ಪತ್ರಿಕೋದ್ಯಮದಲ್ಲಿ ಪಕ್ಕಕ್ಕೆ ಹೋದವರ ನೆಲೆ-ಬೆಲೆ
– ಕಾಲಂ ೯
ಕನ್ನಡ ಪತ್ರಿಕೋದ್ಯಮದಲ್ಲಿಂದು ನೇತೃತ್ವ ಪರೀಕ್ಷೆಯ ಕಾಲ. ಹೇಗೋ ಪತ್ರಿಕೆ ನಡೆಸುವ ಕಾಲ ಪಕ್ಕಕ್ಕೆ ಸರಿದಿದೆ. ವೈಎನ್ಕೆ ಅಂಥಾ ಯಶಸ್ವೀ ಸಂಪಾದಕರೇ ಸಂಜೆ ಆರಾಗುತ್ತಿದ್ದಂತೆಯೇ ’Phd’ ಕಾಲ ಬಂತೆಂದು ಚಡಪಡಿಸಿ ಎದುರಿಗಿದ್ದವರನ್ನು ಎಬ್ಬಿಸಿಕೊಂಡು ಗಯಾಬ್ ಆಗಿಬಿಡುವ ಕಾಲವೊಂದಿತ್ತು. ವಾರಕ್ಕೊಂದೆರಡು ಸಲ ಬಂದು ಹೋಗುವ ಸಂಪಾದಕರೂ ಇದ್ದರು. ಈಗ ಹಾಗಲ್ಲ. ಯಾರೇ ಸಂಪಾದಕರಾಗಲಿ ತಮ್ಮನ್ನು ಪೂರ್ತಿಯಾಗಿ activate ಮಾಡಿಕೊಳ್ಳಲೇ ಬೇಕು. ಎಲ್ಲ ಪುಟಗಳ ಮೇಲೆ ನಿಗಾ ಇಡಬೇಕು. ತಾಂತ್ರಿಕತೆಯನ್ನು ಬೆರಳ ತುದಿಗೆ ಸಿದ್ಧಿಸಿಕೊಳ್ಳಬೇಕು.
ಇಂತಹದೊಂದಿಷ್ಟು ಗುಣ – ಗತ್ತು ಎಲ್ಲ ಇದ್ದೂ ಹೊರಬಿದ್ದಿರುವ ’ಸಂಪಾದಕರು’ ಈಗೇನು ಮಾಡುತ್ತಿದಾರೆ? ಅವರೆತ್ತ ದೃಷ್ಟಿ ನೆಟ್ಟು ಕೂತಿದ್ದಾರೆ? ಈ ಬಗ್ಗೆ ಒಂದಿಷ್ಟು ಇಣುಕು ನೋಟ ಇಲ್ಲಿದೆ.
ಹೆಚ್. ಆರ್. ರಂಗನಾಥ್: ವಿಜಯ ಕರ್ನಾಟಕದ ದರಸಮರದಲ್ಲ್ಲಿಸಿಲುಕಿ ಪ್ರಸಾರ ಸಂಖ್ಯೆ ೫೨ ಸಾವಿರಕ್ಕೆ ಇಳಿದು ನೆಲಕಚ್ಚಿದ್ದ ’ಕನ್ನಡಪ್ರಭ’ಕ್ಕೆ ರಭಸ ಕೊಟ್ಟು ೨ ಲಕ್ಷ ಪ್ರಸಾರ ದಾಟಿಸಿದ ಸಂಪಾದಕ.
ಸುದ್ದಿಯ ವಾಸನೆ ಹಿಡಿಯುವ ಕಲೆಯಲ್ಲಿ ವಿಶಿಷ್ಠತೆ ತೋರಿಸುವ ರಂಗನಾಥ್ ಸುವರ್ಣ ನ್ಯೂಸ್ ಗೆ ಇಡೀ ತಂಡ ಸಮೇತವೇ ಹಾರಿದರು. ನಿರೀಕ್ಷೆಗಳು ಕುಣಿದೆದ್ದವು. ‘ಸುವರ್ಣ ಕರ್ನಾಟಕ’ ಪತ್ರಿಕೆ ರೂಪ ಪಡೆಯಲೇ ಇಲ್ಲ. ಸುವರ್ಣ ನ್ಯೂಸ್ ಏರುಗತಿಯಲ್ಲಿದ್ದಾಗಲೇ ಹೊರ ಬರಬೇಕಾಯ್ತು. ರಂಗ ಅವರು ಈಗಾಗಲೇ Writemen media pvt ltd ಅಂತ ಹೊಸ ಮೀಡಿಯಾ ಕಂಪೆನಿ ಆರಂಭಿಸಿದ್ದಾರೆ. ಟಿವಿ೫ ಜೊತೆ ಸೇರಿ ಕನ್ನಡ ಚಾನೆಲ್ ಟಿವಿ5 ಕನ್ನಡ ಸುದ್ದಿವಾಹಿನಿಯ ಸಾರಥ್ಯ ವಹಿಸಲಿದ್ದಾರೆ.
ಜಿ ಎನ್ ಮೋಹನ್: ಪ್ರಜಾವಾಣಿಯಿಂದ ಹೊರಟು, ಹೈದ್ರಾಬಾದಿನ ಈಟಿವಿ ತಲಪಿ ವಾಪಸ್ ಬೆಂಗಳೂರಿಗೆ ಬಂದು ಅವಧಿ, ಮೇಫ್ಲವರ್, ಮೀಡಿಯಾ ಮಿರ್ಚಿ… ಹೀಗೆ ಬ್ಲಾಗ್, ಅಂಕಣ, ಪ್ರಕಾಶನ ಕಟ್ಟಿಕೊಂಡ ಕ್ರಿಯಾಶೀಲ.
ಭಟ್ಟರ ಜೊತೆಗಿನ ಸ್ನೇಹದ ಲಾಭಕಾಗಿ ತಮ್ಮೊಳಗಿನ ಎಡತ್ವವನ್ನೂ ಬಲಿಗೊಟ್ಟು ಈಗ ರಂಗ ತೆರವು ಮಾಡಿದ ಸುವರ್ಣ ಸಿಂಹಾಸನದತ್ತ ಹೋಗಲು ಕಾದಿದ್ದಾರೆಂಬ ಅಂಬೋಣ.
ತಿಮ್ಮಪ್ಪ ಭಟ್: ಕೊನೆಗೂ ಮೇಲೇಳದ ಟೈಂಸ್ ಆಫ಼್ ಇಂಡಿಯಾ ಕನ್ನಡದಲ್ಲಿ ಸವೆದ ಭಟ್ಟರು ಉದಯವಾಣಿಗೆ ಹಾರಿ ಅದಕ್ಕೊಂದು ಹೊಸ ಸ್ಪರ್ಷ ನೀಡಲು ಹೊರಟರು. ಒಳ್ಳೆಯ ಜೋಷ್‍ನಲ್ಲಿದ್ದಾಗಲೇ ರವಿ ಹೆಗಡೆ ಪ್ರವೇಶದಿಂದ ಹೊರ ಬರಬೇಕಾಯಿತು. ಅಲ್ಲಿಂದ ಹೊರಬಂದು ಅವರು VRL ಬಳಗ ಸೇರಿದ್ದಾರೆ.
ಶಿವ ಸುಬ್ರಹ್ಮಣ್ಯ: ರಂಗ ವಲಸೆಯಲ್ಲ್ಲಿ ಬಿಟ್ಟು ಹೋದ ಹುಡುಗರನ್ನೇ ಕಟ್ಟಿಕೊಂಡು ಮುಖಪುಟದ ಇಂಪಾಕ್ಟ್ ಗಳ ಮೂಲಕ ಗಮನ ಸೆಳೆದು ಪರ್ಫ಼ೋರ್ಮರ್ ಅನಿಸಿಕೊಂಡವರು ಶಿವ. ಭಟ್ಟರ ಪ್ರವೇಶವಾದಂದೇ ಹೊರಬಂದು ಕ್ಯಾಮರಾ, ಕಾಡು ತಿರುಗಾಟ ಮುಗಿಸಿ ಹೊಸ ಅವಕಾಶಕ್ಕಾಗಿ ತೋಳು ಮಡಚಿಕೊಳ್ಳುತ್ತಿದ್ದಾರೆ. VRL ಬಾಗಿಲು ಬಿಟ್ಟರೆ ಸಧ್ಯಕ್ಕೆ ಯಾವುದೂ ಕಾಣಿಸುತ್ತಿಲ್ಲ.
ಡಾ| ಪೂರ್ಣಿಮಾ: ಉದಯವಾಣಿಯ ಬೆಂಗಳೂರು ಆವೃತ್ತಿಯಿಂದ ಹೊರಬಂದು ಪುಸ್ತಕ ಪ್ರಕಾಶನ ಮೊದಲಾದ ವಹಿವಾಟಿಗೆ ನಿಂತವರಿಗೆ ಪತ್ರಿಕೋದ್ಯಮ ಮರೆತಂತಿದೆ.
ಈಶ್ವರ ದೈತೋಟ: ವಿಕ ಯಶಸ್ಸಿನ ಪಾಲು ಯಾರದ್ದು? ಭಟ್ಟರದ್ದೋ? ಆ ಮೊದಲೇ ಹಂದರ ಕಟ್ಟಿದ ದೈತೋಟರದ್ದೋ? ವಿಕ ನಂತರದ ಸಂಯುಕ್ತ ಕರ್ನಾಟಕ, ಟೈಂಸ್ ಕನ್ನಡದ ಯಾತ್ರೆಗಳು ತೀರಾ ಸಪ್ಪೆಯಾಗಿದ್ದು, ಹಳೇ ತುರುಬಿನ ನೆನಪನ್ನೇ ಸವಿಯುವಂತೆ ಮಾಡುತ್ತದೆ.
ಸಿಕ್ಕ ಅವಕಾಶಗಳು ಗಟ್ಟಿಗೊಳ್ಳದೇ ಕೊನೆಗೆ ಬ್ಲಾಗು, ಅಂಕಣಗಳಿಗೆ ಸೀಮಿತಾವಾದ ಬೇಳೂರು ಸುದರ್ಶನ, ದೀಪಕ್ ತಿಮ್ಮಯ, ವಯಸ್ಸಿದ್ದೂ ಏನೂ ಮಾಡಲಾಗದವರನ್ನು ಈ ಸರಣಿಯಲ್ಲಿ ಹೀಗೇ ನೆನಪಿಸಿಕೊಳ್ಳಬಹುದು.
ಪಕ್ಕಕ್ಕೆ ಹೋದವರ ನೆಲೆ- ಬೆಲೆ ಹೇಗೂ ಇರಲಿ, ಕನ್ನಡ ಪತ್ರಿಕೋದ್ಯಮ ಭವಿಷ್ಯದ ಗಟ್ಟಿಹರಳುಗಳನ್ನು ಕಳೆದ ಐದು ವರ್ಷಗಳಲ್ಲಿ ಹೊರಹಾಕಿದೆ. ಆ ಬೆಳೆ ಬೆಂಗಳೂರಿನಾಚೆಯೂ ಬಂದಿರುವುದು ವಿಶೇಷ. ಆ ಬಗ್ಗೆಯೂ ಒಮ್ಮೆ ನೋಡಬೇಕು.
********************
ಚಿತ್ರ ಕ್ರುಪೆ: deciphobia.blogspot.com





ಕನ್ನಡದ ಪ್ರತಿಭಾವಂತ, ಕ್ರಿಯಾಶೀಲ ವ್ಯಕ್ತಿಗಳಿಗೆ ಅವಕಾಶಗಳು ಕಡಿಮೆಯಾಗಿದೆ ಅನ್ನೋದು ಖೇದಕರ ಸಂಗತಿ.