ವಿವೇಕಾನಂದರ ವಿಚಾರಗಳು: ಜಾತಿ ಪದ್ಧತಿ
– ಪ್ರೊ.ರಾಜಾರಾಮ ಹೆಗಡೆ
ಇತಿಹಾಸ ಮತ್ತು ಪ್ರಾಕ್ತನ ಶಾಸ್ತ್ರ ವಿಭಾಗ, ಕುವೆಂಪು ವಿಶ್ವವಿದ್ಯಾನಿಲಯ
ವಿವೇಕಾನಂದರ ವಿಚಾರಗಳು: ಸಮಾಜ ಸುಧಾರಣೆ
ಸಾಧಾರಣವಾಗಿ ಇಂದು ವಿವೇಕಾನಂದರ ಕುರಿತು ಒಂದು ಅಭಿಪ್ರಾಯ ಚಾಲ್ತಿಯಲ್ಲಿರುವುದು ಕಂಡುಬರುತ್ತದೆ. ಅದೆಂದರೆ ಅವರು ಜಾತಿ ಪದ್ಧತಿಯ ನಿರ್ಮೂಲನೆಗಾಗಿ ಹೋರಾಡಿದರು ಎಂಬುದು. ವಿವೇಕಾನಂದರ ಕುರಿತ ಈ ಚಿತ್ರವು ಇಂದು ಎಷ್ಟು ಗಟ್ಟಿಯಾಗಿದೆಯೆಂದರೆ ಅವರ ಅನುಯಾಯಿಗಳು ಕೂಡ ಅವರ ಕುರಿತು ಮಾತನಾಡುವಾಗ ಈ ಅಂಶವನ್ನೇ ಮೊದಲು ಒತ್ತಿ ಹೇಳುತ್ತಾರೆ. ವಿವೇಕಾನಂದರ ಪ್ರಸ್ತುತತೆಯನ್ನು ಮನದಟ್ಟು ಮಾಡಿ ಕೊಡುವಾಗ ಅವರು ಹಿಂದೂ ಧರ್ಮದ ಶ್ರೇಷ್ಟತೆಯನ್ನು ಎತ್ತಿಹಿಡಿದಿದ್ದರು ಎನ್ನುವುದು ಅನಿವಾರ್ಯ.
ಆ ಅಂಶವನ್ನಿಟ್ಟುಕೊಂಡೇ ಹಿಂದುತ್ವವಾದಿಗಳು ವಿವೇಕಾನಂದರನ್ನು ತಮ್ಮ ಮೂಲಪುರುಷರೆಂಬಂತೆ ಪರಿಗಣಿಸುತ್ತಾರೆ. ಹಾಗಾಗಿ ಬಹುಶಃ ಇಂದಿನ ಸೆಕ್ಯುಲರ್ ಚಿಂತಕರು ಅವರು ಜಾತಿಯ ಕುರಿತು ಮಾಡಿದ ಟೀಕೆಗಳನ್ನು ಪ್ರಧಾನವಾಗಿ ಇಟ್ಟು ಅವರ ವಿಚಾರಗಳನ್ನು ಪ್ರಸ್ತುತ ಪಡಿಸುವ ಉಪಾಯಗಳನ್ನು ಬೆಳೆಸಿರಲೂ ಬಹುದು. ಒಟ್ಟಿನಲ್ಲಿ ವಿವೇಕಾನಂದರ ಸೆಕ್ಯುಲರೀಕರಣದ ಒಂದು ಭಾಗವಾಗಿ ಈ ಅಭಿಪ್ರಾಯವು ಜನಪ್ರಿಯತೆಯನ್ನು ಪಡೆದಿದೆ.
ಕರ್ನಾಟಕದಲ್ಲಿ ಕುವೆಂಪು ಅವರು ವಿವೇಕಾನಂದರ ವಿಚಾರಗಳಿಂದ ಪ್ರಭಾವಿತರಾಗಿದ್ದರು ಹಾಗೂ ಅವರ ಮೂಲಕ ವಿವೇಕಾನಂದರ ವಿಚಾರಗಳು ಶೂದ್ರ ಚಳವಳಿಯ ಒಂದು ಭಾಗವಾಗಿ ಕನ್ನಡ ಚಿಂತಕರಿಗೆ ಪರಿಚಯಿಸಲ್ಪಟ್ಟಿವೆ. ಹಿಂದುತ್ವದವರು ಬ್ರಾಹ್ಮಣರ ವಕ್ತಾರರು ಎಂದು ಈ ಚಿಂತಕರು ಪರಿಗಣಿಸಿರುವುದರಿಂದ ವಿವೇಕಾನಂದರ ಮೂಲ ಆಶಯವನ್ನು ಇವರು ತಿರುಚಬಹುದೆಂಬ ಆತಂಕ ಕೂಡ ಈ ಚಿಂತಕರಲ್ಲಿದೆ. ಹಾಗಾಗಿ ಕುವೆಂಪು ಅವರು ಹಿಂದೂ ಪರಂಪರೆಯ ಶ್ರೇಷ್ಟತೆಯ ಕುರಿತು ವ್ಯಕ್ತಪಡಿಸುವ ಚಿಂತನೆಗಳನ್ನು ಅವರ ಆರಾಧಕರು ಈಗ ಮೂಲೆಗೆ ಹಾಕಿದಂತಿದೆ. ಅವರನ್ನೂ ಕೂಡ ಇಂದಿನ ಪ್ರಗತಿಪರರ ಆಕಾರಕ್ಕೆ ಒಗ್ಗಿಸುವ ಪ್ರಯತ್ನವೇ ಎದ್ದುಕಾಣುವಂತಿದೆ. ಒಟ್ಟಿನಲ್ಲಿ ವಿವೇಕಾನಂದರು ಜಾತಿವಿರೋಧಿ ಎಂಬ ಚಿತ್ರಣವನ್ನು ತಮಗೆ ಬೇಕಾದಂತೆ ಕಲ್ಪಿಸಿಕೊಳ್ಳಲಾಗುತ್ತಿದೆ. ವಿವೇಕಾನಂದರು ಜಾತಿಯ ಕುರಿತು ಏನು ಹೇಳುತ್ತಾರೆ?
ವಿವೇಕಾನಂದರು ಜಾತಿ ಎನ್ನುವುದು ಒಂದು ನೈಸರ್ಗಿಕ ಸಂಗತಿ ಎನ್ನುತ್ತಾರೆ. ಅದೊಂದು ಸಾಮಾಜಿಕ ಗುಂಪು. ಬೇರೆ ಬೇರೆ ಕೆಲಸಗಳನ್ನು ಮಾಡುವವರು ಹೀಗೆ ಗುಂಪಾಗುವುದು ಸಹಜ. ವಿಶ್ವದ ಎಲ್ಲಾ ಸಮಾಜಗಳಲ್ಲಿಯೂ ಇಂಥ ಗುಂಪುಗಳು ಇವೆ. ಅದು ಇರುವುದು ಒಳ್ಳೆಯದು, ಏಕೆಂದರೆ ಬೇರೆ ಬೇರೆ ವೃತ್ತಿಗಳು ನಡೆಯಬೇಕಾದರೆ ಹಾಗೂ ಅವುಗಳನ್ನು ಆಧರಿಸಿದ ಬದುಕಿನ ಸಮಸ್ಯೆಗಳನ್ನು ಪರಿಹರಿಸಲು ಅದೊಂದೇ ಮಾರ್ಗ. ಮನುಷ್ಯನು ಜಾತಿಯಿಂದ ತಪ್ಪಿಸಿಕೊಳ್ಳಲಾರ. ಆದರೆ ವಿವೇಕಾನಂದರು ಒತ್ತಿ ಹೇಳುವುದೆಂದರೆ, ಒಬ್ಬನು ರಾಜನಿರಬಹುದು, ಮತ್ತೊಬ್ಬನು ಬೂಟು ಹೊಲಿಯುವವನಿರಬಹುದು, ಆ ಕಾರಣಕ್ಕೇ ರಾಜನು ಶ್ರೇಷ್ಠನಾಗಲಾರನು. ರಾಜನಿಗೆ ಬೂಟು ಹೊಲಿಯಲು ಸಾಧ್ಯವೆ? ಹಾಗಿದ್ದಲ್ಲಿ ಅವನು ಹೇಗೆ ಬೂಟು ಹೊಲಿಯುವವನಿಗಿಂತ ಶ್ರೇಷ್ಠ? ಹಾಗಾಗಿ ಈ ಶ್ರೇಷ್ಠ ಕನಿಷ್ಠಗಳು ಹಾಗೂ ಅದರ ಹೆಸರಿನಲ್ಲಿ ದಮನ, ಇವೆಲ್ಲವೂ ಅಳಿಯಲೇಬೇಕು. ಹಾಗಾಗಿ ಭಾರತದಲ್ಲಿ ಜಾತಿ ಇರುವುದೇ ಸಮಸ್ಯೆಯಲ್ಲ, ಅವುಗಳ ನಡುವೆ ಮೇಲು ಕೀಳು ಭಾವನೆಗಳು ಹಾಗೂ ದಬ್ಬಾಳಿಕೆಗಳು ಇರುವುದು ಸಮಸ್ಯೆ ಎಂಬುದಾಗಿ ವಾದಿಸುತ್ತಾರೆ.
ವಿವೇಕಾನಂದರು ತಾವು ಸಮಾಜಸುಧಾರಕರೂ ಅಲ್ಲ, ಜಾತಿ ವಿರೋಧಿಗಳೂ ಅಲ್ಲ ಎನ್ನುತ್ತಾರೆ. ನಿಮಗೆ ಬೇಕಾದ ಜಾತಿಯಲ್ಲಿ ಇರಿ ಆದರೆ ಆ ಕಾರಣಕ್ಕೆ ಮತ್ತೊಂದು ಜಾತಿಯನ್ನು ದ್ವೇಷಿಸಬೇಡಿ. ಮತೊಬ್ಬ ಮನುಷ್ಯನನ್ನು ಪ್ರೀತಿಸುವುದು ಮುಖ್ಯ. ಸಮಾಜ ಸುಧಾರಕರು ಏನು ಮಾಡುತ್ತಿದ್ದಾರೆಂದರೆ ಜಾತಿಗಳು ಹೋಗಬೇಕೆಂಬುದಾಗಿ ಹೋರಾಡುತ್ತ ಭಾರತೀಯ ಸಮಾಜದ ಮೇಲೆ, ಹಾಗೂ ಅದನ್ನು ಅನುಸರಿಸುತ್ತಿರುವ ಮೇಲು ಜಾತಿಗಳ ಮೇಲೆ ದ್ವೇಷದ ಮಳೆಗರೆಯುತ್ತಿದ್ದಾರೆ. ನಮ್ಮ ಸಮಾಜದಲ್ಲಿ ಕೆಟ್ಟ ಪದ್ಧತಿಗಳಿವೆ ಎಂಬುದನ್ನು ಸಣ್ಣ ಮಗುವೂ ಬಲ್ಲದು. ಆ ಕಾರಣಕ್ಕೆ ಭಾರತೀಯ ಸಮಾಜ ರಚನೆಯನ್ನೇ ಟೀಕಿಸುವುದು ಸರಿಯಲ್ಲ. ನಮ್ಮ ಸಾಮಾಜಿಕ ಸಂಸ್ಥೆಗಳು, ಮಾನವ ಸಮಾಜವನ್ನು ಆನಂದದೆಡೆಗೆ ಒಯ್ಯಲಿಕ್ಕೆ ಉಳಿದೆಲ್ಲವಕ್ಕಿಂತ ಹೆಚ್ಚು ಸಮರ್ಥವಾಗಿವೆ. ಜಗತ್ತಿನಲ್ಲಿ ಬೇರೆ ಯಾವ ದೇಶದಲ್ಲಿಯೂ ಇಷ್ಟು ಒಳ್ಳೆಯ ರಚನೆ ಇಲ್ಲ. ‘ಉಳಿದ ಎಲ್ಲಾ ದೇಶಗಳಲ್ಲಿಯೂ ನಾನು ಸಾಮಾಜಿಕ ಗುಂಪುಗಳನ್ನು ನೋಡಿದ್ದೇನೆ ಆದರೆ ಎಲ್ಲೂ ಅವುಗಳ ಯೋಜನೆ ಮತ್ತು ಉದ್ದೇಶಗಳು ಇಲ್ಲಿಯಷ್ಟು ಉದಾತ್ತವಾಗಿ ಇಲ್ಲ. ಹಾಗಾಗಿ ಭಾರತದ ಅತ್ಯಂತ ಅವೈಚಾರಿಕ ಅಥವಾ ಮೌಢ್ಯ ಎಂದೆನಿಸುವ ಪದ್ಧತಿಗಳ ಕುರಿತು ಕೂಡ ತೆಗಳಬೇಡಿ, ಏಕೆಂದರೆ ಅವು ಕೂಡ ಒಂದಾನೊಂದು ಕಾಲದಲ್ಲಿ ಒಳ್ಳೆಯದಕ್ಕೇ ಇದ್ದಿರಬಹುದು‘ ಎನ್ನುತ್ತಾರೆ ವಿವೇಕಾನಂದರು.
ಅಂದರೆ ವಿವೇಕಾನಂದರು ಭಾರತೀಯ ಸಮಾಜದಲ್ಲಿನ ದುಷ್ಟ ಆಚರಣೆಗಳು ನಿರ್ಮೂಲವಾಗಬೇಕಾದರೆ ಅದರ ಸಮಾಜ ರಚನೆಯನ್ನೇ ನಾಶಮಾಡಬೇಕು ಎಂಬ ಸಮಾಜ ಸುಧಾರಕರ ವಾದವನ್ನು ತೀವ್ರವಾಗಿ ಖಂಡಿಸಿದ್ದರು. ಇಂಥ ವಾದಗಳು ಪಾಶ್ಚಾತ್ಯರ ಸಮಾಜದ ಕುರುಡು ಅನುಕರಣೆಗಳು. ಅದು ಭಾರತಕ್ಕೆ ಒಳ್ಳೆಯದನ್ನು ಮಾಡುವುದಿಲ್ಲ. ಆರ್ಯ ದ್ರಾವಿಡರ ಕುರಿತ ಪಾಶ್ಚಾತ್ಯರ ಸುಳ್ಳು ಸಿದ್ಧಾಂತಗಳು ಶೂದ್ರರನ್ನು ಆರ್ಯರು ಗುಲಾಮರನ್ನಾಗಿ ಮಾಡಿದರು ಎಂಬ ಕಥೆಯನ್ನು ಕಟ್ಟಿವೆ. ಅವೆಲ್ಲ ನಿಜವಾಗಲು ಸಾಧ್ಯವಿಲ್ಲ. ಪಾಶ್ಚಾತ್ಯ ಸಮಾಜದ ಸಂಸ್ಥೆಗಳು ಹಾಗೂ ಅವುಗಳ ಹಿನ್ನೆಲೆಯೇ ಬೇರೆ, ನಮ್ಮದೇ ಬೇರೆ. ಅವರ ಆಕಾರಕ್ಕೆ ನಮ್ಮನ್ನು ತಿರುಚಿ, ಹಿಂಸೆಪಟ್ಟುಕೊಂಡು ಒಗ್ಗಿಸಿಕೊಳ್ಳಲಾಗುವುದಿಲ್ಲ.
ವಿವೇಕಾನಂದರೂ ಕೂಡ ಭಾರತದ ಜಾತಿ ಪದ್ಧತಿಯ ಖಂಡನಾರ್ಹ ಆಚರಣೆಗಳನ್ನು ಕುರಿತು ಕಟುವಾಗಿ ಬರೆಯುತ್ತಾರೆ. ಆದರೆ ಈ ಖಂಡನೆಗಳನ್ನು ಜಾತಿ ಪದ್ಧತಿಯ ಕುರಿತು ಈ ಮೇಲೆ ವ್ಯಕ್ತಪಡಿಸಿದ ಅವರ ಅಭಿಪ್ರಾಯದೊಳಗೆ ಇಟ್ಟು ಅರ್ಥೈಸಬೇಕು. ಭಾರತೀಯ ಸಮಾಜದಲ್ಲಿ ಅವರು ಇಂದು ಯಾವ ಬದಲಾವಣೆ ಅಗತ್ಯವಿದೆ ಎನ್ನುತ್ತಾರೆ? ಜಾತಿ ಜಾತಿಗಳ ನಡುವೆ ಇರುವ ತರತಮಗಳು ಬದಲಾಗಬೇಕು, ಅಸ್ಪøಶ್ಯತೆಯಂಥ ಆಚರಣೆಗಳು ತೊಲಗಬೇಕು, ವೇದ ಹಾಗೂ ವೇದಾಂತ ಜ್ಞಾನ ಹಾಗೂ ಸಂಸ್ಕøತಭಾಷೆಯು ಎಲ್ಲರ ಸೊತ್ತಾಗಬೇಕು. ಈ ತರತಮಗಳಿಂದಾಗಿಯೇ ಭಾರತೀಯ ಸಮಾಜದಲ್ಲಿ ಒಡಕು ಮೂಡಿ ಅದು ದುರ್ಬಲವಾಗಿದೆ ಹಾಗೂ ದಾಸ್ಯಕ್ಕೆ ಗುರಿಯಾಗಿದೆ. ಭಾರತೀಯ ಸಂಸ್ಕøತಿಯ ಪುನರುಜ್ಜೀವನಕ್ಕೆ ಈ ಬದಲಾವಣೆ ಅತ್ಯಗತ್ಯ ಎಂಬುದು ಅವರ ಅಭಿಪ್ರಾಯವಾಗಿತ್ತು. ಹಾಗಾಗಿ ಬ್ರಾಹ್ಮಣರು ತಮ್ಮ ಜ್ಞಾನವನ್ನು ಎಲ್ಲರೊಂದಿಗೆ ಹಂಚಿಕೊಳ್ಳಬೇಕು. ಅವರು ಈ ಜ್ಞಾನವನ್ನು ಶೂದ್ರರಿಂದ ಮುಚ್ಚಿಟ್ಟಿದ್ದಾರೆ ಎಂಬ ನೆಲೆಯಲ್ಲಿ ಅವರು ಬ್ರಾಹ್ಮಣರನ್ನು ಟೀಕಿಸುತ್ತಾರೆ.
ವಿವೇಕಾನಂದರ ಪ್ರಕಾರ ಆಧುನಿಕ ಜಾತಿ ವಿರೋಧಿ ದೃಷ್ಟಿಯಿಂದಾಗಿ ನಮ್ಮ ಸಮಾಜದ ಒಡಕು ಮತ್ತೂ ಜಾಸ್ತಿಯಾಗಿದೆ. ಪರಸ್ಪರ ದ್ವೇಷಾಸೂಯೆಗಳು ಹುಟ್ಟಿಕೊಂಡಿವೆ. ಕೆಳ ಜಾತಿಗಳು ಮೇಲ್ಜಾತಿಗಳನ್ನು ದ್ವೇಷಿಸತೊಡಗಿವೆ. ಆದರೆ ಇದರಿಂದ ನಮ್ಮ ಸಂಸ್ಕøತಿಯ ಬೇರು ಶಿಥಿಲವಾಗಿ ನಮ್ಮ ರಾಷ್ಟ್ರವು ದುರ್ಬಲವಾಗುತ್ತವೆ. ಬ್ರಾಹ್ಮಣ ಎಂಬ ಕಲ್ಪನೆ ನಮ್ಮ ಸಂಸ್ಕøತಿಯ ತಳಹದಿ ಎನ್ನುತ್ತಾರೆ. ಬ್ರಹ್ಮಜ್ಞಾನವನ್ನು ಹೊಂದಿ, ಲೌಕಿಕದಿಂದ ನಿವೃತ್ತಿಯಾದವನೇ ನಿಜವಾದ ಬ್ರಾಹ್ಮಣ. ಇಂಥ ಬ್ರಾಹ್ಮಣರು ಭಾರತೀಯ ಅಧ್ಯಾತ್ಮವನ್ನು ಬೆಳೆಸಿಕೊಂಡು ಬಂದರು. ಇತಿಹಾಸ ಕಾಲದಲ್ಲಿ ಬೇರೆ ಬೇರೆ ಜಾತಿಗಳು ಬ್ರಾಹ್ಮಣ ಆಗಿವೆ. ಋಷಿಮುನಿಗಳು ಆಗಿದ್ದಾರೆ. ಭಾರತದಲ್ಲಿ ಯಾವ ಜಾತಿಯಾದರೂ ಬ್ರಾಹ್ಮಣ ಆದರೆ ಅದಕ್ಕೆ ತಡೆಯೊಡ್ಡುವವರು ಯಾರೂ ಇಲ್ಲ. ಪ್ರತೀ ಜಾತಿಯೂ ಪ್ರತ್ಯೇಕ ಗುಂಪಾಗಿದೆ, ಅದಕ್ಕೆ ಯಾರ ಹಂಗೂ ಇಲ್ಲ. ಇಂಥ ಸಮಾಜದಲ್ಲಿ ಕೆಳಜಾತಿಗಳು ಆಧ್ಯಾತ್ಮಿಕ ಶಕ್ತಿಯನ್ನು ಬೆಳೆಸಿಕೊಳ್ಳದಿದ್ದರೆ ಅದು ಅವುಗಳದೂ ತಪ್ಪು. ಸಂಸ್ಕøತ ಕಲಿಯುವುದು ಹಾಗೂ ಬ್ರಾಹ್ಮಣರಾಗುವುದು ಅದಕ್ಕೆ ಮಾರ್ಗ. ಭಾರತದಲ್ಲಿ ತಮ್ಮ ತಮ್ಮ ಉದ್ಧಾರವನ್ನು ವ್ಯಕ್ತಿಗತ ನೆಲೆಯಲ್ಲಿ ಪ್ರತಿಯೊಬ್ಬನೂ ಈ ಮಾರ್ಗದ ಮೂಲಕವೇ ಸಾಧಿಸಬೇಕು. ಭಾರತೀಯರು ಪಾಶ್ಚಾತ್ಯರಂತೆ ಕೇವಲ ಭೌತಿಕ ವ್ಯವಸ್ಥೆಯ ಸುಧಾರಣೆಯಿಂದ ವ್ಯಕ್ತಿಯೊಬ್ಬನಿಗೆ ಸುಖ ಸಿಗುತ್ತದೆ ಎಂಬುದಾಗಿ ನಂಬಿರಲಿಲ್ಲ, ಅವರು ಅದಕ್ಕೂ ಶಾಶ್ವತವಾದ ಸುಖದ ಮಾರ್ಗವನ್ನು ನೀಡಿದ್ದಾರೆ, ಅದನ್ನು ಇಡೀ ಪ್ರಪಂಚವೇ ಅನುಕರಿಸುವುದೊಳ್ಳೆಯದು ಎನ್ನುತ್ತಾರೆ ವಿವೇಕಾನಂದರು.
ಮುಂದುವರಿಯುವುದು…
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ jayakumarcsj@gmail.com
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ
jayakumarcsj@gmail.com