ವಿಷಯದ ವಿವರಗಳಿಗೆ ದಾಟಿರಿ

ಮೇ 15, 2012

4

ಸಕಲ ಬೈಗುಳಕ್ಕೂ ಅರ್ಹರಿವರು, ಸರ್ವರಿಂದಲೂ ಧೂಷಿತರು

‍ನಿಲುಮೆ ಮೂಲಕ

– ಭಾಸ್ಕರ್ ಎಸ್.ಎನ್

ನೀವು ಎಂದಾದರೂ, ಯಾರ ಮೇಲಾದರೂ ನಿಮ್ಮ ನಾಲಿಗೆಯನ್ನು ಹರಿಬಿಟ್ಟಿದ್ದೀರಾ? ಅದೂ ಸಹಾ ವಾಚಾಮಗೋಚರ..!

Interesting question..!

ಒಬ್ಬ ವ್ಯಕ್ತಿಯನ್ನು ಮನಸೋ ಇಚ್ಚೆ ಬೈಯಲು ಬೇಕಾದ ಅರ್ಹತೆಗಳೇನು? ಬೈಯಲಿರುವ ವ್ಯಕ್ತಿ ಬೈಸಿಕೊಳ್ಳುವ ವ್ಯಕ್ತಿಗಿಂದ ಅಧಿಕಾರದಲ್ಲಾಗಲೀ, ಅರ್ಹತೆಯಲ್ಲಾಗಲೀ, ಹುದ್ದೆಯಲ್ಲಾಗಲಿ..ಮೇಲ್ಮಟ್ಟದಲ್ಲಿದ್ದಾನೆಂಬ ಏಕ ಮಾತ್ರ ಕಾರಣಕ್ಕೆ ಆತ ಈ ಅರ್ಹತೆ ಗಳಿಸಿರುತ್ತಾನೆ ಎಂಬುದು ಎಷ್ಟರ ಮಟ್ಟಿಗೆ ಒಪ್ಪಿಗೆಗೆ ಅರ್ಹ. ಉನ್ನತ ಮಟ್ಟದಲ್ಲಿದ್ದ ಮಾತ್ರಕ್ಕೇ ಯಾರನ್ನಾದರೂ ಹೇಗಾದರೂ ಧೂಷಿಸುವ ಅರ್ಹತೆಯನ್ನು  ಒಬ್ಬ ವ್ಯಕ್ತಿ ಗಳಿಸಿಕೊಳ್ಳುತ್ತಾನೆಯೇ? ಅಥವಾ ಹೀಗೆ ವರ್ತಿಸಿದರೆ ಮಾತ್ರ ಆ ಹುದ್ದೆಗೆ, ಅಧಿಕಾರಕ್ಕೆ ಆತ ಅರ್ಹನೇ?

ಖಂಡಿತ ಇಲ್ಲ. ಕಾನೂನಿನ ಚೌಕಟ್ಟಿಗೆ ಬಂದು ಹೇಳುವುದಾದರೆ, ಯಾವುದೇ ಹುದ್ದೆ, ಅಥವಾ ಯಾವುದೇ ಅಧಿಕಾರ ಹೊಂದಿರುವ ಒಬ್ಬ ವ್ಯಕ್ತಿ ತನ್ನ ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳುವುದಕ್ಕೆ ಮಾತ್ರ ಅರ್ಹ. ಆತ ಯಾವುದೇ ಹುದ್ದೆಯಲ್ಲಿರಲಿ ಅಥವಾ ಎಷ್ಟೇ ಅಧಿಕಾರವನ್ನು ಹೊಂದಿರಲಿ  ಮತ್ತೊಬ್ಬ ವ್ಯಕ್ತಿಯನ್ನು ಮಾತಿನ ಮೂಲಕ ಧೂಷಿಸಿವ, ನಿಂದಿಸುವ ಅಥವಾ ಅವಾಛ್ಯ ಶಬ್ದಗಳಿಂದ ತೆಗಳುವುದು ಅಪರಾಧ. ಇದು ಕಾನೂನಿನ ವಿಷಯವಾಯಿತು.  ಎಲ್ಲಾ ಕಾಲದಲ್ಲೂ ಎಲ್ಲಾ ಸಂಧರ್ಭಗಳಲ್ಲೂ ಕಾನೂನಿನ ಅನಿವಾರ್ಯತೆ ಅಥವಾ ಅವಶ್ಯಕತೆ ಬರುವುದಿಲ್ಲ ಅಲ್ಲವೇ?

ಮಾನವೀಯ ಮೌಲ್ಯದ ಆಧಾರದಲ್ಲಿ ಹೇಳುವುದಾದದರೆ, ನಿಂದನೆಗೆ, ಧೂಷಣೆಗೆ ಒಳಗಾಗಲಿರುವ ವ್ಯಕ್ತಿ ಯಾವುದಾದರೂ ತಪ್ಪನ್ನ ಎಸಗಿ‌ದ್ದರೆ ಆತ ಆ ಧೂಷಣೆಗೆ ಅರ್ಹನಾಗುತ್ತಾನೆ. ಇದು ಸಾಮಾಜಿಕವಾಗಿಯೂ ಸಹಾ ಒಪ್ಪತಕ್ಕಹ ವಿಚಾರ. ಆದರೆ ನಿಮಗೆ ತಿಳಿದಿರಲಿ ಎಲ್ಲಾ ಕಾಲದಲ್ಲಿಯೂ, ಎಲ್ಲಾ ಕಾರಣಗಳಿಗಾಗಿಯೂ, ಎಲ್ಲರಿಂದಲೂ ಧೂಷಣೆಗೆ, ನಿಂದನೆ, ಬೈಗುಳಗಳಿಗೆ ಅರ್ಹವಾಗಿರುವ, ಇವುಗಳಿಗೆ ಒಳಗಾಗಿರುವ ಒಂದು ಸಮುದಾಯವಿದೆ.

ಇಲ್ಲಿ ನಾನು ಹೇಳಲು ಹೊರಟಿರುವ ವಿಚಾರವೆಂದರೆ, ಅದು ಪೊಲೀಸ್ ಇಲಾಖೆಯ ಬಗ್ಗೆ. ಪೊಲೀಸ್ ಇಲಾಖೆಯ ಕೆಳಹಂತದ ಪೊಲೀಸ್ ಸಿಬ್ಬಂದಿಗಳ ಬಗ್ಗೆ.

ಧೂಷಣೆಗೆ ಅಥವಾ ಬೈಗುಳಕ್ಕೆ ಒಳಗಾಗಲು ಇಲ್ಲಿ ಶಿಸ್ತು, ಸಮವಸ್ತ್ರ, ಕವಾಯತು, ಶ್ರಮದಾನ, ಪಿ.ಟಿ, ಲಾಟಿ,…ಹೀಗೇ ನೂರು ಕಾರಣಗಳು ಲಭ್ಯ. ವ್ಯಕ್ತಿ ಗೌರವ ಇಲ್ಲಿ ದೂರದ ಮಾತು. ವೈಯಕ್ತಿಕ ಧೂಷನೆ, ನಿಂದನೆ, ಮಾನಹಾನಿ ಇಲ್ಲಿ ಸರ್ವೇಸಾಮಾನ್ಯ.

ಸಾರ್ವಜನಿಕರೊಡನೆ ಪೊಲೀಸರ ವರ್ತನೆ, ಅವರು ಬಳಸುವ ಭಾಷೆ, ಇತ್ಯಾದಿ ವಿಷಯಗಳು ಇಂದು ಸಾರ್ವಜನಿಕವಾಗಿ ಚರ್ಚೆಯಲ್ಲಿರುವಂತಹ ವಿಷಯಗಳು. ಪೊಲೀಸ್ ಠಾಣೆಗಳಿಗೆ ಹೋಗಲೂ ಸಹಾ ಸಾಮಾನ್ಯ ಜನರು ಹಿಂದೇಟು ಹಾಕುವಷ್ಟರ ಮಟ್ಟಿಗೆ ಪೊಲೀಸರ ಸೌಜನ್ಯ ಪ್ರಕಟವಾಗುತ್ತಿದೆ. ಪೊಲೀಸರೆಂದರೆ ಅಶ್ಲೀಷ ಭಾಷೆ, ಸಾರ್ವಜನಿಕರೆಡೆಗೆ ಅವರ ದೂರಿನೆಡೆಗೆ ಅಸಡ್ಡೆ, ಅಗೌರವ ಇತ್ಯಾದಿ..ಇತ್ಯಾದಿ…ಇದು ಇಡೀ ಇಲಾಖೆಯ ಬಗ್ಗೆ ಇರುವ ಸಾರ್ವಜನಿಕ ಅಭಿಪ್ರಾಯ. ಇದು ಸರ್ವವಿಧಿತ.

ಈ ನಿಟ್ಟಿನಲ್ಲಿ ಇಲಾಖೆಯಲ್ಲಿ ಸುಧಾರಣೆ ತರುವ ವಿಷಯವಾಗಿ ಹಲವು ಯೋಜನೆಗಳು, ಸಿಬ್ಬಂದಿಗೆ ತರಬೇತಿಗಳು, ಇತ್ಯಾದಿಗಳನ್ನೂ ಸಹಾ ಹಮ್ಮಿಕೊಳ್ಳಲಾಗಿರುತ್ತದೆ. ಆದರೆ ಪ್ರಯೋಜನ ಮಾತ್ರ ಶೂನ್ಯ.

ಸಾರ್ವಜನಿಕರೆಡೆಗೆ ಪೊಲೀಸರ ವರ್ತನೆ; ಈ ವಿಚಾರದ ಸಲುವಾಗಿ ವಿಶ್ಲೇಷಣೆ ಮಾಡಿದ್ದಲ್ಲಿ, ಮೊದಲಿಗೆ ಗಮನಿಸಬೇಕಾದ ಅಂಶ ಇದು ಇಲಾಖೆಯ ಸಂಪೂರ್ಣ ಬಾಹ್ಯ ವಿಚಾರ. ಬಾಹ್ಯವಾಗಿ ಇಲಾಖೆಯ ವರ್ತನೆಯ ಬಗ್ಗೆ, ಸಾರ್ವಜನಿಕ ಸ್ಪಂದನೆಯ ಬಗ್ಗೆ ಪ್ರಚಲಿತದಲ್ಲಿರುವ ಠೀಕೆ. ಇದನ್ನು ಸಂಪೂರ್ಣವಾಗಿ ತಳ್ಳಿಹಾಕುವ ಧೈರ್ಯ ಇಲಾಖೆಯಲ್ಲಿಯೇ ಯಾರಿಗೂ ಇಲ್ಲ. ಈ ರೀತಿಯ ಬಾಹ್ಯ ವರ್ತನೆಗೆ ಪ್ರಮುಖ ಕಾರಣ ಇಲಾಖೆಯಲ್ಲಿರುವ ಉಸಿರುಗಟ್ಟಿಸುವಂತಹ ಆಂತರಿಕ ಸ್ಥಿತಿ. ಈ ಸ್ಥಿತಿ ಊಹಿಸಲೂ ಸಹಾ ಅಸಾಧ್ಯ. ಇಲ್ಲಿ ಒಂದು ನಿಧರ್ಷನವನ್ಜು ನೀಡುತ್ತೇನೆ.

ಅವನಿಗೆ ಅಂದು ರಾತ್ರಿ ಗಸ್ತಿನ ಕರ್ತವ್ಯ, ಆದರೆ ವಿಪರೀತವಾದ ಜ್ವರ. ಜೊತೆಗೇ ಅಲ್ಲಿ ಕಾನೂನು ಸುವ್ಯವಸ್ಥೆಯ ತೊಡಕು ಬೇರೆ. ನೆನಪಿರಲಿ ಆತ ರಾತ್ರಿಗಸ್ತಿನ ಕರ್ತವ್ಯವನ್ನೇ ಸತತವಾಗಿ ೪೦ ದಿನಗಳಿಂದ ಮಾಡಿರುತ್ತಾನೆ. ಇಂದು ಮಾತ್ರ ಜ್ವರದ ಕಾರಣದಿಂದ ಬಳಲಿಕೆ, ರಜೆ ಕೇಳೋಣವೆಂದರೆ ಠಾಣಾಧಿಕಾರಿ ಠಾಣೆಯಲ್ಲಿಲ್ಲ, ಅವರೂ ಸಹಾ ಕರ್ತವ್ಯದಲ್ಲಿ ನಿರತರು. ಕರೆ ಮಾಡಿದರೆ ನಿರುತ್ತರ. ಸರಿ ಮರುದಿನ ರಜೆ ಕೇಳೋಣವೆಂದು ತೀರ್ಮಾನಿಸಿ ಹೇಗೋ ಸಾವರಿಸಿಕೊಂಡು ೭ ಕೆ.ಜಿ ತೂಕದ ಬಂದೂಕನ್ನು ತೆಗೆದುಕೊಂಡು, ಸುಮಾರು ೨ ಕೆ.ಜಿ ತೂಕದ ಓವರ್‍ಕೋಟ್ ಧರಿಸಿ ಕರ್ತವ್ಯಕ್ಕೆ ಹೊರಟು ನಿಂತ, ಹೊರಗೆ ತಾಪಮಾನ ೦೮-೧೦ ಡಿಗ್ರಿ. ಹಾಗೂ ಹೀಗೂ ಕರ್ತವ್ಯ ಮಾಡುವಲ್ಲಿ ಸಮಯ ರಾತ್ರಿ ಒಂದನ್ನು ದಾಟಿತ್ತು. ಕಣ್ಣು ಎಳೆದಂತಾದ ಕಾರಣ ವಿಶ್ರಾಂತಿಗಾಗಿ ಆತ ಒಂದು ಕಡೆ ಕುಳಿತ. ಜ್ವರ ಜೊತೆಗೆ ತೀವ್ರ ಬಳಲಿಕೆಯ ಕಾರಣ ತನಗೇ ತಿಳಿಯದೇ ನಿದ್ರೆಗೆ ಜಾರಿದ. ೧೦ ನಿಮಿಷದ ನಂತರ ಅನಿರೀಕ್ಷಿತವಾಗಿ ಅಲ್ಲಿಗೆ ಉನ್ನತ ಅಧಿಕಾರಿಯೊಬ್ಬರ ಆಗಮನ. ಗಸ್ತಿನ ಕರ್ತವ್ಯದಲ್ಲಿ ನಿದ್ರೆಯಲ್ಲಿದ್ದವನ್ನು ಕಂಡು ಅಧಿಕಾರಿಗಳು ಕೆಂಡಾಮಂಡಳ, ಬಾಯಿಯಿಂದಂತೂ ಬೈಗುಳಗಳ ಸುರಿಮಳೆ, ಮರುದಿನವೇ ಅಮಾನತ್ತಿನ ಆದೇಶ. ಸರಿ ಪರಿಸ್ಥಿತಿ ವಿವರಸಿದರೆ ಕೇಳಬಹುದೆಂಬ ಉದ್ದೇಶದಿಂದ ಸಾಹೇಬರನ್ನು ಭೇಟಿ ಮಾಡಲು ಆತ ಹೊರಟ.

ಕಛೇರಿಯಲ್ಲಿ ಇನ್ನೂ ಸಾಹೇಬರ ಆಗಮನವಾಗಿಲ್ಲ ಜ್ವರದಲ್ಲಿಯೇ ಸತತ ೩ ಗಂಟೆಗಳು ಕಾದ, ಬಂದ ನಂತರ ಭೇಟಿಗಾಗಿ ಪುನಃ ಒಂದು ಗಂಟೆ ಕಾದದ್ದಾಯಿತು. ಕೊನೆಗೂ ಭೇಟಿಗಾಗಿ ಒಳಹೊರಟ. ಪರಿಸ್ಥಿತಿ ಹೇಳುವ ಉದ್ದೇಶದಲ್ಲಿ ಅವನಿದ್ದರೆ, ಅದನ್ನು ಕೇಳುವ ಕನಿಷ್ಠ ಮಟ್ಟದ ಸೌಜನ್ಯ ಸಹಾ ಅಧಿಕಾರಿಗಳಿಗಿರಲಿಲ್ಲ, ಅವರು ಮಾಡಿದ ಕೆಲಸವೆಂದರೆ ಅವರ ನಾಲಿಗೆಯನ್ನು ಮತ್ತೊಮ್ಮೆ ಹರಿಬಿಟ್ಟದ್ದು. ವಾಚಾಮಗೋಚರ..!

ಇಂಥಹ ಸನ್ನಿವೇಶಗಳು ಜನಸಾಮಾನ್ಯರಿಗೆ ಹೊಸತಾದರೆ ಅಥವಾ ಇವರ ಬಗ್ಗೆ ಅನುಕಂಪ ಹುಟ್ಟಿಸುವುದಾದರೆ, ಇದೇ ಸಂಗತಿಗಳು ಇಲಾಖೆಯಲ್ಲಿ ತೀರಾ ಸರ್ವೇ ಸಾಮಾನ್ಯವಾದವುಗಳು. ಯಾವುದೇ ವ್ಯಕ್ತಿಯೊಬ್ಬ ಇಂಥಹುದೇ ಸನ್ನಿವೇಶಗಳಲ್ಲಿ, ಒತ್ತಡಗಳಲ್ಲಿ, ಸತತ ೨೦ ರಿಂದ ೩೦ ವರ್ಷ ದುಡಿದಿದ್ದಲ್ಲಿ ಅವನ ಸಹನೆ, ತಾಳ್ಮೆ, ಮಾನಸಿಕ ಸ್ಥಿತಿ ಯಾವ ಮಟ್ಟಕ್ಕೆ ಇಳಿಯುವುದೆಂಬುದು ನಿಮ್ಮ ಊಹೆಗೆ ಬಿಟ್ಟದ್ದು. ಈ ರೀತಿಯ ಒತ್ತಡಗಳಲ್ಲಿ, ಉಸಿರುಗಟ್ಟಿಸುವಂತಹ ಪರಿಸ್ಥಿತಿಯಲ್ಲಿ ಇರುವಂತಹ ವ್ಯಕ್ತಿಯಿಂದ ಸೌಜನ್ಯಯುತವಾದ ನಡವಳಿಕೆಯ ನಿರೀಕ್ಷೆ ಎಷ್ಟರ ಮಟ್ಟಿಗೆ ಸಮಂಜಸ?

ತೀವ್ರ ಮಾನಸಿಕ ಒತ್ತಡಗಳಿಂದ ಆತ್ಮಹತ್ಯೆಗೆ ಈಡಾಗಿರುವಂತಹ, ಕುಟುಂಬಗಳಲ್ಲಿ, ಸಂಬಂಧಗಳಲ್ಲಿ ಬಿರುಕು ಉಂಟಾಗಿರುವಂತಹ, ಮಾನಸಿಕ ಸ್ಥಿಮಿತವನ್ನೇ ಕಳೆದುಕೊಂಡಿರುವಂತಹ ಹತ್ತು ಹಲವು ನಿಧರ್ಷನಗಳು ಲಭ್ಯ. (ಪೊಲೀಸ್ ಕಾನ್ಸ್‌ಟೆಬಲ್ ಒಬ್ಬ ಬಂದೂಕಿನಿಂದ ತನ್ನ ಮೇಲಧಿಕಾರಿಯನ್ನೇ ಸುಟ್ಟು ನಂತರ ತಾನೂ ಸಹಾ ಗುಂಡು ಹಾರಿಸಿಕೊಂಡು ಮೃತಪಟ್ಟ ಘಟನೆ ಇಲ್ಲಿ ಪ್ರಸ್ತುತವೆನಿಸುತ್ತದೆ). ಹೆಚ್ಚುತ್ತಿರುವ ಅಧಿಕ ಕತವ್ಯದ ಒತ್ತಡ, ದೊರಕಲಾರದ ರಜೆಗಳು, ಮೇಲಧಿಕಾರಿಗಳ ವರ್ತನೆ, ಇವುಗಳಿಂದ ಉಂಟಾಗುತ್ತಿರುವ ಕೌಟುಂಬಿಕ ಸಮಸ್ಯೆಗಳು ಇತ್ಯಾದಿ ಅಂಶಗಳಿಂದ ತೀವ್ರ ಖಿನ್ನತೆಗೆ ಒಳಗಾಗಿರುವಂತಹ ಸಿಬ್ಬಂದಿಗಳ ಸಂಖ್ಯೆಗೂ ಕಡಿಮೆ ಇಲ್ಲ.

ಉನ್ನತ ಮಟ್ಟದ ಅಧಿಕಾರಿಗಳಿಂದ ಹಿಡಿದು ಕೆಳ ಹಂತದ ಸಿಬ್ಬಂದಿಗಳವರೆಗೂ ನಡವಳಿಕೆ, ವರ್ತನೆ, ಬಳಸುವ ಭಾಷೆ, ವ್ಯಕ್ತಿಗೌರವ ಇತ್ಯಾದಿ ಮಾನವೀಯ ಮೌಲ್ಯಗಳ ಅಂಶಗಳಲ್ಲಿ ಆಂತರಿವಾಗಿ ಶುದ್ದಿಯಾಗದ ಹೊರತು ಬಾಹ್ಯ ಶುದ್ದಿ ಎಂಬುದು ಮರೀಚಿಕೆಯಿದ್ದಂತೆ.

ಮಾಹಿತಿ ತಂತ್ರಜ್ಞಾನ, ತಂತ್ರಜ್ಞಾನದ ಬಳಕೆ ಇಂಥಹ ವಿಷಯಗಳಲ್ಲಿ ಆಶ್ಚರ್ಯಕರ ರೀತಿಯಲ್ಲಿ ಆದರ್ಶವಾಗಿ ಸುಧಾರಣೆಯಾಗುತ್ತಿರುವಂತಹ ಇಲಾಖೆಯಲ್ಲಿ ಆಂತರಿಕವಾಗಿ ಮಾನವೀಯ ಮೌಲ್ಯಗಳು ಕುಸಿಯುತ್ತಿರುವುದು ತೀವ್ರ ದುರದೃಷ್ಠಕರ ಸಂಗತಿ. ಈ ನಿಟ್ಟಿನಲ್ಲಿ ಸುಧಾರಣೆಯೆಂಬುದು ಅನಿವಾರ್ಯವಾಗಿದೆ. ಆಗ ಮಾತ್ರ ಸಾರ್ವಜನಿಕ ದೃಷ್ಟಿಯಲ್ಲಿ ಇಲಾಖೆಯಲ್ಲಿರುವ ಸಿಬ್ಬಂದಿಗಳ ದೃಷ್ಟಿಯಲ್ಲಿ ಇಲಾಖೆ ಬಗ್ಗೆ ಗೌರವ ಆಧರಗಳು ವೃದ್ದಿಯಾಗುವುದನ್ನು ನಿರೀಕ್ಷಿಸಬಹುದು.

4 ಟಿಪ್ಪಣಿಗಳು Post a comment
  1. Suraj B Hegde's avatar
    Suraj B Hegde
    ಮೇ 15 2012

    ಮನಕುಲುಕುವ ಬರಹ…

    ಖಂಡಿತ ಪ್ರತಿ ಇಲಾಖೆಯಲ್ಲೂ ಇಂಥ ಬೈಗುಳದ ಪರಿಸ್ಥಿತಿ ಇರುತ್ತದೆ, ಇರೋದೆ ಇಲ್ಲೆಂದಲ್ಲ, ಆದ್ರೆ [ಕೆಳಮಟ್ಟದ] ಪೋಲಿಸ್ ಹುದ್ದೆಯಲ್ಲಿರುವವರಿಗೆ ಈ ಕಿರಿ-ಕಿರಿ ತೋಂದರೆ ಹೆಚ್ಚು!

    ಸಮಾಜದಲ್ಲಿ ಪ್ರತಿಸಲ ಜನ ಸಾಮಾನ್ಯರ ಮುಂದೆ ಮೊದಲಿಗೆ ಸಿಗುವುದು ಇದೇ ಮೆಳಮಟ್ಟದ ಹುದ್ದೆಯ ಅಧಿಕಾರಿಗಳು… ಅವರ ಮೇಲಿನ ಇಂಥ ಸನ್ನಿವೇಶಗಳು ಪ್ರಕೂಲವಾಗಿ ಸಮಾಜದ ಜನಸ್ತೂಮದ ಮೇಲೆ ಪ್ರಹರಿಸುತ್ತದೆ…

    ನಯವಿನಯವಿದದ್ದರೆ ಪೋಲಿಸ್ ಎಂದು ಹೇಳುವುದಿಲ್ಲ ನಿಜ, ಆದರೆ ಮಾಸ್ತರರು ಶಾಲೆಯಲ್ಲಿ ಬಯ್ದು ಎರಡು ಪೆಟ್ಟು ಕೊಟ್ಟು [ಈಗ ಅದೂ ಕಾನೂನು ವಿರುದ್ಧ!] ದಾರಿಗೆ ತರುತ್ತಾರೆಂದು ಹೊರಗೆ ಇದನ್ನೇ ಮಾಡಲಾಗುತ್ತದೆಯೆ??? ಹಾಗೆಯೆ ಪೋಲಿಸರಲ್ಲು ಬಿಗಿತನ – ಕಟ್ಟುನಿಟ್ಟು – ಶಿಸ್ತುಪಾಲನೆ ಎಲ್ಲವೂ ಇಲಾಖೆಯ ಒಳಗೆ ಇದ್ದರೆ ಚೆನ್ನ… ಜನರ ಮೇಲೆ ಎಂದಿನವರೆಗೆ ಈ ಆಕ್ರೋಶ ಹರಿಹಾಯ್ದಾಟ ಕಡಿಮೆಯಾಗುವುದಿಲ್ಲವೋ ಅಲ್ಲಿಯತನಕ ಸ್ನೇಹಮಯಿ [ಸಾಧ್ಯವಾದಷ್ಟೂ] ವಾತಾವರಣ ಠಾಣೆ ಮತ್ತು ಜನರ ಮಧ್ಯೆ ಇರುವುದು ವಿರಳ…

    ಉತ್ತರ
  2. Prashasti's avatar
    ಮೇ 15 2012

    ಹೌದು ಸರ್.. ಮನಮುಟ್ಟುವಂತಹ ಬರಹ. ಪೋಲಿಸರು ನಮ್ಮನ್ನು ಸರಿಯಾಗಿ ಕಾಣುವುದಿಲ್ಲವೆಂದು ಮಾತ್ರ ಕಾಣುತ್ತೇವೆ. ಆದರೆ ಅವರು ಅವರ ಮೇಲಧಿಕಾರಿ ಅವರ ಮೇಲೆ ತೋರಿದ ಸಿಟ್ಟನ್ನು ಅವರಿಗೆ ಅವರ ಮೇಲಧಿಕಾರಿ ತೋರಿದ ಸಿಟ್ಟನ್ನು.. ಹೀಗೆ ಮುಗಿಯದ ಸಿಟ್ಟಿನ ಸರಣಿಯನ್ನು ಕೊನೆಯ ಬಲುಪಶುವಾಗಿ ನಾವು ಬಡಪಾಯಿ ಪೋಲೀಸಪ್ಪನಿಂದ ಪಡೆಯುತ್ತಿದ್ದೇವೆಂದು ಆಲೋಚಿಸುವುದಿಲ್ಲ.. ಮೇಲಧಿಕಾರಿ ಒಳ್ಳೆಯವರು ಸಿಕ್ಕಿದರೆ ಆ ಪೇದೆಗೆ ಅದೇ ಸ್ವರ್ಗ

    ಉತ್ತರ
  3. ಗಂಜಾಂ ಪರಮೇಶ್'s avatar
    ಗಂಜಾಂ ಪರಮೇಶ್
    ಮೇ 15 2012

    ಪೋಲಿಸರ ವರ್ತನೆ ನೋಡಿದಾಗ ಬೇಸರ ಮತ್ತು ಕೋಪ ಎರಡೂ ಒಟ್ಟೊಟ್ಟಿಗೆ ಬರುತ್ತದೆ.ಹಾಗೆಯೇ ರಾತ್ರಿ ಬೆಂಗಳೂರಿನ ಅಂಗಡಿಗಳ ಮುಂದೆ ಬಂದಾಗ ಅಸಹ್ಯವೂ ಆಗುತ್ತದೆ, ಇವೆಲ್ಲದರ ನಡುವೆಯೂ ಅವರ ನೋವುಗಳಿಗೂ ಸಹಾನುಭೂತಿ ಇರಲೇಬೇಕು.

    ಬರಹದ ಶೈಲಿ ಹಿಡಿಸಿತು.ಹೀಗೆ ಬರೆಯುತ್ತಿರಿ

    ಉತ್ತರ
  4. ಈಗಿನ ಸರಕಾರೀ ಇಲಾಖೆಗಳಲ್ಲಿ ಪಾಳೇಗಾರಿಕೆಯನ್ನು ಮುಂದುವರೆಸಿಕೊಂಡು ಬಂದಿರಿವದರಲ್ಲಿ ಪೋಲಿಸ್ ಇಲಾಖೆ ಪ್ರಮುಖ ಸ್ಥಾನದಲ್ಲಿದೆ ಎನ್ನಬಹುದು. ಸರ್ಕಲ್ ಇನಸ್ಪೆಕ್ಟರ್, ಡೀಸಿಪಿ, ಎಸಿಪಿ, ಎಸ್ಪಿ ಹೀಗೆ ಎಲ್ಲರೂ ತಮ್ಮ ಕೆಳಗಿನವರನ್ನು ಗುಲಾಮರೆಂದೇ ತಿಳಿದಿರುತ್ತಾರೆ. ಅದರಲ್ಲೂ ಎಲ್ಲರಿಂದಲೂ ತುಳಿತಕ್ಕೊಳಗಾದವರೆಂದರೆ ಪೋಲೀಸ್ ಪೇದೆಗಳು. ತಮ್ಮ ಮೇಲಧಿಕಾರಿಗಳ ಈ ದುರ್ವರ್ತನೆಯನ್ನು ಸಹಿಸದೇ ಇವರು ಅದನ್ನೆಲ್ಲಾ ಸಾರ್ವಜನಿಕರ ಮೇಲೆ ತೀರಿಸಿಗೊಳ್ಳುತ್ತಿರಬಹುದು ಎನಿಸುತ್ತದೆ.
    ಇತ್ತೀಚೆಗೆ ಕಮೀಶನರ್ ಮಿರ್ಜಿ ಸಾಹೇಬರು ಎಲ್ಲಾ ಪೋಲೀಸರಿಗೂ ತಮ್ಮ ಚೀತಾ/ಹೊಯ್ಸಳ ವಾಹನಗಳನ್ನು ಸರಿಯಾಗಿಟ್ಟುಕೊಂಡಿಲ್ಲಾ ಎಂದು ಮಾಧ್ಯಮದವರ ಮುಂದೆಯೇ ಎಗರಾಡುತ್ತ್ತಿದ್ದರು. ಇಂಥಹ ಅಧಿಕಾರಿಗಳಿಗೆ ಹೇಳಬಯಸುವದಿಷ್ಟೇ. ನಿಮ್ಮ ಕೈಕೆಳಗಿನ ನೌಕರರನ್ನು ಹೊಗಳುವಾಗ ಎಲ್ಲರ ಎದುರು ಹೊಗಳಿರಿ. ಅವರನ್ನು ಬಯ್ಯುವಾಗೆ/ಬುದ್ಧಿ ಹೇಳುವಾಗ ಅವರಿಗಷ್ಟೇ ತಿಳಿಯುವಂತೆ ಪ್ರತ್ಯೇಕವಾಗಿ ನಿಮ್ಮ ರೂಮಿನಲ್ಲಿ ಕರೆದು ಹೇಳಿರಿ.ಯಾರೇ ಆಗಿರಲೀ ಪ್ರತಿಯೊಬ್ಬನಿಗೂ ಆತ್ಮ ಸಮ್ಮಾನವೆಂಬುದಿರುತ್ತದೆ. ಅದಕ್ಕೆ ಚ್ಯುತಿ ಬಂದರೆ ಹೀಗಾಗುವದು ಸಹಜ.
    ಇನ್ನೊಂದು ವಿಷಯ. ನಮ್ಮ ಸರಕಾರೀ ಇಲಾಖೆಗಳಲ್ಲಿ ಕನ್ನಡವನ್ನು ಅತೀ ಹೆಚ್ಚಾಗಿ ಬಳಕೆ ಮಾಡುವದರಲ್ಲಿ ಪೋಲೀಸ್ ಇಲಾಖೆ ಪ್ರಮುಖ ಸ್ಥಾನ ಪಡೆದಿರುವಲ್ಲಿ ಈ ಪೊಲೀಸರ ಪಾತ್ರ ದೊಡ್ಡದಿದೆ.

    ಉತ್ತರ

Leave a reply to Suraj B Hegde ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments