ಬದುಕಿಗೆ ಪರಿಧಿ ಹಾಕೋಳ್ತಾ ಇದ್ದೀವಿ ಅನಿಸ್ತಾ ಇದೆ…
ಚಿತ್ರಾ ಸಂತೋಷ್
ಹಂಚಿ ಉಂಡರೆ ಹಸಿವಿಲ್ಲ…!! ಹತ್ತನೇ ತರಗತಿಯಲ್ಲಿ ನಾನು ಓದುತ್ತಿದ್ದಾಗ ಬಾಗೇವಾಡಿ ಅನ್ನೋ ಹೆಸರಿನ ಮೇಷ್ಟ್ರು ಇದ್ದರು. ತುಂಬಾ ಒಳ್ಳೆಯ ಮೇಷ್ಟ್ರು.ಮೂರು ವರ್ಷ ನಮ್ಮ ಜೊತೆಗಿದ್ದ ಆ ಮೇಷ್ಟ್ರು ಆಗಾಗ ಹೇಳುತ್ತಿದ್ದ ಮಾತು ಹಂಚಿ ಉಂಡರೆ ಹಸಿವಿಲ್ಲ. ಈಗಲೂ ಆ ಮಾತು ಆಗಾಗ ನೆನಪಾಗುತ್ತಿದೆ. ಮಾಮೂಲಿ ನಮ್ಮನೆಯಲ್ಲಿ ನಾನು-ತಮ್ಮ ಇಬ್ಬರೇ ಇರ್ತೀವಿ. ಆಗ ಒಂದು ಥರ ಬೋರ್. ನನಗೆ ರಜೆ ಇದ್ದ ದಿನ ಅವನಿಗರಲ್ಲ, ಅವನಿಗೆ ರಜೆ ಇದ್ದ ದಿನ ನಂಗೆ ರಜೆ ಇರೊಲ್ಲ. ಅದಕ್ಕೆ ಅವನಿಗೆ ರಜೆ ಇದ್ದ ನಾನು ಆಫೀಸ್ ನಿಂದ ಬೇಗ ಹೊರಡೋದು, ನಂಗೆ ರಜೆ ಇದ್ದ ದಿನ ಅವನು ಆಫೀಸ್ ನಿಂದ ಬೇಗ ಹೊರಟುಬರೋದು. ನಮಗೆ ರಜೆ ಇದ್ದ ದಿನ ಮಾವ, ಅಣ್ಣ ಬೇಗನೆ ಮನೆಮುಂದೆ ಹಾಜರಾಗೋದು. ಏನಾದ್ರೂ ಸ್ಪೆಷಲ್ ಅಡುಗೆ ಮಾಡೋದು, ದೇವಸ್ಥಾನಕ್ಕೆ ಹೋಗೋದು…ಅದೊಂದು ಥರಾ ನಮಗೆ ತುಂಬಾ ಖುಷಿಕೊಡೋದು. ನಂಗೆ ಎಲ್ಲಕ್ಕಿಂತ ಖುಷಿಕೊಡೋದು ಎಲ್ಲರೂ ಜೊತೆಗೆ ಊಟ ಮಾಡೋದು. ನಾವೇನದ್ರೂ ಮಾಡಿದ್ರೆ ಪಕ್ಕದ್ಮನೆ ಅಡುಗೆ ತಜ್ಞೆ ಆಂಟಿ ಅಲ್ಲಿ ಹಾಜರಾಗಿ..ನಾವು ಮಾಡೋ ಡಬ್ಬ ಅಡುಗೇನ ಇನ್ನಷ್ಟು ರುಚಿಯಾಗಿಸ್ತಾರೆ. ಆಮೇಲೆ ಅವರ ಮನೆ ಸಾರು ನಮ್ಮನೆಗೆ, ನಮ್ಮನೆ ಸಾರು ಅವರ ಮನೆಗೆ ಹೋಗುತ್ತೆ. ಒಟ್ಟಿನಲ್ಲಿ ಮನೆತುಂಬಾ ಜನರು ಓಡಾಡ್ತಾ ಇದ್ರೆ ಸಕತ್ ಖುಷಿ ಆಗೋದು.
ಪಕ್ಕದ್ಮನೆ ತಾತನೂ ಚಿತ್ರಾನಿಗೆ ಸಾರು ಕೊಟ್ಟೆಯೇನು? ಅಂತ ರಾತ್ರಿ ಮಲಗೋಕೆ ಮುಂಚೆ ಮೊಮ್ಮಕ್ಕಳನ್ನು ಗದರಿಸಿ ಅವರ ಕೈಯಲ್ಲಿ ಕೊಟ್ಟು ಕಳಿಸ್ತಾರೆ. ಸ್ವಲ್ಪನೇ ಆಗಲೀ ಮತ್ತೊಬ್ಬರಿಗೆ ಕೊಟ್ಟು ತಿನ್ನೋದ್ರಲ್ಲಿ ತುಂಬಾ ಖುಷಿ ಇರುತ್ತೆ ಅಲ್ವಾ? ಊರಲ್ಲಿ ಆದ್ರೆ ಮನೆಗೆ ಯಾರಾದ್ರೂ ನೆಂಟರು ಬರ್ತಾರೆ, ಖುಷಿ-ಖುಷಿಯಾಗಿ ಸಂಭ್ರಮಿಸೋ ಅವಕಾಶಗಳಿರ್ತವೆ. ಆದರೆ, ಬೆಂಗಳೂರಿನಲ್ಲಿದ್ರೆ ನೆಂಟರಿಲ್ಲ, ತುಂಬಾ ಆಪ್ತರಿಲ್ಲ, ಆಪ್ತರಿದ್ರೂ ಅವರಿಗೆ ಅವರದೇ ಆಗ ಕೆಲಸಗಳಿರ್ತವೆ. ನಮ್ಮನೆಯಲ್ಲಿ ಬಂದು ಅವರಿಗೆ ಹರಟೆ ಹೊಡೆಯೋಕೆ ಸಮಯವೆಲ್ಲಿ ಇರುತ್ತೆ?
ಒಂದು ಕಾಲದಲ್ಲಿ ಎಲ್ಲರೂ ಜೊತೆಯಾಗೇ ಬಾಳೋ ಅವಿಭಕ್ತ ಕುಟುಂಬ ಪರಂಪರೆ ಇತ್ತು. ಕುಟುಂಬದ ಹತ್ತು-ಹದಿನೈದು ಮಂದಿ ಜೊತೆಗೆ ಬಾಳೋ ಸುಂದರ ಕುಟುಂಬ. ನನ್ನ ಗೆಳತಿ ಯೊಬ್ಬಳು ಗೌರಿ ಅಂತ ಬಳ್ಳಾರಿಯವಳು, ಅವರ ಮನೆಯಲ್ಲಿ ಈಗಲೂ 32 ಮಂದಿ ಇದ್ದಾರೆ. ಇನ್ನೂ ಆ ಕುಟುಂಬದಲ್ಲಿ ಜಮೀನಿಗೆ ಕಿರಿಕಿರಿ ಇಲ್ಲ. ತಾತ-ಮುತ್ತಾತರ ಕಾಲದಿಂದಲೂ ಆಸ್ತಿ ಪಾಲಾಗಿಲ್ಲ. ದೊಡ್ಡ ಮನೆಯಲ್ಲಿ ಮನೆ ತುಂಬಾ ಓಡಾಡುವ ಮಕ್ಕಳು, ಅಜ್ಜಿ, ತಾತಂದಿರು, ಹೆಂಗಳೆಯರು. ದಿನಾ ಮನೆಯೇ ಹಬ್ಬದಂತಿರುತ್ತೆ. ಇಂಥ ಕುಟುಂಬಗಳು ಹಳ್ಳಿ ಕಡೆ ಇದ್ರೂ ಕ್ರಮೇಣ ಮರೆಯಾಗುತ್ತವೆ. ಆರತಿಗೊಂದು ಕೀರುತಿಗೊಂದು ಮಗು. ಅವರಿಗೆ ಮದುವೆಯಾಗೋ ಸಮಯದಲ್ಲಿ ಆಸ್ತಿಯನ್ನು ಪಾಲು ಮಾಡಿ ಕೊಟ್ಟುಬಿಡುತ್ತಾರೆ. ಅದರ ಜೊತೆ ಅವರ ಮನಸ್ಸು ಕೂಡ ಇಬ್ಭಾಗ ಆಗಿ ಬಿಡುತ್ತೆ.
ನಂಗನಿಸೋದು ಅಂಥ ಸುಂದರ ಕುಟುಂಬ ಇರಬೇಕಿತ್ತು ಅಂತ. ಈ ಆಧುನಿಕತೆ, ವೇಗದ ಬದುಕು, ಒಂಜಾಟದ ನಡುವೆ ನಮ್ಮ ಆ ಸುಂದರ ಬದುಕಿನ ಕಲ್ಪನೆ ಮರೆಯಾಗುತ್ತಿದೆಯಲ್ಲಾ ಎಂದನಿಸುತ್ತೆ. ಅತ್ತೆ, ಮಾವ ಜೊತೆಗಿರುವ ಬದಲು ತಾನು ತನ್ನ ಗಂಡ ಮಾತ್ರ ಆರಾಮವಾಗಿ ಇದ್ದುಬಿಡಬೇಕು ಅನ್ನೋ ಸೊಸೆ, ಅಮ್ಮ-ಅಪ್ಪನಿಗೆ ವಯಸ್ಸಾದ ಹಾಗೇ ವೃದ್ಧಾಶ್ರಮದ ಬೇಲಿಯೊಳಗೆ ಅವರ ಕನಸನ್ನೇ ಕೊಲ್ಲುವ ಮಗ ಅಥವಾ ಮಗಳು,…ಥತ್! ಹೀಗೇ ಆಗಬಾರದಿತ್ತು ಅನಿಸುತ್ತೆ. ಜೊತೆಯಾಗಿ ಕಲೆದು, ಜೊತೆಯಾಗಿ ಖುಷಿಪಟ್ಟು, ಜೊತೆಯಾಗಿ ಬದುಕು ನಡೆಸುವ ಆ ಸುಂದರ ಜೀವನ ಯಾಕೆ ಮರೆಯಾಗುತ್ತಿದೆ? ಅಲ್ವಾ?
ಹಂಚಿ ಉಂಡರೆ ಹಸಿವಿಲ್ಲ ಅಂದ ಹುಡುಗಿ ಏನೋನೋ ಬರೀತಾ ಹೋದ್ಳು ಅನಿಸಿಬಿಡ್ತಾ? ಹೌದು, ಒಮ್ಮೊಮ್ಮೆ ಹೀಗೇ ಈ ಯೋಚನೆಗಳು…ಆಫಿಸ್ನಲ್ಲಿ ಕೂತಿರ್ತೀನಿ..ಹಂಗೆ ನೆಟ್ಟಗೆ ಮನೆಯ ಅಡುಗೆ ಮನೆಗೆ ಹೋಗಿ ಬರ್ತೀನಿ. .ಲಂಗು ಲಗಾಮಿಲ್ಲದ ಕುದುರೆಯಂತೆ ಯೋಚನೆಗಳು ಅಲ್ವಾ?
ಯಾಕೋ ಬದುಕಿಗೆ ಒಂದು ಪರಿಧಿ ಹಾಕ್ಕೊಂಡು ಮನುಷ್ಯ ಜೀವಿಸ್ತಾ ಇದ್ದಾನೆ ಅನಿಸ್ತಾ ಇದೆ..ಬದುಕು ಹರಿದು ಹಂಚಿ ಹೋಗುತ್ತಿದೆಯೇ ಎಂದನಿಸ್ತಾ ಇದೆ…
*********
ಚಿತ್ರಕೃಪೆ: counselling-london.org.uk





ಅಂಗನವಾಡಿಯಲ್ಲಿ ಊಟ ಮಾಡುತ್ತಾ ಹೇಳುತ್ತಿದ್ದ ಸಾಲುಗಳು ಆಗಾಗ ನೆನಪಾಗುತ್ತವೆ “ಕೂಡಿ ಬಾಳೋಣ, ಕೂಡಿ ತಿನ್ನೋಣ, ನಮ್ಮ ನಮ್ಮೊಳಗೇ ಜಗಳ ಬೇಡ ಶಾಂತಿ ಇರಲಿ….”. ದೇಶ, ರಾಜ್ಯ, ಜಿಲ್ಲೆ, ಕುಟುಂಬ.. ಎಲ್ಲದಕ್ಕೂ ಗಡಿ ಹಾಕುತ್ತ ಬಂದೆವು. ಗಡಿ ಹಾಕಿದಷ್ಟು ಕಚ್ಚಾಟ ಹೆಚ್ಚಾಯಿತೇ ವಿನಃ ಕಡಿಮೆ ಆಗಿಲ್ಲ. ಆದರೂ ಈಗಿನ ಬದುಕಿಗೆ ಕೂಡಿ ಬಾಳುವುದು ಸಾಧ್ಯವೂ ಇಲ್ಲ. “ಹಾಗಿರಬೇಕಿತ್ತು ಹೀಗಿರಬೇಕಿತ್ತು” ಎನ್ನುತ್ತಾ ನಾವೂ ಊರು, ಮನೆ, ಮನಗಳಿಂದ ದೂರವಾಗುತ್ತಾ ಇದ್ದೇವೆ. ಅದೂ 3G ವೇಗದಲ್ಲಿ. ಮತ್ತೇಕೆ ಬೇಸರ? ಓಟ್ಸ್, ಕೆಲ್ಲೋಗ್ಸ್, ಕ್ಯಾಲೋರಿ, ವೆಯಿಟ್ ಲಾಸ್, ಜೊಗ್ಗಿಂಗ್, ವಾಕಿಂಗ್, ಫಿಟ್ನೆಸ್, ೩ಜಿ, ಗೂಗಲ್, ಫೆಸ್-ಬುಕ್, ಐ-ಪ್ಯಾಡ್, ಮಲ್ಟಿಪ್ಲೆಕ್ಸ್….. ಜೈ ಹೇಳೋಣ. 🙂
+1
ಕೂಡು ಕುಟುಂಬದಲ್ಲಿ ಸಿಗುವ ಸಂತೋಷವೇ ಬೇರೆ ನಿಮ್ಮ ಲೇಖನ ಚನ್ನಾಗಿದೆ.
chithraravare ninna lekana thumba uthamavagide…..edannu odutha odutha nange nanna yavvanada nenapagathe …………..kannalli neeru bandbittirhu………….. entha lekanagalu thumba mooodi baraliiiiiii
correct we are losing the love and affection of the joint family