ಸಂಪಾದಕೀಯ ಅನ್ನೋ ಮೊಟ್ಟೆಯ ಮೇಲೆ ಒಂದು ಪ್ರೀತಿಯ ಕುಟುಕು…
– ಮಹೇಶ್ ಪ್ರಸಾದ್ ನೀರ್ಕಜೆ
ಸಂಪಾದಕೀಯದಲ್ಲಿ ಪ್ರಕಟವಾದ ಬ್ಲಾಗ್ ಬರಹಕ್ಕೆ ಪ್ರತಿಯಾಗಿ ನನ್ನ ಅನಿಸಿಕೆ ಇದು.
ಸಾಯಿ ಬಾಬಾರ ಸುತ್ತ ಇರುವ ಪವಾಡಗಳ ಬಗೆಗಿನ ವಿವಾದಗಳ ಬಗ್ಗೆ ಸಂಪಾದಕೀಯ ಈ ಹಿಂದೆ ಒಂದೆರಡು ಲೇಖನಗಳಲ್ಲಿ ಬರೆದಿತ್ತು (ಅದರಲ್ಲಿ ಒಂದು ಸನ್ಮಾರ್ಗ ಎನ್ನುವ ಪತ್ರಿಕೆಯಲ್ಲಿ ಪ್ರಕಟವಾದ ಸಂಪಾದಕೀಯ ಬರಹ). ಅವುಗಳಲ್ಲೊಂದು ಲೇಖನಕ್ಕೆ ಬಂದ ಪ್ರತಿಕ್ರಿಯೆಯೊಂದಕ್ಕೆ ಪ್ರತಿಯಾಗಿ ಸಂಪಾದಕೀಯ ಬರೆದ ಸ್ಪಷ್ಟೀಕರಣ ರೂಪದ ಬರಹವೇ ನಾನು ಮೇಲೆ ನೀಡಿದ ಬ್ಲಾಗ್ ಬರಹ. ಈ ಬ್ಲಾಗ್ ಬರಹದ ಸಾರಾಂಶ ಏನೆಂದರೆ ಸಾಯಿ ಬಾಬಾ ಮಾಡಿದ ಸಮಾಜ ಮುಖೀ ಕೆಲಸಗಳ ಬಗ್ಗೆ ಮೆಚ್ಚುಗೆಯಿದ್ದರೂ ಮೂಲತಹ ಬಾಬಾ ನಡೆದ ದಾರಿ ಪವಾಡಗಳನ್ನೊಳಗೊಂಡ ದಾರಿಯಾಗಿದ್ದು ಅದು ಜನರನ್ನು ದಿಕ್ಕುತಪ್ಪಿಸುವ, ಮೌಢ್ಯತೆಗೆ ನೂಕುವ ಮೋಸದ, ಸುಳ್ಳಿನ ದಾರಿಯಾಗಿದೆ, ಆದ್ದರಿಂದ ನಮಗೆ ಅಂತಹ ಸುಳ್ಳಿನ ದಾರಿ ಬೇಕೋ ಅಥವಾ ಬುಧ್ಧ ಹಾಕಿಕೊಟ್ಟ ಸತ್ಯದ ದಾರಿ ಬೇಕೋ ಎಂಬ ಜಿಜ್ಞಾಸೆ. ಕೊನೆಯಲ್ಲಿ ಸಂಪಾದಕೀಯ ಹೀಗೆ ಹೇಳುತ್ತದೆ – “ಬುದ್ಧನ ಸತ್ಯ ಮಾರ್ಗವೇ ನಿಜವಾದ ಬದುಕಿನ ತಳಪಾಯ. ಅದರ ಮೇಲೇ ನಮ್ಮ ಬದುಕು ಕಟ್ಟಿಕೊಳ್ಳುವಂತಾಗಬೇಕು” ಮತ್ತು “ನಾವು ಸತ್ಯದ ಮಾರ್ಗದಲ್ಲಿ ಊರ್ಧ್ವಮುಖಿಗಳಾಗಬೇಕೇ ಹೊರತು ಸುಳ್ಳಿನ ಮಾರ್ಗದಲ್ಲಿ ಅಧೋಮುಖಿಗಳಾಗಬಾರದು ಅಲ್ಲವೇ?”. ಇದರ ಬಗ್ಗೆ ಒಂದು ಚಿಂತನೆ ನಡೆಸುವ ಉದ್ದೇಶ ಈ ಲೇಖನದ್ದು.
ನನ್ನ Some ಶೋಧನೆ!!
-ಸವಿತ ಎಸ್.ಆರ್
ಆಗಷ್ಟೇ ಕನ್ನಡ ಮಾಧ್ಯಮದಲ್ಲಿ 10ನೇ ತರಗತಿ ಮುಗಿಸಿ, ಪ್ರಥಮ ಪಿ.ಯು.ಸಿ ಕಾಲೇಜಿಗೆ ಸೇರಿದ ದಿನಗಳು. ಹೊಸ ಕಾಲೇಜು, ಹೊಸ ಗೆಳತಿಯರು, ವಿಜ್ಞಾನದ ವಿಷಯಗಳು, ಭೌತ,ಸಸ್ಯ,ಜೀವ,ರಾಸಾಯನಿಕ ಶಾಸ್ತ್ರದ ಪ್ರಯೋಗಗಳು, ಗಣಿತ ಸಮೀಕರಣಗಳು….ಅದೂ ಎಲ್ಲಾ ಇಂಗ್ಲೀಷ್ ಮಾಧ್ಯಮದಲ್ಲಿ…..ಎಲ್ಲವೂ ಒಂಥರಾ ಹೊಸತೇ 🙂
ಒಂದಿನ ಮಧ್ಯಾಹ್ನ ನಾನು ಕಾಲೇಜಿನಿಂದ ಮನೆಗೆ ವಾಪಾಸ್ಸಾಗಿ…ಊಟ ಮಾಡಿ ಟಿ.ವಿ. ಮುಂದೆ ಹಾಜರ್ರು. ನನ್ನ ತಮ್ಮ ಕೂಡ ಆವಾಗಲೇ ಬಂದ. ಅದ್ಯಾರೋ ಸ್ನೇಹಿತರು ಕೊಟ್ರು ಅಂತ ಒಂದು ಚಿಕ್ಕ ಸೀಸೆಯಲ್ಲಿ ಪಾದರಸವನ್ನ ತಂದಿದ್ದ. ಅಮ್ಮನಿಗೆ ಕಾಣದ ಹಾಗೆ ನನ್ನ ಬಳಿ ತಂದು ಒಮ್ಮೆ ಆ ಸೀಸೆಯನ್ನ ಜೋರಾಗಿ ಅಲುಗಾಡಿಸಿ ತೋರಿಸಿದ. ಒಂದು ದೊಡ್ಡ ಹನಿಯಂತಿದ್ದ ಪಾದರಸ ಒಡೆದು ಅನೇಕ ಚಿಕ್ಕ ಚಿಕ್ಕ ಹನಿಗಳಾದವು. ಮತ್ತೊಮ್ಮೆ ನಿಧಾನವಾಗಿ ಸೀಸೆಯನ್ನ ತಿರುಗಿಸಿದರೆ ಮತ್ತೆ ಮೊದಲಿನ ದೊಡ್ಡ ಹನಿಯಾಯ್ತು. ಇಷ್ಟಕ್ಕೆ ನಿಲ್ಲದ ಅವನು ಪೇಪರಿನ ಮೇಲೆ ನಿಧಾನವಾಗಿ ಸುರುವಿ…ಈಗ ಅದು ಹೇಗೆ ಹರಿದಾಡತ್ತೆ ಅಂತ ತೋರಿಸಿದ್ದು ನನ್ನ ಕುತೂಹಲ ಕೆರಳಿಸಿತು. ಮತ್ತೆ ಪೇಪರಿನ ಮೂಲೆಯಲ್ಲೊಂದು ಚಿಕ್ಕ ಮಡಿಕೆ ಮಾಡಿ ಅದರಿಂದ ಪುನಃ ಪಾದರಸವನ್ನ ಸೀಸೆಯೊಳಗೆ ಹಾಕಿ….ಇದು ನನ್ನದು….ತೆಗೆದರೆ ನೋಡು ಅಂತ ಕಟ್ಟಾಜ್ಞೆಯೊಂದಿಗೆ ಟೇಬಲ್ ಮೇಲೆ ಸೀಸೆಯನ್ನಿಟ್ಟ. ನಾನು ಟೀವಿ ನೋಡುತ್ತಲೇ ಇದ್ದೆ.
ಊಟ ಮುಗಿಸಿ ತಮ್ಮ ಸ್ಕೂಲಿಗೆ ಹೊರಟುಹೋದ. ಅಲ್ಲಿಯವರೆಗೂ ಕುತೂಹಲ ತಡೆದಿಟ್ಟುಕೊಂಡಿದ್ದ ನನಗೊಂದು ಛಾನ್ಸ್….!! 🙂 ನಿಧಾನವಾಗಿ ಸೀಸೆಯ ಮುಚ್ಚಳ ತೆಗೆದೆ (ರಾಸಾಯನಿಕ ವಸ್ತುವನ್ನ ಬರಿಗೈಯಲ್ಲಿ ಮುಟ್ಟಬಾರದು ಅಂತ ತಿಳಿದಿದ್ರೂ, ಏನೂ ಆಗೋಲ್ಲ ಅನ್ನೋ ಧೈರ್ಯದ ಮೇಲೆ) ಪಾದರಸವನ್ನ ಬರಿಗೈಯಲ್ಲಿ ಸ್ವಲ್ಪ ಒತ್ತಡದಲ್ಲಿ ಮುಟ್ಟಿದೆ. ಅದು ಚಿಕ್ಕ ಚಿಕ್ಕ ತುಣುಕುಗಳಾದವು..ಮತ್ತೆ ಬೆರಳಿಗೇನಾದ್ರು ಆಯ್ತಾ ಅಂತ ಒಮ್ಮೆ ನೋಡಿದೆ ಏನೂ ಆಗಿರಲಿಲ್ಲ. ಅದೇ ಧೈರ್ಯದ ಮೇಲೆ ಪಾದರಸವನ್ನ ಬಲಗೈ ಅಂಗಳದಲ್ಲಿ ಸುರುವಿಕೊಂಡು..ಬಲಗೈಯಿಂದ ಎಡಗೈಗೆ…ಮತ್ತೆ ಎಡಗೈಯಿಂದ ಬಲಗೈಗೆ ಸುರಿದಾಡೋದು ಮಜಾ ಅನ್ನಿಸ್ತು.. 🙂