ವಿಷಯದ ವಿವರಗಳಿಗೆ ದಾಟಿರಿ

ಮೇ 3, 2014

1

ನಾಡು- ನುಡಿ: ಮರುಚಿಂತನೆ- ಪ್ರಜಾಪ್ರಭುತ್ವಲ್ಲಿ ಪ್ರಾತಿನಿಧ್ಯದ ಸಮಸ್ಯೆಗಳು: ಭಾಗ 2

‍CSLC Ka ಮೂಲಕ

ಬಿ. ಎಲ್ ಶಂಕರ್, ಮಾಜಿ ವಿಧಾನಪರಿಷತ್ತಿನ ಅಧ್ಯಕ್ಷರು. ಅಕ್ಷರಕ್ಕೆ: ಶಿವಕುಮಾರ್ ಪಿ.ವಿ

Social Science Column Logo

ಬದಲಾಗುತ್ತಿರುವ ಪ್ರಾತಿನಿಧ್ಯದ ಸ್ವರೂಪಗಳು
ಸಂವಿಧಾನ ರಚನಾ ಸಭೆಯಲ್ಲಿ ಹಲವು ಬಾರಿ ಈ ಚರ್ಚೆ ನಡೆದಿದೆ. ನಂತರ ಸಂಸದೀಯ ಪ್ರಜಾಪ್ರಭುತ್ವವನ್ನು ಅಂತಿಮವಾಗಿ ಆಯ್ಕೆ ಮಾಡಿಕೊಂಡರು.ಈ ಸಂದರ್ಭದಲ್ಲಿ ಪ್ರತಿನಿಧಿತ್ವ ಅಂದರೆ ಎಲ್ಲರನ್ನೂ ಹಾಗೂ ಅವರ ಎಲ್ಲ ವಿಚಾರಗಳನ್ನು ಪ್ರತಿನಿಧಿಸುವಂತವರು ಎನ್ನುವ ಪರಿಕಲ್ಪನೆಯಿತ್ತು. ಇಲ್ಲಿ ಯಾರು ಓಟು ಕೊಟ್ಟರು, ಯಾರು ಕೊಡಲಿಲ್ಲ ಎನ್ನುವುದು ಗೊತ್ತಾಗುವುದಿಲ್ಲ. ಹಾಗಾಗಿ ಕೆಲವು ಬಾರಿ ಬಹಳ ನಿರೀಕ್ಷೆ ಮಾಡಿರುವಂತಹ ಸಂದರ್ಭದಲ್ಲಿ ಓಟು ಕೊಟ್ಟಿರುವುದಿಲ್ಲ. ಕೆಲವೊಮ್ಮೆ ನಿರೀಕ್ಷೆ ಮಾಡಿರದ ಸಂದರ್ಭದಲ್ಲಿ ಕೊಟ್ಟಿರುತ್ತಾರೆ.ಇದಕ್ಕೆ ಪೂರಕವಾಗಿ ಎಂ.ಪಿ.ಪ್ರಕಾಶ್ ಅವರ ಉದಾಹರಣೆಯನ್ನ ನೋಡುವುದಾದರೆ, ಬಹಳ ಒಳ್ಳೆ ಅಭಿವೃದ್ಧಿ ಮಾಡಿರುವಂತಹ ಎಲ್ಲ ಪಕ್ಷದ ಅನೇಕ ಜನ ಸೋತಿರುವುದನ್ನ ಕೂಡಾ ನೋಡಿದ್ದೇವೆ. ಅದೇ ರೀತಿಯಾಗಿ, ಯಾವುದೇ ಅಭಿವೃದ್ಧಿ ಮಾಡದೇ, ಜನರ ಕೈಗೇ ಸಿಗದಿರುವಂತಹ ಅನೇಕರು ಚುನಾವಣೆಯಲ್ಲಿ ಸತತವಾಗಿ ಗೆದ್ದಿರುವಂತವರನ್ನು ಸಹ ನೋಡಿದ್ದೇವೆ. ಈ ಯಾವುದಕ್ಕೂ ಕೂಡಾ ನಿರ್ದಿಷ್ಟವಾದಂತಹ ವ್ಯಾಖ್ಯಾನವನ್ನು ಮಾಡಲಿಕ್ಕೆ, ಅರ್ಥೈಸಲಿಕ್ಕೆ ಸಾಧ್ಯ ಆಗುವುದಿಲ್ಲ. ಅದೇ ರೀತಿ, ಬಹಳಷ್ಟು ಮಟ್ಟಿಗೆ ಒಂದು ಹಂತದಲ್ಲಿ ನನ್ನ ಸಂಶೋಧನೆ ಪ್ರಬಂಧದ ಒಂದು ಅಧ್ಯಾಯದಲ್ಲಿ ಈ ಪ್ರಾತಿನಿಧ್ಯದ ಸಮಸ್ಯೆಯನ್ನು ಚರ್ಚೆಗೆ ಒಳಪಡಿಸಿದ್ದೇನೆ.

