ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 13, 2015

12

ಆ ಕಾಲವೊಂದಿತ್ತು…ದೇಶಕ್ಕೆ ದೇಶವೇ ಸ್ವರ್ಗವಾಗಿತ್ತು…

‍ನಿಲುಮೆ ಮೂಲಕ

– ವಿಜಯ್ ಪೈ

ಸೋ ಸ್ಸಾರಿಆ ಕಾಲವೊಂದಿತ್ತು..ದಿವ್ಯ ತಾನಾಗಿತ್ತು. ದೇಶಕ್ಕೆ ದೇಶವೇ ಸ್ವರ್ಗವಾಗಿತ್ತು. ಹೌದು ಎಲ್ಲವೂ ಸರಿಯಾಗಿತ್ತು ನನ್ನ ಪ್ರೀತಿಯ ಈ ಇಂಡಿಯಾದಲ್ಲಿ , ಈಗ ನಾನು ಹೇಳುತ್ತಿರುವುದು ಇತಿಹಾಸದ ಮಾತಲ್ಲ, ಇದು ಕೇವಲ ಹದಿನೆಂಟು ತಿಂಗಳ ಹಿಂದಿನ ಮಾತು.

ದೇಶದ ತುಂಬ ಕೋಮು ಸೌಹಾರ್ದ, ಅನಿರ್ಬಂಧಿತ ಅಭಿವ್ಯಕ್ತಿ ಸ್ವಾತಂತ್ರ್ಯವಿತ್ತು, ಮನಸ್ಸಿಗೆ ಬಂದದ್ದನ್ನು ಮನಸ್ಸಿಗೆ ಬಂದಲ್ಲಿ ಮಾತನಾಡಬಹುದಿತ್ತು. ಒಂದೇ ಒಂದು ಪುಸ್ತಕ, ನಾಟಕ ಅಥವಾ ಸಿನೇಮಾ ನಿಷೇಧಿಸಿದ ದಾಖಲೆಯಿರಲಿಲ್ಲ.

‘ಜಾತಿ”ಯೆಂಬ ಶಬ್ದದ ಪ್ರಸ್ತಾಪವೇ ಇರಲಿಲ್ಲ ಎಲ್ಲೂ..,”ಧರ್ಮ”ದ ಪ್ರಸ್ತಾಪವೋ ಕೇಳಲೇ ಬೇಡಿ. ಹಸಿವಿರಲ್ಲಿಲ್ಲ..ಬಡತನವಿರಲಿಲ್ಲ. ಎಲ್ಲ ರೈತರೂ ಲಕ್ಷಾಧಿ/ಕೋಟ್ಯಾಧಿಪತಿಗಳಾಗಿದ್ದರಿಂದ ಯಾವ ರೈತನೂ ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ. ಸರಕಾರಿ/ಸರಕಾರೇತರ ಯಾವುದೇ ಕೆಲಸಗಳಿಗೆ ರೈತರ ಒಂದಿಂಚೂ ಜಮೀನನ್ನು ಕೂಡ ಕಬಳಿಸುತ್ತಿರಲಿಲ್ಲ. ರೈತರು ಸ್ಚ ಇಚ್ಛೆಯಿಂದ ತಾವಾಗಿಯೇ ದಾನ ಕೊಡುತ್ತಿದ್ದರು ಮತ್ತು ಸರಕಾರಕ್ಕೆ ಬೇಸರವಾಗಬಾರದೆಂದು ಕೊಟ್ಟ ಜಮೀನಿಗೆ ಒಂದಷ್ಟು ಗೌರವಧನ ತೆಗೆದುಕೊಳ್ಳುತ್ತಿದ್ದರು. ಬಂಡವಾಳಶಾಹಿ ಕಾರ್ಪೊರೇಟ್ ಗಳು ನನ್ನ ಇಂಡಿಯಾದ ರೈತನ ಮುಂದೆ ಹೆದರಿ ಡೊಗ್ಗಾಲು ಊರಿ ಕೂರುತ್ತಿದ್ದವು.

ಎಂತಹ ಅಧ್ಭುತ ದೇಶವಾಗಿತ್ತು ನನ್ನದು..ಇಲ್ಲಿ ಯಾರು ಎಷ್ಟು ಬೇಕಾದಷ್ಟೂ , ಎಲ್ಲೆಂದರಲ್ಲಿ ಗೋ ಮಾಂಸ ಭಕ್ಷಿಸಬಹುದಿತ್ತು. ಗೋ ಹತ್ಯಾ ನಿಷೇಧ ಯಾವ ರಾಜ್ಯದಲ್ಲಿಯೂ ಇರಲಿಲ್ಲ. ಭ್ರಷ್ಟಾಚಾರ, ಅತ್ಯಾಚಾರ, ಕೊಲೆ ಈ ಶಬ್ದಗಳನ್ನು ಕೇಳುವುದೇ ಅಪರೂಪದಲ್ಲಿ ಅಪರೂಪವಾಗಿತ್ತು.

ಕೋಮು ಹಿಂಸೆ, ಕೋಮು ಗಲಭೆ ಎಂಬ ಶಬ್ದಗಳು ಕಿವಿಗೆ ಬಿಳುತ್ತಲೇ ಇರಲಿಲ್ಲ. 1947. 1984 ಇಸವಿಗಳು ನನ್ನ ದೇಶಕ್ಕೆ ಬರಲೇ ಇಲ್ಲ. ಆದ್ದರಿಂದ ಸಹಜವಾಗಿ ದೇಶ ವಿಭಜನೆಯ ಗಲಭೆ, ಸಿಖ್ ಹತ್ಯಾಕಾಂಡ ನನ್ನ ಪ್ರೀತಿಯ ದೇಶದಲ್ಲಿ ನಡೆಯಲೇ ಇಲ್ಲ. ಆದರೆ ದುರ್ದೈವ 2002 ನೆಯ ಇಸವಿ ನನ್ನ ದೇಶದಲ್ಲಿ ಗುಜರಾತ್ ಎಂಬ ಭಯಾನಕ ಜಾಗದಲ್ಲಿ ಘಟಿಸಿತು.. ಈ ಸುಂದರ ದೇಶದ ಒಂದೂ ಕಪ್ಪು ಚುಕ್ಕೆಯಿಲ್ಲದ ಜಾತ್ಯಾತೀತ ಹಂದರವನ್ನು ಹರಿಯುವಂತೆ ಮಾಡಿತು. ಕಾಶ್ಮೀರದಲ್ಲಿ ಪಂಡಿತರು ಸುಖ-ಶಾಂತಿ-ನೆಮ್ಮದಿಯಿಂದಿದ್ದರು ತಮ್ಮ ನೆರೆಹೊರೆಯವರೊಂದಿಗೆ. ಒಂದು ಜನಾಂಗವನ್ನು ನಾಶ ಮಾಡುವ ಪ್ರಯತ್ನ ಕಣಿವೆಯಲ್ಲಿ ಎಂದೂ ನಡೆಯಲ್ಲಿಲ್ಲ. ಸರಣಿ ಬಾಂಬ್ ಸ್ಫೋಟ, ಭಯೋತ್ಪಾದಕರ ದಾಳಿಗಳು ನನ್ನ ದೇಶದಲ್ಲೆಂದೂ ಸಂಭವಿಸಲೇ ಇಲ್ಲ.

ಬಡತನ, ಅಸಂತೋಷ, ನೋವು ಇವು ಎಂದೂ ಇಂಡಿಯಾದ ಜನರ ಅನುಭವಕ್ಕೆ ಬಂದಿರಲಿಲ್ಲ. ಒಂದೊಮ್ಮೆ ಅಕಸ್ಮಾತ್ ಇವೇನೆಂದು ನೋಡುವ ಇಚ್ಛೆಯಾದಲ್ಲಿ ದೇಶವಾಸಿಗಳು ಸೂಡಾನ್, ಪ್ಯಾಲೆಸ್ತೈನ್ ದೇಶಗಳಿಗೆ ಪ್ರವಾಸಿ ಸಂಸ್ಥೆಗಳು ಏರ್ಪಡಿಸುವ ವಿಶೇಷ ಪ್ರವಾಸದಲ್ಲಿ ಹೋಗಿ ನೋಡಿ ಬರುತ್ತಿದ್ದರು..

ಇಂತಹ ಸ್ವರ್ಗವಾಗಿತ್ತು ನನ್ನ ಇಂಡಿಯಾ!. ಆ ಕಾಲವೊಂದಿತ್ತು ..ದಿವ್ಯ ತಾನಾಗಿತ್ತು.

ಆದರೆ ಯಾವೂದಕ್ಕೂ ಒಂದು ಕೊನೆಯಿರುತ್ತದೆ ಅನ್ನುತ್ತಾರೆ..ಅದರಂತೆ ಒಳ್ಳೆಯದಕ್ಕೂ ಕೂಡ ಕೊನೆಯಿರುವುದು ಸಹಜ. ನನ್ನ ಪ್ರೀತಿಯ ದೇಶದ ವಿಷಯದಲ್ಲೂ ಹಾಗಾಯಿತು.

ಮನದಿಂದ ಅಳಿಸಲಾಗದ ಆ ಕಪ್ಪು ದಿನ ಇಂದಿಗೂ ನನ್ನ ಕಣ್ಣ ಮುಂದಿದೆ. ಹೌದು..ಅದು ಮೇ 16, 2014 – ಒಬ್ಬ ಪ್ರತಿಗಾಮಿ, ಪಿತೃಪ್ರಧಾನ ವ್ಯವಸ್ಥೆಯ ಪ್ರತಿಪಾದಕ ಹಿಂದೂ ನರೇಂದ್ರ ಮೋದಿ ಪ್ರಧಾನಮಂತ್ರಿಯಾದ ದಿನ!.

ಆ ದಿನವೇ ನನ್ನ ಇಂಡಿಯಾ ಬಡತನ, ಕೋಮು ಅಸಹನೆ, ಹಿಂಸೆ, ಕಾನೂನು ಸುವ್ಯವಸ್ಥೆ ಸಮಸ್ಯೆಗಳು, ರೈತರ ಆತ್ಮಹತ್ಯೆಗಳು, ಜಾತಿ ತಾರತಮ್ಯ,ಲಿಂಗ ತಾರತಮ್ಯ, ಕೊಲೆಗಳು, ಅತ್ಯಾಚಾರಗಳು, ತೆರಿಗೆ ಕಳ್ಳತನ, ರಸ್ತೆಗಳಲ್ಲಿ ಉಗುಳುವುದು, ಕಸ ಚೆಲ್ಲುವುದು ಮತ್ತು ನೀವು ಕಲ್ಪಿಸಿಕೊಳ್ಳಬಹುದಾದ ಯಾವುದೇ ರೀತಿಯ, ಯಾವುದೇ ಗಾತ್ರದ ಸಾಮಾಜಿಕ ವಿಕೃತಿಗಳು ಧುತ್ತೆಂದು ಉದಿಸಿದವು.

ನಿಮಗೆಲ್ಲ ಗೊತ್ತಿರಲಿ..ಒಬ್ಬ ಪ್ರತಿಗಾಮಿಯಿಂದಾಗಿ ನನ್ನ ಇಂಡಿಯಾದಲ್ಲಿ ಕೋಮು ಹಿಂಸೆ ಮೀತಿ ಮೀರಿದೆ. ಪ್ರತಿದಿನ ಸಾವಿರ-ಲಕ್ಷಗಟ್ಟಲೇ ಜನ ಹತರಾಗುತ್ತಿದ್ದಾರೆ. ಇದು ಇದೇ ವೇಗದಲ್ಲಿ ಮುಂದುವರಿದರೆ, ಮುಂಬರುವ 2019 ರ ಚುನಾವಣೆ ಹೊತ್ತಿಗೆ ಮತ ಹಾಕಲು ನನ್ನ ಪ್ರೀತಿಯ ಇಂಡಿಯಾದಲ್ಲಿ ಒಬ್ಬ ಮತದಾರ ಕೂಡ ಇರುವ ಸಾಧ್ಯತೆ ಇಲ್ಲ ಎಂದೆನಿಸುತ್ತಿದೆ ನನಗೆ.

ದೇಶದ ಕೆಲವು ಗೌರವಾನ್ವಿತ ಪ್ರಮುಖ ಇತಿಹಾಸಕಾರರು ಮತ್ತು ಪ್ರಗತಿಪರ ವಿಚಾರವಾದಿಗಳು ಈ ಆಡಳಿತವನ್ನು ತಾಲಿಬಾನ್ ಆಡಳಿತಕ್ಕೆ ಹೋಲಿಸಿದ್ದಾರೆ. ಧರ್ಮವಿಲ್ಲದ ಉಗ್ರರು ಕಟ್ಟಿದ ಸಾಮಾಜಿಕ ಸಂಸ್ಥೆಯಾದ ತಾಲಿಬಾನ್ ಈ ಹೋಲಿಕೆಯಿಂದ ತುಸು ಹೆಚ್ಚೆ ಮನನೊಂದು, ಶ್ರೀಯುತ ಅರವಿಂದ ಕೇಜ್ರಿವಾಲ್ ರಿಗೆ ತನ್ನ ಪರವಾಗಿ ಧರಣಿ ಮಾಡುವಂತೆ ಕೋರಿಕೊಂಡಿದ್ದು ಕೂಡ ನನ್ನ ಗಮನಕ್ಕೆ ಬಂದಿದೆ..

ನಮ್ಮ ಮಲಬದ್ಧತೆಯಿಂದ ಹಿಡಿದು, ರೇಲ್ವೆ ಸ್ಟೇಶನ್ ನ ಶೌಚಾಲಯದ ಅವ್ಯವಸ್ಥೆಗೆ ಮೋದಿ ವೈಯುಕ್ತಿಕ ಜವಾಬ್ದಾರರೆಂಬುದು ಜ್ಞಾನೋದಯಗೊಂಡ ನಾಗರಿಕರಾದ ನಮಗೆ ತಿಳಿದಿದೆ. ನಮ್ಮ ಮನೆಗೆ ಹೋಗುವಾಗ ಸಿಗುವ ಕಿರುಗಲ್ಲಿಯ ತಿರುವಿನ ಸಂಧಿಯಲಿ ಎಂದಿಗೂ ಕಾಣಲ್ಪಡುವ ಪಾನ್ ಉಗುಳಿದ ಗುರುತಿನ ಬಗ್ಗೆ ಇವತ್ತಿನ ತನಕ ಮೋದಿ ಒಂದೂ ಮಾತನಾಡದಿರುವುದು ನನಗೆ ವೈಯುಕ್ತಿಕವಾಗಿ ತುಂಬಾ ಅಸಮಾಧಾನ ಉಂಟುಮಾಡಿದೆ. ನನ್ನ ದೇಶದಲ್ಲಿ ನಡೆಯುವ ಪ್ರತಿ ತಪ್ಪೂ ನಮ್ಮ ಫ್ರಧಾನಿಯ ನಡೆಯಿಂದಲೇ ಆಗಿರುವಂತದ್ದು..ಉಳಿದವರ್ಯಾರನ್ನು ಮತ್ತೊಮ್ಮೆ ಕೇಳಿ ‘ಉಳಿದವರ್ಯಾರನ್ನೂ” ಇದಕ್ಕೆ ಹೊಣೆಯಾಗಿಸಿ, ದೂಷಿಸಬಾರದು.

ಇದೆಂತಹ ದುರ್ವಿಧಿ..ಒಹ್ ನನ್ನ ಬಡ ದೇಶವೇ..ಈ ತರಹದ ಪರಿಸ್ಥಿತಿಗೆ ಒಳಲ್ಪಡಲು ನೀನು ಮಾಡಿದ ತಪ್ಪಾದರೂ ಏನು? ಇನ್ನು ತಡ ಮಾಡಬಾರದು. ನಾನು ಈಗ ಕೂಡಲೇ ನನಗೊಂದು ಅಕಾಡೆಮಿ ಅವಾರ್ಡೊಂದನ್ನು ಹುಡುಕಿಕೊಳ್ಳಬೇಕು ಮತ್ತು ಜೊತೆಗೆ ಕೊಟ್ಟ ಚೆಕ್ ನಗದಾದ ಮಾರನೆಯ ದಿನವೇ, ಆ ಅವಾರ್ಡನ್ನು ಪ್ರತಿಗಾಮಿ ಆಡಳಿತದ ವಿರುದ್ಧ ಪ್ರತಿಭಟನಾರ್ಥವಾಗಿ ಹಿಂದುರಿಗಿಸಬೇಕು.

ಈ ಮೋದಿ ಆದಷ್ಟು ಬೇಗ ರಾಜಿನಾಮೆ ಕೊಡಲಿ ಎಂಬ ನಿರೀಕ್ಷೆ ಇಟ್ಟುಕೊಂಡು ಮತ್ತು ನಾವು ಉದಾರ ಮನಸ್ಥಿತಿಯ ಚಿಂತಕರು, ವಿಚಾರವಾದಿಗಳ ಸಂಕೇತವಾದ ಶ್ರೀಯುತ ರಾಹುಲ ಗಾಂಧಿಯವರ ಸಮರ್ಥ ನಾಯಕತ್ವದಲ್ಲಿ, ನಮ್ಮ ಪರಿಪೂರ್ಣ ಆದರ್ಶಮಯ ಸ್ವರ್ಗ ವಾದ ಇಂಡಿಯಾಕ್ಕೆ ವಾಪಸ ಹೋಗುವಂತಾಗಲಿ ಎಂಬ ಆಸೆಯೊಂದಿಗೆ ಈ ಪೋಸ್ಟ್ ಮುಗಿಸಿ, ಅಕಾಡೆಮಿ ಅವಾರ್ಡ್ ನ ವ್ಯವಸ್ಥೆ ಮಾಡಿಕೊಳ್ಳಲು ಹೋಗುತ್ತಿದ್ದೇನೆ. ಹೇಗಾದರೂ ಮಾಡಿ ನಾನು ಕೂಡ ಸೆಹೆಗಲ್, ದಾರೂವಾಲಾ, ಅಮನ್ ಸೇಠಿ, ಔಲಕ್ , ಭುಲ್ಲಾರ, ಕುಂ.ವಿ, ಯವರ ಸಾಲಿನಲ್ಲಿ ನಿಲ್ಲಬೇಕು!
————————————————————-
(ವ್ಯಾಟ್ಸಾಪಿನಲ್ಲಿ ಸಿಕ್ಕ ಒಂದು ಇಂಗ್ಲೀಷ್ ಪೋಸ್ಟ್ ನಿಂದ ಪ್ರೇರಣೆಗೊಂಡು ಬರೆದಿದ್ದು)

ಚಿತ್ರಕೃಪೆ : So Sorry – Aaj Tak

12 ಟಿಪ್ಪಣಿಗಳು Post a comment
  1. UNIVERSAL's avatar
    hemapathy
    ಆಕ್ಟೋ 13 2015

    ಯಾವ ಪಕ್ಷದಲ್ಲೂ ಈಗ ಸಮರ್ಥ ನಾಯಕರು ಎನ್ನುವ ವ್ಯಕ್ತಿಗಳು ಇಲ್ಲವೇ ಇಲ್ಲ.

    ಉತ್ತರ
  2. ನಾರಾಯಣ's avatar
    ನಾರಾಯಣ
    ಆಕ್ಟೋ 13 2015

    ಆ ಮೋದಿ ಎಂತಹ ಮನುಷ್ಯ? ನರಭಕ್ಷಕ, ಸಾವಿನ ವ್ಯಾಪಾರಿ. ಗಾಂಧಿಯ ಕೊಲೆ ಮಾಡಿದ ಸಂಘ ಪರಿವಾರದವರು ಹಾಗೂ ಆ ಸಂಘದ ಕೈಗೊಂಬೆ. ೧೫ ಲಕ್ಷದ ಸೂಟ್ ಹಾಕಿ ವಿದೇಶಗಳಿಗೆ ಹೋಗಿ ನಮ್ಮಲ್ಲಿ ಬಂಡವಾಳ ಹಾಕಿ ಎಂದು ಗೋಗರೆದು ಮಹಾನ್ ಭಾರತದ ಮರ್ಯಾದೆ ಕಳೆದರು. ಅಲ್ಲಿ ನಮ್ಮ ಮನೆಯ ಅಳಿಯ, ಮಗಳು, ಮಗನ ಬಗ್ಗೆ ಮಾತು ಆಡಿ, ಭಾರತೀಯರು ತಲೆತಗ್ಗಿಸುವಂತೆ ಮಾಡಿದರು.ಒಂದೇ ಎರಡೇ, ಬಡ ರೈತರ ನೆಲಕಬಳಿಸಲು ಕಾನೂನು ತಂದರು.ಆ ಕಾನೂನಿಗೆ ತಡೆ ಒಡ್ತಡಲು ನಮ್ಮ ಮಾನ ಅಲ್ಲ ಅದಕ್ಕೂ ಹೆಚ್ಚಿನ ಪ್ರಾಣ ಒ್ತತ್ತೆ ಇಟ್ಟು ನಮ್ಮ ಮನೆ ಮಗ, ತಾಯಿ, ಹಿಂಬಾಲಕರು ಹೋರಾಟ ಮಾಡಬೇಕಾಯ್ತು. ಮನೆ ಮಗ ಮಂಡ್ಯಕ್ಕೆ ಬಿರು ಬಿಸಿಲಲ್ಲಿ ಸರ ಸರನೆ ನಡೆದು ಬಂದು ರೈತರಿಗೆ ಸಾಂತ್ವಾನ ಹೇಳಿ, ಚೆಕ್ ನೀಡಿ ಹಿಂದೆ ಪಡೆದ ಪರಿ, ರಮ್ಯಾದ್ಭುತ.

    ಉತ್ತರ
  3. simha sn's avatar
    simha sn
    ಆಕ್ಟೋ 14 2015

    ಚಂದ ! ಅವಾರ್ಡಿಗಳು ಇದನ್ನು ಓದಿಯಾವೋ ?

    ಉತ್ತರ
    • Goutham's avatar
      Goutham
      ಆಕ್ಟೋ 18 2015

      Mr.simha sn,
      May be congress supports are idiots.But don’t write anything in indecent manner pls

      ಉತ್ತರ
  4. vasu's avatar
    ಆಕ್ಟೋ 14 2015

    Super! no other words to say

    ಉತ್ತರ
  5. shripad's avatar
    shripad
    ಆಕ್ಟೋ 14 2015

    ನನಗೂ ಹೀಗೆಯೇ ಅನಿಸುತ್ತಿದೆ! ಅದು ಎಂಥಾ ಕಾಲವಾಗಿತ್ತಪ್ಪಾ! ಏನಿದ್ದರೂ ನಾವೆಲ್ಲ ಎಮರ್ಜನ್ಸಿ ಜಾರಿಯಾಗುವ ಹೊತ್ತಿಗೆ ಈ ನೆಲದಲ್ಲಿ ಸಮೃದ್ಧವಾದ ಜೀವನ ಮುಗಿಸಿ ಇಹಲೋಕ ಯಾತ್ರೆಗೆ ಇತಿಶ್ರೀ ಹಾಡಬೇಕಿತ್ತು. ಏನು ಮಾಡೋದು? ಎಲ್ಲ ತಡವಾಗಿ ಹೋಯ್ತು…!!!

    ಉತ್ತರ
    • Namo's avatar
      Namo
      ಆಕ್ಟೋ 21 2015

      ಇದು “ವ್ಯಾಟ್ಸಾಪಿನಲ್ಲಿ ಸಿಕ್ಕ ಒಂದು ಇಂಗ್ಲೀಷ್ ಪೋಸ್ಟ್ ನಿಂದ ಪ್ರೇರಣೆಗೊಂಡು ಬರೆದಿದ್ದು” ಅಲ್ಲ. ಬರೀ ಕಾಪಿ ಪೇಸ್ಟ್. ಹೆಸರು, ಕೀರ್ತಿಯ ಆಸೆಗೆ ಮಾಡಿದ ಮೂರು ಕಾಸಿನ ಕೆಲಸ.

      ಉತ್ತರ
      • ಸತೀಸ's avatar
        ಸತೀಸ
        ಆಕ್ಟೋ 21 2015

        ಮೂಲ ಬರಹವನ್ನೂ ಓದಿದ ತಲೆ ಸರಿಯಿರುವವರಿಗೆ ಇದು ಪ್ರೇರೇಪಿತ ಬರಹ ಎಂಬುದು ತಿಳಿಯುತ್ತದೆ.ಲೇಖಕರೇ ವಾಟ್ಸಾಪಿನಲ್ಲಿ ಬಂದಿದ್ದು ಎಂದಿದ್ದಾರೆ.ಆದರೂ ನಿಮ್ಮ ಸಂಕಟ ಅರ್ಥವಾಗುತ್ತದೆ

        ಉತ್ತರ
  6. Goutham's avatar
    Goutham
    ಆಕ್ಟೋ 18 2015

    Who told that everything was good before 2002 ? Why this kind of writing ?

    ಉತ್ತರ

Leave a reply to Goutham ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments