ವಿಷಯದ ವಿವರಗಳಿಗೆ ದಾಟಿರಿ

ಜುಲೈ 29, 2015

5

ಬಿಸಿಯೂಟದಲ್ಲಿ ಕೇಸರೀಬಾತು: ಮುಖ್ಯ ಶಿಕ್ಷಕ ಅಮಾನತು!

‍ನಿಲುಮೆ ಮೂಲಕ

– ಪ್ರವೀಣ್ ಕುಮಾರ್,ಮಾವಿನಕಾಡು

Nilume Sulsuddi - Kesari Baatuಕೋಮಿನಕೋಟೆ: ಕೋಮಿನಕೋಟೆ ತಾಲೂಕಿನ ಊಟೇನಹಳ್ಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಿಸಿಯೂಟದಲ್ಲಿ ಕೇಸರೀಬಾತು ಪತ್ತೆಯಾಗಿದೆ.ಅನಾಮಧೇಯ ಕರೆಯೊಂದರ ಸ್ಪಷ್ಟ ಮಾಹಿತಿಯ ಮೇರೆಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಉನ್ನತ ಪೊಲೀಸ್ ಅಧಿಕಾರಿಗಳು ಶಾಲೆಯ ಮೇಲೆ ದಾಳಿ ನಡೆಸಿ ಸುಮಾರು 8KG ಗೂ ಹೆಚ್ಚು ಕೇಸರೀ ಬಾತನ್ನು ವಶಪಡಿಸಿಕೊಂಡಿದ್ದಾರೆ.ಘಟನೆ ಖಂಡಿಸಿ ಮಕ್ಕಳ ಪೋಷಕರು ಶಾಲೆಯ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.ಅಲ್ಲದೆ ತಮಗೆ ನೀಡಲಾಗುತ್ತಿರುವ ಊಟ ಉತ್ತಮ ಗುಣಮಟ್ಟದ್ದೇ ಆಗಿದ್ದರೂ,ಊಟದಲ್ಲಿ ಪದೇ ಪದೇ ಕೇಸರೀಬಾತು ದೊರೆಯುತ್ತಿತ್ತು ಎಂದು ವಿದ್ಯಾರ್ಥಿಗಳು ಆರೋಪಿದ್ದಾರೆ.ಪ್ರಕರಣದ ರೂವಾರಿಗಳನ್ನು ಆದಷ್ಟೂ ಬೇಗ ಪತ್ತೆ ಹಚ್ಚಿ ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸ್ಥಳೀಯ ಆಡಳಿತ ಹಾಗೂ ಶಾಲಾ ಆಡಳಿತ ಮಂಡಳಿ ಭರವಸೆ ನೀಡಿವೆ.ರಾಜ್ಯ ಕೋಮುವೇದಿಕೆಯ ಪ್ರಮುಖರಾದ ಗಂಜಿ ಕೋಮ್ಲೇಶ್ ಮತ್ತವರ ತಂಡ ಶಾಲೆಯಲ್ಲೇ ಬೀಡುಬಿಟ್ಟಿದ್ದು ಪರಿಸ್ಥಿತಿಯ ಮೇಲೆ ತೀವ್ರ ನಿಗಾ ವಹಿಸಿದೆ.

ಒಂದು ವರ್ಷದ ಹಿಂದೆ ಸರಕಾರೀ ಶಾಲೆಯ ಕಡೆಗೆ ಮಕ್ಕಳನ್ನು ಸೆಳೆಯಲು ಬಿಸಿಯೂಟದ ಜೊತೆಗೆ ಪ್ರತೀ ದಿನವೂ ಒಂದೊಂದು ಬಗೆಯ ಸಿಹಿ ತಿಂಡಿಯನ್ನು ನೀಡಲು ತೀರ್ಮಾನಿಸಲಾಗಿತ್ತು.ಆದರೆ ಕೇಸರಿಬಾತು ಮಕ್ಕಳಲ್ಲಿ ಸುಪ್ತವಾಗಿರುವ ಕೋಮುಭಾವನೆಯನ್ನು ಪ್ರಚೋದಿಸುತ್ತದೆ ಎನ್ನುವ ತಕರಾರು ಒಡ್ಡಿ ಹಲವು ಪ್ರಚಾರವಾದಿಗಳು,ಪರಗತಿಪರ ಚಿಂತಕರು ಹಾಗೂ ಬುದ್ಧಿಜೀವಿಗಳು ಮಕ್ಕಳ ಸಿಹಿತಿಂಡಿಗಳ ಮೆನುವಿನಿಂದ ಕೇಸರೀಬಾತನ್ನು ಹೊರಗಿಡುವಲ್ಲಿ ಯಶಸ್ವಿಯಾಗಿದ್ದರು.ಆದರೆ ಮತ್ತೆ ಕೇಸರಿಬಾತು ಪ್ರತ್ಯಕ್ಷವಾಗಿರುವುದು ಅವರುಗಳನ್ನು ಕೆರಳಿಸಿದ್ದು ಇದೊಂದು ಅಪ್ಪಟ ಕೋಮುವಾದಿಗಳ ಕೃತ್ಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ತವ್ಯಲೋಪದ ಹಿನ್ನೆಲೆಯಲ್ಲಿ ಶಾಲೆಯ ಮುಖ್ಯ ಶಿಕ್ಷಕರನ್ನು ಈಗಾಗಲೇ ಅಮಾನತುಗೊಳಿಸಲಾಗಿದೆ.ಇದೊಂದು ಅತ್ಯಂತ ಸೂಕ್ಷ್ಮ ಪ್ರಕರಣವಾಗಿದ್ದು ಈ ಪ್ರಕರಣದ ಬಗ್ಗೆ ಸಿ.ಓ.ಡಿ.ತನಿಖೆಗೆ ಶಿಫಾರಸು ಮಾಡುವುದಾಗಿ ಶಿಕ್ಷಣ ಸಚಿವರು ಪ್ರತಿಭಟನಾ ನಿರತರಿಗೆ ಆಶ್ವಾಸನೆ ನೀಡಿದ್ದಾರೆ.ಆದರೆ ಈ ಪ್ರಕರಣದ ತನಿಖೆಯ ಹೊಣೆಯನ್ನು G.B.I (ಘೋರಿ ಬ್ಯೂರೋ ಆಫ್ ಇನ್ವೆಸ್ಟಿಗೇಷನ್)ಗೆ ವಹಿಸಬೇಕೆಂದು ಆಗ್ರಹಿಸಿ ಕೋಮು ವೇದಿಕೆಯ ಹದಿಮೂರು ಮಂದಿ ಕಾರ್ಯಕರ್ತರು ಪ್ರತಿಭಟಿಸುತ್ತಿದ್ದಾರೆ.

ಈ ಮಧ್ಯೆ ಸಚಿವರೊಬ್ಬರ ಒಡೆತನದ ಮಾಲ್ ಒಂದರಲ್ಲಿ ಕೇಸರಿ ಖರೀದಿಸಿದ್ದಾಗಿ ಮುಖ್ಯ ಶಿಕ್ಷಕರು ಹೇಳಿಕೆ ನೀಡಿದ್ದು ಚರ್ಚೆಗೆ ಗ್ರಾಸವಾಗಿದ್ದು ಇದೊಂದು ತನಿಖೆಯನ್ನು ದಾರಿ ತಪ್ಪಿಸುವ ತಂತ್ರ ಎಂದು ಪರಗತಿಪರರು ಕಿಡಿಕಾರಿದ್ದಾರೆ.ಬಲಪಂಥೀಯ ನಾಯಕರೊಬ್ಬರು ಕೇಸರಿಯನ್ನು ಉಚಿತವಾಗಿ ಪೂರೈಸಿದ್ದಾರೆಂದು ಅವರುಗಳು ಆರೋಪಿಸಿದ್ದಾರೆ.ಕೇಸರ್ ಬಾಬು ಎಂಬಾತ ಹಲವು ದಿನಗಳಿಂದ ಅದೇ ಶಾಲೆಯ ಸುತ್ತ ಮುತ್ತ ಅನುಮಾನಾಸ್ಪದವಾಗಿ ಓಡಾಡುತ್ತಿದ್ದು ಪ್ರಕರಣ ಬೆಳಕಿಗೆ ಬಂದ ದಿನದಿಂದ ಕಾಣೆಯಾಗಿರುವುದಾಗಿ ಸ್ಥಳೀಯರೊಬ್ಬರು ತಿಳಿಸಿದ್ದಾರೆ.ಈ ಪ್ರಕರಣದಲ್ಲಿ ಆತನ ಪಾತ್ರವೇನಾದರೂ ಇದೆಯೇ ಎನ್ನುವ ಬಗ್ಗೆಯೂ ಸೂಕ್ತ ತನಿಖೆಯಾಗಬೇಕೆಂದು ಅವರು ಒತ್ತಾಯಿಸಿದ್ದಾರೆ.ಈ ಮಧ್ಯೆ ‘ಅನ್ಯಾಯಕ್ಕಾಗಿ ನಾವು’,’ರಾಜ್ಯ ಕೋಮು ವೇದಿಕೆ’,’ಕರ್ನಾಟಕ ಪ್ರಚಾರವಾದೀ ಸಮಿತಿ’,’ಭಾರತೀಯ ಅಜ್ಞಾನ ಸಮೀತಿ’ ಮುಂತಾದ ಹಲವು ಸಂಘಟನೆಗಳು ಸ್ಥಳದಲ್ಲಿ ಪ್ರತಿಭಟನೆ ನಡೆಸುತ್ತಿದ್ದು ಪ್ರಕರಣಕ್ಕೆ ಸಂಬಂಧಿಸಿದ ಎಲ್ಲರನ್ನೂ ಬಂಧಿಸುವವರೆಗೂ ನಮ್ಮ ಹೋರಾಟ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದಿದಿದ್ದಾರೆ.ಸ್ಥಳದಲ್ಲಿ ಉದ್ವಿಗ್ನತೆ ಮುಂದುವರಿದಿದ್ದು ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.

*ವಿ.ಸೂ:ಈ ಸುದ್ದಿಯು ಕೇವಲ ಸುಳ್ಸುದ್ದಿ ಹಾಗೂ ಕಾಲ್ಪನಿಕವಾಗಿದ್ದು,ಕ್ಷುಲ್ಲಕ ಕಾರಣಗಳನ್ನೊಡ್ಡಿ ಪ್ರತಿಭಟಿಸುವವರನ್ನು,ಕೇವಲ ವಿರೋಧಕ್ಕಾಗಿ ವಿರೋಧ ಮಾಡುವವರನ್ನು ನೋಡಿ ಕಲ್ಪಿಸಿಕೊಂಡಿದ್ದಾಗಿರುತ್ತದೆ.ಈ ಸುದ್ದಿಯು ಕೇವಲ ಮನರಂಜನೆಗಾಗಿ ಮಾತ್ರ.

5 ಟಿಪ್ಪಣಿಗಳು Post a comment
  1. Shiva Prakash
    ಜುಲೈ 29 2015

    ವಂದನೆಗಳು ನಿಮಗೆ ಇ ಸೊಗಸಾದ ಲೇಖನಕೆ

    ಉತ್ತರ
  2. ಸ್ಪಂದನ ರಾಮ್
    ಜುಲೈ 29 2015

    ಕೇಸರಿಬಾತು ಸಾದಿಷ್ಟಕರವಾಗಿತ್ತು

    ಉತ್ತರ
  3. anonymous
    ಜುಲೈ 29 2015
  4. Naveen gangotri
    ಜುಲೈ 29 2015

    Enjoyed ha 🙂

    ಉತ್ತರ
  5. valavi
    ಜುಲೈ 30 2015

    tumba nakke thanks

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments