ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 16, 2015

1

ವಿವೇಕಾನಂದರ ವಿಚಾರಗಳ ಐತಿಹಾಸಿಕ ಸಂದರ್ಭ

‍ನಿಲುಮೆ ಮೂಲಕ

– ಪ್ರೊ.ರಾಜಾರಾಮ ಹೆಗಡೆ

ಇತಿಹಾಸ ಮತ್ತು ಪ್ರಾಕ್ತನ ಶಾಸ್ತ್ರ ವಿಭಾಗ, ಕುವೆಂಪು ವಿಶ್ವವಿದ್ಯಾನಿಲಯ

೧.ವಿವೇಕಾನಂದರ ವಿಚಾರಗಳು: ಜಾತಿ ಪದ್ಧತಿ
೨.ವಿವೇಕಾನಂದರ ವಿಚಾರಗಳು: ಸಮಾಜ ಸುಧಾರಣೆ

Swami Vivekanandaಕಳೆದೆರಡು ಅಂಕಣಗಳಲ್ಲಿ ವಿವೇಕಾನಂದರು ಸಮಾಜ ಸುಧಾರಣೆಯ ಕುರಿತು ಹಾಗೂ ಜಾತಿಯ ಕುರಿತು ಏನು ಹೇಳುತ್ತಾರೆ ಎಂಬುದನ್ನು ನೋಡಿದೆವು. ಪ್ರಗತಿಪರರು ಜಾತಿ ಪದ್ಧತಿಯ ಹಾಗೂ ಬ್ರಾಹ್ಮಣರ ಕುರಿತ ಅವರ ಟೀಕೆಗಳು, ಕ್ರೈಸ್ತ, ಇಸ್ಲಾಂ ಮತಗಳ ಕುರಿತು ಹೇಳಿದ ಸಕಾರಾತ್ಮಕ ಮಾತುಗಳನ್ನಷ್ಟೇ ಎತ್ತಿ ಹೇಳಿದ್ದಾರೆ. ಮತ್ತೊಂದು ಥರದ ಹೇಳಿಕೆಗಳನ್ನು ನಾನು ಪ್ರಸ್ತುತ ಪಡಿಸಿದ್ದೇನೆ. ಅಲ್ಲಿ ಅವರು ಸಮಾಜ ಸುಧಾರಕರನ್ನು ಟೀಕಿಸುತ್ತಾರೆ ಹಾಗೂ ಜಾತಿ, ಬ್ರಾಹ್ಮಣ ಇತ್ಯಾದಿಗಳ ಕುರಿತು ತುಂಬಾ ಹೆಮ್ಮೆಯಿಂದ ಮಾತನಾಡುತ್ತಾರೆ. ಈ ಎರಡೂ ರೀತಿಯ ಹೇಳಿಕೆಗಳನ್ನು ಯಾವ ರೀತಿ ಜೋಡಿಸಿಕೊಂಡರೆ ವಿವೇಕಾನಂದರು ಒಟ್ಟಾರೆಯಾಗಿ ಏನು ಹೇಳುತ್ತಿದ್ದಾರೆ ಎಂಬುದು ಅರ್ಥವಾಗಬಹುದು? ಅದಕ್ಕೆ ಅವರ ಕಾಲಕ್ಕೆ ಹೋಗಬೇಕು. ವಿವೇಕಾನಂದರು ತಮ್ಮ ಕಾಲದ ಯಾವ ಸವಾಲುಗಳಿಗೆ ಉತ್ತರಿಸುತ್ತಿದ್ದರು?

ವಿವೇಕಾನಂದರು ರಾಮಕೃಷ್ಣರ ಶಿಷ್ಯರಾಗುವ ವೇಳೆಗಾಗಲೇ ಬಂಗಾಲದಲ್ಲಿ ಆಧುನಿಕ ವಿಚಾರಧಾರೆಯು ವಿದ್ಯಾವಂತರಲ್ಲಿ ತನ್ನ ಪ್ರಭಾವವನ್ನು ಸಾಕಷ್ಟು ಬೀರಿತ್ತು. ಪಾಶ್ಚಾತ್ಯ ಶಿಕ್ಷಣವೆಂದರೆ ಈ ಪ್ರಪಂಚದ ಕುರಿತು ವೈಜ್ಞಾನಿಕ ಚಿತ್ರಣಗಳನ್ನು ತಿಳಿದುಕೊಳ್ಳುವುದು.ಈ ಚಿತ್ರಣಗಳನ್ನಾಧರಿಸಿ ಭಾರತದಲ್ಲಿ ಸಮಾಜ ಸುಧಾರಣೆಗಳು ಮೊದಲುಗೊಂಡವು. ಭಾರತೀಯ ಸಮಾಜದಲ್ಲಿ ಉಳಿದೆಲ್ಲ ಸಮಾಜಗಳಲ್ಲಿ ಇರುವಂತೆ ದೌರ್ಜನ್ಯಗಳು, ಕ್ರೂರ ಆಚರಣೆಗಳು ಎಲ್ಲ ಇದ್ದವು. ಆದರೆ ಬ್ರಿಟಿಷರು ಭಾರತದಲ್ಲಿ ಇರುವ ಕ್ರೂರ ಆಚರಣೆಗಳೆಲ್ಲವೂ ಹಿಂದೂಯಿಸಂ ಎಂಬ ಭ್ರಷ್ಟ ರಿಲಿಜನ್ನಿನ ಲಕ್ಷಣಗಳು, ಇವನ್ನೆಲ್ಲ ಬ್ರಾಹ್ಮಣರು ಬಹು ಹಿಂದೆಯೇ ಸ್ವಲಾಭಕ್ಕಾಗಿ ಹುಟ್ಟುಹಾಕಿದ್ದಾರೆ.ಈ ಆಚರಣೆಗಳೆಲ್ಲವೂ ಸ್ವಾರ್ಥದ ಮೌಢ್ಯದ ಅನೈತಿಕ ತಳಹದಿಯ ಮೇಲೆ ನಿಂತಿವೆ, ಇತ್ಯಾದಿಯಾಗಿ ಅದಕ್ಕೊಂದು ಕಾರಣವನ್ನು ನೀಡಿದರು.ಹಾಗಾಗಿ ಇಂಥ ಕ್ರೂರ ಆಚರಣೆಗಳನ್ನು ನಿಲ್ಲಿಸಬೇಕಾದರೆ ಈ ಸಮಾಜದ ತಳಹದಿಯನ್ನೇ ನಾಶಗೊಳಿಸಬೇಕು ಎಂಬ ಅಭಿಪ್ರಾಯವನ್ನು ವಿದ್ಯಾವಂತರಲ್ಲಿ ಹುಟ್ಟುಹಾಕಿದರು.ಅಂದರೆ ಭಾರತೀಯರ ರಿಲಿಜನ್ನೇ ಭ್ರಷ್ಟವಾಗಿದೆ, ಅಮಾನವೀಯವಾಗಿದೆ ಎಂಬುದು ಈ ವಿದ್ಯಾವಂತರ ಸಾಮಾನ್ಯ ಜ್ಞಾನವಾಯಿತು.

ಆಗ ರಾಮಮೋಹನರಾಯರಂಥವರು ಹಿಂದೂ ರಿಲಿಜನ್ನು ಮೂಲತಃ ಭ್ರಷ್ಟ ರಿಲಿಜನ್ನಲ್ಲ, ವೇದಯುಗದಲ್ಲಿ ಅದು ಶುದ್ಧವಾಗಿತ್ತು, ನಂತರ ಕಾಲದಲ್ಲಿ ಅದರಲ್ಲಿ ತಪ್ಪು ಆಚರಣೆಗಳು ಬಂದು ಸೇರಿಕೊಂಡಿವೆ ಎಂಬುದಾಗಿ ವಾದಿಸಿ ಸಮಾಜ ಸುಧಾರಣೆಗೆ ಚಾಲನೆ ನೀಡಿದರು. ಉದಾಹರಣೆಗೆ ಸತಿ ಪದ್ಧತಿ, ವಿಧವೆಯರ ದುಃಸ್ಥಿತಿ, ಜಾತಿಭೇದ, ಮೂರ್ತಿಪೂಜೆ, ಇತ್ಯಾದಿಗಳನ್ನು ಅಂಥ ತಪ್ಪು ಆಚರಣೆಗಳು ಎಂದು ಗುರುತಿಸಲಾಯಿತು. ಏಕದೇವನನ್ನು ಅಮೂರ್ತವಾಗಿ ಪೂಜಿಸುವುದು, ಮೂರ್ತಿಪೂಜೆಯನ್ನು ಖಂಡಿಸುವುದು ಇವೆಲ್ಲ ಪ್ರಾರಂಭವಾದವು. ಆದರೆ ರಾಮಮೋಹನ ರಾಯರು ಶುದ್ಧ ಹಿಂದೂಯಿಸಂ ಎಂದು ಯಾವುದನ್ನು ಗುರುತಿಸಿದರೋ ಅದು ಕ್ರೈಸ್ತ ಪ್ರೊಟೆಸ್ಟಾಂಟಿಸಂನ ಒಂದು ಭಾರತೀಯ ರೂಪವಾಗಿತ್ತು.

ಶುದ್ಧ ಹಿಂದೂಯಿಸಂ ವೈದಿಕ ಕಾಲದಲ್ಲಿತ್ತು, ವೇದಗಳು ಈ ಹಿಂದೂಯಿಸಂನ ಮೂಲಗ್ರಂಥಗಳು ಎಂಬ ನಿರೂಪಣೆಗಳು ಮತ್ತೊಂದು ತಪ್ಪು ಗ್ರಹಿಕೆಗೆ ಎಡೆಮಾಡಿದವು. ವೇದಗಳು ಆರ್ಯರವು, ಆರ್ಯರು ಹೊರಗಿನಿಂದ ಭಾರತಕ್ಕೆ ಬಂದು ಇಲ್ಲಿನ ಬುಡಕಟ್ಟುಗಳನ್ನು ಹತ್ತಿಕ್ಕಿ ಜಾತಿ ವ್ಯವಸ್ಥೆಯನ್ನು ಸ್ಥಾಪಿಸಿ ಅವರನ್ನು ಶೂದ್ರರನ್ನಾಗಿ ಮಾಡಿದ್ದಾರೆ ಹಾಗಾಗಿ ಶೂದ್ರರೆಲ್ಲರೂ ಇಲ್ಲಿನ ಮೂಲನಿವಾಸಿಗಳು ಎಂಬ ವಾದಗಳು ಚಾಲ್ತಿಯಲ್ಲಿ ಬಂದವು. ಇದು ಶೂದ್ರ ಚಳವಳಿಗಳಿಗೂ ಎಡೆಮಾಡಿಕೊಟ್ಟಿತು. ಈ ಚಳವಳಿಗಳು ವೈದಿಕ ಪರಂಪರೆ ಹಾಗೂ ಅವು ಪ್ರತಿಪಾದಿಸುವ ಹಿಂದೂಯಿಸಂ ತಮಗೆ ಪರಕೀಯವಾದುದು, ತಮ್ಮನ್ನು ಶೋಷಿಸುವ ಉದ್ದೇಶದಿಂದ ಬ್ರಾಹ್ಮಣರು ಬರೆದಂಥವುಗಳು ಎಂಬುದಾಗಿ ಪ್ರಚಾರ ಮಾಡಿದವು. ಹಾಗಾಗಿ ಸ್ವಾಭಾವಿಕವಾಗಿಯೇ ಇವು ಹಿಂದೂಯಿಸಂ ಮೂಲತಃ ದುಷ್ಟ ಉದ್ದೇಶದಿಂದ ಹುಟ್ಟಿಕೊಂಡದ್ದು ಎಂಬ ನಕಾರಾತ್ಮಕ ದೃಷ್ಟಿಯಿಂದಲೇ ನೋಡಿದವು.

19ನೆಯ ಶತಮಾನದ ಉತ್ತರಾರ್ಧದಲ್ಲಿ ರಾಮಕೃಷ್ಣ ಪರಮಹಂಸರನ್ನು ವಿವೇಕಾನಂದರು ಸಂಧಿಸುವ ಕಾಲದಲ್ಲಿ ಭಾರತೀಯ ಸಂಸ್ಕೃತಿಯ ಕುರಿತು ನಕಾರತ್ಮಕ ಭಾವನೆಯಿಂದ ನೋಡುವ ನಾಲ್ಕು ಪ್ರಬಲ ಗುಂಪುಗಳು ನಿರ್ಮಾಣವಾಗಿದ್ದವು:

1. ಈಗಿನ ಹಿಂದೂಯಿಸಂ ಒಂದು ಭ್ರಷ್ಟ ರಿಲಿಜನ್ನು ಎಂಬುದನ್ನು ಪ್ರೊಟೆಸ್ಟಾಂಟ್ ಮಾನದಂಡದಲ್ಲಿ ಗ್ರಹಿಸಿ ಅದರ ಸುಧಾರಣೆಗೆ ಪ್ರಯತ್ನಿಸುತ್ತಿದ್ದ ಮೇಲ್ಜಾತಿಯ ಸುಧಾರಕರು.

2. ಹಿಂದೂಯಿಸಂ ತಮ್ಮನ್ನು ತುಳಿಯಲೆಂದು ಹುಟ್ಟಿದ ಪರಕೀಯ ರಿಲಿಜನ್ನು ಎಂಬುದಾಗಿ ಗ್ರಹಿಸಿದ ಶೂದ್ರ ಸುಧಾರಕರು.

3. ಹಿಂದೂಯಿಸಂ ಒಂದು ಸುಳ್ಳು ರಿಲಿಜನ್ನು ಎಂದು ಲಾಗಾಯ್ತಿನಿಂದಲೂ ಪ್ರಚಾರ ಮಾಡಿಕೊಂಡು ಬಂದಿದ್ದ ಕ್ರೈಸ್ತರು ಹಾಗೂ ಮುಸ್ಲಿಮರು.

4. ಹಿಂದೂಯಿಸಂ ಎಂಬುದು ಒಂದು ಅನಾಗರಿಕ, ಅಮಾನವೀಯ ಆಚರಣೆಗಳನ್ನು, ಕಾನೂನುಗಳನ್ನು ಹೊಂದಿದ ಸಂಸ್ಕೃತಿ ಎಂಬ ಧೋರಣೆಯಿಂದ ಅದನ್ನು ನೋಡಿದ ಆಧುನಿಕ ಪಾಶ್ಚಾತ್ಯರು.

ಸ್ವತಃ ಶೂದ್ರ ಜಾತಿಯಿಂದ ಬಂದಿದ್ದ ವಿವೇಕಾನಂದರಿಗೆ ರಾಮಕೃಷ್ಣರ ಕೃಪೆಯಾಗಿ ವೇದಾಂತದ ಅಧ್ಯಾತ್ಮಕ್ಕೆ ಪ್ರವೇಶವಾದ ನಂತರ ಅವರ ಅಂತಃಸ್ಫೂರ್ತಿಗೆ ಈ ಮೇಲಿನ ಎಲ್ಲಾ ನಿರೂಪಣೆಗಳು ಕೂಡ ಸುಳ್ಳು ಎನಿಸತೊಡಗಿತು. ಭಾರತೀಯ ಸಂಸ್ಕೃತಿ ಹೀಗಿರಲಿಕ್ಕೆ ಸಾಧ್ಯವೇ ಇಲ್ಲ. ಏಕೆಂದರೆ ಅವರ ಅನುಭವವೇ ಬೇರೆಯಾಗಿತ್ತು. ಇವರೆಲ್ಲ ಏನನ್ನು ನೋಡುತ್ತಿದ್ದಾರೆಯೋ ಅವು ಭಾರತೀಯ ಸಂಸ್ಕೃತಿಯ ತಿರುಳೇ ಅಲ್ಲ, ಅಥವಾ ಪಾಶ್ಚಾತ್ಯರ ಅಂಧಾನುಕರಣೆ ಎಂಬುದು ಧೃಡವಾಯಿತು. ಪಾಶ್ಚಾತ್ಯರು ಕೂಡ ಇಲ್ಲಿ ಯಾವುದನ್ನು ಅನೈತಿಕ, ಮೂಢ ಎಂದು ಪರಿಗಣಿಸಿದ್ದಾರೆಯೋ ಅದು ಅವರಿಗೆ ತಮ್ಮ ರಿಲಿಜನ್ನಿನ ಮಾನದಂಡದಿಂದ ಹಾಗೆ ಕಾಣಿಸಿದೆ. ಉದಾಹರಣೆಗೆ: ಮೂರ್ತಿಪೂಜೆಯು ಒಂದು ಕೆಡುಕು, ಅನೈತಿಕ  ಎಂದು ಕ್ರೈಸ್ತರು ಹಾಗೂ ಅವರನ್ನು ಕುರುಡಾಗಿ ಅನುಕರಿಸುವ ಭಾರತೀಯ ಸುಧಾರಣಾವಾದಿಗಳು ಪ್ರಚಾರ ಮಾಡುತ್ತಾರೆ. ಆದರೆ ನಮ್ಮ ಸಂಸ್ಕೃತಿಯಲ್ಲಿ ಮೂರ್ತಿಪೂಜೆಯೂ ಜ್ಞಾನಕ್ಕೆ ಸಾಧನ ಎಂಬುದಕ್ಕೆ ತಮ್ಮ ಗುರು ಪರಮಹಂಸರೇ ದೃಷ್ಟಾಂತವಾಗಿದ್ದಾರೆ. ಅಂದರೆ ಇವರೆಲ್ಲ ಸತ್ಯದ ತಲೆಯ ಮೇಲೆ ಹೊಡೆದಂತೆ ಈ ಸುಳ್ಳನ್ನು ಹೇಳುತ್ತಿದ್ದಾರೆ ಎಂಬುದಂತೂ ಸ್ಪಷ್ಟ.

ಈ ಪರಿಸ್ಥಿತಿಯು ತೀರಾ ಅಪಾಯಕಾರಿಯಗಿ ವಿವೇಕಾನಂದರಿಗೆ ಗೋಚರಿಸಿದೆ. ಒಂದೆಡೆ ಹಿಂದೂ ಪರಂಪರೆಯ ಅಸೀಮವಾದ ಜ್ಞಾನ ಸಂಪತ್ತು ಹಾಗೂ ಜಗತ್ತಿನ ಅನ್ಯ ಸಂಸ್ಕೃತಿಗಳಿಗೆ ಹಾಗೂ ರಿಲಿಜನ್ನುಗಳಿಗೆ ಹೋಲಿಸಿದರೆ ಅದಕ್ಕಿರುವ ಹೆಚ್ಚುಗಾರಿಕೆ ಕಾಣುತ್ತಿದೆ. ಮತ್ತೊಂದೆಡೆ  ಅದರ ಕುರಿತು ಇರುವ ನಕಾರತ್ಮಕ ಧೋರಣೆಗಳು ಅದನ್ನು ನಾಶದ ಅಂಚಿಗೆ ಒಯ್ಯುತ್ತಿವೆ. ಅದರಲ್ಲಿ ಅನ್ಯ ರಿಲಿಜನ್ನುಗಳು, ವಿದೇಶೀಯರೊಂದೇ ಅಲ್ಲ, ಸ್ವದೇಶೀಯ ಬುದ್ಧಿವಂತರೂ, ಹೊರಾಟಗಾರರೂ ಕೈಜೋಡಿಸಿದ್ದಾರೆ. ಕೆಲವೊಂದು ತೋರಿಕೆಯ, ತಾತ್ಕಾಲಿಕ ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ಭರದಲ್ಲಿ ಈ ಸಂಸ್ಕೃತಿಯು ಸಾವಿರಾರು ವರ್ಷಗಳಿಂದ ಕಂಡುಕೊಂಡ ದರ್ಶನವನ್ನು, ಹಾಗೂ ಅದನ್ನಾಧರಿಸಿದ ಜೀವನ ಪದ್ಧತಿ ಹಾಗೂ ಆದರ್ಶಗಳನ್ನು ನಾಶಮಾಡುತ್ತಿದ್ದಾರೆ. ಇದನ್ನು ಸುಧಾರಣೆ ಎಂದು ಒಪ್ಪಿಕೊಳ್ಳಲು ವಿವೇಕಾನಂದರಿಗೆ ಸಾಧ್ಯವಾಗಲಿಲ್ಲ. ವಿವೇಕಾನಂದರ ಪ್ರಕಾರ ಸುಧಾರಣೆಯೆಂದರೆ, ಆ ಜ್ಞಾನ ಸಂಪತ್ತನ್ನು ಪ್ರವೇಶಿಸಲು ಇರುವ ಅಡೆತಡೆಗಳನ್ನು ನಿವಾರಿಸುವುದು. ಏಕೆಂದರೆ ಅದೇ ಒಬ್ಬ ಮನುಷ್ಯನ ನಿಜವಾದ ಅಭಿವೃದ್ದಿ. ಅದಕ್ಕೆ ಅಡೆತಡೆಗಳಾಗಬಹುದಾದ ಜಾತಿ ಪದ್ಧತಿಗಳು, ಮಡಿಮೈಲಿಗೆ, ಅಸ್ಪೃಶ್ಯತೆ, ಅಜ್ಞಾನ ಇತ್ಯಾದಿಗಳೆಲ್ಲವನ್ನೂ ತೊಡೆಯಲು ಕರೆಕೊಟ್ಟರು. ಅದರ ಸಾಧನೆಗಾಗಿ ವಿಶ್ವದ ಅನ್ಯ ಸಂಸ್ಕೃತಿಗಳಲ್ಲೂ ಕೂಡ ನಾವು ಅಳವಡಿಸಿಕೊಳ್ಳಬೇಕಾದ ಗುಣಗಳಿವೆ. ಅವನ್ನು ಗುರುತಿಸಿ ಅಳವಡಿಸಿಕೊಳ್ಳಬೇಕು ಎಂದರು.

ವಿವೇಕಾನಂದರ ಪ್ರಕಾರ ಈ ಪುರುಜ್ಜೀವನವನ್ನು ಸಾಧಿಸಬೇಕಾದರೆ ಈ ಸನಾತನ ಸಂಸ್ಕೃತಿಯನ್ನು ಹೊಂದಿದ ನಾವೆಲ್ಲ ಒಂದು ಎಂಬ ರಾಷ್ಟ್ರೀಯ ಭಾವನೆ ಬರಬೇಕು ಹಾಗೂ ನಮ್ಮ ಸಂಸ್ಕೃತಿಯ ಕುರಿತು ಅಭಿಮಾನ ಹುಟ್ಟಬೇಕು. ಸಮಾಜ ಸುಧಾರಣಾ ಕಾರ್ಯಕ್ರಮಗಳು ಈ ಕೆಲಸಕ್ಕೆ ಅಡ್ಡಿಯಾಗಿವೆ ಎಂಬ ಕಾರಣಕ್ಕೆ ವಿವೇಕಾನಂದರು ಅವುಗಳನ್ನು ಬೆಂಬಲಿಸಿರಲಿಲ್ಲ. ಹಿಂದೂ ಸಂಸ್ಕೃತಿಯ ಕುರಿತು ವಿವೇಕಾನಂದರ ಶ್ಲಾಘನೆ ಅಥವಾ ಟೀಕೆಗಳೆರಡಕ್ಕೂ ಈ ಸಂದರ್ಭವಿದೆ. ಅವರ ಹೇಳಿಕೆಗಳನ್ನು ಇಂದು ನಾವು ಬಳಸಿಕೊಳ್ಳುವಾಗ ಭಾರತೀಯ ಸಂಸ್ಕೃತಿಯ ಕುರಿತು ಅವುಗಳ ಹಿಂದಿನ  ಅಭಿಮಾನವನ್ನು ಹಾಗೂ ಕಾಳಜಿಯನ್ನು ಮರೆಮಾಚಿದರೆ ಅಥವಾ ತಿರಸ್ಕರಿಸಿದರೆ ಅದು ಅವರ ಆಶಯಕ್ಕೆ ವಿರುದ್ಧವಾಗುತ್ತದೆ.
ಮುಂದುವರಿಯುವುದು…

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments