ವಿಷಯದ ವಿವರಗಳಿಗೆ ದಾಟಿರಿ

Archive for

14
ಆಕ್ಟೋ

ಪ್ರಶಸ್ತಿ ಬೇಕೆ ಪ್ರಶಸ್ತಿ!

– ರೋಹಿತ್ ಚಕ್ರತೀರ್ಥ

ಪ್ರಶಸ್ತಿಕೇಂದ್ರ ಸಾಹಿತ್ಯ ಅಕಾಡೆಮಿ ಹಿಂದೆ ಕೊಟ್ಟಿದ್ದ ಪ್ರಶಸ್ತಿಗಳನ್ನು “ವ್ಯವಸ್ಥೆಯ ವಿರುದ್ಧ” ಸಿಡಿದೆದ್ದಿರುವ ಲೇಖಕರು ವಾಪಸು ಮಾಡುತ್ತಿದ್ದಾರೆ. ನಯನತಾರಾ, ಅಶೋಕ್ ವಾಜಪೇಯಿ, ಸಾರಾ ಜೋಸೆಫ್, ರೆಹಮಾನ್ ಅಬ್ಬಾಸ್, ರಹಮತ್ ತರೀಕೆರೆ, ಕುಂ. ವೀರಭದ್ರಪ್ಪ, ಅಮನ್ ಸೇಥಿ, ಗುಲಾಮ್ ನಬಿ ಖಯಾಲ್ ಮುಂತಾದ ಹಲವು ಸಾಹಿತಿಗಳು ತಮ್ಮ ಅಕಾಡೆಮಿ ಪ್ರಶಸ್ತಿಗಳನ್ನು ಈಗಾಗಲೇ ವಾಪಸು ಕೊಟ್ಟಿದ್ದಾರೆ ಅಥವಾ ಕೊಡುವುದಾಗಿ ಪತ್ರಿಕಾಹೇಳಿಕೆಗಳನ್ನು ಹೊರಡಿಸಿದ್ದಾರೆ. ಇವರ ಕೆಲವು ಹೇಳಿಕೆಗಳು ಹೀಗಿವೆ: (1) ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೂ ನಾವು ಭಯ, ಕಳವಳಗಳ ವಾತಾವರಣದಲ್ಲಿ ಬದುಕುತ್ತಿದ್ದೇವೆ. ನಮ್ಮ ಈ ಅತಂತ್ರಸ್ಥಿತಿಯ ಬಗ್ಗೆ ಸಾಹಿತ್ಯ ಅಕಾಡೆಮಿ ಮೂಕವಾಗಿದೆ. ಎಮರ್ಜೆನ್ಸಿ, ಸಿಖ್ ನರಮೇಧ, ಬಾಬ್ರಿ ಮಸೀದಿ ಕೆಡವಿದ ಪ್ರಕರಣ, ಪಂಜಾಬ್ ಭಯೋತ್ಪಾದನೆ, ನಂದಿಗ್ರಾಮ ಹಿಂಸಾಚಾರ, ಗಿರಿಜನರ ಹತ್ಯೆಗಳು, ನಕ್ಸಲೈಟ್ ಹಿಂಸೆ, ಗುಜರಾತ್ ಹತ್ಯಾಕಾಂಡಗಳು ಇವೆಲ್ಲ ಸಮಸ್ಯೆಗಳಿಂದ ದೇಶದ ಏಕತೆ, ಭ್ರಾತೃತ್ವದ ಭಾವನೆಗಳಿಗೆ ಧಕ್ಕೆ ಬಂದಿದೆ. ಕಾಲದ ಸಾಕ್ಷಿಪ್ರಜ್ಞೆಯಾಗಬೇಕಾದ ಸಾಹಿತಿಗಳು ಈಗಲ್ಲವಾದರೆ ಇನ್ನೆಂದು ಎಚ್ಚೆತ್ತುಕೊಳ್ಳಬೇಕು? – ಅಶೋಕ್ ವಾಜಪೇಯಿ (2) ಪ್ರಸ್ತುತ ದೇಶ ಎದುರಿಸುತ್ತಿರುವ ಸಮಸ್ಯೆಗಳು ನಿಜಕ್ಕೂ ಗಂಭೀರವಾಗಿವೆ. ಇದು ತುರ್ತು ಪರಿಸ್ಥಿತಿಗಿಂತಲೂ ಭೀಕರವಾದ ಸನ್ನಿವೇಶ – ಸಾರಾ ಜೋಸೆಫ್ (3) ದಾದ್ರಿಯಲ್ಲಿ ನಡೆದ ಹತ್ಯೆ ಇಡೀ ಮನುಕುಲವೇ ದುಃಖ ಮತ್ತು ಆಕ್ರೋಶದಿಂದ ತಲೆ ತಗ್ಗಿಸುವಂಥಾದ್ದು. ಈ ಬಗ್ಗೆ ಪ್ರಧಾನಿಗಳು ಇದುವರೆಗೂ ಯಾವ ಹೇಳಿಕೆಯನ್ನೂ ಕೊಟ್ಟಿಲ್ಲ. ಇದನ್ನು ನಾನು ವಿರೋಧಿಸಲೇಬೇಕಾಗಿದೆ – ರಹಮಾನ್ ಅಬ್ಬಾಸ್ (4) ಕಲ್ಬುರ್ಗಿ ಕೊಲೆ ಪ್ರಕರಣದಲ್ಲಿ ಸಾಹಿತ್ಯ ಅಕಾಡೆಮಿಯ ಮೌನವನ್ನು ವಿರೋಧಿಸಿ ನಾನು ಪ್ರಶಸ್ತಿಯನ್ನು ಹಿಂದಿರುಗಿಸುತ್ತಿದ್ದೇನೆ – ರಹಮತ್ ತರೀಕೆರೆ

ಈ ಎಲ್ಲರ ಹೇಳಿಕೆಗಳನ್ನು ನೋಡಿದ ಮೇಲೆ ಪ್ರಶಸ್ತಿ ವಾಪಸು ಮಾಡುತ್ತಿರುವವರನ್ನು ನಾಲ್ಕು ಗುಂಪುಗಳಾಗಿ ವರ್ಗೀಕರಿಸಬಹುದು ಅನ್ನಿಸುತ್ತದೆ.

(1) ದೇಶದಲ್ಲಿ ಅಶಾಂತಿ, ಅಸಹನೆ ಹೊತ್ತಿ ಉರಿಯುತ್ತಿದೆ ಎನ್ನುವವರು

(2) ಕಲ್ಬುರ್ಗಿ ಕೊಲೆ ಕೇಸಿನಲ್ಲಿ ಪ್ರಧಾನಿ / ಸಾಹಿತ್ಯ ಅಕಾಡೆಮಿ ಮೌನವಾಗಿದೆ ಎನ್ನುತ್ತಿರುವವರು

(3) ದಾದ್ರಿ ಪ್ರಕರಣದ ಬಗ್ಗೆ ಮಾತಾಡುವವರು

(4) ದೇಶದಲ್ಲಿ ಹಿಂದೆ ಆಗಿಹೋಗಿರುವ ಹತ್ಯಾಕಾಂಡಗಳನ್ನೂ ಕೊಲೆ-ಅನಾಚಾರಗಳನ್ನು ಈಗ ಇದ್ದಕ್ಕಿದ್ದಂತೆ ನೆನೆಸಿಕೊಂಡು ಕಣ್ಣೀರು ಹಾಕುತ್ತಿರುವವರು.
ಮತ್ತಷ್ಟು ಓದು »

