ಅಂತರ್ಜಾತಿ ಮತ್ತು ಅಂತರ್ಧಮೀಯ ವಿವಾಹಗಳಿಂದ ಜಾತಿ ವಿನಾಶ ಸಾಧ್ಯವೆ?
-ಮು.ಅ ಶ್ರೀರಂಗ, ಬೆಂಗಳೂರು
ನಮ್ಮ ಸಮಾಜದಲ್ಲಿ ಜನಸಾಮಾನ್ಯರಿಂದ ಹಿಡಿದು ಪ್ರಬುದ್ಧರವರೆಗೆ, ಸಾಹಿತಿಗಳು,ಚಿಂತನಶೀಲರನ್ನು ಕಾಡುತ್ತಿರುವುದು ಜಾತಿಯ ಸಮಸ್ಯೆ. ಇದೊಂದು ಸಮಸ್ಯೆ ಇಲ್ಲದಿದ್ದರೆ ಚೆನ್ನಾಗಿರುತಿತ್ತು ಎಂದು ನಮಗೆ ಒಂದಲ್ಲ ಒಂದು ಸಲ ಅನಿಸುವುದು ಸಹಜ ತಾನೇ?ಅಂತರ್ಜಾತಿ ಮತ್ತು ಅಂತರ್ಧಮೀಯ ವಿವಾಹಗಳಿಂದ ಈ ಸಮಸ್ಯೆಯನ್ನು ಆದಷ್ಟೂ ನಿವಾರಿಸಬಹುದು ಎಂಬ ಮಾತುಗಳನ್ನು ಆಗಾಗ ಕೇಳುತ್ತಿರುತ್ತೇವೆ. ಇಂತಹ ವಿವಾಹಗಳಿಗಿರುವ ಕೆಲವು ಸಮಸ್ಯೆಗಳನ್ನು ಮೂರು ಮುಖ್ಯವಾದ ಆಯಾಮಗಳಿಂದ ಚರ್ಚಿಸುವುದು ಈ ಲೇಖನದ ಉದ್ದೇಶ.
(೧) ಜಾತಿ ಮತ್ತು ಧರ್ಮ:- ನಮ್ಮ ದೇಶದಲ್ಲಿರುವ ಜಾತಿಗಳು ಉಪಜಾತಿಗಳು ಅವುಗಳೊಳಗಿನ ಪಂಗಡಗಳು ಹಲವು. ಬಹು ಭಾಷಾ ಬಹು ಸಂಸ್ಕೃತಿಗಳ ನಮ್ಮ ದೇಶದಲ್ಲಿ ಇದು ಸಹಜ ಕೂಡ. ಪ್ರತಿಜಾತಿಗೂ ಹತ್ತಾರು ಉಪ ಜಾತಿಗಳು,ಪಂಗಡಗಳು. ಒಂದೇ ಜಾತಿಯವರಾದರೂ ಈ ಉಪ ಜಾತಿ ಪಂಗಡಗಳ ಕಾರಣದಿಂದ ಅವುಗಳ ನಡುವೆಯೇ ವಿವಾಹಕ್ಕೆ ಮೊದಲ ಪ್ರಾಶಸ್ತ್ಯ. ಬೇರೆ ಆಯ್ಕೆ ಇಲ್ಲವಾದರೆ ಮಾತ್ರ ಅದೇ ಜಾತಿಯ ಇತರ ಉಪಜಾತಿ, ಪಂಗಡಗಳ ನಡುವೆ ವಿವಾಹಕ್ಕೆ ಅರೆ ಮನಸ್ಸಿನಿಂದ ಒಪ್ಪಿಗೆ ನೀಡಬಹುದು. ಇಂತಹ ವಿದ್ಯಮಾನ ಇಂದು ಸರ್ಕಾರ ಮತ್ತು ಸಮಾಜ ಯಾವ ಜಾತಿಯವರನ್ನು ಮುಂದುವರಿದವರೆಂದು ಹೇಳುತ್ತಾ ಬಂದಿದೆಯೋ ಅವರಿಗಷ್ಟೇ ಸೀಮಿತವಾದುದಲ್ಲ. ಸಮಾಜದ ತೀರಾ ಕೆಳಸ್ತರದಲ್ಲಿರುವ ಜಾತಿಗಳ ತನಕ ಈ ತಾರತಮ್ಯ ಆಚರಣೆಯಲ್ಲಿದೆ. ಕೆಲವೊಂದು ಸಂದರ್ಭಗಳಲ್ಲಿ ಇವರುಗಳ ನಡುವೆ ಊಟ-ತಿಂಡಿಗಳ ಸೇವನೆ ಸಹ ನಿಷಿದ್ಧ ಎಂಬ ಪರಿಸ್ಥಿತಿ ಇದೆ. ಈ ರೀತಿ ಒಂದೇ ಜಾತಿಯೊಳಗೆ ವಿವಾಹಕ್ಕೆ ಇಷ್ಟೊಂದು ಸಮಸ್ಯೆಗಳಿರುವಾಗ ಒಂದೇ ಧರ್ಮದ ಬೇರೆ ಬೇರೆ ಜಾತಿಗಳ ನಡುವೆ ವಿವಾಹ ಆಗೊಮ್ಮೆ ಈಗೊಮ್ಮೆ ನಡೆಯುತ್ತಿರುತ್ತದೆ. ಇಲ್ಲ ಎನ್ನುವಂತಿಲ್ಲ. ಆದರೆ ಅದು ಒಂದು exಛಿeಠಿಣioಟಿ ಆಗಬಹುದಷ್ಟೆ. ಜತೆಗೆ ಇಂತಹ ವಿವಾಹಗಳ ಕಾರಣದಿಂದಲೇ ನಡೆಯುತ್ತಿರುವಂತಹ “ಮರ್ಯಾದ ಹತ್ಯೆಗಳು” ಈ ಸಮಸ್ಯೆಯನ್ನು ಇನ್ನಷ್ಟು ಜಟಿಲವಾಗಿಸಿದೆ.