ವಿಷಯದ ವಿವರಗಳಿಗೆ ದಾಟಿರಿ

ಸೆಪ್ಟೆಂಬರ್ 25, 2014

2

ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೯

‍ರಾಕೇಶ್ ಶೆಟ್ಟಿ ಮೂಲಕ

– ಮು. ಅ. ಶ್ರೀರಂಗ ಬೆಂಗಳೂರು

SL Bhairappa Vimarshe - Nilumeಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೧
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೨
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೩
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೪
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೫
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೬
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೭
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೮

ಆವರಣಎಂಬ ವಿಕೃತಿ (ವಿಮರ್ಶಾ ಸಂಕಲನ) ಸಂಗ್ರಹ: ಗೌರಿ ಲಂಕೇಶ್ – ಭಾಗ ೪ : ಆವರಣ ಮಾಧ್ಯಮ-ಮಂಥನ ಮತ್ತು ಬುದ್ಧಿಜೀವಿ ವರ್ಸಸ್ ಬೌದ್ಧಿಕ ಸ್ವಾತಂತ್ರ್ಯ 

ಆವರಣಎಂಬ ವಿಕೃತಿ:-ಮುಖಾಮುಖಿ -೮ (೩೦-೬-೧೪) ರಲ್ಲಿ ಹೇಳಿದಂತೆ ಈ ಭಾಗದಲ್ಲಿ ‘ಆವರಣ’ ಕಾದಂಬರಿಯನ್ನು ನೆಪಮಾತ್ರಕ್ಕೆ ಇಟ್ಟುಕೊಂಡು ಬರೆದಿರುವಂತಹ ಲೇಖನಗಳ ಬಗ್ಗೆ ನಮ್ಮ ಚರ್ಚೆಯನ್ನು ಮುಂದುವರಿಸೋಣ. ಇದು ‘ಆವರಣ’ ಎಂಬ ವಿಕೃತಿ ವಿಮರ್ಶಾಸಂಕಲನವನ್ನು ಕುರಿತ ಮುಖಾಮುಖಿಯ ಕೊನೆಯ ಭಾಗ.

ಬೊಳುವಾರು ಮಹಮದ್ ಕುಂಞ ಅವರ ‘ಅವರವರ ದೇವರುಗಳು’ … ಲೇಖನದಲ್ಲಿ ‘ಆವರಣ’ ಕಾದಂಬರಿಯ ಕಥಾವಸ್ತುವನ್ನು ಅವರ ಮಾವನವರನ್ನು(ಬೊಳುವಾರು ಅವರ ಹೆಂಡತಿಯ ತಂದೆ) ಕಾಡುತ್ತಿದ್ದ ಕ್ಯಾನ್ಸರ್ ಗೆ ಹೋಲಿಸಿದ್ದಾರೆ. ಆಪರೇಷನ್ ಆದ ನಂತರ ಅವರ ಮಾವನವರು ಗುಣಮುಖರಾಗಿ ಗೆಲುವಿನ ನಗೆ ಬೀರುತ್ತಿದ್ದಾರೆ. ಅದೇ ರೀತಿ ‘ಆವರಣ’ ಕಾದಂಬರಿ ಬರೆದ ನಂತರ ಭೈರಪ್ಪನವರೂ ಸಹ ಹತ್ತಾರು ವರ್ಷಗಳಿಂದ ತಮ್ಮನ್ನು ಹಿಂಸಿಸುತ್ತಿದ್ದ,ಕಾಡುತ್ತಿದ್ದ  ಚಿಂತನೆಗಳಿಂದ  ಮುಕ್ತರಾಗಿದ್ದಾರೆ. ಅವರವರು ನಂಬುವ ಅವರವರ ದೇವರುಗಳು ಅವರವರನ್ನು ಕಾಪಾದುತ್ತಿರಲಿ. ಆಮೆನ್ ……… ಎಂಬ ಹಿತೋಕ್ತಿಯಿಂದ ತಮ್ಮ ಲೇಖನವನ್ನು ಮುಗಿಸಿದ್ದಾರೆ.

ಇಬ್ರಾಹಿಂ ಸಾಹೇಬರ ಬಗ್ಗೆ ಭೈರಪ್ಪನ ಸುಳ್ಳು …  ಪೀರ್ ಬಾಷಾ ಅವರು ಸುಳ್ಳು ಹೇಳುತ್ತಿದ್ದಾರೋ ಅಥವಾ ತಮ್ಮ ಜನಾಂಗದವರ ಅಸಮಾಧಾನಕ್ಕೆ ಏಕೆ ಕಾರಣಕರ್ತನಾಗಬೇಕೆಂದು ಇಬ್ರಾಹಿಂ ಸಾಹೇಬರೇ ಸುಳ್ಳು ಹೇಳುತ್ತಿದ್ದಾರೋ ತಿಳಿಯದಾಗಿದೆ. (ತಮ್ಮ ಜನಾಂಗದ ಅಸಮಾಧಾನಕ್ಕೆ ಕಾರಣವಾಗುವ ಮಾತುಗಳನ್ನು ಆಡಲು, ಬರೆಯಲು ಹಿಂದೇಟು ಹಾಕುವ ಪ್ರವೃತ್ತಿಗೆ ಇತ್ತೀಚಿನ ಉದಾಹರಣೆಯಾಗಿ   ಕನ್ನಡದ  ‘ವರ್ತಮಾನ’ , ‘ಗುಜರಿ ಅಂಗಡಿ’ ಮತ್ತು ‘ಭೂತಗನ್ನಡಿ’ ಎಂಬ ಬ್ಲಾಗುಗಳಲ್ಲಿ ಪ್ರಕಟವಾದ ‘ಬುರ್ಖಾ’ ಕುರಿತ ಲೇಖನ ಮತ್ತು ಅದರ ಬಗ್ಗೆ ನಡೆದ ಚರ್ಚೆಯನ್ನು ಆಸಕ್ತರು ಗಮನಿಸಬಹುದು). ‘ಆವರಣ’ ಕಾದಂಬರಿಯ ಪ್ರವೇಶ ಎಂಬ ಭಾಗದಲ್ಲಿ ಭೈರಪ್ಪನವರು ಆ ಕಾದಂಬರಿ ಬರೆಯುವಾಗ ತಮಗೆ ಸಹಾಯ ಮಾಡಿದವರನ್ನು ಸ್ಮರಿಸಿಕೊಳ್ಳುವಾಗ  ‘ಶಿವಮೊಗ್ಗದ ಎಚ್ ಇಬ್ರಾಹಿಂ ಸಾಹೇಬರು ಎಷ್ಟೋ ಸೂಕ್ಷ್ಮಾಂಶಗಳನ್ನು ಹೇಳಿ ನನ್ನ ಮನಸ್ಸಿನ ಚಿತ್ರಗಳು ಸ್ಫುಟವಾಗಲು ಸಹಾಯಮಾಡಿದರು’ ಎಂದು ಹೇಳಿರುವ ಒಂದು ವಾಕ್ಯ ಪೀರ್ ಬಾಷಾ ಅವರ ಕೆಂಗಣ್ಣಿಗೆ,ಆಕ್ರೋಶಕ್ಕೆ ತುತ್ತಾಗಿದೆ. ಇದರ ಫಲವಾಗಿ ಆವೇಶದ,ನಾಲ್ಕನೇ ದರ್ಜೆಯ ಕೀಳು ಮಾತುಗಳು ಅವರ ಲೇಖನದಲ್ಲಿದೆ. ಜತೆಗೆ ತಮ್ಮ ಮಾತಿಗೆ ಸತ್ಯದ ಲೇಪ ಹಚ್ಚಲು ‘ಪಿ ಲಂಕೇಶರ ಮಿತ್ರರೂ,ಆಗಿದ್ದ ‘ಲಂಕೇಶ್’  ವಾರಪತ್ರಿಕೆಯ ಹಿತೈಷಿಯೂ ಆಗಿರುವ ಇಬ್ರಾಹಿಂ ಸಾಹೆಬರನ್ನೇ ಇದರ ಬಗ್ಗೆ ಕೇಳಿದೆ ‘ ಎಂದು  ಬರೆದಿರುವುದು  ಬಾಷಾ ಅವರ ಬಗ್ಗೆ ಮರುಕ ಹುಟ್ಟಿಸುತ್ತದೆ. ಏಕೆಂದರೆ ಇಲ್ಲಿ ಸಮಸ್ಯೆಯಿರುವುದು ಭೈರಪ್ಪನವರು ಮತ್ತು ಇಬ್ರಾಹಿಂ ಸಾಹೇಬರ ನಡುವೆ ಅಷ್ಟೇ. ಅದಕ್ಕೆ ಮೂರನೇ ವ್ಯಕ್ತಿ ಮತ್ತು ಅವರ ವಾರಪತ್ರಿಕೆಯ ಆಸರೆ ಏಕೆ ಬೇಕಾಗಿತ್ತು?  . ಇಬ್ರಾಹಿಂ ಸಾಹೇಬರಿಗೆ ಇನ್ನೂ ಕಾಲ ಮಿಂಚಿಲ್ಲ. ಈಗ ಬೇಕಾದರೂ ಸತ್ಯ ಹೇಳಬಹುದು. ತಾವು ಮುಸ್ಲಿಂ ಜನಾಂಗದ ರೀತಿ-ರಿವಾಜು,ನಂಬಿಕೆ, ಆಚರಣೆಗಳ ಬಗ್ಗೆ ಭೈರಪ್ಪನವರ ಜತೆ ಮಾತಾಡಿಲ್ಲ ಎಂದು ಪತ್ರಿಕೆಗಳಿಗೆ ಹೇಳಿಕೆ ಕೊಡಬಹುದು. ನಮ್ಮ  ಕನ್ನಡದ 24X7 ಸುದ್ದಿವಾಹಿನಿಗಳಿಗೆ ತಿಳಿಸಿದರೆ ಸಾಕು. ಅವರು ಒಂದಿಡೀ ದಿನ ಅದರ ಬಗ್ಗೆ ಕಾರ್ಯಕ್ರಮ ನಡೆಸುತ್ತಾರೆ. ಪೀರ್ ಬಾಷಾ ಅವರೂ  ಈ ನಿಟ್ಟಿನಲ್ಲಿ ಸಹಾಯ ಮಾಡಬಹುದು.

ಪಿ. ಲಂಕೇಶರ ಬರಡು ಮನಸ್ಸಿನ ತಡೆರಹಿತ ಅಶ್ಲೀಲತೆ  ಲೇಖನ ಭೈರಪ್ಪನವರ  ‘ಸಾರ್ಥ’  ಕಾದಂಬರಿಗೆ ಸಂಬಂಧಿಸಿದ್ದು. ತಮ್ಮ ತಂದೆಯವರ ಹೆಸರಿನ ಪ್ರಕಾಶನ ಸಂಸ್ಥೆಯಿಂದ ‘……….. ವಿಕೃತಿ’ ವಿಮರ್ಶಾ ಸಂಕಲನ ಪ್ರಕಟಿಸಿರುವುದರಿಂದ ಭೈರಪ್ಪನವರ ಬಗ್ಗೆ, ಅವರ  ಯಾವುದೇ ಕಾದಂಬರಿಯ ಬಗ್ಗೆ ಲಂಕೇಶ್ ಅವರು ಬರೆದ ಯಾವುದೇ ಲೇಖನ ಸೇರಿಸಲು, ಪ್ರಕಟಿಸಲು ಗೌರಿ ಲಂಕೇಶರು ಸ್ವತಂತ್ರರು. ಅದು ಅವರ ವಿವೇಚನೆಗೆ ಬಿಟ್ಟ ವಿಷಯ. 

ಕೆ ಪಿ ಪೂರ್ಣಚಂದ್ರತೇಜಸ್ವಿ ಅವರ ಹೆಸರಿನಲ್ಲಿರುವ ಅನ್ ರೀಡಬಲ್ ಸ್ಟಫ್ ಎಂಬ ಲೇಖನದಲ್ಲಿ ಪೂಚಂತೇ ಅವರು ಬಿ ಎನ್ ಶ್ರೀರಾಮ್ ಅವರಿಗೆ ಹೇಳಿದರೆನ್ನಲಾದ ‘ಐದು ಆರನೆಯ ಮುದ್ರಣ ಎಂದೆಲ್ಲ ಹೇಳ್ತಾರಲ್ರೀ, ಇದು ಅನ್ ರೀಡಬಲ್ ಸ್ಟಫ್ ಯಾರ್ರೀ ಇದನ್ನು ಓದುವವರು?………….. ‘ ಈ ಸಾಲುಗಳಷ್ಟೇ ‘ಆವರಣ’ಕ್ಕೆ ಸಂಬಂಧಿಸಿರುವುದು. ಜುಲೈ ೨೦೧೪ರ ಹೊತ್ತಿಗೆ ‘ಆವರಣ’ದ ಮೂವತ್ತೇಳು ಮುದ್ರಣವಾಗಿದೆ ಎಂಬುದು ‘ಯಾರ್ರೀ ಇದನ್ನು ಓದುವವರು?’ ಎಂಬ ಪ್ರಶ್ನೆಗೆ ಉತ್ತರವಾಗಬಹುದಷ್ಟೇ.  ಪೂಚಂತೇ ಅವರು ಚಂದ್ರಶೇಖರ ನಂಗಲಿ ಅವರಿಗೆ ಬರೆದ ಪತ್ರದಿಂದ ‘ಆವರಣ’ ಕುರಿತ ಆಯ್ದ ಭಾಗ ಎಂದು  ಇದೇ ಲೇಖನದಲ್ಲಿ ಪ್ರಕಟವಾಗಿರುವ  ಪೂಚಂತೇ ಅವರ ಆ ಪತ್ರದ ಇನ್ನೊಂದೆರೆಡು  ಪ್ಯಾರಗಳು ‘ಆವರಣ’ಕ್ಕೆ ಸಂಬಂಧಿಸಿದ್ದಲ್ಲ!!. ಅದು  ಪೂಚಂತೇ ಅವರು ತಮ್ಮ ‘ಮಾಯಾಲೋಕ’ ಕಾದಂಬರಿಯನ್ನು ಕುರಿತು ನಂಗಲಿ ಅವರಿಗೆ ಬರೆದಿದ್ದು.  ‘ಮಾಯಾಲೋಕ’ದ ವಿಷಯ ಬಿಟ್ಟು  ಅದರಲ್ಲಿ ಹುಡುಕಿದರೆ  ಸಿಗುವುದು ಭೈರಪ್ಪ, ವೈದಿಕವಾದಿ, ಜಾತಿಪದ್ಧತಿ, ವೈದಿಕ ಚಿಂತನೆಗಳನ್ನು ಶೂದ್ರರ ಬಾಯಲ್ಲಿ ಹಾಕಿರುವುದು ಎಂಬ ಎಂಟು ಪದಗಳಷ್ಟೇ. ನಂಗಲಿ ಅವರು ಇದು   ‘ಆವರಣ’  ಕುರಿತ ವಿಮರ್ಶೆ ಎಂದು ಭಾವಿಸಿ ಗೌರಿ ಲಂಕೇಶರಿಗೆ ಕಳಿಸಿರುವುದು,ಅದನ್ನು ಮಾನ್ಯ ಸಂಪಾದಕಿಯವರು ಪ್ರಕಟಿಸಿರುವುದು ತಮಾಷೆಯಾಗಿದೆ.

‘ಭೈರಪ್ಪನವರು ಹುತಾತ್ಮರಾಗಲಿಲ್ಲ ಇದು ಬಾನು ಮುಷ್ತಾಕ್ ಅವರ ಲೇಖನದ ಶೀರ್ಷಿಕೆ. ಇದರಲ್ಲಿ ಅವರು  ‘ಆವರಣ’ ಮತ್ತು  ಭೈರಪ್ಪನವರ ಮೇಲೆ ಒಂಭತ್ತು  ಆರೋಪಗಳ consolidated charge sheet ಹಾಕಿದ್ದಾರೆ. ಆ ಆರೋಪಗಳನ್ನು   ಈಗಾಗಲೇ ಈ ವಿಮರ್ಶಾಸಂಕಲನದ ಮೂರು ಭಾಗಗಳ ಲೇಖನಗಳ ಬಗ್ಗೆ  ಚರ್ಚಿಸುವಾಗ  ವಿವರವಾಗಿ ಪರಿಶೀಲಿಸಲಾಗಿದೆ. ಹೀಗಾಗಿ ಮತ್ತೊಮ್ಮೆ ಬಾನು ಮುಷ್ತಾಕ್ ಅವರ argument ಅನ್ನು ಕೇಳುವ ಅವಶ್ಯಕತೆ ಇಲ್ಲ. ‘ಆವರಣ’ ಕಾದಂಬರಿಯನ್ನು ಬರೆಯುವ ಮುಂಚೆ ಭೈರಪ್ಪನವರು ತಮ್ಮ ಮನೆಯಲ್ಲಿ ಇದ್ದು ಮುಸ್ಲಿಮರ  ದಿನ ನಿತ್ಯದ ಆಚಾರ, ನಮಾಜು, ಇಸ್ಲಾಂ ಕುರಿತ ಕೆಲವು ವಿಷಯಗಳ ಬಗ್ಗೆ ಮಾಹಿತಿ ಪಡೆದಿದ್ದರು ಎಂಬುದನ್ನು ಬಾನು ಅವರು ಒಪ್ಪಿಕೊಂಡಿದ್ದಾರೆ. ಇಬ್ರಾಹಿಮ್ ಸಾಹೇಬರಂತೆ ಅದೆಲ್ಲಾ ಸುಳ್ಳು ಎಂದು  ಹೇಳಿಲ್ಲ. ಆವರ ಪ್ರಾಮಾಣಿಕತೆಗೆ ಒಂದು ಸಲಾಂ. ‘ಆವರಣ’ ಪ್ರಕಟಣೆಗೆ ಮುನ್ನ ಭೈರಪ್ಪನವರು ಬಾನು ಮುಷ್ತಾಕ್ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿ ‘ನಾನು ಕೃತಿ ರಚನೆಗೆ ಮುನ್ನ ನಿಮ್ಮ ಮನೆಯಲ್ಲಿ ಉಳಿದಿದ್ದ ವಿಷಯವನ್ನು ನನ್ನ ಕೃತಿಯಲ್ಲಿ ಪ್ರಸ್ತಾಪಿಸಿದ್ದೇನೆ. ಆ ಪುಸ್ತಕವು ವಿವಾದವನ್ನು ಸೃಷ್ಟಿಸುತ್ತದೆ ಎಂದು ನನ್ನ ನಿರೀಕ್ಷೆ. ಈ ಬಗ್ಗೆ ಪ್ರಸ್ತಾಪ ಮಾಡಲು ನಿಮ್ಮ ಅಭ್ಯಂತರವೇನೂ ಇಲ್ಲವಷ್ಟೇ’ ಎಂದು ಕೇಳಿದರಂತೆ. ಬಾನು ಮುಷ್ತಾಕ್ ಅವರಿಗೆ ಆಗ ‘ಆವರಣ’ದ ಹೂರಣವೇನು ಎಂಬುದು ಗೊತ್ತಿರಲಿಲ್ಲವಂತೆ. ತಮ್ಮ ಅಭ್ಯಂತರವೇನೂ   ಇಲ್ಲ ಎಂದರಂತೆ. (‘ಆವರಣ’ದ ವಸ್ತು ಏನು ಎಂದು  ಮುಂಚೆಯೇ ತಿಳಿದಿದ್ದರೆ ಏನೆಂದು ಹೇಳುತ್ತಿದ್ದರೋ?!  ಈ ಲೇಖನದಲ್ಲಿ ಭೈರಪ್ಪನವರು ತಮ್ಮ ಮನೆಯಲ್ಲಿ ಐದಾರು ದಿನಗಳಿದ್ದ ವಿಷಯವನ್ನು ಬಹಿರಂಗಪಡಿಸುತ್ತಿದ್ದರೋ?! ಇದು ನಮ್ಮ ನಮ್ಮ ಊಹೆಗೆ ಬಿಟ್ಟ ವಿಷಯ. ಇರಲಿ)  ಆದರೂ ಸಹ ಭೈರಪ್ಪನವರು ಬಾನು ಮುಷ್ತಾಕ್ ಅವರ ಹೆಸರನ್ನು ಪ್ರಸ್ತಾಪಿಸದೆ ಕೇವಲ ‘ಸೋದರಿ ಲೇಖಕಿ’ ಎಂದಷ್ಟೇ ಅವರಿಗೆ ಕೃತಜ್ಞತೆ ಸೂಚಿಸಿದ್ದಾರೆ. ಭೈರಪ್ಪನವರು ಊಹಿಸಿದಂತೆ ‘ಆವರಣ’ ಸಾಕಷ್ಟು ವಾದ ವಿವಾದಕ್ಕೆ ಕಾರಣವಾಯಿತು. ಅದನ್ನು ನಿಷೇಧಿಸಬೇಕು , ಮುಟ್ಟುಗೋಲು ಹಾಕಿಕೊಳ್ಳಬೇಕು ಎಂಬ ಒತ್ತಾಯಗಳೂ ಬಂದವು. ಬಾನು ಮುಷ್ತಾಕ್ ಅವರಿಗೆ ಆಗ ಭೈರಪ್ಪನವರು ತಮ್ಮನ್ನು ದೂರವಾಣಿಯಲ್ಲಿ ಸಂಪರ್ಕಿಸಿದ ವಿಷಯದ ಅಂತರಾಳ ಹೊಳೆದು ಭೈರಪ್ಪನವರಿಗೂ ಸಹ ‘ಆವರಣ’ದ ನಾಯಕಿ ಲಕ್ಷ್ಮಿ ಆಲಿಯಾಸ್ ರಜಿಯಾಳ ಕೃತಿಗೆ ಆದಂತೆ ತಮ್ಮ ಕೃತಿಯ ನಿಷೇಧ,ಪೋಲಿಸರಿಂದ ಬಂಧನ,ಜೈಲು ಇವೆಲ್ಲಾ ಆಗಿ ತಾವು ಹುತಾತ್ಮರಾಗಬೇಕೆಂಬ ಆಸೆಯಿತ್ತು. ಆದರೆ ಆಗಲಿಲ್ಲ ಎಂದು ಬೇಸರವಾಗಿದೆ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಬಾನು ಮುಷ್ತಾಕ್ ಅವರಿಗೆ ‘ಆವರಣ’ದ ವಸ್ತು ವಿಷಯದ ಬಗ್ಗೆ ಅಭಿಪ್ರಾಯ ಭೇದವಿರಲಿ; ಅದು ಸಹಜವೆನಿಸುತ್ತದೆ. ಆದರೆ ಸೋದರಿ ಲೇಖಕಿ ಎಂದು ಕರೆದ ಒಬ್ಬ  ಹಿರಿಯ ಸಾಹಿತಿಗೆ  ಜೈಲಿನಲ್ಲಿರುವ ಪ್ರಸಂಗ ಬರಲಿ ಎಂಬ ಆಸೆಯಿತ್ತು ,, ಆ ಮೂಲಕ ಹುತಾತ್ಮ ಆಗುವ ಬಯಕೆ ಇತ್ತು, ಆದರೆ ಆಗಲಿಲ್ಲವಲ್ಲ ಎಂದು ಕೊರಗುತ್ತಿದ್ದಾರೆ ಇತ್ಯಾದಿ ಮಾತುಗಳನ್ನು ಬರೆಯುವುದು ಮಾನವೀಯತೆ ಅಲ್ಲ ಎಂದಷ್ಟೇ ಹೇಳಬಹುದು.

ಈ ವಿಮರ್ಶಾಸಂಕಲನದಲ್ಲಿ ಯು ಆರ್ ಅನಂತಮೂರ್ತಿ ಅವರ ಎರಡು ಲೇಖನಗಳಿವೆ. (೧) ಆವರಣದ ಬಗ್ಗೆ ಯು ಆರ್ ಅನಂತಮೂರ್ತಿ ಮಾಡಿದ ಭಾಷಣದ ಸಾರಾಂಶ (೨) ಭೈರಪ್ಪನವರ ಕಥನ ಕಲೆ. ಮೊದಲನೆಯದರಲ್ಲಿ ‘ಆವರಣ’ದ ಬಗ್ಗೆ ಲೋಕಾಭಿರಾಮವಾಗಿ ಮಾಡಿದ ಭಾಷಣದ ಜತೆಗೆ ಅನಂತಮೂರ್ತಿ ಮತ್ತು ಭೈರಪ್ಪನವರ ನಡುವೆ  ಈ ಹಿಂದೆ ಇದ್ದ ಹಾರ್ದಿಕ ಸಂಬಂಧ, ಇತರೆ   ಕೆಲವು ವೈಯಕ್ತಿಕ ವಿಷಯಗಳ ಬಗೆಗಿನ ವಿವರಣೆಯಿದೆ. ಇದರ ಬಗ್ಗೆ ಭೈರಪ್ಪನವರು ತಮ್ಮ  ಆತ್ಮಕಥೆ ‘ಭಿತ್ತಿ’ಯಲ್ಲಿ ಸಾಕಷ್ಟು ವಿವರವಾಗಿ ಬರೆದಿದ್ದಾರೆ. ಹೀಗಾಗಿ ಅನಂತಮೂರ್ತಿಯವರು  ನಮ್ಮ ನಡುವೆ ಇಲ್ಲದ ಸದ್ಯದ ಸನ್ನಿವೇಶದಲ್ಲಿ ಆ ಬಗ್ಗೆ ಮಾತಾಡುವುದು ನನ್ನ ಮನಸ್ಸಿಗೆ ಇಷ್ಟವಿಲ್ಲ. ಎರಡನೇ ಲೇಖನ ಭೈರಪ್ಪನವರ ‘ಗ್ರಹಣ’ ಕಾದಂಬರಿಗೆ ಸಂಬಂಧಿಸಿದ್ದು. ‘ಆವರಣ’ಕ್ಕಲ್ಲ. ಈ ಲೇಖನದ ಬಗ್ಗೆಯೂ ಭೈರಪ್ಪನವರ ‘ನಾನೇಕೆ ಬರೆಯುತ್ತೇನೆ?’ ಕೃತಿಯಲ್ಲಿ ಸಾಕಷ್ಟು ವಿವರಗಳು ಇವೆ. ಅವುಗಳ ಬಗ್ಗೆ ಪುನಃ ನಾನು  ಪ್ರಸ್ತಾಪಿಸುವುದು ಅನವಶ್ಯ ಎಂದು ಭಾವಿಸಿದ್ದೇನೆ. .

                                                                      %%%%%

ಆವರಣ ಮಾಧ್ಯಮ-ಮಂಥನ: ಸಂಪಾದಕರು – ಬಿ ಎಸ್ ಚಂದ್ರಶೇಖರ

ಈ ಕೃತಿಯಲ್ಲಿ ಕನ್ನಡ  ಮತ್ತು ಇಂಗ್ಲಿಶ್ ಪತ್ರಿಕೆಗಳಲ್ಲಿ ‘ಆವರಣ’ ಕಾದಂಬರಿ ಕುರಿತಂತೆ ಪ್ರಕಟವಾದ ವಿಮರ್ಶೆಗಳ ಜತೆಗೆ ಭೈರಪ್ಪನವರ ಒಂದು ಸಂದರ್ಶನವೂ ಇದೆ. ಈ ಕೃತಿಯಲ್ಲಿನ ಕೆಲವು  ಮುಖ್ಯ ಅಂಶಗಳನ್ನು,ಉಲ್ಲೇಖಗಳನ್ನು ಎನ್ ಎಸ್ ಶಂಕರ್ ಅವರ ‘ಆವರಣ’ ಅನಾವರಣ ಮತ್ತು ಗೌರಿ ಲಂಕೇಶರ ‘ಆವರಣ’ಎಂಬ ವಿ-ಕೃತಿ’ಯ ಬಗ್ಗೆ ಈ ಹಿಂದೆ  ‘ನಿಲುಮೆ’ಯಲ್ಲಿ ಪ್ರಕಟವಾದ ಮುಖಾಮುಖಿಯಲ್ಲಿ ಪ್ರಸ್ತಾಪಿಸಲಾಗಿದೆ. ಅವುಗಳನ್ನು ಬಿಟ್ಟರೆ ಮತ್ತೆ ಚರ್ಚೆ ಮಾಡುವಂತಹುದೇನೂ ಉಳಿದಿಲ್ಲ. ‘ಜೋಗಿ’  ಅವರ ‘ಆವರಣ’ ದಾಟಿದ ಜಗಳ ಎಂಬ ಲೇಖನ ವಿಶಿಷ್ಠವಾಗಿದೆ. ಜನಪ್ರಿಯ ಸಾಹಿತಿ,ಜನಪ್ರಿಯ ಸಾಹಿತ್ಯ, ಸಾಹಿತ್ಯದಲ್ಲಿ ಶ್ರೇಷ್ಠತೆ, ಅಭಿವ್ಯಕ್ತಿ ಸ್ವಾತಂತ್ರ್ಯ, ಬುದ್ಧಿಜೀವಿಗಳ ವರಸೆಗಳು ಇವುಗಳ ಬಗ್ಗೆ  ಓದುಗರು ಒಂದಲ್ಲ ಒಂದು ಬಾರಿ  ಯೋಚನೆ ಮಾಡುವಂತಹ ವಿಷಯಗಳನ್ನು ಈ ಲೇಖನ ಪ್ರಶ್ನೆ-ಉತ್ತರಗಳ ಮಾದರಿಯಲ್ಲಿ ನಮ್ಮ ಮುಂದಿಟ್ಟಿದೆ. ಇದು ಸಾಹಿತ್ಯಾಸಕ್ತರು ತಪ್ಪದೆ ಓದಬೇಕಾದ ಲೇಖನ.

                                                                     %%%%%

ಬುದ್ಧಿಜೀವಿ ವರ್ಸಸ್ ಬೌದ್ಧಿಕ ಸ್ವಾತಂತ್ರ್ಯ : ಅಜಕ್ಕಳ ಗಿರೀಶ ಭಟ್

ಬಹುಶಃ ‘ಆವರಣ’ ಕಾದಂಬರಿಯನ್ನು ಕುರಿತಂತೆ  ಬಂದಿರುವ ಎಲ್ಲಾ ವಿಮರ್ಶೆಗಳು, ವಿಮರ್ಶೆಯ ಕೃತಿಗಳಲ್ಲಿ ಅಜಕ್ಕಳರ ಈ ಕೃತಿ ತುಂಬಾ ಮಹತ್ವದಾಗಿದೆ. ಪ್ರತಿ ಪುಟದಲ್ಲೂ ಸಾಕಷ್ಟು ಅಡಿ ಟಿಪ್ಪಣಿಗಳು, ಒಂದು ನೂರಕ್ಕೂ ಹೆಚ್ಚು ಪರಾಮರ್ಶನ ಸಾಹಿತ್ಯವನ್ನು ಅಭ್ಯಾಸ ಮಾಡಿ ರಚಿಸಿರುವ ಈ ‘ಆವರಣ’ದ ಸಂಕಥನದಲ್ಲಿ ಯಾವುದೇ ಬಿಡು ಬೀಸಾದ ಹೇಳಿಕೆಗಳಿಲ್ಲ. ವಿಮರ್ಶೆಯ ಹೆಸರಿನಲ್ಲಿ ಏನು ಹೇಳಿದರೂ,ಬರೆದರೂ ನಡೆಯುತ್ತದೆ ಎಂಬ ಮನೋಭಾವ ವಿಮರ್ಶಕರಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ಈ ದಿನಗಳಲ್ಲಿ ಅದಕ್ಕೆ ಅಪವಾದವಾಗಿ ಈ ವಿಮರ್ಶಾ ಕೃತಿ ಬಂದಿದೆ. ಒಂಭತ್ತು ಅಧ್ಯಾಯಗಳಲ್ಲಿ ‘ಆವರಣ’ ಕಾದಂಬರಿಯ ಜತೆಗೆ ಭೈರಪ್ಪನವರ ಸಾಹಿತ್ಯ, ಬುದ್ಧಿಜೀವಿಗಳು,ಬೌದ್ಧಿಕ ಸ್ವಾತಂತ್ರ್ಯ,ಅಲ್ಪಸಂಖ್ಯಾತ-ಬಹುಸಂಖ್ಯಾತ ಎಂಬುದು ಕಾಲಾನುಕಾಲಕ್ಕೆ ಹೇಗೆ ಅಪವಾಖ್ಯೆಗೆ ಒಳಗಾಗುತ್ತಿದೆ, ಸತ್ಯ,ಸೌಂದರ್ಯ ಮತ್ತು ಕಲೆ ಇವೆಲ್ಲದರ ಬಗ್ಗೆ ಪಾಂಡಿತ್ಯಪೂರ್ಣವಾದ  ಬರಹಗಳಿವೆ. ವಿಮರ್ಶೆಯ ಹೆಸರಿನಲ್ಲಿ ನಾನಾ ರೀತಿಯ ವಾದಗಳು,ಮೇಲಾಟಗಳು ನಡೆಯುತ್ತಿರುವ  ಸದ್ಯದ ಪರಿಸ್ಥಿತಿಯಲ್ಲಿ  ಈ ಕೃತಿಯ ಅಧ್ಯಯನ ನಮ್ಮನ್ನು ಆ ಎಲ್ಲಾ ಸಮೂಹ ಸನ್ನಿಗಳಿಂದ ಪಾರುಮಾಡಬಹುದಾಗಿದೆ. ‘ಆವರಣ’ ಕಾದಂಬರಿಯ ಮುಖಾಮುಖಿಯಲ್ಲಿ   ಈ ಕೃತಿಯಿಂದಲೂ ಸಾಕಷ್ಟು ಉಲ್ಲೇಖಗಳನ್ನು ಸಂದರ್ಭಾನುಸಾರ ನೀಡಿದ್ದೇನೆ. ಇದಕ್ಕಾಗಿ ನಾನು ಈ ಕೃತಿಯ ಲೇಖಕರಾದ ಅಜಕ್ಕಳರಿಗೆ ಆಭಾರಿಯಾಗಿದ್ದೇನೆ.

——————————————————————————————————————————————————————————

 ಮುಂದಿನ ಮುಖಾಮುಖಿ  “ಕವಲು” ಕಾದಂಬರಿಯನ್ನು ಕುರಿತು 

————————————————————————————————————————————————————————————–

 

 

2 ಟಿಪ್ಪಣಿಗಳು Post a comment
  1. shripad
    ಸೆಪ್ಟೆಂ 26 2014

    very balanced writing. All literature students should read this. Thank you Sriranga.

    ಉತ್ತರ

Trackbacks & Pingbacks

  1. ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೧೦ | ನಿಲುಮೆ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments