ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 25, 2014

1

ನಿನ್ನೆಗೆ ನನ್ನ ಮಾತು – ಭಾಗ ೫

‍ನಿಲುಮೆ ಮೂಲಕ

– ಮು ಅ ಶ್ರೀರಂಗ ಬೆಂಗಳೂರು

ನಿನ್ನೆಗೆ ನನ್ನ ಮಾತು – ಭಾಗ ೧ನೆನಪುಗಳು
ನಿನ್ನೆಗೆ ನನ್ನ ಮಾತು – ಭಾಗ ೨
ನಿನ್ನೆಗೆ ನನ್ನ ಮಾತು – ಭಾಗ ೩
ನಿನ್ನೆಗೆ ನನ್ನ ಮಾತು – ಭಾಗ ೪

ನಿಲುಮೆಯಲ್ಲಿ ಇದು ನಾನು ಬರೆಯುತ್ತಿರುವ ಇಪ್ಪತ್ತೈದನೇ ಲೇಖನ. ಆಗಸ್ಟ್ ೨೦೧೩ರ ಕೊನೆಯ ವಾರದಲ್ಲಿ ನಾನು ಮೊದಲನೇ ಲೇಖನ ಈ ಬ್ಲಾಗಿನಲ್ಲಿ ಬರೆದಿದ್ದು. ಇಲ್ಲಿಯ ತನಕದ ನನ್ನ ಲೇಖನಗಳನ್ನು ಪ್ರಕಟಿಸಿದ “ನಿಲುಮೆ”ಯ ಮುಖ್ಯಸ್ಥರಿಗೆ, ಸಂಪಾದಕವರ್ಗದವರಿಗೆ ನಾನು ಆಭಾರಿಯಾಗಿದ್ದೇನೆ. ಜತೆಗೆ ನನ್ನ ಬರಹಗಳನ್ನು ಓದಿದ,ಪ್ರತಿಕ್ರ್ರಿಯಿಸಿದ ಮತ್ತು ಚರ್ಚೆಯಲ್ಲಿ ಪಾಲ್ಗೊಂಡ ಎಲ್ಲಾ ಓದುಗರಿಗೆ ವಂದನೆಗಳು. ಓದುಗರೊಡನೆ ಚರ್ಚೆಯಲ್ಲಿ ಪಾಲ್ಗೊಳ್ಳುವ ಮೂಲಕ ಮತ್ತು ನನ್ನ ಬರಹಗಳಿಗೆ ಬಂದ ಪ್ರತಿಕ್ರಿಯೆಗಳಿಂದ   ನಾನು ಆಯಾ ಲೇಖನಗಳನ್ನು ಬರೆಯುವಾಗ ಹೊಳೆಯದೇ ಇದ್ದ ಇನ್ನೊಂದು ಮುಖದ ದರ್ಶನವಾಗಿದೆ. ಎಲ್ಲವನ್ನೂ ಪ್ರತಿಕ್ರಿಯೆಗಳ ಮೂಲಕವೇ  ಹೇಳಲು ಸಾಧ್ಯವಾಗದೇ ಇದ್ದಾಗ ಆ ವಿಷಯ ಕುರಿತಂತೆ ಹೊಸ ಲೇಖನವನ್ನೇ ಬರೆಯುವಂತೆ  ಆ  ಚರ್ಚೆಗಳು ನನಗೆ ಪ್ರೇರಣೆ ಒದಗಿಸಿವೆ.  ಹೀಗಾಗಿ ಆ ಚರ್ಚೆಗಳು ನನ್ನ ಬರವಣಿಗೆ ಹಾಗೂ ಬೆಳವಣಿಗೆಗೆ ಪೋಷಕವಾಗಿವೆ.  ನನ್ನ  ಲೇಖನಗಳ ಬಗ್ಗೆ ಅಥವಾ ಇತರರ ಲೇಖನಗಳ ಬಗ್ಗೆ ನಾನು ಚರ್ಚೆಯಲ್ಲಿ ಪಾಲ್ಗೊಂಡಾಗ ಆಯಾ ಲೇಖನಗಳ  ವ್ಯಾಪ್ತಿಯನ್ನು ಮೀರಿ ಮಾತಾಡಿಲ್ಲ ಎಂದು ಭಾವಿಸಿದ್ದೇನೆ. ಒಂದೆರೆಡು ಸಂದರ್ಭಗಳಲ್ಲಿ ನಾನು ಆ ರೀತಿ ಪ್ರತಿಕ್ರಿಯಿಸಬಾರದಿತ್ತು ಎಂದು ಅನಿಸಿದ ಕೂಡಲೇ ‘ನಿಲುಮೆ’ಯಲ್ಲೇ ವಿಷಾದ ಸೂಚಿಸಿದ್ದೇನೆ. ಜತೆಗೆ ‘ತಾಂತ್ರಿಕವಾಗಿ’ ಸಾಧ್ಯವಾದಾಗ ಸಂಬಂಧಪಟ್ಟವರಿಗೆ ನೇರವಾಗಿ ನನ್ನ ವಿಷಾದ ಸೂಚಿಸಿದ್ದೇನೆ.

ಯಾವುದೇ ವಾದ,ಇಸಂ ಮತ್ತು ತತ್ವಗಳಿಗೆ ಬದ್ಧವಾಗದೆ ಎಲ್ಲ ರೀತಿಯ ಬರವಣಿಗೆಗೆ  ಮುಕ್ತ ಅವಕಾಶವಿರುವ ‘ನಿಲುಮೆ’ಯಿಂದ ಸಾಹಿತ್ಯ-ಸಂಸ್ಕೃತಿ-ರಾಜಕೀಯ ಇವುಗಳ ಬಗ್ಗೆ ಹವ್ಯಾಸಿ ಮಟ್ಟದಲ್ಲಿ ಆಸಕ್ತಿ ಮತ್ತು ಕುತೂಹಲವಿರುವ ನನಗೆ ಅಪಾರವಾದ ಸಹಾಯವಾಗಿದೆ. ನನ್ನಂತಹ ಹವ್ಯಾಸಿಗಳ ಬರವಣಿಗೆಗಳಿಗೆ  ರಾಜ್ಯವ್ಯಾಪಿ ಪ್ರಸಾರದ ಪತ್ರಿಕೆಗಳಲ್ಲಿ ಮತ್ತು ಸಾಹಿತ್ಯಿಕ ಪತ್ರಿಕೆಗಳಲ್ಲಿ ಅವಕಾಶ ಸಿಗುವುದು ಕಷ್ಟ. ಅದಕ್ಕೆ ಕಾರಣಗಳು ಹತ್ತು ಹಲವು. ಇವೆಲ್ಲಾ ಓದುಗರಿಗೆ ತಿಳಿದಿರುವ ವಿಷಯವೇ ಆಗಿದೆ. ಅದೇ ರೀತಿ ಪತ್ರಿಕೆಗಳ ಮತ್ತು ಸಾಹಿತ್ಯಿಕ ಪತ್ರಿಕೆಗಳ ವಾಚಕರ ಪತ್ರಗಳು ಹಾಗು ಪ್ರತಿಕ್ರಿಯೆಗಳ ಕಾಲಂ ಸಹ ಹವ್ಯಾಸಿ ಬರಹಗಾರರಿಗೆ ಅರ್ಧ ತೆರೆದ ಬಾಗಿಲು. ನಾನು ಪ್ರತಿ ದಿನ ‘ನಿಲುಮೆ’ಯೂ ಸೇರಿದಂತೆ ಕನ್ನಡದ ಇತರ ನಾಲ್ಕೈದು ಬ್ಲಾಗುಗಳನ್ನು ನೋಡುತ್ತಿರುತ್ತೇನೆ.  ಆ ಎಲ್ಲಾ ಬ್ಲಾಗುಗಳೂ ಓದುಗರ ಪ್ರತಿಕ್ರಿಯೆಗಳಿಗೆ ‘ಮುಕ್ತ’ ಅವಕಾಶ ಕಲ್ಪಿಸಿಲ್ಲ. ‘ನಿಲುಮೆ’ ಸೇರಿದಂತೆ ಇನ್ನೊಂದೆರೆಡು ಬ್ಲಾಗುಗಳಲ್ಲಿ ನಾವುಗಳು ಬರೆದ ಪ್ರತಿಕ್ರಿಯೆ ಕೂಡಲೇ ಪ್ರಕಟವಾಗುತ್ತವೆ. ಮಿಕ್ಕವುಗಳಲ್ಲಿ ‘your comment is awaiting moderation’ /’your comment visible after approval’ ಎಂಬ ಸಂದೇಶ ಬರುತ್ತದೆ. ಆ ಬ್ಲಾಗಿನ moderatorಗಳ ಧ್ಯೇಯ, ಧೋರಣೆ ಹಾಗು ಬದ್ಧತೆಗಳನ್ನು ಅನುಸರಿಸಿ ನಮ್ಮ ಪ್ರತಿಕ್ರಿಯೆಗಳು ಬೆಳಕು ಕಾಣಬಹುದು ; ಕಾಣದೆಯೂ ಇರಬಹುದು. ಮೋಜಿನ ಸಂಗತಿ ಎಂದರೆ  ಅಂತಹ  ಬ್ಲಾಗುಗಳೇ  ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮೂರು ಹೊತ್ತೂ ಹರಿಕಥೆ ಮಾಡುತ್ತಿರುತ್ತವೆ. ತಮ್ಮನ್ನು ಬಿಟ್ಟು ಇತರರೆಲ್ಲರೂ ಫ್ಯಾಸಿಸ್ಟ್ ಮನೋಭಾವದವರೆಂದು ಅವಕಾಶ ಸಿಕ್ಕಾಗೆಲ್ಲಾ ದೂರುತ್ತಿರುತ್ತಾರೆ. “ಮೇರಾ ಕರ್ನಾಟಕ್  ಮಹಾನ್ ಹೈ !!!”

ಇದು ನನ್ನ ನೆನಪುಗಳ ಸರಣಿ ಲೇಖನದ (ನಿನ್ನೆಗೆ ನನ್ನ ಮಾತು) ಕೊನೆಯ ಭಾಗ. ಇವುಗಳನ್ನು ಬರೆಯಲು ಈ ಹಿಂದೆ ಪ್ರಸ್ತಾಪಿಸಿರುವ  ಮಾಗಡಿಯ  ಆ ನನ್ನ ಹಿರಿಯ ಸ್ನೇಹಿತರ ಜತೆ ನಡೆಯುತ್ತಿದ್ದ ನನ್ನ ಪತ್ರ ವ್ಯವಹಾರ,ಮಾತುಗಳ ಪ್ರೇರಣೆಯಿದೆ. ನಾನು ಮಾಗಡಿಯಲ್ಲಿ ಹತ್ತು ವರ್ಷಗಳಿದ್ದು ನಂತರ ವೃತ್ತಿಯ ಕಾರಣದಿಂದ ಊರಿಂದ ಊರಿಗೆ ವರ್ಗವಾಗಿ ಹೋಗುತ್ತಿದ್ದರೂ ಸಹ ಪತ್ರಗಳು ಮತ್ತು ಫೋನಿನ ಮೂಲಕ ಅವರ ಸಂಪರ್ಕದಲ್ಲಿ ಇರುತ್ತಿದ್ದೆ. ಆರೇಳು ವರ್ಷಗಳ ಕಾಲ ಆಗಾಗ ನಾನು ಬರೆದ ಲೇಖನ, ಸಣ್ಣ ಪುಟ್ಟ ವಿಮರ್ಶೆಗಳನ್ನೆಲ್ಲಾ ಅವರಿಗೆ ಕಳಿಸುತ್ತಿದ್ದೆ. ಅವರಿಗೆ ಬಿಡುವಾದಾಗ ಫೋನಿನಲ್ಲಿ ಮಾತಾಡುತ್ತಿದ್ದರು. ನನ್ನ ಸದ್ಯದ ಓದು ಬರಹದ ಬಗ್ಗೆ ವಿಚಾರಿಸುತ್ತಿದ್ದರು. ನನಗೆ ಈ ಹೊತ್ತಿಗೂ ಅನಿಸುವಂತೆ ಅವರಿಗೆ ವಿಮರ್ಶೆಯ ಕಡೆ ಅಷ್ಟು ಒಲವಿಲ್ಲ. ಕಥೆ,ಕವನ,ವ್ಯಕ್ತಿ ಚಿತ್ರ ಮುಂತಾದವುಗಳ ಬಗ್ಗೆ  ಮೊದಲ ಆದ್ಯತೆ. ಅವರ ಒಂದು ಕವನ ಸಂಕಲನವೂ ಪ್ರಕಟವಾಗಿದೆ. ನಿಯತಕಾಲಿಕಗಳಲ್ಲಿ ನಾಲ್ಕಾರು ಕಥೆಗಳು ಪ್ರಕಟವಾಗಿದೆ. ಜತೆಗೆ ಬೆಂಗಳೂರಿನ ಒಂದು ಪ್ರಸಿದ್ಧ ಪ್ರಕಾಶನದವರು ಸಂಪಾದಿಸಿ ಪ್ರಕಟಿಸಿರುವ ಕವನ ಸಂಕಲನದ ಇಬ್ಬರು ಸಂಪಾದಕರಲ್ಲಿ ಈ ನನ್ನ ಸ್ನೇಹಿತರೂ ಒಬ್ಬರು. ಕನ್ನಡದ ಇಬ್ಬರು ಪ್ರಸಿದ್ಧ ಕಾದಂಬರಿಕಾರರ ಎರಡು ಕಾದಂಬರಿಗಳ ಬಗ್ಗೆ ನನಗೂ ಅವರಿಗೂ ಭಿನ್ನಾಭಿಪ್ರಾಯ ಬಂದಿತ್ತು. ಅದು ಸಹಜ. ನನ್ನ ಅಭಿಪ್ರಾಯ ಅವರದ್ದೂ ಆಗಿರಬೇಕೆಂದು ಆಗಲೂ ನಾನು ಭಾವಿಸಿರಲಿಲ್ಲ; ಈಗಲೂ ಹೇಳುವುದಿಲ್ಲ.  ಅವರು ತಮಗೆ  ಇಷ್ಟವಾಗದ ಕಾದಂಬರಿಯ ಬಗ್ಗೆ ಮಾತಾಡುತ್ತಾ ” ಈ ಕಾದಂಬರಿಗಿಂತ ಇದನ್ನು ಅವರು ರಚಿಸಿರುವ ಬಗ್ಗೆ ಬರೆದಿರುವ ಲೇಖನವೇ  ಚೆನ್ನಾಗಿದೆ” ಎಂದರು.

ಆ ಕಾದಂಬರಿ ಅವರಿಗೆ ಇಷ್ಟವಾಗದೇ ಇದ್ದರೂ ಸಹ ಅವರು ಕೊಟ್ಟ ಆ ಹೋಲಿಕೆ ವಿಮರ್ಶೆ ಎನಿಸಿಕೊಳ್ಳುವುದಿಲ್ಲ. ಸುಮಾರು ಮೂವತ್ತೈದು  ಪುಟಗಳಷ್ಟಿರುವ ಆ ಲೇಖನವನ್ನು  ಆರುನೂರು ಪುಟಗಳ  ಕಾದಂಬರಿಯೊಂದನ್ನು ವಿಮರ್ಶಿಸಲು ಆಧಾರವಾಗಿಟ್ಟುಕ್ಕೊಳ್ಳುವುದು ಹಾಸ್ಯಾಸ್ಪದ ಮತ್ತು ಪೂರ್ವಗ್ರಹವಾಗುತ್ತದೆ. ಅಲ್ಲದೆ ಆ ಕಾದಂಬರಿಯ ಮುನ್ನುಡಿಯಲ್ಲಿ ಆ ಲೇಖನದ ಆಯ್ದ ಅಂಶಗಳನ್ನು ಕೇವಲ ನಾಲ್ಕು ಪುಟಗಳಲ್ಲಿ ಮಾತ್ರ ಕೊಡಲಾಗಿದೆ. ಪೂರ್ಣ ಪ್ರಮಾಣದ ಆ ಲೇಖನ ಅದೇ ಕಾದಂಬರಿಕಾರರ ಲೇಖನ ಸಂಗ್ರಹದಲ್ಲಿದೆ. ಆ ಲೇಖನವನ್ನು ನನ್ನ ಆ ಸ್ನೇಹಿತರು  ಓದಿದ್ದಾರೋ ಇಲ್ಲವೋ ಮುಖ್ಯವಲ್ಲ. ಗಮನಿಸಬೇಕಾದ  ಅಂಶವೆಂದರೆ ಅವರು ವಿಮರ್ಶೆಗೆ ಬಳಸಿದ ‘ಅಳತೆಗೋಲು’. ಒಂದು ಶಿಲ್ಪವನ್ನು ನೋಡಿದ ಮೇಲೆ ಅದರ ಬಗ್ಗೆ ಮಾತಾಡದೆ, ಅದನ್ನು ಕೆತ್ತಲು ಉಪಯೋಗಿಸಿದ ಮರ/ಕಲ್ಲು , ಉಳಿ, ಸುತ್ತಿಗೆ ಇತ್ಯಾದಿಗಳ ಬಗ್ಗೆ ಮಾತಾಡುವುದು ಆಭಾಸವಾಗುತ್ತದೆ. ಅದೇ ರೀತಿ ಅವರ ಮಾತೂ ಆಭಾಸ ಅಷ್ಟೇ.  ಅವರು ಮೆಚ್ಚಿದ್ದ ಒಂದು ಕಾದಂಬರಿಯ ಬಗ್ಗೆ ನಾನು ಒಮ್ಮೆ ಮಾತಾಡುತ್ತ ( ಆ ಕಾದಂಬರಿಕಾರರೂ ಪ್ರಸಿದ್ಧರೆ. ಅವರ ಇತರ ಕಥೆ ,ಕಾದಂಬರಿಗಳನ್ನು ನಾನು ಓದಿದ್ದೇನೆ. ಅವುಗಳ ಬಗ್ಗೆ ನನ್ನ ಭಿನ್ನಾಭಿಪ್ರಾಯವೇನಿಲ್ಲ . ನನ್ನ ತಕರಾರು ಇದ್ದದ್ದು ಅವರಿಗೆ ಇಷ್ಟವಾಗಿದ್ದ  ಆ  ಒಂದು ಕಾದಂಬರಿಯ ಬಗ್ಗೆ)  ಅದು ಒಂದು ಸಾಮಾನ್ಯ ಪತ್ತೇದಾರಿ ಕಾದಂಬರಿಗಿಂತ ಮೇಲ್ಮಟ್ಟದ್ದು ಅಷ್ಟೇ ಎಂದೆ. ಆಗ ಮತ್ತು ಈಗಲೂ ಸಹ ಆ ಕಾದಂಬರಿಕಾರರ ಬಗ್ಗೆ ಇರುವ “ಹವಾ”ದಿಂದ ಅವರನ್ನು ಆರಾಧಿಸುವ,ಮೆಚ್ಚುವ ಓದುಗರು ಹೇಳುವ ರೀತಿಯಲ್ಲಿ ಅದು ಉತ್ತಮ ಕಾದಂಬರಿ. ಆದರೆ ನನ್ನ ಅಭಿಪ್ರಾಯ ಈಗಲೂ ಬದಲಾಗಿಲ್ಲ. ಇರಲಿ. ನನ್ನ ಮಾತು ಕೇಳಿದ ಆ ಸ್ನೇಹಿತರು “ನೀವು ಆ ಕಾದಂಬರಿಯನ್ನು ಓದಿದ ರೀತಿ ಸರಿಯಿಲ್ಲ; ಸ್ವಲ್ಪ ಬೇರೆ ರೀತಿ ಓದಬೇಕು” ಎಂದರು. ಆ ಕಾದಂಬರಿಯು ಸರಳ ಕನ್ನಡದಲ್ಲೇ ಇತ್ತು ;

ನವ್ಯ ಕವನ,ಕಥೆಗಳಲ್ಲಿ ಇರುವ  ಪ್ರತಿಮೆ,ಪ್ರತೀಕ,ರೂಪಕಗಳು  ಅದರಲ್ಲಿ  ಇರಲಿಲ್ಲ  ಮತ್ತು ಗೋಪಾಲಕೃಷ್ಣ ಅಡಿಗರು ಒಮ್ಮೆ ಸಾಹಿತ್ಯದಲ್ಲಿ ಭಾಷೆಯ ಉಪಯೋಗದ ಬಗ್ಗೆ ಹೇಳಿದ  ‘ಅನುಭವದ ಅನಂತಕೋಶಗಳನ್ನು ಶೋಧಿಸುವ ‘ ರೀತಿಯ ಬರವಣಿಗೆಯೂ ಅದಲ್ಲ.ಈ ಎರಡೂ ಪ್ರಸಂಗಗಳೂ ಅಂದು ಅಷ್ಟಕ್ಕೇ ನಿಂತಿತು.  ನಂತರದಲ್ಲಿ ಆ ಬಗ್ಗೆ ಅವರ ಜತೆ  ನಾನು ವಾದಕ್ಕೆ ಇಳಿಯಲಿಲ್ಲ. ಆ ಕಾಲದಲ್ಲಿ ಒಬ್ಬ  ಹವ್ಯಾಸಿಯಾಗಿ  ನನ್ನ ಕನ್ನಡ ಸಾಹಿತ್ಯದ ಓದು ಇನ್ನೂ ಪ್ರಾರಂಭಿಕ ಹಂತಗಳಲ್ಲಿತ್ತು. ಅವರು ಕನ್ನಡ ಸಾಹಿತ್ಯದಲ್ಲಿ ಎಂ ಎ ಮಾಡಿದ್ದವರು. ಇದೂ ನನ್ನ ಸುಪ್ತ ಮನಸ್ಸಿನಲ್ಲಿದ್ದಿರಬಹುದು. ಇವೆಲ್ಲಾ ನಡೆದು ಇಪ್ಪತ್ತೈದು ಮೂವತ್ತು ವರ್ಷಗಳೇ ಆಗಿ ಹೋಗಿದೆ. ಈಗ್ಗೆ  ಎರಡು ಮೂರು ವರ್ಷಗಳ ಹಿಂದೆ ಆ  ಸ್ನೇಹಿತರು ನನ್ನ ಪ್ರಕಟಿತ/ಅಪ್ರಕಟಿತ ಲೇಖನಗಳ ಬಗ್ಗೆ ಮಾತಾಡುತ್ತಾ  ಇದುವರೆಗಿನ ನಿಮ್ಮ ಅನುಭವಗಳನ್ನು ಬರೆದಿಡುತ್ತಾ ಬನ್ನಿ. ಸ್ವಲ್ಪ ದಿನಗಳ ನಂತರ ಅವುಗಳಿಂದಲೇ ಒಂದು ಕಥೆಯನ್ನು ರಚಿಸುವ ವಸ್ತು ನಿಮಗೆ ಸಿಕ್ಕರೂ ಸಿಗಬಹುದು ಎಂದರು. ನಮಗೆ ರಾತ್ರಿ ವೇಳೆ ನಿದ್ದೆಯಲ್ಲಿ  ಬೀಳುವ ಕನಸುಗಳನ್ನು ಅವು ಮರೆಯುವ ಮುನ್ನ  ಬೆಳಗ್ಗೆ ಎದ್ದ ಕೂಡಲೇ ಬರೆದಿಡುವುದೂ ಒಳ್ಳೆಯದೆಂದೂ ತಾವು ಆ ರೀತಿ ಬರೆದಿಡುತ್ತಿರುವುದಾಗಿಯೂ ಹೇಳಿ ನಾನೂ  ಆ ರೀತಿ ಮಾಡಬಹುದು ಎಂದಿದ್ದರು. ಆ ಕನಸುಗಳಿಗೆ ಒಂದಿಷ್ಟು ಕಲ್ಪನೆ, ಭಾಷೆಯ ಮೆರುಗು ಮತ್ತು ತಂತ್ರದ ಕೈ ಚಳಕದ ಮೂಲಕ ಕಥೆಗಳನ್ನಾಗಿ ಪರಿವರ್ತಿಸಬಹುದು ಎಂಬ ಸಲಹೆಯನ್ನೂ ಸಹ ನನಗೆ ಕೊಟ್ಟಿದ್ದರು. ನಾನು ಇವನ್ನೆಲ್ಲಾ ಮಾಡಲು ಮೂರ್ನಾಲಕ್ಕು ಸಲ ಪ್ರಯತ್ನಿಸಿ ಕೈ ಬಿಟ್ಟಿದ್ದಾಗಿದೆ. ಅಂತಹ ಒಂದು ನಿರ್ದಿಷ್ಟ ಚೌಕಟ್ಟಿನ ಸೃಜನಶೀಲ ಜೀವನ ನನ್ನಿಂದ ಸಾಧ್ಯವಾಗಿಲ್ಲ. ಬಹುಶಃ ಇನ್ನು ಮುಂದೆಯೂ ಆಗಲಾರದು.  ಆದರೆ ಈ ಸಲ ಅವರ ಸಲಹೆಯನ್ನು serious ಆಗಿ ತೆಗೆದುಕೊಂಡು ನನ್ನ  ಈವರೆಗಿನ ಜೀವನದ ನೆನಪುಗಳನ್ನು ಬರೆಯಲು ಪ್ರಾರಂಭಿಸಿದೆ. ಇಲ್ಲಿಯವರೆಗೆ ‘ನಿಲುಮೆ’ಯಲ್ಲಿ ನಾನು ಬರೆದ ‘ನಿನ್ನೆಗೆ ನನ್ನ ಮಾತು’ ಮಾಲೆಯ ಬರಹಗಳು ಆ ಮೂಲ ಬರವಣಿಗೆಯ edited ರೂಪ. Unedited ಬರಹ ಫುಲ್ ಸ್ಕೇಪ್  ಸೈಜಿನ ಅರವತ್ತು ಪುಟಗಳಷ್ಟಿದೆ.

ಈ ನನ್ನ ನೆನಪುಗಳ ಲೇಖನ ಸರಣಿಯನ್ನು ಮುಗಿಸುವ ಮುನ್ನ ಸುಮಾರು ೧೯೮೬-೮೭ರಲ್ಲಿ ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದ ಸಮೀಪ ನನಗಾದ ಪಿಕ್ ಪಾಕೆಟ್ ನ ಅನುಭವವೊಂದನ್ನು ಹೇಳಬೇಕು. ಆಗ ನಾನು ಕನಕಪುರದ ಅಂಚೆಕಚೇರಿಯಲ್ಲಿ ಕೆಲಸ ಮಾಡುತ್ತಿದ್ದೆ; ವಾಸ ಸಹ ಅದೇ ಪಟ್ಟಣದಲ್ಲಿ. ಬೆಂಗಳೂರಿನ ಜಾಲಹಳ್ಳಿ ಸಮೀಪ ಇರುವ hmt watch factory colonyಯಲ್ಲಿ ನನ್ನ ಸೋದರಮಾವ(ನನ್ನ ತಾಯಿಯ ತಮ್ಮ)ವಾಸವಾಗಿದ್ದರು. ಅವರು ಆಗ ಆ factoryಯಲ್ಲೇ ಕೆಲಸ ಮಾಡುತ್ತಿದ್ದರು. (ಈಗ ಆ factory ನಷ್ಟದ ಕಾರಣದಿಂದ ಮುಚ್ಚಿಹೋಗಿ ಸುಮಾರು ಹತ್ತು ಹದಿನೈದು ವರ್ಷಗಳಾಗಿದೆ. ಆ ಫ್ಯಾಕ್ಟರಿಯ ತನ್ನ ನೌಕರರಿಗಾಗಿ ಕಟ್ಟಿಸಿದ್ದ ಮನೆಗಳನ್ನು  ಈಗ ರಾಜ್ಯ/ಕೇಂದ್ರ ಸರ್ಕಾರದ ನೌಕರರಿಗೆ ಬಾಡಿಗೆಗೆ ಕೊಡಲಾಗಿದೆಯಂತೆ)ಆ ನನ್ನ ಸೋದರ ಮಾವನವರ ಮನೆಗೆ ಒಂದು ಸಮಾರಂಭಕ್ಕೆ ಹೋಗಬೇಕಾಗಿತ್ತು. ನನ್ನ ತಂದೆ,ತಾಯಿ ಮತ್ತು ತಂಗಿ  ಸಮಾರಂಭಕ್ಕೆ ಒಂದು ದಿನ ಮುಂಚಿತವಾಗಿಯೇ ಅವರ ಮನೆಗೆ ಹೋಗಿದ್ದರು. ನನಗೆ ರಜೆ ಸಿಗದ ಕಾರಣ ಅವರ ಜತೆ ಹೋಗಲಾಗಲಿಲ್ಲ.  ಕಚೇರಿ ಕೆಲಸ ಮುಗಿಸಿಕೊಂಡು  ರಾತ್ರಿ ವೇಳೆಗೆ  ಬರುತ್ತೇನೆಂದು ಹೇಳಿದ್ದೆ. ಹೇಗೂ ಸಮಾರಂಭ ಮಾರನೆಯ ದಿನ ಇದ್ದುದರಿಂದ ಅದಕ್ಕೆ attend ಆಗಬಹುದು ಎಂದು ಪ್ಲಾನ್ ಮಾಡಿದ್ದೆ. “ಆ ಮರೆಯಲಾಗದ ದಿನ” ನಾನು ಕೆಲಸ ಮುಗಿಸಿ ಕನಕಪುರ ಬಿಟ್ಟಾಗ ಸಂಜೆ ಆರು ಗಂಟೆಯಾಗಿತ್ತು. ಬೆಂಗಳೂರಿನ ಕೆಂಪೇಗೌಡ  ಬಸ್ ನಿಲ್ದಾಣಕ್ಕೆ ಬಂದಾಗ ರಾತ್ರಿ ೮-೩೦. ಅದರ ಎದುರಗಡೆಯೇ ಸಿಟಿ ಬಸ್ ನಿಲ್ದಾಣ. ಅಲ್ಲಿಗೆ ಹೋಗಲು ರಸ್ತೆ ದಾಟುವಾಗ ಸರಕ್ಕನೆ ಒಬ್ಬ ಅಡ್ಡ ಬಂದು ಡಿಕ್ಕಿ ಹೊಡೆದ.  ನನಗೆ ಸ್ವಲ್ಪ ಮುಗ್ಗರಿಸಿದಂತಾಯಿತು. ಸಾವರಿಸಿಕೊಂಡು ನಿಂತು ನನ್ನ ಕಾಲು ಆತನಿಗೆ ಸೋಕಿದ್ದರಿಂದ sorry ಹೇಳಿ ಬಲಗೈಯಿಂದ ಆತನ ಭುಜ ಮುಟ್ಟಿ ಕಣ್ಣಿಗೆ ಒತ್ತಿಕೊಂಡೆ. ಅವನು ಏನೋ ಗೊಣಗಿಕೊಂಡು ಮುಂದೆ ಹೋದ. ನಾನು hmt ಕಡೆ ಹೋಗುವ ಸಿಟಿ ಬಸ್ ಸ್ಟಾಪ್ ಹತ್ತಿರ ಹೋಗಿ ನಿಂತೆ. ಬಸ್ಸು ಇನ್ನೂ ಬಂದಿರಲಿಲ್ಲ. ಸಿಟಿ ಬಸ್ ಗೆ ಬೇಕಾದಷ್ಟು ಹಣ ಇಟ್ಟುಕೊಂಡು ಮಿಕ್ಕಿದ್ದನ್ನು ಪ್ಯಾಂಟಿನ ಜೇಬುಗಳಲ್ಲಿ ಇಡೋಣ ಎಂದು ಶರ್ಟಿನ ಜೇಬಿಗೆ ಕೈ ಹಾಕಿದರೆ ದುಡ್ಡೇ ಇಲ್ಲ!. ಸಾಮಾನ್ಯವಾಗಿ ನಾನು ಸ್ವಲ್ಪ ಹಣವನ್ನು ಶರ್ಟಿನ ಜೇಬಿನಲ್ಲಿ ಮತ್ತು ಹೆಚ್ಚಿನ ಹಣವನ್ನು ಪ್ಯಾಂಟಿನ  ಜೇಬುಗಳಲ್ಲಿ ಇಟ್ಟುಕೊಳ್ಳುವುದು ವಾಡಿಕೆ. ಅಲ್ಲಿ ಏನಾದರೂ ಇಟ್ಟುಕೊಂಡಿರಬಹುದು ಎಂದು ನೋಡಿದರೆ ಅಲ್ಲೂ ಇಲ್ಲ.

ಆ ದಿನ ಕನಕಪುರದಲ್ಲಿ ಕೆಲಸ ಮುಗಿಸಿ ಹೊರಡುವ ಗಡಿಬಿಡಿಯಲ್ಲಿ  ಎರಡು ಮೂರು ಕಡೆ ಹಣ ಇಟ್ಟುಕೊಳ್ಳಲು ಮರೆತೆನೋ ಏನೋ  ಜ್ಞಾಪಕವಿಲ್ಲ. ಒಟ್ಟಿನಲ್ಲಿ ಹಣವಿಲ್ಲ. ಮುಂದೇನು ಎಂಬ ಪ್ರಶ್ನೆ ಭೂತಾಕಾರವಾಗಿ ಎದುರು ನಿಂತಿತ್ತು. ನಡೆದು ಹೋಗೋಣವೆಂದರೆ ಸುಮಾರು ಹದಿನೈದರಿಂದ ಇಪ್ಪತ್ತು ಕಿ. ಮೀ. ಗಳಷ್ಟು ದೂರ. ಆಯಾಸ, ಹಸಿವು ಮತ್ತೊಂದೆಡೆ. ಆ  ಸ್ಥಿತಿಯಲ್ಲಿ ನಡೆಯುವ ಚೈತನ್ಯವಿರಲಿಲ್ಲ. ರಿಕ್ಷಾದಲ್ಲಿ ಹೋಗೋಣವೆಂದುಕೊಂಡೆ. ನಾನು ಬಸ್ಸಿನಲ್ಲಿ ಆ ದಾರಿಯಲ್ಲಿ ಸಾಕಷ್ಟು ಬಾರಿ ಓಡಾಡಿದ್ದರೂ ರಾತ್ರಿ ವೇಳೆ ಆ ರಿಕ್ಷಾದವನು ಸರಿಯಾದ ದಾರಿಯಲ್ಲಿ ಹೋಗುತ್ತಿದ್ದಾನೋ ಅಥವಾ ಸುತ್ತಿ ಬಳಸಿ ಹೋಗುತ್ತಿದ್ದಾನೋ ಎಂದು ತಿಳಿದುಕೊಳ್ಳುವಷ್ಟು ಅಲ್ಲಿಗೆ ಹೋಗುವ  ರಸ್ತೆಗಳ ಪರಿಚಯವಿರಲಿಲ್ಲ. ಕೈಯಲ್ಲಿ ಕಟ್ಟಿಕೊಂಡಿದ್ದ  ಗಡಿಯಾರವನ್ನು ಬೆಂಗಳೂರಿನ ಬಸ್ ಸ್ಟಾಂಡ್ ಗೆ  ಹತ್ತಿರದಲ್ಲೇ ಇರುವ ಬಳೆಪೇಟೆ,ನಗರ್ತಪೇಟೆಗಳ ಯಾವುದಾದರೊಂದು ಮಾರ್ವಾಡಿ ಅಂಗಡಿಯಲ್ಲಿ ಅಡವಿಟ್ಟು ಹಣ ಪಡೆಯಬಹುದಾದ ಸುಲಭದ ದಾರಿ ಆ ಗಾಬರಿಯ ಸನ್ನಿವೇಶದಲ್ಲಿ  ನನ್ನ ಬುದ್ಧಿಗೆ,ಮನಸ್ಸಿಗೆ ಹೊಳೆಯಲೇ  ಇಲ್ಲ. ಅಂಚೆಕಚೇರಿಯಲ್ಲಿ ಕೆಲಸ ಮಾಡುವ ನನ್ನ ಕೆಲವು ಸ್ನೇಹಿತರು  ಬೆಂಗಳೂರಿನಿಂದ ರಾಮನಗರ,ಚನ್ನಪಟ್ಟಣಕ್ಕೆ ದಿನಾ ಬಸ್ಸಿನಲ್ಲಿ ಓಡಾಡುತ್ತಿದ್ದರು. ಅವರು ಯಾರಾದರು ಸಿಗಬಹುದೆಂದು ಪುನಃ ಬಸ್ ಸ್ಟಾಂಡ್ ಗೆ ಹೋಗಿ ನೋಡಿದೆ. ಯಾರೂ ಸಿಗಲಿಲ್ಲ. ಹೋಗಲಿ ಕನಕಪುರದಲ್ಲಿನ ನನ್ನ ಸ್ನೇಹಿತರು ಯಾರಾದರೂ ಸಿಗಬಹುದೆಂದು ಆ ಪ್ಲಾಟ್ ಫಾರಂಗೂ ಹೋಗಿ ನೋಡಿದೆ. ಅಲ್ಲೂ ಇಲ್ಲ. ನಾನು ಸುಮಾರು ಇಪ್ಪತ್ತೈದು ಮೂವತ್ತು ವರ್ಷಗಳಿಂದ ಪುಸ್ತಕಗಳನ್ನು ಕೊಂಡುಕೊಳ್ಳುವುದು ಬೆಂಗಳೂರಿನ ಬಳೆಪೇಟೆಯಲ್ಲಿರುವ ಸಾಹಿತ್ಯ ಭಂಡಾರ ಮತ್ತು ಗೀತಾ ಏಜೆನ್ಸೀಸ್ ನಲ್ಲಿ. ಅವುಗಳ ಮಾಲೀಕರು ತುಂಬಾ ಪರಿಚಯವಾಗಿದ್ದರು.

ನನಗೆ ಬೇಕಾದ ಪುಸ್ತಕ ಒಂದು ವೇಳೆ ಅವರಲ್ಲಿ ಇಲ್ಲದಿದ್ದರೆ ಅಲ್ಲೇ ಸುತ್ತಾ ಮುತ್ತಾ ಇರುವ ಇತರ ಪುಸ್ತಕದ ಅಂಗಡಿಗಳಿಂದ  ಹದಿನೈದು ಇಪ್ಪತು ನಿಮಿಷಗಳ ಒಳಗೆ ತರಿಸಿಕೊಡುತ್ತಿದ್ದರು. ಸಾಹಿತ್ಯ ಭಂಡಾರಕ್ಕೆ ಹೋದೆ. ಆ ದಿನ ಅಂತಹ ದುರ್ಭರ ಸನ್ನಿವೇಶದಲ್ಲಿ ಸಹ ಇದು ನನಗೆ ಹೊಳೆದಿದ್ದು ಇಂದಿಗೂ ಆಶ್ಚರ್ಯವಾಗಿದೆ. ಅವರಿಗೆ ಎಲ್ಲ ವಿವರಿಸಿ ಬಸ್ ಛಾರ್ಜಿಗೆ ಆಗುವಷ್ಟು (ಆಗ ಸುಮಾರು ಐದು ರೂಪಾಯಿ ಇತ್ತೆಂದು ಜ್ಞಾಪಕ) ಸಾಲ ಕೊಡಿ ,ಊರಿಗೆ ಹೋದ ತಕ್ಷಣ ಎಂ ಓ ಮೂಲಕ ಕಳಿಸುತ್ತೇನೆ ಎಂದು ಕೇಳಿಕೊಂಡೆ. ಅವರು ತಕ್ಷಣ ನಾನು ಕೇಳಿದ ಎರಡು ಪಟ್ಟು ಹಣ ಕೊಟ್ಟು ಇಂತಹ ಸಮಯದಲ್ಲಿ ಬೇಕಾಗುತ್ತದೆ ಇಟ್ಟುಕೊಳ್ಳಿ. ನಿಧಾನವಾಗಿ ಕಳಿಸಿ ಅಥವಾ ನೀವು ಈ ಕಡೆ ಮತ್ತೊಮ್ಮೆ ಬಂದಾಗ ಕೊಟ್ಟರೂ ಆಯಿತು. ಯೋಚಿಸಬೇಡಿ. ಎಂದರು. ಅವರು ಕೊಟ್ಟ ಆ ಹಣವನ್ನು ಬಲಗೈಯಲ್ಲಿಟ್ಟುಕೊಂಡು ಬೆರಳುಗಳನ್ನು ಭದ್ರವಾಗಿ ಮಡಿಸಿ ಆ ಕೈಯನ್ನು ಪ್ಯಾಂಟಿನ ಜೇಬಿನಲ್ಲಿಯಿಟ್ಟುಕೊಂಡೆ. ಆ ಕೈಯನ್ನು ಈಚೆ ತೆಗೆದಿದ್ದು ಸಿಟಿ ಬಸ್ಸಿನಲ್ಲಿ ಕೂತುಕೊಂಡ ಮೇಲೆ ಕಂಡಕ್ಟರ್ ಟಿಕೆಟ್ ಕೊಡಲು ಬಂದಾಗಲೇ!!. ಅಂತೂ ಆ ದುಃಖದ ಪ್ರಸಂಗ ಕಳೆದು ಮನೆ ಸೇರಿದ್ದಾಯ್ತು. ಊರಿಗೆ ಹೋದಮೇಲೆ ಸಾಹಿತ್ಯ ಭಂಡಾರದ ಆ ನನ್ನ ಆತ್ಮೀಯರಿಗೆ ಎಂ ಓ ಕಳಿಸಿದೆ. ಸದ್ಯಕ್ಕೆ ಈ ನನ್ನ ನೆನಪುಗಳ ಸರಣಿಗೆ ಒಂದು ವಿರಾಮ ಕೊಡುತ್ತಿದ್ದೇನೆ. ನೋಡೋಣ ಮುಂದೆಂದಾದರೂ ಆ ನನ್ನ unedited ನೆನಪುಗಳಲ್ಲಿ  ಇಲ್ಲಿಯ ತನಕ ಹೇಳದೆ  ಬಿಟ್ಟಿರುವುದೇನಾದರು ಇದ್ದರೆ ಬರೆಯುವ ಆಸೆಯಿದೆ!!!.

(ಮುಗಿಯಿತು)

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments