ವಿಷಯದ ವಿವರಗಳಿಗೆ ದಾಟಿರಿ

Archive for

11
ಆಗಸ್ಟ್

ನಾಡು-ನುಡಿ ಮರುಚಿಂತನೆ : ಬೌದ್ಧ ಮತ – ಸಂಘ ಮತ್ತು ಸಂಸಾರ

– ಪ್ರೊ.ರಾಜಾರಾಮ್ ಹೆಗಡೆ
ಪ್ರಾಧ್ಯಾಪಕರು, ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗ, ಕುವೆಂಪು ವಿ.ವಿ

ಬುದ್ಧನಾವು ಇಂದು ಓದುತ್ತಿರುವ ಬೌದ್ಧ ಮತದ ಜನಪ್ರಿಯ ಇತಿಹಾಸದಲ್ಲಿ ಒಂದು ಸಮಸ್ಯೆಯಿದೆ. ಅದೆಂದರೆ ನಾವು ಕ್ರಿಶ್ಚಿಯಾನಿಟಿ ಹಾಗೂ ಇಸ್ಲಾಮಿನ ಮಾದರಿಗಳನ್ನಿಟ್ಟುಕೊಂಡು ಅವುಗಳ ಲಕ್ಷಣಗಳನ್ನು ಆರೋಪಿಸಿಕೊಂಡು ಬೌದ್ಧ ಮತ ಎಂಬುದನ್ನು ಊಹಿಸಿಕೊಳ್ಳುತ್ತಿರುತ್ತೇವೆ. ಅಂದರೆ ಬೌದ್ಧ ಮತವನ್ನು ಒಂದು ರಿಲಿಜನ್ನು ಎಂಬದಾಗಿ ಭಾವಿಸಿಕೊಂಡು ಪಾಶ್ಚಾತ್ಯ ವಿದ್ವಾಂಸರು ಮೊತ್ತಮೊದಲು ಅದನ್ನು ಅಧ್ಯಯನಕ್ಕೊಳಪಡಿಸಿದರು ಹಾಗೂ ಅವರನ್ನನುಸರಿಸಿ ಭಾರತೀಯರೂ ಇಂಥ ಅಧ್ಯಯನಗಳನ್ನು ಮುಂದುವರಿಸಿದರು.

ಬೌದ್ಧ ಮತದ ಕುರಿತು ನಮ್ಮ ಜನಪ್ರಿಯ ಇತಿಹಾಸದ ಪ್ರಕಾರ ಬುದ್ಧನು ಬುದ್ಧಿಸಂ ಎಂಬ ಒಂದು ಹೊಸ ಜಾತ್ಯತೀತ ಸಮಾಜದ ಹುಟ್ಟಿಗೆ ಕಾರಣನಾದನು. ಅವನು ಮಾಡಿದ ಉಪದೇಶಗಳು ಅವನ ಅನುಯಾಯಿಗಳ ಜೀವನವನ್ನು ನಿರ್ದೇಶಿಸುವ ನಿಯಮಗಳಾದವು. ಇಂಥ ನಿಯಮಗಳನ್ನು ತಿಳಿಸುವ ಬೌದ್ಧರ ಪವಿತ್ರ ಗ್ರಂಥವೇ ಪಾಳಿ ತ್ರಿಪಿಟಕ. ಇಂಥ ನಿಯಮಗಳಾದರೂ ಯಾವವು? ನಮಗೆ ಸದ್ಯಕ್ಕೆ ಗೊತ್ತಿರುವುದು ಒಂದೇ ಒಂದು ನಿಯಮ: ಅದೆಂದರೆ ಜಾತಿ ಭೇದವನ್ನು ನಿರಾಕರಿಸಿದ್ದು. ಅಂದರೆ ಬೌದ್ಧರ ಆಚರಣೆಗಳಲ್ಲಿ ಜಾತಿಯನ್ನಾಧರಿಸಿ ತರತಮಗಳನ್ನಾಗಲೀ, ವ್ಯತ್ಯಾಸವನ್ನಾಗಲೀ ಮಾಡುವಂತಿಲ್ಲ. ಬೌದ್ಧ ಸಂಘಗಳೆಂದರೆ ಚರ್ಚುಗಳಂತೇ. ಅವುಗಳ ಕೆಲಸ ಬೌದ್ಧರಲ್ಲದವರನ್ನು ಬೌದ್ಧ ಮತಕ್ಕೆ ಪರಿವರ್ತನೆ ಮಾಡುವುದು. ಬೌದ್ಧ ಮತದ ಜಾತ್ಯತೀತತೆಗೆ ಮನಸೋತು ವರ್ಣ ಸಮಾಜದಲ್ಲಿ ಸಾಮಾಜಿಕ ಸ್ಥಾನಮಾನಗಳನ್ನು ಕಳೆದುಕೊಂಡ ಜಾತಿಗಳೆಲ್ಲವೂ ಬೌದ್ಧರಾಗಿ ಸಮಾನತೆಯನ್ನು ಪಡೆದರು.ಈ ರೀತಿಯಲ್ಲಿ ಬೌದ್ಧ ಮತವು ಭಾರತ ಹಾಗೂ ಪೂರ್ವ ಏಶಿಯಾದಲ್ಲೆಲ್ಲ ಜನಪ್ರಿಯತೆಯನ್ನು ಪಡೆದು ವ್ಯಾಪಿಸಿಕೊಂಡಿತು. ಆದರೆ ಮಧ್ಯಕಾಲದಲ್ಲಿ ಭಾರತೀಯರೆಲ್ಲರೂ ಮತ್ತೆ ಬೌದ್ಧ ಮತವನ್ನು ಬಿಟ್ಟು ಹಿಂದೂಯಿಸಂಗೇ ಸೇರಿಕೊಂಡರು. ಬೌದ್ಧ ಮತವು ಭಾರತದಲ್ಲಿ ಅವನತಿ ಹೊಂದಿತು.  ಆದರೆ ಉಳಿದೆಡೆ ಉಳಿದುಕೊಂಡಿತು.
ಮತ್ತಷ್ಟು ಓದು »

10
ಆಗಸ್ಟ್

nಕಯ್ಯಾರ ಕಿಞ್ಞಣ್ಣ ರೈ

10
ಆಗಸ್ಟ್

ಬುದ್ಧಿಜೀವಿಗಳ ಭೌತಶಾಸ್ತ್ರ

– ವಿನಾಯಕ ಹಂಪಿಹೊಳಿ

ಬುದ್ಧಿಜೀವಿಗಳ ತಂಡವೊಂದು ಭೌತಿಕ ವಿಜ್ಞಾನವನ್ನು ಕಲಿಯಲು ಹೊರಟಿತು. ಸರ್ಕಾರದಿಂದ ಅನುದಾನ ಪಡೆದು ಎ.ಸಿ. ರೂಮೊಂದನ್ನು ಕಟ್ಟಿಸಿ, ಅಲ್ಲಿ ಎಲ್ಲ ಭೌತ ವಿಜ್ಞಾನದ ಪುಸ್ತಕಗಳನ್ನುಬುದ್ಧಿಜೀವಿ ತರಿಸಿ ಎಲ್ಲವನ್ನೂ ಅನೂಚಾನವಾಗಿ ಓದಿಕೊಂಡಿತು. ನ್ಯೂಟನ್ನಿನ ನಿಯಮಗಳಿಂದ ಆರಂಭಿಸಿ, ಕ್ವಾಂಟಂ ಸಿದ್ಧಾಂತದವರೆಗಿನ ಎಲ್ಲ ಸಿದ್ಧಾಂತಗಳನ್ನೂ ಅವುಗಳ ಇತಿಮಿತಿಗಳನ್ನೂ ಅಧ್ಯಯನ ಮಾಡಿತು. ೩-೪ ವರ್ಷಗಳ ನಂತರ ಆ ಬುದ್ಧಿಜೀವಿಗಳು ಈಗ ತಾವು ಎಲ್ಲವನ್ನೂ ತಿಳಿದುಕೊಂಡಿದ್ದೇವೆ ಎಂದು ಭಾವಿಸಿ ಒಂದು ಬಹುದೊಡ್ಡ ಅನ್ವೇಷಣಾ ವರದಿಯನ್ನು ಬರೆದು ಎ.ಸಿ. ರೂಮಿನಿಂದ ಹೊರಬಂದಿತು. ಅದು ತನ್ನ ಅನ್ವೇಷಣೆಯನ್ನು ಸರ್ಕಾರಕ್ಕೆ ಸಲ್ಲಿಸಿತು. ಆ ವರದಿಯ ಕೊನೆಯಲ್ಲಿ ಇಡೀ ಅಧ್ಯಯನದ ಸಾರಾಂಶ ಅಡಗಿತ್ತು.

“ಈ ಪ್ರಕೃತಿಯು ಬಹು ಗೊಂದಲದಿಂದ ಕೂಡಿದೆ. ವಸ್ತುಗಳ  ವೇಗ ಕಡಿಮೆಯಿದ್ದರೆ ನ್ಯೂಟನ್ನಿನ ನಿಯಮವನ್ನು ಪಾಲಿಸುತ್ತದೆ, ಆದರೆ ವೇಗ ತುಂಬಾ ಹೆಚ್ಚಿದಂತೆ ಆ ನಿಯಮಗಳನ್ನು ಮೀರುತ್ತವೆ ಮತ್ತು ಇದ್ದಕ್ಕಿದ್ದಂತೆ ಐನ್ಸ್ಟೈನ್ ನಿಯಮಗಳನ್ನು ಪಾಲಿಸುತ್ತವೆ. ಅಂದರೆ ಯಾವ ನಿಯಮವನ್ನು ಸರಿಯಾಗಿ ಪಾಲಿಸಬೇಕು ಎಂಬುದರ ಸ್ಪಷ್ಟವಾದ ಕಲ್ಪನೆ ಪ್ರಕೃತಿಗೆ ಇದ್ದಂತಿಲ್ಲ. ಗಾತ್ರದಲ್ಲಿ ದೊಡ್ಡದಾಗಿರುವ ವಸ್ತುಗಳು ಕ್ಲಾಸಿಕಲ್ ಮೆಕಾನಿಕಲ್ ನಿಯಮಗಳನ್ನು ಅನುಸರಿಸಿದರೆ, ಚಿಕ್ಕದಾಗಿರುವ ವಸ್ತುಗಳು ಮೆಕಾನಿಕಲ್ ನಿಯಮಗಳನ್ನು ಗಾಳಿಗೆ ತೂರಿ ಕ್ವಾಂಟಂ ಮೆಕಾನಿಕಲ್ ನಿಯಮಗಳನ್ನು ಅನುಸರಿಸುತ್ತವೆ. ಹೀಗೆ ದೊಡ್ಡವುಗಳಿಗೊಂದು ನ್ಯಾಯ, ಚಿಕ್ಕವುಗಳಿಗೊಂದು ನ್ಯಾಯವನ್ನು ನೀಡುವ ಪ್ರಕೃತಿಯು ನಿಜವಾಗಿಯೂ ಆದರ್ಶ ಪ್ರಕೃತಿಯಾಗಿರಲಾರದು.

ಬೆಳಕು ಮೊದಮೊದಲು ತರಂಗದಂತೆ ವರ್ತಿಸಿದರೆ, ಇದ್ದಕ್ಕಿದ್ದಂತೆ, ಕಣಗಳ ರೂಪದಲ್ಲಿ ವರ್ತಿಸಲು ಶುರು ಮಾಡುತ್ತವೆ. ಇದೇ ರೀತಿ, ಎಲೆಕ್ಟ್ರಾನ್ ಮುಂತಾದ ಸೂಕ್ಷ್ಮ ಕಣಗಳು ಒಮ್ಮೊಮ್ಮೆ ತರಂಗದಂತೆ ವರ್ತಿಸುತ್ತವೆ. ಹೀಗಾಗಿ ಈ ನಿಸರ್ಗವು ಒಂದು ಸುವ್ಯವಸ್ಥಿತವಾದ ಜಗತ್ತನ್ನು ಕಟ್ಟುವಲ್ಲಿ ವಿಫಲವಾಗಿದೆಯೆಂದು ಧಾರಾಳವಾಗಿ ಹೇಳಬಹುದು. ಅಲ್ಲದೇ ಥರ್ಮೋಡೈನಮಿಕ್ಸ್ ಪ್ರಕಾರ, ಜಗತ್ತಿನ ಎಂಥ್ರೊಪಿ (disorderness) ನಿರಂತರವಾಗಿ ಹೆಚ್ಚುತ್ತಲೇ ಇದೆ. ಪ್ರಕೃತಿಯ ಈ ಬೆಳವಣಿಗೆ ನಿಜವಾಗಿಯೂ ಆಘಾತಕಾರಿ. ಜಗತ್ತು ಸುವ್ಯವಸ್ಥತೆಯಿಂದ ಅವ್ಯವಸ್ಥತೆಯೆಡೆಗೆ ಸಾಗುತ್ತಿರುವದನ್ನು ಗುರುತಿಸುವಲ್ಲಿ ಪ್ರಕೃತಿಯು ಸಂಪೂರ್ಣವಾಗಿ ವಿಫಲವಾಗಿದೆ.
ಮತ್ತಷ್ಟು ಓದು »

10
ಆಗಸ್ಟ್

‘ಸ್ವಪ್ನ ಸಾರಸ್ವತ’ದ ಪುಟಗಳಲ್ಲಿ

– ಮನುಶ್ರೀ ಜೋಯಿಸ್

ಸ್ವಪ್ನ ಸಾರಸ್ವತ'“ಸ್ವಪ್ನ ಸಾರಸ್ವತ” ಒಂದು ಸುಂದರ ಸುಧೀರ್ಘ ಕಾದಂಬರಿ. ಸುಮಾರು ಐದು ತಲೆಮಾರುಗಳ ಸಾರಸ್ವತ ಕುಟುಂಬದ ಇತಿಹಾಸ ಹೇಳುವಂತ ಕಥೆ. ಇದು ಬರೀ ಆ ವರ್ಗಕ್ಕೆ ಮಾತ್ರ ಸೀಮಿತವಾಗಿರದೆ ಸಂಘಜೀವಿ ಮನುಷ್ಯನ ಪರಿಸರ ಪ್ರೀತಿಯನ್ನು, ಪ್ರಕೃತಿಯನ್ನು ಹಚ್ಚಿಕೊಳ್ಳುವ ರೀತಿಯನ್ನು ಬಿಂಬಿಸುತ್ತದೆ.

ಗೋವಾದಲ್ಲಿ ಪೋರ್ಚುಗೀಸರ ಆಕ್ರಮಣಕ್ಕೆ ಸಿಕ್ಕು ದಿಕ್ಕಾಪಾಲಾಗುವ ಸಾರಸ್ವತ ಬ್ರಾಹ್ಮಣರ ಕಷ್ಟ-ಕಾರ್ಪಣ್ಯದಿಂದ ಈ ಕಥೆ ಪ್ರಾರಂಭವಾಗುತ್ತದೆ. ದಾಳಿಯಿಂದಾಗುವ ದೇವಸ್ಥಾನಗಳ ಹಾನಿ, ಆಸ್ತಿ-ಪಾಸ್ತಿಗಳ ನಷ್ಟ, ಸಂಸ್ಕೃತಿಯ ಪತನ ಮುಂತಾದವುಗಳನ್ನು ಲೇಖಕರು ಯಶಸ್ವಿಯಾಗಿ,ಸೂಕ್ಷವಾಗಿ ಚಿತ್ರಿಸಿದ್ದಾರೆ. ಇನ್ನು ಧರ್ಮಹಾನಿಯ ಸಮಯದಲ್ಲಿ ಮನದಲ್ಲಿನ ತೊಳಲಾಟ, ಗೊಂದಲಗಳನ್ನು ಸಾಮಾನ್ಯ ಮನುಷ್ಯನೊಬ್ಬ ಎದುರಿಸುವ ಪರಿ ಮನ ಮುಟ್ಟುವಂತಿದೆ.

ಸ್ನೇಹದ ಹಳಿಯಲ್ಲಿ ಬದುಕಿನ ಬಂಡಿ ಸಾಗುವುದು.ದೌರ್ಬಲ್ಯದಲ್ಲೇ ಮುಂದೆ ಸಾಗಿ ಮನಸಲ್ಲೇ ಮುಚ್ಚಿಟ್ಟು ಕೊಳ್ಳುವ ಪಶ್ಚಾತ್ತಾಪ. ದ್ವೇಷದ ಚಿಕ್ಕ ಕಿಡಿಯಿಂದ ಹೊತ್ತಿ ಉರಿವ ಮನೆ, ಮನಸ್ಸು.ಅಷ್ಟೈಶ್ವರ್ಯಗಳಿದ್ದೂ ಎಲ್ಲವನ್ನು ಕಳೆದುಕೊಂಡು ವಲಸೆಬಂದು ಪರಸ್ಥಳದಲ್ಲಿ ನೆಲೆನಿಂತು ಬದುಕು ಕಟ್ಟಿಕೊಳ್ಳುವ ಜೀವನ ಪ್ರೀತಿ. ಮನುಷ್ಯನ ಮೋಹ,ಲೋಭ,ದ್ವೇಷಗಳು, ದಾರಿ ತಪ್ಪುವ ಮನಸ್ಸಿನ ಹೊಯ್ದಾಟಗಳು,ಪರಿಣಾಮಗಳು,ಜಿಜ್ಞಾಸೆಗಳು ಯಥಾವತ್ತಾಗಿ ಜೀವನವೇ ಹಾಳೆಯ ಮೇಲೆ ಮೂಡಿ ಬಂದಂತಿದೆ.
ಮತ್ತಷ್ಟು ಓದು »

9
ಆಗಸ್ಟ್

ಕೊಟ್ಟ ಕುದುರೆಯನೇರಲರಿಯದೆ : ಓದುಗರ ಕಣ್ಕಾಪು ತೆರೆಯಿಸುವ ಕೃತಿ

– ಡಾ. ಶ್ರೀಪಾದ ಭಟ್,ಸಹಾಯಕ ಪ್ರಾಧ್ಯಾಪಕ
ಡಾ. ಡಿ ವಿ ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರ,ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು

ಕೊಟ್ಟ ಕುದುರೆಯನೇರಲರಿಯದೆಇಂದಿನ ಕನ್ನಡ ಸಾಹಿತ್ಯ ಚರ್ಚೆ ಮತ್ತು ವಿಮರ್ಶೆಗಳು ಯಾವುದೇ ಕೃತಿ ಅಥವಾ ಅದಕ್ಕಿಂತ ಹೆಚ್ಚಾಗಿ ಅದರ ಕೃತಿಕಾರನನ್ನು ಹೇಗೆ ನೋಡಬೇಕು ಎಂದು ಮೊದಲೇ ನಿರ್ಧರಿಸಿ ಓದುಗರೂ ಹಾಗೆಯೇ ತಿಳಿಯತಕ್ಕದ್ದು ಎಂದು ಆಗ್ರಹಿಸುತ್ತವೆ. ಇಂಥ ಆಗ್ರಹಕ್ಕೆ ಕೆಲವೇ ಕೆಲವು ವರ್ಷಗಳ ಪರಂಪರೆ ಹಾಗೂ ಅಳ್ಳಕವಾದ ಬೇರು ಇದ್ದರೂ ಇದು ಬೀಸಿದ ಪ್ರಭಾವ ಮಾತ್ರ ತುಸು ಹೆಚ್ಚಿನದು. ಕುವೆಂಪು, ಭೈರಪ್ಪ, ಅನಂತಮೂರ್ತಿ ಮೊದಲಾಗಿ ಯಾರ್ಯಾರ ಕೃತಿಯನ್ನು ಹಾಗೂ ಆಯಾ ಕೃತಿಕಾರರನ್ನು ಹೇಗೆ ನೋಡಬೇಕು, ತಿಳಿಯಬೇಕು ಹಾಗೂ ಅವರನ್ನು ಎಲ್ಲಿ ಇಡಬೇಕು ಎಂದು ‘ನಿರ್ದೇಶಿಸುವ’ ಪ್ರವೃತ್ತಿ ಸಾಹಿತ್ಯಕ ವಲಯದಲ್ಲಿ ಕಾಣಿಸಿಕೊಂಡಿದೆ. ಇದು ತನ್ನ ಹಾಸುಬೀಸನ್ನು ಹೊಸಗನ್ನಡಕ್ಕೆ ಮಾತ್ರ ಸೀಮಿತಗೊಳಿಸಿಲ್ಲ. ಅದರ ತೆಕ್ಕೆಗೆ ಹನ್ಮಿಡಿ ಶಾಸನಾದಿಯಾಗಿ ಎಲ್ಲವೂ ಸೇರಿವೆ! ಹೀಗಾಗಿ ಸಹಜವಾಗಿಯೇ ಹನ್ನೆರಡನೆಯ ಶತಮಾನದ ವಚನ ಸಾಹಿತ್ಯವೂ ಇಂಥ ನಿರ್ದೇಶನದ ವ್ಯಾಪ್ತಿಯಲ್ಲಿ ಬಂದುಬಿಟ್ಟಿದೆ. ಓದುಗನ ಮೇಲೆ ಹೇರಲಾಗುವ ಈ ಬಗೆಯ ನಿರ್ದೇಶನದಿಂದ ಸಾಹಿತ್ಯಕ್ಕಾಗಲೀ ಓದುಗನಾಗಲೀ ಲಾಭಕ್ಕಿಂತ ನಷ್ಟವೇ ಹೆಚ್ಚು. ವಚನ ಸಾಹಿತ್ಯ ಕುರಿತು ಹೀಗೆ ಹೇರಲಾಗಿರುವ “ಓದುವ-ತಿಳಿಯುವ ಕ್ರಮದ ನಿರ್ದೇಶನ”ದಿಂದಾಗಿ ಸಾಹಿತ್ಯವನ್ನು ಸಹಜವಾಗಿ ಓದುವವರಿಗೆ ಹುಟ್ಟುವ ಪ್ರಶ್ನೆಗಳಿಗೆ ಸಮಂಜಸ ಉತ್ತರ ದೊರಕದಿದ್ದರೂ ಉತ್ತರ ದೊರಕಿದಂತೆ ನಟಿಸಬೇಕಾಗುತ್ತದೆ. ಆದರೆ ಅನುಮಾನ ಪರಿಹಾರವಾಗದು. ಅಂಥ ಸಂದರ್ಭದಲ್ಲಿ ಓದುಗರು ತಮ್ಮ ಓದಿನ ದೋಷವನ್ನು ಅರ್ಥಮಾಡಿಕೊಂಡು ಬೇರೆ ರೀತಿಯಲ್ಲಿ ಓದಿಕೊಳ್ಳುವ ಮಾರ್ಗ ಹುಡುಕಬೇಕಾಗುತ್ತದೆ. ಸ್ಥಾಪಿತ ನಿರ್ದೇಶನಗಳ ಹಿನ್ನೆಲೆಯಲ್ಲಿ ವಚನಗಳನ್ನು ಓದಿದಾಗ ಉಂಟಾಗುವ ಸಮಸ್ಯೆ ಇಂಥ ಹೊಸ ಮಾರ್ಗವನ್ನು “ಕೊಟ್ಟಕುದುರೆಯನೇರಲರಿಯದೆ…” ಕೃತಿಯ ಮೂಲಕ ಈಗ ತೆರೆದಿದೆ.

ಹನ್ನೆರಡನೆಯ ಶತಮಾನದಲ್ಲಿ ಹುಟ್ಟಿಕೊಂಡ ವಚನಗಳ ಹಿನ್ನೆಲೆ, ಅವುಗಳ ಸ್ವರೂಪ, ಭಾಷೆ, ವಿಷಯ ವೈವಿಧ್ಯಗಳನ್ನು ಗಮನಿಸಿದಾಗ ಓದುಗನಲ್ಲಿ ಸಹಜವಾಗಿಯೇ ಅನೇಕಾನೇಕ ಪ್ರಶ್ನೆಗಳು ಹುಟ್ಟುತ್ತವೆ: ‘ವಚನಗಳ ನಿರ್ದಿಷ್ಟ ಸಂಖ್ಯೆ ಯಾಕೆ ಲಭ್ಯವಿಲ್ಲ? ‘ಕಲ್ಯಾಣ ಕ್ರಾಂತಿಯಾದಾಗ ವಚನಗಳ ಕಟ್ಟುಗಳನ್ನು ತಲೆ ಮೇಲೆ ಹೊತ್ತು ಹುಬ್ಬಳ್ಳಿಯ ಮೂರು ಸಾವಿರ ಮಠಕ್ಕೂ ಉಳವಿಗೂ ಸಾಗಿಸಲಾಯಿತು’ ಎಂಬ ಹೇಳಿಕೆ ಸರಿಯಾಗಿದ್ದರೆ ಆ ಕಟ್ಟುಗಳು ಏನಾದವು?

ಮತ್ತಷ್ಟು ಓದು »

8
ಆಗಸ್ಟ್

ಸೋತು ಗೆದ್ದ ಸ೦ತನ ಕತೆಯಿದು…

– ಗುರುರಾಜ್ ಕೊಡ್ಕಣಿ,ಯಲ್ಲಾಪುರ

ರಾಮಕೃಷ್ಣ ಪರಮಹಂಸರಾಮಕೃಷ್ಣ ಪರಮಹ೦ಸರು ಯಾರಿಗೆ ತಾನೇ ಗೊತ್ತಿಲ್ಲ.ಬಹುಪಾಲು ಭಾರತೀಯರಿಗೆ ರಾಮಕೃಷ್ಣರು ಚಿರಪರಿಚಿತರು.ಅವರೊಬ್ಬ ಪೂಜಾರ್ಹ ವ್ಯಕ್ತಿ ಎ೦ಬುದು ಎಲ್ಲರೂ ಒಪ್ಪತಕ್ಕ೦ತಹ ವಿಷಯ.ಆದರೆ ಆರ೦ಭಿಕ ದಿನಗಳಲ್ಲಿ ಬಹುತೇಕ ಜನರು ಅವರನ್ನೊಬ್ಬ ವಿಚಿತ್ರ ವ್ಯಕ್ತಿಯೆ೦ಬ೦ತೆ ಭಾವಿಸುತ್ತಿದ್ದರು. ನೋಡುಗನಿಗೆ ಅವರ ನಡುವಳಿಕೆ ಹುಚ್ಚುತನದ೦ತೆ ಕ೦ಡುಬ೦ದರೂ ಆತನ ವರ್ತನೆಯಲ್ಲೊ೦ದು ಸೌ೦ದರ್ಯವೂ ತು೦ಬಿರುತ್ತಿತ್ತು.ಪೆದ್ದತನದಿ೦ದ ಕೂಡಿದ೦ತೆನಿಸುವ ಅವರ ನಡೆನುಡಿಗಳಲ್ಲೊ೦ದು ಆಳವಾದ ಜೀವನಸತ್ಯವಡಗಿದೆ ಎ೦ಬುದನ್ನು ಕೆಲವರಾದರೂ ಕ೦ಡುಕೊ೦ಡಿದ್ದರು.ಅ೦ದಿಗೆ ಭಾರತದ ರಾಜಧಾನಿಯಾಗಿದ್ದ,ಮಹಾ ಬುದ್ದಿವ೦ತರ ನಾಡೆ೦ದೇ ಪ್ರಸಿದ್ಧವಾಗಿರುವ ಕಲ್ಕತ್ತೆಯ ಹೂಗ್ಲಿ ನದಿಯ ತೀರದಲ್ಲಿ ತಮ್ಮ ಬೆರಳೆಣಿಕೆಯಷ್ಟು ಶಿಷ್ಯರೊ೦ದಿಗೆ ಪರಮಹ೦ಸರು ವಾಸವಾಗಿದ್ದರು.ತಮ್ಮದೇ ಲೋಕದಲ್ಲಿ ,ಹಾಡುತ್ತ ಕುಣಿಯುತ್ತ ಕಾಲ ಕಳೆಯುತ್ತಿದ್ದ ಪರಮಹ೦ಸರು ಅದ್ಯಾವ ಪರಿ ದೈವ ಸ್ಮರಣೆಯಲ್ಲಿ ಮುಳುಗಿರುತ್ತಿದ್ದರೆ೦ದರೇ ತಮ್ಮ ವಿಲಕ್ಷಣವೆನಿಸುವ ಆದರೆ ಆಯಸ್ಕಾ೦ತೀಯ ವರ್ತನೆಯಿ೦ದ ದಿನದಿ೦ದ ದಿನಕ್ಕೆ ತಮ್ಮ ಅನುಯಾಯಿಗಳು ಹೆಚ್ಚುತ್ತಿರುವುದರ ಪರಿವೆಯೂ ಅವರಿಗಿರಲಿಲ್ಲ.

ಹೀಗೊಬ್ಬ ವಿಕ್ಷಿಪ್ತ ವ್ಯಕ್ತಿ ತಮ್ಮ ನಡುವೆಯೇ ಇದ್ದಾನೆ ಮತ್ತು ಆತ ದೇವರ ಇರುವಿಕೆಯನ್ನು ಕಲ್ಕತ್ತೆಯಲ್ಲಿಯೇ ಸಾರುತ್ತಿದ್ದಾನೆ ಎ೦ಬುದನ್ನು ಮೊದಲು ಗಮನಿಸಿದವರು ಪಶ್ಚಿಮ ಬ೦ಗಾಳದ ಮಹಾನ್ ಚಿ೦ತಕರಲ್ಲಿ ಒಬ್ಬರಾದ ಕೇಶವ ಚ೦ದ್ರ ಸೇನರು.ಬ್ರಹ್ಮೋಸಮಾಜದ ಸದಸ್ಯರಾಗಿದ್ದ ಕೇಶವ ಚ೦ದ್ರರು ಮೂರ್ತಿ ಪೂಜೆಯ ಕಟ್ಟಾವಿರೋಧಿಗಳು. ಪರಮ ನಾಸ್ತಿಕರು ಮತ್ತು ಚತುರ ವಾಗ್ಮಿ. ಕಾಳಿದೇವಿಯ ವಿಗ್ರಹಾರಾಧಕನೊಬ್ಬ ತಮ್ಮ ಊರಿನಲ್ಲಿಯೇ ದೇವರ ಮಹಿಮೆಯನ್ನು ಸಾರುವ ಕೆಲಸವನ್ನು ಮಾಡುತ್ತಿದ್ದಾನೆ,ಅ೦ಥವನಿಗೆ ಕೆಲವು ಕಾಲೇಜಿನ ಅಧ್ಯಾಪಕರು ಶಿಷ್ಯರಾಗಿದ್ದಾರೆನ್ನುವ ವಿಷಯವನ್ನು ಕೇಳಿದಾಗ ಕೇಶವ ಸೇನರಿಗೆ ನಖಶಿಖಾ೦ತ ಕೋಪ.

ಮತ್ತಷ್ಟು ಓದು »

7
ಆಗಸ್ಟ್

5ನೇ ವರ್ಷಕ್ಕೆ,ನಾಡಿನ ಬೌದ್ಧಿಕ ಕ್ಷೇತ್ರಕ್ಕೆ ನಿಲುಮೆಯಿಂದ 3 ಪುಸ್ತಕಗಳು

Nilume Publication Booksಅಂದು ಸುವರ್ಣ ನ್ಯೂಸ್ ಸ್ಟುಡಿಯೋದಲ್ಲಿ,”ಇವರಂತೆ ನಮ್ಮದು ವಿಧ್ವಂಸಕ ಮಾರ್ಗವಲ್ಲ;ನಮ್ಮದು ಜ್ಞಾನ ಮಾರ್ಗ”ವೆಂದಾಗ,ನನ್ನ ಮುಖಾಮುಖಿಯಾಗಿದ್ದವರು “ಮೊದಲ ಬಾರಿ ಕ್ಯಾಮೆರಾ ಮುಂದೆ ಬಂದಿರುವ ಜೋಷ್ ಹೀಗೆಲ್ಲ ಮಾತನಾಡಿಸುತ್ತದೆ” ಅನ್ನುವ ಅರ್ಥದಲ್ಲೆನೋ ವ್ಯಂಗ್ಯವಾಡಿದ್ದರು.ನನಗದು ಕೇಳಿಸಿತಾದರೂ,ಉತ್ತರಿಸಬೇಕಾದ ಸಮಯ ಅದಲ್ಲ ಅಂತ ಸುಮ್ಮನಾಗಿದ್ದೆ…
ಮತ್ತಷ್ಟು ಓದು »

7
ಆಗಸ್ಟ್

ಅಂಥ ಹುಡುಗಿಯರ ನಡುವೆ ನಾವು ಕಳೆದು ಹೋಗಿದ್ದೇವೆ!

– ವಿನಾಯಕ ಕೊಡ್ಸರ

ಪೋರ್ನ್ಪೋರ್ನ್‌ ಬ್ಯಾನ್‌ ರಾಷ್ಟ್ರೀಯ ವಿಪತ್ತು ಎಂಬಂತೆ ಕಳೆದ ಕೆಲವು ದಿನಗಳಿಂದ ಚರ್ಚೆಯಾಗುತ್ತಿದೆ. ಫೇಸ್ಬುಕ್‌, ವಾಟ್ಸಪ್‌ನಲ್ಲಿ ಒಂದಷ್ಟು ಜೋಕುಗಳು ಹರಿದಾಡುತ್ತಿವೆ. ಪರ-ವಿರೋಧದ ನಿಲುವುಗಳು ಇದ್ದೇ ಇದೆ! ನೀವು ಯಾವುದೇ ಸೆಕ್ಸ್‌ ವೀಡಿಯೋ ನೋಡಿದ್ರೂ, ಅದು ಸಹಜವಾಗಿದ್ದಲ್ಲ, ಸಂಪಾದನೆಗೊಂಡ ಆವೃತಿ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತೆ. ಕ್ಯಾಮೆರ ಫ್ರೇಮ್‌ಗಳು, ಬದಲಾಗುವ ಸ್ಥಳಗಳು, ಮ್ಯೂಸಿಕ್‌ನಲ್ಲಿನ ವ್ಯತ್ಯಯಗಳು ಎಲ್ಲವೂ ಕೂಡ ಇದೊಂದು ಸಿನಿಮಾ, ಧಾರಾವಾಹಿ, ರಿಯಾಲಿಟಿ ಶೋನಂತೆ ಎಡಿಟೆಡ್‌ ಆವೃತಿ ಮತ್ತು ಪೂರ್ತಿ ಸ್ಕ್ರಿಪ್ಟೆಡ್‌ ಎಂಬುದನ್ನು ಸೂಚಿಸುತ್ತದೆ.

ಜಗತ್ತಿಗೆ ಚಲಿಸುವ ಚಿತ್ರಗಳ ಪರಿಕಲ್ಪನೆ ಬಂದಾಗಿನಿಂದ ಈ ಪೊರ್ನೊಗ್ರಫಿಯ ಇತಿಹಾಸ ಸಿಗುತ್ತೆ. ಅಂದ್ರೆ ೧೮೯೦ರ ದಶಕದಿಂದಲೆ ಈ ಉದ್ಯಮ ಆರಂಭವಾಗಿದ್ದು ಎಂಬ ಅನುಮಾನದಿಂದ ಗೂಗಲ್‌ನಲ್ಲಿ ಇಂಥ ಚಿತ್ರಗಳು ಎಲ್ಲಿ ತಯಾರಾಗುತ್ತವೆ, ಹೇಗೆ ತಯಾರಾಗುತ್ತವೆ, ಇವುಗಳ ಹಕ್ಕಿಕತ್ತು ಏನು ಎಂಬ ಕುರಿತು ಒಂದಷ್ಟು ದಿನದ ಹಿಂದೆ ಸುಮ್ಮನೆ ಜಾಲಾಡಿದ್ದೆ.

ಈ ಪೋರ್ನ್‌ ವೀಡಿಯೋ ಉತ್ಪಾದಕ ಪ್ರೊಡೆಕ್ಷನ್‌ ಹೌಸ್‌ಗಳು ಮುಖ್ಯವಾಗಿ ಬೇರು ಬಿಟ್ಟಿರುವುದು ಯೂರೋಪ್‌ ಮತ್ತು ಅಮೆರಿಕದಲ್ಲಿ. ಒಂದು ಅಂದಾಜಿನ ಪ್ರಕಾರ ೨೦೧೨ರವೇಳೆಗೆ ಈ ನೀಲಿಚಿತ್ರ ಜಗತ್ತಿನ ವಾರ್ಷಿಕ ಆದಾಯ ೧೫-೨೦ ಶತಕೋಟಿ ಡಾಲರ್‌. ಅಮೆರಿಕದ ೨ ಪ್ರಮುಖ ವೆಬ್‌ಸೈಟ್‌ಗಳು ವರ್ಷಕ್ಕೆ ಸುಮಾರು ೪ ಶತಕೋಟಿ ಡಾಲರ್‌ನಷ್ಟು ವಹಿವಾಟು ನಡೆಸುತ್ತಿವೆ. ಅಲ್ಲಿಗೆ ಇದೊಂದು ವ್ಯವಸ್ಥಿತ ಉದ್ಯಮ ಎಂಬುದನ್ನು ಖಾತ್ರಿಪಡಿಸಿಕೊಂಡು ಇಂಟರ್‌ನೆಟ್‌ನಲ್ಲಿ ಜಾಲಾಡುತ್ತ ಹೋದಾಗ ನನಗೆ ಇಂಗ್ಲಿಷ್‌ನ ೨ ಅತ್ಯದ್ಭುತ ಲೇಖನ ಸಿಕ್ಕಿತ್ತು.
ಮತ್ತಷ್ಟು ಓದು »

7
ಆಗಸ್ಟ್

ರಿವೈಂಡ್ ಮಾಡಲಾಗದ ಫಿಲ್ಮಿನ ರೀಲು ಮುಗಿಯುವ ಮುನ್ನ

– ರೋಹಿತ್ ಚಕ್ರತೀರ್ಥ

ಪೋರ್ನ್ಪ್ರೀತಿಯ ಅಶ್ವಿನ್,

ಈ ಮಾತನ್ನು ನಿನಗೆ ಹೇಳಬೇಕೋ ಬೇಡವೋ ಅನ್ನುವ ವಿಷಯದಲ್ಲಿ ನನಗೆ ಖಂಡಿತ ಗೊಂದಲವಿಲ್ಲ. ಆದರೆ, ಹೇಗೆ ಹೇಳಬೇಕು ಅನ್ನುವ ಸಂಗತಿ ಮಾತ್ರ ನನ್ನ ತಲೆತಿನ್ನುತ್ತಿದೆ. ಎಷ್ಟೋ ಸಲ, ನಮ್ಮ ಇಡೀ ಜೀವಮಾನವೇ ಇಂತಹ ಮೂಲಭೂತ ಪ್ರಶ್ನೆಗಳನ್ನು ಚಿಂತಿಸುತ್ತ ಕೂರುವುದರಲ್ಲೇ ಹೋಗಿಬಿಡುತ್ತದೆ. ಆಗೆಲ್ಲ, ಯೋಚನೆಯೇ ಮಾಡದೆ ಮುನ್ನುಗ್ಗಿ ಕೆಲಸ ಮುಗಿಸಿದವರೇ ಎಷ್ಟೋ ವಾಸಿ; ನಿಂತು ತಲೆ ತುರಿಸಿಕೊಳ್ಳೋ ಬದಲು ಕೆಲವು ಫರ್ಲಾಂಗಾದರೂ ನಡೆದರು ಅಂತ ಹೇಳಬಹುದು. ಹಾಗಾಗಿ, ನಾನು ನನ್ನ ವಿಷಯ ನಿರೂಪಣೆಯಲ್ಲಿ, ಹೇಳುವ ಕ್ರಮದಲ್ಲಿ, ಮುಚ್ಚುಮರೆಯಿಲ್ಲದ ನಿರ್ಭಿಡೆಯಲ್ಲಿ ಸ್ವಲ್ಪ ಹೆಚ್ಚೇ ಸ್ವಾತಂತ್ರ್ಯ ತೆಗೆದುಕೊಂಡೆ ಅನ್ನಿಸಿದರೆ, ಧಾರಾಳವಾಗಿ ಮಗನಾಗಿ ಕ್ಷಮಿಸಿಬಿಡು!

ಅಸಲಿಗೆ ಈ ವಿಷಯವನ್ನು ಶಾಲೆ-ಕಾಲೇಜಲ್ಲಿ ಹೇಳುವುದಿಲ್ಲ; ಪಠ್ಯಪುಸ್ತಕದಲ್ಲಿ ಬರೆಯುವುದಿಲ್ಲ; ಇದರ ಬಗ್ಗೆ ಪರೀಕ್ಷೆಯಲ್ಲಿ ಪ್ರಶ್ನೆಗಳಾಗಲೀ ಅಂಕಗಳಾಗಲೀ ಇಲ್ಲ; ಪ್ರಾಕ್ಟಿಕಲ್ ತರಗತಿಯಲ್ಲಿ ಇದರ ಮೇಲೆ ವೈವಾ ಇಲ್ಲ. ಆದರೆ, ನಮ್ಮ ಹುಡುಗರ ಬಹುಪಾಲು ಸಮಯ, ದುಡ್ಡು, ಮನೋಲೋಕವನ್ನು ತಿನ್ನುವ ಸಂಗತಿ ಇದು. ಎಷ್ಟೋ ಜನ ಇದರ ಬೆನ್ನುಬಿದ್ದು, ಹಿಂದೆ ಬರಲಾಗದಷ್ಟು ದೂರ ನಡೆದುಬಿಟ್ಟಿದ್ದಾರೆ. ಕೆಲವರು ಇದರ ಹಿಡಿತದಿಂದ ತಪ್ಪಿಸಿಕೊಂಡು ಹೊರಬಂದರೂ ಅದು ಮಾಡಿದ ಗಾಯ, ಎಳೆದ ಗೀರು ಮಾಯದೆ ನೋವಿನಿಂದ ನರಳಿದ್ದಾರೆ. ಯಾರೂ ಈ ಬಗ್ಗೆ ಹೊರಗೆ ಸಾರ್ವಜನಿಕವಾಗಿ ಮಾತಾಡೋದಿಲ್ಲ. ಸಭ್ಯರ ಸಮ್ಮುಖದಲ್ಲಿ ಇದಕ್ಕೆ ಎಂಟ್ರಿ ಇಲ್ಲ. ಮುಚ್ಚಿದ ಕೋಣೆಗಳ ಹಿಂದೆ, ಅಡಗಿಸಿಟ್ಟ ಪುಸ್ತಕಗಳ ಹಾಳೆಗಳ ಮಧ್ಯೆ, “ಇಂಪಾರ್ಟೆಂಟ್ ಅಸೈನ್‍ಮೆಂಟ್ಸ್” ಎಂದಿರುವ ಲಾಕ್ ಮಾಡಿದ ಫೋಲ್ಡರ್‍ಗಳೊಳಗೆ ಇದು ತೆಪ್ಪಗೆ, ತಣ್ಣಗೆ ಕೂತಿದೆ. ಜಗತ್ತು ಇದನ್ನು ‘ಪೋರ್ನ್’ ಎನ್ನುತ್ತದೆ.
ಮತ್ತಷ್ಟು ಓದು »

6
ಆಗಸ್ಟ್

ಯಾಕೂಬ್ ಮೆಮನ್ ಗಲ್ಲಿಗೆ ಕಂಬನಿ ಮಿಡಿದ ಜೀವಪರ ಮನಸ್ಸುಗಳು

– ಪ್ರವೀಣ್ ಕುಮಾರ್,ಮಾವಿನಕಾಡು

Nilume Sulsuddi - Yakoob Menonಗಲ್ಲಿಗೇರಿ ಸತ್ತ 1993 ರ ಮುಂಬೈ ಸರಣಿ ಬಾಂಬ್ ಸ್ಫೋಟದ ಪ್ರಮುಖ ರೂವಾರಿ,ನತದೃಷ್ಟ ಭಯೋತ್ಪಾದಕ ಯಾಕೂಬ್ ಮೆಮನ್ ನ ಸ್ಮರಣಾರ್ಥ ಹಾಳ್ ಟೌನ್ ನಲ್ಲಿ ಇಂದು ನಡೆದ ಸಂತಾಪ ಸೂಚಕ ಸಭೆಯಲ್ಲಿ ಭಾರತದ ನ್ಯಾಯ ವ್ಯವಸ್ಥೆಯ ವಿರುದ್ಧ ರಾಜ್ಯದ ಹಲವು ಪ್ರಮುಖ ಜೀವಪರ ಮನಸ್ಸುಗಳ ಆಕ್ರೋಶ ಸ್ಫೋಟಗೊಂಡಿತು.

ಆತನನ್ನು 257 ಜನರ ಸಾವಿಗೆ ಕಾರಣನೆನ್ನಲಾಗುತ್ತಿದೆ.ಒಂದು ವೇಳೆ ಅಂದು ಸ್ಥಳದಲ್ಲಿ ಆ 257 ಜನ ಇಲ್ಲದಿರುತ್ತಿದ್ದರೆ ಆತ ಕೊಲೆಗಾರನಾಗಲು ಹೇಗೆ ಸಾಧ್ಯವಾಗುತ್ತಿತ್ತು?ಆದ್ದರಿಂದ ಆ ಘಟನೆಗೆ ಆ 257 ಜನ ಮತ್ತು ಗಾಯಗೊಂಡ ವ್ಯಕ್ತಿಗಳೇ ಕಾರಣವೇ ಹೊರತೂ ಯಾಕೂಬ್ ಮೆಮನ್ ಅಲ್ಲ.257 ಜನ ಮಾಡಿದ ತಪ್ಪಿಗೆ ಅಮಾಯಕನೊಬ್ಬನನ್ನು ನಮ್ಮ ವ್ಯವಸ್ಥೆಯೇ ನೇಣು ಬಿಗಿದು ಕೊಂದು ಹಾಕಿತು ಎಂದು ಕರ್ನಾಟಕ ರಾಜ್ಯದ ಹಿರಿಯ ಬುದ್ಧಿಜೀವಿ ಬಾಯ್ಕಟ್ ಬೀಬಿ ಆಕ್ರೋಶ ವ್ಯಕ್ತಪಡಿಸಿದರು.

ಆತನಿಗೆ ಕ್ಷಮಾದಾನ ನೀಡಿದ್ದರೆ ಈ ರಾಷ್ಟ್ರ ಭಯೋತ್ಪಾದನೆಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂಬ ಶಕ್ತಿಯುತ ಸಂದೇಶವನ್ನು ಜಗತ್ತಿಗೆ ಸಾರುವ ಅವಕಾಶವಿತ್ತು!ಅನ್ಯಾಯವಾಗಿ ಭಾರತ ಅಂತಹಾ ಸುವರ್ಣಾವಕಾಶವನ್ನು ಕಳೆದುಕೊಂಡಿತು ಎಂದು ಕರ್ನಾಟಕ ರಾಜ್ಯ ಕಾರ್ಯಮರೆತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಹಾಗೂ ಸದ್ಯದ ಪ್ರಗತಿಪರಬುದ್ಧಿಜೀವಿಪತ್ರಕರ್ತರಾಜಕಾರಣಿಯೊಬ್ಬರು ವ್ಯಾಖ್ಯಾನಿಸಿದರು.”ಮನುಷ್ಯರನ್ನು ಗಲ್ಲಿಗೇರಿಸುವುದು ಈ ದೇಶವನ್ನು ಸುರಕ್ಷಿತವಾಗಿಸುವುದಿಲ್ಲ ಬದಲಾಗಿ ನಮ್ಮನ್ನು ಕೆಳಕ್ಕೆ ನೂಕುತ್ತದೆ” ಎಂದು ಅವರು ಪ್ರತಿಪಾದಿಸಿದರು. ಕೇಂದ್ರದಲ್ಲಿ ನಾವು ಬೆಂಬಲಿಸುತ್ತಿರುವ ಸರ್ಕಾರವಿದ್ದಿದ್ದರೆ ಖಂಡಿತಾ ಇಂತಹಾ ಘಟನೆಗಳು ನಡೆಯಲು ಬಿಡುತ್ತಿರಲಿಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.
ಮತ್ತಷ್ಟು ಓದು »