ಮೂರ್ತಿಗಳೇ,ಸೈನ್ಯ ಸಾಮ್ರಾಟ ಅಶೋಕನ ಬಳಿಯೂ ಇತ್ತು.ಆದರೆ,ಗೆದ್ದಿದ್ದು ಕಳಿಂಗ …!
– ರಾಕೇಶ್ ಶೆಟ್ಟಿ
ಭಾರತ ಬಿಡದಿರಲು ನಿರ್ಧರಿಸಿದ ಮೇಲೆ ನಮ್ಮ ಅನಂತ ಮೂರ್ತಿಯವರು, ಕಳೆದ ವಾರ ಸಿ.ಎಂ ಸಿದ್ದರಾಮಯ್ಯ ನವರಿಗೆ ಮೋದಿಯಂತೆ ಸೈಬರ್ ಸೈನ್ಯ ಕಟ್ಟಲು ಹೇಳಿ ಮತ್ತೊಮ್ಮೆ ಸುದ್ದಿಯಾದರು.
ಭಾರತದ ದೇಶ ಕಂಡ ಬೃಹತ್ ಸೈನ್ಯ ಸಾಮ್ರಾಟ ಅಶೋಕನ ಬಳಿಯೂ ಇತ್ತು ಮೂರ್ತಿಗಳೇ.ಆದರೆ ಅವನೆದುರು ಸೋತು ಗೆದ್ದಿದ್ದು ’ಕಳಿಂಗ’ …! ಸಾಮ್ರಾಟ ಅಶೋಕನ ಸೈನ್ಯದೆದುರಿಗೆ ಕಳಿಂಗ ಅನ್ನುವ ಪುಟ್ಟ ರಾಷ್ಟ್ರ ಏನೇಂದರೇ ಏನು ಆಗಿರಲಿಲ್ಲ.ಅವರಲ್ಲಿ ಅಶೋಕನ ಬಳಿಯಿದ್ದಷ್ಟು ಶಸ್ತ್ರ-ಅಸ್ತ್ರಗಳಿರಲಿಲ್ಲ,ಸೈನ್ಯವೂ ಇರಲಿಲ್ಲ.ಅವರಲ್ಲಿ ಇದ್ದಿದ್ದು ಸ್ವಾಭಿಮಾನ ಮತ್ತು ಧೈರ್ಯ. ಸಾಮ್ರಾಟ ಅಶೋಕನ ಸೈನ್ಯಕ್ಕೆ ಎದೆಯೊಡ್ಡಿ ಅವರು ಹೇಳಿದ್ದು “ನೀನು ಮಹಾನ್ ಸಾಮ್ರಾಟನಿರಬಹುದು,ನಿನ್ನ ಶಕ್ತಿ ಅಸಾಧಾರಣವಿರಬಹುದು.ಆದರೆ,ನಮಗೆ ಕನಿಷ್ಟ ಆತ್ಮಾಭಿಮಾನದಿಂದ ಸಾಯುವ ಅಧಿಕಾರವಾದರೂ ಇದೆ- ನೀನದನ್ನು ನಮ್ಮಿಂದ ಕಿತ್ತುಕೊಳ್ಳಲಾರೆ” ಅನ್ನುವುದೇ ಆಗಿತ್ತು.
ನೀವು ದುಡ್ಡು ಕೊಟ್ಟು,ಏನು ಮಾಡಬೇಕು ಅಂತ ಹೇಳಿಕೊಟ್ಟು ಕಟ್ಟಬಹುದಾದ ಸೈಬರ್ ಸೈನ್ಯ ಸಾಮ್ರಾಟ ಅಶೋಕನ ಸೈನ್ಯದಂತೆಯೇ ಅಗಾಧವಾಗಿರಬಹುದು.ಆದರೆ ಅದಕ್ಕೆದುರಾಗಿ ನಿಂತಿರುವುದು ಸ್ವಾಭಿಮಾನಿ ’ಕಳಿಂಗ’ದಂತಹ ಸೈನ್ಯ. ಈ ಸೈನಿಕರು ದುಡ್ಡಿಗಾಗಿ,ಅಧಿಕಾರಕ್ಕಾಗಿ,ಆಯ್ಕೆ ಸಮಿತಿಗಳ ಸ್ಥಾನಗಳಿಗಾಗಿ,ವಿವಿಗಳ ನಾಮಫಲಕಗಳಲ್ಲಷ್ಟೇ ರಾರಾಜಿಸುವ, ವಿವಿಗಳ ಕುರ್ಚಿ ಬಿಸಿ ಮಾಡುವ ಹುದ್ದೆಗಳಿಗಾಗಿಯೋ ಇಲ್ಲ ಪ್ರಶಸ್ತಿಗಳಿಗಾಗಿಯೋ ಕಾದು ಕುಳಿತಿರುವ ಅವಕಾಶವಾದಿಗಳಲ್ಲ.ಇವರೆಲ್ಲ ಕೇಂದ್ರ ಸರ್ಕಾರದ ಭ್ರಷ್ಟಚಾರದ ವಿರುದ್ಧ ಜೊತೆಯಾದವರು. ನಿಮ್ಮ ಸೆಕ್ಯುಲರ್ ಬ್ರಿಗೇಡ್ ಕಳೆದ ೧೧ ವರ್ಷಗಳಲ್ಲಿ ಮೋದಿ ಅನ್ನುವವನ ಮೇಲೆ ಏಕಪಕ್ಷೀಯವಾಗಿ ಕಟ್ಟುತ್ತ ಬಂದ ಸುಳ್ಳಿನ ಕೋಟೆಯನ್ನು ಕಂಡು ರೋಸಿ ಹೋಗಿ, ಆ ಸುಳ್ಳಿನ ಕೋಟೆಯ ಭೇಧಿಸಲು ತಾನಾಗೇ ಹುಟ್ಟಿಕೊಂಡ ಸೈನ್ಯ. ನಿಮ್ಮ ಸೆಕ್ಯುಲರ್ ಬ್ರಿಗೇಡಿನ ಸುಳ್ಳುಗಳಿಗೆ ಸಾಕ್ಷಿ ಬೇಕಾದರೇ, ನಿಮ್ಮದೇ ಹೇಳಿಕೆಯ ಸುತ್ತ ತಿರುಗೋಣ ಬನ್ನಿ ಮೂರ್ತಿಗಳೇ,