ನಾಡು-ನುಡಿ : ಮರುಚಿಂತನೆ – ಭಕ್ತಿ ಮಾರ್ಗವನ್ನೇ ನಿರಾಕರಿಸುವವರಿಗೆ ಭಕ್ತರು ಹೇಗೆ ಅರ್ಥವಾದಾರು?
– ಪ್ರೊ.ರಾಜಾರಾಮ್ ಹೆಗಡೆ
ಪ್ರಾಧ್ಯಾಪಕರು, ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗ, ಕುವೆಂಪು ವಿ.ವಿ
ಇತ್ತೀಚೆಗೆ ಕನಕದಾಸರ ಜಯಂತಿಯ ಆಚರಣೆ ನಡೆಯಿತು.ಹಾಗೂ ಪತ್ರಿಕೆಗಳಲ್ಲಿ ಅವರ ಕುರಿತು ಲೇಖನಗಳು ಪ್ರಕಟವಾದವು. ಜೊತೆಗೇ ರಾಜಕಾರಣಿಗಳು ತಮ್ಮ ಭಾಷಣಗಳಲ್ಲಿ ನೀಡಿದ ಹೇಳಿಕೆಗಳೂ ವರದಿಯಾದವು. ಅವುಗಳಲ್ಲಿ ತೀರಾ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಪ್ರಗತಿಪರ ಧೋರಣೆಯೊಂದರ ಕುರಿತು ಇಲ್ಲಿ ಚರ್ಚಿಸುತ್ತೇನೆ.ನಮ್ಮ ವಚನಕಾರರು, ದಾಸರು ಇವರೆಲ್ಲರೂ ಶಿವ ಭಕ್ತರು, ವಿಷ್ಣು ಭಕ್ತರು ಎಂಬುದಾಗಿ ತಿಳಿದಿದ್ದೇವೆ. ಆದರೆ ಆಶ್ಚರ್ಯದ ವಿಷಯವೆಂದರೆ ಈ ಶರಣರ, ದಾಸರ ಭಕ್ತಿಯ ಪರಿಕಲ್ಪನೆಯ ಕುರಿತಾಗಲೀ, ಅವರು ಭಗವಂತನ ಕುರಿತು ಏನು ಹೇಳುತ್ತಾರೆ ಎಂಬುದರ ಕುರಿತಾಗಲೀ ಕುತೂಹಲವೇ ನಮ್ಮ ಬಹುತೇಕ ಸಾಮಾಜಿಕ ಚಿಂತಕರಿಗೆ ಅಪ್ರಸ್ತುತವಾದಂತಿದೆ. ಹಾಗೂ ಅಂಥ ಚಿತ್ರಣದ ಅಗತ್ಯವೇ ಇಲ್ಲ ಎಂಬ ಧೋರಣೆಯನ್ನು ಇಂಥ ಚಿಂತಕರು ಹಾಗೂ ಅವರಿಂದ ಪ್ರಭಾವಿತರಾದ ರಾಜಕಾರಣಿಗಳು ತಳೆದಂತಿದೆ. ಆ ಶರಣರು ಹಾಗೂ ದಾಸರೆಲ್ಲ ಲಿಂಗ, ಜಾತಿ, ವರ್ಗ ಸಮಾನತೆಗಾಗಿ ಹೋರಾಡಿದರು ಎಂಬುದೊಂದೇ ವಿಷಯ ಅಲ್ಲಿ ಮುಖ್ಯವಾಗುತ್ತದೆ. ಅದರಲ್ಲೂ ಅವರು ಜಾತಿಯ ತುಳಿತಕ್ಕೊಳಗಾಗಿದ್ದರು, ಹಾಗೂ ಅದರ ವಿರುದ್ಧ ಹೋರಾಡುವ ಏಕಮೇವ ಉದ್ದೇಶಕ್ಕಾಗಿಯೇ ಅವರು ಸಂತರಾದರು ಎಂದು ಬಿಂಬಿಸಲಾಗುತ್ತದೆ. ಇಂಥವರು ನಮ್ಮ ಭಕ್ತಿಯುಗದ ಸಂತರನ್ನು ಎಷ್ಟು ಅರ್ಥಮಾಡಿಕೊಂಡಿದ್ದಾರೆ?