ಹಿಂದೂ-ವಿರೋಧಿ ಮಾಧ್ಯಮ: ಸೃಷ್ಟಿ ಮತ್ತು ಸ್ಥಿತಿ
– ಪ್ರೇಮಶೇಖರ
ಪ್ರಕರಣ ೧: ಪ್ರಮುಖ ಕನ್ನಡ ದೈನಿಕವೊಂದರಲ್ಲಿ ಸೌದಿ ಅರೇಬಿಯಾದ ಬಗ್ಗೆ ಪರಿಚಯಾತ್ಮಕ ಲೇಖನವೊಂದು ಪ್ರಕಟವಾಗುತ್ತದೆ. ಅಚ್ಚರಿಯೆಂದರೆ ಮರುದಿನವೂ ಅದೇ ಲೇಖನ ಮತ್ತೆ ಕಾಣಿಸಿಕೊಳ್ಳುತ್ತದೆ! ಅದರ ಕೆಳಗೆ ಹೀಗೊಂದು ವಿವರಣೆ: “ನಿನ್ನೆಯ ದಿನ ಸೌದಿ ಅರೇಬಿಯಾವನ್ನು ಕುರಿತು ನೀಡಿದ ವಿವರಣೆಯಲ್ಲಿ ಮಹಮದ್ ಪೈಗಂಬರ್ ಮೆಕ್ಕಾದಿಂದ ಮದೀನಾಕ್ಕೆ ಕ್ರಿ.ಶ. ೬೨೨ರಲ್ಲಿ ಓಡಿಹೋದರು. ಅಂದಿನಿಂದ ಹಿಜ್ರಾ ಶಕೆ ಪ್ರಾರಂಭವಾಗುತ್ತದೆ ಎಂದು ಪ್ರಕಟವಾಗಿತ್ತು.ಇದರಿಂದ ಅನೇಕರ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ತಿಳಿದುಬಂದಿದೆ. ಅದಕ್ಕಾಗಿ ಪತ್ರಿಕೆ ಕ್ಷಮೆ ಯಾಚಿಸುತ್ತದೆ ಹಾಗೂ ಇಂದು ಅದೇ ಲೇಖನವನ್ನು ತಿದ್ದಿ ಪ್ರಕಟಿಸಲಾಗಿದೆ.” ಮರುಪ್ರಕಟವಾಗಿದ್ದ ಲೇಖನದಲ್ಲಿ ಪೈಗಂಬರರು ಮದೀನಾಗೆ ಓಡಿಹೋದ ಬಗೆಗಿನ ಒಂದು ಸಾಲು ಮಾಯವಾಗಿರುತ್ತದೆ.
ಪ್ರಕರಣ ೨: ಕೆಲದಿನಗಳ ನಂತರ ಅದೇ ಪತ್ರಿಕೆಯಲ್ಲಿ ಸ್ವಾಮಿ ವಿವೇಕಾನಂದರ ಬಗ್ಗೆ ಲೇಖನವೊಂದು ಪ್ರಕಟವಾಗುತ್ತದೆ.ವಿವೇಕಾನಂದರ ದೈಹಿಕ ಸಮಸ್ಯೆಗಳು,ಬಲಹೀನತೆಗಳ ಬಗ್ಗೆ ಅದರಲ್ಲಿನ ವಿಷಯಗಳಾವುವೂ ಹೊಸದಾಗಿರುವುದಿಲ್ಲ. ಅವೆಲ್ಲವೂ ಕೊಲ್ಕತಾದ ರಾಮಕೃಷ್ಣ ಮಿಶನ್ ಮತ್ತು ಅಲ್ಮೋರಾದ ಅದ್ವೈತಾಶ್ರಮಗಳ ಪ್ರಕಟಣೆಗಳಲ್ಲೇ ಇವೆ.ಆದರೆ ಲೇಖನದ ಭಾಷೆ, ಕೆಲ ಪದಗಳು ಅಕ್ಷೇಪಾರ್ಹವಷ್ಟೇ ಅಲ್ಲ, ಪತ್ರಿಕೆಯ ಘನತೆಗೂ ಶೋಭೆ ತರುವಂತಿರುವುದಿಲ್ಲ.ಇದರಿಂದಾಗಿ ಹಲವರ ಭಾವನೆಗಳಿಗೆ ಧಕ್ಕೆಯಾಗುತ್ತದೆ.ಅದು ರಾಜ್ಯದ ವಿವಿಧೆಡೆ ಸಾರ್ವಜನಿಕವಾಗಿಯೂ ವ್ಯಕ್ತವಾಗುತ್ತದೆ.ಅದಕ್ಕೆ ಪತ್ರಿಕೆಯ ಪ್ರತಿಕ್ರಿಯೆ? ಒಂದಕ್ಷರದ ಕ್ಷಮಾಯಾಚನೆಯೂ ಇಲ್ಲ!