‘ವಾಸಾ’ ಎಂಬ ಯುದ್ಧ ನೌಕೆ ಮತ್ತು ವಿಧಿಯ ಆಯ್ಕೆ!
– ಪ್ರಶಾಂತ್ ಯಳವಾರಮಠ

ಕ್ರಾಂತಿಗೆ ಅಕ್ಷರದ ಹಂಗೇಕೆ?
– ಚಿತ್ರ ಸಂತೋಷ್
ಮಧ್ಯಪ್ರದೇಶದ ತಲನ್‌ಪುರ ಗ್ರಾಮದಲ್ಲಿ ಓದು ಬರಹ ತಿಳಿಯದ ಬುಡಕಟ್ಟು ಮಹಿಳೆಯರೇ ಸಾಮಾಜಿಕ ಕ್ರಾಂತಿಗೆ ಮುನ್ನುಡಿಯಾಗಿದ್ದಾರೆ. ನಿತ್ಯ ಕುಡಿದು, ಸಂಸಾರದ ಒಂದಿಷ್ಟು ಚಿಂತೆಯಿಲ್ಲದ ಪುರುಷರಿಗೆ ಬುದ್ಧಿ ಕಲಿಸಬೇಕೆಂಬ ಉದ್ದೇಶದಿಂದ ಇಡೀ ಹಳ್ಳಿಯ ಮಹಿಳೆಯರು ಒಂದಾಗಿ ಸಾರಾಯಿ ನಿಷೇಧ ಮಾಡಿದ್ದಾರೆ.
ಆ ಹಳ್ಳಿಯೇ ಹಾಗೆಯೇ. ಬುಡಕಟ್ಟು ಬದುಕುಗಳ ಸಂಗಮ. ನೂರಕ್ಕೂ ಹೆಚ್ಚು ಬುಡಕಟ್ಟು ಕುಟುಂಬಗಳನ್ನು ಹೊಂದಿರುವ ಆ ಹಳ್ಳಿಯಲ್ಲಿ ಹೊತ್ತಿನ ಊಟಕ್ಕೂ ಕಷ್ಟ. ಪತಿ-ಪತ್ನಿಯರು ಎಲ್ಲಾರೂ ಕೂಲಿಗಾಗಿ ಅರಸುವವರು. ವಿದ್ಯೆ, ಶಿಕ್ಷಣ ಎಂಬುವುದು ಅವರ ಪಾಲಿಗೆ ಮರೀಚಿಕೆ. ಸಾಂಪ್ರದಾಯಿಕ ಬದುಕಿನ ಚೌಕಟ್ಟಿನಲ್ಲಿಯೇ ಇಂದಿಗೂ ಬದುಕು ಸವೆಸುವ ಅಲ್ಲಿನ ಕುಟುಂಬಗಳಲ್ಲಿ ಆಧುನಿಕತೆಯ ಥಳುಕಿಲ್ಲ. ಸಿನಿಮಾ, ಫ್ಯಾಷನ್ ಯಾವುದೂ ಗೊತ್ತಿಲ್ಲ. ದುಡಿಯುವುದು, ದಿನದ ಮೂರು ಹೊತ್ತಿನ ಅನ್ನ ತುಂಬಿಸಿಕೊಳ್ಳುವುದಷ್ಟೇ ಅವರಿಗೆ ಗೊತ್ತು.
ಅದು ಮಧ್ಯಪ್ರದೇಶದ ತಲನ್‌ಪುರ್ ಎಂಬ ಹಳ್ಳಿ. ಇಲ್ಲಿನ ಜನಸಂಖ್ಯೆ ಸುಮಾರು ೩೦೦೦. ಇಂದೋರ್‌ನಿಂದ ಇಲ್ಲಿಗೆ ಸುಮಾರು ೧೮೦ ಕಿ.ಮೀ. ದೂರವಿದೆ.