ಸ್ವಾತಂತ್ರ ಬಂದು ಕೆಲವು ದಿನಗಳ ಕಾಲ ಜನ ಮತ್ತು ಪ್ರತಿನಿಧಿಗಳು ಸ್ವಾತಂತ್ರ ಹೋರಾಟದ ಗುಂಗಿನಲ್ಲೇ ಇದ್ದರು. ಆಗ ಪ್ರತಿನಿಧಿತ್ವ ಅಂದರೆ ಇಡೀ ದೇಶದಲ್ಲಿ ಯಾವ ಕಾರಣಕ್ಕಾಗಿ ಸ್ವಾತಂತ್ರ್ಯವನ್ನು ಪಡೆದದೆವೋ ಅದೇ ಐಡಿಯಾಲಜಿಯನ್ನು ಪ್ರತಿನಿಧಿಸುವುದು ರೂಢಿಯಲ್ಲಿತ್ತು. ನಮ್ಮ ದೇಶದ ಎಲ್ಲ ಜನರಿಗೂ ಕೂಡಾ ಒಂದು ನೆಮ್ಮದಿಯ ಸಮಾಧಾನಕರ ಬದುಕನ್ನು ಸಾಧ್ಯವಾಗಿಸುವುದು ಅಂದಿನ ಪ್ರತಿನಿಧಿತ್ವದ ಆಶಯವಾಗಿತ್ತು, ಅದು ಸುಮಾರು 10-20 ವರ್ಷಗಳ ಕಾಲ ನಡೆದುಕೊಂಡು ಬಂದಿತು. ಆಗ ಎಲ್ಲ ಕೂಡಾ ನ್ಯಾಶನಾಲಿಸ್ಟ್ ಐಡಿಯಾಲಜಿನಲ್ಲೇ ಇದ್ದರು. ದೇಶದ ಬಗ್ಗೆಯೇ ಚಿಂತನೆ ನಡೆಸುತ್ತಿದ್ದರು.ಗಾಂಧೀಜಿ, ಜಯಪ್ರಕಾಶ ನಾರಾಯಣ್,ಮತ್ತು, ವಿನೋಬಾ ಭಾವೆಯಂತವರ ಜಾತಿ ಯಾವುದು ಅಂತ ಯಾರು ನೋಡುತ್ತಿರಲಿಲ್ಲ. ಹಾಗೆ ಕೇಳಿದ್ದನ್ನು ಕೂಡಾ ಯಾರು ಕೇಳಿಲ್ಲ ಮತ್ತು ಕೇಳುವುದು ಇಲ್ಲ. ಹಾಗೆಯೆ ಇತ್ತೀಚೆಗೆ ಅಣ್ಣಾ ಹಜಾರೆಯವರ ಜಾತಿ ಯಾವುದು ಅಂತ ಯಾರಾದರು ಕೇಳುತ್ತಾರಾ?ಕೇಳುವುದಿಲ್ಲ. ಆದರೆ, ಇವರೆಲ್ಲರಿಗೂ ಒಂದು ಕಾರಣ ಇತ್ತು. ಆ ಕಾರಣ ಮುಖ್ಯ ಅದಕ್ಕಾಗಿ ಅವರು ಮಾಡುತ್ತಿದ್ದಾರೆ. ಹಾಗಾಗಿ ಅವರು ಯಾರು ಎನ್ನುವುದು ಮುಖ್ಯವಾಗುವುದಿಲ್ಲ. ಈ ಸಣ್ಣ ಪುಟ್ಟ ಪ್ರಶ್ನೆಗಳೆಲ್ಲಾ ಬರುವುದು ಈ ನಮ್ಮಂತವರೆಲ್ಲಾ ಚುನಾವಣೆಗೆ ನಿಂತಾಗ ಮಾತ್ರ. ಹಾಗಾಗಿ ಸ್ವಾತಂತ್ರ ಬಂದ ಮೊದಲ ಇಪ್ಪತ್ತು ವರ್ಷಗಳ ಕಾಲ 1952ರ ಚುನಾವಣೆಯಿಂದ ಸುಮಾರು 70ರ ದಶಕದವರೆಗೆ ಜಾತಿ ಅಥವಾ ಇತ್ಯಾದಿ ಸಣ್ಣ ಪುಟ್ಟ ಪ್ರಶ್ನೆಗಳು ಇರಲಿಲ್ಲ. ಬದಲಾಗಿ, ಪ್ರತಿನಿಧಿತ್ವ ಅಂದರೆ, ದೇಶವನ್ನು ಪ್ರತಿನಿಧಿಸುವುದು ಎನ್ನುವಂತೆಯೇ ನೋಡಲಾಗುತ್ತಿತ್ತು. ಒಂದು Cause, National Spirit ಅನ್ನು Represent ಮಾಡುತ್ತಿದ್ದಾನೆ ಎನ್ನುವ ಅರ್ಥ ಇತ್ತು ಮತ್ತು ಹಾಗೆಯೇ ನಡೆದುಕೊಂಡು ಬರುತ್ತಿತ್ತು.

70ರ ದಶಕದ ನಂತರ ಈ ದೇಶದ ರಾಜಕಾರಣ ಎಲ್ಲ ಬದಲಾಗುತ್ತಾ ಬಂತು. 1969ರಲ್ಲಿ ಇಂಡಿಯನ್ ನ್ಯಾಶನಲ್ ಕಾಂಗ್ರೇಸ್ ಒಡೆದು ರೂಲಿಂಗ್ ಕಾಂಗ್ರೇಸ್ ಮತ್ತು ಆರ್ಗನೈಸೇಷನ್ ಕಾಂಗ್ರೇಸ್ ಎಂದು ವಿಭಜನೆಯಾಯಿತು. ಅಲ್ಲಿ ಕೆಲವು ವಿಷಯಗಳು ಮುಖ್ಯ ಭೂಮಿಕೆಗೆ ಬಂದವು. ಆಗಿನ ಹಳೆಯ ಕಾಂಗ್ರೇಸಿಗರಾದ ನಿಜಲಿಂಗಪ್ಪನವರು,ಕಾಮರಾಜ್ ರವರು, ಮುರಾರ್ಜಿದೇಸಾಯ್ರವರು ಹಾಗೂ ಇವರ ಜೊತೆ ಗುರುತಿಸಿಕೊಂಡಿದ್ದವರನ್ನೆಲ್ಲಾ ಯಥಾಸ್ಥಿತಿವಾದಿಗಳು, ಇವರಾರು ಕೂಡಾ ಪ್ರಗತಿಪರರಲ್ಲ, ಇವರು ಜನರನ್ನ ಆರ್ಥಿಕವಾಗಿ ಸಬಲಗೊಳಿಸುತ್ತಿಲ್ಲ ಎಂಬ ನಿಲುವುಗಳು ವ್ಯಕ್ತವಾದವು. ಅದೇ ಕಾಲಘಟ್ಟದಲ್ಲಿ ಅವರನ್ನು ವಿರೋಧಿಸಿ ಆರ್ಥಿಕವಾಗಿ ಜನರನ್ನು ಸಬಲಗೊಳಿಸಬೇಕು ಎನ್ನುವ ವಿಚಾರಗಳು ಬೆಳೆದವು. ಕಾರಣ ಏನೇ ಇರಲಿ, ಅಂದೇ ಆತ್ಮಸಾಕ್ಷಿ ಅನ್ನೋ ಪದ ಬಳಕೆಗೆ ಬಂದಿತು. ರಾಷ್ಟ್ರಪತಿ ಚುನಾವಣೆ ನಡೆದಂತಹ ಸಂದರ್ಭದಲ್ಲಿ ಅಧಿಕೃತವಾಗಿ ಕಾಂಗ್ರೇಸ್ ಅಭ್ಯರ್ಥಿಯಾಗಿದ್ದಂತಹ ನೀಲಂ ಸಂಜೀವ ರೆಡ್ಡಿಯವರ ವಿರುದ್ಧ ಕಾಂಗ್ರೇಸ್ ನವರೇ ಮತ ಚಲಾಯಿಸಬೇಕಾದಂತಹ ಸಂದರ್ಭದಲ್ಲಿ ಆತ್ಮಸಾಕ್ಷಿ ಅನ್ನೋ ಪದ ಮೊದಲನೇ ಬಾರಿ ಪ್ರಯೋಗವಾಯಿತು. ಮೊದಲು ನಮ್ಮ ಸಂಘಟನೆ ಅಥವಾ ನಮ್ಮ ಪಕ್ಷ ಹೇಳಿದರೆ ಮಾತ್ರ ಓಟ್ ಹಾಕುವುದು ಎನ್ನುವ ವಿಪ್ ಅನ್ನು ಅನುಸರಿಸುತ್ತಿದ್ದರು. ಆದರೆ, ಈ ಸಂದರ್ಭದಲ್ಲಿ ವಿಪ್ ನ ಜಾಗಕ್ಕೆ ಆತ್ಮಸಾಕ್ಷಿ ಎನ್ನುವ ಪದ 1969ರಲ್ಲಿ ಬಂದು ಕುಳಿತುಕೊಂಡಿತು. ಅಲ್ಲಿ ಪಕ್ಷದ ತೀರ್ಮಾನಕ್ಕೆ ಅನುಗುಣವಾಗಿ ಯಾರು ಆ ರಾಷ್ಟಪತಿ ಚುನಾವಣೆಯಲ್ಲಿ ಮತ ಚಲಾಯಿಸಿದ್ದರೋ ಅವರು ಕಾಂಗ್ರೇಸ್ ಅನ್ನು ಪ್ರತಿನಿಧಿಸುತ್ತಿದ್ದರು. ಆತ್ಮಸಾಕ್ಷಿಯ ಮತ ಚಲಾಯಿಸಿದವರು ರೆಬೆಲ್ ಗಳಾದರು.

