ಉಕ್ಕಿನ ಮನುಷ್ಯನಿಗೆ ಸಿಗಲಿ ತಕ್ಕ ಗೌರವ
– ರೋಹಿತ್ ಚಕ್ರತೀರ್ಥ
1909ರ ಒಂದು ದಿನ. ನ್ಯಾಯಾಲಯದಲ್ಲಿ ಕ್ರಾಸ್ ಎಕ್ಸಾಮಿನೇಶನ್ ನಡೆಯುತ್ತಿದೆ. ನಿರಪರಾಧಿಯೊಬ್ಬ ಅಪರಾಧಿ ಸ್ಥಾನದಲ್ಲಿ ನಿಂತಿದ್ದಾನೆ. ವಕೀಲರು ಪಾಟೀಸವಾಲು ಹಾಕುತ್ತಿರುವಾಗಲೇ ಮಧ್ಯದಲ್ಲಿ ಅವರಿಗೊಂದು ಟೆಲಿಗ್ರಾಂ ಬಂತು. ಆ ಕಾಲದಲ್ಲಿ ಯಾರಿಗಾದರೂ ತಂತಿ ಸಂದೇಶ ಬಂತೆಂದರೆ ಅದು ಸಾವಿನ ಸುದ್ದಿಯೆಂದೇ ಲೆಕ್ಕ. ಚೀಟಿಯತ್ತ ಒಮ್ಮೆ ಕಣ್ಣುಹಾಯಿಸಿ, ಕ್ಷಣಕಾಲ ಕಣ್ಣುಮುಚ್ಚಿ ದೀರ್ಘವಾಗಿ ಉಸಿರೆಳೆದು, ಅವರು ಆ ಚೀಟಿಯನ್ನು ತನ್ನ ಕೋಟಿನ ಜೇಬಿನೊಳಗಿಳಿಸಿ ವಾದ ಮುಂದುವರಿಸಿದರು. ಕೊನೆಗೆ ಕಟಕಟೆಯಲ್ಲಿ ನಿಂತಿದ್ದ ವ್ಯಕ್ತಿ ನಿರಪರಾಧಿಯೆಂದು ಸಾಬೀತಾಯಿತು. ಕೋರ್ಟಿನ ಕಲಾಪಗಳು ಮುಗಿದ ನಂತರ ನ್ಯಾಯಮೂರ್ತಿಗಳು ಟೆಲಿಗ್ರಾಂ ವಿಷಯ ಪ್ರಸ್ತಾಪಿಸಿದಾಗ ವಕೀಲರು, “ಅದು ನನ್ನ ಪತ್ನಿಯ ಸಾವಿನ ಸುದ್ದಿ. ನಾನು ಆ ಕೂಡಲೇ ನ್ಯಾಯಾಲಯದಿಂದ ಹೊರಟುಬಿಡುತ್ತಿದ್ದರೆ ಇಲ್ಲಿ ನಿರಪರಾಧಿಯ ಪರವಾಗಿ ವಾದಿಸುವವರು ಯಾರೂ ಇಲ್ಲದೆ ಅವನು ಶಿಕ್ಷೆಗೆ ಗುರಿಯಾಗುತ್ತಿದ್ದನೇನೋ. ಒಂದು ಪ್ರಾಣ ಹೇಗೂ ಹೋಗಿಯಾಗಿದೆ. ಇಲ್ಲಿಂದ ಹೊರನಡೆದಿದ್ದರೆ ಈ ದಿನ ನಾನು ಎರಡನೇ ಸಾವನ್ನೂ ನೋಡಬೇಕಾಗಿತ್ತಲ್ಲ” ಎಂದರು. ಸರ್ದಾರ್ ವಲ್ಲಭಭಾಯಿ ಪಟೇಲರನ್ನು ಉಕ್ಕಿನ ಮನುಷ್ಯ ಎಂದು ಕರೆಯುವುದು ಸುಮ್ಮನೇ ಅಲ್ಲ ಎನ್ನುವುದಕ್ಕೆ ಇದೊಂದು ದೃಷ್ಟಾಂತ ಸಾಕು.
ಪಟೇಲರು 1875ನೇ ಇಸವಿ ಅಕ್ಟೋಬರ್ 31ರಂದು ಗುಜರಾತ್‍ನಲ್ಲಿ ಜನಿಸಿದರು. ಪಟೇಲ್ ಸಮುದಾಯದ ಸಂಪ್ರದಾಯದಂತೆ ಹುಡುಗನಿಗೆ 18ರ ಹರೆಯದಲ್ಲೇ ಮದುವೆಯಾಯಿತು. ಕುಟುಂಬ ದೊಡ್ಡದು. ಜೀವನ ನಿರ್ವಹಣೆಗೆ ಶಕ್ತಿಮೀರಿ ದುಡಿಯುವುದು ಅನಿವಾರ್ಯ ಕರ್ಮವಾಗಿದ್ದ ಕಾಲ. ಪಟೇಲರು ಸ್ವಂತ ಪರಿಶ್ರಮದಿಂದ ಓದಿ, ಪದವಿ ಪಡೆದು, ಉನ್ನತ ವ್ಯಾಸಂಗಕ್ಕೆ ಇಂಗ್ಲೆಂಡಿಗೆ ಹೋಗುವ ಕನಸು ಕಂಡಿದ್ದರು. ಅವರ ಕನಸಿಗೆ ನೀರೆರೆಯುವಂತೆ ಇಂಗ್ಲೆಂಡಿನಿಂದ ವಕೀಲಿ ವ್ಯಾಸಂಗದ ಪ್ರವೇಶಾತಿಯ ಕಾಗದಪತ್ರಗಳೂ ಪ್ರಯಾಣದ ಟಿಕೇಟೂ ಬಂದವು. ಆ ಎಲ್ಲ ದಾಖಲೆಗಳಲ್ಲೂ ಪಟೇಲರ ಹೆಸರನ್ನು ವಿ.ಜೆ. ಪಟೇಲ್ ಎಂದು ನಮೂದಿಸಲಾಗಿತ್ತು. ಆಗ, ಇಂಗ್ಲೆಂಡಿಗೆ ಹೋಗಿ ಕಲಿಯಲು ತನಗೂ ಆಸೆಯಿದೆ ಎಂದು ಸೋದರ ವಿಠಲಭಾಯಿ ಝಾವೆರ್‍ಬಾಯಿ ಪಟೇಲ್ ಮುಂದೆ ಬಂದು ಅಣ್ಣನ ಬಳಿ ಹೇಳಿಕೊಂಡ. ಅಣ್ಣ ವಲ್ಲಭಭಾಯಿ ತಮ್ಮನ ಆಸೆ ಮನ್ನಿಸಿ ಆತನಿಗೆ ವಿದೇಶಕ್ಕೆ ಹೋಗಲು ಅವಕಾಶ ಮಾಡಿಕೊಟ್ಟು ತಾನು ಭಾರತದಲ್ಲೆ ಉಳಿದರು. ವಜ್ರದಂಥ ವ್ಯಕ್ತಿಯ ಮನಸ್ಸು ಹೂವಿನಷ್ಟು ಮೃದುವೂ ಆಗಿತ್ತೆನುವುದಕ್ಕೆ ಈ ಘಟನೆ ಸಾಕ್ಷಿ.