪ್ಪಂದ ಸಿದ್ಧಾಂತದ ಪ್ರಮುಖ ರುವಾರಿಗಳಾಗಿ ಹಾಬ್ಸ್, ಲಾಕ್ ಹಾಗೂ ರೂಸೋ ನಿಲ್ಲುತ್ತಾರೆ. ಸ್ಟೇಟ್ ಎಂಬುದು ಹೇಗೆ ಉಗಮವಾಯಿತು ಹಾಗೂ ಅದರ ಗುರಿಗಳೇನು ಎಂಬುದು ಮೇಲಿನ ಎರಡೂ ತೆರನಾದ ವಿದ್ವಾಂಸರುಗಳ ಕಾಳಜಿಯ ವಿಷಯಗಳಾಗಿದ್ದವು. ಅದಕ್ಕೆ ಪೂರಕವಾಗಿ ಇನ್ನೂ ಹಲವಾರು ಸಿದ್ಧಾಂತಗಳು ಬೆಳೆದವು, ಅವುಗಳೆಂದರೆ, ದೈವಿಕ ಸಿದ್ಧಾಂತ, ಬಲದ ಸಿದ್ಧಾಂತ, ಕಾನೂನಿನ ಸಿದ್ಧಾಂತ, ಅನುವಂಶೀಯ ಸಿದ್ಧಾಂತ ಹಾಗೂ ಪ್ರಜಾಪ್ರಭುತ್ವದ ಸಿದ್ಧಾಂತ ಇನ್ನೂ ಮುಂತಾದ ಸಿದ್ಧಾಂತಗಳು ತಲೆಚಿಟ್ಟುಹಿಡಿಸುವಷ್ಟು ಹೇರಳವಾಗಿ ಬಿದ್ದಿವೆ. ಆದರೆ ಅವೆಲ್ಲವುಗಳ ಮೂಲಕ ಪಾಶ್ಚಾತ್ಯ ರಾಷ್ಟ್ರದಲ್ಲಿ ರಾಜಕೀಯ ವ್ಯವಸ್ಥೆ ಹೇಗೆ ಬೆಳೆದುಬಂದಿದೆ ಎಂಬುದನ್ನು ನೋಡಬಹುದೇ ಹೊರತು ಭಾರತದಂತಹ ಪೌರಾತ್ಯ ರಾಷ್ಟ್ರಗಳ ರಾಜಕೀಯ ವ್ಯವಸ್ಥೆಯನ್ನು ಅರ್ಥೈಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಏಕೆಂದರೆ ಪಾಶ್ಚಾತ್ಯರ ಅಗತ್ಯತೆ ಮತ್ತು ಸಂಸ್ಕೃತಿಗೆ ಅನುಗುಣವಾಗಿ ಅಲ್ಲಿಯ ರಾಜಕೀಯ ವ್ಯವಸ್ಥೆ ರೂಪುಗೊಂಡಿರುವುದು ಸಾಧಾರಣವಾದ ಸಂಗತಿ.
ಇಂತಹ ಚಿಂತನಾಕ್ರಮವನ್ನೇ ಮುಂದುರೆಸಿಕೊಂಡು ವಸಹಾತುಪೂರ್ವ ಭಾರತದ ರಾಜಕೀಯ ವ್ಯವಸ್ಥೆಯನ್ನು ಅಧ್ಯಯನ ನಡೆಸುವ ಕ್ರಮವು ಚಾಲ್ತಿಗೆ ಬಂದಿತು.

ಪಾಶ್ಚಾತ್ಯರ ಅವೇ ಸಿದ್ಧಾಂತಗಳನ್ನು ಬೇರೆ ಬೇರೆ ರೂಪದಲ್ಲಿ ಭಾರತಕ್ಕೆ ಅಳವಡಿಸುವ ಬೃಹತ್ ಕಾರ್ಯಕ್ರಮ ಚರಿತ್ರೆಕಾರರಿಂದ ಪ್ರಾರಂಭವಾಯಿತು. ದೈವಿಕ ಸಿದ್ಧಾಂತಕ್ಕೆ ಪಾಶ್ಚಾತ್ಯರ ಗಾಡ್ ಬದಲಿಗೆ ಮನು ಬಂದು ಕುಳಿತದ್ದು, ಫ್ಯೂಡಲ್ ವ್ಯವಸ್ಥೆಯಲ್ಲಿ ಮಾಸ್ಟರ್/ಶೋಷಕನ ಬದಲಿಗೆ ರಾಜರುಗಳು ಬಂದದ್ದು ಫ್ಯಾಕ್ಟ್ಗಳಲ್ಲಿ ಆದ ಬದಲಾವಣೆಗೆ ಸೂಕ್ತ ಉದಾಹರಣೆಗಳಾಗಿವೆ. ಭಾರತೀಯ ರಾಜರುಗಳ ಇತಿಹಾಸವನ್ನು ಸ್ಟೇಟ್ ಪರಿಕಲ್ಪನೆಯಡಿಯಲ್ಲಿ ಅಧ್ಯಯನ ನಡೆಸುತ್ತಾ ಹೋದಂತೆ ಇತ್ತ ಸ್ಟೇಟ್ ಎಂಬುದೂ ಅರ್ಥವಾಗುವುದಿಲ್ಲ, ಹಾಗೆಯೇ ರಾಜರುಗಳ ಆಳ್ವಿಕೆಯೂ ಅರ್ಥವಾಗುವುದಿಲ್ಲ. ಅಂತಹ ಅಧ್ಯಯನಗಳು ಕೊನೆಯಿರದ ಚರ್ಚಾಂಶಗಳಾಗಿ ಉಳಿದುಕೊಂಡುಬಿಡುತ್ತವೆ. ಇತಿಹಾಸದ ಅಂತಹ ಕೆಲವು ಚರ್ಚೆಗಳನ್ನು ಇಣುಕಿ ನೋಡುವುದಾದರೆ, ಪಾಶ್ಚಾತ್ಯರ ಸಿದ್ಧಾಂತಗಳನ್ನೇ ಅನುಸರಿಸಿ ಭಾರತೀಯ ವಿದ್ವಾಂಸರು ಕೆಲವು ಫ್ಯಾಕ್ಟ್ ಗಳನ್ನು ಒದಗಿಸಲು ಪ್ರಯತ್ನಿಸಿದ್ದಾರೆ.

‘ಪೌರಾತ್ಯ ನಿರಂಕುಶವಾದ ಅಥವಾ ಪ್ರಭುತ್ವ ಎನ್ನುವುದು ಒಂದು ಸಿದ್ಧಾಂತವಾಗಿದೆ, ಕಾರ್ಲ ಮಾಕ್ರ್ಸರವರ ಏಷಿಯಾದ ಉತ್ಪಾದನಾ ವಿಧಾನ ಎಂಬ ಸಿದ್ಧಾಂತದ ಮುಂದುವರಿಕೆಯ ಭಾಗವಾಗಿ ಏಷಿಯಾದಲ್ಲಿ ಸಾವಿರಾರು ವರ್ಷಗಳಿಂದ ಯಾವುದೇ ಬದಲಾವಣೆಯಿಲ್ಲದೆ ಪ್ರಭುತ್ವವು ಅಸ್ತಿತ್ವದಲ್ಲಿತ್ತು, ನಿಜವಾಗಿ ರಾಜನಿಗೆ ಯಾವುದೇ ಅಧಿಕಾರವಿರಲಿಲ್ಲ, ಜಾತಿಗಳು ಇಡೀ ಪ್ರಭುತ್ವವನ್ನು ನಿಯಂತ್ರಿಸುತ್ತಿದ್ದವು ಎಂಬುದು ಈ ಸಿದ್ಧಾಂತದ ತಿರುಳಾಗಿದೆ. ಹಾಗೆಯೇ, ಯೂರೋಪಿನ ಮಧ್ಯಕಾಲದಲ್ಲಿ ಅಸ್ತಿತ್ವದಲ್ಲಿದ್ದ ಫ್ಯೂಡಲ್ ವ್ಯವಸ್ಥೆಯನ್ನು ಮಾದರಿಯಾಗಿಟ್ಟುಕೊಂಡು ಅದರ ಭಾರತೀಯ ಆವೃತ್ತಿಯನ್ನು ಲಕ್ಷಣಿಕರಿಸುವ ಮತ್ತೊಂದು ಪ್ರಯತ್ನವನ್ನೂ ಕಾಣಬಹುದು. ಅದರ ಪ್ರಕಾರ, ಮೌರ್ಯಕಾಲದ ಕೇಂದ್ರೀಕೃತ ಪ್ರಭುತ್ವವು ಕ್ರಮೇಣ ಶಿಥಿಲವಾಗಿ ರಾಜ್ಯವು ವಿಘಟಿತವಾಗಿ ರಾಜನ ಅಧೀನದಲ್ಲಿ ಒಂದು ಆಳುವ ಮಧ್ಯವರ್ತಿಗಳ ಶ್ರೇಣಿಯೇ ಅಸ್ತಿತ್ವದಲ್ಲಿ ಬಂದಿತು. ಅದಕ್ಕೆ ಫ್ಯೂಡಲ್ ಸ್ವರೂಪ ಪ್ರಾಪ್ತವಾಯಿತು. ಹಾಗೆಯೇ, ಇತಿಹಾಸಕಾರ ಬರ್ಟನ್ ಸ್ಟೈನ್ ನವರು ಭಾರತದ ರಾಜರ ಆಳ್ವಿಕೆಯನ್ನು ಲಕ್ಷಣಿಕರಿಸುವಾಗ, ಅದನ್ನು ಸೆಗ್ಮಂಟರಿ ಸ್ಟೇಟ್ ಎಂದು ವಾದಿಸುತ್ತಾರೆ, ಇದರ ಅರ್ಥ ಭಾರತದಲ್ಲಿ ಒಂದು ಐಕ್ಯರೂಪದ ಸ್ಟೇಟ್ ಪರಿಪೂರ್ಣ ಅವಸ್ಥೆಯಲ್ಲಿ ರೂಪುಗೊಂಡಿರಲಿಲ್ಲ, ಹಾಗೂ ಸ್ಥಾನಿಕವಾಗಿ ಆಳುವ ಘಟಕಗಳು ಮತ್ತು ಪ್ರಭುತ್ವಕ್ಕೂ ವ್ಯತ್ಯಾಸಗಳಿದ್ದವು, ಇಂತಹ ಹಲವಾರು ಸ್ಥಾನಿಕ ಘಟಕಗಳು ಕಾಣಸಿಗುತ್ತಿದ್ದವು, ಆದ್ದರಿಂದ ‘ರಾಜ್ಯ’ವೆಂಬುದು ಹಲವಾರು ಘಟಕಗಳ ಆಡಳಿತ ವ್ಯವಸ್ಥೆಯಾಗಿ ಮಾತ್ರ ಅಸ್ತಿತ್ವದಲ್ಲಿತ್ತು ಎಂಬುದು ಇವರ ವಾದವಾಗಿದೆ.

ಮೇಲ್ಕಾಣಿಸಿದ ಎಲ್ಲಾ ವಾದಗಳನ್ನು ಗಮನಿಸಿದರೆ, ಮೂಲಭೂತವಾಗಿ ಕೆಲವು ಸಮಸ್ಯೆಗಳು ನಮ್ಮ ಮುಂದೆ ಬಂದು ನಿಲ್ಲುತ್ತವೆ. ಅವುಗಳೆಂದರೆ, ಒಂದೇ ರಾಜ್ಯದಲ್ಲಿದ್ದ ವೈವಿಧ್ಯಮಯ ಆಳ್ವಿಕೆಗಳು ಹೇಗೆ ಸ್ಟೇಟ್ ನ್ನು ರಚಿಸುತ್ತವೆ ಎಂಬುದು ಸ್ಪಷ್ಟವಾಗುವುದಿಲ್ಲ, ವಿಭಿನ್ನ ಆಳ್ವಿಕೆಗಳನ್ನು ಆಡಳಿತದ ವಿಧಾನಗಳನ್ನು ಸ್ಟೇಟ್ ಕಾರ್ಯಕ್ರವನ್ನಾಗಿ ಗ್ರಹಿಸುವುದು ಹೇಗೆ ಎಂಬುದೂ ಗೊತ್ತಾಗುವುದಿಲ್ಲ. ಇಂತಹ ಕಾರಣಗಳಿಂದಲೇ ನಮಗೆ ಅರ್ಥವಾಗದ್ದನ್ನೂ ಅರ್ಥವಾಗಿದೆ ಎನ್ನುವ ರೀತಿಯಲ್ಲಿ ಓದುತ್ತಾ ಮತ್ತು ಬೋಧಿಸುತ್ತಾ, ರಾಜ್ಯಶಾಸ್ತ್ರವನ್ನು ಓದುವವರಿಗೆ ಅನಾಸಕ್ತಿಯ ವಿಷಯವನ್ನಾಗಿ ಮಾಡಲಾಗಿದೆ.

ಚಿತ್ರಕೃಪೆ: http://celiastephens.blogspot.in/2012/06/great-thinkers.html

Read more from ಲೇಖನಗಳು

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments