ನಾಡು-ನುಡಿ : ಮರುಚಿಂತನೆ – ಜಾತಿಗಣತಿ ಪ್ರತಿನಿಧಿಸುವುದೇನನ್ನು?
ಇಂಗ್ಲೀಷ್ ಮೂಲ:-ವಿವೇಕ್ ಧಾರೇಶ್ವರ್, ಸ್ಕಾಲರ್ ಇನ್ ರೆಸಿಡೆನ್ಸ್, ಸೃಸ್ಟಿ ಸ್ಕೂಲ್ ಆಫ್ ಡಿಸೈನ್, ಬೆಂಗಳೂರು
ಕನ್ನಡ ಅನುವಾದ: ಅಶ್ವಿನಿ. ಬಿ. ದೇಸಾಯಿ, ಆರೋಹಿ ಸಂಶೋಧನಾ ಸಂಸ್ಥೆ, ಬೆಂಗಳೂರು
ನಮ್ಮ ರಾಜ್ಯದಲ್ಲಿ ಜಾತಿಗಳನ್ನು ಲೆಕ್ಕ ಮಾಡುವ, ಕರ್ನಾಟಕ ಸರಕಾರದ ಉದ್ದೇಶದ ಸ್ವರೂಪವೇನು ಎಂಬುದು ನಮಗೆ ಅರ್ಥವಾಗದ ಸಂಗತಿ. ಈ ಗಣತಿಯು, ಗಂಭೀರವಾದ ಬೌದ್ದಿಕ ಪ್ರಕ್ರಿಯೆಯೋ, ಸರಕಾರದ ನೀತಿಗಳನ್ನು ಸುಲಭಮಾಡುವ ಮಾಹಿತಿ ಸಂಗ್ರಹಣೆಯೋ ಅಥವಾ ರಾಜಕೀಯ ಪ್ರೇರಿತವಾದದ್ದೋ ಎಂಬುದು ಇನ್ನೂ ಸರಿಯಾಗಿ ಅರ್ಥವಾಗುತ್ತಿಲ್ಲ, ಉದಾಹರಣೆ, ಜಾತಿಗಣತಿಯವರು ಬಂದು ನಮ್ಮ ಮನೆ ಬಾಗಿಲು ಬಡಿದರೆ, ಈ ಪ್ರಕ್ರಿಯೆ ಬಗ್ಗೆ, ಹಾಗೂ ಜಾತಿವ್ಯವಸ್ಥೆ ಬಗ್ಗೆ, ಅನುಮಾನವಿರುವ ನಮ್ಮಂಥವರು ಏನು ಹೇಳಬೇಕೆಂಬುದು ಒಂದು ದೊಡ್ದ ಪ್ರಶ್ನೆಯಾಗಿದೆ.
ಜಾತಿ ಗಣತಿಯವರು ನನ್ನ ಜಾತಿ ಯಾವುದೆಂದು ಕೇಳಿದಾಗ ನಾನು “ಕಂಪ್ಯೂಟರ್ ವಿಜ್ಞಾನಿ” ಅಥವಾ ‘ಲಿಬರಲ್’ ಅಥವಾ ಮಾರ್ಕಿಸ್ಟ್ ಎಂದು ಹೇಳಿದರೆ ಏನಾಗಬಹುದು? ‘ಬಡಗಿ’, ‘ಮಾಧ್ವ’ ಮತ್ತು ‘ಅಯ್ಯಂಗಾರ್’ ಸರಿಯಾದ ಉತ್ತರಗಳಾದರೆ, ನನ್ನ ಉತ್ತರಗಳೇಕೆ ಸರಿಯಲ್ಲ? ಮೇಲೆ ಹೇಳಿದ ಇಂಗ್ಲಿಷ್ ಪದಗಳನ್ನು, ಕನ್ನಡೀಕರಿಸಿದರೆ ‘ಗಣಕಿ’, ‘ಉದಾರಿ’, ‘ಎಡಪಂಥಿ’ ಎಂದಾಗುತ್ತವೆ. ಇವನ್ನು ನಾವೇಕೆ ಜಾತಿಗಣತಿಯ ಪಟ್ಟಿಗೆ ಸೇರಿಸಬಾರದು? ಮೇಲ್ಕಂಡ ಪ್ರಶ್ನೆಗಳು ನಮಗೆ ಈ ವಿಷಯದ ಬಗ್ಗೆ ಇರುವ ಅಸ್ಪಷ್ಟತೆ ಗೆ ಸ್ಪಷ್ಟ ಉದಾಹರಣೆ.
ನಮ್ಮಲ್ಲಿ ಅನೇಕರಿಗೆ ನಿಮ್ಮ ರಿಲಿಜನ್ ಯಾವುದು ಎಂದಾಗ, ಹಿಂದೂ ಎಂದು ಹೇಳುವುದು ಅಸಹಜವೆನಿಸುತ್ತದೆ. ಇಂತಹ ಪ್ರತಿಕ್ರಿಯೆ ಜಾತಿ ಎಂಬ ಪ್ರಭೇದಕ್ಕೂ ಅನ್ವಯಿಸುತ್ತದೆ. ನಮ್ಮ ದೈನಂದಿನ ಬದುಕಿನಲ್ಲಿ ಚರ್ಚೆ ಮಾಡುವಾಗ ತಾವು ಯಾವ ಮತದವರು? ಅಥವಾ ಯಾವ ಸಂಪ್ರದಾಯದವರು? ಎಂಬ ಪ್ರಶ್ನೆ ಎದುರಾಗುವುದುಸರ್ವೇಸಾಮಾನ್ಯ. ಇಂತಹ ಪ್ರಶ್ನೆಗಳಿಗೆ ಪಶ್ಚಿಮದಲ್ಲಿರುವುದು “ಎತ್ನಿಕ್” ಎಂಬ ಉತ್ತರಮಾತ್ರ. ಅದನ್ನು ವಿವರಿಸಲು ನಮ್ಮ ಬಳಿ ಶಬ್ದಗಳಿಲ್ಲ. ಜಾತಿ ಮತ್ತು ಮತ (ರಿಲಿಜನ್) ಈ ಅರ್ಥಕೊಡುವ ಶಬ್ದಗಳಾಗಿ ಮಾರ್ಪಟ್ಟಿವೆ. ಕಾರಣ, ಎತ್ನಿಕ್‍ಗೆ ಹೊಂದುವ ಶಬ್ದಗಳು ಇಲ್ಲಿಲ್ಲ.