ವಿಷಯದ ವಿವರಗಳಿಗೆ ದಾಟಿರಿ

Archive for

8
ಏಪ್ರಿಲ್

ಈ ಹೋರಾಟ ಗೆಲ್ಲಲೇಬೇಕು…!

– ಬನವಾಸಿ ಬಳಗ

ಕಿಸನ್ ಬಾಬುರಾವ್ ಹಜಾರೆ ಎಂಬ ಹೆಸರಿನ ಆ ಹಿರಿಯರು ಇವತ್ತಿನಿಂದ ಭ್ರಷ್ಟಾಚಾರದ ವಿರುದ್ಧದ ಒಂದು ದೊಡ್ಡ ಹೋರಾಟಕ್ಕೆ ಮುನ್ನುಡಿ ಹಾಡಿದ್ದಾರೆ. ಮಹಾರಾಷ್ಟ್ರದ ಅಹ್ಮದ್ ನಗರ ಜಿಲ್ಲೆಯ ರೆಲೆಗನ್ ಸಿದ್ಧಿ ಎಂಬ ಹಳ್ಳಿಯನ್ನು ಮಾದರಿ ಹಳ್ಳಿಯಾಗಿ ರೂಪಿಸಿ, ತನ್ನಿಡೀ ಬದುಕನ್ನೇ ಸಮಾಜಕ್ಕಾಗಿ ಮೀಸಲಿಟ್ಟ ಈ ಹಿರಿಯರು ದೆಹಲಿಯ ಜಂತರ್ ಮಂತರ್ ಬಳಿ ಅಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ಕುಳಿತಿದ್ದಾರೆ.

ಭ್ರಷ್ಟಾಚಾರವೆಂಬ ಮಹಾ ಪಿಡುಗು
 
ಭಾರತದಲ್ಲಿ ದಿನಗಳೆದಂತೆ ಭ್ರಷ್ಟಾಚಾರವೆನ್ನುವುದು ಆಳವಾಗಿ ಬೇರೂರತ್ತಲೇ ಹೋಗುತ್ತಿದೆ. ಈ ರೋಗವು ರಾಜಕಾರಣದ ಮೊಗಸಾಲೆಯನ್ನೂ ಬಿಟ್ಟಿಲ್ಲದಿರುವಾಗ, ನಾಡಿನ ವ್ಯವಸ್ಥೆಗಳನ್ನು ಕಟ್ಟಿ ನಿರ್ವಹಿಸಬೇಕಾದ ಜನಪ್ರತಿನಿಧಿ ಸಭೆಗಳು ಕೂಡಾ ಭ್ರಷ್ಟಾಚಾರವನ್ನು ಇಲ್ಲವಾಗಿಸುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲವೆಂಬ ನೋವು ಜನರಲ್ಲಿದೆ. ಇಡೀ ವ್ಯವಸ್ಥೆಯೇ ಭ್ರಷ್ಟಾಚಾರದ ಕ್ಯಾನ್ಸರ್ ತಗುಲಿ ನಲುಗುತ್ತಿರುವಾಗ ಇದಕ್ಕೊಂದು ಮದ್ದು ಬೇಕು ಎಂದು ಜನಾಂದೋಲನ ರೂಪಿಸುವಲ್ಲಿ ಈ ಹಿರಿಯ ಜೀವ ತೊಡಗಿದೆ.
ಜನ್ ಲೋಕಪಾಲ್ ಮಸೂದೆಯನ್ನು ಸರಿಯಾಗಿ ರೂಪಿಸಿ ಜಾರಿಗೊಳಿಸಲು ಪ್ರಧಾನಮಂತ್ರಿಗಳಿಗೆ ಮೊರೆಯಿಡುತ್ತಿದ್ದರೂ ಅದು ಫಲಿಸಲಿಲ್ಲವೆಂದು ಇದೀಗ ಅಣ್ಣಾ ಹಜಾರೆಯವರು ಸಾಯೋವರೆಗೆ ಉಪವಾಸ ಮಾಡುವುದಾಗಿ ಘೋಷಿಸಿ, ಅದರಂತೆ ಸತ್ಯಾಗ್ರಹ ಆರಂಭಿಸಿದ್ದಾರೆ.