ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 18, 2011

2

‘ಕುಂದನಗರಿ’ಯ ಸಮ್ಮೇಳನದ ನೆನಪುಗಳು…!

‍ನಿಲುಮೆ ಮೂಲಕ

– ಅರೆಹೊಳೆ ಸದಾಶಿವ ರಾವ್

ಹಾಗೆ ನೋಡಿದರೆ ಬೆಳಗಾವಿಗೆ ನಾನು ಎರಡು ತಿಂಗಳಿಗೊಮ್ಮೆ ಹೋಗುತ್ತಿರುತ್ತೇನೆ. ಹಾಗಾಗಿ ಸಂಪೂರ್ಣ ಅಲ್ಲದಿದ್ದರೂ ಬೆಳಗಾವಿಯ ರಸ್ತೆ ಮತ್ತದರ ದುರವಸ್ತೆಗಳನ್ನು ಆಗಾಗ ಗಮನಿಸಿದ್ದೇನೆ. ಇವತ್ತು ಬೆಳಗಾವಿ ಏನಾದರೂ ನಮ್ಮ ಪ್ರಭುಗಳ ಗಮನ ಸೆಳೆದಿದ್ದರೆ, ಅದಕ್ಕೆ ಮರಾಠಿಗರು ಖಂಡಿತಕ್ಕೂ ಕಾರಣರು! ಏಕೆಂದರೆ ಬೆಳಗಾವಿ ತಮ್ಮದು ಎಂಬ ವಿವಾದವನ್ನು ಸದಾ ಜೀವಂತವಾಗಿಟ್ಟುಕೊಂಡಿರುವವರು ಮರಾಠಿಗರು. ಈ ಹಿನ್ನೆಲೆಯಲ್ಲಿ ನಮ್ಮ ಪ್ರಭುತ್ವ, ಬೆಳಗಾವಿಯನ್ನು ಒಂದು ಕಣ್ಣಿಟ್ಟು ನೋಡುತ್ತಲೇ ಇರುತ್ತದೆ! ಅದಿಲ್ಲವಾಗಿದ್ದರೆ ಬಹುಶ: ಈ ಕುಂದನಗರಿಯೂ  ಉತ್ತರ ಕರ್ನಾಟಕದ ಇತರ ಜಿಲ್ಲೆ-ಪಟ್ಟಣಗಳಂತೆ ನಿರ್ಲಕ್ಷ್ಯದ ಬೇಗುದಿಯಲ್ಲಿ ಕಾಲ ತಳ್ಳುತ್ತಲೇ ಇರುತ್ತಿತ್ತೇನೋ!.

ಅದಿರಲಿ, ಈಗ ವಿಷಯ ಅದಲ್ಲ. ಇಪ್ಪತ್ತೈದು ವರ್ಷಗಳ ನಂತರ ಈ ಕುಂದ ನಗರಿಯಲ್ಲಿ ಎರಡನೆಯ ವಿಶ್ವ ಕನ್ನಡ ಸಮ್ಮೇಳನ ನಡೆಯಿತಲ್ಲ; ಒಂದು ಅಪೂರ್ವ ಅವಕಾಶವೆಂಬಂತೆ, ನಾನೂ ಅದರಲ್ಲಿ ಭಾಗವಹಿಸುವ ಉದ್ದೇಶದಿಂದ ಹೋಗಿದ್ದೆ. ಸಮ್ಮೇಳನದ ಬಗ್ಗೆ, ಅಲ್ಲಿ ಮುಳುಗಿ ಹೋದ ೩೭ಕೋಟಿ ರೂಪಾಯಿಗಳ ಬಗ್ಗೆ ಮಾಧ್ಯಮಗಳು ಮಾತಾಡುತ್ತಲೇ ಇರುವುದನ್ನು ಕೇಳಿದ್ದೀರಿ. ನಾನು ಗಮನಿಸಿದ ಒಂದು ಅಂಶವೆಂದರೆ, ಬೆಳಗಾವಿಗೆ ಕಾಲಿಟ್ಟರೆ ಪ್ರತೀ ರಸ್ತೆಗಳೂ ರಿಪೇರಿಯಾಗಿರುವುದು ಬಿಟ್ಟರೆ, ಪಟ್ಟಣ ಸಿಂಗಾರಗೊಂಡಿರುವುದು ಮಾತ್ರ ಕಣ್ಣಿಗೆ ಕಾಣುತ್ತದೆ.  ಮತ್ತೆ ಈ ಮೂವತ್ತೇಳು ಕೋಟಿ ಎಲ್ಲಿಗೆ ಹೋಗಿದೆ ಎಂಬುದಕ್ಕೆ ಹುಟುಕಾಡಿದರೂ ಏನೂ ಸಿಗುವುದಿಲ್ಲ.

ಇನ್ನು ಕನ್ನಡ ವೆಂದರೆ ಏನು? ಅದರ ಉಳಿವು-ಅಳಿವು  ಎಂದರೆ ಏನು ಎಂಬುದೂ ಪ್ರಶ್ನೆಯಾಗಿ ಕಾಡಿದ್ದು ಸುಳ್ಳಲ್ಲ! ಈ ರೀತಿಯ ದ್ವಂದ್ವಕ್ಕೂ ಕಾರಣವಿದೆ. ಇದು ವಿಶ್ವ ಕನ್ನಡ ಸಮ್ಮೇಳನ. ಬೆಳಗಾವಿಯ ನಗರದ ಪ್ರತೀ ಗೋಡೆಯ ಮೇಲೂ ಕನ್ನಡ ಉಳಿಸಿ-ಬೆಳೆಸಿ ಎಂಬ ಉದ್ಘೋಷವೇ ಕಾಣುತ್ತಿತ್ತು. ಆದರೆ ಇಡೀ ಮೂರುದಿನ ನಡೆದ ಸಮ್ಮೇಳನದಲ್ಲಿ ಈ ಹಿನ್ನೆಲೆಯಲ್ಲಿ ಏನಾದರೂ ಕ್ರಮಗಳನ್ನು ಸರಕಾರ ಆಗಲೀ, ಸಮ್ಮೇಳನ ಸಮಿತಿಯಾಗಿಯಾಗಲೀ ಕೈಗೊಂಡ ಬಗ್ಗೆ ವರದಿಯಾಗಿಲ್ಲ. ಅದೂ ಅಲ್ಲದೇ ಇದೇ ರೀತಿಯ ಸಮ್ಮೇಳನವನ್ನು ಐದು ವರ್ಷಗಳಿಗೊಮ್ಮೆ ನಡೆಸುವ ತೀರ್ಮಾನವನ್ನು ‘ಬಹುಜನರ’ ಬೇಡಿಕೆಯ ಮೇರೆಗೆ ಮುಖ್ಯಮಂತ್ರಿಗಳು ಕೈಗೊಂಡರು. ಅದು ಒಂದು ರೀತಿಯಲ್ಲಿ ಸಂತಸದ ವಿಚಾರವೇ ಸರಿ…..ಆದರೆ…?

ಇನ್ನು ಸಮ್ಮೇಳನದಲ್ಲಿ ಸಾಹಿತಿಗಳ ಪಾತ್ರ. ಖಂಡಿತಕ್ಕೂ ಸಂಸ್ಕಾರಯುತ ಜೀವನದಲ್ಲಿ ಸಾಹಿತ್ಯದ ಪಾತ್ರ ಬಹುದೊಡ್ಡದು ಮತ್ತು ಈ ಹಿನ್ನೆಲೆಯಲ್ಲಿ ಸಾಹಿತಿ ಗೌರವಾರ್ಹ. ಈ ಸಮ್ಮೇಳನದಲ್ಲಿಯೂ ಸಾಹಿತಿಗಳಿಗೆ, ಕಲಾಕಾರರಿಗೆ ಖಂಡಿತಕ್ಕೂ ಸಿಗಬೇಕಾದ ಮಾನ್ಯತೆ ಸಿಕ್ಕಿದೆಯೇ?. ಹೌದು ಮತ್ತು ಇಲ್ಲ ಎಂಬ ಎರಡೂ ಉತ್ತರಗಳು ಸಿಗುತ್ತವೆ. ಸಹಜವಾಗಿಯೇ ಈ ಜನ ಜಾತ್ರೆಯಲ್ಲಿ ಸೇರಿದ ಜನಜಂಗುಳಿಯಲ್ಲಿ, ಸಾಹಿತಿ ಕಳೆದು ಹೋದದ್ದು, ಅವರನ್ನು ಸಂಘಟಕರು ‘ಖ್ಯಾರೇ’ ಅನ್ನದಿದ್ದುದು, ಊಟ-ಉಪಹಾರಕ್ಕಾಗಿ, ವಸತಿಗಾಗಿ ಅವರು ಕಾದು ನಿಂತದ್ದು ಅಥವಾ ಕೆಲವರಿಗೆ ಗುರುತಿಸುವವರೇ ಇಲ್ಲವಾದದ್ದು……ಇತ್ಯಾದಿಗಳು ಸಾಮಾನ್ಯವಾಗಿತ್ತು. ಹಿರಿಯ ಸಾಹಿತಿಯೋರ್ವರು ಬಿದ್ದು ತುಟಿ, ಮೈಗೆ ಗಾಯ ಮಾಡಿಕೊಂಡು, ಕನ್ನಡಕವನ್ನು ಕಳೆದುಕೊಂಡ ಬಗ್ಗೆ ಹೇಳುತ್ತಿದ್ದರೆ, ಮತ್ತೋರ್ವ ಹಿರಿಯ ಸಾಹಿತಿ ತಮ್ಮ ಪ್ರಬಂಧ ಮಂಡನೆಯ ವೇಳೆ ಮುಗಿದರೂ ಯಾರೂ ತಮ್ಮನ್ನು ಕರೆದೊಯ್ಯಲು ಬರದೇ ಇದ್ದುದು ಮತ್ತು ಇಂತಲ್ಲಿಗೆ ಬನ್ನಿ ಎಂಬ ಸಂದೇಶವನ್ನೂ ಕೊಡದಿದ್ದುದರ ಬಗ್ಗೆ ಹೇಳುತ್ತಿದ್ದರು. ಬಿಡಿ, ಇದೆಲ್ಲವೂ ಇಂತಹ ದೊಡ್ಡ ಸಮ್ಮೇಳನಗಳ ವೇಳೆ ಸಾಮಾನ್ಯವೇ ಎಂದುಕೊಳ್ಳೋಣ.

ಆದರೆ ಸಹಜವಾಗಿಯೇ ಹೆಮ್ಮೆಯಾಗಿರುವ ವಿಷಯವೆಂದರೆ, ವೇದಿಕೆಯ ಮೇಲೆ ಸಾಹಿತಿಗಳನ್ನು ಕಂಡಾಗ ಸೇರಿದ್ದ ಜನ ರೋಮಾಂಚನ ಗೊಂಡಿದ್ದು, ಹೆಮ್ಮೆ ಹುಟ್ಟಿಸುತ್ತಿತ್ತು. ಎದುರು ಸಿಕ್ಕಿದ ಸಾಹಿತಿಯನ್ನು ಗುರುತಿಸುತ್ತಲೇ ಜನರು, ಅವರೊಂದಿಗೆ ಫೋಟೋಗಾಗಿ ಹಾತೊರೆಯುತ್ತಿರುವ  ದೃಶ್ಯ,ನಿಜಾರ್ಥದಲ್ಲಿ ಸಾಹಿತ್ಯದ ಜೀವಂತಿಕೆಯನ್ನು ಸಾರಿ ಹೇಳುವಂತಿತ್ತು. ಸರಕಾರಕ್ಕೆ ಅಥವಾ ಆಯೋಜಕರಿಗೆ ಕೃತಜ್ಞರಾಗಿರಲೇ ಬೇಕೆನ್ನುವಂತೆ, ಸಾಹಿತಿಗಳನ್ನು ಉಪಚರಿಸುವುದರಲ್ಲಿ ಆದ ಲೋಪವನ್ನು,  ಅವರನ್ನು  ನಿರೀಕ್ಷಿಸದ್ದಕ್ಕಿಂತ ಹೆಚ್ಚು ಸಂಭಾವನೆಯ ಮೂಲಕ ಸೂಕ್ತವಾಗಿ ‘ಗೌರವ’ ನೀಡಿ ಖುಷಿಗೊಳಿಸಿದ್ದು ಸ್ವಾಗತಾರ್ಹವಾಗಿತ್ತು. ಏಕೆಂದರೆ ಸಾಹಿತಿ ಗುರುತಿಸಲ್ಪಡುವುದು ಇಂತಹ ವಿಶೇಷ ಸಂದರ್ಭಗಳಲ್ಲಿ ಮಾತ್ರ-ಈ ಮಟ್ಟಿಗೆ ವಿಶ್ವ ಕನ್ನಡ ಸಮ್ಮೇಳನ ಸಾರ್ಥಕ್ಯ ಕಂಡಿತು.

ಆದರೆ ಈ ಸಾರ್ಥಕ್ಯ ಸಾಕೇ ಎಂಬ ಪ್ರಶ್ನೆ, ಲೇಖನದ ಆರಂಭದ ಕನ್ನಡದ ಬಗೆಗಿನ ಪ್ರಶ್ನೆಗಳನ್ನು ಮತ್ತೆ ಎತ್ತುತ್ತದೆ. ಸಾಹಿತಿಯದೂ ಕನ್ನಡದ ಉಳಿವು-ಬೆಳವಣಿಗೆಗೆ ಒಂದು ಬಹು ಮುಖ್ಯ ಪಾತ್ರ. ಆದರೆ ಈ ಒಂದು ಕೈಯಿಂದ ಮಾತ್ರ ಚಪ್ಪಾಳೆ ಸಶಬ್ದವಾಗದು. ಅದಕ್ಕೆ ಬೇರೆ ಕೈಗಳೂ ಸೇರಬೇಕು. ಈ ಹಿನ್ನೆಲೆಯಲ್ಲಿ ಈ ಸಮ್ಮೇಳನ ಕೈಗೊಂಡ ಅಥವಾ ಕಾರ್ಯರೂಪಕ್ಕೆ ತಂದ ಯಾವುದೇ ಕ್ರಮಗಳು ಕಣ್ಣಿಗಂತೂ ಕಾಣಲಿಲ್ಲ. ಮುಖ್ಯಮಂತ್ರಿಗಳು ಬೆಳಗಾವಿಯಲ್ಲಿ ಲಾಲ್ ಭಾಗ್ ಮಾದರಿಯ ಉದ್ಯಾನವನವನ್ನು ನಿರ್ಮಿಸುವ ಭರವಸೆ ಕೊಟ್ಟರು. ಅಖಿಲ ಭಾರತ ಸಮ್ಮೇಳನದಲ್ಲಿಯೂ ಭುವನೇಶ್ವರಿಯ ಪ್ರತಿಮೆ ನಿರ್ಮಿಸುವ ಭರವಸೆ ಕೊಟ್ಟಿದ್ದರು. ಆದರೆ ಭುವನೇಶ್ವರಿಯ ಪ್ರತಿಮೆಯ ಬಗ್ಗೆ ವಿರೋಧ-ಪರ ಏನೇ ಇದ್ದರೂ, ಅದು ಸಾಂದರ್ಭಿಕವಾದ ಘೊಷಣೆಯಾಗಿ, ಕನ್ನಡಕ್ಕೆ ಸಂಬಂಧಿಸಿದ್ದಾಗಿತ್ತು. ಈ ಲಾಲ್‌ಭಾಗ್ ಪ್ರತಿಕೃತಿ ನಿರ್ಮಾಣದ ಘೋಷಣೆ ಬಹುಶ: ವಿಧಾನ ಮಂಡಲದ ಅಧಿವೇಶನದಲ್ಲಿಯೋ, ಬೆಳಗಾವಿಯ ಅಭಿವೃದ್ದಿಯ ಮತ್ತ್ಯಾವುದೋ ಹಂತದಲ್ಲಿಯೋ ಸೂಕ್ತವಾಗುತ್ತಿತ್ತು. ಬೆಳಗಾವಿ ನಮ್ಮದು ಎನ್ನುವ ಹಿನ್ನೆಲೆಯಲ್ಲಿ, ಅಲ್ಲಿನ ಅಭಿವೃದ್ದಿ ಖಂಡಿತಕ್ಕೂ ಬೇಕು. ಭುವನೇಶ್ವರಿ ಪ್ರತಿಮೆ ನಿರ್ಮಾಣದ ಬಗ್ಗೆ ಪ್ರತಿಕ್ರಿಯಿಸಿದ ಶ್ರೀ ಹರಿಕೃಷ್ಣ ಪುನರೂರು ಅವರು ಮೊದಲು ಅದೇ ಹಣದಿಂದ ಶಿರಾಡಿ ಘಾಟ್ ಸರಿ ಮಾಡಿ ಬೆಂಗಳೂರು ಮಂಗಳೂರು ಸಂಪರ್ಕ ಸರಳಗೊಳಿಸಿ ಎಂಬ ಸಲಹೆ ಕೊಟ್ಟರು. ಅದೇ ರೀತಿ ಯೋಚಿಸಿದರೆ, ಬೆಳಗಾವಿಯಲ್ಲಿ ಈಗ ಕನ್ನಡದ ಉಳಿವು ಮತ್ತು ಬೆಳವಣಿಗೆಗೆ ಪೂರಕವಾಗುವ ವಾತಾವರಣ ಸಮ್ಮೇಳನದ ಹಿನ್ನೆಲೆಯಲ್ಲಿ ಆಗಬೇಕೇ ಹೊರು, ಉದ್ಯಾನವನವಲ್ಲ. ಉದ್ಯಾನವ ವನ್ನು ನಿರ್ಮಿಸಲಿ ಬಿಡಿ. ಆದರೆ ಅದು ಸಮ್ಮೇಳನದ ನೆನಪಿಗೆ ಬೇಡ. ಅದಕ್ಕಿಂತ ಭಿನ್ನವಾಗಿ ಅಲ್ಲಿನ ಶಾಲೆಗಳನ್ನು ಕನ್ನಡಕ್ಕೆ ವಿಶೇಷ ಒತ್ತು ನೀಡುವ ಯೋಜನೆ, ಇದು ರಾಜ್ಯಾದ್ಯಂತ ಪಸರಿಸುವ ನಿಟ್ಟಿನಲ್ಲಿ ಕೆಲಸ, ಕನ್ನಡಕ್ಕಾಗಿಯೇ ಯಾವುದಾದರೂ ಒಂದು ವಿಶೇಷ ಕನ್ನಡ ಭವನ, ವಿಶ್ವ ಕನ್ನಡ ಸಮ್ಮೇಳನದ ನೆನಪಿಗಾಗಿ ಪ್ರತೀ ಜಿಲ್ಲೆಯಲ್ಲೂ ಇಂತಹ ಕನ್ನಡ ಪರ ಕಾರ್ಯಕ್ರಮಗಳಿಗೆ ಒಂದಷ್ಟು ಯೋಜನೆ-ಚಿಂತನೆಗಳು ನಡೆಯುವ ಬಗ್ಗೆ ಕಾರ್ಯಪ್ರವೃತ್ತವಾಗಬಹುದಿತ್ತು. ಈ ಉದ್ಯಾನವನಕ್ಕೆ ಹಾಕಬೇಕೆಂದಿಟ್ಟಿರುವ ಲೆಖ್ಖದ ಒಂದು ಭಾಗವನ್ನು ‘ಸಮರ್ಥ’(ಇದೇ ಪ್ರಶ್ನೆ!?) ನಾಯಕತ್ವದಡಿ ಜಿಲ್ಲೆ ಜಿಲ್ಲೆಯ ಕನ್ನಡ ಪರ ಕೆಲಸಕ್ಕೆ ವಿನಿಯೋಗಿಸುವ ಯೋಜನೆ ಹಾಕಿಕೊಂಡಿದ್ದರೆ, ಅದು ನಿಜಾರ್ಥದ ಸಮ್ಮೇಳನದ ನೆನಪೂ ಆಗುತ್ತಿತ್ತು ಮತ್ತು ಸಮ್ಮೇಳನಕ್ಕೆ ಅರ್ಥವೂ ಬರುತ್ತಿತ್ತು.

ಈ ದಿಕ್ಕಿನಲ್ಲಿ ಯೋಚಿಸಿದರೆ, ಭುವನೇಶ್ವರಿ ಪ್ರತಿಮೆ ಹಾಗೂ  ಬೆಳಗಾವಿ ಉದ್ಯಾನವನಗಳೆರಡೂ ಅನಗತ್ಯ ಎಂಬುದು ಹೆಚ್ಚಿನವರ ಭಾವನೆ. ನಾಳೆ ಇದೇ ಬೆಳಗಾವಿಯ ಲಾಲ್‌ಭಾಗ್‌ನಲ್ಲಿ ಮರಾಠಿ ತನ್ನ ಭಾವುಟ ಇಟ್ಟು ಪ್ರತಿಭಟನೆಗೆ ನಿಲ್ಲಬಹುದು ಮತ್ತು ಅದನ್ನು ತಡೆಯಲೂ ನಮ್ಮ ಕನ್ನಡದ ಧ್ವನಿ ಕ್ಷೀಣವಾದರೆ, ಏನು ಸಾಧಿಸಿದ ಹಾಗಾಯ್ತು?.

ಇನ್ನು ಕಾರ್ಯಕ್ರಮಗಳು. ಉತ್ತಮ ಸಂಯೋಜನೆ ಮತ್ತು ಸಮಯ ಪಾಲನೆಯಿಂದ ಸಂಪೂರ್ಣ ‘ಮುಕ್ತ’ವಾಗಿದ್ದ ಕೊರತೆ ಬಿಟ್ಟರೆ, ಒಟ್ಟಾರೆ ಕಾರ್ಯಕ್ರಮಗಳು ಆಕರ್ಷಣೀಯವಾಗಿದ್ದು ಸಮ್ಮೇಳನಕ್ಕೆ ಶೋಭೆ ತಂದಿದ್ದುವು. ಈ ನಡುವೆ, ಕನ್ನಡ ಮರಾಠಿ ಬಾಂಧವ್ಯ ಹೆಚ್ಚಿರುವುದನ್ನು ಮಾಧ್ಯಮಗಳು ವರದಿ ಮಾಡಿದ್ದು, ಅದು ಮುಂದುವರಿಯಲಿ ಎಂಬ ಆಶಯ ಹಾಗೂ ಈ ಸಮ್ಮೇಳನ ಅದಕ್ಕೊಂದು ಶಕ್ತ ಚಾಲನೆ ಕೊಟ್ಟರೆ, ಅದಕ್ಕಿಂತ ದೊಡ್ಡ ಸಾರ್ಥಕ್ಯ ಬೇರಿಲ್ಲ.

ಇಂತಾದ್ದೊಂದು ವಿಶಿಷ್ಠ ಸಮ್ಮೇಳನವನ್ನು ನೋಡಿ, ಮುಗಿಯುವ ತನಕ ಇರಬೇಕೆಂಬ ಅಭಿಲಾಷೆಯೊಂದಿಗೆ ಹೋಗಿದ್ದರೂ, ಅಲ್ಲಿನ ಪ್ರಾಥಮಿಕ ಅಗತ್ಯಗಳ ಅವ್ಯವಸ್ಥೆ ನೋಡಿ ಒಂದು ದಿನ ಮೊದಲೇ ಮರಳಿ, ಟಿವಿ ಯಲ್ಲಿ ಸಮ್ಮೇಳನ ನೋಡಿ ಆನಂದ ಪಟ್ಟೆ. ಆದರೆ ಕೊನೆಗೆ ನನಗೆ ಇಡೀ ಸಮ್ಮೇಳನದ ಒಂದು ಕಾರ್ಯಕ್ರಮ ಮಾತ್ರ ಅಷ್ಟಾಗಿ ಹಿಡಿಸಲಿಲ್ಲ. ಅದೆಂದರೆ ನಗೆ ಹಬ್ಬ. ಎಲ್ಲೆಡೆಯಲ್ಲೂ ಕೇಳಿರುವ ಅದೇ ಒಂದಷ್ಟು ಜೋಕ್‌ಗಳಿಗೆ ಒಂದೆರಡು ತುಣುಕು ಸೇರಿಸಿ, ಜನ ಮನಸಾರೆ ನಕ್ಕು ಹಗುರಾದರು ಎಂಬ ವರದಿ ನೋಡಿ, ಇದರ ಅಗತ್ಯವೆಷ್ಟಿತ್ತು ಅನಿಸಿತು! ಜನ ನಕ್ಕಿರಬಹುದು, ಆದರೆ ಇಲ್ಲಿಯೂ ನನ್ನ ಹಿಂದಿನ  ಲೇಖನದಲ್ಲಿ ಹೇಳಿದಂತೆ, ಇಡೀ ಸಮ್ಮೇಳನದಲ್ಲಿ ನಗೆ ಸಾಹಿತ್ಯ ತೀರಾ ನಿರ್ಲಕ್ಷಿಸಲ್ಪಟ್ಟಿತ್ತು!. ನಗೆ ಸಾಹಿತ್ಯಕ್ಕೆ ಇಲ್ಲಿ ಮಣೆ ಇಲ್ಲದ್ದರಿಂದ ನಗೆ ಹಬ್ಬದ ಅನಿವಾರ್ಯತೆ ಪ್ರಶ್ನಿಸಿದ್ದು ಬಿಟ್ಟರೆ, ಅದು ಒಂದು ಕಾರ್ಯಕ್ರಮದ ಭಾಗವಾಗುವುದರೆ ಬಗ್ಗೆ ವಿರೋಧವಿಲ್ಲ. ನೀವೇನಂತೀರಿ?

****

(ಚಿತ್ರ ಕೃಪೆ :indiasummary.com)

2 ಟಿಪ್ಪಣಿಗಳು Post a comment
  1. Nagashree's avatar
    Nagashree
    ಮಾರ್ಚ್ 18 2011

    Good Article

    ಉತ್ತರ
  2. praveer shetty's avatar
    praveer shetty
    ಮಾರ್ಚ್ 20 2011

    thumba chanagide.

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments