ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 17, 2013

1

ಎತ್ತಿನಹೊಳೆ ಯೋಜನೆ: ಬೇಕಿತ್ತಾ ಇದು?

‍ನಿಲುಮೆ ಮೂಲಕ
– ಅರಕಲಗೂಡು ಜಯಕುಮಾರ್ Ethinahole
ಸಿಎಂ ಸಿದ್ದರಾಮಯ್ಯ ರಾಜ್ಯ ಸರ್ಕಾರದ ಚೊಚ್ಚಲ ಬಜೆಟ್ ಮಂಡಿಸಿದರು, ಸಹಜವಾಗಿ ತಮ್ಮ ಬೆಂಬಲಿಗರ ಜಿಲ್ಲೆಗಳಿಗೆ ಮತ್ತು ಸ್ವಕ್ಷೇತ್ರಕ್ಕೆ ಹೆಚ್ಚಿನ ಅನುದಾನದ ಯೋಜನೆಗಳನ್ನು ಘೋಷಿಸಿ ಕೊಂಡರು ಬಜೆಟ್ “ರಾಜಕಾರಣ”ಕ್ಕೆ ತಾವೇನೂ ಹೊರತಲ್ಲ ಎಂಬುದನ್ನು ಸಾಬೀತು ಪಡಿಸಿದರು. ಇರಲಿ ಹಾಸನ ಜಿಲ್ಲೆಗೆ ಬಜೆಟ್ ನಲ್ಲಿ ಸಿಕ್ಕಿದ್ದು 3 ಯೋಜನೆಗಳು ಮಾತ್ರ, ಒಂದು ಬೆಂಗಳೂರಿನಿಂದ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಹಾಸನ ಕೇಂದ್ರದಲ್ಲಿ ಟ್ರಕ್ ಟರ್ಮಿನಲ್, ಎರಡನೆಯದ್ದು ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಅರಸೀಕೆರೆ-ತಿಪಟೂರು ಟೋಲ್ ರಸ್ತೆ, ಮೂರನೆಯದ್ದು ಎತ್ತಿನಹೊಳೆಯ ಯೋಜನೆಗೆ ಒಟ್ಟು ಯೋಜನಾ ವೆಚ್ಚದ ಶೇ.9ರ ಅನುದಾನ. ಈ ಹೊತ್ತಿನಲ್ಲಿ ಪ್ರಜ್ಞಾಪೂರ್ವಕವಾಗಿ fb update ಮೂಲಕ ಯೋಜನೆಯ ಕುರಿತು ಅಸಹನೆ ವ್ಯಕ್ತ ಪಡಿಸುವ ಮೂಲಕ ಗಮನ ಸೆಳೆದದ್ದು “ಜನ ನಾವೂ ಇದ್ದೇವೆ” ಸಂಘಟನೆಯ ಗೆಳೆಯ ಮಂಜುಬನವಾಸೆ. ಆದರೆ ಯೋಜನೆ ಕುರಿತು ಅಸಹನೆ ವ್ಯಕ್ತಪಡಿಸಬೇಕಿದ್ದ ಕೆಲವರು ಇದೇ ಸಂಧರ್ಭದಲ್ಲಿ ವ್ಯತಿರಿಕ್ತವಾಗಿ ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ್ದು ಜಿಲ್ಲೆಯ ಮಟ್ಟಿಗೆ ಮುಜುಗುರದ ಸಂಗತಿ. ಇದೇನಿದು ಎತ್ತಿನ ಹೊಳೆ ಯೋಜನೆ? ಯಾಕೆ ಇದನ್ನು ಬೆಂಬಲಿಸಬೇಕು ? ಯಾವ ಕಾರಣಕ್ಕೆ ವಿರೋಧಿಸ ಬೇಕು? ಮತ್ತು ಅಲ್ಲಿನ ವಾಸ್ತವಗಳೇನು ಎಂಬುದನ್ನು ? ಕೆದಕುವ ಪ್ರಯತ್ನ ಮಾಡಿದಾಗ  ಮಾಹಿತಿಗೆ ನೆರವಾಗಿದ್ದು ಜಾಗೃತ ಪ್ರಜ್ಞೆಯ ಕವಯಿತ್ರಿ ರೂಪಹಾಸನ.ಎತ್ತಿನ ಹೊಳೆ ಯೋಜನೆಯ ಕುರಿತು ನನ್ನ ಗ್ರಹಿಕೆಗೆ ದಕ್ಕಿದ ಸಂಗತಿಗಳನ್ನು ನಿಮ್ಮೆದುರು ಹರಹುತ್ತಿದ್ದೇನೆ. ಇದು ನಮ್ಮ ಜಿಲ್ಲೆಗೆ ಎಷ್ಟು ಪೂರಕ ಮತ್ತು ಮಾರಕ ಹಾಗೂ ಒಟ್ಟು ಯೋಜನೆಯ ಪರಿಣಾಮಗಳೇನು? ಎಂಬುದನ್ನಷ್ಟೇ ಇಲ್ಲಿ ಚರ್ಚೆಗೆ ತರುತ್ತಿದ್ದೇನೆ, ಮುಂದಿನ ನಿಲುವುಗಳು ನಿಮಗೆ ಸೇರಿದ್ದು.
        ಹಾಸನ ಜಿಲ್ಲೆಯ ಸಕಲೇಶಪುರದ ದೋಣಿಗಾಲ್ ಬಳಿಯ ಪಶ್ಚಿಮಘಟ್ಟದ ಸರಹದ್ದಿನಲ್ಲಿ ಹಾದು ಹೋಗಿರುವ ರೈಲ್ವೇ ಟ್ರಾಕ್ ಪಕ್ಕದಲ್ಲೇ  ಎತ್ತಿನಹೊಳೆ ಎಂಬ ನದಿಯ ನೀರು 80ಅಡಿ ಎತ್ತರದಿಂದ ಧುಮ್ಮಿಕ್ಕುವ ನಯನ ಮನೋಹರ ದೃಶ್ಯವನ್ನು ನೋಡಬಹುದು.ಹೀಗೆ ಪಶ್ಚಿಮಘಟ್ಟದಲ್ಲಿ ಹರಿಯುವ ನೀರು ಮಳೆಗಾಲದಲ್ಲಿ ಹರಿದು ಹೋಗಿ ಅರೇಬಿಯನ್ ಸಮುದ್ರವನ್ನು ಸೇರುತ್ತದೆ. ಸಮುದ್ರ ಸೇರಿ ಪೋಲಾಗುತ್ತಿದೆ ಎಂದು ಭಾವಿಸಲಾಗುತ್ತಿರುವ ಈ ನೀರನ್ನು ನದಿ ತಿರುವು ಯೋಜನೆಯ ಮೂಲಕ ಕುಡಿಯುವ ನೀರು ಯೋಜನೆಗೆ ಬಳಸಿಕೊಳ್ಳಲು ಕೇಂದ್ರ ಸರ್ಕಾರ ಯೋಜನೆಯನ್ನು ರೂಪಿಸಿದೆ. ಸುಮಾರು 9000ಕೋಟಿ ರೂಪಾಯಿಗಳ ಈ ಯೋಜನೆಯ ಮೂಲಕ ಬರದ ಜಿಲ್ಲೆಗಳಾದ ಕೋಲಾರ, ತುಮಕೂರು ಮತ್ತು ಬೆಂಗಳೂರು ಗ್ರಾಮಾಂತರ ಪ್ರದೇಶಗಳಿಗೆ ಕುಡಿಯುವ ನೀರು ಒದಗಿಸಲು ನಿರ್ಧರಿಸಲಾಗಿದೆ. ಪಕ್ಷ ಭೇಧ ಮರೆತು ರಾಜಕೀಯ ಹಿತಾಸಕ್ತಿಗಳು ಈ ಯೋಜನೆಯ ಜಾರಿಗೆ ಪಣ ತೊಟ್ಟಿವೆ. ಇದು ಕುಡಿಯುವ ನೀರಿನ ಯೋಜನೆಯಾಗಿರುವುದರಿಂದ ಪರಿಸರ ಕಾಯ್ದೆ 2006ರ ಅನ್ವಯ ಸಾರ್ವಜನಿಕ ಅಹವಾಲು ಹಾಗೂ ಪರಿಸರ ಪರಿಣಾಮದ ಅಧ್ಯಯನವನ್ನು ರಾಜ್ಯ ಸರ್ಕಾರ ಮಾಡಬೇಕಿಲ್ಲ! ಆದ್ದರಿಂದ ಕೇಂದ್ರ ಸರ್ಕಾರದ ಪರಿಸರ ಮಂತ್ರಾಲಯ ಇದಕ್ಕೆ ಅನುಮತಿ ನೀಡಿದೆ.
             ಇತ್ತೀಚೆಗಷ್ಟೆ ಪಶ್ಚಿಮ ಘಟ್ಟವನ್ನು ವಿಶ್ವ ಪರಂಪರೆಯ ಪಟ್ಟಿಗೆ ಸೇರಿಸಲಾಗಿದೆ. ಇದರ ಉದ್ದೇಶ ಇಲ್ಲಿರುವ ಅಪರೂಪದ ಪ್ರಾಕೃತಿಕ ಸಂಪತ್ತು ಹಾಗೂ ಪ್ರಾಣಿ ಸಂಕುಲವನ್ನು ರಕ್ಷಿಸುವುದಾಗಿದೆ. ಇಂತಹ ಕ್ರಿಯೆಗೆ ಮುನ್ನವೇ ಈ ಭಾಗದಲ್ಲಿ 22ಕ್ಕೂ ಹೆಚ್ಚು ಸಣ್ಣ ಮತ್ತು ದೊಡ್ಡದಾದ ವಿದ್ಯುತ್ ಉತ್ಪಾದನಾ ಘಟಕಗಳನ್ನು ತೆರೆಯಲು ರಾಜಕಾರಣಿಗಳ ಹಿತಾಸಕ್ತಿಗೆ ಅನುಗುಣವಾಗಿ  ಅನುಮತಿ ನೀಡಿದ್ದು ಯಾರಿಗೂ ತಿಳಿಯದ ಸಂಗತಿಯೇನಲ್ಲ, ಈ ನಡುವೆ ಎತ್ತಿನ ಹೊಳೆ ನದಿ ನೀರನ್ನು ತಿರುಗಿಸುವ ಯೋಜನೆಗೆ 2500ಎಕರೆ ಕ್ಷೇತ್ರ ಹಾಗೂ 1250ಎಕರೆ ಅರಣ್ಯ ಪ್ರದೇಶ ಮತ್ತು ಅಲ್ಲಿನ ಜೀವ ಸಂಕುಲ ಬಲಿಗಾಗಿ ಕಾದಿವೆ. ಈ ನಷ್ಟದ ಜೊತೆಗೆ 9000ಕೋಟಿಯಷ್ಟು ಬೃಹತ್ ಮೊತ್ತವನ್ನು ಕೇವಲ 24 ಟಿಎಂಸಿ ಕುಡಿಯುವ ನೀರಿಗಾಗಿ ವೆಚ್ಚ ಮಾಡಲಾಗುತ್ತಿದೆ. ಉದ್ದೇಶಿತ ಎತ್ತಿನಹೊಳೆ ಜಲಾನಯನ ಪ್ರದೇಶದ ವ್ಯಾಪ್ತಿ 176ಚದುರ ಕಿಲೋಮೀಟರ್, ಎತ್ತಿನಹೊಳೆ, ಕಾಡುಮನೆ ಹೊಳೆ, ಕೆರೆಹೊಳೆ ಹಾಗೂ ಹಂಗದಹಳ್ಳದ ಹರಿವು ನೇತ್ರಾವತಿ ನದಿಗೆ ನೀರು ಹರಿಯುವ ಉಪಮೂಲಗಳು. ಈ ವ್ಯಾಪ್ತಿಯ 8ಕಡೆಗಳಲ್ಲಿ ಚೆಕ್ ಡ್ಯಾಂ ಗಳನ್ನು ನಿರ್ಮಿಸಿ ಏತನೀರಾವರಿ ಮೂಲಕ ಹರವನಹಳ್ಳಿಗೆ ಹರಿಸಲಾಗುತ್ತದೆ. ಇದರ ಮೂಲಕ 233ಕಿಮಿ ದೂರದ ತುಮಕೂರಿನ ದೇವರಾಯನ ದುರ್ಗದ ಬಳಿ ನಿರ್ಮಿಸಲಾಗಿರುವ ಜಲಾಶಯಕ್ಕೆ ಪಂಪ್ ಮಾಡಲಾಗುತ್ತದೆ, ಈ ಚೆಕ್ ಡ್ಯಾಂ ಸಾಮರ್ಥ್ಯ ಕೇವಲ 10ಟಿಎಂಸಿ! ಆದರೆ ಒಟ್ಟಾರೆಯಾಗಿ ಯೋಜನೆಯಲ್ಲಿ 422ಟಿಎಂಸಿ ನೀರನ್ನು ಕಾಲುವೆ ಮೂಲಕ ತಿರುಗಿಸಿ, ದಾರಿಯಲ್ಲಿರುವ ಕೆರೆ, ಕುಂಟೆಗಳನ್ನು ತೂಮಬಿಸಿ, ಬರಪೀಡಿತ ಜಿಲ್ಲೆಗಳಾದ ತುಮಕೂರು ಹಾಗೂ ಕೋಲಾರಕ್ಕೆ ನೀರನ್ನು ತೆಗೆದುಕೊಂಡು ಹೋಗುವುದರಿಂದ ಒಟ್ಟು 8684ಹಳ್ಳಿಗಳಿಗೆ ಪೂರೈಸುವ ಅಂದಾಜು ಇದು. ರಾಜಕೀಯ ಹಿತಾಸಕ್ತಿಗಾಗಿ ರೂಪಿಸಿರುವ ಈ ಯೋಜನೆಯ ಕಡೆಯಿಂದ ಜನರ ಗಮನವನ್ನು ದಿಕ್ಕು ತಪ್ಪಿಸಲು ಈ ಮೊದಲಿದ್ದ “ನೇತ್ರಾವತಿ ನದಿ ತಿರುವು ಯೋಜನೆ” ಎಂಬ ಹೆಸರನ್ನು ಬದಲಿಸಿ ಅನಾಮತ್ತಾಗಿ ನೇತ್ರಾವತಿ ನದಿಯ ಉಪನದಿಯಾದ “ಎತ್ತಿನಹೊಳೆ ನದಿ ತಿರುವು ಯೋಜನೆ” ಎಂದು ಹೆಸರಿಸಲಾಗಿದೆ. ಆ ಮೂಲಕ ಪಶ್ಚಿಮಘಟ್ಟ ಸಾಲಿನ ಜನರನ್ನು ವಂಚಿಸಿದೆ ಮತ್ತು ಜೀವಸಂಕುಲಕ್ಕೆ ಸಂಚಕಾರ ತಂದಿದೆ.
           ಎತ್ತಿನಹೊಳೆ ನದಿ ತಿರುವು ಯೋಜನೆಯಿಂದ ದಕ್ಷಿಣ ಕನ್ನಡದ ನೇತ್ರಾವತಿ ಕಣಿವೆಯಲ್ಲಿನ 10ಲಕ್ಷ ಕೃಷಿಕರು, 3.5ಲಕ್ಷ ಎಕರೆ ಭೂಮಿಯನ್ನು ಉಳುಮೆ ಮಾಡಲು ನೀರಿನ ಅಭಾವವನ್ನು ಎದುರಿಸುವುದು ಖಚಿತವೇ. ಜೊತೆಗೆ ಮಂಗಳೂರಿನ ಜನತೆಗೆ ಕುಡಿಯುವ ನೀರನ್ನು ಪೂರೈಸುವುದು ನೇತ್ರಾವತಿ ಇದು ಬರಡಾದರೆ ಆ ಭಾಗದ ರೈತ ಸಮುದಾಯದ ಕಥೆ ನಮೋ ನಮಹ. ಇದರ ಜತೆಗೆ ಕರಾವಳಿಯ ಸಾವಿರಾರು ಮೀನುಗಾರರು ತಮ್ಮ ಕಸುಬನ್ನು ಬಿಡುವಂತಹ ಪರಿಸ್ಥಿತಿ ನಿರ್ಮಾಣವಾಗಬಹುದು, ಕರಾವಳಿ ಮೀನುಗಾರ ಕ್ರಿಯಾ ಸಮಿತಿಯ ಸದಸ್ಯರು ಹೇಳುವಂತೆ “ನದಿ ನೀರು ಮಳೆಗಾಲದಲ್ಲಿ ಸಮುದ್ರ ಸೇರುವಾಗ ಆಹಾರ ಹೊತ್ತು ತರುತ್ತದೆ, ಸಮುದ್ರದ ಮೇಲ್ಭಾಗದ ಬೆಚ್ಚಗಿನ ನೀರು ಮೀನುಗಳಿಗೆ ಮೊಟ್ಟೆ ಇಡಲು ಸೂಕ್ತವಾದುದು. ನೇತ್ರಾವತಿಯಲ್ಲಿ ಮಳೆಗಾಲದಲ್ಲಿ ನೀರು ಹರಿದು ಸಮುದ್ರ ತಲುಪದಿದ್ದರೆ ಮೀನು ಕ್ಷಾಮ ಉಂಟಾಗಿ ಮೀನುಗಾರರ ಜೀವನಕ್ಕೆ ಹಾನಿ ಆಗಲಿದೆ. ಪಶ್ಚಿಮದಿಂದ ಹರಿಯುವ ಚಕ್ರ ನದಿಯನ್ನು ಪೂರ್ವಕ್ಕೆ ಕಾಲುವೆ ಮೂಲಕ ತಿರುಗಿಸಿ ಲಿಂಗನಮಕ್ಕೆ ಜಲಾಶಯಕ್ಕೆ ನೀರುಣಿಸಿದ್ದರ ಪರಿಣಾಮವಾಗಿ ನದಿ ಬರಡಾಗಿದ್ದನ್ನು ಸಧ್ಯ ಉಡುಪಿ ಜಿಲ್ಲೆಯ ಜನ ಅನುಭವಿಸುತ್ತಿದ್ದಾರೆ. ಇದರಿಂದ ಪಾಠ ಕಲಿಯದೆ, ಕೇವಲ ತಾಂತ್ರಿಕ ಸಲಹೆ ಹಾಗೂ ಪೊಳ್ಳು ಭರವಸೆಯ ಮೇಲೆ ರಾಜಕಾರಣಿಗಳು ಎತ್ತಿನಹೊಳೆ ಯೋಜನೆಯನ್ನು ಬೆಂಬಲಿಸುತ್ತಿರುವುದು ಹಾಗೂ ಇವರೊಂದಿಗೆ ಸ್ಥಾಪಿತ ಹಿತಾಸಕ್ತಿಗಳು ಕೈ ಜೋಡಿಸಿರುವುದು ದುರಂತವೇ ಸರಿ.
        ಎತ್ತಿನ ಹೊಳೆ ಯೋಜನೆಯ ಹಿಂದೆ ಕಾಣದ ಕೈ ಕೆಲಸ ಮಾಡುತ್ತಿದ್ದು ಕುಡಿಯುವ ನೀರಿನ ಪೂರೈಕೆ ಎಂಬುದು ಕೇವಲ ತೋರಿಕೆಗೆ ಮಾತ್ರ ಆದರೆ ಇದರ ನಿಜವಾದ ಉದ್ದೇಶ ಜಾಗತೀಕರಣದಿಂದ ರಾಜ್ಯದಲ್ಲಿ ತಳವೂರುತ್ತಿರುವ ಉದ್ಯಮಕ್ಕೆ ಮತ್ತು ಕೈಗಾರಿಕೆಗೆ ನೇತ್ರಾವತಿ ನದಿಯ ನೀರನ್ನು ಕುಡಿಯುವ ನೀರಿನ ನೆಪದಲ್ಲಿ ಒದಗಿಸುವುದು ಮುಖ್ಯ ಅಜೆಂಡಾ! ಹಾಗೂ ವಾಣಿಜ್ಯ ಉದ್ದೇಶಕ್ಕಾಗಿ ಬೆಳೆಯುವ ಕೃಷಿಬೆಳೆಗಳಿಗೆ ನೀರು ಒದಗಿಸುವುದು ಮತ್ತೊಂದು ಉದ್ದೇಶ! ಕೋಲಾರ, ತುಮಕೂರು ಮತ್ತು ಚಿಕ್ಕಬಳ್ಳಾಪುರ ಹಿಂದಿನಿಂದಲೂ ಕಡಿಮೆ ಮಳೆ ಬರುವ ಪ್ರದೇಶಗಳು, ಅಲ್ಲಿನ ಕೃಷಿಯಲ್ಲಿ ರಾಗಿ, ನವಣೆ ಹಾಗೂ ಇತರೆ ಧವಸ ದಾನ್ಯಗಳನ್ನು ಬೆಳೆಯುವ ಒಣಬೇಸಾಯದ ಪರಿಪಾಠಕ್ಕೆ ಎಳ್ಳುನೀರು ಬಿಟ್ಟು ಹೆಚ್ಚು ನೀರು ಬೇಡುವ ದ್ರಾಕ್ಷಿ, ತೋಟಗಾರಿಕೆ ಬೆಳೆಗಳು ಮತ್ತು ಬತ್ತ ಬೆಳೆಯಲು ಸರ್ಕಾರ ಪ್ರೇರಣೆ ನೀಡಿರುವುದರಿಂದ ಆ ಭಾಗದಲ್ಲಿ ನೀರಿನ ಬೇಡಿಕೆ ಹೆಚ್ಚಾಗಿದೆ. ಅಷ್ಟೇ ಅಲ್ಲ ದಕ್ಷಿಣ ಕನ್ನಡ ಜಿಲ್ಲೆಯವರೇ ಆದ ವೀರಪ್ಪ ಮೊಯ್ಲಿ ಸಧ್ಯ ಚಿಕ್ಕಬಳ್ಳಾಪುರದಲ್ಲಿ ಸಂಸದರಾಗಿರುವುದರಿಂದ ನೇತ್ರಾವತಿ ನದಿಯ ನೀರನ್ನು ಅಲ್ಲಿಗೆ ಹರಿಸಲು ಉತ್ಸುಕರಾಗಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸಹಜವಾಗಿ ಮತಬ್ಯಾಂಕ್ ಮೇಲೆ ಕಣ್ಣಿಟ್ಟಿರುವುದರಿಂದ ಕಳೆದ ಬಾರಿಯೇ ಯೋಜನೆಗೆ ತರಾತುರಿಯ ಪಡೆಯಲಾಗಿದೆ, ಅಂದರೆ ಯೋಜನೆಯನ್ನು ಸಲ್ಲಿಸಿದ ಕೇವಲ 22ದಿನಗಳಲ್ಲಿ ಇದಕ್ಕೆ ಅನುಮೋದನೆ ದೊರಕಿಸಲಾಗಿದೆ, ಮುಖ್ಯಮಂತ್ರಿ ಆಗುವ ಮುನ್ನ ಈ ಯೋಜನೆಯನ್ನು ವಿರೋಧಿಸಿದ್ದ ಸದಾನಂದಗೌಡ, ಮುಖ್ಯ ಮಂತ್ರಿಯಾಗುತ್ತಿದ್ದಂತೆ ಯೋಜನೆಗೆ ಅಸ್ತು ಎಂದದ್ದು ದುರಂತದ ಮುನ್ನುಡಿ! ಇದಕ್ಕೆ ಲೋಕಸಭಾ ಚುನಾವಣೆಯ ಸಲುವಾಗಿ ರಾಜ್ಯ ಸರ್ಕಾರ 9000ಕೋಟಿ ವೆಚ್ಚದ ಯೋಜನೆಗೆ ಕೇವಲ 1000ಕೋಟಿಯನ್ನು ಬಜೆಟ್ ನಲ್ಲಿ ಘೋಷಿಸಿದೆ. ಅಷ್ಟೇ ಅಲ್ಲ ಈ ಕುರಿತು ಸ್ಥಳೀಯವಾಗಿ ಎದ್ದಿರುವ ಕೂಗಿಗೆ ಮಾನ್ಯತೆ ಕೊಡದ ಸರ್ಕಾರ ಎತ್ತಿನ ಹೊಳೆಯ ಯೋಜನೆಯನ್ನು ಜಾರಿಗೆ ತರಲು ಹೊರಟಿರುವುದು ಪ್ರಜಾಪ್ರಭುತ್ವ ವಿರೋಧಿ ಕ್ರಮ. ಇದಕ್ಕೆ 2006ರ ಪರಿಸರ ಕಾಯ್ದೆಯನ್ನು ಮುಂದಿಟ್ಟುಕೊಂಡು ಹೋರಾಟವನ್ನು ಹತ್ತಿಕ್ಕುವ ಸರ್ಕಾರದ ಪ್ರಯತ್ನ ಅಕ್ಷಮ್ಯ. ಪ್ರಜಾತಂತ್ರ ವಿರೋಧಿ ನಿಲುವನ್ನು ಯಾವತ್ತಿಗೂ ಒಪ್ಪಲು ಸಾಧ್ಯವಿಲ್ಲ, ಅಷ್ಟೇ ಅಲ್ಲ ವಿಶ್ವ ಪರಂಪರೆಯ ಪಟ್ಟಿಗೆ ಸೇರಿರುವ ಈ ಪ್ರದೇಶದಲ್ಲಿ ಇಂತಹ ಯೋಜನೆಯನ್ನು ಜಾರಿಗೆ ತರುವುದು ಸಹಾ ಅಪರಾಧವೇ ಸರಿ. ಈಗ ಹೇಳಿ ನಿಮ್ಮ ನಿಲುವು ಯಾವ ಕಡೆಗೆ ?
1 ಟಿಪ್ಪಣಿ Post a comment
  1. DS Panditharadhya Dsp Aradhya's avatar
    ಆಕ್ಟೋ 17 2013

    No, Never

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments