ಬುದ್ಧಿಜೀವಿಗಳ ಪ್ರಶಸ್ತಿದಾಹ ಮತ್ತು ಪ್ರಶಸ್ತಿ ಹಿಂದಿರುಗಿಸುವಿಕೆ ಎಂಬ ಪ್ರಹಸನ
– ವಿನಾಯಕ ಹಂಪಿಹೊಳಿ
ವಸಾಹತುಪೂರ್ವ ಭಾರತದಲ್ಲಿ ಕ್ರಿಯಾಜ್ಞಾನವೇ ತುಂಬಿಕೊಂಡಿದ್ದ ಕಾಲವದು. ಆಗ ಒಬ್ಬ ಜ್ಞಾನಿಗೆ ಪ್ರಮಾಣಪತ್ರವಾಗಲೀ, ಸರ್ಟಿಫಿಕೇಟ್ ಆಗಲೀ ಅಗತ್ಯವೇ ಇರದ ಪರಿಸ್ಥಿತಿ. ಕಾರಣ ಕ್ರಿಯಾಜ್ಞಾನಿಗೆ ಸರ್ಟಿಫಿಕೇಟ್ ಅಗತ್ಯತೆ ಬೀಳುವದಿಲ್ಲ. ಉದಾಹರಣೆಗೆ ಹಿಂದೆ ಒಬ್ಬಾನೊಬ್ಬ ಬಂದು ತಾನು ಸಾಕ್ಷಾತ್ ಜಕಣಾಚಾರಿಯಿಂದ ಶಿಲ್ಪಶಾಸ್ತ್ರ ಕಲಿತು ಬಂದಿದ್ದೇನೆ ಎಂದು ಹಳ್ಳಿಗರ ಮುಂದೆ ಹೇಳಿಕೊಂಡರೆ, ಜನರು ಅದಕ್ಕೆ ಸಾಕ್ಷಿಯಾಗಿ ಪ್ರಮಾಣಪತ್ರವನ್ನೇನೂ ಕೇಳುತ್ತಿರಲಿಲ್ಲ. ಬದಲಿಗೆ, ಬೇಲೂರಿನ ಸೂಕ್ಷ್ಮಕೆತ್ತನೆಯ ಮಾದರಿಯಲ್ಲಿಯೇ ಈತ ಒಂದು ಕಲ್ಲನ್ನು ಕೆತ್ತಿ ಕೊಟ್ಟರಾಯಿತು, ಜನರು ನಂಬುತ್ತಿದ್ದರು. ಕಾರಣ, ಕ್ರಿಯಾಜ್ಞಾನದಲ್ಲಿ ಏನು ಕಲಿತೆ, ಎಷ್ಟು ಕಲಿತೆ ಎಂಬುದಷ್ಟೇ ಮುಖ್ಯವಾಗುತ್ತದೆಯೇ ಹೊರತು ಯಾರಿಂದ ಕಲಿತೆ, ಎಲ್ಲಿ ಕಲಿತೆ, ಎಷ್ಟು ವರ್ಷ ಕಲಿತೆ, ಇವೆಲ್ಲ ಮುಖ್ಯವಾಗುವದಿಲ್ಲ. ಹೀಗಾಗಿ ಏಕಲವ್ಯನಂಥ ಸ್ವಂತ ಬಲದಿಂದ ಕಲಿತವರೂ ನಮಗೆ ಸಂಪ್ರದಾಯಗಳಲ್ಲಿ ಕಾಣ ಸಿಗುತ್ತಾರೆ.
ಹೀಗಾಗಿ ಹಿಂದಿನ ನಾಟಿ ವೈದ್ಯರಲ್ಲಿ, ಧನುರ್ವೇದಿ ಪಂಡಿತರಲ್ಲಿ ಯಾರೂ ಪ್ರಮಾಣಪತ್ರವನ್ನು ಅಪೇಕ್ಷಿಸುತ್ತಿರಲಿಲ್ಲ. ಬಂದ ರೋಗವು ವಾಸಿಯಾಗುವಂತೆ ಮಾಡುವದೊಂದೇ ಅವರ ವಿದ್ಯೆಯನ್ನು ದೃಢೀಕರಿಸುವ ವಿಷಯವಾಗಿತ್ತು. ಹೆಚ್ಚು ಹೆಚ್ಚು ಕುಶಲ ಜ್ಞಾನಿಗಳನ್ನು ಸೃಷ್ಟಿಸುವ ಗುರುಕುಲಗಳು ಹೆಚ್ಚು ಪ್ರಸಿದ್ಧವಾಗುತ್ತಿದ್ದವು. ವೇದಪಂಡಿತನಿಂದ ಹಿಡಿದು ಕುಂಬಾರ, ಕಮ್ಮಾರರ ತನಕ ಎಲ್ಲ ಕ್ರಿಯಾಜ್ಞಾನಿಗಳ ಜ್ಞಾನವನ್ನು ಅವರ ಕ್ರಿಯೆಗಳಿಂದಲೇ ಅಳೆಯಲಾಗುತ್ತಿತ್ತು. ಹೀಗಾಗಿ ಪ್ರಮಾಣಪತ್ರವಾಗಲೀ, ಸರ್ಟಿಫಿಕೇಟ್ ಆಗಲೀ ಅಗತ್ಯವೇ ಇರಲಿಲ್ಲ. ಏಕೆಂದರೆ ನಾನು ಇಂಥಿಂಥ ಜ್ಞಾನವನ್ನು ಪಡೆದುಕೊಂಡು ಬಂದಿದ್ದೇನೆ ಎಂದು ಒಬ್ಬ ಸುಳ್ಳು ಹೇಳಿದರೂ ಆ ಸುಳ್ಳನ್ನು ಬಹಳ ದಿನ ಮುಚ್ಚಿಟ್ಟುಕೊಳ್ಳಲು ಆಗುತ್ತಲೂ ಇರಲಿಲ್ಲ.
