ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 7, 2011

16

ಹಿರಿಯ ಜೀವದ ಮನ ಆ ಕ್ಷಣ ತಳಮಳಗೊಂಡಿದ್ಯಾಕೆ?

‍ನಿಲುಮೆ ಮೂಲಕ

– ನಿಲುಮೆ 
 

Reading between the lines ಎಂಬ ಮಾತನ್ನು ಕೇಳಿರಬಹುದು. ಅಂತ ಮಾತಿಗೆ ಒಳ್ಳೆಯ ಉದಾಹರಣೆ ಚಿದಾನಂದ ಮೂರ್ತಿಯವರ ಪತ್ರ. ಪಾಪ ವಯಸ್ಸಾಯಿತು. ಅದರಿಂದ ಹೀಗೆಲ್ಲ ಬಡಬಡಿಸುತ್ತಿದ್ದಾರೆ ಅಂಥ ಕೆಲವು ಪತ್ರಿಕೆಗಳು ಬರೆದು ಕಾಸಿಗೆ ರಾಜ ಮಾರ್ಗ ಮಾಡಿಕೊಂಡವು. ನಿಜ.ಚಿಮೂ ಅವರಿಗೆ ವಯಸ್ಸಾಯಿತು.ಆದರೆ ಅವರಳೊಗಿನ ಸಂಶೋಧಕನಿಗೆ ಇತಿಹಾಸದ ಕ್ರೂರ ಅಧ್ಯಾಯಗಳ ಅರಿವಿದೆ. ಮೈ ಮರೆತರೆ ಮತ್ತೊಮ್ಮೆ ಇತಿಹಾಸ ಮರುಕಳಿಸಬಹುದೆಂದ ಸಹಜ ಆತಂಕವೂ ಇದೆ. ಹಂಪಿಯ ಬಗ್ಗೆ ಹೋರಾಡಿದವರ ಅರಿವಿಗೆ ದಂಡೆತ್ತಿ ಬಂದು ಧೂಳಿಪಟ ಮಾಡಿದವರ,ರಕ್ಕಸ ತಂಗಡಿಯ ನೆನಪು ಬಾರದಿರಬಹುದೇ? ಭಾವುಕ ಜೀವಿ ಚಿಮೂ ಅವರಿಗೆ ಇಳಿ ವಯಸ್ಸಿನಲ್ಲಿ ಇವೆಲ್ಲ ಇನ್ನೂ ಹೆಚ್ಚಾಗಿ ಕಾಡುತ್ತಿರಬಹುದು,ಅದರಲ್ಲೂ ಮೈ-ಕೈಗೆ ಎಣ್ಣೆ ಸವರಿಕೊಂಡು ಸತ್ಯ ಹೇಳಲು ಬಂದವರ ಕಣ್ಣಿಗೆ ಮಣ್ಣೇರಚಿ ಹಾದಿ ತಪ್ಪಿಸುವ ಜನರ ಮಧ್ಯೆ ಮಾತಾಡುವ ಚಾಣಕ್ಷ ಮಂದಿಯ ನಡುವೆ ದಿಗಿಲಿಗೆ ಬಿದ್ದ ಆ ಹಿರಿಯ ಜೀವದ ತಲ್ಲಣ ನಮಗರಿವಾಗುತ್ತಿಲ್ಲವಾ?
 
ಕೆಲ ದಿನಗಳ ಹಿಂದೆ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ರಾಜ್ಯಪಾಲರು ಹಿರಿಯ ವಿದ್ವಾಂಸ,ಸಂಶೋಧಕ ಚಿಮೂ ಅವರಿಗೆ ಡಾಕ್ಟರೇಟ್ ನಿರಾಕರಿಸಿದಾಗ ಕನ್ನಡ ಸಾರಸ್ವತ ಲೋಕವೇ ರಾಜ್ಯಪಾಲರೆಡೆಗೆ ತಿರುಗಿ ನಿಂತಿತ್ತು. ತಪ್ಪಿನ ಅರಿವಾದ ರಾಜ್ಯಪಾಲರು ಚಿಮೂ ಅವರಿಗೆ ಗೌರವ ಡಾಕ್ಟರೇಟ್ ನೀಡಿದ್ದು ಆಯಿತು. ಹಾಗೆ ಡಾಕ್ಟರೇಟ್ ಪಡೆದ ನಂತರ ಚಿಮೂ ಅವರು ಪ್ರಜಾವಾಣಿಯಲ್ಲಿ ’ರಾಜ್ಯಪಾಲರು ಇದನ್ನು  ಗಮನಿಸಬೇಕು’ ಅನ್ನುವ ಶೀರ್ಷಿಕೆಯ ಪತ್ರವನ್ನು  ವಾಚಕರ ವಾಣಿಗೆ ಬರೆದ್ರು. ಅದರಲ್ಲಿ ಗೋರಿ ಪಾಳ್ಯದಲ್ಲಿ ಹಸಿರು ಬಾವುಟ ನೋಡಿದ್ದರ ಬಗ್ಗೆ, ಅಲ್ಲಿ ಹಿಂದೂಗಳ ಸಂಖ್ಯೆ ಕಡಿಮೆಯಾಗುತ್ತಿರುವುದರ ಬಗ್ಗೆ ಆತಂಕ ವ್ಯಕ್ತಪಡಿಸುತ್ತಾ, ಮಾಂಸದಂಗಡಿಯ ಮುಂದೆ ನಿಂತ ಹಸುವಿಗೆ ಮರುಗುತ್ತ ಇದ್ದಿದ್ದನ್ನ ಹೇಳಿಕೊಂಡಿದ್ದಾರೆ. ಹಾಗೆಯೆ ಅದರಲ್ಲಿ ಮತಾಂತರದ ಬಗ್ಗೆಯು ಮಾತುಗಳಿವೆ.
ಯಥಾ ಪ್ರಕಾರ ಕೆಲ ಮಾಧ್ಯಮದ ಮಂದಿ ’ಮತಾಂತರ’ ಅನ್ನುವ ಸಾಮಾಜಿಕ ಶಾಂತಿಗೆ ಅನಿಷ್ಟವಾಗಿರುವ ವಿಷಯವನ್ನು ಮೂಲೆಗೆ  ತಳ್ಳಿ, ’ಹಸಿರು ಬಾವುಟ, ಮಾಂಸ, ಆತಂಕ’ ಅನ್ನುವ ಚಿಮೂ ಅವರ ವಾಕ್ಯದ ಸುತ್ತ ಚರ್ಚೆಯನ್ನ ಗಿರಕಿ ಹೊಡೆಸುತ್ತಲೇ ಇದ್ದಾರೆ! ನಿಜ, ಹಸಿರು ಬಾವುಟ ಹಾರಿಸುವುದನ್ನ,ಮೈಕಿನಲ್ಲಿ ನಮಾಜ್ ಕೇಳಿಸುವುದಕ್ಕೆಲ್ಲ ಆತಂಕ ಪಡಬೇಕಿಲ್ಲ, ಕ್ರೈಸ್ತರೆಲ್ಲ ಕೋಮುವಾದಿಗಳು ಅನ್ನೋ ಹೇಳಿಕೆಗಳು ಚಿಮೂ ಅವರಂಥ ಸಂಶೋಧಕರಿಂದ ಬರಬಾರದಿತ್ತು. ಅದಕ್ಕೆ ಸಂಶೋಧನಾ ಭಾಷೆಯನ್ನೇ ಉಪಯೋಗಿಸಿ ಮಾತನಾಡಬಹುದಿತ್ತು. ಹೀಗೆ ಮಾಡದೆ ಇರುವುದು ಅವರ ಸಮರ್ಥಕರನ್ನು ಒಂದು ಗಳಿಗೆ ತಡ ಬಡಾಯಿಸುವಂತೆ ಮಾಡಿದ್ದು ಸುಳ್ಳಲ್ಲ. ಈಗ ಇದ್ದ ಹಾಗೆಯೇ ಅವರ ಮಾತುಗಳನ್ನು ಯಾರು ಒಪ್ಪಲು ಕಷ್ಟವಾದೀತು. ಅವರ ಪತ್ರಕ್ಕೆ ಪ್ರತಿಕ್ರಿಯೆಯಾಗಿ ’ಚಿಮೂ ಅವರು ಅಪಾಯಕಾರಿ ಮನಸ್ಥಿತಿ ತಲುಪಿದ್ದಾರೆ, ಇಂಥ ಮಾತುಗಳಿಂದ ರಕ್ತಪಾತವಾಗಬಹುದು’ ಅಂತ ಹುಯಿಲೆಬ್ಬಿಸುವುದನ್ನೂ ಒಪ್ಪಲಾಗುವುದಿಲ್ಲ.
 
ಚಿಮೂ ಅವ್ರ ಪತ್ರದ ಕೆಲವೇ ಕೆಲವು ಅಂಶಗಳನ್ನ  ಹಿಡಿದು ಯಾಕೆ ಚರ್ಚೆ ನಡೆಯುತ್ತಿದೆ? ಆ ಪತ್ರದಲ್ಲಿ ಅವರು ಬರಿ ಇಷ್ಟನ್ನು ಮಾತ್ರವೇ ಬರೇದಿದ್ದು? ಅಥವಾ  ತಮಗೆ ಯಾವುದು ಬೇಕೋ ಅದನ್ನ ಮಾತ್ರ ಆರಿಸಿಕೊಂಡು ಪತ್ರದ ಹಿಂದಿನ ನಿಜವಾದ ಆತಂಕವನ್ನು ಮರೆಮಾಡಿರುವುದು  ಚರ್ಚೆಯ ಹಾದಿ ತಪ್ಪಿಸುತ್ತದೆ.  ಎಡ-ಬಲ ಪಂಥೀಯರ ಹಿಂದಿನ ಎಲ್ಲ ಚರ್ಚೆಗಳನ್ನ ನೋಡುತ್ತ ಬಂದರೆ ’ಹಾದಿ ತಪ್ಪಿಸುವ’ ಚರ್ಚೆಗೇ ಪ್ರಾಮುಖ್ಯತೆ ಅನ್ನುವುದು ಸ್ಪಷ್ಟವಾಗುತ್ತದೆ.
 
ಬಹು ಧರ್ಮವಿರುವ ರಾಷ್ಟ್ರದಲ್ಲಿ ಅನ್ಯ ಧರ್ಮಗಳೆಡೆಗೆ ಭಯ,ಅಪನಂಬಿಕೆಗಳಿರುವುದು ಸಹಜ,ಇದಕ್ಕೆ ಮುಖ್ಯವಾದ ಕಾರಣ ಊಹಾತ್ಮಕ ಭಯ.ತಮ್ಮ ಧರ್ಮೀಯರ ಸಂಖ್ಯೆ ಎಲ್ಲಿ ಈ ದೇಶದಲ್ಲಿ ಕಡಿಮೆಯಾಗಿ ಬಿಡುವುದೋ ಎಂಬ ಭಯ ಬಹುಸಂಖ್ಯಾತರಲ್ಲೂ,ಅಲ್ಪಸಂಖ್ಯಾತರಲ್ಲೂ ಇರುತ್ತದೆ.ಚಿಮೂ ಅವರ ಪತ್ರ ಕೆಲವು ಬಹುಸಂಖ್ಯಾತರನ್ನ ತಲ್ಲಣವನ್ನ ಪ್ರತಿನಿಧಿಸುತ್ತಿದೆ,ಅ ತಲ್ಲಣಗಳನ್ನ ಅರಿತು ಅದರ ನಿವಾರಣೆಗೆ ಪ್ರಯತ್ನಿಸುದನ್ನ ಬಿಟ್ಟು,ಬೆದರಿದವರ ಮೇಲೆ ಹಾವು ಎಸೆಯುವಂತ ಕೆಲಸವಾಗಬಾರದು.ನಮ್ಮ ವಿದ್ವಾಂಸರ ‘ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ’ ಎಂಬ ವಾದ  ಜನತೆಯಲ್ಲಿ ಇನ್ನಷ್ಟು ಕೋಮುವಾದಕ್ಕೆ ಅಂಟಿಕೊಳ್ಳುವಂತೆ ಮಾಡುತ್ತಿದೆ.ಸರ್ಕಾರಗಳ ನೀತಿಯೂ ಇದಕ್ಕೆ ಪೂರಕವಾಗಿಯೇ ಇದ್ದಾಗ ಇದರ ತೀವ್ರತೆ ಇನ್ನೂ ಹೆಚ್ಚು. ವಿಚಾರವಾದವೂ ಒಂದು ಮಗ್ಗುಲಿಗೆ ಸರಿಯಾಗಿ ಅನ್ವಯಿಸುತ್ತ ಇನ್ನೊಂದನ್ನು ಬಿಟ್ಟೂಬಿಟ್ಟಾಗ ಎರಡನೆ ಗುಂಪು ತಮ್ಮ ವಿಚಾರವೆಲ್ಲ ಸರಿ ಎಂದು ಭಾವಿಸಿ ಬಿಡಬಹುದು.
ಉದಾಹರಣೆಗೆ ಟೀವಿಯಲ್ಲಿ ಬಣ್ಣ ಬಣ್ಣದ ಬಟ್ಟೆ ತೊಟ್ಟು ದೀಪ ಹಚ್ಚಲಿಲ್ಲ ಅಂದ್ರೆ ಪ್ರಳಯವಾಗುತ್ತದೆ ಅಂತ ಹೆದರಿಸೋ ಡೋಂಗಿ ಜ್ಯೋತಿಷಿಗಳನ್ನು ತೆಗಳುವಾಗ ಇರುವ ಹುಮ್ಮಸ್ಸು, ದೇವರು ಖಾಯಿಲೆ ವಾಸಿ ಮಾಡುತ್ತಾನೆ ಬನ್ನಿ ಅಂತ ’ಬೆನ್ನ(ನ್ನಿ) ಹಿಂದೆ(ನ್)’ ನಿಂತು ತಲೆ ಮೇಲೆ ಕೈಯಿಟ್ಟು ಪವಾಡದ ಮಂಕೂ ಬೂದಿ ಎರಚುವಾಗ ತನ್ನ ತೀವ್ರತೆ ಕಳೆದುಕೊಂಡಿತ್ತು. ಇಂದು ಮಾಟ ಮಂತ್ರದ ಬಗ್ಗೆ ಟೀಕಿಸುವ ಮಂದಿ ಹೀಗೆ ಕೆಲ ವರ್ಷದ ಹಿಂದೆ ಪ್ಯಾಲೇಸ್ ಗ್ರೌಂಡ್ಸ್ನಲ್ಲಿ ತಲೇ ಮೇಲೆ ಕೈಯಿಡಿಸಿಕೊಂಡು ತಲೆ(ಇದ್ದವ್ರು!) ತಿರುಗಿ ಬಿದ್ದಾಗ ಚರ್ಚೆಯಾಗಲೇ ಇಲ್ಲ.
ಇನ್ನು ’ಮತಾಂತರ’ದ ಬಗ್ಗೆ ಚಿಮೂ ಅವರ ಆತಂಕಕ್ಕೆ ಕಾರಣವಿಲ್ಲವೇ? ಭಾರತದ ಸಂವಿಧಾನದ ಅಡಿಯಲ್ಲಿ ಸ್ವ ಇಚ್ಚೆಯಿಂದ ಮತಾಂತರವಾಗಬಹುದು ಅಂತ ವಾದಿಸಿದರೂ ಸಹ ವಾಸ್ತವ ಬೇರೆಯೇ ಆಗಿದೆ ಎಂಬುದು ಪ್ರಗತಿ ಮತ್ತು ಪ್ರತಿಗಾಮಿಗಳೀಬ್ಬರಿಗೂ ತಿಳಿದ ವಿಷಯವೇ. ಇವೆಲ್ಲ ನ್ಯೂಟನ್ನನ ಮೂರನೇ ನಿಯಮದ ಹಾಗೆ.ಕ್ರಿಯೆಗೊಂದು ಪ್ರತಿಕ್ರಿಯೆ ಇರುತ್ತದೆ ಅನ್ನುವ ಅಂಶವನ್ನು ಅರ್ಥಮಾಡಿಕೊಂಡು ತಪ್ಪು ಯಾರೇ ಮಾಡಿದರು ಅದನ್ನು ವಿರೋಧಿಸುವುದನ್ನು ಕಲಿತರೆ ಶಾಂತಿ ನೆಲೆಸಬಲ್ಲದು.
 
ನಾವು ಬದುಕ ಬಂದವರು. ಹೊಡದಾಡಿ ಸಾಯುವುದಕ್ಕಲ್ಲ. ಸುಂದರ ಭಾರತವನ್ನು ಕಟ್ಟಲಿಕ್ಕೆ. ಇದಕ್ಕೆ ರಿಲಿಜಿಯನ್ ಎನ್ನುವ ಸಂಗತಿ ಅಡ್ಡಿ ಮಾಡಬಾರದು.ಓಲೈಕೆಯಂತೂ ಬೇಡವೇ ಬೇಡ. ಜನರಿಗೆ ಬೇಕಾಗಿರುವುದು ಸಹಬಾಳ್ವೆ ಮಾತ್ರ.ತುತ್ತು ಅನ್ನಕ್ಕಾಗಿ ಹೋರಾಡುವ ಜನರಿಗ್ಯಾವ ಧರ್ಮ ಸ್ವಾಮೀ? ಅವರೆಂದಿಗೂ ಒಟ್ಟಿಗೆ ಬದುಕ ಬಯಸುವವರು.ಸೌಹಾರ್ದತೆ ಅನ್ನುವುದು ನಮ್ಮ ರಕ್ತದ ಗುಣ.
ಇಡಿ ದೇಶವೇ ಅಯೋಧ್ಯ ವಿವಾದದ ಬಿಸಿಯಲ್ಲಿರುವಾಗ,ಕರ್ನಾಟಕದ ಮೂಲೆಯ ಹಿಂದೂಗಳೇ ಹೆಚ್ಚಿರುವ ಊರಿನಲ್ಲಿ ಕೂಲಿ ಮಾಡಿ ಜೀವನ ಸಾಗಿಸುವ ಮುಸ್ಲಿಂ ಬಾಂಧವರಿಗೊಸ್ಕರ ಖುದ್ದು ನಿಂತು ಮಸೀದಿ ಕಟ್ಟಿಸಿ ಕೊಡುವ ಹಿಂದೂಗಳಿದ್ದಾರೆ.ಕಾಶ್ಮೀರ ಅನ್ನೋ ಅಗ್ನಿ ಕುಂಡದೊಳಗೆ,ನಿಷೇಧಾಜ್ಞೆಯ ಸಮಯದಲ್ಲೂ ಸಹ ಅಂಜದೆ ಪಕ್ಕದ ಮನೆಯ ಕಾಶ್ಮೀರಿ ಪಂಡಿತರ ಅಂತ್ಯ ಸಂಸ್ಕಾರವನ್ನ ಹಿಂದೂ ಧರ್ಮದ ಶೈಲಿಯಲ್ಲಿ ಮಾಡುವ ಮುಸ್ಲಿಂ ಹೃದಯಗಳಿವೆ,ಶಿಕ್ಷಣ,ಸೇವಾ ಕ್ಷೇತ್ರದಲ್ಲಿ ಯಾವುದೇ ಫಲಾಪೇಕ್ಷೆಯಿಲ್ಲದೆ ತಮ್ಮ ಪಾಡಿಗೆ ತಾವು ದುಡಿಯುವ ಕ್ರೈಸ್ತ ಮನಸ್ಸುಗಳಿವೆ.
 
ಭಾರತದಲ್ಲಿ ಬಹು ಧರ್ಮವಿರಬಹುದು,ಆದರೆ ಭಾರತೀಯತೆ ಅಂದರೆ ಮಾನವೀಯತೆ ಅಷ್ಟೇ! ನನ್ನ ಮಟ್ಟಿಗೆ ಭಾರತೀಯತೆ ಅಂದರೆ ಎಲ್ಲರನ್ನ ಬೆಸೆಯುವ ಕೊಂಡಿ. ಎಲ್ಲರನ್ನು ಬೆಸೆಯುವ ಕೊಂಡಿಯನುಡುಕುತ ಮುಂದೆ ಸಾಗೋಣ.   
 
(ಚಿತ್ರ ಕೃಪೆ : ದಿಹಿಂದೂ.ಕಾಂ)
16 ಟಿಪ್ಪಣಿಗಳು Post a comment
  1. ಆಸು ಹೆಗ್ಡೆ's avatar
    ಮಾರ್ಚ್ 7 2011

    ಇತ್ತೀಚಿನ ಬಳವಣಿಗೆಗಳಲ್ಲಿ ಮುಖ್ಯವಾದುದು ಈ ಚಾರಿತ್ರ್ಯಹನನ.
    ಯಾರ ಬಗ್ಗೆಯೇ ಆಗಿರಲಿ, ಮೂಲ ವಿಷಯದಿಂದ ತಮಗೆ ಬೇಕಾದ ವಿಷಯಗಳನ್ನು ಮಾತ್ರ ಎತ್ತಿಕೊಂಡು, ಆ ವ್ಯಕ್ತಿಯ ಜನ್ಮ ಜಾಲಾಡಿ ಸಂತಸಪಡುವುದು ಸಮಾಜದ ಎಲ್ಲಾ ಸ್ತರಗಳಲ್ಲೂ ಕಂಡುಬರುತ್ತಿರುವ ಸಂಗತಿ.
    ವಯಸ್ಸಿಗಾದರೂ ಗೌರವಕೊಡಬೇಕು ಅನ್ನುವ ಪ್ರಾಥಮಿಕ ಆವಶ್ಯಕತೆಯನ್ನೂ ಮರೆತು ಮಾತಾಡುತ್ತಾರೆ- ಬರೆಯುತ್ತಾರೆ, ಈ ನೈತಿಕತೆಯ ಗುತ್ತಿಗೆದಾರರು.

    ಉತ್ತರ
  2. ರವಿ's avatar
    Ravi
    ಮಾರ್ಚ್ 7 2011

    ನಿಲುಮೆ ತನ್ನ ನಿಲುವನ್ನು ಸ್ಪಷ್ಟ ಮತ್ತು ನೇರವಾಗಿ ಹೇಳಿದೆ. ಕಪಟ ಜಾತ್ಯಾತೀತವಾದ ಮತ್ತು ಪೊಳ್ಳು ಆದರ್ಶವಾದಗಳೇ ಭಾರತಕ್ಕೆ ತುಂಬಾ ಅಪಾಯಕಾರಿ. ವೋಟು ಬ್ಯಾಂಕಿನ ರಾಜಕೀಯ ಮತ್ತು ಅವನ್ನು ಬೆಂಬಲಿಸುವ ಸಿಕ್ಯುಲರ್ ಗಳು ಭಾರತದಲ್ಲಿ ಸೌಹರ್ದತೆಯನ್ನೇ ಕೆಡಿಸಿವೆ. 😦

    ಉತ್ತರ
  3. Sundar's avatar
    Sundar
    ಮಾರ್ಚ್ 7 2011

    ನಿಮ್ಮ ಕಾಳಜಿಯನ್ನು ಖಂಡಿತ ವಾಗಿಯು ಒಪ್ಪತಕ್ಕದ್ದೆ, ಸರಿಯಾದ ದಿಕ್ಕಿನಲ್ಲಿ ಸಾಗಿದೆ ನಿಮ್ಮ ಲೇಖನದ ಚಿಂತನೆ. ಆ ಹಿರಿಯರ ಕಾಳಜಿಯನ್ನು ನಾವು ಅರ್ಥೈಸಿಕೊಳ್ಳಬೇಕಾಗಿದ್ದೆ. ಸುಮಾರು ೧೫ ವರ್ಷಗಳಿಂದ ಗೋರಿಪಾಳ್ಯದಲ್ಲಿ ತಿರುಗಾಡುತ್ತಿರುವ ನಮಗೆ ಅಲ್ಲಿರುವ ಅನುಭವ ಚೆನ್ನಾಗಿ ಆಗಿದೆ. ಅದು ಅಲ್ಲದೆ ಸುಮಾರು ಸಾರಿ ಚಿಮೂ ಅವರನ್ನು ಅರ್.ಪಿ.ಸಿ ಲೇಔಟ್ ನಲ್ಲಿ ನೋಡಿದ್ದೇವೆ.
    ಇತ್ತೀಚಿಗೆ ಕೆಲ ಬೆಳವಣಿಗೆಗಳನ್ನು ನೋಡುತಿದ್ದರೆ ಮೊರಲ್ ಪಾಲಿಸಿಂಗ್ ಮಾಡುವ ನಮ್ಮ ಹಿರಿಯ ದೃತರಾಷ್ಟ್ರ ರು, ಕೆಲ ಹಿರಿಯ ಹೆಸರಾಂತ ಲೇಖಕರುಗಳಿಗೆ ವಿನಾಯಿತಿ ಕೊಡುವ ಕಾಲ ಬಂದಿದೆ ಯೆಂದರೆ ಅದು ಎಂಥ ಕಲಿಗಾಲವಪ್ಪ ಅಂತ ಅನ್ನಿಸುತ್ತದೆ. ಸಾಮನ್ಯ ಬ್ಲಾಗಿಗನೊಬ್ಬ ಏನಾದರು ಬರೆದರೆ ಸಂಸ್ಕ್ರುತಿ ರಕ್ಷಣೆ/ಮುಂದಿನ ಪೀಳಿಗೆ ಗೆ ನಮ್ಮ ಕೊಡುಗೆ ಏನು ಎನ್ನುವ ಹೆಸರಲ್ಲಿ ದಾಂಗುಡಿ ಯಿಡುವ ಇವರು, ಅವರಿಗೆ ಪ್ರಿಯರಾದವರು ಏನೆ ಬರೆದರೂ ಬಹು ಪ್ರಿಯ.
    ಯಾರಾದರು ತಮಗೆ ತೋಚಿದ್ದು ಖುಷಿ ಯೆನಿಸಿದ್ದು, ನಾಲ್ಕು ಜನರ ಜತೆ ಹಂಚಿಕೊಳ್ಳಬೇಕೆನಿಸಿದ್ದನ್ನು ಸಭ್ಯತೆಯ ಎಲ್ಲೆ ಮೀರದೆ ಬರೆದರೆ ಅದನ್ನು ಕೆಲ ಜನರು ಮಾರಲ್ ಪೊಲಿಸಿಂಗ್ ಎನ್ನುವ ದಂಡ ಹಿಡಿದು ದಾಳಿ ನಡೆಸಲು ಬರುತ್ತಾರೆ. ಇತ್ತೀಚಿಗೆ ಹೊರಗಿನ ಕೆಲ ಬ್ಲಾಗ್ ಗಳಿಗೆ ಬಂದಿರುವ ಪ್ರತಿಕ್ರಿಯೆಗಳನ್ನು ಗಮನಿಸಿದಾಗ, ನಮ್ಮ ಸಮಾಜದಲ್ಲಿ ಮಾರಲ್ ಪೊಲಿಸಿಂಗ್ ಅನ್ನುವ ಒಂದು ಪಿಡುಗು ಕೆಲವರಲ್ಲಿ ಅತಿಯಾಗಿ ಮನೆ ಮಾಡಿದೆ ಅಂತ ಅನ್ನಿಸದೆ ಇರದು. ದೊಡ್ಡ ದೊಡ್ಡ ಹೆಸರಾಂತ ಲೇಖಕರು ಬರೆದರೆ ಅದಕ್ಕೆ ಸುಮ್ಮನಾಗಿ ಕುಳಿತು ಕೊಳ್ಳುವ ನಮ್ಮ ಮಾರಲ್ ಪೊಲಿಸಿಂಗ್ ನವರು ಅದೇ ನಮ್ಮ ನಿಮ್ಮಂತ ಕೆಲವರು ಬರೆದರೆ ಎಗರಾಡುತ್ತಾರೆ. ಇವರಿಗೆ ದೊಡ್ಡವರ ಮೇಲಿನ ಅಂಧಾಭಿಮಾನವೋ ಅಥವ ದೊಡ್ಡವರು ಏನು ಮಾಡಿದರು ಸರೀನೋ? ಅಂಥ ಉಡಾಫೆ ಮನೋಭಾವವೊ! ಖಂಡಿಸಬೇಕು ಅನ್ನುವ ಮನೋಭಾವ ನಿಮ್ಮಲ್ಲಿದ್ದರೆ, ಬೇರೆ ಯವರಿಗೆ ಹೇಗೆ ಗದಾಪ್ರಹಾರ ಮಾಡುತ್ತೀರೊ ಹಾಗೆ ಪ್ರತಿಯೊಬ್ಬರಿಗೆ ಮಾಡಿ. ಇದರಲ್ಲಿ ತಾರತಮ್ಯ ಸಲ್ಲದು. ಒಂದು ಬ್ಲಾಗ್ ಬರೆದು ನಿಮ್ಮ ಮನದಾಳದ ಅನಿಸಿಕೆ ಯನ್ನು ಹೊರಹಾಕಿ ಅದು ಬಿಟ್ಟು ನಿಮ್ಮ ಬ್ರಹ್ಮಾಸ್ತ್ರ ಕೇವಲ ಗುಬ್ಬಿಗಳ ಮೇಲೆ ಏಕೆ ಸ್ವಾಮಿ? ಸುಮ್ಮನೆ ಜನರನ್ನು provoke ಯಾಕೆ ಮಾಡ್ತಿರ.
    ಬ್ಲಾಗಿಗ “ಗೌತಮ್ ಹೆಗಡೆ” ದೊಡ್ಡವರ ಬಗ್ಗೆ ಚೆನ್ನಾಗಿ ಬರೆದಿದ್ದಾರೆ,
    —————————————————————–
    ದೊಡ್ಡವರು ಸರ್ವಜ್ಞರು ಎಂಬ ಭಾವನೆ ನಮ್ಮಲ್ಲಿದೆ. ಅತ್ತ ಸರ್ವಜ್ಞನಲ್ಲದಿದ್ದರೂ ಸರ್ವ ವ್ಯವಹಾರಗಳಲ್ಲಿ ಮೂಗು ತೂರಿಸದೆ ಕುಳಿತರೆ ತಮ್ಮ ದೊಡ್ಡಸ್ತಿಕೆಗೆ ಕುಂದು, ಆ ಕಾರಣಕ್ಕೆ ಮೂಗು ತೂರಿಸುವುದು ದೊಡ್ಡವರಾಗಿ ಹುಟ್ಟಿದ ತಮ್ಮ ಆಜನ್ಮಸಿದ್ಧ ಹಕ್ಕು ಎಂಬ ಅನಾದಿ ನಂಬಿಕೆ ದೊಡ್ದವರಲ್ಲಿದೆ. ದೊಡ್ಡವರೆಂಬ ನಮ್ಮ ನಂಬಿಕೆ ಗೌರವವಾಗಬೇಕೆ ಹೊರತು,ನಮ್ಮ ಸ್ವಂತ ಬುದ್ಧಿಯನ್ನ ಆಪೋಶನ ತೆಗೆದುಕೊಳ್ಳುವ ಜೀತವಾಗಬಾರದು. ಸ್ವಂತ ಬುದ್ಧಿಯನ್ನ ಬಿಟ್ಟು ಬದುಕುವುದಕ್ಕಿಂತ ದೊಡ್ಡ ಜೀತವಾದರೂ ಎಲ್ಲಿದೆ ?
    ಈ ದೊಡ್ಡವರೆಂಬ ದೊಡ್ಡವರಿಂದ ಈ ಜಗತ್ತಿಗೆ ಎಷ್ಟು ಮಾರ್ಗದರ್ಶನ ಸಿಕ್ಕಿದೆಯೋ, ಅಷ್ಟೇ ದಾರಿ ತಪ್ಪಿಸುವ ಕೆಲಸವೂ ಆಗಿ ಹೋಗಿದೆ ಇತಿಹಾಸದಲ್ಲಿ . ಈಗ ನಮ್ಮ ಸುತ್ತಲಿರುವ ದೊಡ್ಡವರು ಯಾರ್ಯಾರು ಎಂದು ಒಮ್ಮೆ ಸೂಕ್ಷ್ಮವಾಗಿ ಗಮನಿಸಿ. ಧಾರ್ಮಿಕ ಮುಖಂಡರು ,ರಾಜಕೀಯದವರು, ನೂರಾರು ತತ್ವ ಸಿದ್ಧಾಂತಗಳ ಲೆಕ್ಕದಲ್ಲಿ ಹಂಚಿಹೋದ ಸಾಹಿತಿಗಳು, ಮಾಧ್ಯಮದವರು. ಇವರೆಲ್ಲರನ್ನೂ ನಾವು ಎತ್ತರದ ದೊಡ್ಡ ಸ್ಥಾನದಲ್ಲಿ ಇಟ್ಟಿದ್ದೇವೆ. ಇವರೆಲ್ಲ ನಮ್ಮನ್ನು ಮುನ್ನಡೆಸಬೇಕಾದವರು. ಆದರೆ ಈಗ ಒಬ್ಬರನ್ನೂ ನೆಚ್ಚಿಕೊಳ್ಳುವಂತಿಲ್ಲ .ಅವರಿಗೆಲ್ಲ ಅವರವರದೇ ಆದ ಸ್ವಂತ ಹಿತಾಸಕ್ತಿಗಳಿವೆ, ತಮ್ಮದೇ ಸರಿಯೆಂಬ ಒಂದಿಷ್ಟು ಹುಂಬತನಗಳಿವೆ. ಅವರ ಸುತ್ತ ಅವರೇ ಹಣೆದುಕೊಂಡು ಕುಳಿತ ಒಣ ಪ್ರತಿಷ್ಠೆಯ ಬೇಲಿಯಿದೆ.ಗೊಂದಲ, ಒಳಜಗಳ . ಹೀಗೆ ಏನೇನು ಇರಬಾರದಿತ್ತೋ ಅದೆಲ್ಲವೂ ಲೆಕ್ಕತಪ್ಪಿದೆ.

    ಅವರು ನಮ್ಮನ್ನು ಮುನ್ನಡೆಸಲಿ ಎಂಬುದು ನಮ್ಮ ಆಶಯ .ಅವರ ಮುಂದಾಳತ್ವದಲ್ಲಿ ತೀರ ನಾವು ದಾರಿ ತಪ್ಪದೇ ಉಳಿದ ಶೇಷ ಸದ್ಯದ ನಮ್ಮ ಪುಣ್ಯ. ನಾವೀಗ ಜಾಣರಾಗಬೇಕು. ಸುತ್ತ ಜಗತ್ತಿನ ಸಂತೆಯಲ್ಲಿ ಅಡ್ಡಾಡಬೇಕು. ಸಕಲ ವ್ಯವಹಾರಗಳನ್ನೂ ಗಮನವಿಟ್ಟು ನೋಡಬೇಕು. ವಾಪಾಸು ಮರಳಿ ಬಂದು ತಣ್ಣಗೆ ಕುಳಿತು ಯೋಚನೆಗೆ ಬೀಳಬೇಕು. ನಮ್ಮದೇ ಆದ ಒಳ ದೃಷ್ಟಿಯಲ್ಲಿ ಹೊರಗೆ ಕಂಡ ಸಂಗತಿಗಳನ್ನು ಮತ್ತೆ ಹೊಸದಾಗಿ ಕಾಣಬೇಕು. ನಮಗೆ ನಾವೇ ಗುರುವಾಗಬೇಕು. ಈ ದೊಡ್ಡವರನ್ನ ಹಿಂಬಾಲಿಸಿ ಹೊರಟರೆ ದಾರಿ ತಪ್ಪುವುದು ಹೇಗೂ ಇದ್ದೇ ಇದೆ. ನಮ್ಮದೇ ದಾರಿಯಲ್ಲಿ ನಿಜವಾದ ಗುರಿ ಸಿಕ್ಕರೂ ಸಿಗಬಹುದು. ಇಲ್ಲವಾದರೆ ಕೊನೆಪಕ್ಷ ಸ್ವಂತ ದಾರಿಯಲ್ಲಿ ದಾರಿ ತಪ್ಪಿದ ತೃಪ್ತಿಯಾದರೂ ಉಳಿಯುತ್ತೆ. ದಾರಿ ತಪ್ಪಿಸಿಬಿಟ್ಟರು ಎಂದು ಯಾರ್ಯಾರನ್ನೋ ಹಳಿಯುತ್ತಾ ಅಲೆಯುವ ವ್ಯರ್ಥಾಲಾಪದ ದುರಂತವಾದರೂ ತಪ್ಪುತ್ತೆ. ಅಷ್ಟೇ.
    ——————————————————————–
    ಮೇಲಿನ ಹಿತನುಡಿ ಗಳನ್ನು ನಾವು ಪಾಲಿಸಿದರೆ, ನಾವು ಸಂತೋಷ ದಿಂದ ಇರುತ್ತೇವೆ ಅನ್ನುವುದರಲ್ಲಿ ಯಾವುದೆ ಸಂಶಯವಿಲ್ಲ ಎನ್ನುವುದು ನನ್ನ ಅನಿಸಿಕೆ.

    ಉತ್ತರ
  4. Pramod's avatar
    ಮಾರ್ಚ್ 7 2011

    ಇಲ್ಲಿ ಮುಖ್ಯವಾಗಿ ಎರಡು ಅ೦ಶಗಳಿವೆ. ಒ೦ದು “ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ” ಎ೦ಬ ಡಬಲ್ ಸ್ಟಾ೦ಡರ್ಡ್.
    ಎರಡನೆಯದು “ಇ೦ಟರ್ನೆಟ್ ಹೈವ್ ಮೈ೦ಡ್ – ಗು೦ಪಲ್ಲಿ ಗೋವಿ೦ದ”. ಈ ಎರಡನೇ ಅ೦ಶ ತಗೊ೦ಡ್ರೆ ಚರ್ಚೆ ಎಲ್ಲಿ೦ದಲೋ ಶುರುವಾಗಿ ಎಲ್ಲೋ ಕೊನೆಯಾಗುವ ಪರಿ, ಒ೦ತಾರ ಮದಗಜ ಇದ್ದ೦ತೆ. ಇದರಡಿಗೆ ಸಿಕ್ಕವರೆಲ್ಲರನ್ನು ಥಳಿಸುತ್ತದೆ ಅರ್ಥಾತ್ ಜನರು ಜರೆಯುತ್ತಾರೆ.
    ಬ್ಯಾಕ್ ಗ್ರೌ೦ಡಲ್ಲಿ “ಏನೋ ಮಾಡಲು ಹೋಗಿ ಏನೂ ಮಾಡಿದೆ ನಾನು..” ಹಾಡು ಬರ್ತಾ ಇರುತ್ತದೆ 🙂

    ಉತ್ತರ
  5. ರವಿ ಗೌಡ's avatar
    ರವಿ ಗೌಡ
    ಮಾರ್ಚ್ 7 2011

    ಒಳ್ಳೆಯ ಬರಹ ರಾಕೇಶ್..
    ನಿಲುಮೆ ಬಲಪಂಥೀಯ ಬ್ಲಾಗ್ ಎಂದು ಘೋಷಣೆ ಮಾಡಿದ್ದಕ್ಕೆ ವಂದಿಸುವೆ.

    ಉತ್ತರ
    • ರಾಕೇಶ್ ಶೆಟ್ಟಿ's avatar
      ಮಾರ್ಚ್ 7 2011

      🙂

      ರವಿ ಗೌಡ್ರೆ,
      ಮೊದಲೆನೆಯದಾಗಿ ಈ ಲೇಖನವನ್ನ ನಾನು ಬರೆದಿದ್ದಲ್ಲ, ನಿಮ್ಮ ವಂದನೆ ನಿಲುಮೆ ತಂಡಕ್ಕೆ ಸೇರಿದ್ದು 🙂

      ಎರಡನೆಯದು,ಲೇಖನದ ಈ ಸಾಲನ್ನ ನೀವು ಓದಿದ್ರಾ?

      “ಎಡ-ಬಲ ಪಂಥೀಯರ ಹಿಂದಿನ ಎಲ್ಲ ಚರ್ಚೆಗಳನ್ನ ನೋಡುತ್ತ ಬಂದರೆ ’ಹಾದಿ ತಪ್ಪಿಸುವ’ ಚರ್ಚೆಗೇ ಪ್ರಾಮುಖ್ಯತೆ ಅನ್ನುವುದು ಸ್ಪಷ್ಟವಾಗುತ್ತದೆ.”

      ಆ ಸಾಲನ್ನ ಓದಿದರೆ ಬಹುಷಃ ನಿಲುಮೆಗೆ ಯಾವ ಪಂಥವಿಲ್ಲ ಅನ್ನುವುದು ತಿಳಿಯಬಹುದು.ಈ ವಿಷಯದ ಬಗ್ಗೆ ‘ನಿಲುಮೆಯ ನಿಲುವು’ ಪುಟವನ್ನೊಮ್ಮೆ ಓದಿ ನೋಡಿ 🙂

      ಉತ್ತರ
  6. Bharath Kumar's avatar
    ಮಾರ್ಚ್ 7 2011

    “ಅದರಲ್ಲೂ ಮೈ-ಕೈಗೆ ಎಣ್ಣೆ ಸವರಿಕೊಂಡು ಸತ್ಯ ಹೇಳಲು ಬಂದವರ ಕಣ್ಣಿಗೆ ಮಣ್ಣೇರಚಿ ಹಾದಿ ತಪ್ಪಿಸುವ ಜನರ ಮಧ್ಯೆ ಮಾತಾಡುವ ಚಾಣಕ್ಷ ಮಂದಿಯ ನಡುವೆ ದಿಗಿಲಿಗೆ ಬಿದ್ದ ಆ ಹಿರಿಯ ಜೀವದ ತಲ್ಲಣ ..”

    ಯಾರು ಸತ್ಯ ಹೇಳ್ತ ಇದ್ದಾರೆ? ತಿಳಿಯದು!!!
    ಎತ್ತುಗೆ: landline = ಸ್ಥಿರವಾಣಿ, mobile = ಚರವಾಣಿ ಎಂಬ ಪದಗಳನ್ನು ಕನ್ನಡದಲ್ಲಿ ಬಳಸಬೇಕು ಅಂತ ಚಿ.ಮೂ.ಹೇಳ್ತಾರೆ. ನಿಜವಾಗಲೂ ಕನ್ನಡದ ಬಗ್ಗೆ ಒಲುಮೆ ಇದ್ದರೆ ನೆಲೆಯುಲಿ, ಅಲೆಯುಲಿ ಬಳಸಿ ಅಂತ ಅವರು ಯಾಕ್ ಹೇಳಲ್ಲ?

    ಉತ್ತರ
    • ರವಿ ಗೌಡ's avatar
      ರವಿ ಗೌಡ
      ಮಾರ್ಚ್ 8 2011

      ರಾಕೇಶ್ ಅವರೇ,
      ಈ ಬರಹ ಓದಿದರೆ ಅದು ನಿಮ್ಮದೇ ಶೈಲಿ ಅನ್ನಿಸ್ತು.. ಹಾಗಾಗಿ ಹೇಳಿದೆ.
      ನಿಲುಮೆಯಲ್ಲಿ ಬರುತ್ತಿರುವ ಹೆಚ್ಚಿನ ಲೇಖನಗಳಲ್ಲಿ ಬಲಪಂಥೀಯ ಧೋರಣೆಗಳು ಕಾಣಿಸುತ್ತಿವೆ. ಇದೇ ಮೊದಲ ಬಾರಿಗೆ ಒಪನ್ ಆಗಿ ಅದನ್ನ ಹೇಳಿಕೊಂಡಿದ್ದೀರಿ ಅನ್ನಿಸಿ ಹೀಗೆ ಹೇಳಿದೆ. 🙂 ತಪ್ಪಿದ್ದಲ್ಲಿ ಮನ್ನಿಸಿ..

      ಉತ್ತರ
      • ನಿಲುಮೆ's avatar
        ಮಾರ್ಚ್ 8 2011

        ರವಿಗೌಡರೇ, ನಿಲುಮೆಯು ಸಮಾಜದ ಧ್ವನಿಯಾಗ ಹೊರಟ ಬ್ಲಾಗು. ಇದು ಯಾರೊಬ್ಬರ ಮುಖವಾಣಿಯೂ ಅಲ್ಲ. ಎಲ್ಲ ತತ್ವಗಳನ್ನು ಮೀರಿ ಮಾನವ ಪ್ರೀತಿ ಗೆಲ್ಲಬೇಕೆಂಬ ಧ್ಯೇಯ ಇದಕ್ಕಿದೆ. ಇಲ್ಲಿ ಎಲ್ಲವೂ ಎಲ್ಲರದ್ದು. ಯಾರದೇ ಯಾವುದೇ ವಿಚಾರಧಾರೆಯಿರುವ ಸಹ್ಯ ಕನ್ನಡ ಭಾಷೆಯಲ್ಲಿ ಹಾಗು ಸಂಸ್ಥೆ ಇಲ್ಲವೇ ವ್ಯಕ್ತಿಯ ತೇಜೋವಧೆ ಮಾಡದ ಲೇಖನವಾಗಿದ್ದಲ್ಲಿ ಪ್ರಕಟಗೊಳ್ಳುತ್ತದೆ. ನೀವು ನಿಲುಮೆಯನ್ನು ಪಂಥವೊಂದಕ್ಕೆ ಸೀಮಿತಗೊಳಿಸಿದಲ್ಲಿ ಬಹುಶ: ನಮ್ಮಗಳ ಪ್ರಾಮಾಣಿಕ ಪ್ರಯತ್ನವನ್ನು ಅಲ್ಲಗಳದಂತೆಯೇ ಸರಿ.
        ರಾಕೇಶ್ ಶೆಟ್ಟಿ ನಮ್ಮ ನಿಗದಿತ ಬರಹಗಾರರು ಅಷ್ಟೇ. ಅವರು ಬ್ಲಾಗಿನ ನೀತಿ ನಿರೂಪಕರಲ್ಲ. ಇಲ್ಲಿ ತಂಡವೊಂದು ನಿಲುಮೆಯನ್ನು ಕಟ್ಟಲು ಶ್ರಮಿಸುತ್ತಿದೆ. ದಯವಿಟ್ಟು ನಮ್ಮ ಪ್ರಯತ್ನಕ್ಕೆ ಸಾಧ್ಯವಾದಲ್ಲಿ ನಿಮ್ಮ ಕೈ ಸೇರಿಸಿ.ನಿಮ್ಮ ಒಂದು ಕಾಮೆಂಟ್ ನಿಲುಮೆಯ ನಿಲುವನ್ನೇ ಓದುಗರ ಎದುರು ಪ್ರಶ್ನಿಸಿದಂತಿದೆ.
        ನಿಲುಮೆಯು ಎಲ್ಲ ಧ್ವನಿಗಳನ್ನು ಗೌರವಿಸುತ್ತದೆ ಎನ್ನುವುದಕ್ಕೆ ನಿಮ್ಮ ಕಾಮೆಂಟ್ ನ್ನು ‘ಒಂದು’ ಕಾಮೆಂಟ್ ಎಂದು ಪರಿಗಣಿಸದೇ ಗಂಭೀರವಾಗಿ ಉತ್ತರಿಸುತ್ತಿರುವುದನ್ನು ಗಮನಿಸಬಹುದು.
        ಸಕಾರತ್ಮಾಕ ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿ
        ನಿಲುಮೆ ತಂಡ

        ಉತ್ತರ
        • ನಿಲುಮೆಯ ಅಭಿಮಾನಿ's avatar
          ನಿಲುಮೆಯ ಅಭಿಮಾನಿ
          ಮಾರ್ಚ್ 8 2011

          @ನಿಲುಮೆ,

          ಧನ್ಯವಾದ , ಸರಿಯಾಗಿದೆ ಹೇಳಿದ್ದು……ಆದರೂ ಕೆಲವೊಂದು ಕಡೆ ದಾರಿ ತಪ್ಪುತ್ತಿರುವ ಅನುಭವವಾಗಿದ್ದಂತೂ ನಿಜ!!!

          ಕೇವಲ ಕೆಟ್ಟದ್ದನ್ನು ಖಂಡಿಸುವುದು ಮಾತ್ರ ನಿಲುಮೆಯ ನಿಲುವಾಗಿರಲಿ ಎಂದು ಅಪೇಕ್ಷಿಸುವೆ, ಅದು ಬಲದಲ್ಲಿರಲಿ,ಅಥವಾ ಎಡದಲ್ಲಿರಲಿ .ಕೆಟ್ಟದ್ದು ಯಾವಾಗಲೂ ಕೆಟ್ಟದ್ದೇ …ತಪ್ಪು ಯಾವಾಗಲೂ ತಪ್ಪೇ ….ಅದಕ್ಕೆ ಜಾತಿ ಬೇದವಾಗಲಿ..ಧರ್ಮವಾಗಲಿ ಇರಕೂಡದು (ಅಡ್ಡಬರಕೂಡದು)..ನಾನು ಈ ಹಿಂದೆ ಹೇಳಿದಂತೆ ಈ ನಿಲುಮೆಗೆ “ಆರೋಗ್ಯಕರ ಚರ್ಚೆ” ಮಾಡುವವರ ಬೆ೦ಬಲ ಇರುವುದು ಸಮಾದಾನಕರ ವಿಷಯ …..

          ಅಗತ್ಯ ವಿಷಯದ ಬಗ್ಗೆ “ಆರೋಗ್ಯಕರ ಚರ್ಚೆ” ಆಗಲಿ ಎಂದು ಹಾರೈಸುವೆ …..

          ಇಂತಿ ,
          ಅಭಿಮಾನಿ

          ಉತ್ತರ
        • ಆಸು ಹೆಗ್ಡೆ's avatar
          ಮಾರ್ಚ್ 9 2011

          ನಿಲುಮೆಯ ನಿಲುಮೆಯ ಬಗ್ಗೆ ಅನುಮಾನ ಇಲ್ಲ ಎನ್ನುವುದು ನನ್ನ ನಿಲುಮೆ!

          ಉತ್ತರ
      • ರಾಕೇಶ್ ಶೆಟ್ಟಿ's avatar
        ಮಾರ್ಚ್ 8 2011

        ಗೌಡ್ರೆ,

        ರಾಕೇಶ್ ಶೆಟ್ಟಿ,ನಿಲುಮೆಯೊಳಗೊಬ್ಬ ಅಷ್ಟೇ ಹೊರತು ನಿಲುಮೆಯೇ ರಾಕೇಶ್ ಶೆಟ್ಟಿ ಅಲ್ಲ 🙂

        ಮನ್ನಿಸುವಂತ ಮಾತೇನು ಹೇಳಿಲ್ಲ ಬಿಡಿ ನೀವು.ನಿಲುಮೆಯಲ್ಲಿ ಎಡ-ಬಲ ಅಥವಾ ಯಾರು ಬೇಕಾದರೂ ಬರೆಯಬಹುದು.ಭಿನ್ನ ಅಭಿಪ್ರಾಯಗಳಿಗೆ ಸದಾ ಸ್ವಾಗತವಿದೆ ಇಲ್ಲಿ.ಆ ಕಾರಣಕ್ಕಾಗಿಯೇ ಕಮೆಂಟುಗಳಿಗೆ ಮಾಡರೇಶನ್ ಸಹ ಇಟ್ಟಿಲ್ಲ.ಸಭ್ಯ ಭಾಷಾ ಪ್ರಯೋಗವಿರುವ ಯಾವ ಕಮೆಂಟುಗಳನ್ನು ನಾವು ಇದುವರೆಗೂ ಅಳಿಸಿಲ್ಲ.ಒಳ್ಳೆಯದು ಜಗತ್ತಿನ ಯಾವುದೇ ಮೂಲೆಯಲ್ಲಿ (ಬೇಕಿದ್ರೆ ಯಾವುದೇ ಪಂಥದಲ್ಲಿ ಅಂತಾದ್ರೂ ಓದಿಕೊಳ್ಳಿ) ಇದ್ರೂ ತೆಗೆದುಕೋ ಅನ್ನೋ ದೊಡ್ಡವರ ಮಾತನ್ನ ನಾವು ಪಾಲಿಸುತ್ತೇವೆ.

        ಇನ್ನ ಈ ಲೇಖನ ನಿಮಗೆ ಬಲಪಂಥೀಯರೆಂದು ನಿಲುಮೆ ಘೋಷಣೆ ಮಾಡಿಕೊಂಡಂತೆ ಅನ್ನಿಸಿದೆ. ತಪ್ಪೇನಿಲ್ಲ ‘ಅವರವರ ಭಾವಕ್ಕೆ ಅವರವರ ಭಕುತಿಗೆ’ ಅನ್ನೋ ಮಾತಿದೆಯಲ್ಲ ಹಾಗೆ.ಈ ಹಿಂದೆ ನಾರಾಯಣ ಮೂರ್ತಿಯವರನ್ನ ಅತಿಯಾಗಿ ಹೊಗಳಿದಕ್ಕೆ ಆಕ್ಷೇಪಿಸಿ ಬರಗೂರರನ್ನ ಬೆಂಬಲಿಸಿದ್ದಕ್ಕೆ ನೀವು ಎಡಪಂಥೀಯರಾ ಅಂದಿದ್ರು ಕೆಲವರು ಅದೂ ಅವರವರ ಭಾವಕ್ಕೆ 🙂

        ಬಲಪಂಥವೋ,ಎಡಪಂಥವೋ ಎರಡಕ್ಕೂ ಅವುಗಳದ್ದೇ ಆದ ತತ್ವ-ಸಿದ್ಧಾಂತಗಳಿವೆ ನೀವು ನನ್ನನ್ನು ಆ ಕಡೆಗಾದರೂ ಸೇರಿಸಿಕೊಳ್ಳಿ,ಈ ಕಡೆಗಾದರೂ ಸೇರಿಸಿಕೊಳ್ಳಿ.ಅಸ್ಪೃಶ್ಯ ಭಾವವೇನು ಇಲ್ಲ ನನಗೆ 🙂

        ಉತ್ತರ
      • ವಸಂತ's avatar
        ಮಾರ್ಚ್ 9 2011

        ರವಿ ಅವರೇ,
        ನಿಲುಮೆಯಲ್ಲಿ ಎಲ್ಲ ತರಹದ ವಿಷಯಗಳೂ ಬರುತ್ತಿವೆ. ಅದ್ಯಾಕೆ ನಿಮಗೆ ಅದು ಬಲಪಂಥೀಯ ಅನ್ನಿಸ್ತೋ ಗೊತ್ತಿಲ್ಲ. ಈ ರೀತಿಯ ಹಣೆಪಟ್ಟಿ ಕಟ್ಟುವ ಮೊದಲು ಸ್ವಲ್ಪ ಈಗಾಗಲೇ ಬಂದಿರುವ ಎಲ್ಲ ಪೋಸ್ಟ್ ಗಳನ್ನು ಒಮ್ಮೆ ಪರಿಶೀಲಿಸಿ ಎಂದು ಕೇಳಿಕೊಳ್ಳುವೆ.

        ನಿಲುಮೆ ಒಂದೊಳ್ಳೆ ಬ್ಲಾಗ್ ಅಗ್ರಿಗೇಟರ್ ಆಗ್ತಾ ಇದೆ. ಇನ್ನಷ್ಟು ಒಳ್ಳೆಯ ಚರ್ಚೆ ನಿರಂತರವಾಗಿ ನಡೆಯಲಿ ಎಂದು ಹಾರೈಸುವೆ.

        -ವಸಂತ

        ಉತ್ತರ
  7. ರವಿ ಕುಮಾರ್ ಜಿ ಬಿ's avatar
    ರವಿ ಕುಮಾರ್ ಜಿ ಬಿ
    ಮಾರ್ಚ್ 8 2011

    ಉಫ್ಫ್, ಅದ್ಬುತ ಲೇಖನ …ನಿಲುಮೆಗೆ ಧನ್ಯವಾದ ….
    >>>ಉದಾಹರಣೆಗೆ ಟೀವಿಯಲ್ಲಿ ಬಣ್ಣ ಬಣ್ಣದ ಬಟ್ಟೆ ತೊಟ್ಟು ದೀಪ ಹಚ್ಚಲಿಲ್ಲ ಅಂದ್ರೆ ಪ್ರಳಯವಾಗುತ್ತದೆ ಅಂತ ಹೆದರಿಸೋ ಡೋಂಗಿ ಜ್ಯೋತಿಷಿಗಳನ್ನು ತೆಗಳುವಾಗ ಇರುವ ಹುಮ್ಮಸ್ಸು, ದೇವರು ಖಾಯಿಲೆ ವಾಸಿ ಮಾಡುತ್ತಾನೆ ಬನ್ನಿ ಅಂತ ’ಬೆನ್ನ(ನ್ನಿ) ಹಿಂದೆ(ನ್)’ ನಿಂತು ತಲೆ ಮೇಲೆ ಕೈಯಿಟ್ಟು ಪವಾಡದ ಮಂಕೂ ಬೂದಿ ಎರಚುವಾಗ ತನ್ನ ತೀವ್ರತೆ ಕಳೆದುಕೊಂಡಿತ್ತು. ಇಂದು ಮಾಟ ಮಂತ್ರದ ಬಗ್ಗೆ ಟೀಕಿಸುವ ಮಂದಿ ಹೀಗೆ ಕೆಲ ವರ್ಷದ ಹಿಂದೆ ಪ್ಯಾಲೇಸ್ ಗ್ರೌಂಡ್ಸ್ನಲ್ಲಿ ತಲೇ ಮೇಲೆ ಕೈಯಿಡಿಸಿಕೊಂಡು ತಲೆ(ಇದ್ದವ್ರು!) ತಿರುಗಿ ಬಿದ್ದಾಗ ಚರ್ಚೆಯಾಗಲೇ ಇಲ್ಲ.
    ಇನ್ನು ’ಮತಾಂತರ’ದ ಬಗ್ಗೆ ಚಿಮೂ ಅವರ ಆತಂಕಕ್ಕೆ ಕಾರಣವಿಲ್ಲವೇ?>>>>

    =>ಇದುವೇ ಅಲ್ಲವೇ ಕೋಮುವಾದ ಅಂದರೆ? ಕೆಟ್ಟದ್ದನ್ನ ಅದು ಎಲ್ಲಿದ್ದರೂ ದಿಕ್ಕರಿಸುವ ,ವಿರೋಧಿಸುವ ಮನಸ್ತಿತಿ ನಮ್ಮಲ್ಲಿ ಯಾವಾಗ ಬರುತ್ತದೋ ಅವಾಗಲೇ ನಾವು ಉದ್ದಾರವಾಗುತ್ತೇವೆ.
    ಇದು ಯಾವುದೇ ತಥಾಕಥಿತ ಬುದ್ದಿಜೀವಿಗಳಿಗಾಗಲಿ,ಸಂಘ ಸಂಸ್ಥೆ ಗಳಿಗಾಗಲಿ ಕಾಣಿಸಲಾರದು…..ಅವರದ್ದೇನಿದ್ದರೂ ಕೇವಲ ಓಲೈಕೆ ….

    ಇನ್ನೂ ನಂಬಿಕೆ ಇದೆ ಭಸ್ಮಾಸುರನ ಸೃಸ್ಥಿ ಕರ್ತರಿಗೆ ಭಾಸ್ಮಾಸುರನಿಂದಲೇ ಮರಣ !!!!! ಈಗಿನ ಉದಾಹರಣೆಯನ್ನೇ ಕೊಡಬಹುದು ” ಅಮೆರಿಕ ಲಾಡನ್ ನನ್ನು ಪೋಷಿಸಿ ಸಲಹಿತು ಆದರೆ ಅವನೇ ಅಮೆರಿಕ ಕ್ಕೆ ತಿರುಮಂತ್ರ ಇಟ್ಟ!!! ”

    ನಿಲುಮೆಗೆ ಮತ್ತೊಮ್ಮೆ ಭೇಷ್ !!!

    ಉತ್ತರ
  8. ಆಸು ಹೆಗ್ಡೆ's avatar
    ಮಾರ್ಚ್ 9 2011

    “ಜನರಿಗೆ ಬೇಕಾಗಿರುವುದು ಸಹಬಾಳ್ವೆ ಮಾತ್ರ.ತುತ್ತು ಅನ್ನಕ್ಕಾಗಿ ಹೋರಾಡುವ ಜನರಿಗ್ಯಾವ ಧರ್ಮ ಸ್ವಾಮೀ? ಅವರೆಂದಿಗೂ ಒಟ್ಟಿಗೆ ಬದುಕ ಬಯಸುವವರು.ಸೌಹಾರ್ದತೆ ಅನ್ನುವುದು ನಮ್ಮ ರಕ್ತದ ಗುಣ.”

    ಈ ಮೇಲಿನ ಮಾತುಗಳನ್ನು ಓದಿದಾಗ ಆಸುಮನದಲ್ಲಿನ ಈ ಮಾತುಗಳನ್ನು ಹಂಚಿಕೊಳ್ಳುವ ಮನಸ್ಸಾಯ್ತು.

    ನಾಳೆ ನಮ್ಮೂರಲ್ಲಿ ನಿಜಕ್ಕೂ ನೀವೇ ದೇವರು!!!

    ನಾಳೆ ನಮ್ಮೂರಲ್ಲಿ ನಿಜಕ್ಕೂ ನೀವೇ ದೇವರು!

    ಉತ್ತರ
  9. ಆಸು ಹೆಗ್ಡೆ's avatar
    ಮಾರ್ಚ್ 9 2011

    ಡಾ. ಚಿದಾನಂದ ಮೂರ್ತಿಯವರ ಆ ಪತ್ರದ ಪೂರ್ಣಪಾಠವನ್ನು ಇಲ್ಲಿ ಒದಗಿಸಿದ್ದಿದ್ದರೆ ಚೆನ್ನಿರುತ್ತಿತ್ತು.
    ಯಾಕೆಂದರೆ, ಪೂರ್ಣ ಪತ್ರವನ್ನು ಯಾರೂ ಎಲ್ಲೂ ಪ್ರಕಟಿಸಿಲ್ಲ (ಅವು ಪ್ರಕಟಗೊಂಡಿದ್ದ ಪತ್ರಿಕೆಗಳನ್ನುಳಿದು).

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments