ತುತ್ತನ್ನು ನಿರ್ಲಕ್ಷಿಸುವ ಮುನ್ನ
– ನವೀನ್ ನಾಯಕ್
ಭಾರತ ಬದಲಾಗುತಿದೆ, ಇದನ್ನು ನಮ್ಮ ಮುಖ್ಯಮಂತ್ರಿಯಿಂದ ಹಿಡಿದು ಪ್ರಧಾನ ಮಂತ್ರಿಯವರೆಗೆ ಎಲ್ಲರೂ ದಿನಕೊಮ್ಮೆ ಮಂತ್ರದಂತೆ ಪಟಿಸುತಿದ್ದಾರೆ. ಇದರಿಂದ ನಮ್ಮ ಕಂಗಳು ಬದಲಾವಣೆಯ ಸಮಯ ಹತ್ತಿರ ಬರುತಿದೆ ಎಂದು ಹೊಸ ಕನಸು ಕಾಣತೊಡಗಿದೆ. ಇಂಥ ಸಮಯದಲ್ಲಿ ವಾಸ್ತವವನ್ನು ವಿಶ್ವಸಂಸ್ಥೆ ಬಯಲಿಗೆಳೆದು ನಮ್ಮ ಸರಕಾರ ನಡೆಸುತ್ತಿರುವವರ ಮುಖವಾಡವನ್ನು ಕಳಚಿದೆ. ವಿಶ್ವಸಂಸ್ಥೆ ನಡೆಸಿರುವ ಸಮೀಕ್ಷೆಯನ್ನು ಗಮನಿಸಿದರೆ ಭಾರತದ ಬದಲಾವಣೆಯು ಮುಂದುವರೆಯುವದು ಬಿಟ್ಟು ಹಿಮ್ಮುಖವಾಗಿ ನಡೆಯತೊಡಗಿದೆ.ಈ ಅನಿಸಿಕೆ ಏಕೆಂದರೆ ಅದರ ಸಮೀಕ್ಷೆಯ ವರದಿಯನ್ನು ನೋಡಿ.
ವಿಶ್ವಸಂಸ್ಥೆ;- ವಿಶ್ವದಲ್ಲಿ 120 ಕೋಟಿ ಜನ ಇನ್ನೂ ಕಿತ್ತು ತಿನ್ನುವ ಬಡತನದ ಬೇಗೆಯಲ್ಲಿ ದಿನವನ್ನು ಕಳೆಯುತಿದ್ದಾರೆ. ಅದರಲ್ಲಿ ಮೂರನೆಯ ಒಂದರಷ್ಟು ಅಂದರೆ 33% (39 ಕೋಟಿ 60 ಲಕ್ಷ ಜನ) ಭಾರತೀಯರಾಗಿದ್ದಾರೆ. ಇವರು ದಿನವೊಂದಕ್ಕೆ ಸುಮಾರು 65 ರುಪಾಯಿಗಳಿಗಿಂತಲೂ ಕಡಿಮೆ ಹಣದಲ್ಲಿ ಜೀವನ ದೂಡುತಿದ್ದಾರೆ. ಅವರದೇ ವರದಿ ಪ್ರಕಾರ 1981 ರಿಂದ 2010ರ ನಡುವೆ ವಿಶ್ವದ ಬಡತನದ ಪ್ರಮಾಣ ಸುಮಾರು ಅರ್ಧದಷ್ಟು ಇಳಿಕೆಯಾಗಿದೆ ಮತ್ತು ಇದಕ್ಕೆ ವಿರುದ್ಧವಾಗಿ ಅಭಿವೃದ್ಧಿಶೀಲ ಹಾಗು ಬಡರಾಷ್ಟ್ರಗಳಲ್ಲಿ
ಬಡತನದ ಪ್ರಮಾಣ ಶೇಕಡ 59ರಷ್ಟು ಏರಿಕೆಯಾಗಿದೆ. ನಮ್ಮ ದೇಶದಲ್ಲಿ ಮಧ್ಯ ಪ್ರದೇಶ, ಝಾರ್ಖಂಡ್, ಬಿಹಾರಗಳಲ್ಲಿ ಸಹಾರಾ ಮರುಭೂಮಿಯ ಸುತ್ತಲಿನ ಕ್ಷಾಮಪೀಡಿತ ಪ್ರದೇಶಗಳಿಗಿಂತ ಹೆಚ್ಚಿನ ದುಃಸ್ಥಿತಿ ಇದೆ ಎಂದು ವಿಶ್ವಸಂಸ್ಥೆ ತಿಳಿಸಿದೆ. ಇವರು ಈ ಹಿಂದೆಯೇ ತಿಳಿಸಿದಂತೆ 2011ರ ನಂತರ ಆಹಾರ ವಸ್ತುಗಳಿಗೆ ಬೇಡಿಕೆ ಗಣನೀಯ ಪ್ರಮಾಣದಲ್ಲಿ ಏರುತ್ತದೆ ಮತ್ತು ಹವಮಾನ ವ್ಯಪರಿತ್ಯದಿಂದಾಗಿ ಉತ್ಪಾದನೆ ಕಳವಳಕಾರಿಯಾಗಿ ಕುಸಿಯಲಿದೆ. ವರ್ತಮಾನದಲ್ಲಿ ವಾಸ್ತವ ಪರಿಸ್ತಿತಿ ಹೀಗೆಯೇ ಇದೆ. ನಮ್ಮ ರಾಜಕಾರಣಿಗಳು ಮಾತ್ರ ನಮ್ಮಿಂದ ಇದನ್ನು ಮರೆಮಾಚಿದ್ದಾರೆ.
ಕರ್ನಾಟಕವೂ ಇದಕ್ಕೆ ಹೊರತಾಗಿಲ್ಲ!. ನಮ್ಮ ರಾಜ್ಯದಲ್ಲಿ ಐದು ಜಿಲ್ಲೆಗಳ ಮಕ್ಕಳಲ್ಲಿ ಅಪೌಷ್ಟಿಕತೆ ಇದೆ ಎಂದು ನ್ಯಾಯಮೂರ್ತಿ ಎನ್.ಕೆ ಪಾಟೀಲ ನೇತೃತ್ವದ ಸಮಿತಿ ರಾಜ್ಯ ಸರಕಾರದ ಮುಂದಿರಿಸಿದೆ. ಆ ಜಿಲ್ಲೆಗಳು ಇಂತಿವೆ, 1)ಗುಲ್ಬರ್ಗಾ 2)ರಾಯಚೂರು 3)ಬೀದರ್ 4) ಕೊಪ್ಪಳ 5)ಬಳ್ಳಾರಿ. ಗುಲ್ಬರ್ಗಾದ ಅಪೌಷ್ಟಿಕತೆಯ ಬಗ್ಗೆ ತಿಳಿಯಲು
ಡಾ.ಆಶಾ ಬೆನಕಪ್ಪನವರು ಸ್ಥಳೀಯ ಪತ್ರಿಕೆ ಬರೆದ ಒಂದು ಘಟನೆ ಹೀಗಿದೆ, ಅತ್ಯಂತ ಹಿಂದುಳಿದ ಮತ್ತು ಬಡತನಕ್ಕೆ ತುತ್ತಾದ ಜಿಲ್ಲೆಗಳಲ್ಲಿ ಗುಲ್ಬರ್ಗವೂ ಒಂದು. 2011ರಲ್ಲಿ
ಸ್ತನ್ಯಪಾನ ಮತ್ತು ಎಚ್.ಐ.ವಿ ಕುರಿತ ಕಾರ್ಯಾಗಾರ ನಡೆಸಲು ನಾನು ಗುಲ್ಬರ್ಗಾಕ್ಕೆ ಭೇಟಿ ನೀಡಿದ್ದೆ. ಅಲ್ಲಿನ ಬಡವರ ಶೋಚನೀಯ ಸ್ಥಿತಿ ನನ್ನನ್ನು ತಲ್ಲಣಗೊಳಿಸಿತು. ನಾನು ಈ ಬಗ್ಗೆ ಸಂಘಟಕರಲ್ಲಿ ವಿಚಾರಿಸಿದಾಗ ಅವರು ಪ್ರತಿಕ್ರಿಯಿಸಿದ್ದು ಹೀಗಿದೆ. ಅವರನ್ನು ಬಡವರನ್ನಾಗಿ ಉಳಿಸಿವುದೇ ಮುಖ್ಯ ಗುರಿಯಾಗಿದೆ, ಹೀಗಿದ್ದರೆ ಅನುದಾನದ ಹರಿವು ನಿಲ್ಲುವುದಿಲ್ಲ!. ಈ ತರ್ಕ ನನಗೆ ಅರ್ಥವಾಗಲಿಲ್ಲ.
ಅಂದರೆ ನಮ್ಮ ರಾಜಕೀಯ ವ್ಯವಸ್ತೆ ರಸ್ತೆ, ಭೂಮಿ ನುಂಗುವುದಲ್ಲದೆ ಬಡವರ ಅಭಿವೃದ್ದಿಗೆ ಬಿಡುಗಡೆಯಾಗುವ ಅನುದಾನದ ಹಣವನ್ನು ನುಂಗುತ್ತಿವೆ. ವಿಪರ್ಯಾಸವೇನೆಂದರೆ ರಾಜಕೀಯ ಪಕ್ಷಗಳು ಅಲ್ಪಸಂಖ್ಯಾತರ, ಬಡವರ, ಹಿಂದುಳಿದವರ ಅಭಿವೃದ್ದಿ ಕಳೆದ ಅರವತೈದು ವರ್ಷಗಳಿಂದ ಮಾಡಿ ಸ್ವಿಸ್ ಬ್ಯಾಂಕ್ ಭರ್ತಿ ಮಾಡಿದ್ದಾರೆ. ಭಾರತವು ನೈಜವಾಗಿ ಕೃಷಿ ಪ್ರಧಾನ ದೇಶ. ಇಲ್ಲಿ ಕ್ಷಾಮ ಬಿಡಿ ಅದರ ಚಿಂತನೆಯನ್ನು ಊಹಿಸಿಕೊಳ್ಳಲೂ ಸಾದ್ಯವಾಗಬಾರದಿತ್ತು. ಹಣ ಮಾಡುವ ಭರಾಟೆಯಲ್ಲಿ ರೈತರ ಜಮೀನನ್ನು ಕಸಿದುಕೊಂಡು ಐಟಿ, ಬಿಟಿ, ಕೈಗಾರಿಕಾ ಕಂಪನಿಗಳಿಗೆ ನೀಡುತ್ತಾ ಬಂದಿದ್ದೀವಿ. ಇದರಿಂದ ಮತ್ತು ಹವಮಾನದ ವೈಪರಿತ್ಯದಿಂದ (ವೈಪರಿತ್ಯಕ್ಕೆ ನಾವೇ ಕಾರಣ) ಉತ್ಪಾದನೆ ತೀವ್ರಗತಿಯಲ್ಲಿಕುಸಿತಕಾಣುತ್ತಿದೆ.
ನಾವು ನೀಡುವ ಆಹಾರದ ಬೆಲೆಯಲ್ಲಿ ಅರ್ಧದಷ್ಟು ಕೂಡ ರೈತರ ಕೈವಶವಾಗುತ್ತಿಲ್ಲ. ಎಲ್ಲವೂ ಮಧ್ಯವರ್ತಿಗಳ ಹೊಟ್ಟೆ ತುಂಬುತ್ತಿವೆ. ಹೀಗೆ ಆರ್ಥಿಕತೆಯಲ್ಲಿ ಹಿನ್ನಡೆಯುತ್ತಿರುವ ರೈತರು ಮತ್ತು ಅವರ ಮಕ್ಕಳು ನಗರವಾಸಿಗಳಾಗಲು ವಲಸೆ ಹೋಗುತಿದ್ದಾರೆ. ಸಹಜವಾಗಿ ಬೇರೇನು ಮಾಡಲು ಸಾದ್ಯ.
ಇನ್ನು ಒಂದು ದುಸ್ಥಿತಿ ಎಂದರೆ ಮುಂದುವರೆದ ದೇಶಗಳು ವಿಶ್ವದಲ್ಲಿ ಉತ್ಪಾದನೆಯಾಗುವ ಆಹಾರದಲ್ಲಿ ಅರ್ಧದಷ್ಟನ್ನು ಬಳಸುತ್ತಿವೆ. ಮುಂದುವರೆದ ರಾಷ್ಟ್ರಗಳಲ್ಲಿ ಜನಸಂಖ್ಯೆ ತೀರ ಕಡಿಮೆ. ಆದರೂ ಇವರು ಅರ್ಧದಷ್ಟು ಆಹಾರ ಬಳಸುತ್ತಾರೆ ಎಂದರೆ ? ಇಲ್ಲಿ ಆಹಾರ ಮುಖ್ಯವಾಗಿ ಜನರು ತಿನ್ನುವುದಕ್ಕಿಂತ ಹೆಚ್ಚಾಗಿ ದನ ಮತ್ತು ಇತರೆ ಪ್ರಾಣಿಗಳೇ ತಿಂದು ಹಾಕುತ್ತಿವೆ. ಒಂದು ಸಮೀಕ್ಷೆಯ ಪ್ರಕಾರ ಭಾರತ ಮತ್ತು ಚೀನದ ಜನರು ತಿನ್ನುವಷ್ಟು ಆಹಾರವನ್ನು ಕೇವಲ ಮುಂದುವರೆದ ರಾಷ್ಟ್ರಗಳ ಪ್ರಾಣಿಗಳೇ ತಿಂದು ಹಾಕುತ್ತವೆ. ವ್ಯತ್ಯಾಸವೇನೆಂದರೆ ನಮ್ಮ ದೇಶದ ಜನರು ಬೆಳೆದದನ್ನು ನೇರವಾಗಿ ರೊಟ್ಟಿ, ಅನ್ನದ ರೂಪದಲ್ಲಿ ಸೇವಿಸಿದರೆ ಮುಂದುವರೆದ ರಾಷ್ಟ್ರಗಳ ಜನರು ಧಾನ್ಯವನ್ನು ದನಗಳಿಗೆ ಮೇವನ್ನಾಗಿ ಪರಿವರ್ತಿಸಿ ಜನರು ದನದ ಮಾಂಸವನ್ನು ತಿನ್ನುತಿದ್ದಾರೆ. ಇಲ್ಲಿ ಒಂದು ಪೌಂಡು ಮಾಂಸವನ್ನು ಉತ್ಪಾದಿಸಬೇಕೆಂದರೆ ಹದಿನಾರು ಪೌಂಡು ಧಾನ್ಯವನ್ನು ದನಗಳಿಗೆ ತಿನ್ನಿಸಬೇಕು.
ಅಂದರೆ ಮುಂದುವರೆದ ದೇಶಗಳಲ್ಲಿ ಒಬ್ಬನು ತಿನ್ನುವ ಆಹಾರವು ಬಡದೇಶದ ಹದಿನಾರು ಜನರು ತಿನ್ನುವ ಆಹಾರಗಳಿಗೆ ಸಮವಾಗುತ್ತದೆ. ಇದು ಸೂಸಾನ್ ಎಂಬುವವರು ನಡೆಸಿದ ಸಂಶೋದನೆ (Susan Georage, How the other half dies: The real reasons for world Hunger, Penguin Books, 1981). ತಮ್ಮ ಸಂಶೋದನೆಯಲ್ಲಿ ಆಹಾರದ ಕೊರತೆ ತೀರ್ವವಾಗಿ ಕಾಡಲು ಮುಂದುವರೆದ ರಾಷ್ಟ್ರಗಳ ನಾಲಿಗೆ ಚಪಲವೇ ನೇರ ಕಾರಣ ಎಂದು ಬೊಟ್ಟು ಮಾಡಿದ್ದಾರೆ.
ಆಹಾರ ಎಲ್ಲರ ಹಕ್ಕು. ಅದು ನಮಗೆ ಅವಶ್ಯವಿದ್ದಷ್ಟು ಮಾತ್ರ, ನಮ್ಮ ಬೆಂಗಳೂರಿನಲ್ಲಿ ನಡೆದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಸಮೀಕ್ಷೆಯಂತೆ ಕಳೆದ ವರ್ಷ 940ಟನ್ ಗಳಷ್ಟು ಆಹಾರವು ಕೇವಲ ಕಲ್ಯಾಣ ಮಂಟಪದಲ್ಲಿ ಪೋಲಾಗಿದೆ. ಸಂರಕ್ಷಣೆ ಕೊರತೆಯಿಂದ %11 ರಷ್ಟು ಆಹಾರ ಪದಾರ್ಥ ನಷ್ಟವಾಗುತ್ತಿದೆ. ಈ ಮಟ್ಟದ ಆಹಾರ 2.6 ಕೋಟಿ ಜನರ ಹೊಟ್ಟೆ ತುಂಬಿಸುವಷ್ಟು. ದೇಶದಲ್ಲಿ ಸರಾಸರಿ 23% ಅಹಾರವನ್ನು ಪೋಲು ಮಾಡುತಿದ್ದೇವೆ. ನಮ್ಮ ಸಣ್ಣ ನಿರ್ಲಕ್ಷ್ಯ ಎಷ್ಟು ದೊಡ್ಡ ಅನಾಹುತಕ್ಕೆ ದಾರಿ ಮಾಡಿದ್ದೇವೆ. ಇಲ್ಲಿ ಇನ್ನೊಂದು ಗಂಬೀರವಾದ ವಿಚಾರವೆಂದರೆ ವಿಶ್ವದ ಮೂರು ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಲ್ಲಿ ಒಂದು ಮಗು ಭಾರತದ್ದಾಗಿರುತ್ತದೆ. ನಡೆಯುವ ಕಾರ್ಯಕ್ರಮಗಳಲ್ಲಿ ಅಧ್ಧೂರಿತನ ಮೆರೆಸಲು ಹೋಗಿ ಎಷ್ಟೋ ಜನರ ಆಹಾರವನ್ನು ಕಿತ್ತುಕೊಳ್ಳುತಿದ್ದೇವೆ. ನಮಗೆ ಒಂದು ಅಗುಳಾಗಿರಬಹುದು ಸಾವಿರ ಜನಕ್ಕೆ ಅದರ ಪ್ರಮಾಣ ಅಗಾಧ, ಇನ್ನು ಲಕ್ಷ, ಕೋಟಿ ಜನಕ್ಕೆ!!. ನಾವು ಕೊಡುವ ಬೆಲೆ ರೈತನ ಶ್ರಮಕ್ಕೆ, ಅಂಗಡಿಯವನ ಮಧ್ಯಸ್ತಿಕೆಗೆ ಹೊರತು ಆಹಾರಕ್ಕಲ್ಲ. ನಾವು ಮಾಡುವ ಎಲ್ಲ ತಪ್ಪಿಗೆ ಸರಕಾರವನ್ನು ಹೊಣೆ ಮಾಡುವುದು ಮೂರ್ಖತನದ ಪರಮಾವಧಿ. ನಾವು ದೂರಿಯೇ ದಿನ ದೂಡುತಿದ್ದೇವೇ ವಿನಃ ನಾನು ಪಾಲಿಸ್ತೀನಿ ಎಂಬುದಕ್ಕೆ ತಯಾರಾಗುತ್ತಿಲ್ಲ. ನಮ್ಮಿಂದನೇ ಸರಕಾರ ಹೊರತು ಸರಕಾರದಿಂದ ನಾವಲ್ಲ. ನಾವು ಸರಿಯಾದರೆ ಸರಕಾರ ಸರಿಯಾದೀತು ವಿನಃ ಸರಕಾರದಿಂದ ನಾವು ಸರಿಯಾಗುವುದಿಲ್ಲ.
ಚಿತ್ರ ಕೃಪೆ : www.ifood.tv





Bharata badalagubudendare heega….?
ಉತ್ತಮ ಲೇಖನ. ಆಹಾರ ಭದ್ರತೆಯ ಯೋಜನೆ ಬಂದಿದ್ದು, ಸರ್ವೋಚ್ಚ ನ್ಯಾಯಾಲಯ ಉಗ್ರಾಣದಲ್ಲಿರುವ ದವಸವನ್ನು ಹಂಚಿ ಎಂದು ತಾಕೀತು ಮಾಡಿದಾಗಲೆ. ಅದಕ್ಕೂ ಸಹ ಹಂಚಲು ಬೀಳುವ ಖರ್ಚನ್ನು ಮುಂದು ಮಾಡಿ ಕುಳಿತಿತ್ತು ಸರಕಾರ ಮತ್ತೊಮ್ಮೆ ಮುಪ್ರೀಂ ಚಾಟಿ ಬೀಸಿದಾಗ ಅದರ ಪ್ರಯೋಜನ ಪಡೆಯುವ ಹುನ್ನಾರ ನಡೆಯುತ್ತಿದೆ.
ಧನ್ಯವಾದ ಗಿರೀಶ್ ರವರೇ.
Good article. Kindly change ‘Sahara’ Desert to ‘Thar’ Desert..
ಉತ್ತಮ ಲೇಖನಕ್ಕೆ ಅಭಿನಂದನೆಗಳು ನವೀನರಿಗೆ.
@ಹರೀಶ
ಲೇಖನದಲ್ಲಿರುವ ಈ ವಾಕ್ಯ “ನಮ್ಮ ದೇಶದಲ್ಲಿ ಮಧ್ಯ ಪ್ರದೇಶ, ಝಾರ್ಖಂಡ್, ಬಿಹಾರಗಳಲ್ಲಿ ಸಹಾರಾ ಮರುಭೂಮಿಯ ಸುತ್ತಲಿನ ಕ್ಷಾಮಪೀಡಿತ ಪ್ರದೇಶಗಳಿಗಿಂತ ಹೆಚ್ಚಿನ ದುಃಸ್ಥಿತಿ ಇದೆ ಎಂದು ವಿಶ್ವಸಂಸ್ಥೆ ತಿಳಿಸಿದೆ” ವನ್ನು ಬಹುಶ: ನೀವು ಕನಫ್ಯೂಸ್ ಮಾಡಿಕೊಂಡಿರಿ :). ” ಸಹಾರಾ ಮರುಭೂಮಿಯ ಸುತ್ತಲಿನ ಕ್ಷಾಮಪೀಡಿತ ಪ್ರದೇಶಗಳಿಗಿಂತ ಹೆಚ್ಚಿನ ದುಃಸ್ಥಿತಿ, ನಮ್ಮ ದೇಶದಲ್ಲಿ ಮಧ್ಯ ಪ್ರದೇಶ, ಝಾರ್ಖಂಡ್, ಬಿಹಾರಗಳಲ್ಲಿ ಇದೆ ಎಂದು ವಿಶ್ವಸಂಸ್ಥೆ ತಿಳಿಸಿದೆ” ಎಂಬರ್ಥದ ವಾಕ್ಯ ಅದು.
danyavada vijayravre