ಶತಮಾನ ಕಂಡ ಕಾದಂಬರಿ: ಮಾಡಿದ್ದುಣ್ಣೋ ಮಹಾರಾಯ
– ರಾಘವೇಂದ್ರ ಅಡಿಗ ಎಚ್ಚೆನ್
ಸ್ನೇಹಿತರೇ ನಾನಿಲ್ಲಿ ಹೇಳ ಹೊರಟಿರುವ ಕಾದಂಬರಿ ಕನ್ನಡ ಕಾದಂಬರಿಗಳಲ್ಲೆಲ್ಲಾ ಅತ್ಯಂತ ಪ್ರಮುಖವಾದದ್ದು ಹಾಗೂ ಒಂದು ಶತಮಾನವನ್ನು ಕಂಡಂತದೂ ಆಗಿದೆ. ಕನ್ನಡದಲ್ಲಿ ಕಾದಂಬರಿ ಪ್ರಕಾರವನ್ನು ಜನಪ್ರಿಯಗೊಳಿಸಿದವರು ಕಾರಂತರು, ಅ.ನ.ಕೃ. ಮುಂತಾದವರಾದರೆ ಕಾದಂಬರಿ ಪ್ರಕಾರವನ್ನು ಹುಟ್ಟುಹಾಕಿದವರು ಗುಲ್ವಾಡಿ ವೆಂಕಟರಾವ್ (ಇಂದಿರಾಬಾಯಿ-ಕನ್ನಡದ ಮೊದಲ ಸಾಮಾಜಿಕ ಕಾದಂಬರಿ) ಮೈಸೂರು ಸೂರ್ಯನಾರಾಯಣ ಭಟ್ಟ ಪುಟ್ಟಣ್ಣ (ಎಂ.ಎಸ್. ಪುಟ್ಟಣ್ಣ) ನವರುಗಳು. ಇದರಲ್ಲಿ ಎಂ.ಎಸ್. ಪುಟ್ಟಣ್ಣನವರು ಬರೆದ ಪ್ರಥಮ ಕಾದಂಬರಿ-ಮಾಡಿದ್ದುಣ್ಣೋ ಮಹಾರಾಯ (1915) ಗೆ ಇದೀಗ ಶತಮಾನದ ಸಂಭ್ರಮ. ಈ ಹಿನ್ನೆಲೆಯಲ್ಲಿ ಕೃತಿಕಾರರಾದ ಪುಟ್ಟಣ್ಣ ಹಾಗೂ ಕೃತಿಯ ಕುರಿತಂತೆ ನಾಲ್ಕು ಮಾತುಗಳನ್ನು ನಿಮ್ಮೊಡನೆ ಹಂಚಿಕೊಳ್ಳುವ ಇರಾದೆ ನನ್ನದು.
ಅನೇಕರಿಗೆ ಇದಾಗಲೇ ಪುಟ್ಟಣ್ಣನವರ ಬಗೆಗೆ ತಿಳಿದಿರಬಹುದು ಆದರೂ ಇಲ್ಲಿ ಅವರ ಜೀವನದ ಕುರಿತಂತೆ ಸ್ವಲ್ಪ ತಿಳಿದುಕೊಂಡು ಬಳಿಕ ಕಾದಂಬರಿಯ ಕುರಿತು ವಿಚಾರ ಮಾಡೋಣ
ಪುಟ್ಟಣ್ಣ (ಲಕ್ಷ್ಮೀನರಸಿಂಹ ಶಾಸ್ತ್ರಿ)ನವರು ಹುಟ್ಟಿದ್ದು ಮೈಸೂರಿನಲ್ಲಿ (21-11-1854). ತಂದೆ ಸೂರ್ಯನಾರಾಯಣ ಭಟ್ಟ, ತಾಯಿ ಲಕ್ಷ್ಮಮ್ಮ. ಹುಟ್ಟಿದ ಹತ್ತು ದಿವಸದಲ್ಲೇ ತಾಯಿಯನ್ನು ಕಳೆದುಕೊಂಡು ಬೆಳದದ್ದು ಸೋದರ ಮಾವನ ಮನೆಯಲ್ಲಿ. ಪ್ರಾರಂಭಿಕ ವಿದ್ಯಾಭ್ಯಾಸ ಖಾಸಗಿ ಮಠಗಳಲ್ಲಿ ಪೂರೈಸಿದ ಪುಟ್ಟಣ್ಣನವರು ಬಳಿಕ ರಾಜಾ ಸ್ಕೂಲಿನಲ್ಲಿ (ಇಂದಿನದ ಮಹಾರಾಜಾ ಕಾಲೇಜು) ಎಫ್. ಎ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಕೋಲಾರದ ಪ್ರೌಢಶಾಲೆಯಲ್ಲಿ ಸಹ ಅಧ್ಯಾಪಕರಾಗಿ ನೇಮಕಗೊಂಡರು.ಮದರಾಸಿನಲ್ಲಿ ಬಿ.ಎ. ಪದವಿ ವ್ಯಾಸಂಗವನ್ನು ಮುಗಿಸಿದ ಇವರು ಅಧ್ಯಾಪಕ ಪದವಿ ಬಿಟ್ಟು ಬೆಂಗಳೂರಿನ ಚೀಫ್ ಕೋರ್ಟಿನಲ್ಲಿ (ಈಗಿನ ಹೈಕೋರ್ಟಿನಲ್ಲಿ) ಭಾಷಾಂತರಕಾರರಾಗಿ ದುಡಿದರು. 1867 ರಲ್ಲಿ ಅವರನ್ನು ಚಿತ್ರದುರ್ಗದ ಅಮಲ್ದಾರನ್ನಾಗಿ ನೇಮಿಸಲಾಯಿತು. ಮುಂದೆ ನೆಲಮಂಗಲ, ಚಾಮರಾಜನಗರ, ಬಾಗೇಪಲ್ಲಿ, ಮುಳಬಾಗಿಲು, ಹೊಸದುರ್ಗಗಳಲ್ಲಿ ಅಮಲ್ದಾರರಾಗಿ ಕಾರ್ಯ ನಿರ್ವಹಿಸಿದರು. ಬೆಂಗಳೂರಿನ ತೆರಿಗೆದಾರರ ಸಂಘಟಕರಾಗಿದ್ದ ಅವರು ಆ ದಿನಗಳಲ್ಲಿಯೇ ದಾಖಲೆಗಳನ್ನು ಕನ್ನಡದಲ್ಲಿ ಮೂಡಿಸಲು ಕಾರಣರಾದರು. ಮತ್ತಷ್ಟು ಓದು 
ಸುಳ್ಸುದ್ದಿ : ಎಲ್ಲಾ ಡಿ-ದರ್ಜೆಯ ಹುದ್ದೆಗಳನ್ನು ರದ್ದು ಮಾಡಲು ಸರ್ಕಾರದ ಮಹತ್ವದ ನಿರ್ಧಾರ
– ರಾಘವೇಂದ್ರ ಸುಬ್ರಹ್ಮಣ್ಯ
ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳ ಸಲಹೆಕಾರರು ಇತ್ತೀಚೆಗೆ ಕೊಟ್ಟ ಸಲಹೆಯೊಂದನ್ನು ಅಗತ್ಯಕ್ಕಿಂತ ಗಂಭೀರವಾಗಿ ಪರಿಗಣಿಸಿರುವ,ಘನಸರ್ಕಾರವು,ಎಲ್ಲಾ ಡಿ-ದರ್ಜೆಯ ಗುಮಾಸ್ತರ ಹುದ್ದೆಗಳನ್ನು ರದ್ದು ಮಾಡಲು ನಿರ್ಧರಿಸಿದ್ದಾರೆ.ಇತ್ತೀಚೆಗೆ ಸಮಾರಂಭವೊಂದರಲ್ಲಿ ಸಲಹೆಕಾರರು,”ಜಮೀನ್ದಾರರು ಹೆಚ್ಚಿನ ಜಮೀನಿನ ಹಿಡುವಳಿಯಿಟ್ಟುಕೊಂಡು, ಕೂಲಿ ಕಾರ್ಮಿಕರಿಲ್ಲ ಎಂದು ಗೋಳಾಡುವ ಬದಲು, ಎಷ್ಟೋ ಬೇಕೋ ಅಷ್ಟಿಟ್ಟುಕೊಂಡು, ಉಳಿದ ಹೆಚ್ಚಿನ ಜಮೀನಿದ್ದರೆ ಬಡವರಿಗೆ ಕೊಟ್ಟರೆ, ಕೂಲಿಕಾರ್ಮಿಕರ ಸಮಸ್ಯೆ ಬರುವುದಿಲ್ಲ. ಬಡವರು ಕೂಲಿ ಕೆಲಸಕ್ಕೆ ಬರಬೇಕೆಂಬ ಧೋರಣೆಯೇ ಅಮಾನುಷ ಮತ್ತು ಅಮಾನವೀಯವಾದದ್ದು” ಎಂದಿದ್ದರು.
ಈ ಸುದ್ಧಿಯನ್ನು ಕೇಳಿ, ಅದೇ ಮಟ್ಟದಲ್ಲಿ ಯೋಚಿಸುತ್ತಿದ್ದ ಮು.ಮಂಗಳಿಗೆ ಸದನದಲ್ಲಿ ತೂಕೂಡಿಸುತ್ತಿದ್ದಾಗ ಹೊಳೆದ ಆಲೋಚನೆಯ ಪ್ರಕಾರ, “ಸರ್ಕಾರ ಎಲ್ಲರನ್ನೂ ಸಮನಾಗಿ ನೋಡಬೇಕು. ಸಿ ದರ್ಜೆ, ಡಿ ದರ್ಜೆ ಎಂದು ವಿಂಗಡಿಸುವುದೇ ಅಮಾನುಷ ಹಾಗೂ ಅಮಾನವೀಯ. ಸರ್ಕಾರವೇ ಹೀಗೆ ಮಾಡಿದರೆ, ಪ್ರಜೆಗಳಿನ್ನೆಷ್ಟರ ಮಟ್ಟಿಗೆ ಅಮಾನವೀಯವಾಗಿ ವರ್ತಿಸಬಹುದು!? ಆದ್ದರಿಂದ ಎಲ್ಲಾ ಡಿ-ದರ್ಜೆಯ ನೌಕರರನ್ನೂ ತಕ್ಷಣವೇ ಸಿ-ದರ್ಜೆಗೆ, ಎಲ್ಲಾ ಸಿ-ದರ್ಜೆಯ ನೌಕರರನ್ನು ಬಿ-ದರ್ಜೆಗೆ, ಹಾಗೇ ಮುಂದುವರಿದು ಎಲ್ಲಾ ಸೂಪರಿಂಟೆಂಡೆಂಟುಗಳನ್ನು ಕೆ.ಎ.ಎಸ್ ದರ್ಜೆಗೆ ಏರಿಸುವ ಆಲೋಚನೆಯನ್ನು ಗಂಭೀರವಾಗಿ ಪರಿಗಣಿಸುತ್ತಿದೆಯೆಂದು, ಮು.ಮಂಗಳ ವಕ್ತಾರ ತಿಳಿಸಿದ್ದಾರೆ. ಇದರ ಪರಿಣಾಮವಾಗಿ, ಈ ವರ್ಷದಿಂದ ಡಿ-ದರ್ಜೆಯ ನೌಕರರೇ ಇಲ್ಲದಂತಾಗುತ್ತಾರೆ. ಸರ್ಕಾರ ಮತ್ತು ಸಮಾಜದಲ್ಲಿ ಜನರು ಒಂದು ಹೆಜ್ಜೆ ಮೇಲೇರಿದಂತಾಗುತ್ತದೆ. ಈ ಯೋಜನೆಯ ಮುಂದಿನ ಹಂತವಾಗಿ ಎಲ್ಲಾ ಸಿ-ದರ್ಜೆಯವರನ್ನು ಬಿ-ದರ್ಜೆಗೇರಿಸಿ, ಬಿ-ದರ್ಜೆಯನ್ನು ಎ-ದರ್ಜೆಗೇರಿಸಿ, ಕೊನೆಯ ಹಂತವಾದ ಕೆ.ಎ.ಎಸ್ ಅಧಿಕಾರಿಗಳನ್ನು ಐ.ಎ.ಎಸ್ ಅಧಿಕಾರಿಗಳನ್ನಾಗಿ ಮಾಡಲಾಗುವುದು. ಇದಕ್ಕೆ ಕೇಂದ್ರ ಸರ್ಕಾರ ಅಡ್ಡಿಬಂದಲ್ಲಿ ಸುಗ್ರೀವಾಜ್ಞೆಯೊಂದನ್ನು ಹೊರಡಿಸಿ, ಕೇಂದ್ರಸರ್ಕಾರವನ್ನೇ ಅಮಾನ್ಯಗೊಳಿಸುವ ಬಗ್ಗೆಯೂ, ಸರ್ಕಾರಿ ವಕೀಲರು ಅಸಂವಿಧಾನಾತ್ಮಕ ಮಾರ್ಗಗಳನ್ನು ಹುಡುತಿದ್ದಾರೆ. ಈ ರೀತಿ ಸಮಾಜದಲ್ಲಿನ ಎರಡು ಹಂತನ ಅಸಮಾನತೆಯನ್ನು ತೊಡೆದುಹಾಕಿದ ಕೀರ್ತಿ ನಮ್ಮ ಸರ್ಕಾರಕ್ಕೆ ಸೇರಲಿದೆಯೆಂದು ವಕ್ತಾರರು ತಿಳಿಸಿದ್ದಾರೆ.”
ಮತ್ತಷ್ಟು ಓದು 
“ಪೂರ್ವಾಗ್ರಹ” ಕುರಿತ ಪೂರ್ವಗ್ರಹ
– ಡಾ. ಶ್ರೀಪಾದ ಭಟ್,ಸಹಾಯಕ ಪ್ರಾಧ್ಯಾಪಕ
ಡಾ. ಡಿ ವಿ ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರ, ತುಮಕೂರು ವಿವಿ
ಆಗಸ್ಟ್ ೨ ರಂದು ಬಿಡುಗಡೆಯಾದ ‘ಕೊಟ್ಟ ಕುದುರೆಯನೇರಲರಿಯದೆ…'(ವಚನಗಳ ಅಧ್ಯಯನದಲ್ಲಿ ಆಧುನಿಕರ ಪೂರ್ವಗ್ರಹಗಳು ಮತ್ತು ಅವುಗಳಾಚೆಗೆ) ಕೃತಿಯ ಶೀರ್ಷಿಕೆಯಡಿಯ ವಿವರಣ ವಾಕ್ಯ ಸಾಲಿನಲ್ಲಿ ಕಾಣಿಸಿದ “ಪೂರ್ವಗ್ರಹ” ಎಂಬ ಪದವನ್ನು ಕುರಿತು ಪೂರ್ವಾಗ್ರಹ ಪದ ಪರಿಚಯವಿರುವ ಬಹಳಷ್ಟು ಜನ ಇಲ್ಲೊಂದು ದೋಷವಾಗಿದೆ ಎಂದು ಹೇಳುತ್ತಿದ್ದಾರೆ.
ಇಲ್ಲ. ಪೂರ್ವಗ್ರಹ ಎಂಬುದೇ ವ್ಯಾಕರಣಾತ್ಮಕವಾಗಿ ಸರಿ.
ಇದು ಪೂರ್ವ+ಗ್ರಹಿಕೆ ಎಂಬುದರ ಸಂಕ್ಷಿಪ್ತ ರೂಪ. ಪೂರ್ವ ಮತ್ತು ಉತ್ತರ ಪದಗಳೆರಡೂ ಮುಖ್ಯವಾಗಿ ಮೂರನೆಯದನ್ನು ಹೇಳುವ ಕರ್ಮಧಾರಯ ಸಮಾಸದ ಪದ. ವ್ಯಕ್ತಿ, ವಿಷಯ ಇತ್ಯಾದಿಗಳನ್ನು ಕುರಿತು ಮೊದಲೇ ಒಂದು ಅಭಿಪ್ರಾಯ, ನಿರ್ಧಾರಕ್ಕೆ ಬರುವುದು ಎಂಬುದು ಇದರ ಅರ್ಥ. ಎಲ್ಲರೂ ಸಾಮಾನ್ಯವಾಗಿ ಭಾವಿಸಿದಂತೆ “ಪೂರ್ವ+ಆಗ್ರಹ” ಕೂಡಿ ಆದುದಲ್ಲ. ಅಷ್ಟಕ್ಕೂ “ಆಗ್ರಹಿಸುವ” ಅರ್ಥ ಈ ಪದ ಪ್ರಯೋಗದಲ್ಲಿ ಬರುವ ಪ್ರಶ್ನೆಯೇ ಇಲ್ಲ.
ಮತ್ತಷ್ಟು ಓದು 
“ಕೊಟ್ಟಕುದುರೆಯನೇರಲರಿಯದೆ…” ಪುಸ್ತಕ ದೊರೆಯುವ ಮಾಹಿತಿ
೨೦೧೩ರಲ್ಲಿ ನಡೆದ “ವಚನ ಸಾಹಿತ್ಯ ಮತ್ತು ಜಾತಿ ವ್ಯವಸ್ಥೆ”ಯ ಚರ್ಚೆ,ರಾಜ್ಯದ ಪ್ರಗತಿಪರರ ನಿದ್ದೆಗೆಡಿಸಿದ್ದು ಸುಳ್ಳಲ್ಲ.ಮೊದಲಿಗೆ ಈ ಜನರು ಪತ್ರಿಕೆಯಲ್ಲಿ ಚರ್ಚೆಯೇ ಆಗದಂತೆ ತಡೆಯಲು ಪ್ರಯತ್ನಿಸಿದರು.ಅದೂ ಸಫಲವಾಗದಿದ್ದಾಗ,ಯಾವ CSLC ಎಂಬ ಸಂಶೋಧನಾ ಕೇಂದ್ರದಿಂದಾಗಿ ಈ ಚರ್ಚೆ ಶುರುವಾಯಿತೋ,ಆ ಕೇಂದ್ರವನ್ನೇ ಮುಚ್ಚಿಸುವ ಮೂಲಕ ಗೆದ್ದೆವೆಂದು ಬೀಗಿದರು ಈ ಬುದ್ಧಿಜೀವಿಗಳು. ಪಾಪ! ಸೂರ್ಯನಿಗೆ ಅಡ್ಡಲಾಗಿ ಕೊಡೆಹಿಡಿದು ಭೂಮಿಗೆ ಬೆಳಕು ಬರದಂತೆ ತಡೆದೆವು ಎಂಬ “ಬುದ್ಧಿಜೀವಿಗಳ ಮೌಢ್ಯ”! ಸಂಶೋಧನಾ ಕೇಂದ್ರ ಮುಚ್ಚಿಸಿದರೂ,ಚಿಂತನೆಯನ್ನು ನಿಲ್ಲಿಸಲು ಸಾಧ್ಯವಿಲ್ಲವೆಂದು ಅವರಿಗೆ ಅರಿವಾಗಲೇ ಇಲ್ಲ.ಅರಿವಾಗಿದ್ದರೆ ಅವರು ನಿಲುಮೆಯ ಮೇಲೆ ಮುಗಿಬೀಳುತ್ತಲಿರಲಿಲ್ಲ.
ಈ ಜನರು ಅಷ್ಟೆಲ್ಲಾ ಹರಸಾಹಸ ಪಟ್ಟು ನಿಲ್ಲಿಸಿದ್ದ ಆ ಚರ್ಚೆ ಮತ್ತು ವಚನ ಸಾಹಿತ್ಯಗಳು ನಿಜವಾಗಿ ಏನು ಹೇಳುತ್ತವೆ ಎಂಬುದರ ಕುರಿತ ನಿಲುಮೆ ಪ್ರಕಾಶನದ ಪುಸ್ತಕವೇ “ಕೊಟ್ಟ ಕುದುರೆಯನೇರಲರಿಯದೆ…”
ವಚನಸಾಹಿತ್ಯಗಳ ಕುರಿತು ನಮ್ಮ ಗೌರವವನ್ನು ಇನ್ನಷ್ಟು ಹೆಚ್ಚಿಸುವ,ವಚನಗಳ ಹಿರಿಮೆಯನ್ನು ಜಗತ್ತಿಗೆ ಸಾರುವ ಪುಸ್ತಕ.
mybookadda.in ನಲ್ಲಿ ಪುಸ್ತಕ ಆನ್ಲ್ಲೈನಲ್ಲಿ ಲಭ್ಯವಿದೆ.ಕೊಂಡು ಓದಿ
“ಬೌದ್ಧಿಕ ದಾಸ್ಯದಲ್ಲಿ ಭಾರತ” ಪುಸ್ತಕದ ಕುರಿತ ಓದುಗರ ಅಭಿಪ್ರಾಯಗಳು
– ವಿನಾಯಕ್ ಹಂಪಿಹೊಳಿ
ಬೌದ್ಧಿಕ ದಾಸ್ಯದಲ್ಲಿ ಭಾರತವನ್ನು ಬಹಳ ಮುಂಚೆಯೇ ಖರೀದಿಸಿದ್ದೆನಾದರೂ ಅದನ್ನು ಮರುದಿನವೇ ಮನೆಯಲ್ಲಿ ಇಟ್ಟು ಬರಬೇಕಾಯಿತು. ಹೀಗಾಗಿ ಸರಿಯಾಗಿ ಓದಲು ಆಗಿರಲಿಲ್ಲ. ಹೀಗಾಗಿ ನಿನ್ನೆ ಇನ್ನೊಂದು ಪ್ರತಿಯನ್ನು ಖರೀದಿಸಿ ಇವತ್ತು ಅದನ್ನು heathen in his blindness ಮತ್ತು ಸ್ಮೃತಿ ವಿಸ್ಮೃತಿ: ಭಾರತೀಯ ಸಂಸ್ಕೃತಿ ಪುಸ್ತಕಗಳ ಪಿಡಿಎಫ಼್ ಪ್ರತಿಗಳೊಂದಿಗೆ ತಾಳೆ ಮಾಡಿ ಸರಿಯಾಗಿ ಓದಿದೆ. ಪುಸ್ತಕ ಚೆನ್ನಾಗಿ ಮೂಡಿ ಬಂದಿದೆ. ಪುಸ್ತಕದ ಶೀರ್ಷಿಕೆ ಅಕ್ಷರಶಃ ಸಿದ್ಧವಾಗುತ್ತದೆ.
ಮೊದಲನೇಯದಾಗಿ ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಕೇಂದ್ರವನ್ನು ಬುದ್ಧಿಜೀವಿಗಳು ಏಕೆ ಮುಚ್ಚಿಸಿದ್ದಾರೆ ಎಂಬುದು ಈಗ ತಿಳಿಯಿತು. ಏಕೆಂದರೆ ಹಿಂದೂ-ಸಂಪ್ರದಾಯಗಳನ್ನು ರಿಲಿಜನ್ನಿನ ಅಡಿಯಲ್ಲಿ ತಂದರಷ್ಟೇ ಅಲ್ಲವೇ, ಅದರಲ್ಲಿನ ಗ್ರಂಥಗಳ ಆಧಾರವಿಲ್ಲದ ಸಂಪ್ರದಾಯಗಳನ್ನು ತೆಗಳಿ, ಪ್ರಗತಿಪರರೆಂದೆನಿಸಿಕೊಂಡು ಇವರು “ಬುದ್ಧಿಜೀವಿ”ಗಳಾಗುವದು? ರಿಲಿಜನ್ನೇ ಇಲ್ಲದ ಸಮಾಜದಲ್ಲಿ ಬುದ್ಧಿಜೀವಿಗೇನು ಕೆಲಸ?
ನನಗೆ ತುಂಬ ಮೆಚ್ಚಿಗೆಯಾದ ಅಂಶ ಕ್ರಿಯೆಯಿಂದ ಜ್ಞಾನವನ್ನು ಪಡೆಯುವದು ಭಾರತೀಯ ಪದ್ಧತಿ ಎಂಬ ಅಂಶವನ್ನು ಇದು ತೋರಿಸಿರುವದು. ನನ್ನ+ಅಣ್ಣ=ನನ್ನಣ್ಣ ಆಗುವದರಿಂದ ಕನ್ನಡದಲ್ಲಿ ಲೋಪಸಂಧಿ ಹುಟ್ಟಿಕೊಂಡಿದೆಯೋ ಅಥವಾ ಲೋಪಸಂಧಿ ಇರುವದರಿಂದ ನನ್ನ+ಅಣ್ಣ=ನನ್ನಣ್ಣ ಎಂದು ಮಾಡಲು ಭಾಷೆ ಅನುಮತಿ ನೀಡುತ್ತದೆಯೋ ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿತ್ತು. ಮೊದಲು ಪ್ರಯೋಗ, ನಂತರ ವ್ಯಾಕರಣ ಎಂಬುದು ಅನುಭವಕ್ಕೆ ಸರಿಹೊಂದುತ್ತಿದ್ದರೂ ಅದಕ್ಕೆ ಸರಿಯಾದ ವಾದ ಇಲ್ಲಿ ಸಿಕ್ಕಿತು.
ಮತ್ತಷ್ಟು ಓದು 
ನಿಲುಮೆ ಪ್ರಕಾಶನದ ಪುಸ್ತಕ ಬಿಡುಗಡೆಯ ಬಗ್ಗೆ “ನಿಲುಮಿಗನ” ವರದಿ
– ಹರೀಶ್ ಆತ್ರೇಯ
ನಿಲುಮೆ ಬಳಗದ ಎರಡನೆಯ ಕಾಣ್ಕೆಯಾಗಿ ’ಬುದ್ಧಿಜೀವಿಗಳ ಮೂಢನಂಬಿಕೆಗಳು’ ಮತ್ತು ’ಕೊಟ್ಟಕುದುರೆಯನೇರಲರಿಯದೆ’ ಎಂಬ ಪುಸ್ತಕಗಳ ಲೋಕಾರ್ಪಣೆಯ ಕಾರ್ಯಕ್ರಮ ದಿನಾಂಕ ೦೨ ಆಗಸ್ಟ್ ೨೦೧೫ ರಂದು ಮಿಥಿಕ್ ಸೊಸೈಟಿಯಲ್ಲಿ ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷರಾಗಿ ಶ್ರೀ ಷಣ್ಮುಖರವರು, ಮುಖ್ಯ ಅಥಿತಿಗಳಾಗಿ ಶ್ರೀ ವಿಶ್ವೇಶ್ವರ ಭಟ್ ರವರು ವೇದಿಕೆಯಲ್ಲಿ ಆಸೀನರಾಗಿದ್ದರು. ಅನುವಾದಕ ಲೇಖಕ ಪ್ರೊ ರಾಜಾರಾಮ್ ಹೆಗಡೆಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕಾರ್ಯಕ್ರಮವು ಚಿತ್ರ ಪ್ರಸನ್ನ ಅವರ ಪ್ರಾರ್ಥನೆಯೊಂದಿಗೆ ಆರಂಭವಾಗಿ ನವೀನ್ ಕುಮಾರ್ ರವರ ಸ್ವಾಗತದಿಂದ ಮುನ್ನಡೆದು ಯಶಸ್ವಿನಿಯವರ ನಿರೂಪಣೆಯಲ್ಲಿ ಕಳೆಗಟ್ಟಿತು.
ಕಳೆದ ಆರು ವರ್ಷಗಳಿಂದ ಬೌದ್ಧಿಕ ವಿಷಯಗಳನ್ನು ಮಂಡಿಸುತ್ತಿರುವ ನಿಲುಮೆ ಬ್ಲಾಗಿಗರು ತಮ್ಮ ಸಿದ್ದಾಂತಗಳಿಂದ ಮತ್ತು ಬೌದ್ಧಿಕತೆಯಿಂದ ಹೆಚ್ಚು ಪ್ರಕಾಶಗೊಂಡಿದ್ದಾರೆ. ಕಳೆದ ವರ್ಷ ’ಬೌದ್ಧಿಕ ದಾಸ್ಯದಲ್ಲಿ ಭಾರತ’ ಎಂಬ ಪುಸ್ತಕದ ಲೋಕಾರ್ಪಣೆಯ ನಂತರ ಅದರ ಮುಂದುವರೆದ ಭಾಗವಾಗಿ ಬುದ್ಧಿಜೀವಿಗಳ ಮೂಡನಂಬಿಕೆಗಳು ಲೋಕಾರ್ಪಣೆಯಾಗಿದೆ. ’ಬೌದ್ಧಿಕ ದಾಸ್ಯದಲ್ಲಿ ಭಾರತ’ ಬ್ರಿಟಿಶ್ ವಸಾಹತು ಪ್ರಜ್ಞೆಯ ಪ್ರವೇಶಿಕೆಯಾದರೆ ’ಬುದ್ಧಿಜೀವಿಗಳ ಮೂಡ ನಂಬಿಕೆಗಳು’ ಪುಸ್ತಕವು ಮೊದಲ ಬೆಳಕಿನ ಕಿರಣವಾಗಿದೆ. ಕ್ರಿಶ್ಚಿಯನ್ ಥಿಯಾಲಜಿಯ ನೆಲೆಗಟ್ಟಲ್ಲಿ ನೋಡಿದ ಮತ್ತು ನೋಡುತ್ತಿರುವ ನಮ್ಮ ಬುದ್ಧಿಜೀವಿಗಳ (ಕು)ತರ್ಕಗಳಿಗೆ ಪ್ರಶ್ನೆಗಳನ್ನು ಕೇಳುವ ಮೂಲಕ ತಮ್ಮ ಸಿದ್ದಾಂತವನ್ನು ಪ್ರೊ ಬಾಲು ರವರು ಬಲವಾದ ಪೆಟ್ಟು ಕೊಟ್ಟಿದ್ದಾರೆ. ಅವರು ತಮ್ಮ The Heathen in his blindness ಎಂಬ ಸಂಶೋಧನಾ ಗ್ರಂಥದಲ್ಲಿ ಎಲ್ಲ ಕುತರ್ಕಗಳಿಗೂ ಸಮಗ್ರವಾಗಿ ಸಾದಾರವಾಗಿ ಉತ್ತರಿಸಿದ್ದರೂ ಅದು ಹೆಚ್ಚು ಜನರಿಗೆ ತಲುಪದಿದ್ದುದ್ದರಿಂದ ಮತ್ತು ಅರ್ಥೈಸಿಕೊಳ್ಳಲು ಸುಲಭದ ತುತ್ತಲ್ಲವಾದ್ದರಿಂದ ಪ್ರೊ ರಾಜಾರಾಮ ಹೆಗಡೆಯವರು ಅದನ್ನು ಇನ್ನೂ ಸರಳಗೊಳಿಸಿ ಕನ್ನಡದಲ್ಲಿ ತಂದಿದ್ದಾರೆ.
ನಾಳೆ ಬಿಡುಗಡೆಯಾಗಲಿರುವ ನಿಲುಮೆ ಪ್ರಕಾಶನದ ಪುಸ್ತಕಗಳ ಪರಿಚಯ
ಬುದ್ಧಿಜೀವಿಗಳ ಮೂಢನಂಬಿಕೆಗಳು :
ಭಾರತೀಯ ಸಮಾಜದ ಕುರಿತು ಇಂದು ಪ್ರಚಲಿತದಲ್ಲಿರುವ ಥಿಯರಿಗಳು ಕ್ರೈಸ್ತ ಥಿಯಾಲಜಿಯ ಪೂರ್ವಗ್ರಹಗಳೇ ವಿನಃ ನಿಜವಾದ ಥಿಯರಿಗಳಲ್ಲ. ನಿಜವಾದ ಥಿಯರಿಗಳನ್ನು ಕಟ್ಟುವ ಕೆಲಸ ಇನ್ನು ಮುಂದೆ ನಡೆಯಬೇಕಿದೆ. ಈಗ ಸಮಾಜ ವಿಜ್ಞಾನಿಗಳಿಂದ ಆಗಬೇಕಾಗಿರುವ ಕೆಲಸವೆಂದರೆ ನಿಜವಾದ ಸಾಮಾಜಿಕ ಸಿದ್ಧಾಂತಗಳನ್ನು ರೂಪಿಸುವುದು. ಅಂದರೆ ಪಾಶ್ಚಾತ್ಯರು ಪ್ರಾರಂಭಿಸಿದ ಸಮಾಜ ವಿಜ್ಞಾನದ ತಿಳಿವಳಿಕೆಯನ್ನು ನಮ್ಮ ಅನುಭವದ ಬೆಳಕಿನಲ್ಲಿ ಪರಿಷ್ಕರಿಸುತ್ತ ಬೆಳೆಸುವುದು. ಇದೊಂದು ಅಗಾಧವಾದ ಕೆಲಸ ಹಾಗೂ ಅನೇಕ ತಲೆಮಾರುಗಳ ಕೆಲಸ.
ಇಂದು ಸಮಾಜ ವಿಜ್ಞಾನದ ಸತ್ಯಗಳು ಒಬ್ಬನು ಯಾವ ಜಾತಿ, ಲಿಂಗ ಅಥವಾ ಮತಕ್ಕೆ ಸೇರಿದ್ದಾನೆ ಎಂಬುದನ್ನು ಅವಲಂಬಿಸಿ ನಿರ್ಣಯವಾಗುವ ಪರಿಸ್ಥಿತಿ ಇದೆ. ಇದೊಂದು ರೀತಿಯ ಕುರುಡು. ಇದನ್ನೇ ಬುದ್ಧಿಜೀವಿಗಳ ಮೌಢ್ಯ ಎಂದು ಕರೆಯಲು ಬಯಸುತ್ತೇನೆ. ಅಂದರೆ ಇದು ನಿಜವಾಗಿಯೂ ವೈಜ್ಞಾನಿಕ ಚಿಂತನೆಯ ಕುರಿತ ಹಾಗೂ ಸಾಮಾಜಿಕ ಥಿಯರಿಗಳನ್ನು ಕಟ್ಟುವ ಕುರಿತ ಮೌಢ್ಯ. ಇವರೆಲ್ಲ ಭಾರತೀಯ ಸಂಸ್ಕೃತಿಯಲ್ಲಿರುವ ಮೂಢನಂಬಿಕೆಗಳನ್ನು ತೊಡೆಯುವ ಕುರಿತು ಮಾತನಾಡುತ್ತಿದ್ದಾರೆ. ಆದರೆ ಅಂಥ ಭಾರತೀಯ ಸಂಸ್ಕೃತಿ ಹಾಗೂ ಸಮಾಜದ ಕುರಿತ ಇವರ ವಿಚಾರಗಳೇ ಮೂಢನಂಬಿಕೆಗಳ ಸರಣಿಯಾಗಿವೆ ಎಂಬುದು ಒಂದು ವಿಪರ್ಯಾಸ.
ಕೊಟ್ಟಕುದುರೆಯನೇರಲರಿಯದೆ :
ವಚನಗಳು ಜಾತಿ ವಿರೋಧಿ ಚಳವಳಿಯೆಂದು ಒತ್ತಾಯಿಸುವ ಚಿಂತಕರು, ಆಧ್ಯಾತ್ಮ ಸಾಧನೆಯ ಆರಂಭದ ಹಂತದಲ್ಲಿ ಬರುವ ಕೆಲವೇ ಕೆಲವು ವಚನಗಳಲ್ಲಿನ ವಿಚಾರವನ್ನೇ ಇಡಿಯಾಗಿ ವಚನ ಸಂಪ್ರದಾಯಕ್ಕೆ ಆರೋಪಿಸುವ ತಪ್ಪು ಮಾಡುತ್ತಾರೆ. ಷಟ್ ಸ್ಥಲ ಕಲ್ಪನೆಯ ಮೂಲಕ ನೋಡುವುದಾದರೆ, ಅಲ್ಲಮ ಬಸವಣ್ಣನವರಂಥ ಆತ್ಮಜ್ಞಾನಿಗಳನ್ನು ಇವರು ಭಕ್ತಸ್ಥಲ ಮತ್ತು ಮಾಹೇಶ್ವರಸ್ಥಲದ ಆಚೆಗೆ ಹೋಗದ, ಅಂದರೆ ತಮ್ಮ ಭವವೇ ಹಿಂಗಿರದ ಹೊಡೆಯುತ್ತಿರುವ ಸಾಧಾರಣ ಭಕ್ತರು ಎಂಬಂತೆ ಚಿತ್ರಿಸಿ ಅದನ್ನು ಜಗತ್ತಿನಲ್ಲೆಲ್ಲಾ ಸಾರುತ್ತಿದ್ದಾರೆ. ಅಷ್ಟೇ ಅಲ್ಲ ಅದೇ ಅವರ ಹೆಚ್ಚುಗಾರಿಕೆ ಎಂದು ಒತ್ತಾಯಿಸುತ್ತಿದ್ದಾರೆ. ನಮಗೆ ಇಂದು ಯಾವ ಚಿತ್ರಣ ಬೇಕು? ಬಸವಣ್ಣನವರ ಕುರಿತು ಭಾರತೀಯ ಪರಂಪರೆಯು ಒದಗಿಸುವ ಚಿತ್ರಣವೊ ಅಥವಾ ಪಾಶ್ಚಾತ್ಯ ಪರಂಪರೆಯು ಒದಗಿಸುವ ಚಿತ್ರಣವೊ?
ವಚನಗಳ ಈಗಿನ ಓದಿನಲ್ಲಿರುವ ಕೊರತೆಯನ್ನು ತೆಗೆದು ತೋರಿಸಿ ಅವನ್ನು ಸರಿಪಡಿಸುವ ತುರ್ತು ಅಗತ್ಯ ಇಂದು ನಮ್ಮ ಮುಂದಿದೆ.ಈ ಕೃತಿಯಲ್ಲಿರುವ ಲೇಖನಗಳು ಈ ನಿಟ್ಟಿನಲ್ಲಿ ಬಾಲಗಂಗಾಧರರ ಸಂಶೋಧನಾ ತಂಡದ ಅಲ್ಪ ಕಾಣಿಕೆಗಳು. ನಾವು ಬೆಳೆದು ಬಂದ ಸಂಪ್ರದಾಯಗಳು ಸತ್ತ ಪಳೆಯುಳಿಕೆಗಳಲ್ಲ, ಅವನ್ನು ನಮಗೆ ಬೇಕಾದಂತೇ ಬೇಕಾಬಿಟ್ಟಿಯಾಗಿ ಉಪಯೋಗಿಸಿ ಬಿಸಾಡಲು ಬರುವುದಿಲ್ಲ, ಹಾಗೂ 21ನೆಯ ಶತಮಾನದಲ್ಲೂ ಕೂಡ ಅವು ತಮ್ಮ ಸತ್ವವನ್ನು ಹಾಗೂ ಪ್ರಸ್ತುತತೆಯನ್ನು ಉಳಿಸಿಕೊಂಡಿವೆ ಎಂದು ನಮ್ಮಂತೆ ನಂಬುವವರನ್ನು ಉದ್ದೇಶಿಸಿ ಈ ಲೇಖನಗಳನ್ನು ಬರೆಯಲಾಗಿದೆ
ನಮ್ಮ ಪ್ರಕಾಶನದ ಮೊದಲ ಪುಸ್ತಕ, “ಬೌದ್ಧಿಕ ದಾಸ್ಯದಲ್ಲಿ ಭಾರತ” ಪುಸ್ತಕ ದೊರೆಯುವ ಬಗ್ಗೆ ಮಾಹಿತಿ
ಕಂಡವರ ಮಕ್ಕಳನ್ನು ಕಾಡಿಗಟ್ಟುತ್ತಿರುವವರು ಯಾರು?
– ವಿಘ್ನೇಶ್, ಯಲ್ಲಾಪುರ
ಮೊನ್ನೆ ಮೊನ್ನೆ ನಡೆದ ಕಾರ್ಗಿಲ್ ವಿಜಯೋತ್ಸವ ಸಂಭ್ರಮಾಚರಣೆಯನ್ನು ನೋಡಿ ಕೆಲವು ಪ್ರಗತಿಪರರು “ಯೋಧ”ರನ್ನು ಕುರಿತು,ಬಡವರ ಮಕ್ಕಳನ್ನು ಬಾವಿಗೆ ತಳ್ಳುತ್ತಾರೆ ಎಂದು ಬೊಬ್ಬೆ ಹಾಕುತಿದ್ದರು.ಇದು 24 – 11- 2008ರಂದು ಕನ್ನಡ ಪ್ರಭದಲ್ಲಿ ಪ್ರಕಟವಾಗಿದ್ದ ಲೇಖನ.ಈ ಲೇಖನವನ್ನೊಮ್ಮೆ ಓದಿ.ಕಂಡವರ ಮಕ್ಕಳನ್ನು ಬಾವಿಗೆ ತಳ್ಳಿದವರು ಯಾರು ಎಂಬುದು ಅರ್ಥವಾಗಬಹುದು
ಅವಳು ಪಾರ್ವತಿ!
ಕೊಪ್ಪ ತಾಲೂಕಿನ ಸೂರ್ಯದೇವಸ್ಥಾನದ ಹುಡುಗಿ. ಕಾಲೇಜು ವಿದ್ಯಾಭ್ಯಾಸಕ್ಕೆಂದು ಹೋಗಿ ಸೇರಿದ್ದು ಶಿವಮೊಗ್ಗೆಯನ್ನು. ತನ್ನ ಕುಟುಂಬದಲ್ಲಿದ್ದ ಬಡತನ ಅವಳಲ್ಲಿ ಸಾಮಾಜಿಕ ಕಳಕಳಿಯನ್ನು ಹುಟ್ಟುಹಾಕಿತ್ತು; ಶಿವಮೊಗ್ಗದಲ್ಲಿದ್ದಷ್ಟು ವರ್ಷವೂ ಒಂದಲ್ಲ ಒಂದು ಸಾಮಾಜಿಕ ವಿಷಯದ ಕುರಿತು ಹೋರಾಟ ಮಾಡಲು ಪ್ರೇರೇಪಿಸಿತ್ತು. ಅದಕ್ಕಾಗಿ ವಿವಿಧ ಸಂಘಟನೆಗಳನ್ನು ಸೇರಿದಳು. ‘ಮಹಿಳಾ ಜಾಗೃತಿ’ಯ ಕಾರ್ಯಕರ್ತೆಯಾಗಿ ಹಗಲಿರುಳು ದುಡಿದಳು, ನಾಯಕಿಯಾಗಿ ಬೆಳೆದಳು. ಶಿವಮೊಗ್ಗದ ಕೆಲ ಉಪನ್ಯಾಸಕರು ದೂರದ ಆಂಧ್ರದಿಂದ ಗದ್ದರ್‍ನನ್ನು ಕರೆಸಿ ನಡೆಸಿದ ಸಭೆಗಳಲ್ಲಿ ನಡುರಾತ್ರಿಯವರೆಗೂ ಭಾಗವಹಿಸಿದಳು. ರೈತ ಹೋರಾಟದಿಂದ ಹಿಡಿದು ನದೀಮೂಲ ರಕ್ಷಣೆಯಂತಹ ವಿಷಯದವರೆಗೆ, ಕಾಲೇಜು ವಿದ್ಯಾರ್ಥಿನಿಯರ ಸಮಸ್ಯೆಯಿಂದ ಹಿಡಿದು ಕೊಳಚೆ ನಿವಾಸಿಗಳ ದನಿಯಾಗುವವರೆಗೆ ಸಾಮಾಜಿಕವಾಗಿ ತನ್ನನ್ನು ತೊಡಗಿಸಿಕೊಂಡಳು. ಹೀಗೆ ಅತ್ಯಂತ ಕ್ರಿಯಾಶೀಲಳಾಗಿದ್ದ ಹುಡುಗಿ, ಇದ್ದಕ್ಕಿದ್ದಂತೆ ಒಂದು ದಿನ ಕಣ್ಮರೆಯಾದಳು. ನಾಲ್ಕೈದು ವರ್ಷ ಪಾರ್ವತಿ ಎಲ್ಲಿದ್ದಾಳೆ ಎಂಬುದೇ ನಾಗರಿಕ ಸಮಾಜಕ್ಕೆ ತಿಳಿದಿರಲಿಲ್ಲ. ಸಮಾಜದ ಕುರಿತು ಅಪಾರ ಕಳಕಳಿಯನ್ನಿಟ್ಟುಕೊಂಡು ಹಗಲಿರುಳೂ ಸೈಕಲ್ ತುಳಿಯುತ್ತಿದ್ದ ಹುಡುಗಿ ಹೀಗೆ ಇದ್ದಕ್ಕಿದಂತೆ ಕಣ್ಮರೆಯಾಗಿದ್ದು ಏಕೆ? ಎಲ್ಲಿ ಹೋದಳು?
ಈ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, 2003ರ ನವೆಂಬರ್ 17ನೇ ತಾರೀಖು. ಕಾರ್ಕಳ ತಾಲೂಕಿನ ಈದು ಬಳಿಯ ಬೊಲ್ಲೊಟ್ಟುವಿನ ಮನೆಯೊಂದರಲ್ಲಿ ರಾತ್ರಿ ಸಿಡಿದ ಪೋಲೀಸರ ಗುಂಡಿನ ಬೆಳಕಲ್ಲಿ ಪಾರ್ವತಿ ಗೋಚರಿಸಿದಳು. ಹರೆಯದ ಕನಸುಗಳೆಲ್ಲ ಅರಳಿ,ಬದುಕಿನ ಗಾಂಭೀರ್ಯದತ್ತ ಹೊರಳಬೇಕಾದ ವಯಸ್ಸಿನಲ್ಲಿ ಪಾರ್ವತಿ ಹೆಣವಾಗಿ ಬಿದ್ದಿದ್ದಳು! ಅವಳ ಜೊತೆಗೇ ಮಸಣ ಸೇರಿದ ಹಾಜಿಮಾಳ ಕಥೆಯೂ ಇದಕ್ಕಿಂತ ಭಿನ್ನವೇನಲ್ಲ! ಮತ್ತಷ್ಟು ಓದು 






