ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 3, 2011

1

ಬದುಕ ‘ಜಾತ್ರೆ’ ಯಲ್ಲಿ ಸಾಹಿತ್ಯದ ಪಾತ್ರ!

‍ನಿಲುಮೆ ಮೂಲಕ

ಅರೆಹೊಳೆ ಸದಾಶಿವ ರಾವ್

ಒಂದು ರೀತಿಯ ನವೀಕರಣಗೊಂಡ ಮೂಡ್‌ನೊಂದಿಗೆ ಬರೆಯಕುಳಿತರೆ, ಅದೇಕೋ ‘ಜಾತ್ರೆ’ಬಹಳವಾಗಿ ಕಾಡುತ್ತಿದೆ. ಇದು ಎಲ್ಲೆಡೆಯಲ್ಲಿಯೂ ಜಾತ್ರೆನಡೆಯುವ ಸಂದರ್ಭ. ಅದರಲ್ಲೂ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳು ಒಂದು ರೀತಿಯ ದೇವ-ದೈವದ ಕೇಂದ್ರವಾಗಿರುವ ಕಾರಣ, ಇದು ಒಂದು ರೀತಿಯ ಜಾತ್ರೆಯ ಸೀಸನ್. ಅದು ಕೋಲ, ಮಾರಿ, ನೇಮ, ರಥೋತ್ಸವ, ಗೆಂಡ ಸೇವೆ,…..ಇತ್ಯಾದಿ ಹೆಸರಿನಿಂದ  ನಡೆಯುವ ವರ್ಷಂಪ್ರತಿ ಧಾರ್ಮಿಕ ಕಾರ್ಯಕ್ರಮಗಳಾದರೆ,  ಅಷ್ಟಬಂಧ, ಬ್ರಹ್ಮಕಲಶೋತ್ಸವ, ಪುನ:ಪ್ರತಿಷ್ಠೆ, ನಾಗಮಂಡಲ…..ಇತ್ಯಾದಿಗಳಿಂದ ಕರೆಯಿಸಿಕೊಳ್ಳುವ ವಿಶೇಷ ಉತ್ಸವಗಳು. ಈಗ ನೀವು ಒಮ್ಮೆ ರಸ್ತೆ ಬದಿ ಹಾದಿರಿ ಎಂದಾದರೆ, ಇಂತಹ ಬ್ಯಾನರ್‌ಗಳು, ಕಟೌಟ್‌ಗಳು, ತೋರಣಗಳು ಎಲ್ಲೆಂದರಲ್ಲಿ ಕಾಣಸಿಕ್ಕಿದರೆ, ಎಲ್ಲಾ ಧಾರ್ಮಿಕ ಕೇಂದ್ರಗಳು ಹೊಸ ಬಣ್ಣ ಬಳಿದುಕೊಂಡು ಸಿಂಗಾರಗೊಂಡು ನಿಂತಿರುತ್ತವೆ. ಇಂತಹ ಉತ್ಸವಗಳು ಇಡಿಯ ಊರಿಗೆ ಊರೇ ಸಂಭ್ರಮಿಸಲು ಕಾರಣವಾಗುತ್ತವೆ. ಈ ಮೂಲಕ ನಾಟಕ, ಯಕ್ಷಗಾನ ಹಾಗೂ ಇನ್ನಿತರ ಕಲಾ ಪ್ರಕಾರಗಳ ಪ್ರದರ್ಶನ, ಊರಿನ ಸಂಭ್ರಮಕ್ಕೆ ಮೆರುಗು ನೀಡಿದರೆ, ಒಂದು ರೀತಿಯ ಜಡ ಹಿಡಿದ ಮನಸ್ಸುಗಳಿಗೆ ನವೀಕರಣವಾಗುವಲ್ಲಿ ಬಹು ಮುಖ್ಯ ಪಾತ್ರವಹಿಸುತ್ತದೆ.

ಇತ್ತೀಚೆಗೆ ನನ್ನೂರಿನ ಜಾತ್ರೆಯಲ್ಲಿ ಎರಡು ದಿನ ಕಳೆದು ಬಂದಾಗ ನನಗನಿಸಿದ್ದು, ಇದೂ ಜೀವನದ ಒಂದು ಅವಿಭಾಜ್ಯ ಅಂಗವೇ ಅಲ್ಲವೇ ಎಂಬುದು. ಅಲ್ಲಿ ಏನುಂಟು ಏನಿಲ್ಲ ಹೇಳಿ? ಬಾಲ್ಯದ ಗೆಳೆಯರ ಪುನರ್ಮಿಲನ, ಕುಡಿಮೀಸೆಯ ದಿನಗಳ ಕನಸಿನ ಮರು ನೆನಪು, ಚಾಪೆ ಹಿಡಿದೇ ಆಟಕ್ಕೆಂದು ಹೋಗಿ ೫ರೂಪಾಯಿಯ ಟಿಕೆಟ್ ಪಡೆದು ಗದ್ದೆಯಲ್ಲಿ ಮಲಗಿ ಬೆಳಗ್ಗೆದ್ದು ಮನೆಗೆ ಮರಳಿದ ದಿನದ ಮೆಲುಕು, ಆಟಿಕೆಯ ಅಂಗಡಿಯ ಮುಂದೆ ನಿಂತು ಇದು ಬೇಕೇ ಬೇಕೆಂದು ರೊಚ್ಚೆ ಹಿಡಿದು ಸಿಗದಾಗ ಮನೆಗೆ ಬಂದು ಅಳುಮೋರೆ ಹಾಕಿ ಹಬ್ಬ ಬಹಿಷ್ಕಾರ ಮಾಡಿದ ದಿನಗಳ ಗಮ್ಮತ್ತು……ಒಂದೇ ಎರಡೇ!. ಇದೆಲ್ಲಾ ಬಾಲ್ಯದ ದಿನಗಳು ಮರಳಿ ಬರಬೇಕೆಂದರೆ ಮತ್ತು ಬದುಕಿನ ಇಂದಿನ ಜಂಜಡಗಳಿಗೆ ತುಸು ನೆಮ್ಮದಿ ಸಿಗಬೇಕೆಂದಿದ್ದರೆ, ವರ್ಷಕ್ಕೊಮ್ಮೆ ನಡೆಯುವ ಹಬ್ಬಕ್ಕೆ ಹೋಗಿಯೇ ಸವಿಯಬೇಕು ಎಂಬುದನ್ನು ಈ ಸಲ ನನ್ನೂರ ಹಬ್ಬ ನನಗೆ ಖಚಿತವಾಗಿಸಿತು.

ಇದೆಲ್ಲದಕ್ಕಿಂತಲೂ ಈ ಜಾತ್ರೆಗಳು ಬದುಕಿನಲ್ಲಿ ತರುವ ಸಂಭ್ರಮಗಳಿಗೆ ಬೇರೆಯೇ ಪ್ರಾಮುಖ್ಯತೆಗಳಿರುತ್ತವೆ. ವೈಯಕ್ತಿಕವಾಗಿ ಇವುಗಳು ಒಂದು ರೀತಿಯ ಹಳೆ ನೆನಪುಗಳ ಮೆಲುಕಿಗೆ ಕಾರಣವಾದರೆ, ಬದುಕಿನ  ಹೊಸ ಸೆಲೆಗೆ ನೆಪವೂ ಆಗುತ್ತವೆ. ಊರಿನ ಸಂಭ್ರಮವನ್ನು ಪ್ರತೀ ಮನೆಯ ಸದಸ್ಯನೂ ತನ್ನ ಮನೆಯ ಸಂಭ್ರಮದಮತೆ ಭಾವಿಸಿಕೊಂಡು, ತನ್ನ ನೆಂಟರಿಷ್ಟರನ್ನು ಸೇರಿಸಿಕೊಂಡು ಖುಷಿ ಪಡುವ ಬಗೆ, ಉದರನಿಮಿತ್ತವಾಗಿ ಊರನ್ನು ಬಿಟ್ಟು ದೂರದ ನಗರ-ಊರುಗಳಲ್ಲಿ ನೆಲೆನಿಂತಿರುವ ಮನಸುಗಳಿಗೆ ಮತ್ತೆ ಊರಿನತ್ತ ಮುಖ ಮಾಡಲು ವರ್ಷಕ್ಕೊಂದು ಅವಧಿಯಾಗಿ, ದುಡಿಮೆ, ಕಷ್ಟ-ಕಾರ್ಪಣ್ಯಗಳ ಬದುಕಿನಲ್ಲಿ ಒಂದು ಹೊಸ ಬಗೆಯ ಉಲ್ಲಾಸವನ್ನು ಸೃಷ್ಟಿಸುವ ಮೂಲಕ ಈ ಹಬ್ಬ ಬದುಕಿನಲ್ಲಿ ಅವಿಭಾಜ್ಯ ಎಂಬುದನ್ನು ಒಪ್ಪಿಕೊಳ್ಳಲೇ ಬೇಕು. ಈ ತರದ ಹಬ್ಬಗಳೂ ಇಂದು ಹಳೆಯ ಜಾಡನ್ನು ಬಿಟ್ಟು ಹೊಸ ಜಾಡಿನತ್ತ ಹೆಜ್ಜೆ ಹಾಕಿದ ಪರಿಣಾಮವಾಗಿ ತನ್ನ ತನ ಕಳೆದುಕೊಳ್ಳುವ ರೀತಿಗೊಮ್ಮೊಮ್ಮೆ ಮನ ಮರುಗಿದರೂ, ಜಾತ್ರೆಗೆ ಅದರದ್ದೇ ಆದ ಮಹತ್ವ ಇದೆ ಎಂಬದು ಸುಳ್ಳಲ್ಲ.

ಇತ್ತೀಚೆಗೆ ನನ್ನ ಮಟ್ಟಿಗೆ ಬಹು ಪ್ರಭಾವ ಬೀರಿದ ಪುಸ್ತಕವೊಂದನ್ನು ಇಲ್ಲಿ ನೆನಪಿಸಿಕೊಳ್ಳಲೂ ಈ ಸಲದ ಜಾತ್ರೆ ನನಗೊಂದು ಸಂದರ್ಭ ಒದಗಿಸಿತು. ಖ್ಯಾತ ಕತೆಗಾರ್ತಿ ವೈದೇಹಿಯವರ ಒಂದು ಬರಹ ಗುಚ್ಚ ‘ಜಾತ್ರೆ’ಯನ್ನು ಇತ್ತೀಚೆಗೆ ಓದಿದೆ. ಆಕಸ್ಮಿಕವಾಗಿ ನನ್ನ ಕೈ ಸೇರಿದ ಈ ಪುಸ್ತಕವನ್ನು ಓದಲು ಕುಳಿತವನಿಗೆ ಅದು ಮುಗಿಯುವ ತನಕ ಕೆಳಗಿಡಲು ಮನಸೇ ಆಗಲಿಲ್ಲ. ನಾನು ಓದಿದ್ದೇ ಅಲ್ಲದೇ ಅದನ್ನು ಮನೆಯಾಕೆಗೂ ಓದುವಂತೆ ಒತ್ತಾಯಿಸಿದೆ ಮತ್ತು ಮುಂದೆ ಊರಿನಲ್ಲಿರುವ ಜಾತ್ರೆಯ ಹಿನ್ನೆಲೆಯಲ್ಲಿ ಅದನ್ನು ಓದಲೇ ಬೇಕೆಂದು ಆಕೆಗೆ ತಾಕೀತು ಸಹಾ ಮಾಡಿದೆ. ಓದಿದಳು ಸಹಾ-ಸಾಹಿತಿಯ ಸಂಘವದು……ಎಂದೇನಾದರೂ ಬೈದುಕೊಂಡಳೋ-ಗೊತ್ತಿಲ್ಲ.

ಇಲ್ಲಿ ಅದಲ್ಲ ವಿಷಯ. ವೈದೇಹಿಯವರು ಆ ಪುಸ್ತಕದಲ್ಲಿ ವಿವಿರಿಸಿದ ಜಾತ್ರೆಯ ಪ್ರತೀ ಹೆಜ್ಜೆಗಳೂ ನಮ್ಮೆಲ್ಲರ ಜೀವನದಿಂದಲೇ ಹೆಕ್ಕಿ ತೆಗೆದು ಪೋಣಿಸಿದ ಬರಹಗಳೇನೋ ಅನಿಸಿತು. ನಿಮಗೂ ನೆನಪಿರಬಹುದು. ಬಾಲ್ಯದಲ್ಲಿ ಪುಗ್ಗದವನ ಮುಂದೆ ಆ ಪುಗ್ಗ ಖರೀದಿಸುವುದೇ ಹಬ್ಬದ ಸಾರ್ಥಕ್ಯ ಎಂದು ಭಾವಿಸಿದ ದಿನಗಳು, ರಿಬ್ಬನ್ ಅಂಗಡಿಯ ಸೊಗಸು ಮತ್ತು ಅಂದಿನಿಂದ ಇಂದಿನ ತನಕ ರಿಬ್ಬನ್‌ಗಳು ಹೊಂದಿದ ಮಾರ್ಪಾಟುಗಳು, ರಥಾರೋಹಣ ನೋಡುವ ತವಕದ ಹಿರಿಯರ ನಡುವೆ ಹಬ್ಬದಂಗಡಿಗೆ ಮುತ್ತುವ ಬಾಲ ಮನಸ್ಸಿನ ಹೊಯ್ದಾಟ……ಇತ್ಯಾದಿಗಳನ್ನು ಅವರು ವಿವರಿಸಿದ ರೀತಿ, ನಮ್ಮೊಳಗೆ ಘಟಿಸುತ್ತಿದ್ದ ಎಲ್ಲವನ್ನೂ ಲೇಖಕಿ ಅದು ಹೇಗೆ ಮನ ಹೊಕ್ಕು ಬರೆದರೋ ಅನಿಸುತ್ತದೆ. ಕುಂದ ಗನ್ನಡದ ಸಂಭಾಷಣೆಗಳು ಇದು ಖಂಡಿತಾ ನಮ್ಮದೇ ಕಥೆ ಅನಿಸುವಷ್ಟೂ ಮನ ತಾಕಿ, ಕೊನೆಗೆ ಬದುಕಿನ ಜಾತ್ರೆಯೊಂದಿಗೆ ಇಂದಿನ ನವೀಕರಣಗೊಂಡ ಕಾಲಘಟ್ಟದ ಜಾತ್ರೆಯೊಂದಿಗೆ ಸಮೀಕರಿಸಿ ಇಂದಿನ ಬದಲಾವಣೆಗೆ ಜಗ ತೆರೆದುಕೊಂಡ ರೀತಿಯನ್ನು ಅವರು ವಿಶದೀಕರಿಸುವ ರೀತಿ……ಬದುಕಿನಲ್ಲಿ ಸಾಹಿತ್ಯದ ಪ್ರಭಾವ ಏನು ಎಂಬುದನ್ನು ತಿಳಿಸಿಕೊಡುತ್ತದೆ.

ಯಾವುದೇ ಸಾಹಿತ್ಯವಿರಲಿ, ಅದು ನಮ್ಮ ಮೇಲೆ ಹಾಗೂ ಜನ ಸಾಮಾನ್ಯರ  ಕೆಲವರ ಜೀವನದ ಮೇಲಾದರೂ, ‘ಓಹ್, ಹೌದಲ್ಲ’ ಎಂಬ ಭಾವನೆ ಬರಿಸದಿದ್ದರೆ, ಅದು ಸಮಗ್ರ ಸಾಹಿತ್ಯವಾಗುವಲ್ಲಿನ ವಿಫಲತೆ ಎನ್ನಲೇ ಬೇಕಾಗುತ್ತದೆ. ಯಾವುದೋ ಒಂದು ಪುಸ್ತಕ ಓದುತ್ತೇವೆ. ಆ ಕ್ಷಣದಲ್ಲಿ ಅದು ಕೇವಲ ಓದಾಗಿಯೇ ಮುಗಿಯುತ್ತದೆ. ಮುಂದೊಂದು ದಿನ ಅಂತಾದ್ದೇ ಒಂದು  ಸನ್ನಿವೇಶದಲ್ಲಿ ನಾವು ಸಿಕ್ಕಿಕೊಂಡಾಗ…ಅದು ದ:ಖದ್ದಿರಬಹುದು, ಸಂತಸದ್ದಿರಬಹುದು… ನಮ್ಮನ್ನೇ ನೊಡಿ ಬರೆದಂತಿದೆಯಲ್ಲ ಅನಿಸಿದರೆ, ಅದು ಜನ ಸಾಮಾನ್ಯನ್ನು ತಟ್ಟುವ ಸಾಹಿತ್ಯ ಮತ್ತು ಸಾರ್ಥಕ್ಯ ಕಂಡುಕೊಳ್ಳುವ ಸಾಹಿತ್ಯವಾಗುತ್ತದೆ. ಹಾಗಾಗ ಬೇಕು. ‘ಜಾತ್ರೆ’ಯೂ  ಆ ನಿಟ್ಟಿನಲ್ಲಿ  ಮನ ತಾಕುವ ಸಾಹಿತ್ಯ-ಬದುಕಿನ ಕಥನ ಎನಿಸುತ್ತದೆ.

ಇಲ್ಲಿ ನಾನು ‘ಜಾತ್ರೆ’ ವಿಮರ್ಶೆಗೆ ಖಂಡಿತಾ ಕೂತಿಲ್ಲ. ಸಾಹಿತ್ಯ ಬದುಕನ್ನು ತಟ್ಟ ಬೇಕಾದ ಬಗೆಗಿನ ನನ್ನ ಅಭಿಪ್ರಾಯವನ್ನು ಹಂಚಿಕೊಳ್ಳಲು ಒಂದು ಕಾರಣವಾಗಿ  ಇದನ್ನು ಉದಾಹರಿಸಿ ಮುಂದಿವರಿಯುತ್ತೇನೆ.ಇತ್ತೀಚೆಗೆ ನಾನು ಪ್ರೇಕ್ಷಕನಾಗಿ ಭಾಗವಹಿಸಿದ ಒಂದು ಸಾಹಿತ್ಯ ಸಂವಾದದವೊಂದರಲ್ಲಿ ಕೇಳಿದ  ಮಾತುಗಳು ನೆನಪಾಗುತ್ತದೆ. ಒಬ್ಬ ಕಥೆಗಾರ, ಕವಿ, ಹೇಳುತ್ತಿದ್ದ ಮಾತುಗಳು ಒಮ್ಮೆ ಅಚ್ಚರಿ ಮೂಡಿಸಿದುವು. ಅವರ ಹೇಳಿಕೆಯಂತೆ, ಲೇಖಕ (ಕವಿ,ಕಥೆಗಾರ…ಇತ್ಯಾದಿ)ನ ಯಾವುದೇ ಬರಹಗಳೂ ಮೊದಲ ನೋಟಕ್ಕೆ ಓದುಗನಿಗೆ ಅರ್ಥವೇ ಆಗಬಾರದು. ಅದರಲ್ಲಿ ಕವಿತೆಯಂತೂ ಅರ್ಥವಾಗಲೇ ಬಾರದು. ಆಗಲೇ ಕವಿ-ಸಾಹಿತಿ ದೊಡ್ಡವನಾಗುತ್ತಾನೆ ಎಂದು ಹೇಳಿದರು. ಅಚ್ಚರಿಯಿಂದ ಅಲ್ಲಿ ಒಂದೆರಡು ಪ್ರಶ್ನೆಗಳು ಎದುರಾದಾಗ ಆ ಲೇಖಕರು, ಹಾಗೆ ಒಂದೇ ನೋಟದಲ್ಲಿ ಅರ್ಥವಾದರೆ ಆ ಬರೆಹಗಾರ ಬರಹಗಾರನೇ ಅಲ್ಲ ಎಂದಾಗ ಮತ್ತೂ ಅಚ್ಚರಿ. ಕೊನೆಗೆ ಇಂತಹ ಸಾಹಿತ್ಯದಿಂದ ಯಾರಿಗೆ ಲಾಭ ಎಂಬ ಪ್ರಶ್ನೆ ಬಂತು. ಇಂತಹ ಸಾಹಿತ್ಯ ಓದುಗನಿಂದ ಸ್ವೀಕ್ರತವಾಗುವ ಬಗ್ಗೆ ಅನುಮಾನದ ಮಾತುಗಳೂ ಕೇಳಿ ಬಂತು. ಆದರೆ ಆ ಸಾಹಿತಿ ಮಾತ್ರ ತನ್ನ ವಾದಕ್ಕೆ ಅಂಟಿಕೊಂಡು, ಸಂವಾದ ಒಂದು ರೀತಿಯ ಅಪೂರ್ಣತೆಯೊಂದಿಗೆ ಮುಕ್ತಾಯವಾಯಿತು.

ಒಂದು ಚೆಂದದ ಅಡುಗೆಯನ್ನು ಮಾಡಿ, ಅದನ್ನು ಚೆಂದವಾಗಿ ಮಾಡಿದ್ದೇನೆ ಎಂದು ಬಾಣಸಿಗ ಹೇಳಿಕೊಂಡು ತಿರುಗಿದರೆ, ಅದನ್ನು ಯಾರೂ ಊಟವನ್ನೇ ಮಾಡದಿದ್ದರೆ ಹೇಗಾದೀತು? ಅಡುಗೆ ಚೆಂದದ್ದಿರಬಹುದು ಆದರೆ ಅದನ್ನು ಸವಿದರೆ ಮಾತ್ರ ಅದಕ್ಕೆ ಅರ್ಥ ಬರುತ್ತದೆ. ಹಾಗೆಯೇ ಒಂದು ಸಾಹಿತ್ಯ, ಅದು ಯಾವ ರೂಪದ್ದೇ ಆಗಿರಬಹುದ, ಸಾಮಾನ್ಯ ಓದುಗನಿಗೆ ಅರ್ಥವೇ ಆಗದಂತಿದ್ದು, ಒಂದು ವರ್ಗವನ್ನು ಮಾತ್ರ ಮುಟ್ಟುವ ತನಕ ರಚಿತವಾದರೆ, ಅಂತಹಾ ಸಾಹಿತ್ಯದಿಂದೇನು ಲಾಭ?. ಇದು ಇಂದು ನಮ್ಮ ಮುಂದಿರುವ ಜಿಜ್ಞಾಸೆ. ಅದಕ್ಕೆ ಕೆಲವು ಲೇಖಕರ ಉತ್ತರವೂ ಸಿಗುತ್ತದೆ. ಓದುಗ ಅದನ್ನು ಒಂದಲ್ಲ ಹತ್ತು ಬಾರಿ ಒದಿ ಅರ್ಥೈಸಿಕೊಳ್ಳುವ ಪ್ರಯತ್ನ ಮಾಡಬೇಕು!. ಇದೂ ಮತ್ತೊಂದು ಪ್ರಶ್ನೆಯನ್ನೇ ಹುಟ್ಟುಹಾಕುತ್ತದೆ. ಈವತ್ತಿನ ಸಂದರ್ಭದಲ್ಲಿ ಪ್ರಕಟವಾಗುವ ಕೃತಿಗಳೂ ಲೆಕ್ಕವಿಲ್ಲ ಹಾಗೆಯೇ ಓದುಗನ ಸಂಖ್ಯೆಯೂ ಮೊದಲಿನಷ್ಟಿಲ್ಲ ಎಂಬ ಕೂಗಿದೆ. ಓದುಗ ಕೃತಿಯನ್ನು ಓದುವುದೇ ವಿರಳವಾಗಿರುವಾಗ ಮತ್ತು ಸಾಧ್ಯವಾದಷ್ಟೂ ಸರಳ ಪ್ರಯೋಗವನ್ನು ಇಷ್ಟ ಪಡುವಾಗ, ಇಂತಹ ಅರ್ಥವಾಗದ ಸಾಹಿತ್ಯ ಏಕೆ ಬೇಕು ಎಂಬುದಕ್ಕಿಂತಲೂ, ಓದುಗ ತಾಳ್ಮೆಯಿಂದ ಅದನ್ನು ಓದಬಲ್ಲನೇ ಎಂಬ ಪ್ರಶ್ನೆಯೂ ಉತ್ತರಕ್ಕಾಗಿ ತಡಕಾಡುತ್ತದೆ. ಅರ್ಥವಾಗದ ಸಾಹಿತ್ಯ ಕೊಟ್ಟವನು ಮಾತ್ರ ದೊಡ್ಡ ಸಾಹಿತಿ ಎಂದು ಕರೆಯಿಸಿಕೊಳ್ಳುತ್ತಾನೆ ಎಂದಾದರೆ, ಸಾಹಿತ್ಯ ಇರುವುದು ಸಾಮಾನ್ಯ ಓದುಗನಿಗಾಗಿ ಅಲ್ಲ ಎಂದಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಒಬ್ಬ ಸಾಮಾನ್ಯ ಓದುಗನ ಮಟ್ಟದಲ್ಲಿ ನಿಂತು ಯೋಚಿಸಿದರೆ, ಇಂದು ಒಂದೇ ಓದಿಗೆ ಓದುಗನ ಮನಹೊಕ್ಕುವ ಸಾಹಿತ್ಯ ನಿತ್ಯ ಚಿರಂಜೀವ ಎನಿಸಿಕೊಳ್ಳುತ್ತದೆ ಎಂದು ನನಗನಿಸುತ್ತದೆ.

ಇದೆಲ್ಲಾ ಈ ಜಾತ್ರೆಯ ಹಿನ್ನೆಲೆಯಲ್ಲಿ ನನಗೆ ಬಂದ ಯೋಚನೆಗಳು. ಬದುಕಿನ  ಹೆಚ್ಚಿನ ಘಟನೆಗಳಲ್ಲಿ ಓದುಗನಿಗೆ ತೀರಾ ಮನ ತಟ್ಟಿದ ಸಾಹಿತ್ಯದ ಕೃತಿಗಳು ನೆನಪಾಗುತ್ತವೆ. ಆ ನೆನಪುಗಳನ್ನು ಎಂದೂ ಕಂಡಿರದ ಸಾಹಿತಿಯೋರ್ವರ ಕೃತಿ ಮಾಡಿತು ಎಂದಾದರೆ, ಅದು ಸಾಹಿತ್ಯದ ಶಕ್ತಿ ಮತ್ತು ಓದುಗನ್ನು ಸೆಳೆದುಕೊಂಡ ತಾಕತ್ತು ಅನಿಸುತ್ತದೆ. ಈ ಹಿನ್ನೆಲೆಯಲ್ಲಿ ವೈದೇಹಿಯವರ ‘ಜಾತ್ರೆ’ಓದಿದ ನಾನು, ನನ್ನೂರ ಜಾತ್ರೆಯಲ್ಲಿ ಹೆಜ್ಜೆ ಹೆಜ್ಜೆಗೂ ಅವರ ಬರಹ ಒಂದೊಂದೇ ಶಬ್ದಗಳನ್ನೂ ನೆನಪಿಸಿಕೊಳ್ಳುತ್ತಾ ತಿರುಗಾಡಿದಾಗ ಆದ ಆನಂದ ಅವರ್ಣನೀಯ. ಇದು ಬದುಕಿನಲ್ಲಿ ಸಾಹಿತ್ಯದ ಪರಿಣಾಮಕ್ಕೆ ಹತ್ತಿರದ ಉದಾಹರಣೆ ಎಂದರೆ ತಪ್ಪಾಗಲಾರದೇನೋ.

ಈ ರೀತಿಯಲ್ಲಿ ಓದುಗನ ಮನ ಹೊಕ್ಕು, ಮನೆ ಮಾಡಿ, ಕೃತಿಯೊಂದು ನೆಲೆ ನಿಂತು, ಬದುಕಿನ ಯಾವುದೋ ಕಾಲ ಘಟ್ಟದಲ್ಲಿ ತನ್ನದೇ ಆಗುವ ಬಗೆ ಇದೆಯಲ್ಲ, ಅದುವೇ ಓದುಗನನ್ನೂ, ಲೇಖಕನನ್ನೂ ಬೆಸೆಯುವ ಸಾರ್ಥಕ್ಯ. ಇದು ಓದುಗನಿಗೆ ಕೃತಿಯೊಂದು ಮೊದಲ ನೋಟಕ್ಕೇ ಅರ್ಥವಾಗುವ ಹಾಗಿದ್ದರೆ ಮಾತ್ರ ಸಾಧ್ಯವೇ ಹೊರತು, ಅರ್ಥವಾಗದ ಸಾಹಿತ್ಯವೇನಿದ್ದರೂ ಅಧ್ಯಯನಕ್ಕೆ ಒಂದು ವಸ್ತುವಾಗಬಲ್ಲುದು, ಅಷ್ಟೇ!.

*****

huliyarnews.blogspot.com

1 ಟಿಪ್ಪಣಿ Post a comment
  1. pavan's avatar
    pavan
    ಮಾರ್ಚ್ 3 2011

    ನಿಮ್ಮ ಲೇಖನ ನಮ್ಮೂರಿನ ಜಾತ್ರೆಯನ್ನು ನೆನ್ಪಿಸುತ್ತಿದೆ. ಜಾತ್ರೆಯ ಅನುಭವ ಯಾವತ್ತು ಸವಿಯೇ

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments