ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 22, 2011

2

ಬೇಕೇ ಇಂಥ ಮಕ್ಕಳು?

‍ನಿಲುಮೆ ಮೂಲಕ

– ಪವನ್ ಎಂ. ಟಿ
ಒಂದು ಮಾತಿದೆಯಲ್ವಾ, ಈ ಜಗತ್ತಿನಲ್ಲಿ ಕೆಟ್ಟ ಮಕ್ಕಳಿರಬಹುದು ಆದರೆ ಕೆಟ್ಟ ತಾಯಿ ಇರಲಿಕ್ಕಿಲ್ಲ ಅಂತ.ನಾನೀಗ ಹೇಳ ಹೊರಟಿರುವುದು ಹಾಗೊಬ್ಬ ತಾಯಿಯ ಮತ್ತು ಅವಳ ಕಟುಕ ಮಗನ ಬಗ್ಗೆ.ತನ್ನ ವಯಸ್ಸಾದ ತಂದೆ ತಾಯಿಯನ್ನು ಯಾವ ಮಕ್ಕಳು ತಾನೆ ದಿನಗೂಲಿ ನೌಕರನಂತೆ ದುಡಿಸಿಕೊಳ್ಳುತ್ತಾರೆ ನೀವೆ ಹೇಳಿ?  ಆದರೆ ಇಲ್ಲಿ ಅಂತವನಿದ್ದಾನೆ. ಒಬ್ಬ ಅಜ್ಜಿ ತನ್ನ ಒಂದು ತುತ್ತು ಅನ್ನಕ್ಕಾಗಿ, ನಿತ್ಯದ ಜೀವನಕ್ಕಾಗಿ ದಿನವಿಡೀ ದುಡಿಯಲೇ ಬೇಕಾದ ಅನಿವಾರ್ಯತೆಯಲ್ಲಿದ್ದಾರೆ.

ಈ ಬಡಜೀವ ತನ್ನ ೯೫ ನೇ ವಯಸ್ಸಿನಲ್ಲಿಯೂ ಕೂಡ ಬುಟ್ಟಿಯನ್ನು ತಯಾರಿಸಿ ಬದುಕಬೇಕಾಗಿದೆ. ಈ ಬುಟ್ಟಿಗಾಗಿ ದೂರದ ಕಾಡಿನಿಂದ ಸಾಮಾಗ್ರಿಗಳನ್ನು ತರಲು ಒಬ್ಬರೆ  ಹೋಗುತ್ತಾರೆ. ಸರಿಯಾಗಿ ನಡೆಯಲು ಸಾಧ್ಯವಿಲ್ಲದ ಗೂನು ಬೆನ್ನಿನ ಅಜ್ಜಿ ಕಾಡಿಗೆ ತೆರಳಿದಾಗ ಅಲ್ಲಿ ಏನಾದರೂ ತೊಂದರೆಯಾದರೆ ಏನು ತಾನೆ ಮಾಡಿಯಾರು?  ಒಂದು ವೇಳೆ ತೊಂದರೆಯಾದರೂ ಸಹ ಅಲ್ಲಿ ಅಜ್ಜಿಯ ಬಗ್ಗೆ ತಲೆಕೆಡಿಸಿ ಕೊಳ್ಳುವವರಾರು ಇಲ್ಲ.
ಇಲ್ಲಿ ಅಜ್ಜಿಗೆ ಯಾರು ಇಲ್ಲದೆ ಈ ಪರಿಸ್ಥಿತಿ ಬಂದಿಲ್ಲ, ಇಲ್ಲಿ ಅಜ್ಜಿಗೆ ಎರಡು ಜನ ಸುಪುತ್ರರಿದ್ದೂ ,  ಪಾಪ ಅಜ್ಜಿ ಅನಾಥೆಯಂತೆ ಜೀವನ ನಡೆಸುತ್ತಿದ್ದಾರೆ. ಈ ರೀತಿಯ ಜೀವನವನ್ನು ನಡೆಸುತ್ತಿರುವುದು  ಮಂಗಳೂರು ತಾಲ್ಲೂಕಿನ  ಕಿನ್ನಿಗೊಳಿ ಸಮೀಪದ ಹಿಂದುಳಿದ ವರ್ಗದ ವಸತಿ ಪ್ರದೇಶದಲ್ಲಿ.ಅಜ್ಜಿ ಒಂದೇ ಸ್ಥಳದಲ್ಲಿ ಅನೇಕ ವರ್ಷಗಳಿಂದ ವಾಸ ಮಾಡುತ್ತಿದ್ದರೂ ಸಹ ಅವರಿಗೆ ಹಕ್ಕು ಪತ್ರ ದೊರಕ್ಕಿಲ್ಲ. ಇಲ್ಲಿಯ ಇನ್ನುಳಿದ ಕುಟುಂಬಗಳಿಗೆ ಹಕ್ಕು ಪತ್ರ ದೊರಕಿದೆ. ಈ ಹಕ್ಕು ಪತ್ರಕ್ಕಾಗಿ ಅಜ್ಜಿ ಅನೇಕ ವರ್ಷಗಳಿಂದ ಹೋರಾಡುತ್ತಿದ್ದರೂ ಅವರಿಗೆ  ಸಂಬಂಧಪಟ್ಟ ಪಂಚಾಯಿತಿಯವರು ಹಕ್ಕು ಪತ್ರ ನೀಡಿಲ್ಲ. ಈ ಹಕ್ಕು ಪತ್ರಕ್ಕಾಗಿ ಅಜ್ಜಿಯೇ ಹೋರಾಡುತ್ತಿದ್ದಾರೆ ಹೊರತು ಅವರ ಮಕ್ಕಳಿಂದ ಯಾವ ಪ್ರಯತ್ನವೂ ನಡೆದಿಲ್ಲ. ಹಕ್ಕು ಪತ್ರವಿಲ್ಲದ ಈ ಅಜ್ಜಿಗೆ ಸರಕಾರದಿಂದ ಸಿಗಬುಹುದಾದ ಮನೆಯನ್ನು ಪಡೆಯಲು ಸಾಧ್ಯವಾಗಿಲ್ಲ.
ಅಜ್ಜಿ ಹುಲ್ಲಿನ ಗುಡಿಸಲಿನಲ್ಲಿ ಜೀವನವನ್ನು ನಡೆಸುತ್ತಿದ್ದಾರೆ. ಅಜ್ಜಿ ತನ್ನ ತೋಳಿನಲ್ಲಿ ಬಲವಿಲ್ಲದಿದ್ದರೂ, ಕಣ್ಣು ಸರಿಯಾಗಿ ಕಾಣದಿದ್ದರೂ ದಿನವೂ ಬುಟ್ಟಿಯನ್ನು ತಯಾರು ಮಾಡಲೇಬೇಕು. ಇಲ್ಲದಿದ್ದರೆ ಅಂದು ಉಪವಾಸವೇಗತಿ. ಆದರೆ ಇಲ್ಲಿ ಅಜ್ಜಿ ತನ್ನ ಸ್ವಂತ ಆರೋಗ್ಯವಂತ ಮಗನೊಂದಿಗಿದ್ದುಕೊಂಡು ಈ ರೀತಿಯ ಜೀವನವನ್ನು ನಡೆಸುತ್ತಿರುವುದು ವಿಪರ್ಯಾಸವೇ ಸರಿ. ಇಲ್ಲಿ ತನ್ನ ತೋಳ್ ಬಲದಿಂದ ದುಡಿಯದೆ ಅಜ್ಜಿ ಬುಟ್ಟಿಮಾಡಿ ಸಂಪಾದಿಸುವ ಹಣಕ್ಕಾಗಿ ಕಾದು ಕುಳಿತು ಅದರಿಂದಲೇ ಜೀವನವನ್ನು ನಡೆಸುವ ಪುಣ್ಯಾತ್ಮ ಮಗನಿವನು. ಅಜ್ಜಿ ತನ್ನ ಬೆನ್ನು ನೋವನ್ನು ಸಹಿಸಿಕೊಂಡು ಸಣ್ಣಪುಟ್ಟ ಬುಟ್ಟಿಯನ್ನು ಮಾಡಿ ಸಂಪಾದಿಸುವ ೧೦, ೨೦ ರೂಪಾಯಿಗೆ ಕಾದುಕುಳಿತು ಕೊಳ್ಳುವ ನಿಷ್ಠಾವಂತನಿವನು.
ಅಜ್ಜಿ ಕಷ್ಟಪಟ್ಟು ತಯಾರಿಸಿದ ಬುಟ್ಟಿಯನ್ನು ಈ ಸುಪುತ್ರ ನೇರವಾಗಿ ಅಂಗಡಿಗೆ ತೆಗೆದುಕೊಂಡು ಹೋಗಿ ಮಾರಾಟಮಾಡಿ ಅದರಲ್ಲಿ ಬಂದ ಹಣದಿಂದ ಬೇಕಾದಷ್ಟು ಸಾರಾಯಿ ಹೊಟ್ಟೆಗಿಳಿಸಿ, ಅಲ್ಪ ಸ್ವಲ್ಪ ಹಣದಲ್ಲಿ ಅಕ್ಕಿತಂದು ಅರೆಬರೆಯಾಗಿ ಅದನ್ನು ಬೇಯಿಸಿ ಅಜ್ಜಿಗೆ ತಿನ್ನಲು ಹಾಕುತ್ತಾನೆ. ಸರಿಯಾಗಿ ಅನ್ನ ಹಾಕುವ ಯ್ಯೋಗ್ಯತೆಯೂ ಇವನಿಗಿಲ್ಲ. ಇದಲ್ಲದೆ ಅಜ್ಜಿ ದುಡ್ಡಿನ ಕುರಿತಂತೆ ಏನಾದ್ರೂ ಕೇಳಿದರೆ `ಸುಮ್ಮನಿರು ಇಲ್ಲದಿದ್ದರೆ ಬಡಿಯುತ್ತೇನೆ’ ಈಗ ಹೆದರಿಸುತ್ತಾನೆ. ನೋಡಿ ಇದು ಹೆತ್ತ ತಾಯಿಗೆ ಮಗ ಹೇಳುವ ಮಾತು.
ಅಜ್ಜಿ ಮಗನ ಹಿಂಸೆಯಿಂದ ಇಷ್ಟೆಲ್ಲ ನೊಂದರೂ ಸಹ, ನಾವು ಯಾರಾದರೂ ಅವರನ್ನು ಮಾತಾಡಿಸಿದರೆ ಅವರು ಲವಲವಿಕೆಯಿಂದ  ಅವರ ಜೀವನದಲ್ಲಿ ಏನು ತೊಂದ್ರೆನೇ ಇಲ್ಲದ ಹಾಗೆ ಮಾತನಾಡುತ್ತಾರೆ. ನಾವು ಅವರನ್ನು ಭೇಟಿಯಾಗಿ ಮಾತನಾಡಿಸಿದಾಗಲು ತಮ್ಮ ನೋವನ್ನು ತೋರಿಸಿಕೊಳ್ಳಲಿಲ್ಲ.  ಆದರೆ ನಮ್ಮ ಪ್ರಶ್ನೆಗಳಿಗೆ ಉತ್ತರ ನೀಡುತ್ತ ತಮ್ಮ ಮಕ್ಕಳ ಹಣೆಬರಹವನ್ನು ಹೇಳುತ್ತಾ ದು:ಖತಪ್ತರಾದರು. ಕೊನೆಗೆ ಅವರು ಹೇಳಿದ ಮಾತು  ‘ನಾನು ಸತ್ತು ಹೋಗಿದ್ದರೆ ಚೆನ್ನಾಗಿತ್ತು ‘.
ಅಜ್ಜಿ ನಿಮಗೆ ಯಾರು ಸಹಾಯ ಮಾಡುವವರಿಲ್ಲವೇ? ಎಂದು ಕೇಳಿದಾಗ ಅಜ್ಜಿ ‘ ನನ್ನ ಎರಡನೇ ಮಗ ಅಪರೂಪಕೊಮ್ಮೆ ಬಂದು ನೋಡಿಕೊಂಡು ಹೋಗುತ್ತಾನೆ’. ಅಲ್ಲೇ ಇದ್ದ ಪಕ್ಕದ ಮನೆಯ ಹೆಂಗಸನ್ನು ಕರೆದು ನಮಗೆ ತೋರಿಸಿ ‘ನೋಡಿ ಇವರೇ ನನ್ನನ್ನು ನೋಡಿಕೊಳ್ಳುವುದು. ಅವರು ನನ್ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ. ಅವಳಿರುದರಿಂದ ನಾನು ಇಷ್ಟು ಸಮಯದವರೆಗೆ ಬದುಕ್ಕಿದ್ದೇನೆ’ ಎಂದು ಹೇಳಿ ಮಗ ದೂರದಲ್ಲಿ ಬರುತ್ತಿರುವುದನ್ನು ಕಂಡೊಡನೆ, ತನ್ನ ಮಾತಿನ ದಾರಿಯನ್ನು ಬದಲಾಯಿಸಿ ಬೇರೇನೋ ಹೇಳುತ್ತಾ ತನ್ನ ಬುಟ್ಟಿ ನೇಯುವ ಕೆಲಸವನ್ನು ಅತೀವೇಗದಿಂದ ಮಾಡತೊಡಗಿದರು. ‘ಯಾಕೆ ಅಜ್ಜಿ ಮಾತು ಬದಲಾಯಿಸಿದಿರಿ’ ಎಂದು ನಾವು ಕೇಳಿದಾಗ ಕಣ್ಣಿನಲ್ಲಿಯೇ ಸುಮ್ಮನಿರಿ ಎಂದು ಹೇಳಿದರು. ಅಜ್ಜಿಯ ಮುಖದಲ್ಲಿ ಮಗನ ಬಗೆಗಿರುವ ಭಯ ವ್ಯಕ್ತವಾಗುತ್ತಿತ್ತು. ಹಾಗಾದರೆ ನೀವೇ ಯೋಚಿಸಿ ಇವನು ಯಾವರೀತಿಯ ಹಿಂಸೆಯನ್ನು ನೀಡಿರಬಹುದೆಂದು.
ಕೊನೆಗೆ ನಾವು ಅಜ್ಜಿಯ ಪರಿಸ್ಥಿತಿಯನ್ನು ತಿಳಿದು ಅಲ್ಲಿಂದ ಹೊರಡಲು ಮುಂದಾಗಿ ನಮ್ಮ ಕಿರುಕಾಣಿಕೆಯನ್ನು ಅವರ ಕೈಗೆ ಕೊಡಲು ಮುಂದಾದಾಗ ನನ್ನ  ಕೈಗೆ ಕೊಡಬೇಡಿ ಮಗ ಕಂಡರೆ ಕಿತ್ತುಕೊಳ್ಳುತ್ತಾನೆ. ಪಕ್ಕದ ಮನೆಯ ಹೆಂಗಸಿನ ಕೈಗೆ ಕೊಟ್ಟು ಹೋಗಿ ಎಂದು ಹೇಳಿ ಸುಮ್ಮನಾದಳು.
ಇದೆಲ್ಲವನ್ನು ನೋಡಿ ನಾವು ಅಲ್ಲಿಂದ ಹೊರಟು ಬಂದನಂತರ ನಮ್ಮನ್ನು ಪದೇ ಪದೇ ಕಾಡಿದ ಪ್ರಶ್ನೆ ಇನ್ನೆಷ್ಟು ತಂದೆ, ತಾಯಿಯಂದಿರು ತಮ್ಮ ಮಕ್ಕಳಿಂದ ಇಂತಹ ಕಷ್ಟಗಳನ್ನು ಅನುಭವಿಸುತ್ತಿರಬಹುದೆಂದು!

2 ಟಿಪ್ಪಣಿಗಳು Post a comment
  1. krishnaveni g.s's avatar
    krishnaveni g.s
    ಮಾರ್ಚ್ 22 2011

    ಪವನ್, ನಿಮ್ಮನ್ನು ಕಾಡಿದ ಆ ಕಟ್ಟ ಕಡೆಯ ಪ್ರಶ್ನೇ ಇದೆಯಲ್ಲ ಅದರ ಬೆನ್ನತ್ತಿ ಹೊರಟರೆ ನಮಗೆ ನೂರಾರು ಕುಟುಂಬಗಳು ಸಿಗುತ್ತವೆ. ತಂದೆ ತಾಯಂದಿರು ದೇವರ ಸಮಾನ .ಅವರ ಇಳಿ ವಯಸ್ಸಿನಲ್ಲಿ ನೋಡಿಕೊಳ್ಳುವುದು ನಮ್ಮ ಕರ್ತವ್ಯ ಎಂದು ತಿಳಿಯುವವರು ಕಡಿಮೆ ಆಗುತ್ತಿದ್ದಾರೆ. ಮಕ್ಕಳಂತು ಹಾಗೆ ಇದ್ದಾರೆ, ಇನ್ನೇನು ಮಾಡೋದು ನೈತಿಕತೆಯ ಅಧಃ ಪತನ ಅಂದು ಕೊಳ್ಳುವ , ಜನರ ಒಳಿತಿಗಾಗಿರುವ ಸರಕಾರದ ಯೋಜನೆಗಳಿಗೂ ವಯಸ್ಸಾದವರೆಂದರೆ ತಾರತಮ್ಯವೆ!! ಯೋಜನೆಗಳ ದುರುಪಯೋಗವೆ ಹೆಚ್ಚಾಗುವ ಕಾಲದಲ್ಲಿ ಸುದುಪಯೋಗ ಹೇಗಾಗ ಬೇಕು . ಇಲ್ಲಿ ಯೋಜನೆಗಳ ಫಲ ಸಿಗಬೇಕಾದವರಿಗೆ ಸಿಗುವುದಿಲ್ಲ. ಇನ್ನು ವೃದ್ಧಾಪ್ಯ ವೇತನದಂತಹ ಯೋಜನೆಗಳು ಇದಕ್ಕೆ ಹೊರತಲ್ಲ. ಸಂಕಷ್ಟದಲ್ಲಿರುವ ಅಜ್ಜ ಅಜ್ಜಿಯರಿಗೆ ಅದು ತಲಪುವಂತಾಗಲು ಸಂಬಂಧಪಟ್ಟ ಗ್ರಾಮ ಪಂಚಾಯಿತಿಗಳೇಕೆ ಗಮನಹರಿಸ ಬಾರದು!!

    ಉತ್ತರ
  2. ROOPA's avatar
    ಮಾರ್ಚ್ 23 2011

    ಇದನ್ನೆಲ್ಲಾ ಓದುತ್ತಿದ್ದಲ್ಲಿ ಯಾರಿಗಾಗಿ ಇಷ್ಟು ಕಷ್ಟ ಪಟ್ಟು ದುಡಿಯುತ್ತಿರುವುದು ಎಂದೆನಿಸುತ್ತದೆ. ಮಕ್ಕಳು ಮಕ್ಕಳು ಎಂದು ನಮ್ಮ ಆಸೆ ಆಕಾಂಕ್ಷೆ ಗಳನ್ನು ಅದುಮಿಟ್ಟು,ಹೊಟ್ಟೆ ಬಟ್ಟೆ ಕಟ್ಟಿ ಬೆಳೆಸುವ ಪೋಷಕರು ಕೊನೆಗೆ ಅನುಭವಿಸಬೇಕಾಗುವ ನೋವು ನಿಜಕ್ಕೂ ಯೋಚಿಸಬೇಕಾದಂತಹುದ್ದು

    ಉತ್ತರ

Leave a reply to ROOPA ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments