“ಓಲೈಕೆ ಮತ್ತು ತುಷ್ಟೀಕರಣ” ಜಾತ್ಯಾತೀತತೆಯ ಸಂಕೇತಗಳೇ?
– ಮು ಅ ಶ್ರೀರಂಗ ಬೆಂಗಳೂರು
ಒಂದು ರಾಜಕೀಯ ಧೋರಣೆಗೆ ಕಂಕಣಬದ್ಧವಾದ “ಹೊಸತು”ಎಂಬ ಮಾಸಪತ್ರಿಕೆಯ ಜುಲೈ ೨೦೧೩ರ ಸಂಚಿಕೆಯಲ್ಲಿ “ಆಧುನಿಕೋತ್ತರವಾದವೂ ಸಿ. ಎಸ್. ಎಲ್. ಸಿ. ಚಿಂತನಾಕ್ರಮವೂ”ಎಂಬ ಲೇಖನವನ್ನು ಬೆಂಗಳೂರಿನ ಕೆ. ಪ್ರಕಾಶ್ ಎಂಬುವವರು ಬರೆದಿದ್ದಾರೆ. ೫ ಪುಟಗಳಷ್ಟು ವಿಸ್ತಾರವಾದ ಆ ಲೇಖನದ ೧೬ ಪ್ಯಾರಾಗಳಲ್ಲಿ ಸುಮಾರು ೧೫ ಜನ ಬುದ್ಧಿಜೀವಿಗಳ,ಚಿಂತಕರ,ಉದ್ದುದ್ದದ ವಾಕ್ಯಗಳನ್ನು(ಉದ್ಧರಣೆಗಳು)ಪ್ರಕಾಶ್ ಅವರು ತಮ್ಮ ಲೇಖನಕ್ಕೆ “ಬಲ”ಬರಲಿ ಎಂದು ಉಪಯೋಗಿಸಿಕೊಂಡಿದ್ದಾರೆ. ಆ ದೊಡ್ಡ ದೊಡ್ಡ ವಾಕ್ಯಗಳ ನಡುವೆ “ಫಿಲ್ಲರ್”ತರಹ ತಮ್ಮ ನಾಲ್ಕೈದು ಸಾಲುಗಳನ್ನು ಸೇರಿಸಿದ್ದಾರೆ. ಆ “ಫಿಲ್ಲರ್”ಗಳ ಮುಖ್ಯ ಉದ್ದೇಶ ಕುವೆಂಪು ವಿ. ವಿ.ಯಲ್ಲಿನ ಸಿ ಎಸ್ ಎಲ್ ಸಿ ಯನ್ನು ಖಂಡಿಸುವುದಷ್ಟೇ ಆಗಿದೆ.
“ಮಡೆ ಸ್ನಾನ”ದಿಂದ ಪ್ರಾರಂಭವಾಗುವ ಈ ಲೇಖನ ಕೊನೆಗೆ ಬಂದು ನಿಲ್ಲುವುದು “ವಚನಗಳು vs ಜಾತಿ ವ್ಯವಸ್ಥೆ”ಬಗ್ಗೆ “ಪ್ರಜಾವಾಣಿ”ಪತ್ರಿಕೆಯಲ್ಲಿ ಸುಮಾರು ಮೂರು ತಿಂಗಳಿನಷ್ಟು ಕಾಲ ನಡೆದ ವಾದ-ಪ್ರತಿವಾದದ “ಅನುಭವ ಮಂಟಪದಲ್ಲಿ”. ಪ್ರಕಾಶ್ ಅವರು ತುಂಬಾ ಆರಾಧಿಸುವ ಪ್ರೊ। ಐಜಾಜ್ ಅಹ್ಮದ್ ಅವರೇ “ಆಧುನಿಕೋತ್ತರವಾದವು ಹಲವು ವಿಭಿನ್ನ ಎಳೆಗಳಿಂದ ರಚಿತವಾಗಿದ್ದು ಅದನ್ನು ಒಂದು ಸುಸಂಬದ್ಧ ಚಿಂತನೆಯಾಗಿ ಮಂಡಿಸುವುದು ಕಷ್ಟ ಎಂದು ಎಚ್ಚರಿಸುತ್ತಲೇ ಅದರ ಪ್ರಮುಖ ಲಕ್ಷಣಗಳನ್ನು ಗುರುತಿಸುತ್ತಾರಂತೆ”(ಹೊಸತು ಜುಲೈ ೨೦೧೩ ಪುಟ ೩೦). ಸಿ ಎಸ್ ಎಲ್ ಸಿ ಯದೂ ಆ ಹಲವು ಹಾದಿಗಳಲ್ಲಿ ಒಂದು ಎಳೆ ಎಂದು ಪ್ರಕಾಶ್ ಅವರು ಒಪ್ಪಿಕೊಳ್ಳಲು ಸಿದ್ದರಿಲ್ಲ.