ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 14, 2011

15

ಬಾಪೂ ನೇತಾಜಿಯನ್ನು ತುಳಿದರೆ ?

‍ನಿಲುಮೆ ಮೂಲಕ

– ಶ್ರೀಹರ್ಷ ಸಾಲೀಮಠ

ಸುಭಾಷ ಚಂದ್ರ ಭೋಸರು ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸ ಕಂಡ ಅತ್ಯಂತ ಚಾರ್ಮಿಂಗ್ ವ್ಯಕ್ತಿ. ಅವರು ಹುಟ್ಟಾ ಜಿನಿಯಸ್. ಕೇವಲ ಎಂಟು ತಿಂಗಳ ಅವಧಿಯ ಸಿದ್ಧತೆಯಲ್ಲಿ ಐ.ಸಿ.ಎಸ್ ಪರೀಕ್ಷೆಯಲ್ಲಿ ನಾಲ್ಕನೆಯ ರ್‍ಯಾಂಕ್ ಪಡೆದ ಮೇಧಾವಿ. ಸುಭಾಷ್ ರ ಚರಿಷ್ಮಾ ಹಿಟ್ಲರ್‌ನಂತಹವನನ್ನೇ ಬೆರಗುಗೊಳಿಸಿತ್ತು. ದೇಶಬಂಧು ಚಿತ್ತರಂಜನ್ ದಾಸ್ ರ ಗರಡಿಯಲ್ಲಿ ಪಳಗಿದ ನೇತಾಜಿ ಕ್ರಿಯಾಶಿಲತೆಯಲ್ಲೂ ಎಲ್ಲರಿಗಿಂತ ಒಂದು ಕೈ ಮೇಲು. ದೇಶಸೇವೆಯ ಕೈಂಕರ್ಯಕ್ಕೆ ಓಗೊಟ್ಟು ಐ.ಸಿ.ಎಸ್ ನಂತಹ ಹುದ್ದೆಯನ್ನು ಬಿಟ್ಟು ಮರಳಿದವರು. ನೇತಾಜಿಯ ದೇಶಭಕ್ತಿಯ ಬಗ್ಗೆ ಯಾರಿಗೂ ಅನುಮಾನಗಳಿರಲಿಲ್ಲ; ಇಂದಿಗೂ ಇಲ್ಲ!

ಸುಭಾಷರಿಗೂ ಬಾಪೂರಿಗೂ ತಾತ್ವಿಕವಾದ ಅಭಿಪ್ರಾಯಬೇಧಗಳಿದ್ದವು. ಅದನ್ನು ವೈಯಕ್ತಿಕ ಮಟ್ಟದ ಬೇಧಗಳು ಎಂಬಂತೆ ಚಿತ್ರಿಸಿ ಜನರನ್ನು ದಾರಿ ತಪ್ಪಿಸಲಾಗುತ್ತಿದೆ. ಕಸ್ತುರ್ ಬಾ ಹೇಳುತ್ತಾರೆ “ಗಾಂಧೀಜಿ ಮತ್ತು ಸುಭಾಷರು ಚರ್ಚೆಗೆ ಕುಳಿತರೆ ಇಬ್ಬರು ದೈವಿಪುರುಷರು ಸಂಭಾಷಣೆಗೆ ತೊಡಗಿದಂತೆ ತೋರುತ್ತಿತ್ತು.” ಅಭಿಪ್ರಾಯಗಳಲ್ಲಿ ಬಲವಾದ ಬೇಧಗಳಿದ್ದರೂ ನೇತಾಜಿ ಮತ್ತು ಬಾಪೂಜಿಯವರಲ್ಲಿ ವಯಕ್ತಿಕ ಮಟ್ಟದ ದ್ವೇಷಗಳಿರಲಿಲ್ಲ.

ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಡಲು ವಿದೇಶಿ ತಾಕತ್ತು ಹಾಗೂ ಸೈನ್ಯದ ನೆರವು ಪಡೆಯಬೇಕು ಎಂಬ ಅಭಿಪ್ರಾಯ ನೇತಾಜಿಯವರಾಗಿತ್ತು. ಸಂಪೂರ್ಣ ಸ್ವದೇಶಿ ಮಾರ್ಗದಲ್ಲೇ ಸ್ವಾತಂತ್ರ್ಯ ಪಡೆಯಬೇಕೆಂಬುದು ಗಾಂಧೀಜಿಯ ಅಭಿಪ್ರಾಯವಾಗಿತ್ತು. ಯುದ್ಧಾಸ್ತ್ರಗಳು, ಬಾಂಬುಗಳ ಸಹಾಯದಿಂದ ನೆತ್ತರು ಹರಿಸಿ ಸ್ವಾಯತ್ತೆ ಪಡೆಯಬೇಕೆಂಬುದು ನೇತಾಜಿ ಚಿಂತನೆಯಾಗಿದ್ದರೆ ಸತ್ಯ ಮತ್ತು ಅಹಿಂಸೆ ಗಾಂಧೀಜಿಯ ಮಂತ್ರವಾಗಿತ್ತು. ಇದು ಅವರ ನಡುವೆ ಸಾಕಷ್ಟು ಜಿಜ್ಞಾಸೆ, ಚರ್ಚೆಗಳಿಗೆ ದಾರಿ ಮಾಡಿಕೊಂಡಿತ್ತು. ಹಾಗಂತ ಇಬ್ಬರೂ ಪರಸ್ಪರ ದ್ವೇಷಿಸುತ್ತಿರಲಿಲ್ಲ.

ಸುಭಾಷರು ಜೈಲಿನಿಂದ ತಪ್ಪಿಸಿಕೊಂಡು ಸೈನ್ಯ ಕಟ್ಟಲು ಹೋದಾಗ ಗಾಂಧಿಜಿಯ ಪ್ರತಿಕ್ರಿಯೆ ಅತ್ಯಂತ ಮಾರ್ಮಿಕವಾಗಿತ್ತು. ಈ ಸಂದರ್ಭದಲ್ಲಿ ಅವರು ಉದ್ಗರಿಸಿದ್ದಿಷ್ಟು ” he is a mad chap. he thinks there are better weapons than satya and ahimsa”!!

ನೇತಾಜಿ ಸೈನ್ಯವನ್ನು ಕಟ್ಟಿದ್ದೇನೋ ನಿಜ. ಆದರೆ ಸೈನ್ಯವನ್ನು ಮುನ್ನಡೆಸುವ ಅನುಭವವಾಗಲೀ ಮಿಲಿಟರಿ ಹಿನ್ನೆಲೆಯಾಗಲೀ ಅವರಲ್ಲಿರಲಿಲ್ಲ. ಇದರಿಂದಾಗಿ ನೇತಾಜಿಯ ಅಜ್ಞೆ ಪಡೆದು ಭಾರತದೆ ಮೇಲೆ ಮುನ್ನುಗ್ಗಿದ ಐ.ಎನ್.ಎ ಸರಿಯಾದ ಮಿಲಿಟರಿ ಬ್ಯಾಕ್ ಅಪ್ ಮತ್ತು ಪ್ಲಾನ್ ಇಲ್ಲದೇ ಸೋಲುಣ್ಣುವಂತಾಯಿತು. ಬ್ರಿಟಿಷರ ಗುಂಡೇಟು ತಿಂದು ಸತ್ತವರಿಗಿಂತ ಹಸಿವು ಬಾಯಾರಿಕೆ ಹಾಗೂ ಸಾಂಕ್ರಾಮಿಕ ರೋಗಗಳಿಂದ ಸತ್ತವರ ಸಂಖ್ಯೆಯೆ ಹೆಚ್ಚು. ಸೈನಿಕರಿಗೆ ಬೆಂಬಲವಾಗಿ ಮಹತ್ತರ ಬಲ ಎಂಬುದು ಇದ್ದಿದ್ದರೆ ಅದು ಸುಭಾಷರು ತುಂಬಿ ಕಳಿಸಿದ ದೇಶಭಕ್ತಿಯ ಕಿಚ್ಚು ಅಷ್ಟೇ! ನೇತಾಜಿಯ ಈ ದುಡುಕಿನಿಂದಾಗಿ ನಲವತ್ತು ಸಾವಿರ ಸೈನಿಕರು ಪ್ರಾಣಕಳೆದುಕೊಂಡರು. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ನೇತಾಜಿಯ ಐ.ಎನ್. ಎ ಗೆದ್ದಿದ್ದಲ್ಲ. ಅವನ್ನು ಗೆದ್ದಿದ್ದು ಜಪಾನ್ ದೇಶದ ಸೈನ್ಯ. ನೇತಾಜಿಯ ನಾಯಕತ್ವದ ಗುಣ ಮತ್ತು ಚಾರ್ಮ್ ಗೆ ಮನಸೋತು ಜಪಾನ್ ಸರ್ಕಾರ ಭಾರತಕ್ಕೆ ನೀಡಿದ ಉಡುಗೊರೆಗಳು ಅವು!

ಇದಕ್ಕಿಂತ ಮುಂಚೆ ಕಾಂಗ್ರೆಸ್ ಪಾಳಯದಲ್ಲಿ ನೇತಾಜಿ ಮತ್ತು ಗಾಂಧೀಜಿಯ ನಿಲುವುಗಳ ಬಗ್ಗೆ ಸಾಕಷ್ಟು ಚರ್ಚೆಗಳಾಗಿದ್ದವು. ಕಾಂಗ್ರೆಸ್‍ನ ಚುನಾವಣೆಯಲ್ಲಿ ನೇತಾಜಿಯ ವಿರುದ್ಧ ಗಾಂಧೀಜಿ ಪಟ್ಟಾಭಿ ಸೀತಾರಾಮಯ್ಯನವರನ್ನು ನಿಲ್ಲಿಸಿದ್ದರು. ನೇತಾಜಿ ವಿರುದ್ಧ ಪಟ್ಟಾಭಿಯವರು ಸೋತಾಗ “ಇದು ನನ್ನ ಸೋಲು” ಎಂದಿದ್ದರು ಗಾಂಧಿಜಿ. ಸ್ವಾತಂತ್ರ್ಯ ಹೋರಾಟದ ವಿಧಾನದ ಬಗ್ಗೆ ಅಭಿಪ್ರಾಯಗಳಲ್ಲಿ ಭಿನ್ನತೆಗಳು ಇದ್ದುವಷ್ಟೆ! ತಮ್ಮ ತತ್ವಗಳಿಗೆ ವಿರುದ್ಧವಾದ ನಿರ್ಣಯಗಳು ಮಂಡಿಸಲ್ಪಡತೊಡಗಿದ್ದರಿಂದ ಗಾಂಧಿಜಿ ಸಕ್ರಿಯತೆಯಿಂದ ಹಿಂದೆ ಸರಿಯತೊಡಗಿದರು. ತಾವು ನಂಬಿದ ತತ್ವಗಳೊಂದಿಗೆ ರಾಜಿ ಮಾಡಿಕೊಳ್ಳಲು ಗಾಂಧಿಜಿ ಸಿದ್ಧರಿರಲಿಲ್ಲ. ಇದು ಕಾಂಗ್ರೆಸ್‍ನಲ್ಲಿ ಅನೇಕ ಅಲ್ಲೊಲ್ಲ ಕಲ್ಲೊಲ್ಲಗಳಿಗೆ ಕಾರಣವಾಯಿತು. ಪರಿಣಾಮವಾಗಿ ನೇತಾಜಿ ಕಾಂಗ್ರೆಸ್ ನಿಂದ ಹೊರಬರಬೇಕಾಯಿತು. ನೇತಾಜಿ ತತ್ವಗಳನ್ನು ನಂಬಿದ್ದ ಕೆಲವರು ಹೊರಬಂದು ನೇತಾಜಿಯ ನೇತೃತ್ವದಲ್ಲಿ ಫ಼ಾರ್ವರ್ಡ್ ಬ್ಲಾಕ್ ಸ್ಥಾಪಿಸಿಕೊಂಡರು. ಗಾಂಧಿಜಿ ನೇತಾಜಿಯ ತತ್ವಗಳಿಗೆ ಒಪ್ಪಿಗೆ ನೀಡಿರಲಿಲ್ಲವೇ ಹೊರತು ನೇತಾಜಿಯನ್ನು ವಿರೋಧಿಸಿರಲಿಲ್ಲ ಹಾಗೂ ನೇತಾಜಿಯ ಮೇಲೆ ದ್ವೇಷವನ್ನು ಸಾಧಿಸಿ ಕಾಂಗ್ರೆಸ್ ನಿಂದ ಹೊರ ಹೋಗುವಂತೆ ಒತ್ತಾಯಿಸಿರಲಿಲ್ಲ. ಎಲ್ಲರಿಗೂ ತಮ್ಮತಮ್ಮದೇ ವಿಚಾರಗಳನ್ನು ಹೊಂದುವ ಹಕ್ಕಿದೆ ಎಂದು ಗಾಂಧೀಜಿ ನಂಬಿದ್ದರು. ಹಾಗೆಯೆ ತಮ್ಮ ತತ್ವಗಳಿಗೆ ಪ್ರತಿನಿಧಿಯಾಗಿ ಪಟ್ಟಾಭಿಯವರನ್ನು ನಿಲ್ಲಿಸಿದ್ದರೆ ಹೊರತು ನೇತಾಜಿಯ ಮೇಲಿನ ಹಗೆಯಿಂದಲ್ಲ.

ಬಿಸಿರಕ್ತದ ನೇತಾಜಿ ಮತ್ತು ಅವರ ಸಮರ್ಥಕರಿಗೆ ಅಹಿಂಸೆ ಸತ್ಯದಂತಹ ಅಸ್ತ್ರಗಳಲ್ಲಿ ನಂಬಿಕೆ ಇರಲಿಲ್ಲ. ಅತ್ಯಂತ ವೇಗವಾಗಿ ಸ್ವಾತಂತ್ರ ಗಳಿಸುವ ’ಶಾರ್ಟ್‍ಕಟ್’ ಅವರಿಗೆ ಬೇಕಾಗಿತ್ತು. ಕೊನೆಗೆ ಗೆದ್ದಿದ್ದು ಗಾಂಧಿಜಿ ನಡೆದ ದಾರಿಯೇ! ಸತ್ಯ ಅಹಿಂಸೆಯಲ್ಲದೇ ಬೇರೆ ಯಾವ ಅಸ್ತ್ರಗಳೂ ಬ್ರಿಟಿಷರ ಬುಡ ಅಲ್ಲಾಡಿಸಲು ಸಾಧ್ಯವಾಗಲಿಲ್ಲ. ಇದು ಕಣ್ಣೆದುರಿಗೇ ಕಾಣುವ ಐತಿಹಾಸಿಕ ಸತ್ಯ. ಇದಲ್ಲದೇ ಗಾಂಧೀಜಿ ಯಾರ ಮೇಲೂ ವೈಯಕ್ತಿಕ ಅಭಿಪ್ರಾಯಗಳನ್ನು ಹೇರುತ್ತಿರಲಿಲ್ಲ. ಪ್ರತಿಯೊಬ್ಬರೂ ತಮ್ಮ ದಾರಿಯಲ್ಲೆ ತಮ್ಮ ಸ್ವತಂತ್ರ ಚಿಂತನೆಯಲ್ಲೇ ನಡೆಯಬೇಕು ಎಂದು ಹೇಳುತ್ತಿದ್ದರು. ಸರ್. ಎಂ.ವಿಶ್ವೇಶ್ವರಯ್ಯ ಮತ್ತು ಗಾಂಧಿಜಿ ನಡುವೆ ಕೈಗಾರಿಕಾ ನೀತಿಯ ಬಗ್ಗೆ ಚರ್ಚೆಗಳು ನಡೆದಿದ್ದವು. ವಿಶ್ವೇಶ್ವರಯ್ಯ ಬೃಹತ್ ಕೈಗಾರಿಕೆಗಳ ವಕಾಲತ್ತು ಮಾಡಿದರೆ ಗಾಂಧಿಜಿ ಗುಡಿಕೈಗಾರಿಕೆಗಳಿಗೆ ಮಹತ್ವ ಸಿಗಬೇಕು ಎಂದು ವಾದಿಸುತ್ತಿದ್ದರು. ಆದರೇನಂತೆ ವಿಶ್ವೇಶ್ವರಯ್ಯ ತಮ್ಮಿಚ್ಚೆಯಂತೆ ಕೈಗಾರಿಕೆಗಳನ್ನು ಸ್ಥಾಪಿಸಿದರು. ಅದಕ್ಕೆ ಗಾಂಧೀಜಿ ವಿರೋಧಿಸಲಿಲ್ಲ. ಅವರ ತತ್ವಗಳಿಗೆ ಅನುಗುಣವಾಗಿ ಅವರವರು ನಡೆದುಕೊಂಡರು. ಹಾಗಂತ ಸರ್.ಎಂ.ವಿ ಹಾಗೂ ಗಾಂಧಿಜಿಗೆ ದ್ವೇಷವಿತ್ತು ಎನ್ನಲಾಗುತ್ತದೆಯೆ? ನೇತಾಜಿ ವಿಷಯದಲ್ಲೂ ನಡೆದಿದ್ದೂ ಹಾಗೆಯೇ! ಆದರೆ ಗಾಂಧಿಜಿಯನ್ನು ನಿಂದಿಸಿ ತಮ್ಮ ಬೇಳೆಯನ್ನು ಬೇಯಿಸಿಕೊಳ್ಳಲು ಆರೆಸ್ಸೆಸ್ಸಿಗರು ಹೆಣೆದ ಕಥೆ ಗಾಂಧಿಜಿ ಸುಭಾಷ್ ಚಂದ್ರ ಭೊಸ್ ರನ್ನು ತುಳಿದ ಕಥೆ! ಬಾಪೂ ಹಾಗೂ ನೇತಾಜಿಯವರ ನಡುವಿನ ವಾದ-ವಿವಾದಗಳನ್ನು ತಿಳಿಯಲು ಅವರೀರ್ವರೂ ಪರಸ್ಪರ ಬರೆದ ಪತ್ರಗಳನ್ನು ಓದಬೇಕು.

ಇನ್ನೊಂದು ವಿಷಯ! ಗಾಂಧಿಜಿಗೆ ನೆಹರೂರನ್ನು ಪ್ರಧಾನಿಯನ್ನಾಗಿ ಮಾಡಲು ಯಾವ ಕಾರಣಗಳೂ ಇರಲಿಲ್ಲ. ಅವರಿಗೆ ಅಂತಹ ಸ್ವಾರ್ಥ ಸಾಧನೆಯ ಆಕಾಂಕ್ಷೆ ಇದ್ದಿದ್ದರೆ ತಮ್ಮ ಮಕ್ಕಳನ್ನೇ ರಾಜಕೀಯದಲ್ಲಿ ಸ್ಥಾಪಿಸಬಹುದಿತ್ತು. ಗಾಂಧೀಜಿ ಮತಯಾಚಿಸಿದ್ದರೆ ಅವರ ಮಕ್ಕಳಿಗೆ ಧಾರಾಳವಾಗಿ ಓಟುಗಳು ಬೀಳುತಿದ್ದವು. ಭಾರತದ ಚುಕ್ಕಾಣಿ ಸುಲಭವಾಗಿ ಗಾಂಧಿಜಿಯ ಪುತ್ರರ ಕೈವಶವಾಗಬಹುದಿತ್ತು. ಇದಕ್ಕೆ ಗಾಂಧಿಜಿ ಎಂದಿಗೂ ಒಪ್ಪಿಗೆ ಕೊಡಲಿಲ್ಲ. ಭಾರತಕ್ಕೆ ಸ್ವಾತಂತ್ರ್ಯ ಪ್ರಾಪ್ತಿಯಾಗುವುದು ನಿಶ್ಚಯವಾಗುತ್ತಲೇ ಗಾಂಧಿಜಿ ತಮ್ಮ ಕಾಂಗ್ರೆಸ್ ಸದಸ್ಯತ್ವಕ್ಕೆ “ಇನ್ನು ನನ್ನ ಕೆಲಸ ಮುಗಿಯಿತು” ಎಂದು ಹೇಳಿ ರಾಜೀನಾಮೆ ನೀಡಿದ್ದರು. ತದನಂತರದ ಯಾವುದೇ ನಿರ್ಣಯಗಳಲ್ಲಿ ಗಾಂಧಿಜಿಯ ಹಸ್ತಕ್ಷೇಪ ಇರಲಿಲ್ಲ.

ಕೊಸರಿಗೆ ಒಂದು ಘಟನೆ. ಮೂರನೆಯ ದುಂಡುಮೇಜಿನ ಪರಿಷತ್ತಿನಲ್ಲಿ ಭಾಗವಹಿಸಲು ಗಾಂಧೀಜಿ ನಿರಾಕರಿಸಿದರು.

ಪತ್ರಕರ್ತರು ಈ ಬಗ್ಗೆ ಪ್ರಶ್ನಿಸಿದ್ದಕ್ಕೆ “ಅಲ್ಲಿ ಭಾಗವಹಿಸುತ್ತಿರುವವರೆಲ್ಲಾ ಪೊಲಿಟಿಷಿಯನ್ಸ್. ” ಎಂದರು

“ನೀವು ಪೊಲಿಟಿಷಿಯನ್ ಅಲ್ಲವೆ ?”

” ಅಲ್ಲ! ನಾನು freesom fighter”

” ಹಾಗಾದರೆ ಪೊಲಿಟಿಷಿಯನ್ಸ್ ಬಗ್ಗೆ ನಿಮ್ಮ ಅಭಿಪ್ರಾಯವೇನು?”

“they are prostitutes!”

ಹಾಗೆಯೇ ನನ್ನ ಕಾರ್ಯವೈಖರಿಯನ್ನೂ ವಿವರಿಸಿಬಿಡುತ್ತೇನೆ. ಪ್ರತಿ ಲೇಖನಕ್ಕೂ ಅನೇಕ ಪುಸ್ತಕಗಳು, ಪತ್ರಗಳು ಹಾಗೂ ದಾಖಲೆಗಳು ನನಗೆ ಆಕರಗಳು. ಇವುಗಳಲ್ಲಿ ಗಾಂಧಿಜಿ ವಿರುದ್ಧ ಬರೆದ ಪುಸ್ತಕಗಳೂ ಇವೆ. ಗಾಂಧಿಜಿಯ ವಿರೋಧದಿಂದಲೇ ನನ್ನ ಕೆಲಸ ಆರಂಭಿಸುತ್ತೇನೆ. ಅವರ ವಿರುದ್ಧದ ಆರೋಪಗಳನ್ನು ಪಟ್ಟಿ ಮಾಡಿಕೊಂಡು ಪುಸ್ತಕ, ಪತ್ರ ದಾಖಲೆಗಳನ್ನು ತಡಕಾಡುತೇನೆ. ಬೆಳಗೆರೆ ಕೃಷ್ಣಶಾಸ್ತ್ರಿಗಳನ್ನೂ ಸೇರಿದಂತೆ ಅನೇಕ ಹಿರಿಯರನ್ನು ಗಾಂಧಿಜಿಯ ಬಗ್ಗೆ ಪ್ರಶ್ನಿಸುತ್ತೇನೆ. ಇದರಲ್ಲಿ ಬಹುತೇಕ ಗಾಂಧಿಜಿಯ ವಿರುದ್ಧ ಇರುವ ಪ್ರಶ್ನೆಗಳೇ! (ಈ ಕಾರಣದಿಂದ ನನ್ನನ್ನು ಆರೆಸ್ಸೆಸ್ಸಿಗ ಎಂದು ತಪ್ಪು ತಿಳಿದುಕೊಂಡವರೂ ಇದ್ದಾರೆ!) ಪ್ರತಿ ಪ್ರಶ್ನೆಗೂ ಸಮರ್ಪಕ ಉತ್ತರ ದೊರಕಿಸಿಕೊಂಡು ಇಲ್ಲಿ ಬರೆಯುತ್ತೇನೆ. ಯಾವುದೊ ಒಂದು ಪುಸ್ತಕ ಓದಿ ನಾನು ಈ ಅಭಿಪ್ರಾಯಗಳಿಗೆ ಬಂದಿಲ್ಲ.

(ಚಿತ್ರ ಕೃಪೆ :4to40.com)

15 ಟಿಪ್ಪಣಿಗಳು Post a comment
  1. ರವಿ's avatar
    Ravi
    ಮಾರ್ಚ್ 14 2011

    ಹರ್ಷ, ಬಹಳ ಚೆನ್ನಾಗಿದೆ ಲೇಖನ. ಮಹಾತ್ಮರನ್ನು ಅರ್ಥ ಮಾಡಿಕೊಂಡವರು ತುಂಬಾ ಕಡಿಮೆ. ಸುಭಾಷ್, ಭಗತ್ ರ ಕ್ರಾಂತಿಯ ಚಾರ್ಮ್ ಎಲ್ಲರಿಗೂ ಆಕರ್ಷಣೆ. ಸುಭಾಷ್, ಭಗತ್ ಅಪ್ರತಿಮ ದೇಶಭಕ್ತರು. ಪ್ರಶ್ನಾತೀತ. ಆದರೆ ದುಡುಕಿನ ನಿರ್ಧಾರಗಳನ್ನೂ ತಳೆದರು. ಗಾಂಧಿಜಿ ದೇಶ ಕಂಡ ಅತ್ಯದ್ಭುತ ‘strategist’. ನಮ್ಮ, ಬ್ರಿಟಿಷರ ಬಲಾಬಲಗಳನ್ನು ಚೆನ್ನಾಗಿ ಅರಿತಿದ್ದರು. ಅದಕ್ಕಾಗಿಯೇ ಅಹಿಂಸೆಯ ಮಾರ್ಗ ತುಳಿದರು. ಹಲವರು ಗಾಂಧಿಯ ವೈಯುಕ್ತಿಕ ವಿಷಯಗಳನ್ನು ಚರ್ಚಿಸಿ ಗಾಂಧಿಯನ್ನು ಅವಹೇಳನ ಮಾಡುವವರಿದ್ದಾರೆ. ಸ್ವಾತಂತ್ರ್ಯ ಹೋರಾಟಕ್ಕೆ ಅವರ ಕೊಡುಗೆ ಗಮನಿಸಬೇಕೇ ಹೊರತು ವೈಯುಕ್ತಿಕವನ್ನಲ್ಲ. ದಕ್ಷಿಣ ಆಫ್ರಿಕಾದಿಂದ ಬಂದ ಅನುಕೂಲಸ್ಥ ವಕೀಲನೊಬ್ಬ ತನ್ನ ಉಳಿದಿಡೀ ಜೀವನವನ್ನು ಖಾದಿಯ ತುಂಡು ಬಟ್ಟೆಯಲ್ಲಿ ಕಳೆದದ್ದು ಆತನ ‘commitment’ ಅನ್ನು ತೋರಿಸುವುದೇ ವಿನಃ ಅದರಲ್ಲಿ ಯಾವುದೇ ಮೋಸ ಕಾಣುವುದಿಲ್ಲ.
    ಒಂದು ಮಾತು ಹರ್ಷ, ನಿಮ್ಮ ಬರವಣಿಗೆ ಚೆನ್ನಾಗಿದೆ. ಆದರೆ ಬರೆಯುವ ಆವೇಶದಲ್ಲಿ ಕೆಲವು ತಪ್ಪುಗಳನ್ನು ಮಾಡುತ್ತೀರಿ. ನಿಮ್ಮ ಹಳೆಯ ಲೇಖನಗಳಲ್ಲೆಲ್ಲ ಪ್ರತಿಕ್ರಿಯೆ ನೀಡಿದ್ದೇನೆ. ಇಲ್ಲೂ ಅಷ್ಟೇ ಆರೆಸ್ಸೆಸ್ಸ್ ಆನ್ನು ಎಳೆದು ತರುವ ಅಗತ್ಯವಿರಲಿಲ್ಲ, ಗಾಂಧೀ ವಿರುದ್ಧ ಕಥೆ ಕಟ್ಟಿದರೆಂದು. ಗಾಂಧಿಯನ್ನು ವಿರೋಧಿಸುವ ದೊಡ್ಡ ಗುಂಪೇ ಇದೆ, ಆರೆಸ್ಸೆಸ್ಸ್ ಮಾತ್ರವಲ್ಲ.

    ಉತ್ತರ
  2. K S RAGHAVENDRA NAVADA's avatar
    ಮಾರ್ಚ್ 14 2011

    ಅ೦ತೂ ಬರೆದಿರಿ! ಈ ಲೇಖನವನ್ನು ಬಹಳಷ್ಟು ಹಿ೦ದೆಯೇ ನಿರೀಕ್ಷಿಸಿದ್ದೆ! ಪ್ರಬುಗಳು ಹೇಳಿದ ಹಾಗೆ ಇಲ್ಲಿ ಆರ್.ಎಸ್. ಎಸ್,. ಪ್ರಸ್ತಾವ ಬೇಕಿರಲಿಲ್ಲವೆ೦ದು ನನಗೂ ತೋರಿತು. ತೊ೦ದರೆ ಇಲ್ಲ. ಅದನ್ನೊ೦ದು ದಾಕಲೆಯಾಗಿಯೇ ಪರಿಗಣಿಸೋಣ.
    ಸಮಚಿತ್ತತೆಯ ಲೇಖನ. ಖುಷಿ ಕೊಟ್ಟಿತು.
    ನಮಸ್ಕಾರಗಳೊ೦ದಿಗೆ,
    ನಿಮ್ಮವ ನಾವಡ.

    ಉತ್ತರ
  3. Narendra Kumar.S.S's avatar
    Narendra Kumar.S.S
    ಮಾರ್ಚ್ 14 2011

    > ನೇತಾಜಿ ಸೈನ್ಯವನ್ನು ಕಟ್ಟಿದ್ದೇನೋ ನಿಜ. ಆದರೆ ಸೈನ್ಯವನ್ನು ಮುನ್ನಡೆಸುವ ಅನುಭವವಾಗಲೀ ಮಿಲಿಟರಿ ಹಿನ್ನೆಲೆಯಾಗಲೀ
    > ಅವರಲ್ಲಿರಲಿಲ್ಲ. ಇದರಿಂದಾಗಿ ನೇತಾಜಿಯ ಅಜ್ಞೆ ಪಡೆದು ಭಾರತದೆ ಮೇಲೆ ಮುನ್ನುಗ್ಗಿದ ಐ.ಎನ್.ಎ ಸರಿಯಾದ ಮಿಲಿಟರಿ ಬ್ಯಾಕ್
    > ಅಪ್ ಮತ್ತು ಪ್ಲಾನ್ ಇಲ್ಲದೇ ಸೋಲುಣ್ಣುವಂತಾಯಿತು.
    ಕೇವಲ ಅನನುಭವದಿಂದ ಸೋಲಾಯಿತು ಎನ್ನುವುದು ಸರಿಯಲ್ಲ. ಪ್ರಕೃತಿಯೂ ನಮ್ಮವರಿಗೆ ಕೈಕೊಟ್ಟಿತು.
    ಮಳೆ ಮತ್ತು ಛಳಿಗಳಿಂದ ರಕ್ಷಣೆ ಇರಲಿಲ್ಲ. ಮತ್ತು ಇದರ ಪರಿಣಾಮವಾಗಿ ಅವರು ಸಾಂಕ್ರಾಮಿಕ ರೋಗಗಳಿಗೆ ತುತ್ತಾದರು.
    ಜೊತೆಗೆ ಭಾರತದ ಒಳಗಿದ್ದ ಕಾಂಗ್ರೆಸ್ ಏನಾದರೂ ಐ.ಎನ್.ಎ.ಗೆ ಸಹಾಯ ಮಾಡಿದ್ದಿದ್ದರೆ, ಇತಿಹಾಸದ ದಾರಿಯೇ ಬದಲಾಗಿರುತ್ತಿತ್ತು.
    ದುರದೃಷ್ಟವಶಾತ್ ಕಾಂಗ್ರೆಸ್ಸಿಗೆ ಸ್ವಾತಂತ್ರ್ಯ ಗಳಿಸುವುದಷ್ಟೇ ಮೊದಲ ಆದ್ಯತೆಯಾಗಿರಲಿಲ್ಲ. “ಕಾಂಗ್ರೆಸ್ಸಿನಿಂದಲೇ ಸ್ವಾತಂತ್ರ್ಯ ಬರಬೇಕು” ಮತ್ತು “ಕಾಂಗ್ರೆಸ್ಸಿನ ತತ್ವಗಳಿಂದಲೇ ಸ್ವಾತಂತ್ರ್ಯ ಬರಬೇಕು” ಎನ್ನುವ ಹಠದಿಂದ ಐ.ಎನ್.ಎ.ಗೆ ಅದು ಸಹಾಯ ನೀಡಲಿಲ್ಲ.

    > ನೇತಾಜಿಯ ಈ ದುಡುಕಿನಿಂದಾಗಿ ನಲವತ್ತು ಸಾವಿರ ಸೈನಿಕರು ಪ್ರಾಣಕಳೆದುಕೊಂಡರು.
    ನೇತಾಜಿಯವರ ಸಾಹಸಕ್ಕೆ ಭಾರತದ ಒಳಗಿನಿಂದ ಕಾಂಗ್ರೆಸ್ ಸಹಕಾರ ನೀಡಿದ್ದರೆ ಭಾರತಕ್ಕೆ ಮೂರು ವರ್ಷ ಮೊದಲೇ ಸ್ವಾತಂತ್ರ್ಯ ಬಂದಿರುತ್ತಿತ್ತು. ಆದರೆ, ಆಗ ಕಾಂಗ್ರೆಸ್ಸಿನ ಸರಕಾರವಿರುತ್ತಿರಲಿಲ್ಲ, ನೆಹರೂ ಪ್ರಧಾನಿಯಾಗುತ್ತಿರಲಿಲ್ಲ.
    ನೇತಾಜಿಯವರಿಗೆ ಸಹಕಾರ ನೀಡುವುದಿರಲಿ, ಅವರನ್ನು ನೆಹರೂ ವಿರೋಧಿಸಿಬಿಟ್ಟರು.
    ಅಷ್ಟು ಮಾತ್ರವಲ್ಲ. ಸ್ವಾತಂತ್ರ್ಯ ಬಂದ ನಂತರದಲ್ಲಿ ಸೈನಿಕ ಕಾರ್ಯಾಲಯಗಳಲ್ಲೆಲ್ಲಾ ನೇತಾಜಿಯವರ ಭಾವಚಿತ್ರ ರಾರಾಜಿಸುತ್ತಿತ್ತು.
    ಹಾಗಿತ್ತು ಅವರ ಜನಪ್ರಿಯತೆ. ಇದನ್ನು ಸಹಿಸದ ನೆಹರೂ ಸರಕಾರ, “ನೇತಾಜಿಯವರ ಭಾವಚಿತ್ರ ಸೈನಿಕ ಕಾರ್ಯಾಲಯಗಳಲ್ಲಿ ಇರಕೂಡದು” ಎಂಬ ಸುತ್ತೋಲೆ ಕಳುಹಿಸಿ ಅದನ್ನು ತೆಗೆದು ಹಾಕಿಸಿತು. ಹಾಗಿತ್ತು ನೇತಾಜಿಯರ ಕುರಿತಾದ ನೆಹರೂ ಮತ್ತು ಕಾಂಗ್ರೆಸ್ಸಿನ ವೈರತ್ವ!!

    ಮತ್ತು ವಿಭಜನೆಗೆ ಕಾಂಗ್ರೆಸ್ ಒಪ್ಪಿಕೊಂಡದ್ದರಿಂದ ಹಲವು ಲಕ್ಷ ಜನರ ಮಾರಣಹೋಮವಾಯಿತು.
    ಅದರ ಹತ್ತುಪಟ್ಟು ಜನ ಮನೆ-ಮಠ ಕಳೆದುಕೊಂಡರು, ನಿರಾಶ್ರಿತರಾದರು.
    ಹೆಂಗಸರ, ಮಕ್ಕಳ ಅಪಹರಣ ಅತ್ಯಾಚಾರಗಳಾದವು.
    ಇದೆಲ್ಲವೂ “ಅಹಿಂಸೆ”ಯಿಂದ ಸ್ವಾತಂತ್ರ್ಯ ಗಳಿಸಿದ ರೀತಿಯೇ ಅಲ್ಲವೇ?
    ನೀವು “ನೇತಾಜಿಯ ಈ ದುಡುಕಿನಿಂದಾಗಿ ನಲವತ್ತು ಸಾವಿರ ಸೈನಿಕರು ಪ್ರಾಣಕಳೆದುಕೊಂಡರು” ಎಂದು ಹೇಳಬಹುದಾದರೆ,
    ನಾವು, “ಗಾಂಧಿ ಮತ್ತು ನೆಹರೂ ಅವರ ದುಡುಕಿನಿಂದಾಗಿ ಲಕ್ಷಂತರ ಜನ ಅಮಾಯಕರು ಪ್ರಾಣ ಕಳೆದುಕೊಂಡರು” ಎಂದು ಹೇಳುವುದರಲ್ಲಿ ತಪ್ಪೇನಿಲ್ಲ ಎನಿಸುತ್ತದೆ.
    ಸ್ವಾತಂತ್ರ್ಯ ಗಳಿಸಿದ್ದು ತನ್ನ “ಅಹಿಂಸೆ”ಯ ನೀತಿಯ ಫಲ ಎನ್ನುವುದಾದರೆ, ಅದರ ಪರಿಣಾಮ ಕೂಡ ಅದರ ಫಲವೇ ಎನ್ನುವುದಕ್ಕೆ ಇತಿಹಾಸವೇ ಸಾಕ್ಷಿ!

    > ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ನೇತಾಜಿಯ ಐ.ಎನ್.ಎ ಗೆದ್ದಿದ್ದಲ್ಲ. ಅವನ್ನು ಗೆದ್ದಿದ್ದು ಜಪಾನ್ ದೇಶದ ಸೈನ್ಯ.
    > ನೇತಾಜಿಯ ನಾಯಕತ್ವದ ಗುಣ ಮತ್ತು ಚಾರ್ಮ್ ಗೆ ಮನಸೋತು ಜಪಾನ್ ಸರ್ಕಾರ ಭಾರತಕ್ಕೆ ನೀಡಿದ ಉಡುಗೊರೆಗಳು ಅವು!
    ಜಪಾನ್ ಸೈನ್ಯದ ಸಹಾಯ ತೆಗೆದುಕೊಂಡೊಡನೆಯೇ ಅದು ಜಪಾನಿನ ಗೆಲುವು ಹೇಗಾಗಿಬಿಡುತ್ತದೆ?
    ನಿಜಕ್ಕೂ ಜಪಾನ್ ಸೈನ್ಯವೇ ಆ ಸ್ಥಳಗಳನ್ನು ಗೆದ್ದು ಭಾರತಕ್ಕೆ ಉಡುಗೊರೆ ಕೊಟ್ಟದ್ದಕ್ಕೆ ಐತಿಹಾಸಿಕ ಆಧಾರವಿದ್ದರೆ ದಯವಿಟ್ಟು ಒದಗಿಸಬಹುದೇ? ನಾನಂತೂ ಯಾವುದೇ ಇತಿಹಾಸ ಗ್ರಂಥಗಳಲ್ಲಿ ನಿಮ್ಮ ಈ ವಾದವನ್ನು ಸಮರ್ಥಿಸುವ ದಾಖಲೆಗಳನ್ನು ಓದಿಲ್ಲ!

    > ಕೊನೆಗೆ ಗೆದ್ದಿದ್ದು ಗಾಂಧಿಜಿ ನಡೆದ ದಾರಿಯೇ! ಸತ್ಯ ಅಹಿಂಸೆಯಲ್ಲದೇ ಬೇರೆ ಯಾವ ಅಸ್ತ್ರಗಳೂ ಬ್ರಿಟಿಷರ ಬುಡ ಅಲ್ಲಾಡಿಸಲು
    > ಸಾಧ್ಯವಾಗಲಿಲ್ಲ. ಇದು ಕಣ್ಣೆದುರಿಗೇ ಕಾಣುವ ಐತಿಹಾಸಿಕ ಸತ್ಯ.
    ಇದು ನಿಮ್ಮ ಊಹೆಯಷ್ಟೇ! ನಿಮ್ಮ ಹಿಂದಿನ ಚರ್ಚೆಯಲ್ಲಿ ನೀಡಿದ ಉತ್ತರವನ್ನೇ ಇಲ್ಲಿ ನಕಲಿಸುತ್ತಿದ್ದೇನೆ.
    ಭಾರತಕ್ಕೆ ಸ್ವಾತಂತ್ರ್ಯ ಸಿಗಲು ಪ್ರಮುಖ ಕಾರಣವೇನು?
    ೧೯೪೨ರ ಕ್ವಿಟ್ ಇಂಡಿಯಾ ಚಳುವಳಿ ವಿಫಲವಾಗಿತ್ತು. ಸುಭಾಷರ ಸೈನ್ಯ ಯುದ್ಧದಲ್ಲಿ ಸೋತಿತ್ತು.
    ೧೯೪೬-೪೭ರಲ್ಲಿ ಯಾವುದೇ ಚಳುವಳಿ ನಡೆಯಲಿಲ್ಲ.
    ಹೀಗಿರುವಾಗ ಬ್ರಿಟಿಷರು ಸ್ವಾತಂತ್ರ್ಯ ಏಕೆ ನೀಡಿದರು?
    ೧೯೪೮ರಲ್ಲಿ ನೀಡುವೆವೆಂದು ಹೇಳಿದ್ದ ಸ್ವಾತಂತ್ರ್ಯವನ್ನು ಒಂದು ವರ್ಷ ಮೊದಲೇ – ಅಂದರೆ ೧೯೪೭ರಲ್ಲೇ ಆತುರಾತುರದಿಂದ ನೀಡಿಬಿಟ್ಟರು. ಅವರಿಗೇಕೆ ಸ್ವಾತಂತ್ರ್ಯ ನೀಡಲು ಇದ್ದಕ್ಕಿದ್ದಂತೆ ಇಷ್ಟು ಅವಸರಕ್ಕಿಟ್ಟುಕೊಂಡಿತು?
    ಇದರ ಕುರಿತಾಗಿ ತಿಳಿಯಲು, ಈ ಕೆಳಗಿನ ವಾಕ್ಯಗಳನ್ನು ಓದಿರಿ. ನಾನು ಇದನ್ನು ಬೇರಾವುದೋ ಚರ್ಚೆಯಲ್ಲಿ ಬರೆದದ್ದು ಮತ್ತು ಅದನ್ನು ಕನ್ನಡಕ್ಕೆ ಅನುವಾದ ಮಾಡಲು ಪುರುಸೊತ್ತಿಲ್ಲ. ಹೀಗಾಗಿ ಆಂಗ್ಲ ಭಾಷೆಯಲ್ಲೇ ನೀಡುತ್ತಿದ್ದೇನೆ. ಇದನ್ನು ಓದಿದ ನಂತರ, ಸ್ವಾತಂತ್ರ್ಯ ಗಳಿಸುವಲ್ಲಿ ಗಾಂಧೀಜಿಯವರ ಪಾತ್ರದ ಕುರಿತು ಮನದಟ್ಟಾಗುತ್ತದೆ:
    http://www.ihr.org/jhr/v03/v03p407_Borra.html – This page is from the “Institute of Historical Review”.
    In this read the last section – it talks about R.C.Majumdar’s book and also a conversation between Clement Attlee and P.B.Chakrabarty (he was the chief justice of Culcutta High Court and also worked as governer or West Bengal).
    http://www.tribuneindia.com/2006/20060212/spectrum/main2.htm – This talks about the revolt in the Navy famously called as RIN Mutiny (RIN – Royal Indian Navy).
    Here is the interesting piece ascribed to P.B.Chakrabarty:
    You have fulfilled a noble task by persuading Dr. Majumdar to write this history of Bengal and publishing it … In the preface of the book Dr. Majumdar has written that he could not accept the thesis that Indian independence was brought about solely, or predominantly by the non-violent civil disobedience movement of Gandhi. When I was the acting Governor, Lord Atlee, who had given us independence by withdrawing the British rule from India, spent two days in the Governor’s palace at Calcutta during his tour of India. At that time I had a prolonged discussion with him regarding the real factors that had led the British to quit India. My direct question to him was that since Gandhi’s “Quit India” movement had tapered off quite some time ago and in 1947 no such new compelling situation had arisen that would necessitate a hasty British departure, why did they have to leave? In his reply Atlee cited several reasons, the principal among them being the erosion of loyalty to the British Crown among the Indian army and navy personnel as a result of the military activities of Netaji. Toward the end of our discussion I asked Atlee what was the extent of Gandhi’s influence upon the British decision to quit India. Hearing this question, Atlee’s lips became twisted in a sarcastic smile as he slowly chewed out the word, “m-i-n-i-m-a-l!”
    The above has been published in: Majumdar, R. C., Jibanera Smritideepe, Calcutta, General Printers and Publishers, 1978, pp. 229-230

    > ಆದರೆ ಗಾಂಧಿಜಿಯನ್ನು ನಿಂದಿಸಿ ತಮ್ಮ ಬೇಳೆಯನ್ನು ಬೇಯಿಸಿಕೊಳ್ಳಲು ಆರೆಸ್ಸೆಸ್ಸಿಗರು ಹೆಣೆದ ಕಥೆ ಗಾಂಧಿಜಿ ಸುಭಾಷ್ ಚಂದ್ರ
    > ಭೊಸ್ ರನ್ನು ತುಳಿದ ಕಥೆ!
    > ಪ್ರತಿ ಲೇಖನಕ್ಕೂ ಅನೇಕ ಪುಸ್ತಕಗಳು, ಪತ್ರಗಳು ಹಾಗೂ ದಾಖಲೆಗಳು ನನಗೆ ಆಕರಗಳು.
    > ಪ್ರತಿ ಪ್ರಶ್ನೆಗೂ ಸಮರ್ಪಕ ಉತ್ತರ ದೊರಕಿಸಿಕೊಂಡು ಇಲ್ಲಿ ಬರೆಯುತ್ತೇನೆ. ಯಾವುದೊ ಒಂದು ಪುಸ್ತಕ ಓದಿ ನಾನು ಈ
    > ಅಭಿಪ್ರಾಯಗಳಿಗೆ ಬಂದಿಲ್ಲ.
    ನೀವು ಹೇಳಿದಂತೆ, ನಿಮ್ಮ ಪ್ರತಿ ಬರಹಕ್ಕೂ ಆಧಾರವಿದ್ದು, ನಿಮ್ಮದೇ ಅಭಿಪ್ರಾಯ ರೂಪಿಸಿಕೊಂಡಿದ್ದರೆ, ಆರೆಸ್ಸೆಸ್ಸಿಗರ ಕುರಿತಾಗಿ ನೀವು ಬರೆದಿರುವುದಕ್ಕೆ ಆಧಾರಗಳನ್ನು ದಯವಿಟ್ಟು ತಿಳಿಸಬಹುದೇ? ಆಧಾರಗಳೆಂದರೆ, ಯಾರೋ ಬರೆದ ಅಭಿಪ್ರಾಯಗಳ ನಕಲಲ್ಲವೆಂದು ನಿಮಗೆ ನಾನು ಹೇಳಿಕೊಡುವ ಆವಶ್ಯಕತೆಯಿಲ್ಲವೆಂದು ಭಾವಿಸುತ್ತೇನೆ.
    ನಿಮ್ಮ ಲೇಖನದಲ್ಲಿ ನೀವು ತಿಳಿಸಿರುವ: “ಗಾಂಧಿಜಿಗೆ ನೆಹರೂರನ್ನು ಪ್ರಧಾನಿಯನ್ನಾಗಿ ಮಾಡಲು ಯಾವ ಕಾರಣಗಳೂ ಇರಲಿಲ್ಲ.”
    ತರಹವೇ ಆರೆಸ್ಸೆಸ್ಸಿಗೂ ಗಾಂಧೀಜಿಯವರ ಕುರಿತಾಗಿ ಕಪೋಲಕಲ್ಪಿತ ಕಥೆಗಳನ್ನು ಹುಟ್ಟುಹಾಕುವ ಆವಶ್ಯಕತೆಯಿಲ್ಲವೆನ್ನುವುದು ನನ್ನ ಅಭಿಪ್ರಾಯ. ಆರೆಸ್ಸೆಸ್ ಕುರಿತಾಗಿ ಯಾರಾದರೂ ಈ ರೀತಿಯ ಕಲ್ಪಿತ ಕಥೆಗಳನ್ನು ಕಟ್ಟುತ್ತಿದ್ದರೆ ಅದು ದುರುದ್ದೇಶದಿಂದಲೇ ಇರಬೇಕು!

    ಉತ್ತರ
    • ಮಹೇಶ ಪ್ರಸಾದ ನೀರ್ಕಜೆ's avatar
      ಮಹೇಶ ಪ್ರಸಾದ ನೀರ್ಕಜೆ
      ಮಾರ್ಚ್ 14 2011
    • jayanna's avatar
      jayanna
      ಮಾರ್ಚ್ 14 2011

      Nilume ADMIN, I request you to DELETE the previous 2 comments, Sorry they were not aligned properly.
      —————————————————————————————-
      >> the principal among them being the erosion of loyalty to the British Crown among the Indian army and
      >> navy personnel as a result of the military activities of Netaji
      .
      .
      Would like to add one more point here. After world war 2.
      “[WIKI] The United Kingdom ended the war economically exhausted by the war effort, , it was in a state of economic ruin & continued relative economic decline for decades. [/WIKI]”
      .
      .
      With the above piece of information, any common man with a minimum IQ could come to a radical conclusion about what forced British to leave India.

      Thank you.

      ಉತ್ತರ
      • Narendra Kumar.S.S's avatar
        Narendra Kumar.S.S
        ಮಾರ್ಚ್ 14 2011

        > Would like to add one more point here.
        > After world war 2.
        > “[WIKI] The United Kingdom ended the war
        > economically exhausted by the war effort,
        > it was in a state of economic ruin &
        > continued relative economic decline for
        > decades. [/WIKI]”
        ನಿಜ. ದ್ವಿತೀಯ ಮಹಾಯುದ್ಧದ ನಂತರ ಬ್ರಿಟನ್ ಆರ್ಥಿಕವಾಗಿ ದುರ್ಬಲಗೊಂಡಿತು. ಭಾರತದೊಳಗೆ ಐ.ಎನ್.ಎ. ಬಂಧಿಗಳ ವಿಚಾರಣೆಗೆ ಪ್ರಭಲ ವಿರೋಧ ವ್ಯಕ್ತವಾಯಿತು. ನೌಕಾದಳ ಬಂಡೆದ್ದಿತು. ಭಾರತೀಯ ಸೈನ್ಯದ ಮೇಲೆ ಬ್ರಿಟಿಷರ ಹತೋಟಿ ತಪ್ಪಿತು. ಇದೆಲ್ಲದರ ಪರಿಣಾಮವಾಗಿ ಬ್ರಿಟಿಷರು ಇಲ್ಲಿಂದ ಕಾಲ್ತೆಗೆದರು.
        ಇಲ್ಲದಿದ್ದರೆ, ಅವರಿಗೆ ಇಲ್ಲಿಂದ ಕಾಲ್ತೆಗೆಯುವ ಪ್ರಮೇಯವೇ ಇರಲಿಲ್ಲ.
        ಇದನ್ನೇ ಯುದ್ಧದ ನಂತರ ಬ್ರಿಟನ್ನಿನ ಪ್ರಧಾನಿಯಾದ ಕ್ಲೆಮೆಂಟ್ ಆಟ್ಲೀ ಅವರು ವಿರೋಧ ಪಕ್ಷದ ನಾಯಕ ವಿನ್ಸ್‌ಟನ್ ಚರ್ಚಿಲ್ ಅವರ ಪ್ರಶ್ನೆಗೆ ಅಲ್ಲಿನ ಪಾರ್ಲಿಮೆಂಟಿನಲ್ಲೂ ತಿಳಿಸಿದ್ದಾರೆ.

        ೧೯೪೨ರ ಕ್ವಿಟ್ ಇಂಡಿಯಾ ಚಳುವಳಿಯ ನಂತರ ಕಾಂಗ್ರೆಸ್ ಮತ್ಯಾವ ಚಳುವಳಿಯನ್ನೂ ನಡೆಸಿಲ್ಲ. ೧೯೪೨ರ ಚಳುವಳಿ ವಿಫಲಗೊಂಡದ್ದು ಎಲ್ಲರಿಗೂ ತಿಳಿದೇ ಇದೆ. ಹೀಗಿದ್ದ ಮೇಲೆ, ೧೯೪೭ರ ಸ್ವಾತಂತ್ರ್ಯ ಕಾಂಗ್ರೆಸ್ಸಿನ “ಅಹಿಂಸೆ”ಯಿಂದ ಬಂದದ್ದು ಎನ್ನುವುದು ಸತ್ಯದೂರದ ಮಾತು ಅಷ್ಟೇ.

        ಆದರೆ, ಸ್ವಾತಂತ್ರ್ಯಾನಂತರ ಬಂದ ನೆಹರೂ ಸರಕಾರಕ್ಕೆ, ತಾವು ಮಾತ್ರ ಸ್ವಾತಂತ್ರ್ಯಕ್ಕೆ ಹೋರಾಡಿದೆವೆಂದು ತಿಳಿಸಬೇಕಿತ್ತು. ಅದನ್ನೇ ಬಂಡವಾಳ ಮಾಡಿಕೊಂಡು ದೇಶವನ್ನು ಸದಾ ಕಾಲ ಆಳಬೇಕೆಂಬ ದುರಾಸೆಗೆ ಅದು ಬಿದ್ದಿತು. ಇದಕ್ಕಾಗಿ ಶಾಲಾ/ಕಾಲೇಜಿನ ಇತಿಹಾಸದ ಪಠ್ಯದ ತುಂಬ ಇದನ್ನೇ ತುಂಬಿಟ್ಟರು, ಜನರನ್ನು ನಂಬಿಸಿ ದೇಶವನ್ನು ದಶಕಗಳ ಕಾಲ ಆಳಿದರು, ದೇಶವನ್ನು ದೋಚಿದರು, ವಂಶಪಾರಂಪರ್ಯದ ಆಡಳಿತವನ್ನೇ ಸ್ಥಾಪಿಸಿಬಿಟ್ಟರು.

        ಇಂದು ಸತ್ಯವನ್ನು ತಿಳಿಸಿದರೂ ನಂಬದ ಸ್ಥಿತಿಗೆ ಬಂದು ತಲುಪಿದ್ದೇವೆ.

        ಉತ್ತರ
        • jayanna's avatar
          jayanna
          ಮಾರ್ಚ್ 15 2011

          Here is an advanced dynasty sycophant.
          “He called me an hour before… ”.

          ಉತ್ತರ
          • Narendra's avatar
            Narendra
            ಮಾರ್ಚ್ 15 2011

            ಜಯಣ್ಣ, ನೀವು ಬರೆದದ್ದು ನನಗೆ ಅರ್ಥವಾಗಲಿಲ್ಲ; ದಯವಿಟ್ಟು ಸ್ವಲ್ಪ ವಿವರಣೆ ನೀಡಬಹುದೇ?
            ಮತ್ತು ನಿಮ್ಮ ಪ್ರತಿಕ್ರಿಯೆಗಳನ್ನು ಕನ್ನಡದಲ್ಲೇ ಬರೆಯಲು ಪ್ರಯತ್ನಿಸಬಹುದೇ?

            ಉತ್ತರ
    • Adesh Kumar Gowda's avatar
      ಜುಲೈ 22 2011

      Some where I read that one of the British Officer said,
      We have not feared of Gandhi, We aren’t feared of Nehru, But feared of Netaji.
      I think because you interacted with only Gandhiji supporters you are totally felt in love with Gandhiji.

      >ಇನ್ನೊಂದು ವಿಷಯ! ಗಾಂಧಿಜಿಗೆ ನೆಹರೂರನ್ನು ಪ್ರಧಾನಿಯನ್ನಾಗಿ ಮಾಡಲು ಯಾವ ಕಾರಣಗಳೂ ಇರಲಿಲ್ಲ.
      ಇದೊಂದು ಅಪ್ಪಟ ಸುಳ್ಳು. ಸರ್ದಾರ್ ಪಟೇಲ್ ಅವರೇ ಅಂದು ಪ್ರಧಾನಿಯಾಗಲು ಎಲ್ಲಾ ಅರ್ಹತೆಯಿತ್ತು(ನೆಹರೂ ಗಿಂತಲೂ ಹೆಚ್ಚಾಗಿ) ಆದರೆ ಆದದ್ದೇ ಬೇರೆ.

      ಉತ್ತರ
    • Harish kumar's avatar
      Harish kumar
      ಆಕ್ಟೋ 11 2013

      nijakku naija kannadi idu…superb..nimma baravanige heege saagali

      ಉತ್ತರ
  4. ಮಹೇಶ ಪ್ರಸಾದ ನೀರ್ಕಜೆ's avatar
    ಮಹೇಶ ಪ್ರಸಾದ ನೀರ್ಕಜೆ
    ಮಾರ್ಚ್ 14 2011

    ಒಳ್ಳೆಯ ಲೇಖನ. ಮೊದಲಿನಂತೆ ಗಾಂಧಿಯನ್ನು ತಾತ್ವಿಕವಾಗಿ ವಿರೋಧಿಸುವವರನ್ನು ಗುರಿಮಾಡಿ ಬರೆದಂತಿಲ್ಲ. ಅಂದು ಸುಭಾಷರಿಗೂ ಬಾಪೂರಿಗೂ ತಾತ್ವಿಕವಾದ ಅಭಿಪ್ರಾಯಬೇಧಗಳಿದ್ದಂತೆಯೇ ಇಂದಿಗೂ ಅದೇ ರೀತಿ ಭಿನ್ನಾಭಿಪ್ರಾಯ ಹೊಂದಿದ ಜನರಿರುತ್ತಾರೆ. ಗಾಂಧಿಯ ರಾಜಕೀಯ ನಿರ್ಧಾರಗಳು ತಪ್ಪಾಗಿದ್ದವು ಎಂದು ಕೆಲವರು ವಾದಿಸಿದ ಮಾತ್ರಕ್ಕೆ ಅವರನ್ನು ಗಾಂಧಿ ವಿರೋಧಿ ಹಾಗೆ ಹೀಗೆ ಎಂದು ಕೂಗಾಡಿ ಮೈಮೇಲೆ ಬಿದ್ದಿದ್ದು ಈ ಮೊದಲಿನ ಬರಹಗಳಲ್ಲಿ ಎದ್ದು ಕಾಣುತ್ತಿತ್ತು. ಅದು ಈಗ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ.

    ಉತ್ತರ
  5. K S RAGHAVENDRA NAVADA's avatar
    ಮಾರ್ಚ್ 15 2011

    ಮಾನ್ಯ ಜಯಣ್ಣರೇ,
    ನನಗೆ ಇತಿಹಾಸ ತಿಳಿದಿಲ್ಲವೆ೦ದಲ್ಲ! ಆದರೆ ನಾನು ನನ್ನ ಪ್ರತಿಕ್ರಿಯೆಯಲ್ಲಿ ಸೂಕ್ಷ್ಮವಾಗಿಯೇ ತಿಳಿಸಿದ್ದೇನೆ.ಅವರು ಬೊಟ್ಟು ಮಾಡಿರುವ ಯಾವೊದೊ೦ದರ ಬಗ್ಗೆಯೂ ನಾನು ಸೊಲ್ಲೆತ್ತಿಲ್ಲ! ಏಕೆ೦ದರೆ ನಾನೀಗ ಎರಡೂ ಬಗೆಯವರ ವಾದಗಳಲ್ಲಿ ಯಾವುದು ಸರಿ ಮತ್ತು ಯಾವುದು ತಪ್ಪು ಎ೦ಬುದನ್ನು ಇನ್ನೂ ಕೂಲ೦ಕುಷವಾಗಿ ಮನಗಾಣಬೇಕಾಗಿದೆ.ಸುಭಾಷರೊ೦ದಿಗೆ ವೈಯಕ್ತಿಕವಾಗಿ ಗಾ೦ಧೀಜಿಯವರಿಗೆ ಭಿನಾಅಭಿಪ್ರಾಯಗಳಿದ್ದರೂ, ಗಾ೦ಧೀಜಿಯವರಿಗೆ ನೆಹರೂರವರ ಮೇಲೆ ವೈಯಕ್ತಿಕ ಹತೋಟಿಯಿರಲಿಲ್ಲ ಅಥವಾ ಗಾ೦ಧೀಜಿಯವರ ಮಾನಸ ಪುತ್ರನೆ೦ದೇ ನೆಹರೂ ಗುರುತಿಸಲ್ಪಟ್ಟಿದ್ದರು! ಆದರೂ ಇತಿಹಾಸದಲ್ಲಿ ಸ್ವಾತ೦ತ್ರ್ಯ ಸ೦ಗ್ರಾಮದ ನ೦ತರ ಕಾ೦ಗ್ರೆಸ್ಸನ್ನು ವಿಸರ್ಜಿಸಬೇಕೆ೦ಬ ಗಾ೦ಧೀಜಿಯವರ ನಿಲುಮೆಗೆ ಸ್ವತ: ಕಾ೦ಗ್ರೆಸ್ ನಲ್ಲಿಯೇ ಸಿಕ್ಕಾಪಟ್ಟೆ ವಿರೋಧಗಳಿದ್ದವು, ಆ ವಿರೋಧದ ಭರಪೂರ ಲಾಭವೆತ್ತಿದ್ದು ನೆಹರೂ ಅಷ್ಟೇ! ಸ್ವಾತ೦ತ್ರ್ಯ ಸ೦ಗ್ರಾಮದ ಕೊನೆ-ಕೊನೆಯಲ್ಲಿ ಗಾ೦ಧೀಜಿ ಕಾ೦ಗ್ರೆಸ್ ಹಾಗೂ ನೆಹರೂರವರತ್ತ ತೀವ್ರ ಅಸಹನೆಯನ್ನು ತಾಳಿದ್ದರೆ೦ಬುದನ್ನು ರಾಮಚ೦ದ್ರ ಗುಹಾರವರ ಪುಸ್ತಕದಲ್ಲಿ ( “ಬಾಪೂಜಿ ನ೦ತರದ ಭಾರತ“) ನಾನು ಓದಿದ್ದೇನೆ.ಪರಿಸ್ತಿತಿಯ ಕೈಗೊ೦ಬೆಯಾಗಿ ಗಾ೦ಧೀಜಿ ನೆಹರೂರವರನ್ನುಪ್ರಧಾನಿಯನ್ನಾಗಿ ಮಾಡಲು ಸರ್ದಾರ ಮನವೊಲಿಸಬೇಕಾಯಿತೆ೦ಬುದನ್ನೂ ಅವರು ಅಲ್ಲಿ ದಾಖಲಿಸಿದ್ದಾರೆ.
    ನೀರ್ಕಜೆಯವರೇ,
    ಅದಕ್ಕೇ ನಾನು ನನ್ನ ಪ್ರತಿಕ್ರಿಯೆಯಲ್ಲಿ ಸಮಚಿತ್ತತೆಯ ಲೇಖನವೆ೦ದಿದ್ದು! ಕೇವಲ ನೇತಾಜಿಯವರಿಗಾಗಿ ನಾವು ಗಾ೦ಧೀಜಿಯವರನ್ನು ವೈಯಕ್ತಿಕವಾಗಿ ನಿ೦ದಿಸದೇ, ಯಾ ಗಾ೦ಧೀಜಿಯವರಿಗಾಗಿ ಸುಭಾಷರನ್ನು ವೈಯಕ್ತಿಕವಾಗಿ ನಿ೦ದಿಸದೇ, ಗಮನಿಸಿದರೆ ಇಬ್ಬರೂ ಅವರವರ ಕೇಷತ್ರದಲ್ಲಿ ಮಹಾನರೆ೦ದೇ ಅರಿಯುತ್ತೇವೆ!
    ನಮಸ್ಕಾರಗಳೊ೦ದಿಗೆ,
    ನಿಮ್ಮವ ನಾವಡ.

    ಉತ್ತರ
    • Narendra Kumar.S.S's avatar
      Narendra Kumar.S.S
      ಮಾರ್ಚ್ 15 2011

      ಪ್ರಾಯಶಃ ಈ ಚರ್ಚೆಗಳಲ್ಲಿ ಒಂದು ವಿಷಯದ ಕುರಿತು ನಾವೆಲ್ಲರೂ ತಿಳಿದಿರಬೇಕು.
      ಇದು ವೈಯಕ್ತಿಕ ಮಟ್ಟದ ಚರ್ಚೆಯಲ್ಲ.
      ಇಲ್ಲಿ ಗಾಂಧೀಜಿಯವರನ್ನಾಗಲೀ ಅಥವಾ ಸುಭಾಷರನ್ನಾಗಲೀ ನಾವು ದೊಡ್ಡವರನ್ನಾಗಿಯೋ ಇಲ್ಲವೇ ಸಣ್ಣವರನ್ನಾಗಿಯೋ ಮಾಡುವ ಆವಶ್ಯಕತೆಯಿಲ್ಲ.
      ಅವರವರ ಕೃತ್ಯಗಳಿಂದ ಅವರುಗಳು ಆ ಸ್ಥಾನವನ್ನು ಗಳಿಸಿಬಿಟ್ಟಿದ್ದಾರೆ.
      ಹೀಗಾಗಿ ಇದನ್ನು ಗಾಂಧೀಜಿಯವರ ಪರ, ಸುಭಾಷರ ವಿರೋಧ ಎಂದೋ ಅಥವಾ ಸುಭಾಷರ ಪರ, ಗಾಂಧೀಜಿಯವರ ವಿರೋಧವೆಂದೋ ತಿಳಿದರೆ, ಚರ್ಚೆಯ ಮುಖ್ಯ ವಿಷಯ ಗೌಣವಾಗಿಬಿಡುತ್ತದೆ.

      ಇತಿಹಾಸದಲ್ಲಿ ಬರುವ ವ್ಯಕ್ತಿಗಳ ಕುರಿತಾಗಿ ಚರ್ಚಿಸುವಾಗ, ಅವರ ಕುರಿತಾದ ನಮ್ಮ ವೈಯಕ್ತಿಕ ಭಾವನೆಗಳನ್ನು ಪಕ್ಕಕ್ಕಿಟ್ಟು, ವಸ್ತುನಿಷ್ಠವಾಗಿ ಅವಲೋಕಿಸಬೇಕು. ಇತಿಹಾಸದ ಬರಹಗಳ ಉದ್ದೇಶವೂ ವ್ಯಕ್ತಿಯೊಬ್ಬರನ್ನು ಎತ್ತರಕ್ಕೇರಿಸುವುದಕ್ಕಾಗಲೀ, ಅಥವಾ ಅಧಃಪಾತಕ್ಕಿಳಿಸುವುದಕ್ಕಾಗಲೀ ವಿನಿಯೋಗವಾಗಬಾರದು.
      ಇತಿಹಾಸವೆಂಬುದು ಸತ್ಯದ ತಳಹದಿಯ ಮೇಲೆ ನಿಂತಿರುವುದು. ಅಲ್ಲಿ ಸತ್ಯ ಮಾತ್ರ ಮುಖ್ಯ, ವ್ಯಕ್ತಿಗಳಲ್ಲ.
      ಎಷ್ಟೇ ದೊಡ್ಡ, ಮಹಾನ್ ವ್ಯಕ್ತಿ ತಪ್ಪು ಮಾಡಿದ್ದರೂ ಅದನ್ನು ಒಪ್ಪಿಕೊಳ್ಳಬೇಕಾಗಬಹುದು. ಮಹಾನ್ ವ್ಯಕ್ತಿ ಮಾಡಿದರೆಂದ ಮಾತ್ರಕ್ಕೆ ಸುಳ್ಳು ಸತ್ಯವಾಗಿಬಿಡುವುದಿಲ್ಲ. ಹಾಗೆಯೇ, ಎಷ್ಟೇ ನೀಚ ವ್ಯಕ್ತಿಯೇ ಆಗಿದ್ದರೂ, ಆತನು ಮಾಡಿದ ಉತ್ತಮ ಕೆಲಸಗಳು ಇರುತ್ತವೆ.

      ಇವನ್ನು ಮನಸ್ಸಿನಲ್ಲಿಟ್ಟುಕೊಂಡು ಚರ್ಚಿಸಿದರೆ ಉತ್ತಮ. ಇಲ್ಲದಿದ್ದರೆ, ಇತಿಹಾಸದ ಚರ್ಚೆ ವೈಯಕ್ತಿಕ ಮಟ್ಟದ ಚರ್ಚೆಯಾಗಿ, ವ್ಯರ್ಥವಾಗಿಬಿಡುವ ಅಪಾಯವಿದೆ.

      ಉತ್ತರ
  6. K S RAGHAVENDRA NAVADA's avatar
    ಮಾರ್ಚ್ 15 2011

    ksraghavendranavada :ಮಾನ್ಯ ಜಯಣ್ಣರೇ,ನನಗೆ ಇತಿಹಾಸ ತಿಳಿದಿಲ್ಲವೆ೦ದಲ್ಲ! ಸುಭಾಷರೊ೦ದಿಗೆ ವೈಯಕ್ತಿಕವಾಗಿ ಗಾ೦ಧೀಜಿಯವರಿಗೆ ಭಿನ್ನಾಭಿಪ್ರಾಯಗಳಿದ್ದರೂ, ಗಾ೦ಧೀಜಿಯವರಿಗೆ ನೆಹರೂರವರ ಮೇಲೆ ವೈಯಕ್ತಿಕ ಹತೋಟಿಯಿರಲಿಲ್ಲ ಅಥವಾ ಗಾ೦ಧೀಜಿಯವರ ಮಾನಸ ಪುತ್ರನೆ೦ದೇ ನೆಹರೂ ಗುರುತಿಸ ಲ್ಪಟ್ಟಿದ್ದರು! ಆದರೂ ಇತಿಹಾಸದಲ್ಲಿ ಸ್ವಾತ೦ತ್ರ್ಯ ಸ೦ಗ್ರಾಮದ ನ೦ತರ ಕಾ೦ಗ್ರೆಸ್ಸನ್ನು ವಿಸರ್ಜಿಸಬೇಕೆ೦ಬ ಗಾ೦ಧೀಜಿಯವರ ನಿಲುಮೆಗೆ ಸ್ವತ: ಕಾ೦ಗ್ರೆಸ್ ನಲ್ಲಿಯೇ ಸಿಕ್ಕಾಪಟ್ಟೆ ವಿರೋಧಗಳಿದ್ದವು, ಆ ವಿರೋಧದ ಭರಪೂರ ಲಾಭವೆತ್ತಿದ್ದು ನೆಹರೂ ಅಷ್ಟೇ! ಸ್ವಾತ೦ತ್ರ್ಯ ಸ೦ಗ್ರಾಮದ ಕೊನೆ-ಕೊನೆಯಲ್ಲಿ ಗಾ೦ಧೀಜಿ ಕಾ೦ಗ್ರೆಸ್ ಹಾಗೂ ನೆಹರೂರವರತ್ತ ತೀವ್ರ ಅಸಹನೆಯನ್ನು ತಾಳಿದ್ದರೆ೦ಬುದನ್ನು ರಾಮಚ೦ದ್ರ ಗುಹಾರವರ ಪುಸ್ತಕದಲ್ಲಿ ( “ಬಾಪೂಜಿ ನ೦ತರದ ಭಾರತ“) ನಾನು ಓದಿದ್ದೇನೆ.ಪರಿಸ್ತಿತಿಯ ಕೈಗೊ೦ಬೆಯಾಗಿ ಗಾ೦ಧೀಜಿ ನೆಹರೂರವರನ್ನು ಪ್ರಧಾನಿ ಯನ್ನಾಗಿ ಮಾಡಲು ಸರ್ದಾರ ಮನವೊಲಿಸಬೇಕಾಯಿತೆ೦ಬುದನ್ನೂ ಅವರು ಅಲ್ಲಿ ದಾಖಲಿಸಿದ್ದಾರೆ.ನೀರ್ಕಜೆಯವರೇ,ಅದಕ್ಕೇ ನಾನು ನನ್ನ ಪ್ರತಿಕ್ರಿಯೆಯಲ್ಲಿ ಸಮಚಿತ್ತತೆಯ ಲೇಖನವೆ೦ದಿದ್ದು! ಕೇವಲ ನೇತಾಜಿಯವರಿಗಾಗಿ ನಾವು ಗಾ೦ಧೀಜಿಯವರನ್ನು ವೈಯಕ್ತಿಕವಾಗಿ ನಿ೦ದಿಸದೇ, ಯಾ ಗಾ೦ಧೀಜಿಯವರಿಗಾಗಿ ಸುಭಾಷರನ್ನು ವೈಯಕ್ತಿಕವಾಗಿ ನಿ೦ದಿಸದೇ, ಗಮನಿಸಿದರೆ ಇಬ್ಬರೂ ಅವರವರ ಕ್ಷೇತ್ರದಲ್ಲಿ ಮಹಾನ ರೆ೦ದೇ ಅರಿಯುತ್ತೇವೆ!ನಮಸ್ಕಾರಗಳೊ೦ದಿಗೆ,ನಿಮ್ಮವ ನಾವಡ.

    ಉತ್ತರ
  7. Nagaraja B.G's avatar
    Nagaraja B.G
    ಏಪ್ರಿಲ್ 3 2013

    ಮಾನ್ಯ ಲೇಖಕರೆ ಮತ್ತು ಲೇಖನಕ್ಕೆ ತಮ್ಮ ಅನಿಸಿಕೆಗಳನ್ನು ನೀಡಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಲೇಬೇಕು. ಇತಿಹಾಸದ ಹಲವಾರು ಮಗ್ಗುಲುಗಳನ್ನು ಬಹಳ ಅರ್ಥಬದ್ದವಾಗಿ ವಿವರಗಳನ್ನು ನೀಡಿರುವುದು ಶ್ಲಾಘನೀಯ. ಇಲ್ಲಿ ನಾವೆಲ್ಲರೂ ಗಾಂಧೀಜಿಯವರ ಸರಿಯಿಲ್ಲವೆಂದೋ ಅಥವಾ ಮತ್ತೀನ್ನಾರೋ ವ್ಯಕ್ತಿಗಳು ಮಹಾ ವ್ಯಕ್ತಿಗಳೆಂದು ಬಣ್ಣಿಸುವ ಗುಂಪುಗಳು ಬೆಳೆಯುತ್ತಿರುವುದು ನಿಜಕ್ಕೂ ಕೆಟ್ಟ ರೀತಿಯ ಬೆಳವಣಿಗೆ ಎಂದು ಹೇಳಬಹುದು. ಅವರೆಲ್ಲರೂ ಮಹಾತ್ಮರೇ ಇದರಲ್ಲಿ ಯಾವುದೇ ಅನುಮಾನ ಇಲ್ಲ. ಇಡೀ ಪ್ರಪಂಚಕ್ಕೆ ಮಾದರಿಯಾದ ಮತ್ತು ಸ್ವಾರಸ್ಯವನ್ನು ಹೊಂದಿರುವ ಸ್ವಾತಂತ್ರ್ಯ ಸಂಗ್ರಾಮಗಳಲ್ಲಿ ಭಾರತ ಮೊದಲಿಗೆ ನಿಲ್ಲುತ್ತದೆ. ಇದಕ್ಕೆ ಗಾಂಧೀಜೀಯವರ ಕೊಡುಗೆಯಿಂದ ಮೊದಲಗೊಂಡು ಪ್ರತಿಯೊಬ್ಬರದೂ ಪ್ರಮುಖವೇ… ಸ್ವಾತಂತ್ರ್ಯ ಸಂಗ್ರಾಮದಲ್ಲಿ ಯಾವುದೇ ದೃಷ್ಟಿಯಿಂದ ನೋಡಿದರೂ ಒಬ್ಬ ಪ್ರಾಮಾಣಿಕ, commitment ಇರುವ ವ್ಯಕ್ತಿಗಳಲ್ಲಿ ಮಹಾತ್ಮ ಗಾಂಧೀಜಿಯವರು ಆದರ್ಶವಾಗುತ್ತಾರೆ. ಮಾರ್ಗದರ್ಶನ, ನಿಲುವುಗಳ ಬಗ್ಗೆ ಮಾತನಾಡುವವರು ಹಲವರಿದ್ದಾರೆ ಆದರೆ ಅವುಗಳನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡು ತೋರಿಸುವವರು ಕೆಲವರೇ ಅಂತಹವರಲ್ಲಿ ಗಾಂಧೀಜೀಯವರು ಒಬ್ಬರು.

    ಉತ್ತರ

Leave a reply to Narendra Kumar.S.S ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments