ಅಜಕ್ಕಳ ಗಿರೀಶ್ ಭಟ್
ಕನ್ನಡದ ಬಗ್ಗೆ ಚರ್ಚೆಯಾಗುತ್ತಿರುವುದು ಸಂತೋಷ. ಬನವಾಸಿ ಬಳಗ ಹಾಗೂ ಶುಭಶ್ರೀಯವರ ಲೇಖನಗಳನ್ನು ಓದಿದೆ. ಈಗಾಗಲೇ ನಾನು ಹಿಂದಿನ ಒಂದು ಪ್ರತಿಕ್ರಿಯೆಯಲ್ಲಿ ಬರೆದಿರುವಂತೆ, ಅಲ್ಲಿ ಎತ್ತಲಾಗಿರುವ ಹಲವು ಅಂಶಗಳು ನನ್ನ ಪುಸ್ತಕದಲ್ಲಿ ಪ್ರಸ್ತಾಪವಾಗಿವೆ. ಆದರೂ ಕೆಲವು ನಿರ್ದಿಷ್ಟ ಪ್ರಶ್ನೆಗಳನ್ನು ನಾನು ಇಲ್ಲಿ ಮತ್ತೆ ಎತ್ತಿಕೊಳ್ಳಬಯಸುತ್ತೇನೆ. ಶಂಕರ ಭಟ್ಟರ ಸಿದ್ಧಾಂತಗಳ ಬಗ್ಗೆ ನಾನು ಬರೆದುದನ್ನು ವೈಜ್ಞಾನಿಕವಲ್ಲ, ವೈಯಕ್ತಿಕ ದಾಳಿ ಅಂತೆಲ್ಲ ಕರೆಯಲಾಗಿದೆ. ವಾದದ ವಿಷಯಗಳ ಬಗ್ಗೆ ಹೇಳುವುದಕ್ಕಿಂತ, ಶಂಕರ ಭಟ್ಟರ ವಾದಗಳ ಕುರಿತು ನಾನು ಬರೆದ ಹೊತ್ತಗೆಯ ಶೀರ್ಷಿಕೆಯ ಬಗ್ಗೆಯೇ ಹೆಚ್ಚು ಒತ್ತು ಕೊಟ್ಟು ಬರೆದಿದ್ದಾರೆ. ಇರಲಿ. ಇದು ಅಷ್ಟು ಮುಖ್ಯ ಅಂತ ನನಗೆ ಅನ್ನಿಸದಿದ್ದರೂ ಈ ಶೀರ್ಷಿಕೆಯ ಬಗ್ಗೆ ಆರೋಪವನ್ನು ಮತ್ತೆ ಮತ್ತೆ ಮಾಡಲಾಗಿರುವುದರಿಂದ ಸಮರ್ಥನೆ ನೀಡುವೆ. ಮೊದಲೇ ಸ್ಪಷ್ಟಪಡಿಸುತ್ತೇನೆ,ನನಗೆ ಆ ಹಿರಿಯ ಭಾಷಾವಿದ್ವಾಂಸರ ಬಗ್ಗೆ ತುಂಬ ಗೌರವ ಉಂಟು. ವೈಯಕ್ತಿಕ ದ್ವೇಷವಾಗಲೀ ಅಸೂಯೆಯಾಗಲೀ ಇಲ್ಲ ! ಇನ್ನು, ಶೀರ್ಷಿಕೆಯಲ್ಲಿ ಅವರ ಹೆಸರು ಯಾಕೆ ತರಬೇಕಿತ್ತು? ಅವರು ಏಕಾಂಗಿ ಎಂದು ಬಿಂಬಿಸುವ ಯತ್ನವೇ? ಇತ್ಯಾದಿ ಪ್ರಶ್ನೆಗಳೂ ಬಂದಿವೆ.
ಮೊದಲನೆಯದಾಗಿ ತಾವು ಹೇಳಿದ ಹಾಗೆ ವ್ಯಾಪಕವಾಗಿ ಹೊತ್ತಗೆಗಳನ್ನು ಬರೆಯುತ್ತಿರುವವರು ಅವರೊಬ್ಬರೇ. ಅವರನ್ನು ಬೆಂಬಲಿಸಿದ ವಿವಿಧ ವಿ.ವಿ.ಗಳ ಮುಖ್ಯಸ್ಥರು ಅಥವಾ ಇನ್ನಾರಾದರೂ (ಶುಭಶ್ರೀಯವರೂ ಸೇರಿದಂತೆ) ಬರೆಯಲಾರಂಭಿಸಿಲ್ಲ. ಇನ್ನು ಆರಂಭಿಸಲೂಬಹುದು. ಆರಂಭಿಸಿದರೆ ನನ್ನ ಆಕ್ಷೇಪವಿಲ್ಲ, ದುಖವೂ ಇಲ್ಲ. ಯಾರಾದರೂ ಬರೆದರೆ ನಾನು ಓದುವುದಿಲ್ಲ ಅಂತ ಶಪಥ ಕೂಡ ಮಾಡೊಲ್ಲ. ಯಾಕೆಂದರೆ ಓದದಿದ್ದರೆ ಓದದವರಿಗೆ ನಷ್ಟ ಅಂತ ನನಗೊತ್ತು. ಒಟ್ಟಿನಲ್ಲಿ ಈಗ ಸದ್ಯಕ್ಕೆ ನಿಜವಾಗಿ ಕತ್ತರಿ ಪ್ರಯೋಗ ಮಾಡಿದವರು ಅವರೊಬ್ಬರೇ.
Like this:
Like ಲೋಡ್ ಆಗುತ್ತಿದೆ...