ನಾಡು-ನುಡಿ : ಮರುಚಿಂತನೆ – ನೈನಂ ದಹತಿ ಪಾವಕಃ
– ಪ್ರೊ.ರಾಜಾರಾಮ್ ಹೆಗಡೆ
ಪ್ರಾಧ್ಯಾಪಕರು, ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗ, ಕುವೆಂಪು ವಿ.ವಿ
ಇತ್ತೀಚೆಗೆ ಕೇಂದ್ರಸಚಿವರೊಬ್ಬರು ಭಗವದ್ಗೀತೆಯನ್ನು ರಾಷ್ಟ್ರೀಯ ಗ್ರಂಥವನ್ನಾಗಿ ಮಾಡಬೇಕು ಎನ್ನುವ ಹೇಳಿಕೆ ನೀಡಿ ಸುದ್ದಿ ಮಾಡಿದ್ದರು. ಭಗವದ್ಗೀತೆಯನ್ನು ಭಾರತೀಯರಿಗೆಲ್ಲರಿಗೂ ಕಡ್ಡಾಯವಾಗಿ ಕಲಿಸಬೇಕು ಎಂಬ ಕೂಗು ಕೂಡ ಒಂದೆಡೆ ಏಳುತ್ತಿದೆ. ಆದರೆ ಇದಕ್ಕೆ ಪ್ರತಿಕ್ರಿಯೆಯಾಗಿ ಮತ್ತೊಂದೆಡೆ ಅದನ್ನು ಸುಟ್ಟುಹಾಕಬೇಕು ಎಂಬ ಹೇಳಿಕೆಗಳು ಕೂಡ ಬರತೊಡಗಿವೆ. ಭಗವದ್ಗೀತೆಯನ್ನು ರಾಷ್ಟ್ರ ಗ್ರಂಥವನ್ನಾಗಿ ಮಾಡಬೇಕೆನ್ನುವ ಅನೇಕರು ಅದನ್ನು ಓದಿ ಅರ್ಥಮಾಡಿಕೊಂಡು ಪ್ರಭಾವಿತರಾಗಿ ಅದೊಂದು ಮಹತ್ವದ ಗ್ರಂಥ ಎಂದು ಮನಗಂಡಿರುವ ಸಂಭಾವ್ಯತೆ ಇಲ್ಲ. ಅದು ಹಿಂದೂಗಳ ಪವಿತ್ರಗ್ರಂಥ, ಅದರಲ್ಲಿ ಏನೋ ಮಹತ್ವದ ಸಂಗತಿ ಇದೆ ಎಂಬುದಷ್ಟೇ ಅವರಿಗೆ ಮುಖ್ಯವಾಗಿದೆ. ಅಂದರೆ ಯಾವುದೋ ಒಂದು ಪುಸ್ತಕವನ್ನು ನಾವು ಓದದಿದ್ದರೂ ಅದರಷ್ಟಕ್ಕೇ ಅದು ಮುಖ್ಯ ಎಂದೇಕೆ ಅವರಿಗೆ ಅನ್ನಿಸುತ್ತದೆ ಎಂಬುದಕ್ಕೆ ಅವರು ಅದನ್ನು ಬೈಬಲ್ಲು, ಖುರಾನುಗಳ ಸಾಲಿನಲ್ಲಿ ಇಟ್ಟು ನೋಡುತ್ತಿದ್ದಾರೆ ಎನ್ನದೇ ಬೇರೆ ಉತ್ತರ ಹೊಳೆಯುವುದಿಲ್ಲ.
ಇದಕ್ಕಿಂತಲೂ ಆಶ್ಚರ್ಯಕರವಾದ ಸಂಗತಿಯೆಂದರೆ ಭಗವದ್ಗೀತೆಯನ್ನು ಸುಡಬೇಕು ಎನ್ನುವ ಹೇಳಿಕೆಗಳು. ಇಂಥ ಹೇಳಿಕೆಗಳನ್ನು ಮಾಡುವವರು ಕೂಡ ಹಿಂದೂಯಿಸಂ ಎಂಬುದಿದೆ, ಭಗವದ್ಗೀತೆಯು ಹಿಂದೂಗಳ ಪವಿತ್ರಗ್ರಂಥ ಎಂಬುದನ್ನು ಒಪ್ಪಿಕೊಳ್ಳುತ್ತಾರೆ. ಹಾಗೂ ಬ್ರಾಹ್ಮಣರು ಅದರ ಪುರೋಹಿತಶಾಹಿ ಎಂಬುದನ್ನು ಭದ್ರವಾಗಿ ನಂಬಿದ್ದಾರೆ. ಹಾಗೂ ಆ ನಿರ್ದಿಷ್ಟ ಕಾರಣದಿಂದಲೇ ಅದನ್ನು ಸುಡಬೇಕು ಎನ್ನುತ್ತಿದ್ದಾರೆ. ಏಕೆ ಸುಡಬೇಕೆಂದರೆ ಬ್ರಾಹ್ಮಣರು ಭಗವದ್ಗೀತೆಯ ಮೂಲಕ ವರ್ಣ ವ್ಯವಸ್ಥೆಯನ್ನು ಹಾಗೂ ಶೋಷಣೆಯ ಡಾಕ್ಟ್ರಿನ್ನುಗಳನ್ನು ಬೋಧಿಸುತ್ತಿದ್ದಾರೆ. ಅದನ್ನಾಧರಿಸಿಯೇ ಭಾರತೀಯ ಜಾತಿವ್ಯವಸ್ಥೆ, ತರತಮಗಳು, ಶೋಷಣೆಗಳು ಅಸ್ತಿತ್ವದಲ್ಲಿ ಇವೆ, ಹಾಗಾಗಿ ನಮ್ಮ ಸಮಾಜದಲ್ಲಿ ಇದನ್ನೆಲ್ಲ ತೊಡೆಯಬೇಕಾದರೆ ಭಗವದ್ಗೀತೆಯನ್ನು ಸುಡಬೇಕು ಎನ್ನುವುದು ಅವರ ವಾದ. ಇಂಥ ಹೇಳಿಕೆಗಳನ್ನು ಮಾಡುವವರೂ ಭಗವದ್ಗೀತೆಯನ್ನು ಓದಿರುವುದಿಲ್ಲ, ಓದಿದ್ದರೂ ಅರ್ಥಮಾಡಿಕೊಂಡಿಲ್ಲ.
ಮತ್ತಷ್ಟು ಓದು