ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 16, 2011

1

ಎರಡು ಕೋಟಿಗೆಷ್ಟು ಮನೆ ಕಟ್ಟಿಸಬಹುದು ಯಡ್ಯೂರಪ್ಪನವ್ರೇ?

‍ರಾಕೇಶ್ ಶೆಟ್ಟಿ ಮೂಲಕ

– ರಾಕೇಶ್ ಶೆಟ್ಟಿ

ಸೂಪರ್ ಮೂನ್ ಎಫ಼ೆಕ್ಟ್ ಬಗ್ಗೆ ಮಾತಾಡುತ್ತ ಏನೋ ವಿಪತ್ತು ಕಾದಿದೆಯಂತೆ ಮಾರಾಯ ಅಂತ ಗುಸು ಗುಸು ಶುರುವಾಗಿತ್ತು,ಊಟಕ್ಕೆ ಹೋಗಿ ಬಂದವ ತಾಜ ಸುದ್ದಿಯೇನು ಅಂತ ನೋಡ ಹೋಗಿ ಮೈ ಒಮ್ಮೆ ತಣ್ಣಗಾಯಿತು.ಜಪಾನ್ನಲ್ಲಿ ಸುನಾಮಿಯೆದ್ದಿದೆ! ಕ್ಷಣಕಾಲ ಅವಕ್ಕಾದೆ,ನಂತರ ಗೂಗಲ್ ಮಹರಾಜನ ಮೊರೆ ಹೋಗಿ ವಿಡಿಯೋ ನೋಡಿ ದಂಗಾಗಿ ಹೋದೆ,ಅದಿನ್ನೆಂತ ರಾಕ್ಷಸ ಅಲೆಗಳು ಅವು!ತಮ್ಮ ಹರಿವಿನಳೊಗೆ ಸಿಕ್ಕಿದ್ದನ್ನೆಲ್ಲ ಆಪೋಷನ ತೆಗೆದುಕೊಳ್ಳುತ್ತ ಹೊರಟಿತಲ್ಲ,ಅದಿನ್ನೆಷ್ಟು ಸಾವಿರ ಜನರ ಬದುಕು ಮೂರಾ ಬಟ್ಟೆಯಾಯಿತು,ಜಪಾನ್ ಅನ್ನುವ ಸ್ವಾಭಿಮಾನಿಗಳ ದೇಶಕ್ಕೆ ಇದೊಂದು ದೊಡ್ಡ ಪೆಟ್ಟು.ಈ ಆಘಾತದಿಂದ ಜಪಾನ್ ಸಹೋದರರು ಎದ್ದು ಬರಲಿ,ಮತ್ತೆ ಜಪಾನ್ ಗೆಲ್ಲಲೇಬೇಕು ಇದು ಬಹುಷಃ ಬಹುತೇಕರ ಪ್ರಾರ್ಥನೆ.

ಪ್ರವಾಹ! … ಸುನಾಮಿಯ ರಕ್ಕಸ ಅಲೆಗಳನ್ನ ನೋಡಿದಾಗ ನನಗೆ ತಟ್ಟನೆ ನೆನಪಾಗಿದ್ದು, ಎರಡು ವರ್ಷದ ಹಿಂದೆ ಬೆಂಗಳೂರಿನಲ್ಲಿ ರಾತ್ರೋ ರಾತ್ರಿ ಸುರಿದ ಮಳೆಯಲ್ಲಿ ಸಿಕ್ಕಿ ಹಾಕಿಕೊಂಡು almost ಎದೆಯ ಹತ್ತಿರ ಹರಿದು ಬರುತಿದ್ದ ನೀರಿನಲ್ಲಿ ನಾವು ಪಟ್ಟ ಪಾಡು! ಮತ್ತು ಆಗ ನೀರಿನ ರಭಸಕ್ಕೆ ಪಲ್ಸರ್ ಬೈಕಿನಲ್ಲಿ ತೇಲಿಕೊಂಡು ಬಂದ ಆಸಾಮಿಯೊಬ್ಬ ಸಾವರಿಸಿಕೊಂಡು ಹೇಳಿದ ಮಾತು!

“‘ಸರ್,ಈ ತರ ಟೀ.ವಿಯಲ್ಲಿ ನೋಡಿದ್ದೇ,ಅನುಭವಿಸಿರಲಿಲ್ಲ.ಈ ಮಳೆಗೆ ಹಿಂಗೆ ನಾವು ಚಡಪಡಿಸ್ತ ಇದ್ದಿವೀ, ಇನ್ನ ಪಾಪ ಉತ್ತರ ಕರ್ನಾಟಕದ ಪ್ರವಾಹದಲ್ಲಿ ಸಿಕ್ಕಿಕೊಂಡ ಜನರ ಕತೆ ಹೇಗಾಗಿರಬೇಡ”. ಅವನಂದ ಮಾತು ನಿಜ ಅಂತ ಅನ್ನಿಸಿತ್ತು.

ಹತ್ತಿರ ಹತ್ತಿರ ಎರಡು ವರ್ಷಗಾಳಾಯಿತಲ್ವಾ! ನೆರೆ ಪ್ರವಾಹಕ್ಕೆ ಸಿಕ್ಕಿ ನಮ್ಮ ಉತ್ತರ ಕರ್ನಾಟಕದ ಜನ ಬೀದಿಗೆ ಬಿದ್ದು.ಯಡ್ಯೂರಪ್ಪ ಖುದ್ದು ಬೀದಿಗಿಳಿದು ವಂತಿಗೆ ಸಂಗ್ರಹಿಸಿದರು.ಶ್ರೀಮಂತರಿಂದ ಹಿಡಿದು ದಿನಗೂಲಿ ಮಾಡಿ ಹೊಟ್ಟೆ ಹೊರೆದುಕೊಳ್ಳುವ ಮನಸ್ಸುಗಳು ಮಿಡಿದವು,ತಮ್ಮ ಪಾಲಿನ ಅನ್ನದಲ್ಲಿ ಒಂದು ತುತ್ತು ಅವರಿಗೂ ಇರಲಿ ಅಂತಲೇ ಯೋಚಿಸಿದವರು ಎಲ್ಲರು.ಅತ್ತ ಸಂಘ ಸಂಸ್ಥೆಗಳೂ ಮಾಧ್ಯಮದವ್ರು ಎಲ್ಲರೂ ಕೈ ಜೋಡಿಸಿದರು.ಆಗ ತೋರಿದ ಉತ್ಸಾಹ ನೋಡಿದರೆ ಒಂದು ವರ್ಷದೊಳಗೆ ನಮ್ಮ ಉತ್ತರ ಕರ್ನಾಟಕದ ಮಂದಿ ಮಳೆರಾಯನಿಗೆ ಸೆಡ್ಡು ಹೊಡೆದು ಬದುಕು ಕಟ್ಟಿಕೊಳ್ಳುತಾರೆ ಮತ್ತವರಿಗೆ ಸ್ವಾಭಿಮಾನದ ಬದುಕನ್ನ ಯಡ್ಯೂರಪ್ಪನವರ ಸರ್ಕಾರ ಕಟ್ಟಿಕೊಡುತ್ತದೆ ಅಂತ ಆಶಾಭಾವವು ಇತ್ತು.ಆದರೆ ಹಾಗಂದುಕೊಂಡ ಕೆಲದಿನಗಳಲ್ಲೇ ಬಿಜೆಪಿಯಲ್ಲಿ ಆಂತರಿಕ ಭಿನ್ನಮತ ಭುಗಿಲೆದ್ದು, ಸಂತ್ರಸ್ತರನ್ನ ಸೈಡಿಗಿಟ್ಟು ದೆಹಲಿಗೆ ದೌಡಾಯಿಸಿದ್ರು,ಆಮೇಲೆ ಬರಿ ಸರ್ಕಾರ ಉರುಳಿಸುವ,ಉಳಿಸಿಕೊಳ್ಳುವ ಬೀದಿ ನಾಟಕದ ನಡುವೆ ಬೀದಿಗೆ ಬಿದ್ದವರನ್ನ ನೋಡುವ ವ್ಯವಧಾನ ಸರ್ಕಾರಕ್ಕೂ ಇರಲಿಲ್ಲ, ವಿರೊಧ ಪಕ್ಷಗಳಿಗೂ ಇರಲಿಲ್ಲ!

ಮಳೆ ಅನ್ನುವುದು ಅವರ ಬದುಕನ್ನ ಕಿತ್ತುಕೊಂಡಿತು, ಸರ್ಕಾರದ ಅನಾದರ ಆ ಜನರ ಆತ್ಮಾಭಿಮಾನಕ್ಕೆ ಪೆಟ್ಟುಕೊಟ್ಟಿತಲ್ಲ.ಹಣವಿಲ್ಲ ಅನ್ನಲು ಸರ್ಕಾರಕ್ಕೆ ಸಾಧ್ಯವಿಲ್ಲ, ಕೊರತೆಯಿರುವುದಾದರೆ ಮಾನವೀಯತೆಯದು,ಕೆಲಸ ಮಾಡುವ ಮನಸ್ಸಿಲ್ಲದ್ದು.ಹೀಗೆ ಒಂದು ಕಡೆ ಸೂರಿಲ್ಲದೆ ಜನ ಪರದಾಡುತಿದ್ದರೆ,

ಇತ್ತ ವಿಶ್ವ ಕನ್ನಡ ಸಮ್ಮೇಳನ ಮುಗಿದು ಹೋಯಿತು.ಇಷ್ಟ್ ಖರ್ಚು ಮಾಡಿ ಸಮ್ಮೇಳನ ಮಾಡೋದು ಯಾವ್ ಪುರುಷಾರ್ತಕ್ಕೆ ಸ್ವಾಮಿ ಅನ್ನೋ ಹಲವರು ಕೇಳಿದರು.ಅದು ಕನ್ನಡದ ಹಬ್ಬ ಸ್ವಾಮಿ ಇರ್ಲಿ ಬಿಡಿ ಅನ್ನಿಸಿತ್ತು.ಆದ್ರೆ ತೀರಾ ಐಶ್ವರ್ಯ ರೈ ಅವರಿಗೆ ೨ ಕೋಟಿ ಕೊಟ್ಟು ಕರೆಸಿದ್ದಾರೆ ಅನ್ನೋ ಮಾತುಗಳು ಬಂದಾಗ “ನೆರೆ ಸಂತ್ರಸ್ತರಿಗೆ,ಎರಡು ಕೋಟಿಗೆಷ್ಟು ಮನೆ ಕಟ್ಟಿಸಬಹುದು ಯಡ್ಯೂರಪ್ಪನವ್ರೇ?”  ಅಂತ ಕೇಳದಿರಲು ಹೇಗೆ ಸಾಧ್ಯ. ಆಕೆ ಬಂದು ಮಾತಾಡಿದ್ದು ಎಣಿಸಿ ನಾಲ್ಕು ಮಾತು ಅದರಲ್ಲಿ ಎರಡೂವರೆ ಹರೆ ಬೆಂದ ಕನ್ನಡ ಇನ್ನ ಉಳಿದ ಭಾಗ ಹಿಂದಿಯದ್ದು…! ಬಪ್ಪರೆ ಇದಲ್ವಾ ವರ್ಸೆ ಕನ್ನಡದ ಹಬ್ಬದಲ್ಲಿ ಹಿಂದಿ ಮಾತಾಡಿಸಲು ಆಕೆಯನ್ನ ಕರೆಸಿಕೊಳ್ಳಬೇಕಿತ್ತಾ? ಕಡೆ ಪಕ್ಷ ಈ ನೆಲದ ಮತ್ತವಳ ಮಾತೃ ಭಾಷೆ ತುಳುವನ್ನಾದರೂ ಮಾತಾಡಿದ್ರಾ,ಅದೂ ಇಲ್ಲ.

ಹಾಗೆ ನೋಡಿದರೆ ಈ ಸಮ್ಮೇಳನ ಶುರುವಾಗುವಾಗಲೇ ಮೀನಾ ಮೇಷ ಎಣಿಸಿ ಶುರು ಮಾಡಿತ್ತು ಸರ್ಕಾರ, ಕಡೆಗೆ ನಾರಯಣ ಮೂರ್ತಿಯವರ ಆಯ್ಕೆಯ ವಿಷಯಕ್ಕೆ ಮಾಧ್ಯಮವು ಅನಗತ್ಯ ಪ್ರಚಾರ ನೀಡಿತು,ಬಹಳಷ್ಟು ಜನ ನಮಗೆ ಆಹ್ವಾನವೇ ಬಂದಿಲ್ಲ ಅಂದ್ರು.ಇರಲಿ ಒಂದು ದೊಡ್ಡ ಕಾರ್ಯಕ್ರಮದಲ್ಲಿ ಸಣ್ಣ ಪುಟ್ಟ ತಪ್ಪುಗಳಾಗಿವೆ ಅಂದುಕೊಳ್ಳೊಣ.ಆದರೆ ಕಡೆಗೆ ಈ ಸಮ್ಮೇಳನದಿಂದ ಸಾಧಿಸಿದ್ದದರೂ ಏನು?ಕನ್ನಡಕ್ಕೆ,ಕನ್ನಡಿಗರಿಗೆ ಆದ ಲಾಭವೇನು? ಇಪ್ಪತೈದು ವರ್ಷಗಳಿಂದ ಸರೋಜಿನಿ ಮಹಿಷಿ ವರದಿ ಧೂಳು ತಿನ್ನುತ್ತಲೇ ಕೂತಿದೆ ಅದರ ಕತೆಯೇನಾಯಿತು?

ವಿಶ್ವ ಕನ್ನಡ ಸಮ್ಮೇಳನ,ಕನ್ನಡದ ಕೆಲಸ ಎಲ್ಲ ಪಕ್ಕಕ್ಕಿರಲಿ.ಸದ್ಯಕ್ಕೆ,ಅಭಿವೃದ್ದಿಯೇ ಆಡಳಿತ ಮಂತ್ರ ಅನ್ನುವ ಯಡ್ಯೂರಪ್ಪನವ್ರೆ ಇನ್ನೊಂದು ಮಳೆಗಾಲ ಹತ್ರ ಬರ್ತಿದೆ ಸ್ವಾಮೀ,ಅಷ್ಟರಲ್ಲಾದ್ರು ನಮ್ಮ ಜನಕ್ಕೆ ಒಂದು ಸೂರು ಕಟ್ಟಿಸಿಕೊಟ್ಟು, ನಿಮ್ಮ ನೇತೃತ್ವದ ಸರಕಾರವನ್ನ ಆರಿಸಿ ಕರ್ನಾಟಕದ ಮಂದಿ ತಪ್ಪು ಮಾಡಿಲ್ಲ ಅಂತ ನಿರೂಪಿಸಿ.

(ಚಿತ್ರ ಕೃಪೆ :bjpkarnataka.org)

1 ಟಿಪ್ಪಣಿ Post a comment
  1. ಆಸು ಹೆಗ್ಡೆ's avatar
    ಮಾರ್ಚ್ 16 2011

    ನಿಜ ರಾಕೇಶ್, ಐಶ್ವರ್ಯಾ ಬಚ್ಚನ್ ಎಂಬ ಆ ನಟಿ, ವಿಶ್ವ ಕನ್ನಡ ಸಮ್ಮೇಳನದಲ್ಲಿ ಕನ್ನಡದ ಮೇಲೆ ಅತ್ಯಾಚಾರ ನಡೆಸುವ ಬದಲು, ಕನ್ನಡನಾಡಿನ ಭಾಷೆಯಾದ ತುಳುವಿನಲ್ಲಿ ಮಾತನಾಡಿ, ಅನುವಾದಕರ ಸಹಾಯದಿಂದ ಅದನ್ನು ಕನ್ನಡೀಕರಿಸಿದ್ದರೆ, ಆಕೆಗೂ ಮತ್ತು ಆಕೆಯನ್ನು ಅಷ್ಟು ದುಡ್ಡು ಕೊಟ್ಟು ಕರೆಸಿ ತನ್ನ ಪಕ್ಕದ ಕುರ್ಚಿಯಲ್ಲಿ ಕೂರಿಸಿಕೊಂಡವರಿಗೂ ಶೋಭೆ ತರುತ್ತಿತ್ತು.

    ಅಬುದಾಭಿಯ ಉದ್ಯಮಿ ಡಾ. ಬ. ಆರ್. ಶೆಟ್ಟಿ ಹಾಗೂ ಲಂಡನಿನತ್ತಲಿನ ಮಹಾಪೌರ ಡಾ. ನೀರಜ್ ಪಾಟೀಲರ ಕನ್ನಡವೂ ಬೇಸರ ತರಿಸಿತ್ತು.
    ಪಾಟೀಲರಂತೂ ಬೆಂಗಳೂರಿನ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವರ್ತಿಸಿದಂತೆ, ತಾನು ಕನ್ನಡದಲ್ಲಿ ಓದುತ್ತಿರುವುದೇ ದೊಡ್ಡ ಸಾಧನೆಯೆಂಬಂತೆ ಬಾಲಿಶವಾಗಿ ವರ್ತಿಸಿದ್ದು ನಗೆ ಬರಿಸಿತ್ತು. ಆತ ಕನ್ನಡವನ್ನು ಓದಲು ಅಷ್ಟೊಂದು ಒದ್ದಾಡುತ್ತಿದ್ದುದು ಯಾಕೆಂದೇ ಅರಿವಾಗ್ಲಿಲ್ಲ.

    ವಿಚಿತ್ರ ಜನರು. ವಿಚಿತ್ರ ಹವ್ಯಾಸಗಳು.
    🙂

    ಉತ್ತರ

Leave a reply to ಆಸು ಹೆಗ್ಡೆ ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments