ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 17, 2011

9

‘ದುರ್ಗಾಸ್ತಮಾನ’ ಮತ್ತು ‘ಗಂಡುಗಲಿ ಮದಕರಿ ನಾಯಕ’

‍ನಿಲುಮೆ ಮೂಲಕ

–  ಶ್ಯಾಮಲ ಜನಾರ್ದನನ್

ದುರ್ಗಾಸ್ತಮಾನದ ಮುನ್ನುಡಿಯಲ್ಲೇ ಲೇಖಕ ದಿವಂಗತ ಶ್ರೀ ತರಾಸು ಬರೆದಿರುವ “ಚಿತ್ರದುರ್ಗ ಎಂದರೆ ತಮ್ಮ ಕರುಳಿಗೆ ಕಟ್ಟಿಕೊಂಡು ಬೆಳೆದ ಜೀವಂತ ವಸ್ತು – ಮದಕರಿ ನಾಯಕ ಒಬ್ಬ ಅರಸನಲ್ಲ ಜೀವಂತ ಆಪ್ತನೆಂಟ. ಚಿತ್ರದುರ್ಗ – ಮದಕರಿನಾಯಕ ಬೇರೆ ಬೇರೆಯಲ್ಲ ಒಂದೇ ಎಂಬ ಅವಿನಾಭಾವ, ದುರ್ಗ ಎಂದರೆ ಮದಕರಿ, ಮದಕರಿ ಎಂದರೆ ದುರ್ಗ ” ಎಂಬ ಮಾತುಗಳು ಅತ್ಯಂತ ಪ್ರಭಾವೀ ವಾಕ್ಯಗಳಾಗಿ, ನಾವು ಪುಸ್ತಕ ಓದಲು ತೊಡಗುವ ಮೊದಲೇ ನಮ್ಮ ಮನಸ್ಸನ್ನು ದುರ್ಗ-ಮದಕರಿ ಎಂಬ ಮೋಡಿಯಲ್ಲಿ ಸಿಲುಕಿಸುತ್ತದೆ.

ನಾಯಕವಂಶದಲ್ಲಿ ಹಲವಾರು ಮದಕರಿನಾಯಕರುಗಳಿದ್ದರೂ, ಜನತೆ ಈಗಲೂ ತುಂಬಾ ಅಭಿಮಾನದಿಂದ ದುರ್ಗ – ಮದಕರಿ ಎಂದರೆ ನೆನಪಿಸಿಕೊಳ್ಳುವುದು, ಈ ಕಥೆಯ ನಾಯಕ, ಕೊನೆಯ ಪಾಳೆಯಗಾರ / ಅರಸ ಚಿಕ್ಕ ಮದಕರಿನಾಯಕರನ್ನೇ !! ಈ ನಮ್ಮ ಅಭಿಮಾನಕ್ಕೆ ಕಾರಣನಾದ ಮದಕರಿನಾಯಕ ಅತಿ ಸಾಹಸಿ, ಅತಿಕ್ರೂರಿ, ಅತಿಮದಾಂಧ, ಅತಿಕಾಮಿ ಮತ್ತು ದೈವಕೃಪೆ, ಗುರುವಿನ ಅನುಗ್ರಹ ಎರಡನ್ನೂ ಕಳೆದುಕೊಂಡಿದ್ದ ನತದೃಷ್ಟ ಎಂದು ಚಿತ್ರದುರ್ಗ ಸಂಸ್ಥಾನದ ಚಪ್ಪೇ ಚಾವಡಿ ದಳವಾಯಿಗಳ ನೇರ ವಂಶಸ್ಥರಾದ, ಭದ್ರಾವತಿಯ ಉಕ್ಕಿನ ಕಾರ್ಖಾನೆಯ ನಿವೃತ್ತ ವರ್ಕ್ಸ್ ಮ್ಯಾನೇಜರ್ ಶ್ರೀ ಸಿ ಪರಶುರಾಮನಾಯಕ್ ರವರು ಹೇಳಿದ್ದನ್ನೂ, ಈ ಕೃತಿ “ದುರ್ಗಾಸ್ತಮಾನ” ಬರೆಯಲು ಸ್ಫೂರ್ತಿಯಾದದ್ದನ್ನೂ ಲೇಖಕರು ಸ್ಮರಿಸಿದ್ದಾರೆ.

ದುರ್ಗಾಸ್ತಮಾನವನ್ನು ಅನೇಕ ಸಂಶೋಧನೆಗಳು, ಮುದ್ರಣ ರೂಪದಲ್ಲಿ ಪ್ರಕಟವಾಗಿಲ್ಲದ ಶ್ರೀ ಚಿಕ್ಕೇರೂರು ಗೋವಿಂದಾಚಾರ್ಯರು ಬರೆದ ಹರಪನಹಳ್ಳಿ ಪಾಳೆಯಗಾರರ ಚರಿತ್ರೆಯ ಹಸ್ತಪ್ರತಿಯನ್ನು ಆಧರಿಸಿ ಬರೆಯಲಾಗಿದೆ. ಚಿತ್ರದುರ್ಗದ ಇತಿಹಾಸಕ್ಕೆ ಸಂಬಂಧಪಟ್ಟ ಮತ್ತು ಲಭ್ಯವಿದ್ದ ಎಲ್ಲಾ ದಾಖಲೆಗಳನ್ನೂ ಚೆನ್ನಾಗಿ ಅಧ್ಯಯನ ಮಾಡಿದ ನಂತರವೇ ಶ್ರೀ ತರಾಸುರವರು ಕಾದಂಬರಿ ಬರೆದಿದ್ದಾರೆ.

ತರಾಸುರವರು, ಅತ್ಯಂತ ಕಾಳಜಿಯಿಂದ, ಎಲ್ಲಾ ಅಧ್ಯಯನಗಳನ್ನೂ ಮಾಡಿ, ಸಂಗ್ರಹಕ್ಕೆಲ್ಲಾ ಆಧಾರ ತೋರಿಸಿಯೇ ದುರ್ಗಾಸ್ತಮಾನದಲ್ಲಿ ದೊರೆ ಮದಕರಿ ನಾಯಕನನ್ನು ಮೆಚ್ಚಬೇಕಾದ ಶೂರ ಎಂದೇ ಚಿತ್ರಿಸಿದ್ದಾರೆ. ದುರಂತ ಕಾದಂಬರಿಗೆ ಅರ್ಹನಾದ ಧೀರೋದ್ಧಾತ ನಾಯಕ ಎನ್ನುವಂತೆಯೂ ಚಿತ್ರಿಸಿದ್ದಾರೆ. ತನ್ನ ದುರ್ಗದ ಜನರೇ ತನಗೆ ದ್ರೋಹ ಮಾಡಿ, ಹೈದರಾಲಿಯ ಸೇನೆ ಕೋಟೆ ಮುತ್ತಿದಾಗ, ವೀರಾವೇಶದಿಂದ ಕಾದಾಡುತ್ತಾ, ಕೊನೆಯ ಉಸಿರು, ಒಡಲು ಬಿಡುವ ಮುನ್ನ ಮದಕರಿ, ಹೈದರನ ಧ್ವಜ ಸ್ಥಂಭವನ್ನು ಹೊಡೆದುರಿಳಿಸಿದ್ದನ್ನು ಓದುವಾಗ, ರೋಮಾಂಚನದಿಂದ ಮೈ ನವಿರೇಳುತ್ತದೆ. ಹೈದರಾಲಿಯ ಕಡೆಯವರ ಹತ್ತಾರು ಗುಂಡುಗಳು ಮದಕರಿಯನ್ನು ಹೊಡೆದುರುಳಿಸಿದಾಗ, ದುರ್ಗದ ಗಂಡುಗಲಿ ವೀರ ಮದಕರಿನಾಯಕ ತನ್ನ ಪ್ರಾಣಪ್ರಿಯವಾದ ದುರ್ಗದ ಮಣ್ಣಿಗೆ ರಕ್ತ ತರ್ಪಣ ನೀಡುತ್ತಾ, ಕೋಟೆಯ ಮೇಲಿಂದ ಕೆಳಗುರುಳುತ್ತಾನೆ. ಮತ್ತೇಳುವುದಿಲ್ಲ – ಅಲ್ಲಿಗೆ ದುರ್ಗದ ಇತಿಹಾಸದಲ್ಲಿ ಪ್ರಜ್ವಲಿಸುವ ಸೂರ್ಯ ಅಸ್ತನಾಗಿದ್ದ, ದುರ್ಗಾಸ್ತಮಾನವಾಗಿ ಹೋಗುತ್ತದೆ, ಆ ಕ್ಷಣ.

ರಣಬಯಲಿನಲ್ಲಿ ಪರಶುರಾಮನಾಯಕನ ಧ್ವನಿ ಅಣ್ಣಾ….ಅಣ್ಣಾ…………. ಮದಕೇರಣ್ಣಾ…….. ಎಂದು ಕೂಗಿಕೊಂಡು ಪ್ರೇತದಂತೆ ಅಲೆಯುವಾಗ, ದುರ್ಗವೇ ಹಂಬಲಿಸಿ ತನ್ನ ದೊರೆಯನ್ನು ಕರೆಯುವಂತಿರುವಾಗ, ಎಲ್ಲವನ್ನೂ ನುಂಗಿ ದುರ್ಗವನ್ನು ಕತ್ತಲಾವರಿಸುತ್ತದೆ ಮತ್ತೆ ಹಗಲಾಗುವುದಿಲ್ಲ.

೬೯೬ ಪುಟಗಳ ಪುಸ್ತಕವನ್ನು ಓದಿ ಮುಗಿಸಿದಾಗ, ನಮ್ಮ ಮನ:ಪಟಲದಲ್ಲಿ ಓಡುತ್ತಿದ್ದ ದೃಶ್ಯಗಳು ಒಮ್ಮೆಲೇ ಕಡಿವಾಣ ಹಾಕಿ ನಿಲ್ಲಿಸಿದ ಕುದುರೆಯಂತಾಗುತ್ತದೆ. ಪರಶುರಾಮ ನಾಯಕರ ಧ್ವನಿ ಅನುಸರಿಸಿ, ನಮ್ಮ ಮನಸ್ಸೂ ಹಂಬಲಿಸಿ ಕೂಗುತ್ತಿರುತ್ತದೆ. ದುರ್ಗದ ವೈಭವ, ಮದಕರಿ ನಾಯಕನ ಧೀಮಂತ ವ್ಯಕ್ತಿತ್ವ ನಮ್ಮನ್ನು ಪೂರ್ತಿಯಾಗಿ ಆವರಿಸಿಕೊಂಡು ಬಿಡುತ್ತದೆ. ಅರಿವು ಬೇಕೆಂದರೂ ಮನವು ಗುಂಗಿನಿಂದ ಹೊರಬರಲು ನಿರಾಕರಿಸುತ್ತದೆ. ಆರಂಭದಿಂದ ಅಂತ್ಯದವರೆಗೂ ನಡೆದ ಐತಿಹಾಸಿಕ ಘಟನೆಗಳ ವಿವರಣೆ, ಅರಮನೆ – ಗುರುಮನೆಯ ಅವಿನಾಭಾವ ಸಂಬಂಧ, ಯುದ್ಧದ ಚಿತ್ರಣ, ಎಲ್ಲವೂ ಶ್ರೀ ತರಾಸುರವರ ಪದಗಳ ಪ್ರಯೋಗ ಮತ್ತು ಭಾಷೆಯ ಸೊಗಡಿನಲ್ಲಿ ನಮ್ಮನ್ನು ಬಂಧಿಸಿಬಿಡುತ್ತದೆ.

ದುರ್ಗಾಸ್ತಮಾನ ನನ್ನ ಅತ್ಯಂತ ಮೆಚ್ಚಿನ ಮೇರು ಕೃತಿ. ಮೇರು ಪರ್ವತದಷ್ಟೇ ಎತ್ತರವಾದದ್ದು ಮತ್ತು ತನಗೆ ತಾನೇ ಸಾಟಿಯಾದ ಉತ್ಕೃಷ್ಟ ಕಾದಂಬರಿ. ಎಷ್ಟು ಸಾರಿ ಓದಿದರೂ ಮತ್ತೆ ಮತ್ತೆ ಓದಬೇಕೆಂಬ ಹಂಬಲ ಹುಟ್ಟಿಸುವಂಥದ್ದು.

ಶ್ರೀ ಬಿ ಎಲ್ ವೇಣುರವರ ಗಂಡುಗಲಿ ಮದಕರಿ ನಾಯಕ ಐದನೇ ಮುದ್ರಣ ಕಂಡಿರುವ ಕೃತಿ. ನಾಲ್ಕನೇ ಮುದ್ರಣದ ಪ್ರತಿಗಳು ಮುಗಿದು ೬ ವರ್ಷಗಳ ನಂತರ ಮರು ಮುದ್ರಣ ಕಂಡ ಪುಸ್ತಕ. ಇವರೂ ಕೂಡ ಕೊನೆಯ ಅರಸ ಮದಕರಿ ನಾಯಕರ ಚಿತ್ರಣವನ್ನು ಮಹಾ ಪರಾಕ್ರಮಿ, ಚಿತ್ರದುರ್ಗದ ಸ್ವಾಭಿಮಾನದ ಸಂಕೇತ ಎಂದೇ ಚಿತ್ರಿಸಿದ್ದಾರೆ.

ಈ ಪುಸ್ತಕದಲ್ಲಿ ಲೇಖಕರು ಮದಕರಿ ನಾಯಕರ ವಿವಾಹ ತರೀಕೆರೆಯ ಲಕ್ಷ್ಮೀಸಿರಿವಂತಿಯೊಂದಿಗೆ ಆದ ಪ್ರಸ್ತಾಪ ಮಾಡುತ್ತಾರಾದರೂ, ಅರಸನ ಪ್ರೇಮಕ್ಕೂ ಹೃದಯಕ್ಕೂ ಒಡತಿಯಾಗಿ ಪದ್ಮವ್ವೆನಾಗತಿ ಚಿತ್ರಿತವಾಗುತ್ತಾಳೆ. ಆದರೆ ಇಲ್ಲಿ ಗುಡಿಕೋಟೆಯ ಪಾಳೆಯಗಾರ ಮುಮ್ಮಡಿ ಜಟಂಗಿನಾಯಕರ ಮಗಳು ಪದ್ಮವ್ವೆನಾಗತಿಯೊಂದಿಗಿನ ವಿವಾಹ ಮಾತ್ರ ಉಲ್ಲೇಖವಾಗುತ್ತದೆ. ತರಾಸುರವರ ದುರ್ಗಾಸ್ತಮಾನದಲ್ಲಿ ಪದ್ಮವ್ವೆಯ ಜೊತೆ, ಜರಿಮಲೆಯ ಇಮ್ಮಡಿ ಬೊಮ್ಮನಾಯಕರ ಮಗಳು ಬಂಗಾರವ್ವನೊಡನೆಯೂ, ಒಟ್ಟಿಗೇ ವಿವಾಹವಾದ ಪ್ರಸ್ತುತಿಯಿದೆ. ಎಲ್ಲಕ್ಕಿಂತ ಹೆಚ್ಚಾಗಿ ಪ್ರಧಾನಿ ಕಳ್ಳಿ ನರಸಪ್ಪನವರನ್ನು ನಾಯಕರ ವಿರುದ್ಧ ದ್ರೋಹವೆಸಗಿದಂತೆಯೂ, ರಾಜದ್ರೋಹಿಯಾಗಿಯೂ, ಚಿತ್ರಿಸಲಾಗಿದೆ. ಕಳ್ಳಿ ನರಸಪ್ಪ ಹೈದರನ ಸೇನೆ ಸೇರಿ, ಚಿತ್ರದುರ್ಗದ ಕೋಟೆಯ ಬಲಹೀನ ಜಾಗಗಳ ವಿಷಯ, ಕಳ್ಳಗಿಂಡಿಯ ಸುದ್ದಿ ಎಲ್ಲವನ್ನೂ ಬಹಿರಂಗಗೊಳಿಸಿದ್ದರಿಂದ, ಹೈದರಾಲಿ ಮದಕರಿನಾಯಕರನ್ನು ಸೋಲಿಸಲು ಸಾಧ್ಯವಾಯಿತೆಂದು ಬರೆದಿದ್ದಾರೆ. ಆದರೆ ದುರ್ಗಾಸ್ತಮಾನದಲ್ಲಿ ಲೇಖಕರು ಇದು ತಪ್ಪು ಅಭಿಪ್ರಾಯ, ನರಸಪ್ಪನವರು ಅಂತಹವರಲ್ಲವೆಂದೂ, ದಾಖಲೆಗಳು ಹಾಗೆ ಹೇಳುವುದಿಲ್ಲವೆಂದೂ ಹೇಳಿದ್ದಾರೆ. ಯುದ್ಧಾನಂತರ ಅಂದರೆ ಚಿತ್ರದುರ್ಗದ ಅವಸಾನದ ನಂತರ ಹೈದರಲಿ “ಕಳ್ಳಿ ನರಸಪ್ಪಯ್ಯ ಎಂಬಾತನಿಗೆ ದುರ್ಗದಲ್ಲಿ ಒಂದು ಅಧಿಕಾರ ಕೊಟ್ಟ” ಎಂದು ಮಾತ್ರ ಉಲ್ಲೇಖವಿದೆಯೇ ಹೊರತು ಅವರನ್ನು ದ್ರೋಹಿ ಎಂದು ಎಲ್ಲೂ ಯಾವ ಕಡತದಲ್ಲೂ ಹೇಳಿಲ್ಲವೆಂದೂ ಹೇಳುತ್ತಾರೆ. ಮುಂದುವರೆದು ದುರ್ಗಾಸ್ತಮಾನದಲ್ಲಿ ತೀರ್ಥಯಾತ್ರೆಗೆ ತೆರಳಿದ್ದ ಕಳ್ಳಿ ನರಸಪ್ಪಯ್ಯ ಮತ್ತು ಅವರ ಸಂಸಾರ, ಹೈದರಾಲಿಯ ಕೈಗೆ ಸೆರೆ ಸಿಕ್ಕಾಗ, ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆಂದು ಚಿತ್ರಿಸಿದ್ದಾರೆ. ಗಂಡುಗಲಿ ಮದಕರಿಯಲ್ಲಿ, ಕಳ್ಳಿ ನರಸಪ್ಪಯ್ಯನನ್ನು ಯುದ್ಧಾನಂತರ, ರಾಜದ್ರೋಹಿಯೆಂದು, ಹೈದರಾಲಿಯು ತೋಪಿನ ಬಾಯಿಗೆ ಕಟ್ಟಿ ಉಡಾಯಿಸಿಬಿಡುತ್ತಾನೆ.

ದುರ್ಗಾಸ್ತಮಾನದಲ್ಲಿ ನಾಗತಿಯರು ಮದಕರಿ ಕೊನೆಯ ದಿನದ ಯುದ್ಧಕ್ಕೆ ಹೊರಟ ತಕ್ಷಣ, ಹೊಂಡದಲ್ಲಿ ಆತ್ಮಾಹುತಿ ಮಾಡಿಕೊಳ್ಳುತ್ತಾರೆ ಆದರೆ ಗಂಡುಗಲಿ ಮದಕರಿ ನಾಯಕ ಪುಸ್ತಕದಲ್ಲಿ ಯುದ್ಧ ರಂಗದಲ್ಲಿ ಹೋರಾಡುತ್ತಾ ದೊಡ್ಡ ಮದಕರಿನಾಯಕರ ಪತ್ನಿ ರತ್ನಮ್ಮ ನಾಗತಿ ಹೈದರಾಲಿಯ ಸೈನಿಕರು ತನ್ನ ಮುಡಿ-ಸೆರಗು ಹಿಡಿದೆಳೆದು ಮಾಡಿದ ಅವಮಾನ ತಾಳಲಾಗದೆ, ಹೊಂಡಕ್ಕೆ ಹಾರುತ್ತಾಳೆ, ವೀರಾವೇಷದಿಂದ ಹೋರಾಡುವ ಪದ್ಮವ್ವ ನಾಗತಿಯೂ ದೇಹದಲ್ಲೆಲ್ಲಾ ಕತ್ತಿಗಳನ್ನು ಚುಚ್ಚಿಸಿಕೊಂಡು, ಹೈದರಾಲಿಯ ಸೈನಿಕರು ಬಟ್ಟೆಗಳನ್ನು ಹರಿದೆಳೆದಾಗ ದಿಗ್ಭ್ರಾಂತಳಾಗಿ ಹೊಂಡಕ್ಕೆ ಹಾರುತ್ತಾಳೆ. ಇಲ್ಲಿ ನಾಗತಿಯರ ಕೊನೆ ಏಕೋ ಮನಸ್ಸಿಗೆ ಹಿಡಿಸುವುದಿಲ್ಲ.

ಕೊನೆಯದಾಗಿ ಮದಕರಿ ನಾಯಕನ ಅಂತ್ಯ ಅತ್ಯಂತ ಸೂಕ್ಷ್ಮವಾದ, ನವಿರಾದ ಭಾವನೆಗಳಿಂದ ದುರ್ಗಾಸ್ತಮಾನದಲ್ಲಿ ಹೇಳಲ್ಪಟ್ಟಿದೆ. ಅವನ ಅದಮ್ಯ ದೇಶಪ್ರೇಮ, ಅವನನ್ನು ಕೊನೆಯ ಘಳಿಗೆಯವರೆಗೂ ವೀರಾವೇಶದಿಂದ ಹೋರಾಡಿಸಿ ಹೈದರಾಲಿಯ ಹಸಿರು ಧ್ವಜ ಹಾರಾಡುತ್ತಿದ್ದ ಧ್ವಜಕಂಬವನ್ನೇ ಕತ್ತರಿಸಿ ತುಂಡು ಮಾಡಿ, ದುರ್ಗದ ಮಣ್ಣಿಗೆ ಮುಟ್ಟಿಟ್ಟು, ಕೊನೆಯುಸಿರೆಳೆಯುಂತೆ ಮಾಡುತ್ತದೆ. ವೀರ ಮರಣ ಅಪ್ಪುತ್ತಾನೆ ನಮ್ಮೆಲ್ಲರ ಅಭಿಮಾನಿ ಅರಸ, ನಾಯಕ ಮದಕರಿ.

ಗಂಡುಗಲಿ ವೀರ ಮದಕರಿ ಪುಸ್ತಕದಲ್ಲಿ ಮದಕರಿಯನ್ನು ಅವನ ಸಾಕು ಮಗಳಾದ (ಕಳ್ಳಿ ನರಸಪ್ಪಯ್ಯನವರ ಮಗಳು) ಗಾಯತ್ರಿಯ ಮೂಲಕ ಸಂಚು ಮಾಡಿ ಸೆರೆ ಹಿಡಿಯುತ್ತಾರೆ, ಆದರೆ ಅಲ್ಲೂ ಗಂಡುಗಲಿ ತನ್ನ ಪರಾಕ್ರಮದಿಂದ, ತನ್ನ ತಲೆ ತಾನೇ ಕತ್ತರಿಸಿಕೊಂಡು ದುರ್ಗದ ಮಣ್ಣಿಗೆ ಎಸೆದು, ಕುಸಿದು ಬೀಳುತ್ತಾನೆ. ನಿನ್ನ ಕೈಗೆ ನನ್ನ ತಲೆ ಸಿಗದು ಎಂದು ಹೈದರಾಲಿಗೆ ಹೇಳಿದ್ದ ಮಾತು ಉಳಿಸಿಕೊಳ್ಳುವಂತೆ, ಬಿರುಗಾಳಿ ಎದ್ದು ನಾಯಕನ ತಲೆ ಹೊಂಡಕ್ಕೆ ಉರುಳಿ ಬೀಳುತ್ತದೆ.

ದುರ್ಗಾಸ್ತಮಾನ ಓದಿ ಮೂಕವಾದ ಮನ, ಗಂಡುಗಲಿ ಮದಕರಿ ನಾಯಕ ಪುಸ್ತಕವನ್ನು ಪೂರ್ತಿಯಾಗಿ ಒಪ್ಪಿಕೊಳ್ಳಲು ಇಷ್ಟಪಡುವುದಿಲ್ಲ. ಬೇರಾವ ಪುಸ್ತಕಕ್ಕೂ ಹೋಲಿಸಲಾಗದ ದುರ್ಗಾಸ್ತಮಾನದ ಮುಂದೆ ಇದು ಸಪ್ಪೆ ಎನಿಸಿದರೂ, ಶ್ರೀ ವೇಣು ಅವರ ಬರವಣಿಗೆಯ ಶೈಲಿ ನಮ್ಮನ್ನು ಹಿಡಿದಿಡುತ್ತದೆ. ಅವರ ಇತರ ಪುಸ್ತಕಗಳಂತೇ ಇದೂ ಅವರದೇ ಆದ ಪ್ರಾಮುಖ್ಯತೆ ಪಡೆಯುತ್ತೆ. ಆದರೆ ಎರಡೂ ಓದಿದ ನಮ್ಮ ಮನಸು ಮಾತ್ರ ಗೊಂದಲಮಯವಾಗುತ್ತದೆ…….!!!!!

(ಚಿತ್ರ ಕೃಪೆ :newsnotout24.blogspot.com)

9 ಟಿಪ್ಪಣಿಗಳು Post a comment
 1. Narendra
  ಮಾರ್ಚ್ 17 2011

  ರಕ್ತರಾತ್ರಿ, ಕಂಬನಿಯ ಕುಯಿಲು, ತಿರುಗು ಬಾಣ ಮುಂತಾದ “ದುರ್ಗಾಸ್ತಮಾನ” ಸರಣಿಗೇ ಸಂಬಂಧಿಸಿದ ಕಾದಂಬರಿಗಳೂ ಉತ್ಕೃಷ್ಟವಾಗಿವೆ.
  ಹಾಗೆ ನೋಡಿದರೆ, ಈ ಕಾದಂಬರಿ “ರಕ್ತರಾತ್ರಿ”ಯಿಂದ ಪ್ರಾರಂಭಗೊಂಡು “ದುರ್ಗಾಸ್ತಮಾನ”ದಲ್ಲಿ ಕೊನೆಗೊಳ್ಳುತ್ತದೆ.

  ಉತ್ತರ
 2. ssnkumar
  ಮಾರ್ಚ್ 17 2011

  Forgot to mark “Notify me of follow-up comments via email”.

  ಉತ್ತರ
 3. ಮಾರ್ಚ್ 17 2011

  ತ.ರಾ.ಸುಬ್ಬರಾಯರ ಶೈಲಿಯೇ ಅ೦ಥಹದ್ದು! ಐತಿಹಾಸಿಕ ಕಾದ೦ಬರಿಗಳನ್ನು ಕುತೂಹಲಕರವಾಗಿ, ಎಲ್ಲೂ ಬೋರ್ ಹೊಡೆಸದೇ ಓದುಗನನ್ನು ಆ ಸನ್ನಿವೇಶಗಳ ಮುಖಾಮುಖಿಯನ್ನಾಗಿಸುವ ಅವರ ಶೈಲಿ ಅದ್ಭುತ! ನಾನೊಮ್ಮೆ ಹೀಗೇ ಕುತೂಹಲಗೊ೦ಡು ರಕ್ತರಾತ್ರಿಯನ್ನು ಓದೋಣವೆ೦ದು ಆರ೦ಭಿಸಿದ ಆ ನನ್ನ ಚಿತ್ರದುರ್ಗದ ಪಯಣ ಏಕದ೦ ತಿರುಗುಬಾಣದವರೆಗೂ ಬ೦ದು ಎಲ್ಲವನ್ನೂ ಕೇವಲ ಮೂರೇ ದಿನದಲ್ಲಿ ಓದಿ ಮುಗಿಸಿದ್ದೆ! ಆನ೦ತರ ದುರ್ಗಾಸ್ತಮಾನಕ್ಕಾಗಿ ಹುಡುಕಿದರೂ ಆ ಪುಸ್ತಕ ಸಿಗಲಿಲ್ಲ!ಆನ೦ತರ ಹೊರನಾಡಿಗೆ ಬ೦ದ ನ೦ತರ ನಮ್ಮ ಗ್ರ೦ಥಾಲಯದಲ್ಲಿ ಅದನ್ನು ಓದುವ ಸೌಭಾಗ್ಯ ನನ್ನದಾಯಿತು! ಒ೦ದು ಉತ್ತಮ ಕಾದ೦ಬರಿ! ನಾಲ್ಕೂ ಪುಸ್ತಕಗಳನ್ನೂ ಓದಿದಾಗ ನಮಗೆ ಸ೦ಪೂರ್ಣ ಚಿತ್ರದುರ್ಗವನ್ನೇ ಓದಿ ಮುಗಿಸಿದ್ದೇವೆ೦ಬ ಹಮ್ಮು ಬರದಿರದು! ಅಷ್ಟೊ೦ದು ಉತ್ತಮವಾಗಿ, ಆಪ್ತವಾಗಿ ತಮ್ಮ ದುರ್ಗವನ್ನು ಪರಿಚಯಿಸಿದ ಕೀರ್ತಿ ಸುಬ್ಬರಾಯರದು.

  ದುರ್ಗಾಸ್ತಮಾನದ ವಿಮರ್ಶೆ ತಮ್ಮ ಎ೦ದಿನ ವಿಮರ್ಶೆಯ೦ತೆ ಸೊಗಸಾಗಿದೆ. ಮತ್ತೊಮ್ಮೆ ದುರ್ಗಾಸ್ತಮಾನವನ್ನು ಓದಿದ ಅನುಭವವನ್ನು ನೀಡುವಲ್ಲಿ ಸಫಲರಾಗಿದ್ದೀರಿ. ನಿಮಗೆ ಧನ್ಯವಾದಗಳು.
  ನಮಸ್ಕಾರಗಳೊ೦ದಿಗೆ,
  ನಿಮ್ಮವ ನಾವಡ.

  ಉತ್ತರ
 4. ಮಾರ್ಚ್ 17 2011

  ಪುಸ್ತಕ ವಿಮರ್ಶೆಯಲ್ಲಿ ಎತ್ತಿದ ಕೈಯಾದರೂ, ಎಲೆಮರೆಯ ಕಾಯಿಯಂತೆ ಉಳಿದಿದ್ದಾರೆ, ಶ್ರೀಮತಿ ಶ್ಯಾಮಲಾ ಜನಾರ್ದನನ್.
  (ದಯವಿಟ್ಟು ತಪ್ಪಾಗಿ ಪ್ರಕಟವಾಗಿರುವ ಹೆಸರನ್ನು ಸರಿಪಡಿಸಿ)

  ಉತ್ತರ
 5. Bindu
  ಮಾರ್ಚ್ 19 2011

  ದುರ್ಗಾಸ್ತಮಾನದ ಬಗ್ಗೆ ಬಹಳ ಸೊಗಾಸಾಗಿ ಬರೆದಿದ್ದೀರಿ. ಮಗದೊಮ್ಮೆ ತರಾಸು ರವರ ಕಾದಂಬರಿಯನ್ನೇ ಓದಿದಂತಾಯಿತು. ನಾನು ಹುಟ್ಟಿದ್ದು ಬೆಳೆದದ್ದು ಶಿವಮೊಗ್ಗ ಮೈಸೂರು ಆದರೂ ಚಿತ್ರದುರ್ಗ ನಮ್ಮ ತಂದೆಯ ಸ್ವಂತ ಊರು. ಹಾಗಾಗಿ ಅವರು ತ.ರಾ.ಸು ರವರ ಇದೆಲ್ಲಾ ಕಾದಂಬರಿಗಳನ್ನೂ ತಂದು ತಾವೂ ಓದಿ ನಮಗೂ ಓದಲು ಹೇಳಿದ್ದರು. ಹೊಸಹಗಲನ್ನು ನಾನು ಪ್ರೌಢ ಶಾಲೆಯಲ್ಲಿ ಇದ್ದಾಗ ಓದಿದ್ದೆ. ಆದರೆ ಆಗ ನಮ್ಮ ಅಮ್ಮ ದುರ್ಗಾಸ್ತಮಾನವನ್ನು ಓದಲು ಆಗುವುದಿಲ್ಲ ಬಹಳ ದುಃಖವಾಗುತ್ತದೆ ಎಂದು ಹೇಳಿದ ನೆನಪು. ಹಾಗಾಗಿ ಅದನ್ನು ನಾನು ಇನ್ನೂ ಓದಿಲ್ಲ. ಬಹುಶಃ ಅದನ್ನು ಓದುವಶ್ಟು ಪ್ರಭುದ್ದತೆ ಈಗ ಬಂದಿರಬಹುದು. ಪುಸ್ತಕವನ್ನು ಹುಡುಕಿ ಓದಬೇಕು.!!

  ಮತ್ತೊಮ್ಮೆ ಧನ್ಯವಾದಗಳು.

  ಉತ್ತರ
 6. ನವೀನ
  ನವೆಂ 25 2013

  ತ.ರಾ.ಸು ಅವರ ದುರ್ಗಾಸ್ತಮಾನ ಮತ್ತು ನಿಮ್ಮ ವಿಮರ್ಶೆ ಎರಡೂ ಅದ್ಭುತವಾದುದಾಗಿದೆ

  ಉತ್ತರ
 7. ಹೆಚ್ ಬೋರಯ್ಯ
  ಸೆಪ್ಟೆಂ 30 2017

  ತ ರಾ ಸು ರವರ ದುರ್ಗಾಸ್ತಾಮಾನಕ್ಕಿಂತ ಬಿ ಎಲ್ ವೇಣು ಬರೆದಿರುವ ಗಂಡುಗಲಿ ಮದಕರಿನಾಯಕ ಪುಸ್ತಕವು ಶ್ರೇಷ್ಠವಾಗಿದೆ ಎಂದು ನನ್ನ ಅನಿಸಿಕೆ

  ಉತ್ತರ
  • ನಾ-ಗ-ಶೆ-ಟ್ಟಿ
   ಆಕ್ಟೋ 2 2017

   ಬೋರಯ್ಯನವರೇ, ನವೋದಯದ ಬ್ರಾಹ್ಮಣ ಸಾಹಿತ್ಯಕ್ಕಿಂತ ಬಂಡಾಯದ ದಲಿತ ಸಾಹಿತ್ಯವು ಶ್ರೇಷ್ಠವಾಗಿದೆ ಎಂಬುದು ಪ್ರಗತಿಪರರೆಲ್ಲರ ಅನಿಸಿಕೆ.

   ಉತ್ತರ
 8. ಚಂದ್ರ ಕುಮಾರ ನಾಯಕ
  ಆಗಸ್ಟ್ 31 2018

  ಇಲ್ಲಿ ರಾಜಾ ಚಿಕ್ಕ ಮದಕರಿ ನಾಯಕರ ಶೌರ್ಯ ಪರಾಕ್ರಮದ ಬಗ್ಗೆ ಯಾವುದೇ ಸಂಶಯವಿರುವುದಿಲ್ಲ. ಆದರೆ ಅವರ ಅಂತ್ಯ ಮಾತ್ರ ಸತ್ಯಕ್ಕೆ ದೂರವಾದ ವಿಚಾರ. ಅವರು ರಣರಂಗದಲ್ಲಿ ಸೆರೆಯಾಗಿ, ಶ್ರೀರಂಗಪಟ್ಟಣದ ಸೆರೆಮನೆಯಲ್ಲಿ ಸಾವನ್ನಪ್ಪಿರುವುದು ಇತಿಹಾಸ ಸಾಕ್ಷೀಕರಿಸುತ್ತದೆ. ಹೀಗಿರುವಾಗ ಈ ಇಬ್ಬರು ಲೇಖಕರು ಸತ್ಯವನ್ನು ಮರೆಮಾಚುವ ಪ್ರಮೇಯವಾದರೂ ಏನಿತ್ತು? ಇದು ನನ್ನ ಪ್ರೆಶ್ನೆ.

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments