ವಿಷಯದ ವಿವರಗಳಿಗೆ ದಾಟಿರಿ

Archive for

21
ಮಾರ್ಚ್

ಪಕ್ಷಗಳ ಆಟಕ್ಕೆ ಜನರ ಹಣವೇಕೆ ಬಲಿ?

– ರಾಕೇಶ್ ಶೆಟ್ಟಿ

ಮತ್ತೆ ೩ ಕ್ಷೇತ್ರಗಳಲ್ಲಿ ಉಪಚುನಾವಣೆ ಬಂದು ನಿಂತಿದೆ.ಮೊದಲೆಲ್ಲ ಜನಪ್ರತಿನಿಧಿಗಳ ಮರಣದಿಂದಾಗಿಯೇ ಉಪಚುನಾವಣೆಗಳು ನಡೆಯುತಿದ್ವು.ಅದರ ನಡುವೆ ನಮ್ಮ ಚುನಾವಣ ಆಯೋಗದ ತಲೆ ಕೆಟ್ಟ ಒಂದು ಕಾನೂನು ಇದ್ಯಲ್ಲ : ’ಒಂದೇ ಕಾಲದಲ್ಲಿ ಒಬ್ಬ ಅಭ್ಯರ್ಥಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಬಹುದು’ ಅಂತ.ಅದೂ ಕೂಡ ಕೆಲವೊಮ್ಮೆ ಉಪಚುನಾವಣೆಗೆ ಕಾರಣವಾಗಿದ್ದಿದೆ.ಉದಾಹರಣೆಗೆ ಸೋನಿಯ ಮೇಡಂ ಬಳ್ಳಾರಿಲಿ ಗೆದ್ದು ’ಕೈ’ ಎತ್ತಿ ಹೊರಟಿದ್ದು ಗೊತ್ತಿದೆ ಅಲ್ವಾ?

ನಮ್ ದೇವೆಗೌಡ್ರು ಪ್ರಧಾನಿ ಕುರ್ಚಿಯಿಂದ ಇಳಿದು ಬಂದ್ಮೇಲೆ ಎದುರಿಸಿದ ಲೋಕಸಭಾಚುನಾವಣೆಯಲ್ಲಿ ಹಾಸನದಿಂದ ಸ್ಪರ್ಧಿಸಿ ಸೋತು,ಆ ನಂತರ ಕನಕಪುರದಲ್ಲಿ ನಡೆದ ಉಪಲೋಕಸಭೆ ಚುನಾವಣೆಯಲ್ಲಿ ಗೆದ್ದು ಬಂದಿದ್ರು.ಆ ನಂತರ ನಡೆದ ಲೋಕಸಭಾ ಚುನಾವಣೆಯಲ್ಲಿ ಹಾಸನ ಮತ್ತೆ ಕನಕಪುರ ಎರಡೂ ಕ್ಷೇತ್ರದಿಂದ ಸ್ಪರ್ಧಿಸಿದ್ರು.ಒಂದು ವೇಳೆ ಎರಡೂ ಕಡೆ ಗೆದ್ದಿದ್ರೆ ಹಾಸನ ಕೈ ಬಿಡ್ತಾ ಇದ್ರೂ ಅಂತ ಆಗ ಜನ ಮಾತಡಿಕೊಳ್ತಾ ಇದ್ರು.ದೇವರ ದಯೆ ಹಾಸನದಲ್ಲಿ ಮಾತ್ರ ಗೆದ್ರು! 🙂

ದೇವರ ದಯೆ ಅಂತ್ಯಾಕ್ ಹೇಳ್ದೆ ಅಂದ್ರೆ, ಹೀಗೆ ಎರಡೂ ಕಡೆ ನಿಂತೂ ಎರಡೂ ಕಡೆ ಗೆದ್ರೆ, ಅವ್ರು ಒಂದು ಕ್ಷೇತ್ರವನ್ನ ಬಿಟ್ಟುಕೊಡಲೇಬೇಕಲ್ವಾ? ಆಗ ತೆರವಾದ ಸ್ಥಾನಕ್ಕೆ ಮತ್ತೊಮ್ಮೆ ಉಪಚುನಾವಣೆ ಬಂದು ನಿಲ್ಲುತ್ತೆ. ಮತ್ತೆ ನಮ್ಮ ಜನರು ಬೆವರು ಸುರಿಸಿದ ತೆರಿಗೆ ಹಣ ಪೋಲು ಆಗೋದಿಲ್ವಾ?

ಈ ಬಾರಿಯ ಬಿಜೆಪಿ ಸರ್ಕಾರ ಬಂದು ಆಪರೇಶನ್ ಕಮಲ ಅಂತ ಹೇಳಿಕೊಂಡು ಮಾಡಿದ್ದು ಜನರ ತೆರಿಗೆ ಹಣದ ಆಪರೇಶನ್ ಅಲ್ವಾ?… ಈ ಮಧ್ಯೆ ಕುಮಾರಸ್ವಾಮಿಯವ್ರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂ.ಪಿ ಆದ್ರು,ಈಗ ಮತ್ತೆ ಚನ್ನಪಟ್ಟಣ ಉಪಚುನಾವಣೆಗೆ ನಿಲ್ತಾ ಇದ್ದರೆ.ಅಲ್ಲಿ ಗೆದ್ರೆ ಮತ್ತೆ ಲೋಕಸಭೆಯ ಸ್ಥಾನಕ್ಕೆ ಉಪಚುನಾವಣೆ ನಡಿಬೇಕಲ್ವಾ?…

Read more »

21
ಮಾರ್ಚ್

ಸಾವಯವ ಕೃಷಿ ಎಂಬ ಮೂರ್ಖತನ !

– ಶ್ರೀ ಹರ್ಷ ಸಾಲಿಮಠ

ವ್ಯವಸಾಯ ಎಂಬುದು ಭಾರತ ದೇಶದ ಮಟ್ಟಿಗೆ ಉದ್ಯೋಗ ಮತ್ತು ಹೊಟ್ಟೆಪಾಡು ಮಾತ್ರವಲ್ಲ. ಅದೊಂದು ಸಂಸ್ಕೃತಿ, ಜೀವನಶೈಲಿ. ಅದೆಷ್ಟೋ ವರ್ಷಗಳಿಂದ ನಾಗರಿಕತೆಯನ್ನು ಸಲಹಿಕೊಂಡು ಬಂದ ದಾರಿ.ಮನುಷ್ಯ ಒಂದೆಡೆ ನಿಂತು ನೆಲೆಯೂರಿ ತನ್ನದೊಂದು ಬದುಕು ಕಟ್ಟಿ ಕೊಳ್ಳುವುದು ಸಾಧ್ಯವಾದದ್ದೇ ಅವನು ಬೇಸಾಯ ಮಾಡಲು ಆರಂಭಿಸಿದಾಗಿನಿಂದ.
ಇತ್ತೀಚೆಗೆ ಸಾವಯವ ಕೃಷಿ ಎಂಬುದು ಬಹಳವಾಗಿ ಕೇಳಿ ಬರುತ್ತಿರುವ ಸುದ್ದಿ. ಸರಕಾರವೂ ಸೇರಿದಂತೆ ಸಮೂಹ ಸನ್ನಿಗೊಳಗಾದಂತೆ ಸಾವಯವ ಕೃಷಿಯ ಕಡೆ ಜನ ಓಡುತ್ತಿದ್ದಾರೆ.  ಸುಭಾಶ್ ಪಾಳೇಕರ್ ರಂತಹ ಅನೇಕರು ಕೃಷಿ ಗುರುಗಳಾಗಿದ್ದಾರೆ.
ಅವರ ಬಳಿ ನೂರಾರು ರೈತರು ಸಾವಯವ ಕೃಷಿಯ ತರಬೇತಿ ಪಡೆದು ಬೇಸಾಯದಲ್ಲಿ ತೊಡಗಿದ್ದಾರೆ. ರಸಗೊಬ್ಬರ ಹಾಕಿ ಹಣ ಕಳೆದುಕೊಂಡವರಂತೆ ಸಾವಯವ ಕೃಷಿಗೆ ಮೊರೆ ಹೋದವರೂ ಹಣ ಕಳೆದುಕೊಂಡಿದ್ದಾರೆ. ಸಮಯ ಹಾಳು ಮಾಡಿಕೊಂಡಿದ್ದಾರೆ.ಅದೆಷ್ಟೇ ತರಬೇತಿ ಶಿಬಿರ ಪ್ರಚಾರ ನಡೆಯುತ್ತಿದ್ದರೂ ರೈತರ ಪರಿಸ್ಥಿತಿ ಸುಧಾರಿಸುತ್ತಿಲ್ಲ.
ನಮ್ಮ ದೇಶದಲ್ಲಿ ನೆಲ ಜಲ ಭಾಷೆ ಔಶಧಿ ನಲವತ್ತು ಕಿಲೋಮೀಟರು ಗಳಿಗೊಮ್ಮೆ ಬದಲಾಗುತ್ತದೆ. ಮಣ್ಣಿನ ಗುಣ ಪ್ರತಿ ನಲವತ್ತು ನಲವತ್ತು ಕಿಲೋಮೀಟರುಗಳಿಗೆ ಬದಲಾಗುತ್ತದೆ. ಗಾಳಿ ಬೀಸುವ ದಿಕ್ಕು, ಮಳೆಯ ಪ್ರಮಾಣ, ಭೂಮಿಯ ಗಟ್ಟಿತನ, ನೀರಿನ ಕ್ಷಾರತೆ ಎಲ್ಲವೂ ಬದಲಾಗುತ್ತಾ ಹೋಗುತ್ತದೆ. ಅಷ್ಟೇ ಅಲ್ಲ ಅಲ್ಲಿನ ಪ್ರಾಣಿಸಂಪತ್ತು ಸಹ ಬದಲಾಗುತ್ತದೆ. ಅಸುಗಳ ಜಾತಿ ಮತ್ತು ಅವುಗಳ ಹೊಂದಿಕೊಳ್ಳುವಿಕೆ ಬದಲಾಗುತ್ತದೆ.  ಬೆಳೆಯುವ ಬೆಳೆ ಸಂಪೂರ್ಣವಾಗಿ ಈ ಎಲ್ಲ ಪ್ರಾಕೃತಿಕ ಗುಣಗಳ ಮೇಲೆ ಅವಲಂಬನೆಯಾಗಿರುತ್ತದೆ.

ಉದಾಹರಣೆಗೆ ಮಲೆನಾಡಿನಲ್ಲಿ ಬೇಸಿನ ಮರ ಜಾಲಿಯ ಮರಗಳು ಬೆಳೆಯುವದಿಲ್ಲ, ಅದೇ ಸಮಯಕ್ಕೆ ಬಯಲುಸೀಮೆಯಲ್ಲಿ ಜಾಲಿಯ ಮರ ಆಳದಷ್ಟು ದೊಡ್ಡದಾಗಿ ಬೆಳೆಯುತ್ತದೆ. ಮಲೆನಾಡಿನ ಔಷಧೀಯ ಸಸ್ಯಗಳು ಬಯಲು ಸೀಮೆಯ ಕಡೆ ಬೆಳೆಯಲು ಸಾಧ್ಯವೆ ಇಲ್ಲ. ಹೀಗಿರುವಾಗ ಆಯಾ ನೆಲದ ಪ್ರಾಕೃತಿಕ ಅಂಶಗಳಿಗೆ ಅನುಗುಣವಾಗಿ ಬೆಳೆ ಬರುವಂತೆ ಕೃಷಿ ಇರಬೇಕೆ ಹೊರತು ಎಲ್ಲೋ ನಡೆಸಿದ ಪ್ರಯೋಗಗಳಿಗೆ ಅನುಗುಣವಾಗಿ ಅಲ್ಲ. ಸುಭಾಶ್ ಪಾಳೇಕರ್ ಅವರ ಪ್ರಯೋಗ ನಡೆದಿರುವುದು ಮಹಾರಾಷ್ಟ್ರದ ಗದ್ದೆಗಳಲ್ಲಿ. ಅವರ ಪ್ರಯೋಗಗಳಲ್ಲಿ  ಅಲ್ಲಿಯ ಪರಿಸರಕ್ಕೆ ಸರಿ ಹೊಂದುವಂತೆ ಕೆಲವು ಯಶಸ್ಸುಗಳು ಕೆಲವು ಅಪಜಯಗಳೂ ಸಿಕ್ಕಿರುತ್ತವೆ. ಅಲ್ಲಿನ ಯಶಸ್ವಿ ಸೂತ್ರಗಳನ್ನು ಅವರು ಎಲ್ಲೆಡೆ ಬೋಧಿಸುತ್ತಿದ್ದಾರೆ. ಆ ಯಶಸ್ಸನ್ನು ಹಿಂಬಾಲಿಸಿ ಜನ ಬೇಸಾಯ ಕೈಗೊಂಡು ಕೈ ಸುಟ್ಟು ಕೊಳ್ಳುತ್ತಿದ್ದಾರೆ.

Read more »

19
ಮಾರ್ಚ್

ಈ ಸಾವು ನ್ಯಾಯವೇ?

– ರೂಪ ರಾವ್

ಮೊನ್ನೆಯ ಬೆಂಗಳೂರು ಮಿರರ್ ಪತ್ರಿಕೆಯಲ್ಲಿ ಓದಿದ ಸುದ್ದಿಯೊಂದು ಮನಸನ್ನ್ನು ಗಾಢವಾಗಿ ಕಾಡಿತು. ಸಯೋನಿ ಚಟರ್ಜಿ ಎಂಬ ಹನ್ನೊಂದರ ಮುದ್ದು ಬಾಲೆಯ ಫೋಟೊ ನೋಡುತ್ತಿದ್ದಂತೆ ಮನಸು ಕಲಕಿತು.

ಈ ಘ್ಹಟನೆ ನಡೆದದ್ದು ಮುಂಬೈನ ಉಲ್ಹಾಸ್ ನಗರದ ಶಾಲೆಯೊಂದರಲ್ಲಿ.
ಹನ್ನೊಂದು ವರ್ಷದ ಸಯೋನಿ ತನ್ನ ಸಹಪಾಠಿಯೊಬ್ಬನ ಜೊತೆ ಹೊಂದಿದ್ದ ಸಂಬಂಧದ ಬಗ್ಗೆ ತನ್ನ ಡೈರಿಯಲ್ಲಿ ಬರೆಯುತ್ತಿದ್ದಳು.ಎಲ್ಲರಿಗೂ ಗೊತ್ತು ಇದೊಂದು ಹದಿವಯಸಿನ ಆಕರ್ಷಣೆ. ನಮಗೆಲ್ಲಾ ಹದಿನಾರರಲ್ಲಿ ಶುರುವಾಗಿದ್ದು ಈ ಬಾಲೆಗೆ ಹನ್ನೊಂದಕ್ಕೆ ಶುರುವಾಗಿತ್ತು.ಇದು ಅಂದು ಅವಳ ತಾಯಿಯಕಣ್ಣಿಗೆ ಬಿತ್ತು . ಆ ತಾಯಿ ಮಗಳನ್ನುಈ ಸಂಬಂಧ ತರಾಟೆ ತೆಗೆದುಕೊಂಡು ಬೈದಿದ್ದಾರೆ.
ಆಷ್ಟಕ್ಕೆ ಸುಮ್ಮನಾಗಬಹುದಿತ್ತು.ಆದರೆ ಈ ವಿಷಯವನ್ನು ಕ್ಲಾಸ್ ಟೀಚರ್ ಹಾಗು ಹೆಡ್ ಮಿಸ್‌ ಜೊತೆ ಮಾತಾಡುತ್ತೇನೆ ಎಂದು  ಸಯೋನಿ ಶಾಲೆಗೆ ಹೊರಟರು ಅವಳ ತಾಯಿ
ಮೊದಲೇ ಎಳೆ ಮನಸು.ಶಾಲೆಯಲ್ಲಾಗುವ ಅವಮಾನವನ್ನು ತಾಳಲಾರದಾಯ್ತೇನೊ. ತನ್ನ ಸಹಪಾಠಿಗೆ ಈ ವಿಷಯವನ್ನು ಪತ್ರದ ಮೂಲಕ ತಿಳಿಸಿದ್ದಾಳೆ.
ಆ ಪತ್ರವನ್ನು ಓದುತ್ತಿದ್ದರೆ ಎಳೆ ಮನಸಿನಲ್ಲಾಗುತ್ತಿದ್ದ ತಳಮಳವನ್ನು ಊಹಿಸಬಹುದು.ಇತ್ತ ತಾಯಿಯನ್ನೂ ಬೇಡವೆಂದು ಕೇಳಿಕೊಂಡರೂ ತಾಯಿ ಕೇಳುತ್ತಿಲ್ಲ , ಪ್ರಿನ್ಸಿಪಾಲ್ ‌ಅನ್ನು ಭೇಟಿ ಮಾಡಲೇಬೇಕೆಂದು ಆ ತಾಯಿ ಕಾಯುತ್ತಿದ್ದರು.ಇತ್ತ ಮಗು ಮನೆಗೆ ಬಂದು ನೇಣು ಹಾಕಿಕೊಂಡಿತ್ತು.
18
ಮಾರ್ಚ್

ಎಂ ಎನ್ ಸಿಗಳ ತೆಕ್ಕೆಗೆ ಔಷಧ – ಹೆಲ್ತ್ ಫಾರ್ Only rich!

– ಹರ್ಷ ಕುಗ್ವೆ

ಒಂದು ದೇಶದಲ್ಲಿ ತಯಾರಿಸಲಾಗುವ  ಔಷಧ ಮಾತ್ರೆಗಳು ಆ ದೇಶದ ಜನರ  ಆರೋಗ್ಯಕ್ಕಾಗಿ ಅಲ್ಲದೇ ಕೇವಲ ಬಿಸಿನೆಸ್ ಕಂಪನಿಗಳ,  ಅಥವಾ ಬಹುರಾಷ್ಟ್ರೀಯ ಕಂಪನಿಗಳ ಲಾಭಕ್ಕಾಗಿ ತಯಾರಿಸಲ್ಪಟ್ಟರೆ ಏನಾಗುತ್ತದೆ??

ಇದು ಸಧ್ಯದ  ನಮ್ಮ ಭಾರತದ ಸ್ಥಿತಿ. ಇದಕ್ಕೆ ನಮ್ಮ ರಾಜಕಾರಣಿಗಳ, ಉದ್ಯಮಿಗಳ  ದುರಾಸೆ ಒಂದೆಡೆ ಕಾರಣವಾದರೆ ವಿದೇಶೀ ದೈತ್ಯ ಕಂಪನಿಗಳ ಹಸಿವು ಮತ್ತೊಂದು ಕಾರಣ..
ಇದೆಲ್ಲಾ ಹೇಗಾಯ್ತು ಕೊಂಚ ನೋಡೋಣ.

ನಮ್ಮ ದೇಶವು ಪರಕೀಯರ ನೇರ ಮುಷ್ಠಿಯಿಂದ ಪಾರಾದ ಬಳಿಕ ಹಲವಾರು ಕ್ಷೇತ್ರಗಳಲ್ಲಿ ದಾಪುಗಾಲನ್ನಿಟ್ಟಿತ್ತು. ಔಷಧ ತಯಾರಿಕೆಯ ಉದ್ದಿಮೆಯಲ್ಲಿ ಸಹ ಅದು ಮುಂದುವರೆದ ದೇಶಗಳೂ ಹುಬ್ಬೇರಿಸಿ ನಿಲ್ಲುವಂತೆ  ಅಭಿವೃದ್ಧಿ ಸಾಧಿಸಿತು. ನಮ್ಮ ಸಕರ್ಾರವು ಪಾಲಿಸಿದ ಕೆಲವಾರು ಉತ್ತಮ ಆರ್ಥಿಕ ನೀತಿಗಳಿಂದಾಗಿ ನಮ್ಮ ದೇಶದ ಔಷದೋದ್ಯಮವನ್ನು MNC ಸ್ಪರ್ಧೆಯಿಂದ  ರಕ್ಷಿಸಿ ಅದು ಅಭೂತಪೂರ್ವ ಬೆಳವಣಿಗೆ ಸಾಧಿಸುವಂತೆ ಮಾಡಲಾಗಿತ್ತು.  ಔಷದ್ಯುತ್ಪನ್ನಗಳ ಉತ್ಪಾದನೆಯ ಪ್ರಮಾಣದಲ್ಲಿ ಇಡೀ ಪ್ರಪಂಚದಲ್ಲಿ ನಾವೇ ಮೂರನೇ ಸ್ಥಾನಪಡೆಯುವ ಹಂತಕ್ಕೆ ಈ ಬೆಳವಣಿಗೆ ತಲುಪಿತು. ಮಾತ್ರವಲ್ಲ ಜನರ ಅಗತ್ಯಕ್ಕನುಗುಣವಾಗಿ  ಉತ್ತಮ ಗುಣಮಟ್ಟದ ಔಷಧಿಗಳು ಕಡಿಮೆ ಬೆಲೆಯಲ್ಲಿ ಲಭ್ಯವಾಗುವಂತೆ ಮಾಡಿದ್ದೂ ನಮ್ಮ ಉದ್ದಿಮೆಯ ಹೆಗ್ಗಳಿಕೆ.
2105ರ ಸುಮಾರಿಗೆ ಭಾರತದ ಔಷಧಿ ಮಾರುಕಟ್ಟೆಯಲ್ಲಿ ಒಂದು ವರ್ಷಕ್ಕೆ ನಡೆಯುವ ವಹಿವಾಟು   ಎಷ್ಟು ಗೊತ್ತೇ? ಬರೋಬ್ಬರಿ 90ಸಾವಿರ ಕೋಟಿ!

Read more »

18
ಮಾರ್ಚ್

‘ಕುಂದನಗರಿ’ಯ ಸಮ್ಮೇಳನದ ನೆನಪುಗಳು…!

– ಅರೆಹೊಳೆ ಸದಾಶಿವ ರಾವ್

ಹಾಗೆ ನೋಡಿದರೆ ಬೆಳಗಾವಿಗೆ ನಾನು ಎರಡು ತಿಂಗಳಿಗೊಮ್ಮೆ ಹೋಗುತ್ತಿರುತ್ತೇನೆ. ಹಾಗಾಗಿ ಸಂಪೂರ್ಣ ಅಲ್ಲದಿದ್ದರೂ ಬೆಳಗಾವಿಯ ರಸ್ತೆ ಮತ್ತದರ ದುರವಸ್ತೆಗಳನ್ನು ಆಗಾಗ ಗಮನಿಸಿದ್ದೇನೆ. ಇವತ್ತು ಬೆಳಗಾವಿ ಏನಾದರೂ ನಮ್ಮ ಪ್ರಭುಗಳ ಗಮನ ಸೆಳೆದಿದ್ದರೆ, ಅದಕ್ಕೆ ಮರಾಠಿಗರು ಖಂಡಿತಕ್ಕೂ ಕಾರಣರು! ಏಕೆಂದರೆ ಬೆಳಗಾವಿ ತಮ್ಮದು ಎಂಬ ವಿವಾದವನ್ನು ಸದಾ ಜೀವಂತವಾಗಿಟ್ಟುಕೊಂಡಿರುವವರು ಮರಾಠಿಗರು. ಈ ಹಿನ್ನೆಲೆಯಲ್ಲಿ ನಮ್ಮ ಪ್ರಭುತ್ವ, ಬೆಳಗಾವಿಯನ್ನು ಒಂದು ಕಣ್ಣಿಟ್ಟು ನೋಡುತ್ತಲೇ ಇರುತ್ತದೆ! ಅದಿಲ್ಲವಾಗಿದ್ದರೆ ಬಹುಶ: ಈ ಕುಂದನಗರಿಯೂ  ಉತ್ತರ ಕರ್ನಾಟಕದ ಇತರ ಜಿಲ್ಲೆ-ಪಟ್ಟಣಗಳಂತೆ ನಿರ್ಲಕ್ಷ್ಯದ ಬೇಗುದಿಯಲ್ಲಿ ಕಾಲ ತಳ್ಳುತ್ತಲೇ ಇರುತ್ತಿತ್ತೇನೋ!.

ಅದಿರಲಿ, ಈಗ ವಿಷಯ ಅದಲ್ಲ. ಇಪ್ಪತ್ತೈದು ವರ್ಷಗಳ ನಂತರ ಈ ಕುಂದ ನಗರಿಯಲ್ಲಿ ಎರಡನೆಯ ವಿಶ್ವ ಕನ್ನಡ ಸಮ್ಮೇಳನ ನಡೆಯಿತಲ್ಲ; ಒಂದು ಅಪೂರ್ವ ಅವಕಾಶವೆಂಬಂತೆ, ನಾನೂ ಅದರಲ್ಲಿ ಭಾಗವಹಿಸುವ ಉದ್ದೇಶದಿಂದ ಹೋಗಿದ್ದೆ. ಸಮ್ಮೇಳನದ ಬಗ್ಗೆ, ಅಲ್ಲಿ ಮುಳುಗಿ ಹೋದ ೩೭ಕೋಟಿ ರೂಪಾಯಿಗಳ ಬಗ್ಗೆ ಮಾಧ್ಯಮಗಳು ಮಾತಾಡುತ್ತಲೇ ಇರುವುದನ್ನು ಕೇಳಿದ್ದೀರಿ. ನಾನು ಗಮನಿಸಿದ ಒಂದು ಅಂಶವೆಂದರೆ, ಬೆಳಗಾವಿಗೆ ಕಾಲಿಟ್ಟರೆ ಪ್ರತೀ ರಸ್ತೆಗಳೂ ರಿಪೇರಿಯಾಗಿರುವುದು ಬಿಟ್ಟರೆ, ಪಟ್ಟಣ ಸಿಂಗಾರಗೊಂಡಿರುವುದು ಮಾತ್ರ ಕಣ್ಣಿಗೆ ಕಾಣುತ್ತದೆ.  ಮತ್ತೆ ಈ ಮೂವತ್ತೇಳು ಕೋಟಿ ಎಲ್ಲಿಗೆ ಹೋಗಿದೆ ಎಂಬುದಕ್ಕೆ ಹುಟುಕಾಡಿದರೂ ಏನೂ ಸಿಗುವುದಿಲ್ಲ.

ಇನ್ನು ಕನ್ನಡ ವೆಂದರೆ ಏನು? ಅದರ ಉಳಿವು-ಅಳಿವು  ಎಂದರೆ ಏನು ಎಂಬುದೂ ಪ್ರಶ್ನೆಯಾಗಿ ಕಾಡಿದ್ದು ಸುಳ್ಳಲ್ಲ! ಈ ರೀತಿಯ ದ್ವಂದ್ವಕ್ಕೂ ಕಾರಣವಿದೆ. ಇದು ವಿಶ್ವ ಕನ್ನಡ ಸಮ್ಮೇಳನ. ಬೆಳಗಾವಿಯ ನಗರದ ಪ್ರತೀ ಗೋಡೆಯ ಮೇಲೂ ಕನ್ನಡ ಉಳಿಸಿ-ಬೆಳೆಸಿ ಎಂಬ ಉದ್ಘೋಷವೇ ಕಾಣುತ್ತಿತ್ತು. ಆದರೆ ಇಡೀ ಮೂರುದಿನ ನಡೆದ ಸಮ್ಮೇಳನದಲ್ಲಿ ಈ ಹಿನ್ನೆಲೆಯಲ್ಲಿ ಏನಾದರೂ ಕ್ರಮಗಳನ್ನು ಸರಕಾರ ಆಗಲೀ, ಸಮ್ಮೇಳನ ಸಮಿತಿಯಾಗಿಯಾಗಲೀ ಕೈಗೊಂಡ ಬಗ್ಗೆ ವರದಿಯಾಗಿಲ್ಲ. ಅದೂ ಅಲ್ಲದೇ ಇದೇ ರೀತಿಯ ಸಮ್ಮೇಳನವನ್ನು ಐದು ವರ್ಷಗಳಿಗೊಮ್ಮೆ ನಡೆಸುವ ತೀರ್ಮಾನವನ್ನು ‘ಬಹುಜನರ’ ಬೇಡಿಕೆಯ ಮೇರೆಗೆ ಮುಖ್ಯಮಂತ್ರಿಗಳು ಕೈಗೊಂಡರು. ಅದು ಒಂದು ರೀತಿಯಲ್ಲಿ ಸಂತಸದ ವಿಚಾರವೇ ಸರಿ…..ಆದರೆ…? Read more »

17
ಮಾರ್ಚ್

‘ದುರ್ಗಾಸ್ತಮಾನ’ ಮತ್ತು ‘ಗಂಡುಗಲಿ ಮದಕರಿ ನಾಯಕ’

–  ಶ್ಯಾಮಲ ಜನಾರ್ದನನ್

ದುರ್ಗಾಸ್ತಮಾನದ ಮುನ್ನುಡಿಯಲ್ಲೇ ಲೇಖಕ ದಿವಂಗತ ಶ್ರೀ ತರಾಸು ಬರೆದಿರುವ “ಚಿತ್ರದುರ್ಗ ಎಂದರೆ ತಮ್ಮ ಕರುಳಿಗೆ ಕಟ್ಟಿಕೊಂಡು ಬೆಳೆದ ಜೀವಂತ ವಸ್ತು – ಮದಕರಿ ನಾಯಕ ಒಬ್ಬ ಅರಸನಲ್ಲ ಜೀವಂತ ಆಪ್ತನೆಂಟ. ಚಿತ್ರದುರ್ಗ – ಮದಕರಿನಾಯಕ ಬೇರೆ ಬೇರೆಯಲ್ಲ ಒಂದೇ ಎಂಬ ಅವಿನಾಭಾವ, ದುರ್ಗ ಎಂದರೆ ಮದಕರಿ, ಮದಕರಿ ಎಂದರೆ ದುರ್ಗ ” ಎಂಬ ಮಾತುಗಳು ಅತ್ಯಂತ ಪ್ರಭಾವೀ ವಾಕ್ಯಗಳಾಗಿ, ನಾವು ಪುಸ್ತಕ ಓದಲು ತೊಡಗುವ ಮೊದಲೇ ನಮ್ಮ ಮನಸ್ಸನ್ನು ದುರ್ಗ-ಮದಕರಿ ಎಂಬ ಮೋಡಿಯಲ್ಲಿ ಸಿಲುಕಿಸುತ್ತದೆ.

ನಾಯಕವಂಶದಲ್ಲಿ ಹಲವಾರು ಮದಕರಿನಾಯಕರುಗಳಿದ್ದರೂ, ಜನತೆ ಈಗಲೂ ತುಂಬಾ ಅಭಿಮಾನದಿಂದ ದುರ್ಗ – ಮದಕರಿ ಎಂದರೆ ನೆನಪಿಸಿಕೊಳ್ಳುವುದು, ಈ ಕಥೆಯ ನಾಯಕ, ಕೊನೆಯ ಪಾಳೆಯಗಾರ / ಅರಸ ಚಿಕ್ಕ ಮದಕರಿನಾಯಕರನ್ನೇ !! ಈ ನಮ್ಮ ಅಭಿಮಾನಕ್ಕೆ ಕಾರಣನಾದ ಮದಕರಿನಾಯಕ ಅತಿ ಸಾಹಸಿ, ಅತಿಕ್ರೂರಿ, ಅತಿಮದಾಂಧ, ಅತಿಕಾಮಿ ಮತ್ತು ದೈವಕೃಪೆ, ಗುರುವಿನ ಅನುಗ್ರಹ ಎರಡನ್ನೂ ಕಳೆದುಕೊಂಡಿದ್ದ ನತದೃಷ್ಟ ಎಂದು ಚಿತ್ರದುರ್ಗ ಸಂಸ್ಥಾನದ ಚಪ್ಪೇ ಚಾವಡಿ ದಳವಾಯಿಗಳ ನೇರ ವಂಶಸ್ಥರಾದ, ಭದ್ರಾವತಿಯ ಉಕ್ಕಿನ ಕಾರ್ಖಾನೆಯ ನಿವೃತ್ತ ವರ್ಕ್ಸ್ ಮ್ಯಾನೇಜರ್ ಶ್ರೀ ಸಿ ಪರಶುರಾಮನಾಯಕ್ ರವರು ಹೇಳಿದ್ದನ್ನೂ, ಈ ಕೃತಿ “ದುರ್ಗಾಸ್ತಮಾನ” ಬರೆಯಲು ಸ್ಫೂರ್ತಿಯಾದದ್ದನ್ನೂ ಲೇಖಕರು ಸ್ಮರಿಸಿದ್ದಾರೆ.

ದುರ್ಗಾಸ್ತಮಾನವನ್ನು ಅನೇಕ ಸಂಶೋಧನೆಗಳು, ಮುದ್ರಣ ರೂಪದಲ್ಲಿ ಪ್ರಕಟವಾಗಿಲ್ಲದ ಶ್ರೀ ಚಿಕ್ಕೇರೂರು ಗೋವಿಂದಾಚಾರ್ಯರು ಬರೆದ ಹರಪನಹಳ್ಳಿ ಪಾಳೆಯಗಾರರ ಚರಿತ್ರೆಯ ಹಸ್ತಪ್ರತಿಯನ್ನು ಆಧರಿಸಿ ಬರೆಯಲಾಗಿದೆ. ಚಿತ್ರದುರ್ಗದ ಇತಿಹಾಸಕ್ಕೆ ಸಂಬಂಧಪಟ್ಟ ಮತ್ತು ಲಭ್ಯವಿದ್ದ ಎಲ್ಲಾ ದಾಖಲೆಗಳನ್ನೂ ಚೆನ್ನಾಗಿ ಅಧ್ಯಯನ ಮಾಡಿದ ನಂತರವೇ ಶ್ರೀ ತರಾಸುರವರು ಕಾದಂಬರಿ ಬರೆದಿದ್ದಾರೆ.

ತರಾಸುರವರು, ಅತ್ಯಂತ ಕಾಳಜಿಯಿಂದ, ಎಲ್ಲಾ ಅಧ್ಯಯನಗಳನ್ನೂ ಮಾಡಿ, ಸಂಗ್ರಹಕ್ಕೆಲ್ಲಾ ಆಧಾರ ತೋರಿಸಿಯೇ ದುರ್ಗಾಸ್ತಮಾನದಲ್ಲಿ ದೊರೆ ಮದಕರಿ ನಾಯಕನನ್ನು ಮೆಚ್ಚಬೇಕಾದ ಶೂರ ಎಂದೇ ಚಿತ್ರಿಸಿದ್ದಾರೆ. ದುರಂತ ಕಾದಂಬರಿಗೆ ಅರ್ಹನಾದ ಧೀರೋದ್ಧಾತ ನಾಯಕ ಎನ್ನುವಂತೆಯೂ ಚಿತ್ರಿಸಿದ್ದಾರೆ. ತನ್ನ ದುರ್ಗದ ಜನರೇ ತನಗೆ ದ್ರೋಹ ಮಾಡಿ, ಹೈದರಾಲಿಯ ಸೇನೆ ಕೋಟೆ ಮುತ್ತಿದಾಗ, ವೀರಾವೇಶದಿಂದ ಕಾದಾಡುತ್ತಾ, ಕೊನೆಯ ಉಸಿರು, ಒಡಲು ಬಿಡುವ ಮುನ್ನ ಮದಕರಿ, ಹೈದರನ ಧ್ವಜ ಸ್ಥಂಭವನ್ನು ಹೊಡೆದುರಿಳಿಸಿದ್ದನ್ನು ಓದುವಾಗ, ರೋಮಾಂಚನದಿಂದ ಮೈ ನವಿರೇಳುತ್ತದೆ. ಹೈದರಾಲಿಯ ಕಡೆಯವರ ಹತ್ತಾರು ಗುಂಡುಗಳು ಮದಕರಿಯನ್ನು ಹೊಡೆದುರುಳಿಸಿದಾಗ, ದುರ್ಗದ ಗಂಡುಗಲಿ ವೀರ ಮದಕರಿನಾಯಕ ತನ್ನ ಪ್ರಾಣಪ್ರಿಯವಾದ ದುರ್ಗದ ಮಣ್ಣಿಗೆ ರಕ್ತ ತರ್ಪಣ ನೀಡುತ್ತಾ, ಕೋಟೆಯ ಮೇಲಿಂದ ಕೆಳಗುರುಳುತ್ತಾನೆ. ಮತ್ತೇಳುವುದಿಲ್ಲ – ಅಲ್ಲಿಗೆ ದುರ್ಗದ ಇತಿಹಾಸದಲ್ಲಿ ಪ್ರಜ್ವಲಿಸುವ ಸೂರ್ಯ ಅಸ್ತನಾಗಿದ್ದ, ದುರ್ಗಾಸ್ತಮಾನವಾಗಿ ಹೋಗುತ್ತದೆ, ಆ ಕ್ಷಣ.

Read more »

17
ಮಾರ್ಚ್

ಅನ್ಯಾಯವನ್ನು ಕಾಪಿಡುತಿರುವ ಕಾನೂನಿನಡಿಯಲ್ಲಿ ಮಹಿಳೆಯೆಷ್ಟು ಭದ್ರ?!!!

– ತೇಜಸ್ವಿನಿ ಹೆಗಡೆ
ಎಲ್ಲಿ ನಾರಿಯರನ್ನು ಪೂಜಿಸುತ್ತಾರೋ ಅಲ್ಲಿ ದೇವತೆಗಳು ವಾಸಿಸುತ್ತಾರೆ -ಸಂಸ್ಕೃತ ಸುಭಾಷಿತವೊಂದು ತುಂಬಾ ಸುಂದರ ಸಂದೇಶವನ್ನು ನೀಡುತ್ತದೆ. ಅಂತೆಯೇ ಗಾಂಧೀಜಿ ಕೂಡ ಎಂದು ಮಧ್ಯರಾತ್ರಿಯಂದೂ ಕೂಡ ಮಹಿಳೆ ನಿರ್ಭಯಳಾಗಿ ತಿರುಗುವಂತಾಗುವುದೋ ಅಂದೇ ನಮಗೆ ಸ್ವಾತಂತ್ರ್ಯ ಸಿಕ್ಕಿದಂತಾಗುವುದು ಎಂದು ಹೇಳಿದ್ದಾರೆ. ಎಷ್ಟೊಂದು ಉದಾತ್ತ ವಿಚಾರಗಳಿವು! ಆದರೆ ಈ ಮೇಲಿನ ಹೇಳಿಕೆಗಳೆಲ್ಲಾ ಇಂದು ಕನಸಿನೊಳಗಿನ ಕನ್ನಡಿಗಂಟಿನಂತೇ ಸರಿ! ಎಂದೆಂದೂ ಈ ಸ್ವಾತಂತ್ರ್ಯ ಮಹಿಳೆಯದಾಗಲು ಸಾಧ್ಯವೇ ಇಲ್ಲದಂತಹ ಪರಿಸ್ಥಿತಿ ಇಂದಾಗಿದೆ. ಮುಂದೆ ಇದಕ್ಕಿಂತಲೂ ದುಃಸ್ಥಿತಿ ನಮ್ಮದಾಗಬಹುದು. ಮನೆಯೊಳಗೇ ಇರಲಿ ಇಲ್ಲಾ ಹೊರಜಗತ್ತಿನಲ್ಲೇ ಇರಲಿ ಮಹಿಳೆಯರ ಬದುಕು ಆತಂಕದೊಂದಿಗೇ ಕಳೆಯುವಂತಾಗಿರುವುದು ತುಂಬಾ ಖೇದಕರ!

 

“ಬಲಾತ್ಕಾರ, ಮಾನಭಂಗ, ಮಾನಹರಣ, ರೇಪ್” ಈ ಶಬ್ದಗಳನ್ನು ಕೇಳುವಾಗಲೇ ಮೊಗ ಕಪ್ಪಿಡುತ್ತದೆ. ಮನ ಭಯಗೊಳ್ಳುತ್ತದೆ. ಆ ಕೃತ್ಯ ಎಸಗಿದ ವ್ಯಕ್ತಿಯ ಮೇಲೆ ಅಗಾಧ ರೋಷ, ತಿರಸ್ಕಾರ, ಅಸಹ್ಯ ಮೂಡುತ್ತದೆ ನಮಗೆ. ಆದರೆ ಈ ದುಷ್ಕೃತ್ಯಕ್ಕೆ ಒಳಗಾದ ವ್ಯಕ್ತಿಗೆ ಯಾವ ರೀತಿ ಅನಿಸಬಹುದು? ಆಕೆ ಹೇಗೆ ತನ್ನ ತಾನು ಸಂಭಾಳಿಸಿಕೊಳ್ಳುವಳು? ಮುಂದೆ ಆಕೆಯ ಬದುಕು ಅವಳನ್ನು ಎಲ್ಲಿಗೆ ಒಯ್ಯಬಹುದು? ಎನ್ನುವ ಚಿಂತನೆಗೆ ಹೋಗುವವರು ಕಡಿಮೆಯೇ. ಆ ಕ್ಷಣದ ಕರುಣೆ, ಅನುಭೂತಿ, ಅಯ್ಯೋ ಪಾಪ ಎನ್ನುವ ಅನುಕಂಪವನ್ನಷ್ಟೇ ತೋರಿ, ಆ ಪಾಪಿಗೆ ಸರಿಯಾಗಿ ಶಿಕ್ಷೆಯಾಗಲೆಂದು ಹಾರೈಸಿ ಮರೆಯುತ್ತೇವೆ. ಆದರೆ ಅಂತಹ ಒಂದು ಮಹಾಪಾಪವನ್ನು ಎಸಗಿದ ವ್ಯಕ್ತಿಗೆ ಸರಿಯಾದ ಶಿಕ್ಷೆಯಾಗಿದೆಯೋ ಇಲ್ಲವೋ?! ಇಲ್ಲದಿದ್ದರೆ ಹೇಗೆ ಶಿಕ್ಷೆ ಆಗುವಂತೆ ಮಾಡಬೇಕು? ಎಂಬುದನ್ನು ನಾವು ಯೋಚಿಸುವುದೇ ಇಲ್ಲ. ಆ ಹೊತ್ತಿನ ಬಿಸಿ ಸುದ್ದಿಯನ್ನಷ್ಟೇ “Breaking News” ಆಗಿ ಪ್ರಸಾರಮಾಡುವ ಮಾಧ್ಯಮ, ತದನಂತರದ ಬೆಳವಣಿಗೆಯ ಬೆನ್ನತ್ತಿ ಹೋಗುವುದೂ ಇಲ್ಲ. ಆಘಾತಕ್ಕೊಳಗಾದ ಮಹಿಳೆಗೆ ತಮ್ಮ ಬೆಂಬಲ ಹಾಗೂ ಮಾನಸಿಕ ಶಕ್ತಿಯನ್ನು ನೀಡಿ, ಆ ಮೂಲಕ ಪಾಪಿಗೆ ಆಕೆಯೇ ಶಿಕ್ಷೆ ನೀಡುವಂತೆ ಮಾಡಲು ಸಹಕರಿಸುವ ನಿಟ್ಟಿನಲ್ಲಿ ನಮ್ಮ ಸಮಾಜವಾಗಲೀ, ಕಾನೂನಾಗಲೀ, ಕನಿಷ್ಠ ಆಕೆಯ ಮನೆಯವರಾಗಲೀ ಮುಂದುವರಿಯುವುದೇ ಇಲ್ಲ!

Read more »

16
ಮಾರ್ಚ್

ಎರಡು ಕೋಟಿಗೆಷ್ಟು ಮನೆ ಕಟ್ಟಿಸಬಹುದು ಯಡ್ಯೂರಪ್ಪನವ್ರೇ?

– ರಾಕೇಶ್ ಶೆಟ್ಟಿ

ಸೂಪರ್ ಮೂನ್ ಎಫ಼ೆಕ್ಟ್ ಬಗ್ಗೆ ಮಾತಾಡುತ್ತ ಏನೋ ವಿಪತ್ತು ಕಾದಿದೆಯಂತೆ ಮಾರಾಯ ಅಂತ ಗುಸು ಗುಸು ಶುರುವಾಗಿತ್ತು,ಊಟಕ್ಕೆ ಹೋಗಿ ಬಂದವ ತಾಜ ಸುದ್ದಿಯೇನು ಅಂತ ನೋಡ ಹೋಗಿ ಮೈ ಒಮ್ಮೆ ತಣ್ಣಗಾಯಿತು.ಜಪಾನ್ನಲ್ಲಿ ಸುನಾಮಿಯೆದ್ದಿದೆ! ಕ್ಷಣಕಾಲ ಅವಕ್ಕಾದೆ,ನಂತರ ಗೂಗಲ್ ಮಹರಾಜನ ಮೊರೆ ಹೋಗಿ ವಿಡಿಯೋ ನೋಡಿ ದಂಗಾಗಿ ಹೋದೆ,ಅದಿನ್ನೆಂತ ರಾಕ್ಷಸ ಅಲೆಗಳು ಅವು!ತಮ್ಮ ಹರಿವಿನಳೊಗೆ ಸಿಕ್ಕಿದ್ದನ್ನೆಲ್ಲ ಆಪೋಷನ ತೆಗೆದುಕೊಳ್ಳುತ್ತ ಹೊರಟಿತಲ್ಲ,ಅದಿನ್ನೆಷ್ಟು ಸಾವಿರ ಜನರ ಬದುಕು ಮೂರಾ ಬಟ್ಟೆಯಾಯಿತು,ಜಪಾನ್ ಅನ್ನುವ ಸ್ವಾಭಿಮಾನಿಗಳ ದೇಶಕ್ಕೆ ಇದೊಂದು ದೊಡ್ಡ ಪೆಟ್ಟು.ಈ ಆಘಾತದಿಂದ ಜಪಾನ್ ಸಹೋದರರು ಎದ್ದು ಬರಲಿ,ಮತ್ತೆ ಜಪಾನ್ ಗೆಲ್ಲಲೇಬೇಕು ಇದು ಬಹುಷಃ ಬಹುತೇಕರ ಪ್ರಾರ್ಥನೆ.

ಪ್ರವಾಹ! … ಸುನಾಮಿಯ ರಕ್ಕಸ ಅಲೆಗಳನ್ನ ನೋಡಿದಾಗ ನನಗೆ ತಟ್ಟನೆ ನೆನಪಾಗಿದ್ದು, ಎರಡು ವರ್ಷದ ಹಿಂದೆ ಬೆಂಗಳೂರಿನಲ್ಲಿ ರಾತ್ರೋ ರಾತ್ರಿ ಸುರಿದ ಮಳೆಯಲ್ಲಿ ಸಿಕ್ಕಿ ಹಾಕಿಕೊಂಡು almost ಎದೆಯ ಹತ್ತಿರ ಹರಿದು ಬರುತಿದ್ದ ನೀರಿನಲ್ಲಿ ನಾವು ಪಟ್ಟ ಪಾಡು! ಮತ್ತು ಆಗ ನೀರಿನ ರಭಸಕ್ಕೆ ಪಲ್ಸರ್ ಬೈಕಿನಲ್ಲಿ ತೇಲಿಕೊಂಡು ಬಂದ ಆಸಾಮಿಯೊಬ್ಬ ಸಾವರಿಸಿಕೊಂಡು ಹೇಳಿದ ಮಾತು!

“‘ಸರ್,ಈ ತರ ಟೀ.ವಿಯಲ್ಲಿ ನೋಡಿದ್ದೇ,ಅನುಭವಿಸಿರಲಿಲ್ಲ.ಈ ಮಳೆಗೆ ಹಿಂಗೆ ನಾವು ಚಡಪಡಿಸ್ತ ಇದ್ದಿವೀ, ಇನ್ನ ಪಾಪ ಉತ್ತರ ಕರ್ನಾಟಕದ ಪ್ರವಾಹದಲ್ಲಿ ಸಿಕ್ಕಿಕೊಂಡ ಜನರ ಕತೆ ಹೇಗಾಗಿರಬೇಡ”. ಅವನಂದ ಮಾತು ನಿಜ ಅಂತ ಅನ್ನಿಸಿತ್ತು.

Read more »

16
ಮಾರ್ಚ್

ಇಂಗ್ಲೀಷ್ ಮತ್ತು ಮೊಬೈಲ್ ಫೋನ್ !

– ಸಂದೀಪ್ ಕಾಮತ್

ಒಂದು ಜಾಹೀರಾತು ಬರುತ್ತೆ. ಅದು ಚಹಾದ ಬಗ್ಗೆ. ತಂದೆ ಮಗನಿಗೆ ಚಹಾ ಕುಡಿಯಬೇಡ ಅನ್ನೋವಾಗ ತಾಯಿ ’ಯಾರು ಹೇಳಿದ್ದು ಚಹಾ ಒಳ್ಳೆಯದಲ್ಲ ಅಂತ ? ’ ಈ ಪ್ರಶ್ನೆಗೆ ತಂದೆ ನನಗೆ ಸರಿಯಾಗಿ ನೆನಪಿಲ್ಲ ಬಹುಶಃ ನನ್ನ ತಾಯಿ ಹೇಳಿರ್ಬೇಕು ಅಂತ ತಾಯಿ ಮೇಲೆ ಗೂಬೆ ಕೂರಿಸ್ತಾನೆ. ಅವನ ತಾಯಿ ಆಗ ’ ನನಗೂ ಸರಿಯಾಗಿ ನೆನಪಿಲ್ಲ ನಿನ್ನ ತಂದೆ ಹೇಳಿರ್ಬೇಕು ’ ಅಂತ ಅವಳ ಗಂಡನ ಮೇಲೆ ಗೂಬೆ ಕೂರಿಸ್ತಾಳೆ. ಕಡೆಗೂ ಚಹಾ ಕೆಟ್ಟದು ಅಂತ ಯಾರು ಹೇಳಿದ್ದು ಗೊತ್ತಾಗೋದೆ ಇಲ್ಲ!

ಈ ಜಾಹೀರಾತಿನ ಪ್ರಸ್ತಾವ ಯಾಕೆ ಬಂತು ಅಂದರೆ ನನಗೂ ಅಂಥದ್ದೇ ಒಂದು ಪ್ರಶ್ನೆ ಮನದಲ್ಲಿ ಮೂಡಿದೆ.

“ಯಾರು ಹೇಳಿದ್ದು ಕನ್ನಡ ನಶಿಸುತ್ತಿದೆ ಅಂತ ? ”

ನಿಮ್ಮಲ್ಲಿ ಕೆಲವರು ಥಟ್ ಅಂತ ನನಗೆ ಅವರು ಹೇಳಿದ್ದು ನನ್ಗೆ ಆ ವೆಬ್ ಸೈಟ್ ನಲ್ಲಿ ವಿಷಯ ಸಿಕ್ಕಿತ್ತು , ಅಂತ ಥೇಟ್ ಆ ಜಾಹೀರಾತಿನ ಹಾಗೆಯೇ ಹೇಳಬಹುದು. ಆದ್ರೆ ಅದು ಸರಿನಾ?

ಕನ್ನಡಕ್ಕೆ ಸಾವಿರಾರು ಭಾಷೆಯ ಇತಿಹಾಸ ಇದೆ ಅಂತಾರೆ. ಹಾಗಾದ್ರೆ ಸಾವಿರಾರು ವರ್ಷಗಳಿಂದ ತನ್ನತನವನ್ನು ಉಳಿಸಿಕೊಂಡಿರುವ ಭಾಷೆ ಅದು ಹೇಗೆ ಸಾಯುತ್ತೆ ?

Read more »

15
ಮಾರ್ಚ್

ದೇವರಿಗೇ ಹಿಪ್ನಾಟಿಸಂ…!

– ಪ್ರಸನ್ನ, ಬೆಂಗಳೂರು

ಮೊನ್ನೆ ಆಪ್ತಮಿತ್ರ ಚಲನಚಿತ್ರ ನೋಡುತ್ತಿದ್ದಾಗ ಕೊನೆಯ ದೃಶ್ಯದಲ್ಲಿ ಯು ಆರ್ ಗಂಗಾ, ಹೌ ಡು ಯು ಫೀಲ್ ಎಂಬ ಸಂಭಾಷಣೆ ಕೇಳಿದವನಿಗೆ ನನ್ನ ಕಾಲೇಜ್ ದಿನಗಳಲ್ಲಿ ನಡೆದ

ಒಂದು ಪ್ರಸಂಗವನ್ನು ಬರಹದಲ್ಲಿ ಹಿಡಿದಿಡುವ ಮನಸ್ಸಾಯಿತು ಅದರ ಫಲವೆ ಈ ಲೇಖನ.

ಒಂದು ಬೆಳಿಗ್ಗೆ ನಮ್ಮ ಗುಂಪಿನ ಹುಡುಗರಾದ (ಇದ್ದದ್ದೇ ೩ ಮತ್ತೊಂದು ಜನ ಅದರಲ್ಲಿ ಗುಂಪೇನು ಇರಲಿಲ್ಲ ಆದರೂ ಸಿವಿಲ್ ಮತ್ತು ಎಲೆಕ್ಟ್ರಾನಿಕ್ಸ್ ಗುಂಪುಗಳಿದ್ದದ್ದು ನಿಜ) ಮುರಳಿ,ಮಂಜು, ಸಂಜೀವ್ ಬದಾಮಿ, ಎಲ್ಲರೂ ನಿನ್ನೆ ನಡೆದ ಹಿಪ್ನಾಟಿಸಂ ಬಗ್ಗೆ ಮಾತನಾಡುತ್ತಿದ್ದರು. ಪಕ್ಕದೂರಿನ ಬಸ್ಸಿಳಿದು ಅವರ ಜೊತೆ ಸೇರಿದ ನನಗೆ ಇದು ಹೆಚ್ಚು ಕುತೂಹಲ ಮೂಡಿಸಿತು. ನಮ್ಮ ಪ್ರಾಧ್ಯಾಪಕರ ಸಂಬಂಧಿ ಮತ್ತು ಸ್ನೇಹಿತರಾದ ವೈದ್ಯರೊಬ್ಬರು ( ಇವರ ಮನೆಯಲ್ಲಿದ್ದ ಸುಂದರ ಹುಡುಗಿಯಿಂದ ಇವರು ನಮಗೆಲ್ಲ ಚಿರಪರಿತರು) ನಡೆಸಿದ ಅಥವ ಪ್ರಯೋಗಿಸಿದ ಹಿಪ್ನಾಟಿಸಂಗೆ ಒಳಗಾದ ಮುರಳಿ ತನ್ನ ಅನುಭವವನ್ನು ಬಿಡಿ ಬಿಡಿಯಾಗಿ ಅರುಹಿದ. ನನಗಂತೂ ಕುತೂಹಲ ನೂರ್ಮಡಿಸಿತು. ಸುಧಾ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡ ’ಅಘೋರಿಗಳ ನಡುವೆ’ ಕಾದಂಬರಿಯನ್ನು ಪ್ರತಿವಾರ ಕಾಯುತ್ತ ಓದಿದ್ದು ನೆನಪಿನಲ್ಲಿತ್ತು ಮತು ಅದೇ ಪುಸ್ತಕ ರೂಪದಲ್ಲಿ ಪ್ರಕಟಗೊಂಡಾಗ ಲೈಬ್ರರಿಯಿಂದ ತಂದು ೨-೩ ಬಾರಿ ಓದಿದ್ದೆ. ಅಘೋರಿಗಳು ಗಳಿಸಿರುವ ಅಗಾಧ ಮಾನಸಿಕ ಶಕ್ತಿ ಮತ್ತು ಅವರಿಗಿರುವ ಏಕಾಗ್ರತೆಯನ್ನು ಮತ್ತು ಇಡೀ ಕಾದಂಬರಿಯ ಹೂರಣವನ್ನು ಒಂದೇ ಸಾಲಿನಲ್ಲಿ ಹಿಡಿದಿಟ್ಟ ಆ ಪುಸ್ತಕ ನನಗೆ ಅತ್ಯಂತ ಪ್ರಿಯವಾಗಿತ್ತು.

ಮುರಳಿಯ ಕೈಯನ್ನು ಕಭ್ಭಿಣದಂತೆ ಗಟ್ಟಿಯೆಂದು ಆದೇಶವಿತ್ತು. ನಂತರ ಸೂಜಿಯಿಂದ ಆಳಕ್ಕೆ ಚುಚ್ಚಿದ್ದರೂ ಆತನಿಗೆ ನೋವಾಗದಿದ್ದದ್ದು ನನಗೆ ಕುತೂಹಲದ ವಿಷಯ ಆದರೆ ಇದನ್ನೆಲ್ಲಾ ಹೇಳುವಾಗ ಅದರ ನೋವನ್ನುಣ್ಣುತ್ತಿದ್ದ. ಹಿಪ್ನಾಟಿಸಂ ಮುಖಾಂತರ ಕೆಲವು ಮಾನಸಿಕ ಜನ್ಯ ಖಾಯಿಲೆಗಳನ್ನು ಗುಣಪಡಿಸುವ ಸಾಧ್ಯತೆಯ ಬಗ್ಗೆ ಆಗತಾನೆ ಅದೇ ವಿಷಯದಲ್ಲಿ ಸ್ನಾತಕೋತ್ತರ ಪದವಿಗೇರುವ ಪ್ರಯತ್ನದಲ್ಲಿದ್ದ ಆ ವೈದ್ಯರ ಮಾತುಗಳು ನನ್ನನ್ನು ಆ ಕಡೆಗೆ ಬಲವಾಗಿ ಸೆಳೆಯಿತು. ಅಂತೂ ಒಂದು ಶನಿವಾರ ಮತ್ತೊಮ್ಮೆ ಪ್ರಯೋಗ ಮಾಡಿ ತೋರಿಸಲು ಆ ವೈದ್ಯರನ್ನು ಒಪ್ಪಿಸಿ ನಾವೆಲ್ಲ ಆ ಶನಿವಾರಕ್ಕಾಗಿ ಕಾಯುತ್ತಾ ಕುಳಿತೆವು.

Read more »