ಈ ಹಿನ್ನೆಲೆಯಲ್ಲಿ 1971ರ ಸಂದರ್ಭದಲ್ಲಿ ನೀವು ಯಾರನ್ನು ಪ್ರತಿನಿಧಿಸುತ್ತೀರಿ ಎನ್ನುವ ಪ್ರಶ್ನೆ ಬಂದಾಗ Oppressed, depressed, suppressed class ಅನ್ನು, ಬಡವರನ್ನು ಪ್ರತಿನಿಧಿಸುತ್ತೇವೆ ಎನ್ನುವ ವಿಚಾರಗಳು ಬೆಳೆದವು. ಗರೀಬಿ ಹಠಾವೋ ಎನ್ನುವ ಸ್ಲೋಗನ್ ಬಂದಿತು. ರೋಟಿ, ಕಪಡಾ, ಮಕಾನ್ ಇವೆಲ್ಲಾ ಮುಂಚೂಣಿಗೆ ಬಂದವು. ಇದಕ್ಕೂ ಮೊದಲು ಇಂತಹ ವಿಚಾರಗಳು ಚರ್ಚೆಯಾಗುತ್ತಿರಲಿಲ್ಲ. ಬದಲಾಗಿ, ಪಂಚಶೀಲ, ಪಂಚವಾರ್ಷಿಕ ಯೋಜನೆಗಳು, ವಿದೇಶಾಂಗ ನೀತಿ ಯೋಜನೆಗಳು. ಭಾಷಾವಾರು ಪ್ರಾಂತ್ಯ ರಚನೆ, ಸೇವೆ, ಇಂತಹ ವಿಚಾರಗಳಿಗೆ ಪ್ರಾಮುಖ್ಯತೆ ನೀಡಲಾಗುತ್ತಿತ್ತು. 1971ರಲ್ಲಿ ಸರಿ ತಪ್ಪು ಏನೇ ಇರಲಿ, ಆದರೆ, ಇದ್ದಕ್ಕಿದ್ದಂತೆ ಪ್ರತಿನಿಧಿತ್ವ ಅಂದರೆ, ಯಾರನ್ನು ಪ್ರತಿನಿಧಿಸುವುದು ಎಂದರೆ, ಉಳ್ಳವರನ್ನು ಪ್ರತಿನಿಧಿಸುವವರು ಇವರು, ಇಲ್ಲದವರನ್ನು ಪ್ರತಿನಿಧಿಸುವವರನ್ನು ಇವರು ಎನ್ನುವ ವಿಚಾರಗಳ ಆಧಾರಿತ ಚುನಾವಣೆ ನಡೆಯಿತು. ಅದಕ್ಕೆ ಯಶಸ್ಸು ಕೂಡ ಸಿಕ್ಕಿತು. ಅಂದರೆ ಈ 71-72ರ ಚುನಾವಣೆಯಲ್ಲಿ ಆರ್ಥಿಕ ಸಬಲೀಕರಣದ ವಿಚಾರಗಳಿಗೆ, ಬಡವರ ಪರವಾದ ಕಾರ್ಯಕ್ರಮಗಳಿಗೆ ಅಧಿಕೃತವಾದ ಸೀಲು ಬಿದ್ದಿತ್ತು. ನಂತರ ಲ್ಯಾಂಡ್ ರಿಫಾರ್ಮೇಶನ್ ಬಂದಿತು. ಉಳುವವನೇ ಹೊಲದೊಡೆಯ ಎನ್ನುವ ಕಾನೂನು, ಅಸ್ಪೃಶ್ಯತೆ ನಿವಾರಣೆ ಮಾಡುವ ಕಾನೂನು ಬಂತು.ಬ್ಯಾಂಕುಗಳ ನ್ಯಾಶನಲೈಸೇಷನ್, ಪ್ರೀವಿ ರದ್ದತಿಯಾಯಿತು.(26ನೇ ನಿಮಿಷ).ಅನೇಕ ಕಾನೂನು ತಿದ್ದುಪಡಿಗಳು ಬಂದವು.ಇಂತಹ ವಿಚಾರಗಳು ಕೆಲವು ವರ್ಷಗಳ ಕಾಲ ಚಲಾವಣೆಯಲ್ಲಿದ್ದವು. ನಂತರ ತುರ್ತು ಪರಿಸ್ಥಿತಿ ಘೋಣೆಯ ಕಾಲ

1977ರ ಚುನಾವಣೆಯಲ್ಲಿ ತುರ್ತು ಪರಿಸ್ಥಿತಿಯ ಸಣ್ಣ ಅವಧಿಯಲ್ಲಿ ಪ್ರತಿನಿಧಿತ್ವ ಅಂದರೆ, ಅಭಿವ್ಯಕ್ತಿ ಸ್ವಾತಂತ್ರ .ಪ್ರತಿನಿಧಿತ್ವ ಅಂದರೆ, ಅಭಿವ್ಯಕ್ತಿ ಸ್ವಾತಂತ್ರವನ್ನು ಹತ್ತಿಕ್ಕುವಂತದ್ದಾಗಬಾರದೆನ್ನುವ ವಿಚಾರಗಳ ಆಧಾರದ ಮೇಲೆ ಅಭಿವ್ಯಕ್ತಿ ಸ್ವಾತಂತ್ರ್ಯದ ಪರವಾಗಿ ಇಡೀ ದೇಶದಲ್ಲಿ ಮತ ಚಲಾಯಿಸಲಾಯಿತು. ಆಗ ಕಾಂಗ್ರೇಸ್ಗೆ ವಿರುಧ್ಧವಾಗಿ ಅಂದಿನ ಲೋಕದಳದ ಪರವಾಗಿ ಮತಗಳು ಬಂದವು.ಆಗ ಬೇರೆ ಯಾವ ಸಂಗತಿಗಳು ಲೆಕ್ಕಕ್ಕೆ ಬರಲಿಲ್ಲ ಅಥವಾ ಮುಖ್ಯ ಆಗಲಿಲ್ಲ. ಇದ್ದಂತಹ ಒಂದೇ ಸಂಗತಿ ಅಥವಾ ವಿಚಾರ ಎಂದರೆ, ಅಭಿವ್ಯಕ್ತಿ ಸಾತಂತ್ರ. ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಜಾರ್ಜಫರ್ನಾಂಡಿಸ್ ಜೈಲಿನಲ್ಲಿದ್ದರು. ಜೈಲಿನಲ್ಲಿದ್ದುಕೊಂಡೇ ಚುನಾವಣೆಯಲ್ಲಿ ಗೆದ್ದರು. ಅವರು ಹುಟ್ಟಿದ್ದು ಮಂಗಳೂರಿನಲ್ಲಿ. ಬೆಳೆದಿದ್ದು ಬೆಂಗಳೂರಿನಲ್ಲಿ, ಚುನಾವಣೆಗೆ ನಿಂತಿದ್ದು ಬಿಹಾರದ ಒಂದು ಕ್ಷೇತ್ರದಲ್ಲಿ.ಅಲ್ಲಿ ಜಾರ್ಜ್ಫರ್ನಾಂಡಿಸ್ ಯಾರು?ಏನು?ಎನ್ನುವ ಯಾವ ವಿಚಾರಗಳು ಮುಖ್ಯವಾಗಲಿಲ್ಲ. ಅಭಿವ್ಯಕ್ತಿ ಸ್ವಾತಂತ್ರ ಬೇಕು. ತುರ್ತುಪರಿಸ್ಥತಿ ಇರಬಾರದು ಎನ್ನುವುದು ಮಾತ್ರ ಮುಖ್ಯವಾಗಿತ್ತು. ಅವರು ಅಭಿವ್ಯಕ್ತಿ ಸ್ವಾತಂತ್ರದ ಪರವಾಗಿದ್ದಾರೆ. ಹಾಗಾಗಿ ಅವರಿಗೆ ಮತ ಹಾಕಬೇಕು ಎಂದು ಮತ ಚಲಾಯಿಸಲಾಯಿತು.

ಕೆಲವು ಸಂದರ್ಭಗಳಲ್ಲಿ ಈ ಪ್ರಾತಿನಿಧಿತ್ವದ ಪರಿಕಲ್ಪನೆಗಳು ಯಾವ ಯಾವ ರೀತಿ ಬದಲಾಗುತ್ತಾ ಹೋಗುತ್ತವೆ ಎಂದರೆ, ಸ್ಥಳೀಯ ವ್ಯಕ್ತಿಯಲ್ಲದವನು ಕೂಡಾ ಹಲವು ಬಾರಿ ಚುನಾವಣೆಯಲ್ಲಿ ಆಯ್ಕೆಯಾಗಿರುವಂತದ್ದನ್ನು ಗಮನಿಸಬಹುದು. ಇಂದಿರಾ ಗಾಂಧಿ ಚಿಕ್ಕಮಗಳೂರಿನಲ್ಲಿ ಆಯ್ಕೆಯಾದರು.ಜಾರ್ಜ್ಫರ್ನಾಂಡಿಸ್ ಬಿಹಾರದಿಂದ ಆಯ್ಕೆಯಾದರು. ಹೀಗೆ 80ರಲ್ಲಿ ಸಿ.ಎಮ್.ಸ್ಟೀಫನ್ ಗುಲ್ಬರ್ಗದಲ್ಲಿ ಗೆಲ್ಲುವವರೆಗೂ ಆತ ಸ್ಥಳೀಯ ವ್ಯಕ್ತಿ ಹೌದೋ ಅಲ್ಲವೋ ಎನ್ನುವ ಪ್ರಶ್ನೆ ಮುಖ್ಯವಾಗಿರಲಿಲ್ಲ. ಅಂದರೆ, ಆಗ ಪ್ರಾತಿನಿಧ್ಯದ ಪರಿಕಲ್ಪನೆ ಎಂದರೆ ಯಾವುದು ಮುಖ್ಯ ಆಗಿರುತ್ತದೋ ಆ ಒಂದು ವಿಷಯ. ಆ ವಿಷಯ ಮುಖ್ಯ ಆಗಿದ್ದರೆ ಅದರ ಆಧಾರದ ಮೇಲೆ ವ್ಯಕ್ತಿಯನ್ನು ಆಯ್ಕೆ ಮಾಡುವುದು ಯೋಗ್ಯ ಎನ್ನುವ ತೀರ್ಮಾನಕ್ಕೆ ಬರಲಾಗುತ್ತಿತ್ತು.

ಆದರೆ, ಇಂದಿನ ದಿನಗಳಲ್ಲಿ ಅದು ಸಾಧ್ಯವಾಗುತ್ತಿದೆಯೋ? ಇಲ್ಲ. ಇವತ್ತು ಜನ ಏನನ್ನು ನಿರೀಕ್ಷೆ ಮಾಡುತ್ತಿದ್ದಾರೆ?ಆ ವ್ಯಕ್ತಿ ಕೈಗೆ ಸಿಗುತ್ತಾನೋ ಇಲ್ಲವೋ ಎನುವುದು. ನಾನು ಕೆಲವು ದಿನದ ಹಿಂದೆ ಅಸೆಂಬ್ಲಿ ಎಲೆಕ್ಷನ್ಗೆ ನಿಂತಿದ್ದೆ. ನಾನು ಸೋಲಲಿಕ್ಕೆ ಬಹಳ ಮುಖ್ಯವಾದ ಎರಡು ಕಾರಣ ಅಂದರೆ, ಒಂದು ಹಣ. ಇದು ಈಗ ಸಹಜವಾಗಿ ಬಿಟ್ಟಿದೆ. ಎರಡನೆಯದಾಗಿ, ಇದಕ್ಕಿಂತ ಬಹಳ ಮುಖ್ಯವಾದ ಕಾರಣವೆಂದರೆ;ನಾನು ಕೊನೆಯ ಹದಿನೆಂಟು ದಿನಗಳಿರುವಾಗ ಚುನಾವಣಾ ಕ್ಷೇತ್ರಕ್ಕೆ ಇಳಿದೆ. ಅದು ನಾನು ಕೇಳದೇ ಇರುವಂತಹ ಕ್ಷೇತ್ರವಾಗಿತ್ತು.ಆದರೆ,ನನ್ನ ಪಾರ್ಟಿಯವರು ಅಲ್ಲಿ ಹೋಗು ಅಂದರು ಹೋಗಿದ್ದೆ. ನಾನು ಬೆಂಗಳೂರಿನಲ್ಲಿ ಕೆಲವು ವರ್ಷಗಳಿಂದ ವಾಸಮಾಡುತ್ತಿದ್ದೇನೆ. ಆದರೆ, ಆ ಕ್ಷೇತ್ರದಲ್ಲಿ ಇವರು ಶೃಂಗೇರಿಯವರು, ಇವರು ಚಿಕ್ಕಮಗಳೂರಿನವರು ಇವರು ನಮ್ಮ ಕೈಗೆ ಸಿಗುವುದಿಲ್ಲ. ನನ್ನ ವಿರುದ್ಧ ಸ್ಪರ್ಧೆ ಮಾಡಿದ್ದವರು ಅಲ್ಲಿಯ ಸ್ಥಳೀಯ ವ್ಯಕ್ತಿ. ಅಲ್ಲಿಯೇ ಹುಟ್ಟಿ ವಾಸಮಾಡಿತ್ತಿದ್ದದಂತವರು.ನನ್ನ ಕಾರ್ಯಕ್ಷೇತ್ರ ರಾಜ್ಯ ಆಗಿ ರಾಷ್ಟ್ರ ಆಗಿ, ನನ್ನ ಹುಟ್ಟೂರು ಚಿಕ್ಕಮಗಳೂರಿನ ಒಂದು ಹಳ್ಳಿಯಾಗಿದ್ದರೂ ಕೂಡಾ ನಾನು ವಾಸ ಮಾಡುತ್ತಿರುವುದು ಮಾತ್ರ ಹೆಚ್ಚಾಗಿ ಬೆಂಗಳೂರಿನಲ್ಲಿ. ಆದರೆ, ಇದು ಎಷ್ಟರ ಮಟ್ಟಿಗೆ ಅಲ್ಲಿ ಪರಿಣಾಮ ಬೀರಿತು ಅಂದರೆ ಇವರು ಕೈಗೆ ಸಿಗುವುದಿಲ್ಲ. ಎಲ್ಲಿ ಅವರನ್ನ ಹುಡುಕ್ತಾ ಎಲ್ಲಿಗ್ ಹೋಗ್ತಾರೆ? ಶೃಂಗೇರಿಗೆ ಹೋಗ್ತಾರಾ, ಚಿಕ್ಕಮಗಳೂರಿಗೆ ಹೋಗ್ತಾರಾ ಎನ್ನುವುದು. ಅಂದರೆ ಇವರು ಎಷ್ಟರ ಮಟ್ಟಿಗೆ ಕೈಗೆ ಸಿಗುತ್ತಾರೆ ಎನ್ನುವುದು ಜನಗಳಿಗೆ ಬಹಳ ಮುಖ್ಯವಾಯ್ತೇ ಹೊರತು, ಉಳಿದೆಲ್ಲಾ ನಮ್ಮ ಸಾಮರ್ಥ್ಯ, ಅನುಭವ ಇವು ಯಾವುವು ಮುಖ್ಯ ಪರಿಗಣನೆಗೆ ಬರಲೇ ಇಲ್ಲ. ಆಗ ತಕ್ಷಣ ಬಂದಿದ್ದು ಏನೆಂದರೆ, ಅಲ್ಲಿ ನನ್ನ ವಿರುದ್ಧ ಸ್ಪರ್ಧೆ ಮಾಡಿದಂತವರು ಕೈಗೆ ಸಿಗುತ್ತಾರೆ, ಕಷ್ಟ ಸುಖಕ್ಕೆ ಆಗುತ್ತಾರೆ ಎನ್ನುವುದು.

ಅಂದರೆ, ಪ್ರಾತಿನಿಧ್ಯದ ಇವತ್ತಿನ ಪರಿಕಲ್ಪನೆಯೇನು?ಕೈಗೆ ಸಿಗಬೇಕು, ಪೋಲೀಸ್ ಸ್ಟೇಷನ್ಗೆ ಫೋನ್ ಮಾಡಿ ಆತ ಅಪರಾಧಿಯಾಗಿರಲಿ ಅಥವಾ ಏನೆ ಆಗಿರಲಿ ಅವನನ್ನು ಬಿಡಿಸಬೇಕು. ಅವರು ಕೇಳಿದ ಶಾಲೆಯಲ್ಲಿ ಮಕ್ಕಳಿಗೆ ಸೀಟು ಸಿಗುವಂತೆ ಮಾಡಬೇಕು, .ಬಹಳಷ್ಟು ಸಂದರ್ಭದಲ್ಲಿ ಸ್ವತಃ ನಾವೇ ಶಾಲೇಗೆ, ಪೋಲಿಶ್ ಸ್ಟೇಷನ್ಗಳಿಗೆ ಹೋಗಬೇಕು. ಅವರು ಏನೇ ತಪ್ಪು ಮಾಡಿದ್ದರು ಕೂಡಾ ಅವರು ನಮ್ಮ ಬೆಂಬಲಿಗರು ಅಂದರೆ, ಅವರ ವಿರುದ್ಧ ಕಾನೂನು ಚಲಾವಣೆಯಾಗದಂತೆ ನೋಡಿಕೊಳ್ಳಬೇಕು. ಅವರು ಎಲ್ಲಿ ಯಾವ ಸರ್ಕಾರಿ ಕಛೇರಿಗೆ ಹೋದಂತಹ ಸಂದರ್ಭದಲ್ಲಿ ಯಾವ ಕೆಲಸಗಳು ಆಗಬೇಕು ಅಂದರೂ ಕಛೇರಿಯವರು ಕೆಲಸ ಮಾಡಿಕೊಡುವಂತೆ ನೋಡಿಕೊಳ್ಳ್ಳಬೇಕು. ರಾಜಕೀಯ ಪಕ್ಷಗಳು ಮಾಡಿರುವ ತೀರ್ಮಾನಗಳಿಂದಾಗಿ, ರಾಜಕೀಯ ಕ್ಷೇತ್ರದಲ್ಲಾಗುತ್ತಿರುವ ವಿವಿಧ ಬೆಳವಣಿಗೆಗಳ ಕಾರಣಕ್ಕೋಸ್ಕರ, ಪ್ರಾತಿನಿಧ್ಯದ ಪರಿಕಲ್ಪನೆ ಬದಲಾಗುತ್ತಾ ಹೋಗುತ್ತಿರುತ್ತವೆ. ಇದು ಇಂದಿನ ಕಥೆಯಾದರೆ ೮೦ರ ದಶಕದ ಪ್ರತಿನಿಧಿತ್ವದ ಕಲ್ಪನೆಯನ್ನೂ ಸಹ ನೋಡಬೇಕು..(ಮುಂದುವರೆಯುವುದು)

Read more from ಲೇಖನಗಳು

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments