ನಾಡು- ನುಡಿ: ಮರುಚಿಂತನೆ- ಪ್ರಜಾಪ್ರಭುತ್ವಲ್ಲಿ ಪ್ರಾತಿನಿಧ್ಯದ ಸಮಸ್ಯೆಗಳು: ಭಾಗ 4
ಬಿ. ಎಲ್ ಶಂಕರ್, ಮಾಜಿ ವಿಧಾನಪರಿಷತ್ತಿನ ಅಧ್ಯಕ್ಷರು. ಅಕ್ಷರಕ್ಕೆ: ಶಿವಕುಮಾರ್ ಪಿ.ವಿ
73 ರ ಜೆ.ಪಿ.ಚಳವಳಿಯಿಂದ 98ರವರೆಗೆ ನಮ್ಮದು ಒಂದು ರೀತಿಯ ನಿಲುವು ಇತ್ತು. 99ರ ನಂತರ ಒಂದು ರೀತಿಯ ನಿಲುವು ಪ್ರಾರಂಭವಾಯಿತು. ಕಾರಣ ನಮ್ಮ ನಿಲುವನ್ನು ಪ್ರತಿಪಾದಿಸುತ್ತಿರುವಂತಹ ಸಂಘಟನೆ ಛಿದ್ರ ವಿಛಿದ್ರವಾದಂತಹ ಸಂದರ್ಭದಲ್ಲಿ ನಮ್ಮ ನಿಲುವಿಗೆ ಹತ್ತಿರವಾದಂತಹ ಒಂದು ನಿಲುವನ್ನು ಆಯ್ಕೆ ಮಾಡಿಕೊಂಡು ಮುಂದುವರೆದು ಬಂದಿದ್ದೇವೆ. ಅದು ಒಂದು ರೀತಿಯಲ್ಲಿ ರಾಜೀ ಮಾಡಿಕೊಂಡಂತೆಯೇ. ಆಗ ಪ್ರತಿನಿಧಿತ್ವದ ಪ್ರಶ್ನೆ ಬರುತ್ತದೆ. ಜನರು ಕೇಳುತ್ತಾರೆ ‘ನೀವು ತುರ್ತು ಪರಿಸ್ಥಿತಿಯ ವಿರುದ್ಧವಾಗಿದ್ದವರು, ನೀವು ಹೀಗಾಗಿ ಬಿಟ್ಟಿರಲ್ಲ ಅಂತ’ ಹೇಳುವವರೂ, ಹಾಗೆಯೇ, ‘ಏನೆ ಆಗಲೀ ನೀವು ನಿಮ್ಮ ಸೆಕ್ಯುಲರ್ ಐಡಿಯಾಲಜಿ ಬಿಟ್ಟುಕೊಡಲಿಲ್ಲ, ಪಟೇಲರ ಸರ್ಕಾರವನ್ನು ಬಿಟ್ಟು ಹೊರಗೆ ಬಂದ್ರಿ’ ಎನ್ನುವವರೂ ಇದ್ದಾರೆ. ಹಾಗೆಯೇ ಪ್ರತಿನಿಧಿತ್ವ ಎನ್ನುವುದು ನಾವು ಒಪ್ಪಿರುವ ಸಿದ್ಧಾಂತ, ತತ್ವಗಳ ಆಧಾರದ ಮೇಲೂ ಇರುತ್ತದೆ. ಅಥವಾ ಅದಕ್ಕೆ ಹತ್ತಿರವಾದ ಅಂಶಗಳಿಂದಲೂ ಕೂಡಿರುತ್ತದೆ.ಅದಕ್ಕೆ ನಾನು ಆಗಲೇ ಹೇಳಿದ್ದು; ಗೇಣಿದಾರರ ಪರವಾಗಿ ಮಾತನಾಡಿದರೆ ಆತನ ಮಗನ ಒಟು ನಮಗೆ ಅನುಮಾನ, ರಾಜ್ಯದ ರಾಜಕಾರಣದ ಬಗ್ಗೆ ಮಾತನಾಡಿದರೆ ನಾವು ಲೋಕಲ್ ಅಲ್ಲ ಎನ್ನುವ ತೀರ್ಮಾನ ಬರುತ್ತದೆ.ನಾವೇನಾದರೂ ಲೋಕಲ್ ವಿಚಾರವನ್ನೇ ಬಳಸಿ ಲೋಕಲ್ ರಾಜಕೀಯಕ್ಕೆ ಇಳಿದರೆ ‘ಹಿತ್ತಲ ಗಿಡ ಮದ್ದಲ್ಲ’ ಎನ್ನುವಂತೆ ಅಲ್ಲಿಯೇ ಲೋಕಲ್ ರಾಜಕೀಯ ಪೈಪೋಟಿ ಶುರುವಾಗುತ್ತದೆ.
ಇಲ್ಲಿ ನಾನು ಪ್ರತಿನಿಧಿಸುತ್ತಿರುವುದು ನನ್ನನ್ನು ಮತ್ತು ನನ್ನ ಆತ್ಮ ಸಾಕ್ಷಿಯನ್ನ.ನನ್ನ ಪಕ್ಷವನ್ನಲ್ಲ ಎನ್ನುವುದು ಗಮನದಲ್ಲಿರಲಿ. ಏಕೆಂದರೆ, ಪಕ್ಷದ ನಿಲುವಿಗೂ ನನ್ನ ನಿಲುವಿಗೂ ಅನೇಕ ವಿಚಾರಗಳಲ್ಲಿ ಸಾಕಷ್ಟು ವ್ಯತ್ಯಾಸಗಳಿರಬಹುದು.ಇರಲಿಕ್ಕೆ ಸಾಧ್ಯ ಇದೆ. ಅದಕ್ಕಾಗೆ ಅಮೆರಿಕದಲ್ಲಿ ವಿಪ್ ಸಿಸ್ಟಮ್ ಇಲ್ಲ. ಈ ಪಕ್ಷದ ವಿಚಾರಗಳು ಯಾವುದು ಕೂಡಾ ನಮ್ಮನ್ನು ಬಂಧಿಸಬಾರದು.ಉದಾ; ಒಬಾಮ ಹೆಲ್ತ್ಕೇರ್ ಬಿಲ್ ತಂದಾಗ 23 ಜನ ಡೆಮಾಕ್ರಟಿಕ್ ಪಾರ್ಟಿಯವರು ವಿರುದ್ಧವಾಗಿ ಓಟು ಹಾಕಿದರು.36 ಜನ ರಿಪಬ್ಲಿಕನ್ ಪಾರ್ಟಿಯವರು ಒಬಾಮ ಪರವಾಗಿ ಓಟು ಹಾಕಿದರು.ನಂತರ ಬಿಲ್ ಪಾಸಾಯಿತು.ಆದರೆ, ಇಲ್ಲಿ ಹಾಗಾಗುವುದಕ್ಕೆ ಸಾಧ್ಯವೇ? ಇಲ್ಲಿ ವಿಪ್ ನೀಡಲಾಗುತ್ತದೆ.ಅದನ್ನು ಅನುಸರಿಸದೇ ನಮ್ಮದೇ ನಿಲುವು ತಾಳಿದರೆ ಅದನ್ನು ಪಕ್ಷ ವಿರೋಧಿ ಚಟವಟಿಕೆ ಎಂದು ಪರಿಗಣಿಸುತ್ತಾರೆ. ಅಂದರೆ, ವಿಪ್ ಇಲ್ಲದೇ ಇರುವಂತದ್ದು ನಿಜವಾದ ಪ್ರತಿನಿಧಿತ್ವ. ವಿಪ್ ಇರುವಂತದ್ದು ನಿಜವಾದ ಪ್ರತಿನಿಧಿತ್ವ ಅಲ್ಲವೇ ಅಲ್ಲ. ವಿಪ್ಗೆ ಅನುಗುಣವಾಗಿ ನಿಲುವು ತಾಳುವುದು ಅದು ಪಕ್ಷವನ್ನು ಪ್ರತಿನಿಧಿಸುತ್ತದೆ, ಅದು ಪಕ್ಷದ ದೃಷ್ಟಿಕೋನವಾಗುತ್ತದೆಯೇ ವಿನಃ ಅದು ನನ್ನ ನಿಲುವಾಗುವುದಿಲ್ಲ.
ಹಾಗಾಗಿ, ಇಂತಹ ಅನೇಕ ಸಂದರ್ಭಗಳಲ್ಲಿ, ಉದಾ; ರಾಜ್ಯ ಸಭೆಯನ್ನು ಪ್ರತಿನಿಧಿಸುವಂತವರು ತಮ್ಮ ತಮ್ಮ ರಾಜ್ಯದಿಂದ ಆಯ್ಕೆಯಾಗಬೇಕು, ಅದರ ಉದ್ದೇಶ ಅಂದರೆ ರಾಜ್ಯ ಸಭಾ ಸದಸ್ಯರಾಗುವವರು ತಮ್ಮ ತಮ್ಮ ರಾಜ್ಯವನ್ನು ಪ್ರತಿನಿಧಿಸಬೇಕು ಎನ್ನುವುದು. ರಾಮ್ ಜೇಠ್ಮಲಾನಿ ಕರ್ನಾಟಕದಿಂದ ಗೆದ್ದರು ಅದು ಒಂದು ದೊಡ್ಡ ವಿಷಯ ಆಯ್ತು. . ಹಾಗೆಯೇ ನಮ್ಮ ಪ್ರಧಾನಮಂತ್ರಿಯವರಿಗೂ ಒಂದು ರಾಜ್ಯ ಬೇಕಿತ್ತು. ಹಾಗಾಗಿ, ಯಾರು ಎಲ್ಲಿಂದ ಬೇಕಾದರೂ ಆಯ್ಕೆಯಾಗುವಂತಹ ಅವಕಾಶ ಕಲ್ಪಿಸಿ ಸಂವಿಧಾನಕ್ಕೆ ತಿದ್ದುಪಡಿ ತರಲಾಯಿತು. ನಂತರ ಕರ್ನಾಟಕದವರು ಬೇರೆ ರಾಜ್ಯದಿಂದ, ಬೇರೆ ರಾಜ್ಯದವರು ಕರ್ನಾಟಕದಿಂದ ಹಲವು ಜನ ಆಯ್ಕೆಯಾಗಿದ್ದಾರೆ.ಹಾಗಾಗಿ, ಪ್ರಾತಿನಿಧಿತ್ವ ಎನ್ನುವುದು ಆಯಾ ರಾಜ್ಯದವರು ಆಯಾ ರಾಜ್ಯದಿಂದಲೇ ಆಯ್ಕೆಯಾಗಬೇಕು ಎನ್ನುವವರೆಗೂ ರೀತಿಯಲ್ಲಿ ಇತ್ತು. ಆನಂತರ, ಯಾರು ಎಲ್ಲಿಂದ ಬೇಕಾದರೂ ಆಯ್ಕೆಯಾಗಬಹುದು ಎನ್ನುವ ಅವಕಾಶ ಸಿಕ್ಕ ನಂತರ ಒಂದು ರೀತಿಯಲ್ಲಿ ಬದಲಾಯಿತು. ಯಾರು ಎಲ್ಲಿ ಬೇಕಾದರೂ ಆಯ್ಕೆಯಾಗಬಹುದು ಎಂದ ನಂತರ ಅಲ್ಲಿ ರಾಜ್ಯದ ಬಗೆಗಿನ ಹಿತಾಸಕ್ತಿ ಹೋಯಿತು.ಆಗ ಮಾಡಬೇಕಾದ ಕೆಲಸವೇನು, ಯಾವುದು ಮುಖ್ಯವಾಗುತ್ತದೆ ಎಂದರೆ, ಈ ಮೇಲ್ಮನೆಯನ್ನು ಪ್ರತಿನಿಧಿಸುವವರು ಮಾಡುವ ಕೆಲಸ ಲೋಕಸಭೆಯ ವಿಚಾರಗಳನ್ನು ವಿಮರ್ಶೆ ಮಾಡುವುದು. ಅಂದರೆ, ಪ್ರಾತಿನಿಧಿತ್ವ ರಾಜ್ಯದಿಂದ ಲೋಕಸಬೆಯ ವಿಚಾರಗಳನ್ನು ವಿಮರ್ಶೆ ಮಾಡುವಲ್ಲಿಗೆ ಪಲ್ಲಟವಾಯಿತು..ಕೆಲವು ದಿನಗಳ ಹಿಂದೆ ಲೋಕಪಾಲ್ ಬಿಲ್ ಅನ್ನು ರಾಜ್ಯ ಸಭೆ ಅನೇಕ ತಿದ್ದುಪಡಿಗಳನ್ನು ಸೇರಿಸಿ ಕಳಿಸಿತು. ನಂತರ ಲೋಕಸಭೆಯಲ್ಲಿ ಅದು ಪಾಸಾಯಿತು .ಹಾಗಾಗಿ ಪ್ರತಿನಿಧಿತ್ವದ ಪರಿಕಲ್ಪನೆಯು ಸಂದರ್ಭಕ್ಕನುಗುಣವಾಗಿ ಬದಲಾಗುತ್ತಾ ಹೋಗುತ್ತಿರುತ್ತದೆ.
ಹೀಗೆಯೇ, ಒಂದು ಸಂದರ್ಭದಲ್ಲಿ ಜಾತಿಯನ್ನು ಪ್ರತಿನಿಧಿಸುತ್ತಾನೆ ಎಂದು ಹೇಳಬಹುದು.ಈಗ ಕರ್ನಾಟಕದಲ್ಲಿ ಯಾವುದಾದರೂ ಕೆಲವು ರಾಜಕಾರಣಿಗಳ ಹೆಸರು ಹೇಳಿದರೆ, ಅವರು ಇಂತಹ ಜಾತಿಯವರು ಇಂತಹ ಜಾತಿಯನ್ನು ಪ್ರತಿನಿಧಿಸುವಂತವರು ಎಂದು ಸುಲಭವಾಗಿ ಜನರು ಗುರುತಿಸಿಬಿಡುತ್ತಾರೆ. ಮತ್ತು ಕೆಲವರನ್ನು ರಾಷ್ಟ್ರಮಟ್ಟದ, ರಾಜ್ಯಮಟ್ಟದ ನಾಯಕ ಎಂದು ಕೂಡಾ ಗುರುತಿಸುತ್ತಾರೆ. ಇನ್ನು ಕೆಲವರು ಹೆಚ್ಚು ಸಾಮರ್ಥ್ಯವಿದ್ದರೂ ಹಳ್ಳಿಯಲ್ಲಿರುತ್ತಾರೆ. ಅವರಿಗೆ ಅವನು ಪಂಚಾಯತಿ ಮಟ್ಟದ ನಾಯಕ ಎಂದು ಗುರುತಿಸುವುದು ಕಂಡುಬರುತ್ತದೆ. ಇದೇ ರೀತಿ, ಕೆಲವು ಸಂದರ್ಭದಲ್ಲಿ ಜಾತಿಗೆ, ಅನಿವಾರ್ಯವಾದ ಕೆಲವು ಬೆಳವಣಿಗಳಿಗೆ, ಮತಗಳಿಗೆ, ಪ್ರದೇಶಗಳಿಗೆ ಸೀಮಿತವಾಗಿ ಪ್ರತಿನಿಧಿತ್ವ ಎನ್ನುವುದು ರೂಪುಗೊಳ್ಳುತ್ತಿರುತ್ತದೆ. ಹಾಗೆಯೇ ಒಬ್ಬನನ್ನೇ ಇಂತವನು ಇಂತವರನ್ನು ಪ್ರತಿನಿಧಿಸುತ್ತಾನೆ ಎಂದು ಬ್ರ್ಯಾಂಡ್ ಕೂಡಾ ಮಾಡಲು ಸಾಧ್ಯವಾಗುವುದಿಲ್ಲ. ಉದಾ; ಪಶ್ಚಿಮಘಟ್ಟದಲ್ಲಿ ಹುಟ್ಟಿರುವಂತಹ ನಾನು ನನ್ನದೇ ಒಂದು ನಿಲುವನ್ನು ಪಕ್ಷದೊಳಗಿದ್ದುಕೊಂಡು ಹೊಂದಿರುತ್ತೇನೆ. ಹಾಗೆಯೇ ಮತ್ತೆ ಬೇರೆ ಯಾವುದೋ ವಿಷಯದ ಬಗ್ಗೆ ನನ್ನದೇ ಅಗಿರುವಂತಹ ನಿಲುವುಗಳಿರುತ್ತವೆ. ಹೀಗೆ, ಕೆಲವು ವೇಳೆ ನಾನು ಪ್ರತಿನಿಧಿಸುವ ಪಕ್ಷದಹಾಗೂ ನನ್ನ ವೈಯಕ್ತಿಕ ನಿಲುವುಗಳು ಬೇರೆ ಬೇರೆಯಾಗಿರುವ ಸಾಧ್ಯತೆ ಇದ್ದೇ ಇದೆ.
ನನ್ನ ವಾದ ಏನೆಂದರೆ, ಪ್ರತಿನಿಧಿತ್ವದ ಪರಿಕಲ್ಪನೆಯು ಒಂದೇ ರೀತಿಯಾಗಿ ಯಾವಾಗಲೂ ಸ್ಥಿರವಾಗಿ, ಸ್ಥಾಯಿಯಾಗಿರುವುದಿಲ್ಲ. ಅದು ಯಾವಾಗಲೂ ನಿರಂತರವಾಗಿ ಬದಲಾಗುತ್ತಾ ಚಲನಶೀಲವಾಗುತ್ತಾ ಹೋಗುತ್ತಿರುತ್ತದೆ.
ನನ್ನ ದೃಷ್ಟಿಯಲ್ಲಿ ಪ್ರತಿನಿಧಿತ್ವ ಎನ್ನುವುದು ಪಾರ್ಲಿಮೆಂಟಿಗೆ ಸಂವಿಧಾನಕ್ಕೆ ತಿದ್ದುಪಡಿ ಮಾಡುವ ಅಧಿಕಾರವಿದ್ದರೂ ಕೂಡಾ ಅದು ಸಂವಿಧಾನದ ಮೂಲ ರಚನೆಯನ್ನು ಯಾವ ಕಾರಣಕ್ಕೂ ಬದಲಾವಣೆ ಮಾಡಬಾರದು ಎಂದು ಸುಪ್ರಿಮ್ ಕೋರ್ಟ್ ಹೇಳಿದೆ. ಆದರೆ, , ಜನಗಳೇ ಸುಪ್ರಿಮ್. ಈ ಹಿನ್ನೆಲೆಯಲ್ಲಿ, ಪ್ರತಿನಿಧಿತ್ವಕ್ಕೆ ಕೂಡಾ ಬಹಳ ಬೇಸಿಕ್ ಆದ ಅಂಶವೇನೆಂದರೆ ನನ್ನ ದೃಷ್ಟಿಯಲ್ಲಿ ಮಾನವೀಯತೆ. ಮಾನವೀಯ ದೃಷ್ಟಿಕೋನ ಎನ್ನುವುದು ಬೇಸಿಕ್ ಆಗಿರುವ ಒಂದು ಗುಣ .ಅದು ಯಾವುದೇ ಕಾರಣಕ್ಕೂ ಬದಲಾಗಬಾರದು.ಎಲ್ಲ ಸಂದರ್ಭದಲ್ಲೂ ಕೂಡ ಅದು ಇರಬೇಕು.
ಇದುಮೇಲ್ನೋಟಕ್ಕೆ ಗೊಂದಲಪೂರ್ಣವಾಗಿ ಕಂಡರೂ ಕೂಡಾ,ವಾಸ್ತವಿಕ ಹಿನ್ನೆಲೆಯಲ್ಲಿ, ಒಬ್ಬ ವ್ಯಕ್ತಿ, ಅನೇಕ ವಿಷಯಗಳ ಆಧಾರದ ಮೇಲೆ ಪ್ರತಿನಿಧಿತ್ವವನ್ನು ಹೊಂದಬೇಕಾದ ಸ್ಥಿತಿ ಇರುತ್ತದೆ. ಹಾಗಾಗಿ, ಪ್ರತಿನಿಧಿತ್ವ ಎನ್ನುವುದು ಆಯಾ ಕಾಲಘಟ್ಟಕ್ಕೆ ಅನುಗುಣವಾಗಿ, ವಿಷಯಾಧಾರಿತವಾಗಿ, ಆದ್ಯತೆಗಳಿಗನುಗುಣವಾಗಿ ಪ್ರತಿನಿಧಿತ್ವದ ವ್ಯಾಖ್ಯಾನ ಹಾಗೂ ಪ್ರತಿನಿಧಿತ್ವವೂ ಕೂಡಾ ಬದಲಾಗುತ್ತಾ ಇರುತ್ತದೆ. ಹಾಗಾಗಿ ಈ ಕುರಿತ ಚಚರ್ೆ ನಿರಂತರವಾಗಿ ನಡೆಯುತ್ತಲೇ ಇರುತ್ತದೆ ಎನ್ನುವುದು ನನ್ನ ಅಭಿಪ್ರಾಯ. (ಮುಕ್ತಾಯ)…