14
ಆಕ್ಟೋ

ಪ್ರಶಸ್ತಿಯ ಮಾನ ಕಳೆದ ಅಕಾಡೆಮಿ

– ರಾಕೇಶ್ ಶೆಟ್ಟಿ

ಕರ್ನಾಟಕ ಸಾಹಿತ್ಯ ಅಕಾಡೆಮಿಕೆಲವು ವ್ಯಕ್ತಿಗಳು ಪ್ರಶಸ್ತಿಗಳನ್ನು ಮೀರಿ ಬೆಳೆದಿರುತ್ತಾರೆ.ಅವರ ವ್ಯಕ್ತಿತ್ವದ ಮುಂದೆ ಪ್ರಶಸ್ತಿಯೂ ಕುಬ್ಜವೆನಿಸುತ್ತದೆ. ಮಹಾತ್ಮ ಗಾಂಧೀಜಿಗೆ ನೊಬೆಲ್ ಶಾಂತಿ ಪ್ರಶಸ್ತಿ ಅಥವಾ ನೇತಾಜಿ ಸುಭಾಷ್ ಅವರಿಗೆ ಭಾರತ ರತ್ನವನ್ನು ಕೊಟ್ಟರೇ,ಪ್ರಶಸ್ತಿಗಳೇ ಕುಬ್ಜವಾಗಿ ಬಿಡುತ್ತವೆ.ಇನ್ನೊಂದಿಷ್ಟು ವ್ಯಕ್ತಿತ್ವಗಳು ಪ್ರಶಸ್ತಿಯ ಮೌಲ್ಯವನ್ನು ಹೆಚ್ಚಿಸುತ್ತವೆ.ಡಿ.ವಿ.ಜಿ,ಕುವೆಂಪು,ಕಾರಂತರಂತಹ ಶ್ರೇಷ್ಟ ಸಾಹಿತಿಗಳು ‘ಸಾಹಿತ್ಯ ಅಕಾಡೆಮಿ’ ಪ್ರಶಸ್ತಿಗೆ ಭಾಜನಾರಾಗಿ ‘ಪ್ರಶಸ್ತಿ’ಗೆ ಮೆರುಗು ತಂದವರು.

೨೦೧೩ನೇ ಸಾಲಿನ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಪಟ್ಟಿ ನೋಡಿದರೇ,ಈ ಹಿಂದೆ ಪ್ರಶಸ್ತಿ ಸ್ವೀಕರಿಸಿದ ಮಹಾನ್ ಚೇತನಗಳಿಗೇ ಅವಮಾನ ಮಾಡುವಂತಿದೆ. “ಶ್ರೀರಾಮ ಅಪ್ಪನಿಗೆ ಹುಟ್ಟಿದವನಲ್ಲ;ಕುಂತಿ ಮಕ್ಕಳನ್ನು ಹೆತ್ತಿದ್ದು ಕೂಡಾ ವ್ಯಭಿಚಾರದಿಂದ; ಭಗವದ್ಗೀತೆಯನ್ನು ಸುಡಬೇಕು;ಒಕ್ಕಲಿಗರಿಗೆ ಸಾಮಾಜಿಕ ಪ್ರಜ್ಞೆಯಿಲ್ಲ” ಹೀಗೆ ಸಮಾಜದಲ್ಲಿ ಅಶಾಂತಿಯನ್ನುಂಟು ಮಾಡುವ,ಒಂದು ಸಮುದಾಯವನ್ನು ಹಿಂಸೆಗೆ ಪ್ರಚೋದಿಸುವಂತಹ ಬೇಜವಬ್ದಾರಿ ಹೇಳಿಕೆಗಳನ್ನು ಒಂದು ವರ್ಷದಿಂದೀಚೆಗೆ ನೀಡುತ್ತ ಬಂದಿರುವ ಪ್ರೊ.ಭಗವಾನ್ ಅವರನ್ನು ಆಯ್ಕೆ ಮಾಡುವ ಮೂಲಕ ರಾಜ್ಯ ಸರ್ಕಾರವೂ ಸಹ ಇಂತ ಶಾಂತಿ ಭಂಗ ತರುವ ಹೇಳಿಕೆಗಳಿಗೆ ಪ್ರಶಸ್ತಿ ನೀಡಲಾಗುವುದು ಎಂದು ಘೋಷಿಸಿದಂತಿದೆ.ಅಷ್ಟಕ್ಕೂ ಭಗವಾನ್ ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮ ಕೃತಿಗಳಿಂದ ಹೆಸರು ಮಾಡಿದವರಲ್ಲ ಬದಲಿಗೆ ‘ಬೈಗುಳ’ಗಳಿಂದ ಚಾಲ್ತಿಗೆ ಬಂದವರು.ಭಗವಾನರ ಬಡಬಡಿಕೆಗಳನ್ನೇ ವೈಚಾರಿಕತೆ ಎಂದು ಬಿಂಬಿಸುವುದು ರಾಜ್ಯದ ವೈಚಾರಿಕ ಪರಂಪರೆಗೂ ಅವಮಾನ.

ಮತ್ತಷ್ಟು ಓದು »