ವಿಷಯದ ವಿವರಗಳಿಗೆ ದಾಟಿರಿ

Archive for

13
ನವೆಂ

ಸೂರ್ಯಾಸ್ತ

-ನವನೀತ್ ಪೈ

ಆಗಸ ಕೆಂಪಾಗಿತ್ತು. ಕೆಂಪು ಎನ್ನುವುದು ಪ್ರೀತಿಯ ಸಂಕೇತವೂ ಹೌದು ಅಪಾಯದ ಸಂಕೇತವೂ ಹೌದು. ಸೂರ‍್ಯ ತನ್ನ ಕೆಲಸವನ್ನು ಮುಗಿಸಿ ಮನೆಗೆ ತೆರಳುವ ಸಂತಸದಲ್ಲಿ ಕೆಂಪಾಗಿದ್ದ ಮಾತ್ರವಲ್ಲ ಬಾನನ್ನು ಕೆಂಪಾಗಿಸಿದ್ದ. ಆ ಸುಂದರ ಸಂಜೆಯಲ್ಲಿ ಮಹಾನಗರದ ಮಧ್ಯದಲ್ಲಿ ರಂಗು ರಂಗಿನ ದೀಪಗಳಿಂದ ಅಲಂಕೃತವಾದ ಆಬಾಲವೃದ್ಧರನ್ನೂ ಕೈ ಬೀಸಿ ಕರೆಯುತ್ತಿರುವ ಸುಸಜ್ಜಿತ ವಸ್ತು ಪ್ರದರ್ಶನ. ತಾಜ್ ಮಹಲ್ ನ ಪ್ರತಿಕೃತಿಯನ್ನು ಸ್ವಾಗತ ಗೋಪುರವನ್ನಾಗಿಸಿ ಒಳಗೆ ಸ್ವರ್ಗವನ್ನೇ ಏರ್ಪಡಿಸಿದ್ದರು ಆ ಕಲಾವಿದರು. ಈ ಒಂದು ಪ್ರದರ್ಶನಕ್ಕೆ ಬಂದ ಸಾವಿರಾರು ಜನರ ಮಧ್ಯೆ ಇರುವ ಒಂದು ಪುಟ್ಟ ಸಂಸಾರ ನಮ್ಮ ಮುಮದಿನ ಕಥೆಯ ಮೂಲವಸ್ತು.

ಎಷ್ಟೋದಿನಗಳ ಸತತ ಹಠದ ನಂತರ ಐದಾರು ವರ್ಷದ ಮುಗ್ಧಬಾಲಕ ರವಿಯನ್ನು ಆತನ ತಂದೆ ತಾಯಿ ಆ ವಸ್ತು ಪ್ರದರ್ಶನಕ್ಕೆ ಕರೆತಂದಿದ್ದರು. ಸ್ವಾಗತ ಗೋಪುರದ ಪಕ್ಕದ ಟಿಕೆಟ್ ಕೌಂಟರಿನಲ್ಲಿ ಎರಡೂವರೆ ಟಿಕೆಟ್‌ನ್ನು(೬ ವರ್ಷದ ಮಗುವನ್ನು ೩ ವರ್ಷ ಎಂದು ಟಿಕೆಟ್ ನೀಡುವವನ ಬಳಿಯಲ್ಲಿ ವಾದಿಸಿ ಅರ್ಧ ಟಿಕೆಟ್ ಪಡೆದಿದ್ದರು.) ಪಡೆದು ಸ್ವಾಗತ ಗೋಪುರದ ಎದುರು ನಿಂತಾಗ ಮನದ ಆಯಾಸವೆಲ್ಲ ನಾಶವಾಗಿ ಮನಕ್ಕೆ ಆನಂದವಾಯಿತು. ವಸ್ತು ಪ್ರದರ್ಶನದ ಒಳಗೆ ಕಾಲಿಟ್ಟಾಗ ಮಿಠಾಯಿ ಅಂಗಡಿಗಳ ಸಾಲು ರವಿಯನ್ನು ಬಹುವಾಗಿ ಆಕರ್ಷಿಸಿದವು.

ಬಣ್ಣ ಬಣ್ಣದ ಘಮ ಘಮ ಸುವಾಸನೆಯ ಮಿಠಾಯಿಗಳು ರವಿಯ ಬಾಯಲ್ಲಿ ನೀರೂರಿಸಿದವು. ಅವರು ಮುಂದೆ ನಡೆಯುತ್ತಿದ್ದಂತೆ ಒಂದು ಅಂಗಡಿಯಲ್ಲಿ ಎಣ್ಣೆ ಬಾಂಡಲೆಯಲ್ಲಿ ಜಿಲೇಬಿಯನ್ನು ಬಿಡುತ್ತಿದ್ದರು. ಜಿಲೇಬಿಗಳ ಮೇಲಿಂದ ಇಳಿಯುತ್ತಿರುವ ಪಾಕವು ಆ ಜಿಲೇಬಿಗಳನ್ನೇ ನೋಡುತ್ತಾ ನಡೆಯುತ್ತಿರುವ ರವಿಯ ಜಿಲೇಬಿಯಂತಹ ನಾಲಗೆಯಿಂದ ಇಳಿಯುತ್ತಿರುವ ಲಾಲಾ ಪಾಕದಂತಿತ್ತು.
ಸ್ವಲ್ಪ ಮುಂದೆ ನಡೆದಾಗ ಇನ್ನೊಂದು ಅಂಗಡಿಯಲ್ಲಿ ಬೊಂಬಾಯಿ ಮಿಠಾಯಿ ತಯಾರಿಸುತ್ತಿದ್ದರು. ಆಗಸದಲ್ಲಿ ಸ್ವಚ್ಛಂದವಾಗಿ ಹಾರಾಡುವ ಮೋಡಗಳಂತೆ ತೇಲುತ್ತಿರುವ  ಬೊಂಬಾಯಿ ಮಿಠಾಯಿಯ ಎಳೆಗಳನ್ನು ಕಡ್ಡಿಯಿಂದ ಸುತ್ತುತ್ತಿದ್ದರು. ಮತ್ತಷ್ಟು ಓದು »

11
ನವೆಂ

ಲಿಂಗಪರಿವರ್ತನೆ: ಬಡವಾಗುತ್ತಿವೆ ಕಂದಮ್ಮಗಳು!

-ವಿಷ್ಣುಪ್ರಿಯ

ಜೆನಿಟೋಪ್ಲಾಸ್ಟಿ. ಈ ತಂತ್ರಜ್ಞಾನದ ಹಿಂದಿದ್ದ ಉದ್ದೇಶವೂ ಸಹ ಕೆಟ್ಟದಾಗೇನೂ ಇರಲಿಲ್ಲ. ನಪುಂಸಕತೆಯನ್ನು ನಿವಾರಿವಂಥ ಮಹತ್ವದ ಉದ್ದೇಶವನ್ನು ಇಟ್ಟುಕೊಂಡಿದ್ದಂಥ ಈ ತಂತ್ರಜ್ಞಾನ ಧನದಾಹಿ ವೈದ್ಯರ ಕೈಯಲ್ಲಿ ಲಿಂಗಪರಿವರ್ತನೆಯಂಥ ದುರುದ್ದೇಶಕ್ಕೆ ಬಳಕೆಯಾಗುತ್ತಿದೆ ಅಷ್ಟೆ. ಎಂತಹುದ್ದೇ ಅಭಿವೃದ್ಧಿಯಾದರೂ ಅದು ನಿಸರ್ಗವನ್ನು, ಆ ನಿಸರ್ಗದ ಸೃಷ್ಟಿಯನ್ನು ಕಾಪಾಡಿಕೊಂಡು ಬರಬೇಕೇ ಹೊರತು, ಅದನ್ನೇ ಧಿಕ್ಕರಿಸಿ ಮುನ್ನಡೆಯುವಂತಿರಬಾರದು.
ಗರ್ಭಿಣಿಯೊಬ್ಬಳು ಪ್ರಸವಿಸಿದ ತಕ್ಷಣ ಆಕೆಯ ಕಡೆಯವರು ನೋಡುವುದು- ಮಗು ಗಂಡೋ ಹೆಣ್ಣೋ ಎಂದು. ಒಂದು ವೇಳೆ ಮಗು ಹೆಣ್ಣಾಗಿದ್ದರೆ ಮುಗಿಯಿತು ಅದರ ಕಥೆ! ಹೀಗೆಲ್ಲ ಆಗುತ್ತದೆಯೇ ಎಂಬ ಪ್ರಶ್ನೆ ಒಂದಷ್ಟು ವರ್ಗಗಳ ಜನರ ಮನಸ್ಸಿನಲ್ಲಿ ಮೂಡಬಹುದು. ಕಾರಣ- ಮಗು ಗಂಡಾಗಲಿ, ಹೆಣ್ಣಾಗಲಿ… ಸುಸೂತ್ರವಾಗಿ ಆದರೆ ಸಾಕು ಎಂದು ಭಾವಿಸುವ ಜನರಿದ್ದಾರೆ. ಮುಖ್ಯವಾಗಿ ಕರ್ನಾಟಕ ಮತ್ತು ಕೇರಳಗಳಲ್ಲಿ ಹೆಣ್ಣು ಗಂಡೆಂಬ ತಾರತಮ್ಯ ಕಡಿಮೆಯಾಗುತ್ತಿದೆ. ಆದರೆ ಸಂಪೂರ್ಣ ಭಾರತದ ಪರಿಸ್ಥಿತಿ ಹೀಗಿಲ್ಲ. ಗಂಡು ಮಗು ಮಾತ್ರ ನಮಗೆ ಬೇಕು ಎಂದು ಭಾವಿಸುವ ಅದೆಷ್ಟೋ ಜನ ಭಾರತದಲ್ಲಿದ್ದಾರೆ. ಮಗು ಹೆಣ್ಣು ಎಂದಾಕ್ಷಣ ಅದನ್ನು ಒಂದೋ ಸಾಯಿಸಿ ಬಿಡುತ್ತಾರೆ, ಇಲ್ಲವಾದಲ್ಲಿ ಬಿಟ್ಟು ಹೋಗುತ್ತಾರೆ. ಇದು ಹಳೇ ದಿನಗಳ ವಿಚಾರವಾಯಿತು. ಆದರೆ ಯಾವಾಗ ಲಿಂಗಪರಿವರ್ತನೆ ತಂತ್ರಜ್ಞಾನವನ್ನು ವೈದ್ಯಲೋಕ ಬಳಸಿಕೊಳ್ಳಲಾರಂಭಿಸಿತೋ ಅಂದಿನಿಂದ ಹೆಣ್ಣು ಮಗುವಿನ ಹತ್ಯೆ ಕಡಿಮೆಯಾಗಿದೆ. ಹಾಗಂತ ಖುಷಿ ಪಡುವ ಹಾಗಿಲ್ಲ! ಹೆಣ್ಣು ಮಗುವಿನ ಲಿಂಗ ಪರಿವರ್ತನೆ ಮಾಡಿ ಗಂಡಾಗಿಸುತ್ತಾರೆ. ನಮ್ಮ ವಂಶಕ್ಕೊಂದು ಗಂಡು ಮಗು ಬಂತು ಎಂದು ಬೀಗುತ್ತಾರೆ.

ಮತ್ತಷ್ಟು ಓದು »

11
ನವೆಂ

ಕುರಿಯ ವಿಠಲ ಶಾಸ್ತ್ರಿ ಆತ್ಮಕಥನ : ಬಣ್ಣದ ಬದುಕು 10 -ಮೇಳವನ್ನು ಉಳಿಸಿದ ಹರಕೆಯ ಆಟಗಳು

ಧರ್ಮಸ್ಥಳ ಮೇಳದ ಆಡಳಿತವೆಂದರೆ ಅಷ್ಟು ಸುಲಭವಾಗಿ ತೀರ್ಮಾನಿಸುವ ವಿಷಯವಲ್ಲ. ಸುಲಭದ ಮಾತೂ ಅಲ್ಲ. ತುಂಬಾ ವಿಚಾರ ಮಾಡಿ ನಿರ್ಧರಿಸಬೇಕಾದುದು’ ಎಂದು ಸಿ. ಎಸ್. ಶಾಸ್ತ್ರಿಗಳು ನನ್ನ ಯೋಜನೆಯ ಬಗ್ಗೆ ತಿಳಿಸಿದರು.

ಒಂದೆರಡು ದಿನ ಕಳೆದು ಕಾಣಸಿಕ್ಕಿದ ಶ್ರೀ ರಾಮಕೃಷ್ಣಯ್ಯನವರಲ್ಲೂ ಅದೇ ಆಸೆಯನ್ನು ಪ್ರಸ್ತಾಪಿಸಿದಾಗ ಅವರು-

“ಯಾವುದಕ್ಕೂ ನೀವು ಸ್ಥಳಕ್ಕೆ ಬನ್ನಿ. ಅಲ್ಲಿ ಮಾತನಾಡಿ ನೋಡೋಣ” ಎಂದರು.

ಆ ಮಾತಿಗೆ ಅಣ್ಣನವರ ಒಪ್ಪಿಗೆಯೂ ಸಿಕ್ಕಿತು. ಹಾಗೆ ನಾವಿಬ್ಬರೂ ಧರ್ಮಸ್ಥಳಕ್ಕೆ ಹೋಗಿ ಶ್ರೀಮಾನ್ ಹೆಗ್ಗಡೆಯವರನ್ನು ಭೇಟಿಯಾದೆವು.

ನನ್ನ ಆಸೆಯನ್ನು ಶ್ರೀ ರಾಮಕೃಷ್ಣಯ್ಯನವರೇ ಶ್ರೀ ಹೆಗ್ಗಡೆಯವರೊಂದಿಗೆ ಅರುಹಿದರು.

ಅವರದು ಶೀಘ್ರ ನಿರ್ಧಾರದ ಕ್ರಮವೋ ಏನೋ ಎಂದು ನಾನು ಭಾವಿಸುವ ಹಾಗೆ-

“ಆಗಲಿ ಸಂತೋಷ” ಎಂದು ಅವರ ಅಪ್ಪಣೆ ಬಂದಿತು.

ಮೇಳಕ್ಕೆ ಬೇಕಾದ ವೇಷಭೂಷಣಗಳು ಯಾವುವೆಲ್ಲ ಅಗತ್ಯವಿದೆ ಎಂದು ಒಂದು ಪಟ್ಟಿ ತಯಾರಿಸಿ ಕೊಡಲೂ ಹೇಳಿದರು.

ಅವರಿಂದ ವಾಗ್ದಾನ ಪಡೆದು ಊರಿಗೆ ಬರುವಾಗಲೇ ಧರ್ಮಸ್ಥಳ ಮೇಳವನ್ನು ನಾನು ವಹಿಸಿಕೊಳ್ಳಲಿರುವ ಸುದ್ದಿ ಗಾಳಿಯಲ್ಲಿ ಹರಡತೊಡಗಿತ್ತು.

ಮತ್ತಷ್ಟು ಓದು »

10
ನವೆಂ

ಸಂಸ್ಕೃತಿ ಸಂಕಥನ – ೧೦: ಪ್ರೊಟೆಸ್ಟಾಂಟರೇಕೆ ಕೆಥೋಲಿಕ್ ಪ್ರೀಸ್ಟ್ಗಳ ಮೇಲೆ ಪ್ರಹಾರಮಾಡಿದರು?

– ರಮಾನಂದ ಐನಕೈ

ಸಂಸ್ಕೃತಿ ಸಂಕಥನ – ೧೦

ಕೆಥೋಲಿಕ್ ಕ್ರಿಶ್ಚಿಯಾನಿಟಿ ರಿಲಿಜನ್ನಿನ ಸೀಮೆ ದಾಟಿ ಅನೈತಿಕವಾಗಿದೆ. ಇದಕ್ಕೆ ಕಾರಣ ಕ್ಯಾಥೋಲಿಕ್ ಪ್ರೀಸ್ಟ್ಗಳು. ಇವರು ದೇವರು ಮತ್ತು ಜನರ ನಡುವೆ ಮಧ್ಯವರ್ತಿಗಳ ಪಾತ್ರವಹಿಸಿ ಜನರ ರಿಲಿಜನ್ನಿನ ಸ್ವಾತಂತ್ರ್ಯ ಹರಣ ಮಾಡಿದ್ದಾರೆ. ಚರ್ಚ್ ಅನ್ನುವ ಸಂಸ್ಥೆಯ ಮೂಲಕ ಅಧಿಕಾರ ಚಲಾಯಿಸುತ್ತ ಸಮಾಜವನ್ನು ಶ್ರೇಣೀಕರಣಗೊಳಿಸುತ್ತಿದ್ದಾರೆ. ಸ್ವಾರ್ಥ ಹಾಗ ಅಧಿಕಾರದಾಹದಿಂದ ಜನರಲ್ಲಿ ತಾರತಮ್ಯ ಹುಟ್ಟುಹಾಕುತ್ತಿದ್ದಾರೆ. ಪ್ರೀಸ್ಟ್ಹುಡ್ಡನ್ನು ಪಾರಂಪರಿಕ ಮಾಡಿಕೊಂಡಿದ್ದಾರೆ. ಹಾಗಾಗಿ ಕ್ಯಾಥೋಲಿಕ್ ಕ್ರಿಶ್ಚಿಯಾನಿಟಿ ಕೂಡಾ ಒಂದು ಸುಳ್ಳು  ರಿಲಿಜನ್ನಿನ ಸ್ವರೂಪ ಪಡೆದುಕೊಂಡಿದೆ. ಇದಕ್ಕೆಲ್ಲ ಮುಖ್ಯ ಕಾರಣ ಕೆಥೋಲಿಕ್ ಪ್ರೀಸ್ಟ್ಗಳು. ಪ್ರೀಸ್ಟ್ಗಳು ನಿಜವಾದ ಕಂತ್ರಿ(ಕನ್ನಿಂಗ್)ಗಳು ಎಂಬುದು  ಪ್ರೊಟೆಸ್ಟಾಂಟ್ ಸುಧಾರಣಾವಾದಿಗಳ  ಉಗ್ರ ಆರೋಪ.

ಭಾರತೀಯ ಸಂಸ್ಕೃತಿಯ ಕುರಿತು ಬರೆಯುತ್ತಿರುವಾಗ ಈ ತಲೆಬರಹದ ಪ್ರಸ್ತುತತೆಯ ಕುರಿತು ಪ್ರಶ್ನೆ ಏಳುವುದು ಸಹಜ. ಆದರೆ ಇದಕ್ಕೆ ಔಚಿತ್ಯ ಇದೆ. ಕಳೆದ ನಾನೂರು ವರ್ಷಗಳಿಂದ ಭಾರ ತೀಯ ಸಂಸ್ಕೃತಿ ಹಲವಾರು ತಪ್ಪು ದೃಷ್ಟಿಕೋನಗಳಿಂದ ಅರ್ಥ ವ್ಯತ್ಯಾಸಗಳನ್ನು ಹೊಂದುತ್ತ ಬಂದಿದೆ. ನಮ್ಮ ಸಮಾಜ ವಿಜ್ಞಾನಗಳೂ ಇದೇ ತಪ್ಪುದಾರಿಯಲ್ಲಿ ಸಾಗಿವೆ. ಹಾಗಾಗಿ ಪ್ರೊ. ಬಾಲ ಗಂಗಾಧರರು ಹೇಳುವ ಪ್ರಕಾರ ಈಗೇನಾದರೂ ನಿಜವಾದ ಭಾರತೀಯ ಸಂಸ್ಕೃತಿಯನ್ನು ಅರಿಯ ಬೇಕೆಂದರೆ ಮೊದಲು ಪ್ರಾಶ್ಚಾತ್ಯ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಬೇಕು. ಅಷ್ಟರಮಟ್ಟಿಗೆ ಪಾಶ್ಚಾತ್ಯ ದೃಷ್ಟಿಕೋನಗಳು ನಮ್ಮ ಸಂಸ್ಕೃತಿಯನ್ನು ವ್ಯಾಖ್ಯಾನಿಸಿವೆ.

ಮತ್ತಷ್ಟು ಓದು »

10
ನವೆಂ

ಬೆಂಗ್ಳೂರಲ್ಲಿ ‘ಸ್ಲಟ್ ವಾಕ್’ ಆವಶ್ಯಕತೆಯಿದೆಯಾ?

-ರಶ್ಮಿ ಕಾಸರಗೋಡು

ಮಾಜದಲ್ಲಿ ಮಹಿಳೆಗೆ ಸ್ವಾತಂತ್ರ್ಯ ಬೇಕೇ ಬೇಕು. ಆ ಸ್ವಾತಂತ್ರ್ಯವನ್ನು ವ್ಯಕ್ತಪಡಿಸಲು ಚಿಕ್ಕದಾದ ಬಟ್ಟೆತೊಟ್ಟು ಅಂಗಾಂಗಳನ್ನು ಪ್ರದರ್ಶಿಸಿ ಬೀದಿಗಿಳಿಯುವ ಆವಶ್ಯಕತೆ ಇದೆಯೇ? ಹೀಗೊಂದು ಪ್ರಶ್ನೆ ಕಾಡಿದ್ದು ಸ್ಲಟ್ ವಾಕ್ ಬಗ್ಗೆ ಕೇಳಿದಾಗಲೇ.

ಸ್ಲಟ್ ವಾಕ್ ‘ (ಅಸಭ್ಯ ನಡೆ)ಯ ಹುಟ್ಟು ಕೆನಡಾದಲ್ಲಾಗಿದ್ದರೂ, ಅದು ಬಹುಬೇಗನೆ ಎಲ್ಲಾ ರಾಷ್ಟ್ರಗಳಲ್ಲೂ ಹರಡಿ ಹೊಸ ದಿಶೆಯನ್ನೇ ಪಡೆದುಕೊಂಡಿದೆ ಎಂದು ಹೇಳಬಹುದು. ಕೆನಡಾದ ಪೊಲೀಸ್ ಅಧಿಕಾರಿಯೊಬ್ಬರು ಅತ್ಯಾಚಾರಕ್ಕೊಳಗಾಗುವುದನ್ನು ತಡೆಯಲು ಮಹಿಳೆಯರು ನೀತಿಗೆಟ್ಟವರಂತೆ ಉಡುಪು ಧರಿಸಕೂಡದುಎಂದು ಸಲಹೆ ನೀಡಿದರು. ಅಷ್ಟಕ್ಕೇ ಜಗತ್ತಿನೆಲ್ಲೆಡೆ ಪ್ರತಿಭಟನೆ ಆರಂಭವಾಗಿಬಿಟ್ಟಿತು. ‘ಸ್ಲಟ್ ಎಂಬ ಪದವನ್ನೇ ಹಿಂತೆಗೆದುಕೊಳ್ಳಬೇಕೆಂದು ಮಹಿಳೆಯರು ಬೀದಿಗಿಳಿದರು. ಚಿಕ್ಕದಾದ ಸ್ಕರ್ಟ್, ಬಿಕಿನಿ ಟಾಪ್, ಸ್ಲೀವ್ ಲೆಸ್, ಬ್ಯಾಕ್ ಲೆಸ್ ಒಟ್ಟಾರೆ ಎಲ್ಲಾ ಲೆಸ್ ಆಗಿರುವ ಉಡುಗೆ ತೊಟ್ಟು ಮಹಿಳಾಮಣಿಗಳು ಪ್ರತಿಭಟನೆ ಮಾಡಿದರು.

ಅತ್ಯಾಚಾರಕ್ಕೆ ಮಹಿಳೆಯರ ಉಡುಗೆ ಮಾತ್ರ ಕಾರಣವೇ? ಎಂಬ ಪ್ರಶ್ನೆ ಅವರದ್ದಾಗಿತ್ತು. ಅದೇ ವೇಳೆ ನಾವು ಪ್ರಚೋದನಾಕಾರಿ ಉಡುಗೆ ತೊಡುವ ಹಕ್ಕುಳ್ಳವರು, ನಾವು ಯಾವುದೇ ರೀತಿಯಲ್ಲಿ ದಿರಿಸು ಧರಿಸಿದರೆ ಏನಿವಾಗ? ಎಂಬ ವಾದವನ್ನು ಅವರು ಉಡುಗೆಗಳೇ ಪ್ರತಿಪಾದಿಸುತ್ತಿದ್ದವು. ಹಾಗಂತ ಈ ಪ್ರತಿಭಟನೆಯಲ್ಲಿ ಭಾಗವಹಿಸಿದವರು ಸಾಮಾನ್ಯ ಮಹಿಳೆಯರಾಗಿರಲಿಲ್ಲ. ಬದಲಾಗಿ ಸ್ವೇಚಾಚಾರ ಬಯಸುವ ಮಹಿಳೆಯರೇ ಆಗಿದ್ದರು ಎಂಬುದು ಗುರುತಿಸಬೇಕಾದ ಅಂಶ.

ಸರಿ, ಪುರುಷನಂತೆ ಮಹಿಳೆಗೂ ಕೂಡಾ ಎಲ್ಲಾ ಹಕ್ಕು, ಸ್ವಾತಂತ್ರ್ಯ ಇದೆ. ಆಕೆ ಪುರುಷರಂತೆಯೇ ಮದ್ಯಪಾನ ಮಾಡಬಹುದು, ಸ್ವಚ್ಛಂದ ಲೈಂಗಿಕತೆಯ ಅಭೀಪ್ಸೆಯನ್ನು ವ್ಯಕ್ತಪಡಿಸಬಹುದು, ತನಗೆ ಬೇಕಾದಂತೆ ವರ್ತಿಸಲು, ದಿರಿಸು ತೊಡಲು ಎಲ್ಲಾ ರೀತಿಯಲ್ಲೂ ಆಕೆ ಅರ್ಹಳೇ. ಆದರೆ ಇದನ್ನು ವ್ಯಕ್ತಪಡಿಸಲು ಬಿಗಿಯಾದ, ತುಂಡು ಬಟ್ಟೆ ತೊಟ್ಟು ಪರೇಡ್ ನಡೆಸಬೇಕಾದ ಆವಶ್ಯಕತೆ ಇದೆಯೇ? ವಿದೇಶಿಗಳ ವಿಷಯ ಬಿಡಿ, ಅದೂ ಭಾರತದಲ್ಲಿ ಇಂತಹ ಸ್ಲಟ್್ವಾಕ್ ಬೇಕೆ? ಈಗಾಗಲೇ ಭಾರತದ ಭೋಪಾಲ್, ನವದೆಹಲಿ, ಮುಂಬೈ ಮುಂತಾದ ನಗರಗಳಲ್ಲಿ ಸ್ಲಟ್ ವಾಕ್ ನಡೆದಿದೆ. ಇದೀಗ ಬೆಂಗಳೂರಿನಲ್ಲಿ ಡಿಸೆಂಬರ್ 5ಕ್ಕೆ ಸ್ಲಟ್ ವಾಕ್ (ಗೆಜ್ಜೆ ಹೆಜ್ಜೆ) ನಡೆಸಲು ಮುಹೂರ್ತ ಇಟ್ಟಾಗಿದೆ.

ಮತ್ತಷ್ಟು ಓದು »

9
ನವೆಂ

ಯಡಿಯೂರಪ್ಪ ರಾಜಕೀಯದಲ್ಲಿ ‘ಮಾಜಿ’ ಆಗಿದ್ದಾರೆಯೇ?

-‘ಸಿದ್ಧಾರ್ಥ

೩೩ ವರ್ಷಗಳ ವೃತ್ತಿ ಜೀವನದಲ್ಲಿ ಅರ್ಧಾಂಶಕ್ಕೂ ಹೆಚ್ಚು ಕಾಲ ಅಧಿಕಾರಕ್ಕೆ ರಾಜಕಾರಣಿಗಳ ಪತ್ರಿಕಾ ಕಾರ್ಯದರ್ಶಿಯಾಗಿ ಆಪ್ತ ಸಿಬ್ಬಂದಿ ವರ್ಗದಲ್ಲಿ ಕೆಲಸ ಮಾಡಿರುವ ನನಗೆ ಅಧಿಕಾರ ತರುವ ಸಂತೋಷ, ಅಧಿಕಾರ ತ್ಯಾಗದಿಂದ ಬರುವ ವಿಷಾದ ಎರಡನ್ನೂ ಅತೀ ಸಂಮೀಪದಿಂದ ನೋಡಿ ಅನುಭವಿಸುವ ಅವಕಾಶ ಸಿಕ್ಕಿದೆ. ಅಧಿಕಾರ ಹೋದ ಕೂಡಲೇ, ಚುನಾವಣೆ ಸೋತ ಕೂಡಲೇ, ಆಕಾಶವೇ ಕಳಚಿ ಬಿದ್ದಂತೆ ಮೂಲೆಗೆ ಬೀಳುವ ರಾಜಕಾರಣಿಗಳನ್ನು, ಹೋದದ್ದು ಅಧಿಕಾರ ತಾನೇ? ಎಂದು sportive DV ಆಗಿ ನಗು ಮುಖ ಧರಿಸುವ ಧುರೀಣರನ್ನು ನೋಡಿದ್ದೇನೆ. ಹೊಟ್ಟೆಯಲ್ಲಿನ ನೋವು, ಮತ್ಸರ, ಈರ್ಷೆಗೆ ಸಿಲುಕಿ ಉತ್ತರಾಧಿಕಾರಿಯ ಪ್ರಮಾಣ ವಚನ ಸಮಾರಂಭಕ್ಕೆ ಗೈರುಹಾಜರಾದ ನಿರ್ಗಮಿತ ಮುಖ್ಯಮಂತ್ರಿಗಳನೇಕರನ್ನು ನೋಡಿದ್ದೇನೆ. ಅಧಿಕಾರ ಗ್ರಹಣದ ನಂತರ ಖುದ್ದಾಗಿ ಕಛೇರಿಗೆ ಕೊಂಡೊಯ್ದು ಪ್ರತಿಷ್ಠಾಪಿಸಿ ಶುಭ ಹಾರೈಸಿ ಹಗುರ ಹೃದಯದೊಂದಿಗೆ ಖಾಸಗಿ ವಾಹನದಲ್ಲಿ ಮನೆಗೆ ತೆರಳಿದ ವಿವೇಕಿಗಳನ್ನು, ಸಾಮಾನ್ಯ ಶಾಸಕರಾಗಿ ಅತೀವ ಉತ್ಸ್ಸಾಹ ದಿಂದ ಶಾಸನ ಸಭೆಗೆ ಮರಳಿ ಕ್ರಿಯಾತ್ಮಕವಾಗಿ ಕಲಾಪಗಳಲ್ಲಿ ಭಾಗವಹಿಸಿ ಮಾರ್ಗದರ್ಶನ ಮಾಡಿದ ಹಿರಿಯರನೇಕರ ಮಾತುಗಳು ನನ್ನ ಕಿವಿಗಳಲ್ಲಿ ಇನ್ನೂ ರಿಂಗಣಿಸುತ್ತಿವೆ.

 

ಇವೆಲ್ಲವೂ ನೆನಪಾದದ್ದು ಯಡಿಯೂರಪ್ಪನವರು ಅಧಿಕಾರ ಕಳೆದುಕೊಂಡ ಮರುಕ್ಷಣವೇ ಅವರ ಮನೆಯ ಮುಂದೆ ತುಂಬಿದ್ದ ಗೋಜುಗೋಜು ಜನ ಜಂಗುಳಿ ಏಕಾಏಕಿ ಮಾಯವಾದಾಗ. ಅಧಿಕಾರ ತರುವ ಜನ ಭಾಹುಳ್ಯವನ್ನು ಅಧಿಕಾರ ನಂತರದ ಜನ ವಿಯೋಗವನ್ನು ಪತ್ರಿಕೆಯೊಂದು ಛಾಯಾಚಿತ್ರಗಳ ಮೂಲಕ ಸಮರ್ಥವಾಗಿ ಪ್ರತಿಬಿಂಬಿಸಿತ್ತು. ಗಾದೆ ಮಾತೇ ಇಲ್ಲವೇ. ನಗುವಾಗ ಎಲ್ಲ ನೆಂಟರು ಅಳುವಾಗ ಯಾರೂ ಇಲ್ಲ.

ಮತ್ತಷ್ಟು ಓದು »

9
ನವೆಂ

ಭಾವುಕರಾಗೋಣ ಬನ್ನಿ!

-ಸಂತೋಷ್

ಮನುಷ್ಯನ ಜೀವನಕ್ಕೆ ಭಾವನೆಗಳು ಎಷ್ಟು ಮುಖ್ಯ? ಎಂದು ಕೇಳಿದರೆ ನಾನು ಕೋಡುವ ಉತ್ತರ ಖಂಡಿತ ಅವು ಮನುಷ್ಯನ ಜೀವನದ ಅವಿಭಾಜ್ಯ ಅಂಗವೆಂದು.ಭಾವನೆಗಳಿಲ್ಲದ ಮನುಷ್ಯ ಏನನ್ನು ಸಾದಿಸಲಾರ.ನಿಜವಾಗಲು ಭಾವನೆಗಳೇ ಮನುಷ್ಯನ ಜೀವನದ ದಾರಿದೀಪಗಳು.ಇದಕ್ಕೆಲ್ಲ ಅಪವಾದವೆಂಬಂತೆ,ನಮ್ಮಲ್ಲಿ ಹುಟ್ಟುವ ಸೂರ್ಯನನ್ನ,ಅರಳುವ ಗುಲಾಭಿಯನ್ನು,ಸುರಿಯುವ ಮಳೆಯನ್ನು,ಆಕಾಶದಲ್ಲಿ ಮೂಡುವ ಬಣ್ಣ ಬಣ್ಣದ ಚಿತ್ತಾರವನ್ನು,ರಂಗು ರಂಗಾಗಿ ಕಾಣುವ ಕಾಮನ ಬಿಲ್ಲನು ನೋಡಿ ಮುದಗೋಳದ ಕುಂಬಕರ್ಣರು ಇದ್ದಾರೆ!ಇದರ ಬಗ್ಗೆ ಅವರದೆಲ್ಲ ದಿವ್ಯ ನಿರ್ಲಕ್ಷೆ.

ಆದರೇ ಹಾಗೇ ನಿದ್ದೆ ಮಾಡುವ ಅವರು ಭಾವುಕತೆಯ ಸುಂದರ ಅನುಭವವನ್ನು ಕಳೆದುಕೋಳುತಾರೆ ಎಂಬುದೇ ನನ್ನ ಭಾವನೆ.ಕಡೇ ಪಕ್ಷ ಈ ಪ್ರಬಂದವನ್ನು ಓದಿದ ನಂತರವಾದರು ಅಂತ ಕುಂಬಕರ್ಣರು ನಿದ್ದೆಯಿಂದ ಎಚ್ಚೆತ್ತುಕೊಂಡರೆ ಸಂತೋಷ ಇಲ್ಲದಿದ್ದರೆ ನಾವು ನೀವು ಏನು ಮಾಡಕ್ಕೆ ಆಗುತ್ತೆ ಅವರನ್ನು ಅವರ ಪಾಡಿಗೆ ಬಿಡುವುದೇ ಸೂಕ್ತ.

ಭಾವುಕನಾದವನು ಸದ ಹೊಸತ್ತನ್ನೆ ಅನ್ವೇಷಣೆ ಮಾಡುತ್ತ ಇರುತ್ತಾನೆ.ಅವನು ಪ್ರಕೃತಿಯೊಂದಿಗೆ ಒಂದು ರೀತಿಯ ಸಂವಾದವನ್ನು ಸಮಾನತೆಯನ್ನು ಸಾದಿಸುತ್ತಾನೆ.ನಿಮ್ಮ ಕಣ್ಣಿಗೆ ಒಂದು ಸುಂದರ ಹೂವು ಅರಳಿ ನಿಂತಾಗ ಭಾವುಕನಾದವನ್ನು ಅದರ ಅರಳುವಿಕೆಯನ್ನು ನೆನೆದು ನೆನೆದು ಪುಳಕಗೋಳ್ಳುತದತ್ತಾನೆ.ಅದg ಬಣ್ಣಗಳನ್ನು ತನ್ನ ಕೈಯಿಂದ ಒರೆಸಿ ನೋಡುತ್ತಾನೆ. ಅದರ ಸುವಾಸನೆಗಾಗಿ ತನ್ನ,ಮೂಗನ್ನು ಅದರ ಬಳಿ ಕೊಂಡಯ್ಯತ್ತಾನೆ.ಧೀರ್ಘವಾದ ಉಸಿರನ್ನು ಏಳೆದುಕೊಂಡು ಅದರ ಸುವಾಸನೆಯನ್ನು ಆಸ್ವಾದಿಸುತ್ತಾನೆ.ಕೊನೆಗೆ ಆ ಹೂವಿನಿಂದ ಬಿಳ್ಕೋಡುವಾಗ ಆ ಹೂವಿಗೆ ಒಂದು ಹೂ ಮುತ್ತನ್ನು ನೀಡಿದರೇ ಅವನು ಭಾವುಕ ಎನಿಸಿಕೊಳ್ಳುತ್ತಾನೆ.

ಮತ್ತಷ್ಟು ಓದು »

8
ನವೆಂ

ಕರ್ನಾಟಕದಲ್ಲಿ ಬೇಲಿಯೇ ಎದ್ದು ಹೊಲ ಮೈಯುತ್ತಿದೆ ನೋಡ್ರಣ್ಣಾ.!

ಮಹೇಶ್ ಎಂ. ಆರ್.

ನಿಯಮಗಳು ಮಾಡುವುದೇ ಮುರಿಯೋದಕ್ಕೆ ಎಂಬ ಮಾತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಒಪ್ಪುತ್ತದೆ. ಅನೇಕ ಬಾರಿ ಕರ್ನಾಟಕ ಚಲನಚಿತ್ರ ಮಂಡಳಿ ವಿದಿಸಿದ ನಿಯಮಗಳನ್ನು ಪರಬಾಶೆ ಚಿತ್ರಗಳ ವಿತರಕರು ಗಾಳಿಗೆ ತೂರಿರುವುದನ್ನು ನಾವು ಕಾಣಬಹುದು. ಈ ಹಿಂದೆ ಹಿಂದಿಯ ರಾವಣ, ಕೈಟ್ಸ್, ತೆಲುಗಿನ ದೂಕುಡು, ಊಸರವಳ್ಳಿ ಚಿತ್ರ ಬಿಡುಗಡೆ ಸಮಯದಲ್ಲಿ ಈ ನಿಯಮಗಳನ್ನು ಪಾಲಿಸಲಾಗಿಲ್ಲ. ಅದೇ ಪರಿಪಾಠ ಈ ಸಲದ ದೀಪಾವಳಿ ಸಮಯದಲ್ಲೂ ಮುಂದುವರೆದಿದೆ. ಆದರೆ ಈ ಬಾರಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯೇ ಮುಂದೆ ನಿಂತು, ತಾನು ಸ್ವತ: ಮಾಡಿದ ನಿಯಮಗಳನ್ನು ಹಿಂದಿಯ ರಾ ವನ್, ತಮಿಳಿನ ವೆಲಾಯುದಂ, ೭ ಅಮ್ ಅರಿವು ಚಿತ್ರಗಳ ಮೂಲಕ ಕಸದ ಬುಟ್ಟಿಗೆ ಎಸೆದಿದೆ. ಮಂಡಳಿಯ ಸಲಹಾ ಸಮಿತಿ ಸದಸ್ಯರು ಈ ಮೂರು ಚಿತ್ರಗಳನ್ನು ಕರ್ನಾಟಕದಲ್ಲಿ ನಿಯಮ ಮೀರಿ ಬಿಡುಗಡೆಗೊಳಿಸಲು ಅನುಮತಿ ನೀಡಿದ್ದಾರೆ ಎಂಬ ಸುದ್ದಿ ಇತ್ತೀಚಿಗೆ ಡೆಕ್ಕನ್ ಹೆರಾಲ್ಡಿನಲ್ಲಿ ಪ್ರಕಟವಾಗಿತ್ತು. (The members of the advisory board of the Karnataka Film Chamber of Commerce (KFCC) have consented to the release of Ra. One, Velayudham, and 7 Aum Arivu during Deepavali this week. And because of this no Kannada films are releasing this week.) ಇದು ಆಶ್ಚರ್ಯವಾದರೂ ಸತ್ಯ. ಕನ್ನಡ ಚಿತ್ರರಂಗದ ಏಳಿಗೆಗೆ ಸಲಹೆಗಳನ್ನು ನೀಡಬೇಕಾದ ಮಂಡಳಿಯ ಸಲಹಾ ಸಮಿತಿ ಸದಸ್ಯರು ಪರಬಾಶೆ ಚಿತ್ರಗಳನ್ನು ನಿಯಮ ಮೀರಿ ಬಿಡುಗಡೆ ಮಾಡುವಂತೆ ಸಲಹೆ ಮಾಡಿದ್ದಾರೆ.! ಕನ್ನಡ ಚಿತ್ರಗಳ ಮಾರುಕಟ್ಟೆ ಬೆಳೆಸುವ ಬಗ್ಗೆ ಸಲಹೆ ನೀಡಬೇಕಾದವರಲ್ಲಿ ಕೆಲವರು ಪರಬಾಶೆ ಚಿತ್ರ ವಿತರಣೆ ಹಕ್ಕನ್ನು ಪಡೆದುಕೊಂಡು, ಕನ್ನಡ ಚಿತ್ರಗಳು ಬಿಡುಗಡೆ ಆಗದ ಹಾಗೆ, ಈಗಾಗಲೇ ಬಿಡುಗಡೆ ಆದ ಚಿತ್ರಗಳಿಗೆ ಚಿತ್ರಮಂದಿರ ಸಿಗದ ಹಾಗೆ ಪರಿಸ್ಥಿತಿ ನಿರ್ಮಿಸಿ ಕನ್ನಡ ಚಿತ್ರರಂಗದ ಬಗೆಗಿನ ತಮ್ಮ ಇಚ್ಚಾಶಕ್ತಿಯನ್ನು ಪ್ರದರ್ಶಿಸಿದ್ದಾರೆ. ಇದು ಚಲನಚಿತ್ರ ಮಂಡಳಿಯ ಕರ್ಮಕಾಂಡ.

ಮತ್ತಷ್ಟು ಓದು »

8
ನವೆಂ

ಸಂದರ್ಭ ಸಹಿತ ಕುವೆಂಪು ಕವನಗಳ ಸೊಗಸು

ಬಿ ಅರ್ ಸತ್ಯನಾರಾಯಣ

 

ನಾನು ಚಿಕ್ಕವನಿದ್ದಾಗ ರೇಡಿಯೋದಲ್ಲಿ ಬರುತ್ತಿದ್ದ ಬೇಂದ್ರೆಯವರ ’ನೀ ಹೀಂಗ ನೋಡಬ್ಯಾಡ ನನ್ನ’ ಎಂಬ ಹಾಡನ್ನು ಅದೊಂದು ಪ್ರೇಮಗೀತೆ ಎನ್ನವಂತೆ ಭಾವಿಸಿದ್ದೆ. ಆಗಿನ್ನೂ ನನಗೆ ಇಡೀ ಕವಿತೆಯ ಪಾಠವನ್ನು ಗಮನಿಸುವ ವ್ಯವಧಾನವೂ ಇರಲಿಲ್ಲ. ಓದಿಯೂ ಇರಲಿಲ್ಲ. ನಂತರ ಆ ಕವಿತೆ ಹುಟ್ಟಿದ ಸಂದರ್ಭ ಸನ್ನಿವೇಶ, ಪೂರ್ಣಪಾಠ ಮೊದಲಾದವುಗಳು ದೊರೆತ ಮೇಲೆ ಅದು ನನಗೆ ದಕ್ಕಿದ, ತಟ್ಟಿದ ರೀತಿಯೇ ಬೇರೆ!

ಇದನ್ನು ಏಕೆ ಹೇಳಿದೆನೆಂದರೆ, ಒಂದು ಕವಿತೆ ಹುಟ್ಟಿದ ಸಂದರ್ಭ ಸನ್ನಿವೇಶ ಗೊತ್ತಿದ್ದಾಗ ಆ ಕವಿತೆ ನಮ್ಮ ಮೇಲೆ ಬೀರುವ ಪ್ರಭಾವವೇ ಬೇರೆ. ಏನೂ ಗೊತ್ತಿಲ್ಲದೆ ಒಂದು ಕವಿತೆಯನ್ನು ಓದಿದಾಗ ಆಗುವ ಪರಿಣಾಮವೇ ಬೇರೆ. ಅದು ಹುಟ್ಟಿದ ಸಂದರ್ಭವು ಗೊತ್ತಿರದ ಓದುಗನ ಮೇಲೆ ತೀವ್ರತರವಾದ ಬೇರೆ ಬೇರೆಯದೇ ಆದ ಪರಿಣಾಮವನ್ನು ಕವಿತೆ ಉಂಟು ಮಾಡುತ್ತದೆ, ನಿಜ. ಆದರೆ ಕವಿತೆ ಹುಟ್ಟಿದ ಸಂದರ್ಭ ಗೊತ್ತಿದ್ದಾಗ ಅದಕ್ಕೊಂದು ಹೆಚ್ಚುವರಿ ಸೊಬಗು ಇರುತ್ತದೆ ಎಂಬುದು ನಿಜ. ಅದಕ್ಕಿಂತ ಹೆಚ್ಚಾಗಿ ಆ ಕವಿತೆ ನಮ್ಮನ್ನು ತಡೆಹಿಡಿದು, ನಿಲ್ಲಿಸಿ, ಓದಿಸಿಕೊಳ್ಳುತ್ತದೆ. ಜೊತೆಗೆ ಚಾರಿತ್ರಿಕವಾಗಿ ಕವಿತೆಗೆ ಹೆಚ್ಚಿನ ಮಹತ್ವ ದೊರೆಯುತ್ತದೆ.
ಒಂದು ಕಲಾಕೃತಿ ಹೆಚ್ಚು ಪರಿಣಾಮಕಾರಿಯಾಗಲು ಚಾರಿತ್ರಿಕ ಅಂಶಗಳು ಕೆಲಸ ಮಾಡುತ್ತವೆ. ತೇಜಸ್ವಿ ತಮ್ಮ ’ವಿಮರ್ಶೆಯ ವಿಮರ್ಶೆ’ ಪುಸ್ತಕದಲ್ಲಿ ಒಂದು ಕಡೆ ಇದರ ಮಹತ್ವವನ್ನು ದಾಖಲಿಸಿದ್ದಾರೆ. ಅಬಚೂರಿನ ಪೋಸ್ಟಾಫೀಸು ಕಥಾಸಂಕನದಲ್ಲಿರುವ ’ಅವನತಿ’ ಮತ್ತು ’ತಬರನ ಕಥೆ’ ಎರಡು ಕಥೆಗಳಲ್ಲಿ ’ಅವನತಿ’ ಕಲಾತ್ಮಕವಾಗಿ ಶ್ರೇಷ್ಟಕೃತಿ. ಆದರೆ, ಚಾರಿತ್ರಿಕ ಸಂದರ್ಭಗಳಿಂದ ’ತಬರನ ಕಥೆ’ಗೆ ಹೆಚ್ಚು ಪ್ರಚಾರ, ಯಶಸ್ಸು ದೊರೆಯಿತು. ಮತ್ತಷ್ಟು ಓದು »

7
ನವೆಂ

“ನನ್ನೂರು ಕೊಳ್ಳೇಗಾಲ …!!! ಹೆದರಿಕೊಳ್ಳಬೇಡಿ… ಮಾಟ-ಮಂತ್ರಕ್ಕೆ ಪ್ರಸಿದ್ಧಿ ಅಲ್ಲ…!”

-ಮೋಹನ್‍ ವಿ.ಬಬ್ಲಿ, ಚಿಕ್ಕಮಗಳೂರು

ಕೊಳ್ಳೇಗಾಲ ಎಂಬ ಹೆಸರು ಕೇಳಿದರೆ ಸಾಕು ಇಡೀ ಕರ್ನಾಟಕವೇ ಬೆಚ್ಚಿಬೀಳುತ್ತದೆ. ‘ಕೊಳ್ಳೇಗಾಲದವರು ನಾವು’ ಎಂದುಬಿಟ್ಟರೆ ಸಾಕು ಸುತ್ತಲಿನವರ ಕಣ್ಣು ಕಿವಿ ಅರಳುತ್ತದೆ. ಕೊಳ್ಳೇಗಾಲದ ಒಂದು ರುಪಾಯಿಯ ಒಂದು ನಿಂಬೇಹಣ್ಣಿಗೆ ಬೇರೆಯ ಕಡೆ ಕಡಿಮೆ ಅಂದರು ಸಾವಿರ ರೂಗಳು! ಅಲ್ಲಿನ ಮಾಟಮಂತ್ರವೇ ಇದಕ್ಕೆಲ್ಲ ಕಾರಣ. ವಾಮಮಾರ್ಗಕ್ಕೆ ಕೊಳ್ಳೇಗಾಲ ಪ್ರಸಿದ್ಧಿ ಎಂಬುದು ಎಲ್ಲರ ಅಂಬೋಣ. ಎಷ್ಟೋ ಜನ ಇದನ್ನೇ ಬಂಡವಾಳ ಮಾಡಿಕೊಂಡಿದ್ದಾರೆ. 

ನಾನಿರುವ ಚಿಕ್ಕಮಗಳೂರಿನಲ್ಲಿ ಕೊಳ್ಳೆಗಾಲದ ಮಾಂತ್ರಿಕರು ಎಂದುದುರಿಕೊಂಡು ಎಷ್ಟೋ ಜನ ಜೊತಿಷ್ಯಾಲಯಗಳನ್ನು ತೆರೆದಿದ್ದಾರೆ. ಸಿನಿಮಾಗಳಲ್ಲಿಯೂ ಕೂಡ ಹಾಗೆ. ಮಾಟಮಂತ್ರದ ವಿಚಾರ ಬಂದರೆ ಕೊಳ್ಳೇಗಾಲದ ಹೆಸರನ್ನು ಬಿಂಬಿಸುತ್ತಾರೆ. ‘ನೀವು ಮಾಟಮಂತ್ರಕ್ಕೆ ಫೇಮಸ್ ಅಲ್ವಾ’ ಎಂದು ಸಾವಿರಾರು ಜನ ನನ್ನನ್ನು ಕೇಳಿದ್ದಾರೆ. ಮೈಸೂರಿನ ಮಾನಸಗಂಗೋತ್ರಿಯಲ್ಲಿ ಓದುತ್ತಿರುವಾಗ ಎಷ್ಟೋ ಉಪನ್ಯಾಸಕರೂ ಕೂಡ ನನ್ನನ್ನು ಮಾಟ ಮಾಡಿಸಿಕೊಡಿ ಎಂದು ಅಹವಾಲಿಸಿಕೊಂಡಿದ್ದಾರೆ.

ನಿಮ್ಮೆಲ್ಲರ ಪ್ರಶ್ನೆ… ಹಾಗಾದರೆ ಕೊಳ್ಳೇಗಾಲ ಮಾಟಮಂತ್ರಕ್ಕೆ ಫೇಮಸ್ ಅಲ್ವಾ? ಖಂಡತಿವಾಗಿಯೂ ಇಲ್ಲ. ಕೊಳ್ಳೇಗಾಲದಲ್ಲಿ ದೇವಾಂಗ ಬೀದಿ ಎಂಬ ಒಂದು ಬೀದಿ ಇದೆ. ಮಾಟಮಂತ್ರಕ್ಕೆ ಅವರೇ ಪ್ರಸಿದ್ಧಿ. ನಮ್ಮ ಮನೆ ಇರುವುದು ಅದೇ ಬೀದಿಯಲ್ಲಿ! ನಮ್ಮ ಪಕ್ಕದ ಮನೆಯವನೂ ಮಾಟಮಂತ್ರಕ್ಕೆ ಫೇಮಸ್! ( ನಾವು ಇನ್ನು ಫೇಮಸ್ ಆಗಿಲ್ಲ! ). ಇದೇನಿದು, ಮಾಟಮಂತ್ರವೇ ಇಲ್ಲ ಎಂದು ಅದರ ಬಗ್ಗೆಯೇ ಹೇಳುತ್ತಿರುವನಲ್ಲ ಎಂದುಕೊಂಡು ಹುಬ್ಬೇರಿಸಬೇಡಿ. ಹೌದು ಕೊಳ್ಳೇಗಾಲದಲ್ಲಿ ಸರಿಸುಮಾರು ೩೦ ವರ್ಷಗಳ ಹಿಂದೆ ವಾಮಾಚಾರ ಅವ್ಯಾಹತವಾಗಿ ನಡೆಯುತ್ತಿತ್ತು. ನಿಮ್ಮ ಶತ್ರುಗಳ ಪತನಕ್ಕೆ ಸೂತ್ರ ರೂಪಿಸಿಕೊಡುತ್ತಿದ್ದರು. ಮತ್ತಷ್ಟು ಓದು »