ಒಬ್ಬನಿಗೆ ತನ್ನ ಕ್ರಿಯಾಜ್ಞಾನದಲ್ಲಿನ ವಿಶೇಷತೆಯನ್ನು ಮನಗಂಡು ಆತನಿಗೆ ವಿಶೇಷ ಉಪಾಧಿಗಳಿಂದ ಬಿರುದುಗಳಿಂದ ಸನ್ಮಾನಿಸುವದೂ ಆಗಿನ ಸಂಪ್ರದಾಯವಾಗಿತ್ತು. ಕೆಲವೊಮ್ಮೆ ರಾಜರು ಇಂಥ ಬಿರುದುಗಳನ್ನು ನೀಡುತ್ತಿದ್ದರೆ, ಇನ್ನು ಕೆಲವೊಮ್ಮೆ ಜನರೇ ಆತನನ್ನು ವಿಶೇಷ ಬಿರುದಿನಿಂದ ಗುರುತಿಸುತ್ತಿದ್ದರು. ಆ ರೀತಿಯ ಬಿರುದುಗಳು ಅವರ ಕ್ರಿಯೆಯನ್ನು ಮೆಚ್ಚಲೆಂದೇ ಹುಟ್ಟಿಕೊಳ್ಳುತ್ತಿದ್ದವೇ ಹೊರತು, ಅಂಥದೊಂದು ಬಿರುದನ್ನು ಮೊದಲೇ ರೆಡಿ ಮಾಡಿಟ್ಟು ಇದಕ್ಕಾಗಿ ನೀವೆಲ್ಲ ಸ್ಪರ್ಧೆಯನ್ನು ಮಾಡಿ ಎಂಬ ಪರಿಪಾಠವಿರಲಿಲ್ಲ. ಶಸ್ತ್ರಾಭ್ಯಾಸದ ಅಥವಾ ಶಾಸ್ತ್ರಾಭ್ಯಾಸದ ಪಂದ್ಯಗಳನ್ನೇರ್ಪಡಿಸಿ ಗೆದ್ದವರಿಗೆ ಬಹುಮಾನಗಳನ್ನು ನೀಡುವ ಪದ್ಧತಿ ಇದ್ದರೂ, ಹಾಗೆ ಗೆದ್ದವರು ಬಂಗಾರವನ್ನೋ, ರಾಜಕುಮಾರಿಯರನ್ನೋ ಗಳಿಸಿಕೊಳ್ಳುತ್ತಿದ್ದರೇ ಹೊರತು ಅದಕ್ಕಿಂತ ವಿಶೇಷವಾದ ಬಿರುದು ಅಥವಾ ಉಪಾಧಿಗಳೇನೂ ಲಭಿಸುತ್ತಿರಲಿಲ್ಲ. ಆದರೆ ಒಂದಾನೊಂದು ಉಪಾಧಿಯನ್ನು ಬಿರುದನ್ನು ಒಬ್ಬ ಗಳಿಸಬೇಕಾದರೆ ಆತನ ಕ್ರಿಯಾಜ್ಞಾನವು ಜನರ ಮನಮುಟ್ಟುವ ಕೆಲಸ ಮಾಡಿರಲೇಬೇಕಾಗುತ್ತಿತ್ತು.
ಸುಳ್ಸುದ್ದಿ-ಬೆಂಗಳೂರಿನಲ್ಲಿ ಮಿತಿಮೀರಿದ ಸರಗಳ್ಳರ ಹಾವಳಿ:ಮೋದಿ ವಿರುದ್ಧ ವ್ಯಾಪಕ ಟೀಕೆ
– ಪ್ರವೀಣ್ ಕುಮಾರ್,ಮಾವಿನಕಾಡು
ಬೆಂಗಳೂರಿನಲ್ಲಿ ದಿನೇ ದಿನೇ ಸರಗಳ್ಳರ ಹಾವಳಿ ಮಿತಿ ಮೀರುತ್ತಿದ್ದು ಪ್ರಧಾನಿ ಮೋದಿ ಈ ಬಗ್ಗೆ ತಮ್ಮ ಧೀರ್ಘ ಮೌನ ಮುರಿಯಬೇಕು ಎಂದು ರಾಜ್ಯದ ಗೃಹ ಸಚಿವರು ಆಗ್ರಹಿಸಿದ್ದಾರೆ.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಮಾನ್ಯ ಗೃಹ ಸಚಿವರು,ನಮ್ಮ ರಾಜ್ಯದಲ್ಲಿ,ಅದರಲ್ಲೂ ಬೆಂಗಳೂರಿನಲ್ಲಿ ಸರಗಳ್ಳರ ಹಾವಳಿ ಊಹೆಗೂ ನಿಲುಕದ ಮಟ್ಟಕ್ಕೆ ಬೆಳೆದು ನಿಂತಿದೆ.ಆದರೆ ಈ ಬಗ್ಗೆ ಪ್ರಧಾನಿ ಇದುವರೆಗೂ ಬಾಯಿ ಬಿಟ್ಟು ಏನನ್ನೂ ಹೇಳಿಲ್ಲ.ಇದು ವೈಯುಕ್ತಿಕವಾಗಿ ನನಗೆ ತೀರಾ ಆಶ್ಚರ್ಯವನ್ನುಂಟುಮಾಡಿದೆ ಎಂದು ಹೇಳಿದರು. ಈ ನಡುವೆ ಸರಗಳ್ಳತನಕ್ಕೆ ಹೊಸದೊಂದು ವ್ಯಾಖ್ಯಾನ ಕೊಟ್ಟ ಸಚಿವರು,ಮಹಿಳೆಯರ ಕತ್ತಿನಿಂದ ಇಬ್ಬರು ಸರಗಳ್ಳರು ಸರವನ್ನು ಕಿತ್ತೊಯ್ದರೆ ಅದು ಸರಗಳ್ಳತನವಾಗುವುದಿಲ್ಲ,ಮೂರು ಅಥವಾ ಅದಕ್ಕಿಂತಾ ಹೆಚ್ಚು ಜನ ಕದ್ದರೆ ಮಾತ್ರ ಅದನ್ನು ಸರಗಳ್ಳತನ ಎಂದು ದೂರು ದಾಖಲಿಸಿಕೊಳ್ಳಲು ನಮ್ಮ ಪೊಲೀಸರಿಗೆ ಆದೇಶಿಸಿದ್ದೇನೆ ಎಂದು ತಿಳಿಸಿದರು.
ಈ ಬಗ್ಗೆ ಮಾತನಾಡಿದ ಕಾಂಗ್ರೆಸ್ ನ ರಾಜ್ಯ ಉಸ್ತುವಾರಿ,ಇತ್ತೀಚಿಗೆ ನರೇಂದ್ರ ಮೋದಿ ಮೌನೇಂದ್ರ ಮೋದಿ ಆಗುತ್ತಿದ್ದಾರೆ ಎಂದು ಟೀಕಿಸಿದರು.ಈ ಸರಗಳ್ಳತನ ಪ್ರಕರಣಗಳಲ್ಲಿ ಪ್ರಮುಖವಾಗಿ ಇರಾನೀ ಗ್ಯಾಂಗ್ ನ ಹೆಸರು ಕೇಳಿಬರುತ್ತಿದ್ದರೂ ಪ್ರಧಾನಿ ಮೋದಿ ಇದುವರೆಗೂ ಪ್ರಕರಣ ಸಂಬಂಧ ಎಲ್ಲಿಯೂ ಪ್ರತಿಕ್ರಿಯೆ ನೀಡಿಲ್ಲ.ಒಂದು ವೇಳೆ ಪ್ರಕರಣದಲ್ಲಿ ಇರಾನೀ ಗ್ಯಾಂಗ್ ನ ಪಾತ್ರ ಇರುವುದೇ ಹೌದಾದಲ್ಲಿ ಇರಾನಿನ ಅಧ್ಯಕ್ಷ ಹಸನ್ ರೌಹಾನಿ ಅವರನ್ನು ಭೇಟಿ ಮಾಡಿದ ಸಮಯದಲ್ಲಿ ಯಾಕೆ ಅವರ ಗಮನಕ್ಕೆ ತರಲಿಲ್ಲ ಎಂದು ಪ್ರಶ್ನಿಸಿದರು.